Tag: DC Girish

  • ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ತರಬೇತಿ ನೀಡಿ: ಕೆ.ಗೋಪಾಲಯ್ಯ

    ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ತರಬೇತಿ ನೀಡಿ: ಕೆ.ಗೋಪಾಲಯ್ಯ

    ಹಾಸನ: ರೈತರಿಗೆ ಸಹಾಯವಾಗುವಂತೆ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಜಾರಿ ಮಾಡಿದ್ದು, ಇದರ ಬಳಕೆ ಬಗ್ಗೆ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ರೈತರಿಗೆ ತರಬೇತಿ ನೀಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ತಿಳಿಸಿದ್ದಾರೆ.

    ಹಾಸನ ತಾಲೂಕಿನ ಹೂವಿನ ಹಳ್ಳಿ ಕಾವಲಿನ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಆ್ಯಪ್ ಮೂಲಕ ಯಾವ ಬೆಳೆ ಬೆಳೆದಿದ್ದಾರೆ ಎಷ್ಟು ಎಕರೆ ಎಷ್ಟು ಕುಂಟೆ ಎಂಬ ಪೂರ್ಣ ಮಾಹಿತಿ ಪಡೆಯಬಹುದಾಗಿದೆ ಎಂದರು.

    ಮೊಬೈಲ್ ಇಲ್ಲದ ರೈತರ ಹತ್ತಿರ ಆಗಸ್ಟ್ 24ರ ನಂತರ ಅಧಿಕಾರಿಗಳು ಭೇಟಿ ನೀಡಿ ಆ್ಯಪ್ ಮೂಲಕ ಸಮೀಕ್ಷೆ ನಡೆಸಿ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಪ್ರಕಟಿಸಲಾಗುತ್ತದೆ. ರೈತರು ಮುಂದಿನ ದಿನಗಳಲ್ಲಿ ಮಳೆ ನಷ್ಟ ಅನುಭವಿಸಿದ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ಮತ್ತು ಕಾಲ ಕಾಲಕ್ಕೆ ಬೆಳೆಯುವ ಬೆಳೆಗಳ ಕುರಿತ ಮಾಹಿತಿ ಸಂಗ್ರಹವಿರುತ್ತದೆ. ಇದರಿಂದ ಸರ್ಕಾರಕ್ಕೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ಸಚಿವರು ತಿಳಿಸಿದರು.

    ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ, ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ತಮ್ಮ ಜಮೀನಿನ ಮತ್ತು ಬೆಳೆಗಳ ಫೋಟೋವನ್ನು ರೈತರೇ ಅಪ್ಲೋಡ್ ಮಾಡಬಹುದಾಗಿದೆ. ಆಪ್ ಮೂಲಕ ಸರ್ವೆ ನಂಬರ್ ಖಾತರಿ ಪಡಿಸಿಕೊಂಡು ಎರಡು ರೀತಿಯ ಬೆಳೆ ಬೆಳೆದಿದ್ದಲ್ಲಿ ಅದರ ಪೂರ್ಣ ವಿವರ ದಾಖಲಿಸಿ ಅದಕ್ಕೆ ತಕ್ಕಂತೆ ಫೋಟೋ ಅಪ್ಲೋಡ್ ಮಾಡಬಹುದಾಗಿದೆ ಎಂದರು.

    ಸರ್ಕಾರದ ಮುಖ್ಯ ಉದ್ದೇಶವೇನೆಂದರೆ ಜಮೀನಿನ ವಿವರಗಳನ್ನು ರೈತರೇ ದಾಖಲಿಸುವ ಮೂಲಕ ಯಾವುದೇ ತಪ್ಪಾಗದಂತೆ ನಿಗಾವಹಿಸುವುದಾಗಿದೆ. ಈ ಹಿಂದೆ ಇಸ್ಸಾಗಳಲ್ಲಿ ಗೊಂದಲಗಳು ಉಂಟಾಗುತ್ತಿದ್ದು, ಇನ್ನು ಮುಂದೆ ಈ ಸಮಸ್ಯೆ ಎದುರಾಗುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸ್ವಯಂ ಪ್ರೇರಿತರಾಗಿ ಬಂದು ತಮ್ಮ ಜಮೀನಿನ ಬೆಳೆಗಳ ವಿವರಗಳನ್ನು ದಾಖಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್, ತಿಳಿಸಿದ್ದಾರೆ.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಉಪ ವಿಭಾಗಾಧಿಕಾರಿ ಡಾ. ನವೀನ್ ಭಟ್, ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿ ಕಾಂತರಾಜು, ಜಂಟಿ ಕೃಷಿ ನಿರ್ದೇಶಕರಾದ ರವಿ ಮತ್ತಿತರರು ಹಾಜರಿದ್ದರು.

