Tag: Day-Night

  • ಬಿಸಿಸಿಐ ಮನವಿಗೆ ಒಪ್ಪಿದ ಬಾಂಗ್ಲಾ- ಕೋಲ್ಕತ್ತಾದಲ್ಲಿ ಮೊದ್ಲ ಡೇ-ನೈಟ್ ಟೆಸ್ಟ್ ಪಂದ್ಯ

    ಬಿಸಿಸಿಐ ಮನವಿಗೆ ಒಪ್ಪಿದ ಬಾಂಗ್ಲಾ- ಕೋಲ್ಕತ್ತಾದಲ್ಲಿ ಮೊದ್ಲ ಡೇ-ನೈಟ್ ಟೆಸ್ಟ್ ಪಂದ್ಯ

    ನವದೆಹಲಿ: ಐತಿಹಾಸಿಕ ಕ್ರಿಕೆಟ್ ಪಂದ್ಯಕ್ಕೆ ಕೋಲ್ಕತ್ತಾ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಸಾಕ್ಷಿಯಾಗುತ್ತಿದೆ. ಭಾರತದ ಮೊದಲ ಹೊನಲು ಬೆಳಕಿನ (ಡೇ-ನೈಟ್) ಟೆಸ್ಟ್ ಕ್ರಿಕೆಟ್ ಪಂದ್ಯ ಆಯೋಜಿಸಲು ಬಿಸಿಸಿಐ ಮಾಡಿದ್ದ ಮನವಿಗೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಸಮ್ಮತಿ ಸೂಚಿಸಿದೆ.

    ಟೀಂ ಇಂಡಿಯಾ ತನ್ನ ಮೊದಲ ಪಿಂಕ್ ಬಾಲ್ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಆಯೋಜಿಸಲಿದ್ದು, ನ.22 ರಂದು ಐತಿಹಾಸಿಕ ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಸೌರವ್ ಗಂಗೂಲಿ ಅವರು ಬಾಂಗ್ಲಾ ತಂಡವನ್ನು ಒಪ್ಪಿಸಲು ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಪಂದ್ಯಕ್ಕೆ ಸಮ್ಮತಿ ಸೂಚಿಸಿದ್ದಾರೆ.

    ಈ ಕುರಿತು ನಿನ್ನೆಯಷ್ಟೇ ಮಾಹಿತಿ ನೀಡಿದ್ದ ಗಂಗೂಲಿ, ನಾನು ಬಿಸಿಬಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಒಪ್ಪಿಗೆ ಸೂಚಿಸುವ ವಿಶ್ವಾಸವಿದೆ. ಆಟಗಾರರೊಂದಿಗೆ ಚರ್ಚೆ ನಡೆಸಿ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ. ಶೀಘ್ರವೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

    ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿ ನಡೆಯುತ್ತಿರುವ ಟೆಸ್ಟ್ ಟೂರ್ನಿಯ ಕಾರಣ ಈ ಮೊದಲು ಈ ಹೊಸ ಮಾದರಿಗೆ ಬಿಸಿಸಿಐ ನಿರಾಕರಿಸಿತ್ತು. ಆದರೆ ಗಂಗೂಲಿ ಅವರು ಅಧ್ಯಕ್ಷ ಸ್ಥಾನ ಪಡೆದ ಬಳಿಕ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.

    ವಿಶ್ವ ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ, ಐರ್ಲೆಂಡ್ ತಂಡಗಳು ಮಾತ್ರ ಇದುವರೆಗೂ ಡೇ-ನೈಟ್ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. 2015 ರಲ್ಲಿ ಮೊದಲ ಬಾರಿಗೆ ಆಸೀಸ್ ಹಾಗೂ ನ್ಯೂಜಿಲೆಂಡ್ ನಡುವೆ ಡೇ-ನೈಟ್ ಟೆಸ್ಟ್ ಪಂದ್ಯ ನಡೆದಿತ್ತು. ಆ ಬಳಿಕ ಇದುವರೆಗೂ 11 ಪಂದ್ಯಗಳು ಈ ಮಾದರಿಯಲ್ಲಿ ನಡೆದಿದೆ.

    ಐಸಿಸಿಯ ನಿಯಮಗಳ ಅನ್ವಯ ಪಂದ್ಯಕ್ಕೆ ಅತಿಥೇಯ ತಂಡ ಎದುರಾಳಿ ದೇಶದ ಅನುಮತಿಯನ್ನು ಪಡೆದ ಬಳಿಕವೇ ಡೇ-ನೈಟ್ ಟೆಸ್ಟ್ ಪಂದ್ಯ ಆಯೋಜಿಸಬೇಕಿದೆ. ಟೀಂ ಇಂಡಿಯಾ ಕೂಡ ಕಳೆದ ವರ್ಷ ಅಡಿಲೇಡ್‍ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆಯೇ ಡೇ-ನೈಟ್ ಟೆಸ್ಟ್ ಆಡುವ ನಿರೀಕ್ಷೆ ಇತ್ತು. ಆದರೆ ಬಿಸಿಸಿಐ ಇದಕ್ಕೆ ಸಮ್ಮಿತಿ ಸೂಚಿಸಿರಲಿಲ್ಲ. ವಿಶೇಷ ಎಂದರೆ ಡೇ-ನೈಟ್ ಬಳಕೆ ಮಾಡುವ ಪಿಂಕ್ ಬಾಲ್ ಅನ್ನು ಟೀಂ ಇಂಡಿಯಾ 2016 ರಿಂದ 2018ವರೆಗೂ ನಡೆದ ದಿಲೀಪ್ ಟ್ರೋಫಿಯಲ್ಲಿ ಬಳಕೆ ಮಾಡಿತ್ತು. 2019 ಅವಧಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ರೆಡ್ ಬಾಲ್ ಬಳಕೆ ಮಾಡಲಾಯಿತು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಂಗ್ಲಾ ಕ್ರಿಕೆಟ್ ತಂಡದ ಕೋಚ್ ರಸೆಲ್ ಡೊಮಿಂಗೋ, ತಂಡದ ಕೋಚ್ ಹಾಗೂ ಹಿರಿಯ ಆಟಗಾರನಾಗಿ ಇದನ್ನು ಅತ್ಯುತ್ತಮ ಅವಕಾಶ ಎಂದು ಭಾವಿಸುತ್ತೇನೆ. ಏಕೆಂದರೆ ಟೀಂ ಇಂಡಿಯಾ ಕೂಡ ಇದುವರೆಗೂ ಪಿಂಕ್ ಬಾಲ್ ಕ್ರಿಕೆಟ್ ಆಡಿಲ್ಲ. ನಾವು ಮೊದಲ ಬಾರಿಗೆ ಆಡುತ್ತಿದ್ದು, ಈಡನ್ ಗಾರ್ಡನ್ಸ್ ನಲ್ಲಿ ಬಹದೊಡ್ಡ ಅವಕಾಶ ಲಭಿಸಿದೆ ಎಂದಿದ್ದಾರೆ.

    ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಭಾರತದ ಒಲಂಪಿಯನ್ಸ್ ಆದ ಅಭಿನವ್ ಬಿಂದ್ರಾ, ಮೇರಿ ಕೋಮ್, ಪಿವಿ ಸಿಂಧು, ಸೇರಿದಂತೆ ಇತರ ಆಟಗಾರರಿಗೆ ಆಹ್ವಾನ ನೀಡುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ಕೂಡ ಪಿಂಕ್ ಟೆಸ್ಟ್ ಪಂದ್ಯಕ್ಕೆ ಸ್ತನ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮೆಕ್‍ಗ್ರಾತ್ ಫೌಂಡೇಶನ್‍ಗೆ ಆಹ್ವಾನ ನೀಡಿತ್ತು. ಗಂಗೂಲಿ ಅವರು ಕೂಡ ಈಡನ್ ಗಾರ್ಡನ್ಸ್ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.