Tag: Day-night Test

  • ಬೆಂಗಳೂರಿನಲ್ಲೂ ಡೇ-ನೈಟ್ ಟೆಸ್ಟ್ ಪಂದ್ಯ: ಸೌರವ್ ಗಂಗೂಲಿ

    ಬೆಂಗಳೂರಿನಲ್ಲೂ ಡೇ-ನೈಟ್ ಟೆಸ್ಟ್ ಪಂದ್ಯ: ಸೌರವ್ ಗಂಗೂಲಿ

    ನವದೆಹಲಿ: ಬಿಸಿಸಿಐ ಭಾರತ ತಂಡದ ಮೊದಲ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಕೋಲ್ಕತ್ತಾದಲ್ಲಿ ಯಶಸ್ವಿಯಾಗಿ ಆಯೋಜಿಸಿ ಎಲ್ಲರ ಮೆಚ್ಚುಗೆ ಪಡೆದಿತ್ತು. ಟೆಸ್ಟ್ ಕ್ರಿಕೆಟ್‍ನ ಉಳಿವಿಗೆ ಇಂತಹ ಮತ್ತಷ್ಟು ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಮುಂಬೈ, ಗುಜರಾತ್ ನಲ್ಲಿ ಪಂದ್ಯಗಳನ್ನು ನಡೆಸಲು ಚಿಂತಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಗಂಗೂಲಿ, ಈಗಾಗಲೇ ಡೇ-ನೈಟ್ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲು ಬೇಕಾದ ತಯಾರಿಯನ್ನು ಆರಂಭಿಸಲಾಗಿದೆ. ಪಂದ್ಯ ವೀಕ್ಷಣೆ ಮಾಡಲು ಸಾಕಷ್ಟು ಅಭಿಮಾನಿಗಳನ್ನು ಸೆಳೆದಿದ್ದೇವೆ. ಕೋಲ್ಕತ್ತಾ ಪಿಂಕ್ ಟೆಸ್ಟ್ ಪಂದ್ಯದಲ್ಲಿ ಪ್ರತಿ ನಿಮಿಷಕ್ಕೆ 15 ಟಿಕೆಟ್‍ಗಳನ್ನು ಮಾರಾಟ ಮಾಡಿದ್ದೆವು. ಕೇವಲ 2 ಗಂಟೆಯಲ್ಲೇ ಆನ್‍ಲೈನ್ ಟಿಕೆಟ್ ಮಾರಾಟವಾಗಿತ್ತು. ಆ ವೇಳೆ ಇಂತಹ ಮತ್ತಷ್ಟು ಪಂದ್ಯಗಳನ್ನು ಆಯೋಜಿಸುವ ಕುರಿತು ನಮಗೆ ಅರಿವಾಯಿತು ಎಂದು ಹೇಳಿದ್ದಾರೆ.

    ತಂಡದ ಆಟಗಾರರು ಕೂಡ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಆಡಲು ಸಮ್ಮತಿ ಸೂಚಿಸಿದ್ದಾರೆ. ಕೋಲ್ಕತ್ತಾ ಪಂದ್ಯದಲ್ಲಿ ಟೆಸ್ಟ್ ಪಂದ್ಯಕ್ಕೆ 60 ಸಾವಿರ ಮಂದಿ ಸಾಕ್ಷಿಯಾಗಿದ್ದರು. 2001ರಲ್ಲಿ ಆಸೀಸ್ ವಿರುದ್ಧ ಪಂದ್ಯದಲ್ಲಿ ನಾವು ಆಡಿದ್ದ ವೇಳೆ ಅಷ್ಟು ಮಂದಿ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದರು. ಆ ವೇಳೆ ಟಿ20 ಕ್ರಿಕೆಟ್ ಇರಲಿಲ್ಲ. ಅಲ್ಲದೇ ವರ್ಷಕ್ಕೆ ಒಂದು ಪಂದ್ಯವನ್ನು ಮಾತ್ರ ಕೋಲ್ಕತ್ತಾದಲ್ಲಿ ಆಡಲಾಗುತ್ತಿತ್ತು. ಆದರೆ ಈಗ ವರ್ಷವೊಂದರಲ್ಲಿ 9 ಐಪಿಎಲ್, ತಲಾ ಒಂದು ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

    ಭವಿಷ್ಯದಲ್ಲಿ ಡೇ-ನೈಟ್ ಪಂದ್ಯಗಳನ್ನು ಬೆಂಗಳೂರು ಸೇರಿದಂತೆ ಮುಂಬೈ, ಗುಜರಾತ್ ನಲ್ಲಿ ಆಯೋಜಿಸುವ ತಯಾರಿ ನಡೆದಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಆಟಗಾರರು ಇದಕ್ಕೆ ಪೂರಕವಾಗಿದ್ದಾರೆ ಎಂದು ಗಂಗೂಲಿ ತಿಳಿಸಿದ್ದಾರೆ.

