Tag: DC Lata

  • ದೆಹಲಿಗೆ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರದ 7 ಮಂದಿಯ ವರದಿ ನೆಗೆಟಿವ್

    ದೆಹಲಿಗೆ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರದ 7 ಮಂದಿಯ ವರದಿ ನೆಗೆಟಿವ್

    ಚಿಕ್ಕಬಳ್ಳಾಪುರ: ಜಿಲ್ಲೆಯಿಂದ ದೆಹಲಿಯ ನಿಜಾಮುದ್ದೀನ್ ಮಸೀದಿ ಮತ್ತು ಈ ಪ್ರದೇಶದಲ್ಲಿ ಓಡಾಡಿದ್ದ 37 ಮಂದಿಯನ್ನ ಜಿಲ್ಲಾಡಳಿತ ಪತ್ತೆ ಮಾಡಿದೆ.

    ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಮಧ್ಯೆ ಒಂದು ತಿಂಗಳ ನಡುವೆ 31 ಮಂದಿ ದೆಹಲಿಯ ನಿಜಾಮುದ್ದೀನ್ ಜಮಾತ್‍ಗೆ ಭೇಟಿ ನೀಡಿದ್ದು, ಅವರನ್ನು ಪತ್ತೆ ಮಾಡಿರುವ ಜಿಲ್ಲಾಡಳಿತ ಮೊದಲ ಹಂತದಲ್ಲಿ 07 ಮಂದಿಯ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನ ಪರೀಕ್ಷೆಗೆ ಕಳುಹಿಸಿತ್ತು. ಸದ್ಯ ಈ 7 ಮಂದಿಗೆ ಕೊರೊನಾ ವೈರಸ್ ಸೋಂಕು ಬಂದಿಲ್ಲ. ವರದಿ ನೆಗೆಟಿವ್ ಬಂದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿ ಲತಾ, ಈ 31 ಮಂದಿ ಜಮಾತ್‍ನಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾಗಿರಲಿಲ್ಲ. ಬದಲಾಗಿ ಇದಕ್ಕೂ ಮುನ್ನವೇ ಅವರ ಜಮಾತ್‍ಗೆ ಹೋಗಿ ಬಂದಿದ್ದರು. ಈ 31 ಮಂದಿಯೂ ಜಮಾತ್‍ಗೆ ಭೇಟಿ ನೀಡಿ ಈಗಾಗಲೇ 50 ದಿನಗಳು ಕಳೆದು ಹೋಗಿವೆ. ಆದರೂ ಕೂಡ ನಾವು ಮುನ್ನೆಚ್ಚರಿಕೆ ಕ್ರಮವಾಗಿ ಮೊದಲ ಹಂತದಲ್ಲಿ 7 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದೆವು. ಆದರೆ ಅವರ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಉಳಿದವರನ್ನು ಪರೀಕ್ಷೆಗೆ ಒಳಪಡಿಸಲಿಲ್ಲ ಎಂದು ತಿಳಿಸಿದರು.

    ಮತ್ತೊಂದೆಡೆ ಮಾರ್ಚ್ ತಿಂಗಳಲ್ಲಿ 6 ಮಂದಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಮ್ಮ ಜಿಲ್ಲೆಯವರು ಓಡಾಡಿರುವ ಮಾಹಿತಿ ಸಿಕ್ಕಿದೆ. ಆರು ಮಂದಿಯಲ್ಲಿ ಪ್ರವಾಸಕ್ಕೆ ತೆರಳಿದ್ದ ಶಿಡ್ಲಘಟ್ಟ ಮೂಲದ ದಂಪತಿ, ಹಾಗೂ ಇದೇ ನಿಜಾಮುದ್ದೀನ್ ಪ್ರದೇಶದಲ್ಲಿನ ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು, ಹಾಗೂ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ಹಾದು ಹೋಗುವ ರೈಲಿನ ಟಿಟಿಯೊಬ್ಬರು ನಮ್ಮದೇ ಜಿಲ್ಲೆಯವರು. ಇವರು ಯಾರೂ ಸಹ ಜಮಾತ್‍ಗೆ ಹೋಗಿಲ್ಲ. ಆದರೂ ಆ ಜಾಗದಲ್ಲಿ ಓಡಾಡಿರುವ ಕಾರಣ ಆರು ಮಂದಿಯನ್ನು ಕ್ವಾರಂಟೈನ್ ಗೆ ಸೂಚಿಸಲಾಗಿದೆ ಎಂದು ಡಿಸಿ ಹೇಳಿದ್ದಾರೆ.