  • ಹಾಸನ ಜಿಲ್ಲೆಯಲ್ಲಿ ಸ್ಥಳೀಯನಿಗೆ ಕೊರೊನಾ – ಆತಂಕದಲ್ಲಿ ಜಿಲ್ಲೆಯ ಜನ

    ಹಾಸನ ಜಿಲ್ಲೆಯಲ್ಲಿ ಸ್ಥಳೀಯನಿಗೆ ಕೊರೊನಾ – ಆತಂಕದಲ್ಲಿ ಜಿಲ್ಲೆಯ ಜನ

    – ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಕೊರೊನಾ

    ಹಾಸನ: ಹಾಸನದಲ್ಲಿಂದ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.

    ಇದುವರೆಗೂ ಜಿಲ್ಲೆಯಲ್ಲಿ ಹೊರರಾಜ್ಯ, ಹೊರ ಜಿಲ್ಲೆಯಿಂದ ಬಂದವರಿಗೆ ಅಥವಾ ಅವರ ಜೊತೆ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಆದರೆ ಇಂದು ಆ ರೀತಿಯ ಯಾವುದೇ ಸಂಪರ್ಕ ಹೊಂದಿರದ 60 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಆತಂಕಕ್ಕೆ ಕಾರಣವಾಗಿದೆ.

    ಆತನನ್ನು ಪರೀಕ್ಷೆ ಮಾಡಿದ ವೈದ್ಯರು ಸೇರಿದಂತೆ 17 ಜನರ ಗಂಟಲು ದ್ರವವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆಗೆ ಕಳುಹಿಸಲಾಗಿದೆ. ವೃದ್ಧನನ್ನು ಪರೀಕ್ಷೆ ಮಾಡಿದ ಆಸ್ಪತ್ರೆ ಕೊಠಡಿ ಸೀಲ್‍ಡೌನ್ ಮಾಡಲಾಗಿದೆ. ವೃದ್ಧ ವಾಸವಿದ್ದ ಗ್ರಾಮವನ್ನು ಸೀಲ್‍ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ವೃದ್ಧನಿಗೆ ಕೊರೊನಾ ಹೇಗೆ ಬಂತು? ಆತ ಯಾರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ? ಆತ ಎಲ್ಲೆಲ್ಲಿ ಓಡಾಡಿದ್ದ ಎಂಬುದರ ಮಾಹಿತಿ ಕಲೆಹಾಕಲಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

    ಹಾಸನ ಜಿಲ್ಲೆಯಲ್ಲಿಂದು ಹೊಸದಾಗಿ 18 ಕೋವಿಡ್-19 ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಹಾಸನದಲ್ಲಿ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ. 192 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಹಾಗೂ 78 ಮಂದಿ ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರನ್ನು 7 ದಿನಗಳ ನಂತರ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಪಾಸಿಟಿವ್ ವರದಿ ಬಂದರೆ ಅವರನ್ನು ಆಸ್ಪತೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ನೆಗೆಟಿವ್ ಬಂದವರನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

    ಇಂದು ಹೊಸದಾಗಿ ಬಂದ 18 ಪ್ರಕರಣಗಳಲ್ಲಿ 4 ಮಂದಿ ಹಾಸನ ಜಿಲ್ಲೆಗೆ ಸೇರಿದವರಾಗಿದ್ದಾರೆ. ಇನ್ನುಳಿದ 14 ಮಂದಿ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದು, ಅವರಲ್ಲಿ ಒಬ್ಬರು ಮಾತ್ರ ಸ್ಥಳೀಯರೇ ಆಗಿದ್ದು, ಶ್ವಾಸಕೋಶದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು ಹಾಗೂ ಇನ್ನುಳಿದ ಎಲ್ಲರೂ ಮುಂಬೈನಿಂದ ಬಂದ ಹಿನ್ನೆಲೆಯನ್ನು ಹೊಂದಿರುವವರಾಗಿದ್ದಾರೆ ಎಂದು ಆರ್. ಗಿರೀಶ್ ಮಾಹಿತಿ ನೀಡಿದರು.

