ಬೆಂಗಳೂರು: ತ್ರಯಂಬಕಂ ಚಿತ್ರ ಈ ವಾರ ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಟ್ರೈಲರ್ ಮೂಲಕವೇ ಅಪರೂಪದ ಕಥೆಯ ಸುಳಿವು ನೀಡಿರೋ ದಯಾಳ್ ಪದ್ಮನಾಭನ್ ನಿರ್ದೇಶನದ ಈ ಚಿತ್ರಕ್ಕಾಗಿ ಪ್ರೇಕ್ಷಕರೂ ಕೂಡಾ ಕಾತರದಿಂದ ಕಾಯಲಾರಂಭಿಸಿದ್ದಾರೆ. ಗೆಲುವಿನ ಸ್ಪಷ್ಟ ಸೂಚನೆಯೊಂದಿಗೆ ಲಕಲಕಿಸುತ್ತಿರುವ ಈ ಚಿತ್ರಕ್ಕೆ ಹಣ ಹೂಡಿದವರೂ ಕೂಡಾ ಈಗ ನಿರಾಳವಾಗಿದ್ದಾರೆ!
ದಯಾಳ್ ಅವರು ಈ ಬಾರಿ ಕಮರ್ಶಿಯಲ್ ಆಗಿಯೂ ನೆಲೆ ಕಂಡುಕೊಂಡು ಮತ್ತಷ್ಟು ಪ್ರೇಕ್ಷಕರನ್ನು ತಲುಪಿಕೊಳ್ಳುವ ಉದ್ದೇಶದೊಂದಿಗೇ ಅಖಾಡಕ್ಕಿಳಿದಿದ್ದಾರೆ. ಈ ಹಿಂದೆ ‘ಆ ಕರಾಳ ರಾತ್ರಿ’ ಚಿತ್ರದ ಸಂಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದವರೇ ತ್ರಯಂಬಕಂ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೀಗೆ ಕಷ್ಟಕಾಲದಲ್ಲಿ ನೆರವಾದ ನಿರ್ಮಾಪಕರನ್ನು ದಯಾಳ್ ಬಿಡುಗಡೆಗೂ ಮುನ್ನವೇ ಸೇಫ್ ಮಾಡಿದ್ದಾರೆ.
ತ್ರಯಂಬಕಂ ಚಿತ್ರದ ವಿತರಣಾ ಹಕ್ಕನ್ನು ಜಾಕ್ ಮಂಜುನಾಥ್ ಅವರು ಪಡೆದುಕೊಂಡಿದ್ದಾರೆ. ಈ ಮೂಲಕವೇ ನಿರ್ಮಾಪಕರು ಹೂಡಿದ ಒಟ್ಟಾರೆ ಹಣದಲ್ಲಿ ಅರ್ಧದಷ್ಟು ವಾಪಾಸಾಗಿದೆಯಂತೆ. ಈ ಮೂಲಕ ನಿರ್ಮಾಪಕರು ಬಿಡುಗಡೆ ಪೂರ್ವದಲ್ಲಿಯೇ ನಿರಾಳವಾಗಿದ್ದಾರೆ. ಈಗ ಹಬ್ಬಿಕೊಂಡಿರುವ ಸಕಾರಾತ್ಮಕ ಅಲೆಯೇ ಪ್ರೇಕ್ಷಕರನ್ನು ಥೇಟರಿನತ್ತ ಕರೆತರೋದರಲ್ಲಿ ಯಾವ ಸಂದೇಹವೂ ಇಲ್ಲ. ಅದುವೇ ತ್ರಯಂಬಕಂ ಚಿತ್ರಕ್ಕೆ ಭರಪೂರ ಗೆಲುವು ತಂದುಕೊಡಲಿದೆ ಎಂಬ ಭರವಸೆ ದಯಾಳ್ ಅವರದ್ದು.
ಅಕ್ಕ ಧಾರಾವಾಹಿಯ ಮೂಲಕವೇ ಮನೆ ಮಾತಾಗಿದ್ದವರು ಅನುಪಮಾ ಗೌಡ. ಸಿನಿಮಾವನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡು ಕಿರುತೆರೆಯಲ್ಲಿ ಮಿಂಚಿದ್ದ ಈಕೆಯ ಕನಸು ಬಿಗ್ ಬಾಸ್ ಶೋ ಮೂಲಕ ರೆಕ್ಕೆ ಬಿಚ್ಚಿಕೊಂಡಿದೆ. ಈಗಾಗಲೇ ಕರಾಳ ರಾತ್ರಿ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿರೋ ಅನುಪಮಾ, ದಯಾಳ್ ನಿರ್ದೇಶನದ ತ್ರಯಂಬಕಂ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.