    ಹೀಗಾಗಿ ನಿಜಾಮುದ್ದೀನ್ ಜಮಾತ್‍ನ ಮರ್ಕಜ್‍ನಿಂದ ನಮ್ಮ ಜಿಲ್ಲೆಯ ಯಾರಿಗೂ ಕೂಡ ಸೋಂಕು ತಗಲಿರುವ ಸಾಧ್ಯತೆ ತೀರಾ ಕಡಿಮೆ ಇದೆ. ಇದರಿಂದ ಜನ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಡಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

  • ಗೌರಿಬಿದನೂರಿನಲ್ಲಿ ಮತ್ತೆ ಐವರಿಗೆ ಕೊರೊನಾ – ಇಬ್ಬರ ವರದಿಗೆ ಕಾಯುತ್ತಿರುವ ವೈದ್ಯರು

    ಗೌರಿಬಿದನೂರಿನಲ್ಲಿ ಮತ್ತೆ ಐವರಿಗೆ ಕೊರೊನಾ – ಇಬ್ಬರ ವರದಿಗೆ ಕಾಯುತ್ತಿರುವ ವೈದ್ಯರು

    – ಆತಂಕದಲ್ಲಿ ಚಿಕ್ಕಬಳ್ಳಾಪುರದ ಜನತೆ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಹೊಸದಾಗಿ 5 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಸ್ಪಷ್ಟಪಡಿಸಿದ್ದಾರೆ.

    ಈ ಮೊದಲು 4 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಒಬ್ಬರೂ ಸಾವನ್ನಪ್ಪಿದ್ದರು. ಮೆಕ್ಕಾ ಪ್ರವಾಸ ಕೈಗೊಂಡು ವಾಪಸ್ ಆಗಿದ್ದ ನಂತರ ಮೊದಲು ಕೊರೊನಾ ಪತ್ತೆಯಾಗಿದ್ದ 31 ವರ್ಷದ ವ್ಯಕ್ತಿಯ ತಾಯಿ ಹಾಗೂ ಚಿಕ್ಕಮ್ಮ ಸೇರಿ ಮೂವರಿಗೆ ಸೋಂಕು ಧೃಢವಾಗಿತ್ತು. ಈ ಮೂವರು ಸಹ ಮೆಕ್ಕಾ ಪ್ರವಾಸದಿಂದ ವಾಪಸ್ ಬಂದಿದ್ದರು.

    ಈಗ ಮೊದಲ ಪ್ರಕರಣದ 31 ವರ್ಷದ ವ್ಯಕ್ತಿಯ ತಂದೆಗೂ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಗೌರಿಬಿದನೂರು ನಗರದಲ್ಲೇ ಮೆಕ್ಕಾ ಪ್ರವಾಸದಿಂದ ವಾಪಸ್ ಆಗಿದ್ದ ಮಹಿಳೆ ಕೊರೊನಾಗೆ ಬಲಿಯಾಗಿದ್ದರು. ಈಗ ಮೃತ ಮಹಿಳೆಯ ಮಗ ಹಾಗೂ ಸೊಸೆ, ಅವರ ಮೊಮ್ಮಗ ಸೇರಿದಂತೆ ಸೊಸೆಯ ತಮ್ಮನಿಗೂ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಹೀಗಾಗಿ ಈ ಮೊದಲ 4 ಪ್ರಕರಣಗಳ ಜೊತೆಗೆ ಇಂದು ಹೊಸದಾಗಿ 5 ಪ್ರಕರಣಗಳು ಸೇರಿ ಒಟ್ಟು 09 ಪಾಸಿಟಿವ್ ಪ್ರಕರಣಗಳಾಗವೆ.

    ಇದಲ್ಲದೇ ಮೊದಲ ಪ್ರಕರಣದ 31 ವರ್ಷದ ವ್ಯಕ್ತಿಯ ಸಹೋದರಿಯರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗೂ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಅವರಿಬ್ಬರ ಅಂತಿಮ ವರದಿಗಾಗಿ ಕಾಯುತ್ತಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಹೊಸದಾಗಿ ಇಂದು ದೃಢಪಟ್ಟಿರುವ 05 ಮಂದಿ ಸೇರಿದಂತೆ ಶಂಕಿತ ಇಬ್ಬರನ್ನೂ ಸಹ ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.