  • ಹಾಸನದಲ್ಲಿ ಪೊಲೀಸ್ ಪೇದೆಗೆ ಕೊರೊನಾ – ಎರಡು ಏರಿಯಾಗಳು ಸೀಲ್‍ಡೌನ್

    ಹಾಸನದಲ್ಲಿ ಪೊಲೀಸ್ ಪೇದೆಗೆ ಕೊರೊನಾ – ಎರಡು ಏರಿಯಾಗಳು ಸೀಲ್‍ಡೌನ್

    – ಇಂದು 14 ಜನರಿಗೆ ಸೋಂಕು, 99ಕ್ಕೇರಿಕೆಯಾದ ಸೋಂಕಿತರ ಸಂಖ್ಯೆ

    ಹಾಸನ: ಇಂದು ಜಿಲ್ಲೆಯಲ್ಲಿ ಪೊಲೀಸ್ ಪೇದೆ ಸೇರಿದಂತೆ ಒಟ್ಟು 14 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 99ಕ್ಕೆ ಏರಿಕೆ ಕಂಡಿದೆ.

    ಪೊಲೀಸ್ ಪೇದೆ ಮತ್ತು ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿ ಸೇರಿದಂತೆ ಹಾಸನದಲ್ಲಿಂದು ಮತ್ತೆ 14 ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಸತ್ಯವಂಗಲ ಹಾಗೂ ಉತ್ತರ ಬಡಾವಣೆಯ ಒಂದು ರಸ್ತೆ ಸೀಲ್‍ಡೌನ್ ಮಾಡಲಾಗಿದೆ.

    ಕೊರೊನಾ ದೃಢಪಟ್ಟಿರುವ ಪೇದೆ ಹಾಸನ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಬೆಂಗಳೂರಿಗೆ ಹೋಗಿ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ಇತ್ತ ಜಿಲ್ಲೆಯ ಪೊಲೀಸ್ ಟ್ರೈನಿಂಗ್ ಶಾಲೆಗೆ ಭೇಟಿ ನೀಡಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. ಈಗ ಸೋಂಕಿತ ವಾಸವಿದ್ದ ಏರಿಯಾಗೆ ಜಿಲ್ಲೆಯ ಆರೋಗ್ಯಾಧಿಕಾರಿಗಳು ಭೇಟಿ ನೀಡಿದ್ದು, ಮುನ್ನೆಚ್ಚೆರಿಕೆ ಕ್ರಮಗಳನ್ನು ತಗೆದುಕೊಳ್ಳುತ್ತಿದ್ದಾರೆ.

    ಈ ವಿಚಾರವಾಗಿ ಮಾಹಿತಿ ನೀಡಿರುವ ಹಾನಸದ ಜಿಲ್ಲಾಧಿಕಾರಿ ಗಿರೀಶ್ ಅವರು, ಎರಡು ಏರಿಯಾಗಳನ್ನು ಕಂಟೈನ್‍ಮೆಂಟ್ ಝೋನ್‍ಗಳೆಂದು ಘೋಷಣೆ ಮಾಡಲಾಗಿದ್ದು, ಇಂದಿನಿಂದ 28 ದಿನಗಳ ಕಾಲ ಈ ರಸ್ತೆಗಳು ಸೀಲ್‍ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನ ಜಿಲ್ಲಾಡಳಿತವೇ ಪೂರೈಕೆ ಮಾಡಲಿದ್ದು, ಜನರು ಎಚ್ಚರದಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ.

  • ಹಾಸನದಲ್ಲಿ ಇಂದು ಮತ್ತೆ 6 ಮಂದಿಗೆ ಕೊರೊನಾ – 26ಕ್ಕೇರಿದ ಸೋಂಕಿತರ ಸಂಖ್ಯೆ

    ಹಾಸನದಲ್ಲಿ ಇಂದು ಮತ್ತೆ 6 ಮಂದಿಗೆ ಕೊರೊನಾ – 26ಕ್ಕೇರಿದ ಸೋಂಕಿತರ ಸಂಖ್ಯೆ

    – ಈಗಾಗಲೇ ಹೊರರಾಜ್ಯದಿಂದ ಹಾಸನಕ್ಕೆ ಬಂದಿದ್ದಾರೆ 1400 ಜನ

    ಹಾಸನ: ಹಾಸನಕ್ಕೆ ಮುಂಬೈ ಕಂಟಕ ಮತ್ತೆ ಮುಂದುವರೆದಿದ್ದು, ಇಂದು ಒಂದೇ ದಿನ ಹಾಸನದಲ್ಲಿ ಆರು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