ಈ ಚಿತ್ರದಲ್ಲಿ ಅನುಪಮಾ ಗೌಡ ರಾಘವೇಂದ್ರ ರಾಜ್ ಕುಮಾರ್ ಮತ್ತು ರೋಹಿತ್ ಜೊತೆ ನಟಿಸುತ್ತಿದ್ದಾರೆ. ಇದೀಗ ಅಂತರಗಂಗೆ ಬೆಟ್ಟದಲ್ಲಿ ಈ ಚಿತ್ರಕ್ಕಾಗಿ ಅವ್ಯಾಹತವಾಗಿ ಚಿತ್ರೀಕರಣ ನಡೆಯುತ್ತಿದೆ. ಈ ಬಗ್ಗೆ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ಅನುಪಮಾ ಹತ್ತೊಂಭತ್ತನೇ ದಿನವೂ ಅಂತರಗಂಗೆಯಲ್ಲಿ ಯಶಸ್ವಿಯಾಗಿ ಚಿತ್ರೀಕರಣ ನಡೆಯುತ್ತಿದೆ ಅಂತ ಬರೆದುಕೊಂಡಿದ್ದಾರೆ.
ಈಗಾಗಲೇ ದಯಾಳ್ ಪದ್ಮನಾಭನ್ ಆ ಕರಾಳ ರಾತ್ರಿ ಮತ್ತು ಪುಟ 109 ಚಿತ್ರದ ಮೂಲಕ ಗೆದ್ದಿದ್ದಾರೆ. ಈಗ ಭಿನ್ನ ಬಗೆಯ ಕಥೆಯೊಂದರ ಮೂಲಕ ತ್ರಯಂಬಕಂ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕವೇ ಅನುಪಮಾ ಗೌಡ ಕೂಡಾ ಮುಖ್ಯ ನಾಯಕಿಯರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳೋ ಕನಸು ಹೊಂದಿದ್ದಾರೆ.
ಬೆಂಗಳೂರು: ಆ ಕರಾಳ ರಾತ್ರಿ ಚಿತ್ರದ ಮೂಲಕ ಭಿನ್ನ ಪ್ರಯೋಗದ ಮೂಲಕವೇ ಗೆದ್ದಿದ್ದವರು ದಯಾಳ್ ಪದ್ಮನಾಭನ್. ಅವರ ಮತ್ತೊಂದು ಚಿತ್ರ ಪುಟ 109 ಇದೀಗ ಬಿಡುಗಡೆಯಾಗಿದೆ. ಒಂದು ಕೊಲೆ ಸುಪಾರಿ, ಅದರ ಬಗೆಗಿನ ರೋಚಕ ತನಿಖೆ ಮತ್ತು ಅದರ ಸುತ್ತ ಹರಡಿಕೊಂಡಿರೋ ಮನುಷ್ಯ ಸಂಬಂಧಗಳ ತಾಕಲಾಟ… ಇವಿಷ್ಟು ಅಂಶಗಳೊಂದಿಗೆ ಕಡೇ ತನಕ ಪ್ರೇಕ್ಷಕರು ಕೌತುಕದಿಂದ ಕುದಿಯುವಂತೆ ಮಾಡೋ ಮೂಲಕ ಈ ಚಿತ್ರವೂ ನೋಡುಗರ ಮನಗೆದ್ದಿದೆ.
