Tag: DC Harish Kumar

  • ಕೊರೊನಾ ಭೀತಿಗೆ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಜಿಲ್ಲಾಸ್ಪತ್ರೆಗೆ ಕದಂಬ ನೌಕಾ ನೆಲೆಯಿಂದ 100 ಹಾಸಿಗೆ

    ಕೊರೊನಾ ಭೀತಿಗೆ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಜಿಲ್ಲಾಸ್ಪತ್ರೆಗೆ ಕದಂಬ ನೌಕಾ ನೆಲೆಯಿಂದ 100 ಹಾಸಿಗೆ

    ಕಾರವಾರ: ವಿಶ್ವದೆಲ್ಲೆಡೆ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿದೆ. ಕೊರೊನಾ ಭೀತಿಗೆ ಮುಂಜಾಗೃತ ಕ್ರಮವಾಗಿ ಕಾರವಾರ ಬಂದರು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‍ನಲ್ಲಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಆಸ್ಪತ್ರೆ ಮುಖ್ಯಸ್ಥರು, ವೈದ್ಯಕೀಯ ಕಾಲೇಜು ಮುಖ್ಯಸ್ಥರು, ನೌಕಾ ನೆಲೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್‍ರವರು ಸಭೆ ನಡೆಸಿದರು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯ ಸಾದಿಸಿ ಕೊರೊನಾ ಸೋಂಕು ಜಿಲ್ಲೆಗೆ ಯಾವುದೇ ಮಾರ್ಗದಲ್ಲಿ ಬರದಂತೆ ಸೂಕ್ತ ಕ್ರಮ ಕೈಗೊಂಡು ಕಟ್ಟೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

    ಕಾರವಾರ ಬಂದರಿನಲ್ಲಿ ವಿದೇಶಿ ಹಡಗುಗಳು ಆಗಮಿಸುವುದರಿಂದ ಮುಖ್ಯವಾಗಿ ಅಲ್ಲಿ ತೀವ್ರ ನೀಗಾ ಇರಿಸಬೇಕು. ಆಗಮಿಸಿದ ಹಡಗುಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ಮಾಡುವುದು ಕಡ್ಡಾಯವಾಗಿದ್ದು, ಇದರ ಮಾಹಿತಿಯನ್ನು ಪ್ರತಿ ದಿನ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪಡೆದು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

    ಈ ಬಗ್ಗೆ ಕದಂಬ ನೌಕಾ ನೆಲೆ ಅಧಿಕಾರಿ ಮಾತನಾಡಿ, ನೌಕಾ ನೆಲೆಯಲ್ಲಿ ರೋಗಿಗಳ ಆರೈಕೆಗಾಗಿ ಸಾಕಷ್ಟು ಹಾಸಿಗೆಗಳ ವ್ಯವಸ್ಥೆ ಇರುವುದರಿಂದ ಜಿಲ್ಲಾಸ್ಪತ್ರೆಗೆ 100 ಹಾಸಿಗೆಗಳನ್ನು ನೀಡಲು ನಿರ್ಧರಿಸಿದ್ದೇವೆ. ಅಲ್ಲದೆ ಈಗಾಗಲೇ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ವಿದೇಶದಿಂದ ಬರುವ ಹಡಗುಗಳಲ್ಲಿರುವ ಪ್ರಯಾಣಿಕರು ಮತ್ತು ನಾವಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮುಂಚಿತವಾಗಿಯೇ ಎಲ್ಲ ಹಡಗುಗಳಲ್ಲಿ ವೈದ್ಯಕೀಯ ತಂಡವನ್ನು ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಾತನಾಡಿ, ಪ್ರಮುಖವಾಗಿ ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರು ಆಗಮಿಸುವುದರಿಂದ ಅಲ್ಲಿ ವೈದ್ಯರ ತಂಡ ರಚಿಸಿಕೊಂಡು ಮನೆ ಮನೆಗೆ ಭೇಟಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳಬಹುದಾದ ಎಲ್ಲಾ ಮುಂಜಾಗೃತ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ಗೋವಾ ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರನ್ನು ವೈದ್ಯರ ಸಹಾಯದೊಂದಿಗೆ ತಪಾಸಣೆ ಮಾಡುವ ಮೂಲಕ ಹೆಚ್ಚಿನ ಜಾಗೃತಿ ವಹಿಸಲಾಗುವುದು ಎಂದರು.

    ಸಭೆಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದು, ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಕ್ರಮ ಕೈಗೊಂಡಿದ್ದಾರೆ.

    ಕಾರವಾರ ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆ ಮೀಸಲು:
    ಕಾರವಾರ ಗಡಿ ಪ್ರದೇಶವಾಗಿರುವ ಹಿನ್ನೆಲೆ ನೆರೆಯ ಗೋವಾ, ಮುಂಬೈನಿಂದ ವಿದೇಶಿ ಪ್ರಜೆಗಳು ಈ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದರ ಜೊತೆಗೆ ಸಮುದ್ರದ ಮೂಲಕವು ಹಡಗುಗಳು ಬರುವುದರಿಂದ ತೀವ್ರ ನಿಗಾ ಬಹಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕಟ್ಟಡವನ್ನು ಮೀಸಲಿಡಲಾಗಿದೆ. 5 ಮಹಿಳೆಯರು, 5 ಪುರುಷರಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಪ್ರತ್ಯೇಕ ಸಿಬ್ಬಂದಿಗಳನ್ನು ಆರೋಗ್ಯ ಇಲಾಖೆ ನೇಮಿಸಿದೆ.

  • ಕಾರ್ಯಕ್ರಮದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಉತ್ತರ ಕನ್ನಡ ಡಿಸಿ

    ಕಾರ್ಯಕ್ರಮದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಉತ್ತರ ಕನ್ನಡ ಡಿಸಿ

    ಕಾರವಾರ: ನಗರದ ವಾರ್ತಾ ಇಲಾಖೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರು ಲೋ ಬಿಪಿಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

    ವಾರ್ತಾ ಇಲಾಖೆಯ ವಾರ್ತಾ ಸ್ಪಂದನ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ವೈದ್ಯರ ಜೊತೆ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಕುಳಿತಾಗಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದ ವೈದ್ಯರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು.

    ಪ್ರಥಮ ಚಿಕಿತ್ಸೆ ನೀಡಿದ ಕೆಲ ಸಮಯದ ನಂತರ ಚೇತರಿಸಿಕೊಂಡ ಡಿಸಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆದರೆ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಹರೀಶ್ ಕುಮಾರ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.