    ಇಂದು ಚನ್ನರಾಯಪಟ್ಟಣ ಮೂಲದ ಇಬ್ಬರು, ಆಲೂರು ಮೂಲದ ಒಂದೇ ಕುಟುಂಬದ ಮೂವರು, ಹೊಳೆನರಸೀಪುರದ ಒಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇವರೆಲ್ಲರೂ ಮುಂಬೈನಿಂದ ವಾಪಸ್ಸಾದವರಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಆರು ಜನ ಸೋಂಕಿತರ ಜೊತೆ ಹಲವರು ಪ್ರಾಥಮಿಕ ಸಂಪರ್ಕದಲ್ಲಿದ್ದು ಸಂಜೆ ವೇಳೆಗೆ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಆರ್.ಗಿರೀಶ್ ಹೊಳೆನರಸೀಪುರ ಮೂಲದ ಒಬ್ಬರಿಗೆ ಪಾಸಿಟಿವ್ ಬಂದಿದೆ. ಇವರು ಒಂದೇ ಕುಟುಂಬದ ಮೂವರು ಬಾಂಬೆಯಿಂದ ಬಂದಿದ್ದು, 37 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಆಲೂರು ಮೂಲದ ಒಂದೇ ಕುಟುಂಬದ ಮೂವರಿಗೆ ಪಾಸಿಟಿವ್ ಬಂದಿದೆ. ಇವರ ಬಳಿ ಸ್ವಂತ ಲಾರಿಯಿದ್ದು, ಸ್ವಂತ ಲಾರಿಯಲ್ಲಿ ಹಾಸನಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಇಬ್ಬರಿಗೆ ಪಾಸಿಟಿವ್ ಬಂದಿದೆ ಇವರಲ್ಲಿ ಒಬ್ಬರು ಟೆಂಪೋ ಟ್ರಾವೆಲ್‍ನಲ್ಲಿ ಬಂದಿದ್ದಾರೆ. ಅವರ ಜೊತೆ ಒಟ್ಟು 13 ಜನ ಪ್ರಯಾಣಿಸಿದ್ದು, ಎಲ್ಲರೂ ಕ್ವಾರಂಟೈನ್‍ನಲ್ಲಿ ಇದ್ದಾರೆ. ಮತ್ತೊಬ್ಬರು ಒಟ್ಟು 15 ಜನರೊಂದಿಗೆ ಮುಂಬೈನಿಂದ ಪ್ರಯಾಣ ಮಾಡಿ ಚನ್ನರಾಯಪಟ್ಟಣಕ್ಕೆ ಬಂದಿದ್ದಾರೆ. 15 ಜನರಲ್ಲಿ ತುಮಕೂರಿನವರು 10 ಜನ, ಚನ್ನರಾಯಪಟ್ಟಣದವರು 5 ಜನ ಇದ್ದಾರೆ. ಎಲ್ಲರೂ ಕ್ವಾರಂಟೈನ್ ಮಾಡಲಾಗಿದೆ ಎಂದು ಗಿರೀಶ್ ಅವರು ಹೇಳಿದ್ದಾರೆ.

    ಇದುವರೆಗೂ ಹೊರರಾಜ್ಯದಿಂದ ಹಾಸನಕ್ಕೆ 1,400ಕ್ಕೂ ಹೆಚ್ಚು ಜನ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. 1,200ಕ್ಕೂ ಹೆಚ್ಚು ಜನ ಹೊರರಾಜ್ಯದಿಂದ ಹಾಸನಕ್ಕೆ ಬರಲು ನೋಂದಾಯಿಸಿಕೊಂಡಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.

  • ಇಂದು ಹಾಸನದಲ್ಲಿ ಮೂವರಿಗೆ ಕೊರೊನಾ- ಸೋಂಕಿತರೆಲ್ಲರೂ ಮುಂಬೈನಿಂದ ಬಂದವರು

    ಇಂದು ಹಾಸನದಲ್ಲಿ ಮೂವರಿಗೆ ಕೊರೊನಾ- ಸೋಂಕಿತರೆಲ್ಲರೂ ಮುಂಬೈನಿಂದ ಬಂದವರು

    – ಎಲ್ಲರೂ ಕ್ವಾರಂಟೈನ್‍ನಲ್ಲಿ ಇದ್ದರು

    ಹಾಸನ: ಜಿಲ್ಲೆಯಲ್ಲಿ ಇಂದು ಕೂಡ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕ ಹಾಸನದಲ್ಲಿ ಸೋಂಕಿತರ ಸಂಖ್ಯೆ 19ಕ್ಕೇರಿದೆ.

    ಹಾಸನ ಜಿಲ್ಲೆಯಲ್ಲಿ ಮುಂಬೈನಿಂದ ಬಂದವರಿಂದ ಸೋಂಕು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಶುಕ್ರವಾರ ಮುಂಬೈನಿಂದ ಬಾಣಾವರಕ್ಕೆ ಕಾರಿನಲ್ಲಿ ಬಂದಿದ್ದ 21 ವರ್ಷದ ಯುವತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಾರಿನಲ್ಲಿ 7 ಮಂದಿ ಹಾಸನಕ್ಕೆ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಗಿರೀಶ್ ಮಾಹಿತಿ ನೀಡಿದ್ದಾರೆ.

    ಏಳು ಜನರನ್ನು ಅರಸೀಕೆರೆ ತಾಲೂಕಿನ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿದ್ದಾರೆ. ಎಲ್ಲರೂ ಹಾಸನ ಜಿಲ್ಲೆಯವರಾಗಿದ್ದು, ಕಾರಿನ ಚಾಲಕ ಹುಣಸೂರಿನವರು ಎಂದು ತಿಳಿದು ಬಂದಿದೆ. ಮೇ, 13ರಂದು ಮುಂಬೈನಿಂದ ಹಾಸನಕ್ಕೆ ಬಸ್‍ನಲ್ಲಿ ಬಂದಿದ್ದವರಲ್ಲಿ ಇಬ್ಬರಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬಸ್ಸಿನಲ್ಲಿ ಬಂದಿದ್ದ 50 ವರ್ಷದ ವ್ಯಕ್ತಿ ಮತ್ತು 63 ವರ್ಷದ ವೃದ್ಧನಿಗೆ ಪಾಸಿಟಿವ್ ಬಂದಿದೆ. ಇವರು ಎಲ್ಲೂ ಹೋಗದೆ ನೇರವಾಗಿ ಕ್ವಾರಂಟೈನ್‍ಗೆ ಬಂದಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.

    ಹಾಸನದಲ್ಲಿ ಇನ್ನು ಕೂಡ ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಇದೆ. ಈಗ ಪಾಸಿಟಿವ್ ಬಂದವರ ಜೊತೆಗೆ 50ಕ್ಕೂ ಹೆಚ್ಚು ಜನ ಪ್ರಾಥಮಿಕ ಸಂಪರ್ಕದಲ್ಲಿ ಹೊಂದಿದ್ದಾರೆ. ಮುಂಬೈನಿಂದ ಎರಡು ಖಾಸಗಿ ಬಸ್ಸಿನಲ್ಲಿ ಹಾಸನಕ್ಕೆ ಬಂದವರಲ್ಲಿ ಈಗಾಗಲೇ ಕೊರೊನಾ ಕಾಣಿಸಿಕೊಂಡಿದೆ. ಒಂದು ಖಾಸಗಿ ಬಸ್ಸಿನಲ್ಲಿ ಕೊರೊನಾ ಪಾಸಿಟಿವ್ ಬಂದ ಮಹಿಳೆ ಜೊತೆ ಹಾಸನಕ್ಕೆ 20 ಜನ ಪ್ರಯಾಣಿಸಿದ್ದರು. ಮತ್ತೊಂದು ಖಾಸಗಿ ಬಸ್ಸಿನಲ್ಲಿ 26 ಜನ ಸೋಂಕಿತನೊಂದಿಗೆ ಪ್ರಯಾಣ ಮಾಡಿದ್ದರು. ಮುಂಬೈನಿಂದ ಬಂದ ಎಲ್ಲರನ್ನೂ ನೇರವಾಗಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು ಎಂದು ಡಿಸಿ ಹೇಳಿದ್ದಾರೆ.

  • ಕ್ವಾರಂಟೈನ್‍ನಲ್ಲಿ ಟಿಕ್‍ಟಾಕ್ ಮಾಡಿದವರಿಗೆ ಡಿಸಿ ಖಡಕ್ ಎಚ್ಚರಿಕೆ

    ಕ್ವಾರಂಟೈನ್‍ನಲ್ಲಿ ಟಿಕ್‍ಟಾಕ್ ಮಾಡಿದವರಿಗೆ ಡಿಸಿ ಖಡಕ್ ಎಚ್ಚರಿಕೆ

    ಹಾಸನ: ಕ್ವಾರಂಟೈನ್‍ನಲ್ಲಿ  ಟಿಕ್‍ಟಾಕ್ ಮಾಡಿದವರಿಗೆ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಮುಂಬೈನಿಂದ ಬಂದು ಚನ್ನರಾಯಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿ ಇರುವವರು ನಿಯಮ ಪಾಲಿಸದೆ ಟಿಕ್‍ಟಾಕ್ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ಜಿಲ್ಲಾಧಿಕಾರಿ ಆರ್.ಗಿರೀಶ್ ಗಮನಕ್ಕೆ ಬಂದಿದ್ದು, ಟಿಕ್‍ಟಾಕ್ ಮಾಡುತ್ತಿರುವವರಿಗೆ ನಿಯಮ ಪಾಲಿಸುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.

    ಮುಂಬೈನಿಂದ ಹಾಸನಕ್ಕೆ ಬಂದ 12 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇದರಿಂದ ಹಾಸನ ಗ್ರೀನ್ ಜೋನ್ ಪಟ್ಟ ಕಳೆದುಕೊಂಡಂತಾಗಿದೆ. ಆದರೆ ಮುಂಬೈನಿಂದ ಬಂದ ಕೆಲವರು ಕ್ವಾರಂಟೈನ್ ಕೇಂದ್ರದಲ್ಲಿ ನಿಯಮ ಪಾಲಿಸದೆ ಟಿಕ್‍ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್.ಗಿರೀಶ್ ಕ್ವಾರಂಟೈನ್ ಕೇಂದ್ರದಲ್ಲಿ ಇರುವವರು ಈ ಬಗ್ಗೆ ತಿಳಿದುಕೊಂಡು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

  • ಹೊರರಾಜ್ಯದಿಂದ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರಕ್ಕೆ: ಹಾಸನ ಡಿಸಿ ಸೂಚನೆ

    ಹೊರರಾಜ್ಯದಿಂದ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರಕ್ಕೆ: ಹಾಸನ ಡಿಸಿ ಸೂಚನೆ

    – ಕೊರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿ ಬಿಡುಗಡೆ

    ಹಾಸನ: ಹಾಸನಕ್ಕೆ ಮುಂಬೈನಿಂದ ಬರಲು ಸಾವಿರಕ್ಕೂ ಹೆಚ್ಚು ಜನರ ಸೇವಾಸಿಂಧು ಮೂಲಕ ನೋಂದಣಿ ಮಾಡಿಕೊಂಡಿದ್ದು, ಹಾಸನದಲ್ಲಿ ಕೊರೊನಾ ಭೀತಿ ಮತ್ತಷ್ಟು ಹೆಚ್ಚಾಗುವ ಆತಂಕ ಮೂಡಿದೆ.

    ಗ್ರೀನ್‍ಜೋನ್ ಆಗಿದ್ದ ಹಾಸನದಲ್ಲಿ ನಿನ್ನೆ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರಿಗೆ ಮತ್ತು ಇಂದು ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಹಾಸನದಲ್ಲಿ ಸೋಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಸೋಂಕಿತರೆಲ್ಲರೂ ಬಾಂಬೆಯಿಂದ ವಾಪಸ್ಸಾದವರೇ ಆಗಿದ್ದಾರೆ.

    ಈ ಹಿನ್ನೆಲೆಯಲ್ಲಿ ಮುಂಬೈನಿಂದ ಹಾಸನಕ್ಕೆ ಬರುವವರು ಸಾಧ್ಯವಾದಷ್ಟು ಇದ್ದಲ್ಲೇ ಇರಲು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಮನವಿ ಮಾಡಿದ್ದಾರೆ. ಒಂದು ವೇಳೆ ಹೊರರಾಜ್ಯದಿಂದ ಹಾಸನಕ್ಕೆ ಬಂದರೆ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರಲು ಸೂಚನೆ ನೀಡಿದ್ದಾರೆ. ಇಂದು ಪಾಸಿಟಿವ್ ಕಂಡುಬಂದ ನಾಲ್ವರ ಟ್ರಾವೆಲ್ ಹಿಸ್ಟರಿ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ, ನಾಲ್ವರೂ ಒಂದೇ ಕುಟುಂಬದವರಾಗಿದ್ದು, ಗಂಡ ಹೆಂಡತಿ ಇಬ್ಬರು ಮಕ್ಕಳಾಗಿದ್ದಾರೆ ಎಂದಿದ್ದಾರೆ.

    ಸೋಂಕಿತರು ನಿನ್ನೆ ಮೇ 12 ರಂದು ಮುಂಬೈನಿಂದ ಸ್ವಂತ ಕಾರಿನಲ್ಲಿ ಹಾಸನಕ್ಕೆ ಬಂದಿದ್ದಾರೆ. ಈ ಕುಟುಂಬ ಎಲ್ಲೂ ಸುತ್ತಾಡದೆ ನೇರವಾಗಿ ಜಿಲ್ಲಾಡಳಿತ ಮಾಡಿರುವ ಕ್ವಾರಂಟೈನ್ ಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪಾಸಿಟಿವ್ ಬಂದಿರುವವರ ಜೊತೆ ಕ್ವಾರಂಟೈನ್ ಕೇಂದ್ರದಲ್ಲಿದ್ದ 57 ಮಂದಿಯನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಅವರಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾಗಿ ತಿಳಿಸಿದ್ದಾರೆ.

  • ದೆಹಲಿಗೆ ಹಾಸನದಿಂದಲೂ 16 ಜನ ಹೋಗಿದ್ದು, 6 ಜನ ವಾಪಸ್ ಆಗಿದ್ದಾರೆ: ಡಿಸಿ

    ದೆಹಲಿಗೆ ಹಾಸನದಿಂದಲೂ 16 ಜನ ಹೋಗಿದ್ದು, 6 ಜನ ವಾಪಸ್ ಆಗಿದ್ದಾರೆ: ಡಿಸಿ

    ಹಾಸನ: ಕೊರೊನಾ ಸೋಂಕಿನ ಹಾಟ್‍ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ದೆಹಲಿ ಧಾರ್ಮಿಕ ಸಭೆಗೆ ಹಾಸನದಿಂದ 16 ಜನ ಹೋಗಿದ್ದು, ಅವರಲ್ಲಿ 6 ಜನ ಮರಳಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ಗಿರೀಶ್ ಮಾಹಿತಿ ನೀಡಿದ್ದಾರೆ.

    ವಾಪಸ್ ಬಂದ ಎಲ್ಲರನ್ನೂ ನಾವು ಗುರುತಿಸಿದ್ದೇವೆ. ಉಳಿದವರು ದೆಹಲಿ, ವಾರಂಗಲ್, ಕುಂದಾಪುರ, ಜಮ್ಮು ಕಾಶ್ಮೀರದಲ್ಲಿ ಇರುವ ಮಾಹಿತಿ ಲಭ್ಯವಾಗಿದೆ. ಹಾಸನ ಜಿಲ್ಲೆಯಲ್ಲಿ ಇರುವವರನ್ನು ಪ್ರತ್ಯೇಕಿಸಿ ನಿಗಾವಹಿಸಲಾಗುತ್ತಿದೆ. ಯಾರಿಗೂ ಈವರೆಗೆ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಇರುವ ಆರು ಮಂದಿಯಲ್ಲಿ ಒಬ್ಬರು ಕೊಡಗಿನವರಾಗಿದ್ದು, ಅವರೂ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. ದೆಹಲಿಗೆ ಹೋಗಿ ಬಂದವರ ಬಗ್ಗೆ ಜಿಲ್ಲೆಯ ಜನರಿಗೆ ತಿಳಿದಿದ್ದರೆ ಅವರ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ನೇರವಾಗಿ ಬಂದು ತಿಳಿಸಬಹುದು ಅಥವಾ ಹೆಲ್ಪ್‍ಲೈನ್ ಮುಖಾಂತರ ಮಾಹಿತಿ ನಿಡಬಹುದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇದುವರೆಗೂ ಯಾರಿಗೂ ಕೊರೊನ ಪಾಸಿಟಿವ್ ಕಂಡುಬಂದಿಲ್ಲ, ಜಿಲ್ಲೆಯ ಜನ ಧೈರ್ಯವಾಗಿರುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.