ದೃಶ್ಯಗಳ ಜೊತೆಗೆ ನೋಡುಗರ ಮನಸನ್ನೂ ಒಂದು ಕೇಂದ್ರದಲ್ಲಿ ಕಟ್ಟಿ ನಿಲ್ಲಿಸುವ ಕಲೆ ದಯಾಳ್ ಗೆ ಸಿದ್ಧಿಸಿದೆ. ಅದು ಪುಟ 109ರ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಗೃಹಿಣಿಯೊಬ್ಬಳ ಕೊಲೆಗೆ ಕೊಡಲಾಗೋ ಸುಪಾರಿ, ಈ ಬಗ್ಗೆ ತನಿಖೆಗೆ ಪ್ರವೇಶಿಸುವ ಪೊಲೀಸ್ ಅಧಿಕಾರಿ ಮತ್ತು ಆ ಗೃಹಿಣಿಯ ಗಂಡ ಮತ್ತು ಪೊಲೀಸ್ ಅಧಿಕಾರಿಯ ನಡುವಿನ ತನಿಖೆಯ ಹಾದಿಯ ಮಾತಿನ ಜುಗಲ್ಬಂದಿ… ಬರೀ ಮಾತೇ ಆಗಿದ್ದರೆ ದಯಾಳ್ ತೆರೆದ ಪುಟ ಇಷ್ಟೊಂದು ರೋಚಕವಾಗಿರುತ್ತಿರಲಿಲ್ಲ. ಅಲ್ಲಿ ಮಾತಿನ ನಡುವೆ ಮೌನವೂ ಮಾತಾಗುತ್ತೆ. ಸಂಬಂಧಗಳ ಸಂಕೀರ್ಣ ಪದರಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ.
ಹೊರ ಜಗತ್ತಿನ ಪಾಲಿಗೆ ಅದೊಂದು ಸುಂದರ ಸಂಸಾರ. ಬರಹಗಾರ ಗಂಡ ಮತ್ತು ಸೌಂದರ್ಯವತಿ ಹೆಂಡತಿ. ಇಂಥಾ ಗೃಹಿಣಿಯ ಕೊಲೆಗೆ ಅದ್ಯಾರೋ ಸುಪಾರಿ ಕೊಡೋ ಮೂಲಕ ಪೊಲೀಸ್ ಅಧಿಕಾರಿಯ ಪ್ರವೇಶವಾಗುತ್ತೆ. ಈ ಗಂಡ ಹೆಂಡತಿ ಪಾತ್ರಗಳಲ್ಲಿ ವೈಷ್ಣವಿ ಮೆನನ್ ಮತ್ತು ನವೀನ್ ಕೃಷ್ಣ ಅಭಿನಯಿಸಿದ್ದರೆ, ಜೆಕೆ ಪೊಲೀಸ್ ಅಧಿಕಾರಿಯಾಗಿ ತಣ್ಣಗೆ ಅಬ್ಬರಿಸಿದ್ದಾರೆ. ಅಲ್ಲಿಂದಾಚೆಗೆ ನವೀನ್ ಕೃಷ್ಣ ಮತ್ತು ಜೆಕೆ ಪಾತ್ರಗಳ ಮಾತಿನ ವರಸೆ ಶುರುವಾಗುತ್ತೆ. ಮೊದಲಾರ್ಧ ಇದರಲ್ಲಿ ಸಾಗಿ ಬಂದು ದ್ವಿತೀಯಾರ್ಧದಲ್ಲಿ ಸಾಂಸಾರಿಕ ವಾತಾವರಣ ತೇಲಿ ಬಂದು ಮತ್ತೆ ತನಿಖೆಯ ಹಾದಿಗೆ ಮರಳುತ್ತೆ. ಆದರೆ ಒಟ್ಟಾರೆ ಕಥೆಯ ಹಿಡಿತ ಎಲ್ಲಿಯೂ ಲಯ ಕಳೆದುಕೊಳ್ಳೋದಿಲ್ಲ. ಕುತೂಹಲವೂ ಬಿಗಿ ಕಳೆದುಕೊಳ್ಳೋದಿಲ್ಲ.
ಇದು ಸರಳವಾಗಿ ಕಂಡರೂ ಇಡೀ ಚಿತ್ರವನ್ನು ಪ್ರತೀ ಕ್ಷಣವೂ ಕುತೂಹಲದಿಂದ ನೋಡುವಂತೆ ದಯಾಳ್ ಕಟ್ಟಿ ಕೊಟ್ಟಿದ್ದಾರೆ. ಜೆಕೆ, ನವೀನ್ ಕೃಷ್ಣ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ವೈಷ್ಣವಿ ಕೂಡಾ ಇದಕ್ಕೆ ಸಾಥ್ ನೀಡಿದ್ದಾರೆ. ಇಡೀ ಚಿತ್ರವನ್ನು ಇಷ್ಟು ರೋಚಕಗೊಳಿಸುವಲ್ಲಿ ಪಿಕೆಎಚ್ ದಾಸ್ ಅವರ ಮಾಂತ್ರಿಕ ಕ್ಯಾಮೆರಾ ಕುಸುರಿ ಪ್ರಧಾನ ಪಾತ್ರ ವಹಿಸಿದೆ. ಅವರ ಕ್ಯಾಮೆರಾ ಕೈಚಳಕ ಒಂದೇ ರೂಮಿನಲ್ಲಿ ನಡೆಯೋ ಕಥೆಗೂ ಹೊಸಾ ಬಣ್ಣ ನೀಡಿದೆ. ಇದಕ್ಕೆ ಹಿನ್ನೆಲೆ ಸಂಗೀತ, ಸಂಕಲನ ಸೇರಿದಂತೆ ಎಲ್ಲ ವಿಭಾಗಗಳ ಕೆಲಸವೂ ಪೂರಕವಾಗಿದೆ.
ದಯಾಳ್ ಪದ್ಮನಾಭನ್ ಈಗಾಗಲೇ ಆ ಕರಾಳ ರಾತ್ರಿ ಚಿತ್ರದ ಮೂಲಕ ಗೆದ್ದಿದ್ದಾರೆ. ಅವರು ಬಿಗ್ ಬಾಸ್ ಮನೆಯಿಂದ ಕಳೆದ ವರ್ಷ ಹೊರ ಬಂದೇಟಿಗೆ ಏಕ ಕಾಲದಲ್ಲಿಯೇ ಆ ಕರಾಳ ರಾತ್ರಿ ಮತ್ತು ಪುಟ 109 ಎಂಬೆರಡು ಚಿತ್ರಗಳನ್ನು ಆರಂಭಿಸಿದ್ದರು. ಇದೀಗ ಪುಟ 109 ಈ ವಾರ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.
ಈ ಹಿಂದೆ ಕರಾಳ ರಾತ್ರಿಯಲ್ಲಿ ಬೇರೆಯದ್ದೇ ಜಗತ್ತನ್ನು ತೋರಿಸುವಲ್ಲಿ ದಯಾಳ್ ಯಶ ಕಂಡಿದ್ದರು. ಇದೀಗ ಒಂದು ರೋಚಕ ಸಸ್ಪೆನ್ಸ್ ಕಥಾನಕವನ್ನು ಮತ್ತೆ ಜೆಕೆ ಹಾಗೂ ನವೀನ್ ಕೃಷ್ಣ ಜೊತೆಗೂಡಿ ಹೇಳ ಹೊರಟಿದ್ದಾರೆ. ಪ್ರೇಕ್ಷಕರಿಗೆ ಒಂದಷ್ಟು ಅಚ್ಚರಿಗಳನ್ನೂ ಹೊತ್ತು ತಂದಿದ್ದಾರೆ.
ಪೊಲೀಸ್ ತನಿಖೆಯ ಬಗ್ಗೆ ಜನಸಾಮಾನ್ಯರಲ್ಲೊಂದು ಕುತೂಹಲವಿದೆ. ಆದರೆ ಅದನ್ನು ನೇರವಾಗಿ ಕಣ್ತುಂಬಿಕೊಳ್ಳೋ ಅವಕಾಶ ಸಿಗೋದಿಲ್ಲ. ಅಂಥಾದ್ದೊಂದು ಕೊಲೆ, ಸುಪಾರಿಯ ಸುತ್ತ ನಡೆಯೋ ಪೊಲೀಸ್ ತನಿಖೆಯನ್ನು ಕಣ್ಣಿಗೆ ಕಟ್ಟುವಂತೆ, ಪ್ರತಿ ಕ್ಷಣವೂ ಸೀಟಿನ ತುದಿಗೆ ತಂದು ಕೂರಿಸೋ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರಂತೆ ದಯಾಳ್.
ದಯಾಳ್ ಪದ್ಮನಾಭನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಅವರ ಛಾಯಾಗ್ರಹಣವಿದೆ. ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಸಂಕಲನವಿರುವ ಈ ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಜೆ ಕೆ, ನವೀನ್ ಕೃಷ್ಣ, ವೈಷ್ಣವಿ ಚಂದ್ರನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅನುಪಮ ಗೌಡ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ.