  • 2 ಡೇ-ನೈಟ್ ಟೆಸ್ಟ್ ಪಂದ್ಯಗಳಿಗೆ ಮನವಿ ಮಾಡಿದ ಆಸೀಸ್

    2 ಡೇ-ನೈಟ್ ಟೆಸ್ಟ್ ಪಂದ್ಯಗಳಿಗೆ ಮನವಿ ಮಾಡಿದ ಆಸೀಸ್

    ಕೋಲ್ಕತ್ತಾ: ಮುಂದಿನ ವರ್ಷ ಟೀಂ ಇಂಡಿಯಾ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳಲಿದ್ದು, ಈ ವೇಳೆ ಆಡುವ 4 ಟೆಸ್ಟ್ ಪಂದ್ಯಗಳಲ್ಲಿ 2 ಪಂದ್ಯಗಳನ್ನು ಡೇ-ನೈಟ್ ಆಡುವಂತೆ ಆಸೀಸ್ ಕ್ರಿಕೆಟ್ (ಸಿಎ) ಬಿಸಿಸಿಐಗೆ ಮನವಿ ಮಾಡಿದೆ.

    ಸಿಎ ಮುಖ್ಯಸ್ಥರಾಗಿರುವ ಅರ್ಲ್ ಎಡ್ಡಿಂಗ್ಸ್ ತಮ್ಮ ಮನವಿಯನ್ನು ಬಿಸಿಸಿಐ ಮುಂದಿಟ್ಟಿದ್ದು, ಬರುವ ಜನವರಿಯಲ್ಲಿ ಭಾರತ ಆಸೀಸ್ ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಕುರಿತು ಚರ್ಚೆ ನಡೆಸುವ ವೇಳೆ ಮುಂದಿನ ಟೆಸ್ಟ್ ಟೂರ್ನಿಯಲ್ಲಿ ಅಡಿಲೇಡ್ ಹಾಗೂ ಪರ್ಥ್ ಕ್ರೀಡಾಂಗಣದಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯಗಳನ್ನು ಆಡುವ ಕುರಿತು ಅಧಿಕೃತ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ.

    ಇತ್ತೀಚೆಗಷ್ಟೇ ಟೀಂ ಇಂಡಿಯಾ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ವಿರುದ್ಧ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡಿತ್ತು. ಅಲ್ಲದೇ ಪಂದ್ಯದಲ್ಲಿ ಎದುರಾಳಿ ತಂಡವನ್ನು ಸುಲಭವಾಗಿ ಮಣಿಸಿ ಜಯ ಪಡೆದಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾವು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅತಿಥೇಯ ಮಂಡಳಿಯ ಕೋರಿಕೆಯಂತೆ ವ್ಯವಹರಿಸುತ್ತೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಆಸೀಸ್ ಕ್ರಿಕೆಟ್ ಮುಖ್ಯಸ್ಥರು 2 ಟೆಸ್ಟ್ ಪಂದ್ಯಗಳನ್ನು ಆಡುವ ಕುರಿತು ಮನವಿ ಮಾಡಲು ಮುಂದಾಗಿದ್ದಾರೆ.

    ಇತ್ತ ಆಸೀಸ್ ಮನವಿಯ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಸೌರವ್ ಗಂಗೂಲಿ, ಇದುವರೆಗೂ ಅಧಿಕೃತವಾಗಿ ಆಸೀಸ್ ಕ್ರಿಕೆಟ್‍ನಿಂದ ಯಾವುದೇ ಮನವಿ ಬಂದಿಲ್ಲ. ಆದರೂ ಒಂದೇ ಟೂರ್ನಿಯಲ್ಲಿ 2 ಡೇ-ನೈಟ್ ಪಂದ್ಯವೆಂದರೆ ಹೆಚ್ಚಾಗುತ್ತದೆ. ಸಿರೀಸ್ ಒಂದರಲ್ಲಿ ಒಂದೇ ಡೇ-ನೈಟ್ ಪಂದ್ಯವಿದ್ದರೆ ಸಾಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷದ ನವೆಂಬರ್ ನಲ್ಲಿ ಟೀಂ ಇಂಡಿಯಾ ತಂಡದ ಆಸೀಸ್ ಪ್ರವಾಸವನ್ನು ಕೈಗೊಳ್ಳಲಿದೆ. ಈ ವೇಳೆ 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ.