ಬೆಂಗಳೂರು: ಆ ಕರಾಳ ರಾತ್ರಿ… ಎಂಬ ಹೆಸರು ಕೇಳಿದಾಕ್ಷಣವೇ ಮನಸಲ್ಲಿ ಹಾರರ್ ಕಲ್ಪನೆಗಳು ಹಾದು ಹೋಗೋದು ಸಹಜ. ಈಗಲೂ ಒಂದಷ್ಟು ಮಂದಿ ಪ್ರೇಕ್ಷಕರು ಇದನ್ನೊಂದು ಹಾರರ್ ಚಿತ್ರ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಈ ಬಗ್ಗೆ ದಯಾಳ್ ಪದ್ಮನಾಭನ್ ಅವರೇ ಕೆಲ ವಿಚಾರಗಳನ್ನು ತೆರೆದಿಟ್ಟಿದ್ದಾರೆ!
ಜೆಕೆ ಮತ್ತು ಅನುಪಮಾ ಗೌಡ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಮೇಲು ನೋಟಕ್ಕೆ ಹಾರರ್ ಸಿನಿಮಾ ಎಂಬ ಫೀಲ್ ಹುಟ್ಟಿಸಿದರೂ ಇದರಲ್ಲಿ ದೆವ್ವದ ಸುಳಿವಿರೋದಿಲ್ಲವಂತೆ. ಎಂಭತ್ತರ ದಶಕದಲ್ಲಿ ನಡೆಯೋ ಕಥಾನಕವನ್ನು ಹೊಂದಿರುವ ಕರಾಳ ರಾತ್ರಿ ಮೈ ನವಿರೇಳಿಸುವಂಥಾ ಕ್ರೈಂ ಥ್ರಿಲ್ಲರ್ ಅಂಶಗಳನ್ನೊಳಗೊಂಡಿದೆಯಂತೆ. ಇದನ್ನೂ ಓದಿ: ‘ಆ ಕರಾಳ ರಾತ್ರಿ’ಯಲ್ಲಿ ಒಂದಾದ ಜೆಕೆ-ಅನುಪಮಾ ಗೌಡ!
ಈ ಚಿತ್ರ ಸಾಹಿತಿ ಮೋಹನ್ ಹಬ್ಬು ರಚಿಸಿರುವ ಕರಾಳ ರಾತ್ರಿ ಎಂಬ ನಾಟಕವನ್ನಾಧರಿಸಿದ ಚಿತ್ರ. ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಇರುವ ಈ ಚಿತ್ರವನ್ನು ಈ ಹಿಂದೆ ಅರಿವು ಎಂಬ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಣ ಮಾಡಿದ್ದ ಅವಿನಾಶ್ ಶೆಟ್ಟಿಯವರೇ ನಿರ್ಮಿಸಿದ್ದಾರೆ. ಇನ್ನುಳಿದಂತೆ ಹಗ್ಗದ ಕೊನೆ ಚಿತ್ರದಲ್ಲಿ ನಟಿಸಿದ್ದ ನವೀನ್ ಕೃಷ್ಣ ಈ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ದಯಾಳ್ ಅವರಿಗೆ ಜೊತೆಯಾಗಿದ್ದಾರೆ. ಜೊತೆಗೆ ಒಂದು ಪಾತ್ರದಲ್ಲಿಯೂ ನಟಿಸಿದ್ದಾರೆ.
ಎಂಭತ್ತರ ದಶಕದಲ್ಲಿ ನಡೆಯೋ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಜೆಕೆ, ಅನುಪಮಾ ಗೌಡ ಸೇರಿದಂತೆ ಎಲ್ಲರೂ ರೆಟ್ರೋ ಲುಕ್ಕಿನಲ್ಲಿ ಕಾಣಿಸಿಕೊಳ್ಳಲಿರೋದು ಪ್ರಮುಖ ಆಕರ್ಷಣೆ. ರಂಗಾಯಣ ರಘು ಮತ್ತು ವೀಣಾ ಸುಂದರ್ ಮುಖ್ಯ ಪಾತ್ರಗಳಲ್ಲಿ ನಟಿಸಿರೋ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲು ಕ್ಷಣಗಣನೆ ಆರಂಭವಾಗಿದೆ.