  • 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, ಯಾಸಿರ್ ಶಾ ಶತಕ- ಪಾಕಿಸ್ತಾನಕ್ಕೆ ಫಾಲೋಆನ್, ಆರಂಭಿಕ ಆಘಾತ

    7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, ಯಾಸಿರ್ ಶಾ ಶತಕ- ಪಾಕಿಸ್ತಾನಕ್ಕೆ ಫಾಲೋಆನ್, ಆರಂಭಿಕ ಆಘಾತ

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಶಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ವೃತ್ತಿ ಜೀವನದ ಮೊದಲ ಶತಕ ಸಿಡಿಸಿದ್ದಾರೆ.

    ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಪಾಕ್ ಕ್ರಿಕೆಟರ್ ಯಾಸಿರ್ ಶಾ ಈ ಸಾಧನೆ ಮಾಡಿದ್ದಾರೆ. 33 ವರ್ಷದ ಸ್ಪಿನ್ ಬೌಲರ್ ಯಾಸಿರ್ ಶಾ ಆಡಿದ ಹಿಂದಿನ 36 ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ 42 ರನ್ ಗಳಿಸಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ 113 ರನ್(213 ಎಸೆತ, 13 ಬೌಂಡರಿ) ಹೊಡೆದು ಕೊನೆಯವರಾಗಿ ಔಟಾದರು.

    31.5 ಓವರ್ ಗಳಲ್ಲಿ ಪಾಕಿಸ್ತಾನ 6 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದ್ದಾಗ ಕ್ರೀಸ್‍ಗೆ ಆಗಮಿಸಿದ ಯಾಸಿರ್ ಶಾ ಬಾಬರ್ ಅಜಂ ಜೊತೆಗೂಡಿ 7ನೇ ವಿಕೆಟಿಗೆ 105 ರನ್ ಜೊತೆಯಾಟವಾಡಿ ಪಾಕ್ ಚೇತರಿಕೆಗೆ ಕಾರಣರಾದರು. ಬಾಬರ್ ಅಜಂ 97 ರನ್(132 ಎಸೆತ, 11 ಬೌಂಡರಿ) ಹೊಡೆದರೆ, ಬೌಲರ್ ಮೊಹಮ್ಮದ್ ಅಬ್ಬಾಸ್ 29 ರನ್ ಹೊಡೆದರು. ಅಂತಿಮವಾಗಿ ಪಾಕಿಸ್ತಾನ 94.4 ಓವರ್ ಗಳಲ್ಲಿ 302 ರನ್‍ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಫಾಲೋಆನ್‍ಗೆ ತುತ್ತಾಗಿದೆ.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಔಟಾಗದೆ 335 ರನ್( 418 ಎಸೆತ, 39 ಬೌಂಡರಿ, 1 ಸಿಕ್ಸರ್), ಲಬುಶೇನ್ 162 ರನ್(238 ಎಸೆತ, 22 ಬೌಂಡರಿ) ಸಹಾಯದಿಂದ ಮೂರು ವಿಕೆಟ್ ನಷ್ಟಕ್ಕೆ 589 ರನ್ ಸಿಡಿಸಿ 127 ಓವರ್ ನಲ್ಲಿ ಡಿಕ್ಲೇರ್ ಘೋಷಿಸಿತು.

    ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಸಿಡಿಸಿದ ವಾರ್ನರ್ ಆಸ್ಟ್ರೇಲಿಯಾ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಹಿಂದೆ ಆರಂಭಿಕ ಆಟಗಾರ ಮಾಥ್ಯು ಹೇಡನ್ 2003 ರಲ್ಲಿ ಜಿಂಬಾಬ್ವೆ ವಿರುದ್ಧ 380 ರನ್(437 ಎಸೆತ, 38 ಬೌಂಡರಿ, 11 ಬೌಂಡರಿ) ಹೊಡೆದಿದ್ದರು.

    287 ರನ್‍ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಆರಂಭದಲ್ಲೇ ಕುಸಿತಗೊಂಡಿದ್ದು, 15.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದೆ.