Tag: Davos

  • ಸಿಎಂ ದಾವೋಸ್‌ ಪ್ರವಾಸ ಫಿಕ್ಸ್‌ – ಬೊಮ್ಮಾಯಿ ಜೊತೆ ಇಬ್ಬರು ಸಚಿವರೂ ಪ್ರಯಾಣ

    ಸಿಎಂ ದಾವೋಸ್‌ ಪ್ರವಾಸ ಫಿಕ್ಸ್‌ – ಬೊಮ್ಮಾಯಿ ಜೊತೆ ಇಬ್ಬರು ಸಚಿವರೂ ಪ್ರಯಾಣ

    ಬೆಂಗಳೂರು: ಬಿಜೆಪಿಯಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದಾವೋಸ್‌ ಪ್ರವಾಸ ಕೊನೆಗೂ ಫಿಕ್ಸ್‌ ಆಗಿದೆ.

    ಇದೇ ಮೇ 22 ರ ಬೆಳಗ್ಗೆ ಸಿಎಂ ದಾವೋಸ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಸಿಎಂ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ನಂತರ ಮೇ 26 ರಂದು ವಾಪಸ್‌ ಆಗಲಿದ್ದಾರೆ. ಇದನ್ನೂ ಓದಿ: PSI ಪ್ರಕರಣದ ನಿಜವಾದ ಕಿಂಗ್‍ಪಿನ್‍ಗಳು ಬೆಂಗಳೂರಲ್ಲೇ ಇದ್ದಾರೆ, ಬಂಧಿತರೇ ಬೇರೆ: ಪ್ರಿಯಾಂಕ್ ಖರ್ಗೆ ಬಾಂಬ್

    ಒಟ್ಟು ಐದು ದಿನಗಳ ಕಾಲ ವಿದೇಶ ಪ್ರವಾಸ ಮಾಡಲಿದ್ದಾರೆ. ಈ ವೇಳೆ ಸಿಎಂ ಜೊತೆಗೆ ದಾವೋಸ್‌ಗೆ ಇಬ್ಬರು ಸಚಿವರೂ ಪ್ರಯಾಣ ಬೆಳೆಸಲಿದ್ದಾರೆ. ಸಿಎಂ ಜೊತೆಗೆ ಐಟಿ ಬಿಟಿ ಸಚಿವ ಡಾ.ಅಶ್ವಥ್‌ ನಾರಾಯಣ ಮತ್ತು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರವಾಸ ಕೈಗೊಳ್ಳಲಿದ್ದಾರೆ.

    ಹಲವು ಕಾರಣಗಳಿಗಾಗಿ ಮುಖ್ಯಮಂತ್ರಿಗಳ ಲಂಡನ್‌ ಪ್ರವಾಸ ರದ್ದಾಗಿತ್ತು. ಇದರ ಬೆನ್ನಲ್ಲೇ ದಾವೋಸ್‌ ಪ್ರವಾಸವೂ ರದ್ದಾಗುವ ಸಾಧ್ಯತೆ ಇದೆ ಎಂದು ಸುದ್ದಿ ಹರಡಿತ್ತು. ಆದರೆ ದಾವೋಸ್‌ ಪ್ರವಾಸ ಕೊನೆಗೂ ಫಿಕ್ಸ್‌ ಆಗಿದೆ. ಇದನ್ನೂ ಓದಿ: ಸಚಿವ ಸಂಪುಟದಲ್ಲಿ ಬದಲಾವಣೆ ಮಾಡುವುದು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದು: ಅರುಣ್ ಸಿಂಗ್

  • ಸಿಎಂ ದಾವೋಸ್ ಪ್ರವಾಸ ನಾಳೆ ನಿರ್ಧಾರ: ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ಸಂದೇಶ

    ಸಿಎಂ ದಾವೋಸ್ ಪ್ರವಾಸ ನಾಳೆ ನಿರ್ಧಾರ: ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ಸಂದೇಶ

    ಬೆಂಗಳೂರು: ಬಿಜೆಪಿಯಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಲಂಡನ್ ಪ್ರವಾಸವೂ ರದ್ದಾಗಿದ್ದು, ದಾವೋಸ್ ಪ್ರವಾಸವೂ ರದ್ದಾಗುವ ಸಾಧ್ಯತೆ ಇದೆ. ನಾಳೆ ಮಹತ್ವದ ನಿರ್ಧಾರ ಹೊರಬೀಳುವ ಬಗ್ಗೆ ನಾನಾ ಚರ್ಚೆಗಳು ಆಗುತ್ತಿದ್ದು, ಹೈಕಮಾಂಡ್ ಸಂದೇಶ ಕುತೂಹಲ ಹುಟ್ಟುಹಾಕಿದೆ.

    ಬಿಜೆಪಿ ಹೈಕಮಾಂಡ್‌ನ ಆ ಸಂದೇಶ ನಾಳೆಯೇ ಬಂದು ಬಿಡುತ್ತೋ? ಮುಂದಿನ ವಾರ ಬರುತ್ತೋ ಎಂಬ ಬಗ್ಗೆ ಮೊದಲ ಸಾಲಿನ ನಾಯಕರಲ್ಲೇ ಗೊಂದಲ ಇದೆ. ಈ ನಡುವೆ ಸಿಎಂ ವಿದೇಶ ಪ್ರವಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಮೇ 18, 19 ರಂದು ತೆರಳಬೇಕಿದ್ದ ಲಂಡನ್ ಪ್ರವಾಸ ರದ್ದುಗೊಳಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ದಾವೋಸ್ ಪ್ರವಾಸಕ್ಕೂ ತೆರಳುವುದು ಅನುಮಾನವಾಗಿದೆ. ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಮಾತನಾಡಿ, ದಾವೋಸ್‌ಗೆ ಹೋಗುವುದರ ಬಗ್ಗೆ ನಾಳೆ ತೀರ್ಮಾನ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮೇ 16ಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭ – 30 ಸಾವಿರ ವಿದ್ಯಾರ್ಥಿಗಳ ಪೋಷಕರಿಗೆ ಪತ್ರ ಬರೆದ ರಮೇಶ್ ಜಾರಕಿಹೊಳಿ

    ಇದೆಲ್ಲದರ ನಡುವೆ ಇವತ್ತು ದೆಹಲಿಯಿಂದ ವಾಪಸ್ ಬಂದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸಿದರು. 20 ನಿಮಿಷ ಬಿಎಸ್‌ವೈ ಜೊತೆ ಚರ್ಚೆ ನಡೆಸಿದ ಸಿಎಂ ದೆಹಲಿ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. ಅಮಿತ್ ಶಾ ಏನ್ ಹೇಳಿದ್ರು? ಏನ್ ಮಾಡ್ತಾರಂತೆ ಎಂದು ಸಿಎಂ ಬಳಿ ಯಡಿಯೂರಪ್ಪ ಮಾಹಿತಿ ಕೇಳಿದಾಗ, ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಏನ್ ಮಾಡ್ತೀವಿ ಅಂತಾ ನಾಲ್ಕೈದು ದಿನದಲ್ಲಿ ತಿಳಿಸ್ತೀವಿ ಅಂತಷ್ಟೇ ಅಮಿತ್ ಶಾ ಹೇಳಿದ್ದಾರೆ. ನನಗೂ ಸ್ಪಷ್ಟವಾದ ಸಂದೇಶ ಸಿಗಲಿಲ್ಲ. ಆದರೆ ಮಹತ್ವದ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ ಎಂದು ಸಿಎಂ ವಿವರಿಸಿದ್ದಾರೆ ಎನ್ನಲಾಗಿದೆ.

    ಇನ್ನೊಂದೆಡೆ ನಾಳೆ ಬೆಳಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದು, ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಡೆಯಲಿದ್ದು, ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಒಟ್ಟಿನಲ್ಲಿ ಸಿಎಂ ವಿದೇಶ ಪ್ರವಾಸ ರದ್ದಾಗಿದ್ದು, ವಾರದೊಳಗೆ ಸಂದೇಶ ರವಾನೆ ಮಾಡ್ತೀವಿ ಅಂತಾ ಅಮಿತ್ ಶಾ ಹೇಳಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಆ ಬದಲಾವಣೆ ಮುಂದಿನ ವಾರದೊಳಗೆ ಆಗಬಹುದಾ ಎಂಬ ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ಲಿಡ್ಕರ್ ಮೂಲಕ ಸ್ವಯಂ ಉದ್ಯೋಗ ಒದಗಿಸಲು ಆದ್ಯತೆ: ಬೊಮ್ಮಾಯಿ

  • ದಾವೋಸ್ ಆರ್ಥಿಕ ಶೃಂಗ ಸಭೆ ಸಕ್ಸಸ್- ಸಿಎಂ, ನಿಯೋಗ ಬೆಂಗ್ಳೂರಿಗೆ ವಾಪಸ್

    ದಾವೋಸ್ ಆರ್ಥಿಕ ಶೃಂಗ ಸಭೆ ಸಕ್ಸಸ್- ಸಿಎಂ, ನಿಯೋಗ ಬೆಂಗ್ಳೂರಿಗೆ ವಾಪಸ್

    ಬೆಂಗಳೂರು: ಸ್ವಿಟ್ಜರ್ಲೆಂಡ್‍ನ ದಾವೋಸ್ ನಲ್ಲಿ ವಿಶ್ವ ಆರ್ಥಿಕ ಶೃಂಗ ಸಭೆಯನ್ನು ಯಶಸ್ವಿಯಾಗಿ ಮುಗಿಸಿ ಸಿಎಂ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

    ಸ್ವಿಟ್ಜರ್ಲೆಂಡ್‍ನಿಂದ ದುಬೈ ಮಾರ್ಗವಾಗಿ ಸಿಎಂ ಮತ್ತು ನಿಯೋಗವು ಇಂದು ಮಧ್ಯಾಹ್ನ 3.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. ಇದೇ ತಿಂಗಳ 20ರಿಂದ 23ರವರೆಗೆ ನಾಲ್ಕು ದಿನಗಳ ಕಾಲ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಸಿಎಂ ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಮೂವರು ಐಎಎಸ್ ಅಧಿಕಾರಿಗಳೂ ಸೇರಿದಂತೆ ಒಟ್ಟು 10 ಜನರ ನಿಯೋಗ ದಾವೋಸ್ ಶೃಂಗ ಸಭೆಯಲ್ಲಿ ಭಾಗವಹಿಸಿತ್ತು.

    4 ದಿನಗಳ ಕಾಲ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ 35 ಜಾಗತಿಕ ಉದ್ಯಮಿಗಳ ಜೊತೆ ಸಿಎಂ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಸಂವಾದ ನಡೆಸಿದ್ದರು. ಬೆಂಗಳೂರು ಸೇರಿದಂತೆ ಕರ್ನಾಟಕದ ಮೆಟ್ರೋಪಾಲಿಟನ್ ನಗರಗಳು, ಟು ಟೈರ್ ನಗರಗಳಲ್ಲಿ ವಿದೇಶಿ ಉದ್ಯಮಗಳಿಗೆ ಇರುವ ಪೂರಕ ವಾತಾವರಣ, ಉದ್ದಿಮೆಗೆ ಅಗತ್ಯ ಇರುವ ಸ್ಥಳೀಯ ಮೂಲಭೂತ ಸೌಕರ್ಯಗಳು, ಸರಕಾರದಿಂದ ನೀಡಲಾಗುವ ಸೌಕರ್ಯಗಳು, ವಿನಾಯ್ತಿಗಳ ಬಗ್ಗೆ ಜಾಗತಿಕ ಉದ್ಯಮಿಗಳಿಗೆ ಸಿಎಂ ನೇತೃತ್ವದ ನಿಯೋಗ ಮನವರಿಕೆ ಮಾಡಿಕೊಟ್ಟಿದೆ.

    ರಾಜ್ಯದ ನಿಯೋಗದ ಮುಖ್ಯ ಆದ್ಯತೆ ಇದ್ದಿದ್ದೇ ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕಲಬುರಗಿಗಳಂತಹ ಟುಟೈರ್ ಸಿಟಿಗಳಲ್ಲಿ ವಿದೇಶಿ ಹೂಡಿಕೆದಾರರನ್ನು ಸೆಳೆಯುವುದು. ಈ ನಿಟ್ಟಿನಲ್ಲಿ ರಾಜ್ಯದ ನಿಯೋಗ ತನ್ನ ಕೆಲಸವನ್ನು ಯಶಸ್ವಿಯಾಗಿ ಮಾಡಿದೆ ಎನ್ನಲಾಗಿದೆ. ಅಲ್ಲದೆ ಮುಂದಿನ ನವೆಂಬರ್ ಆರಂಭದಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕ -2020 ರ ಕರ್ಟೈನ್ ರೈಸರ್ ಅನ್ನೂ ದಾವೋಸ್ ನಲ್ಲೇ ಅನಾವರಣ ಮಾಡುವ ಮೂಲಕ ವಿದೇಶಿ ಉದ್ಯಮಿಗಳ ಚಿತ್ತ ರಾಜ್ಯದ ಮೇಲೆ ಬೀಳಿಸುವ ಪ್ರಯತ್ನವನ್ನೂ ನಿಯೋಗ ಮಾಡಿತು.

    ನವೆಂಬರ್‍ನಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕ 2020ರಲ್ಲಿ ಭಾಗವಹಿಸಲು ವಿದೇಶಿ ಉದ್ಯಮಿಗಳಿಂದ ಭರವಸೆಯೂ ಸಿಕ್ಕಿದೆ. ಆ ಮೂಲಕ ರಾಜ್ಯದಲ್ಲಿ ವಿದೇಶಿ ಹೂಡಿಕೆಗೆ ಹಲವು ವಿದೇಶಿ ಉದ್ಯಮಿಗಳು ಮುಂದೆ ಬಂದಿದ್ದಾರೆ. ಒಟ್ಟಾರೆ ಜಾಗತಿಕ ಉದ್ಯಮಿಗಳ ಜೊತೆ ಸಿಎಂ ಮತ್ತು ನಿಯೋಗದ ಸಂವಾದ ಸಕ್ಸಸ್ ಆಗಿದೆ ಎನ್ನಲಾಗಿದೆ.

  • ರಾಜ್ಯದಲ್ಲಿ ಹೆಚ್ಚು ಹೂಡಿಕೆ ಮಾಡಲು ಜಾಗತಿಕ ಕಂಪನಿಗಳ ಆಸಕ್ತಿ

    ರಾಜ್ಯದಲ್ಲಿ ಹೆಚ್ಚು ಹೂಡಿಕೆ ಮಾಡಲು ಜಾಗತಿಕ ಕಂಪನಿಗಳ ಆಸಕ್ತಿ

    ದಾವೋಸ್: ವಿಶ್ವ ಆರ್ಥಿಕ ಸಮ್ಮೇಳನದ ಮೂರನೇ ದಿನವಾದ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಹಲವಾರು ಜಾಗತಿಕ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿತು. ಜೆಮಿನಿ ಕಾರ್ಪೊರೇಷನ್, ಕೋಕಾಕೋಲಾ ಕಂಪನಿ, ಉಬರ್, ಎಸ್‍ಎಪಿ ಲ್ಯಾಬ್ಸ್, ಜನರಲ್ ಎಲೆಕ್ಟ್ರಿಕ್ (ಜಿಇ), ಸ್ವಿಸ್‍ರೆ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ನ ಪ್ರಮುಖರೊಂದಿಗೆ ಕರ್ನಾಟಕದಲ್ಲಿ ಬಂಡವಾಳ ತೊಡಗಿಸುವ ಬಗ್ಗೆ ಚರ್ಚೆ ನಡೆಸಿದರು.

    ಕರ್ನಾಟಕದಲ್ಲಿ ಉದ್ದಿಮೆಗಳ ವಿಸ್ತರಣೆ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ತಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಸರ್ಕುಲರ್ ಎಕಾನಮಿ, ಇಂಧನ ಮತ್ತು ಮೊಬಿಲಿಟಿ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಪ್ರತಿನಿಧಿಗಳೊಂದಿಗಿನ ತಮ್ಮ ಚರ್ಚೆಯಲ್ಲಿ ಮುಖ್ಯಮಂತ್ರಿಗಳು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿದರು.

    ಇದೇ ವೇಳೆ ಉಬರ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾರಾ ಖೋಸ್ರೋವ್ ಶಾಹಿ ಅವರು ಬೆಂಗಳೂರಿನಲ್ಲಿ ತಮ್ಮ ಉದ್ಯಮದ ವಿಸ್ತರಣೆ ಮಾಡಲಾಗುತ್ತದೆ ಮತ್ತು ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.

    ಜಿಇ ಕಂಪನಿಯ ವಿಲಿಯಂ ಮೊ ಕೊವನ್ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು, ಆರೋಗ್ಯ ಕ್ಷೇತ್ರ, ವಿದ್ಯುತ್ ವಿತರಣೆ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ, ಕೋಕಾಕೋಲಾದ ಪ್ರತಿನಿಧಿಗಳು 25 ದಶಲಕ್ಷ ಅಮೆರಿಕನ್ ಡಾಲರ್ ನಷ್ಟು ಬಂಡವಾಳವನ್ನು ಹೂಡಲಾಗುತ್ತದೆ ಮತ್ತು ಇದನ್ನು ಮುಂಬರುವ ದಿನಗಳಲ್ಲಿ 200 ದಶಲಕ್ಷ ಡಾಲರ್ ಗಳಿಗೆ ಹೆಚ್ಚಿಸಲಾಗುತ್ತದೆ. ಈ ಬಂಡವಾಳದಿಂದ ರೈತರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ವಿನಿಯೋಗ ಮಾಡಲಾಗುತ್ತದೆ ಎಂದು ವಿವರಿಸಿದರು.

    ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಸ್ಟ್ರಾಟೆಜಿಕ್ ಔಟ್ ಲುಕ್ ಇಂಡಿಯಾ ಫಾರ್ ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಫಾರ್ ಇಂಡಿಯಾ ಎಂಬ ಸಂವಾದದಲ್ಲಿ ಪಾಲ್ಗೊಂಡರು. ಈ ಸಂವಾದದಲ್ಲಿ ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್, ಎಸ್ ಬಿಐ ನ ಅಧ್ಯಕ್ಷ ರಜನೀಶ್ ಕುಮಾರ್ ಸೇರಿದಂತೆ ಮತ್ತಿತರೆ ಪ್ರಮುಖರು ಹಾಜರಿದ್ದರು.

    ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಗುರಿ ತಲುಪಲು ಭಾರತದ ಎಲ್ಲಾ ರಾಜ್ಯಗಳು ಕೈಜೋಡಿಸುತ್ತಿವೆ. ನಮ್ಮ ರಾಜ್ಯ ಕರ್ನಾಟಕ 250 ಬಿಲಿಯನ್ ಯುಎಸ್ ಡಾಲರ್ ನಷ್ಟು ಜಿಡಿಪಿಯನ್ನು ಹೊಂದಿದ್ದು, ಶೇ.9ರ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಇಲ್ಲಿ ವಿಶ್ವ ಆರ್ಥಿಕ ಸಮ್ಮೇಳನದ ಮೂಲಕ ನಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಮತ್ತು ವಾಣಿಜ್ಯೋದ್ಯಮಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

    ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾಭಿವೃದ್ಧಿ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳು ಇದ್ದರು.

  • ದಾವೋಸ್‍ನಲ್ಲಿ ಯಡಿಯೂರಪ್ಪ ಖುಷ್ ಖುಷ್, ಸ್ಮೈಲ್ ಸ್ಮೈಲ್!

    ದಾವೋಸ್‍ನಲ್ಲಿ ಯಡಿಯೂರಪ್ಪ ಖುಷ್ ಖುಷ್, ಸ್ಮೈಲ್ ಸ್ಮೈಲ್!

    ದಾವೋಸ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಗೋದು ಅಪರೂಪ ಅನ್ನೋರೇ ಹೆಚ್ಚು. ನಗುವ ಒಂದು ಫೋಟೋ ತೆಗಿಬೇಕು ಅಂದ್ರೆ ಕಷ್ಟಕಷ್ಟ ಅಂತಿದ್ದ ಕಾಲವಿತ್ತು. ಆದ್ರೀಗ ಸಿಎಂ ಯಡಿಯೂರಪ್ಪ ಕೊಂಚ ಬದಲಾಗಿದ್ದಾರೆ ಅಂತಿದ್ದಾರೆ ಅವರ ಆಪ್ತರು. ಈ ನಡುವೆ ದಾವೋಸ್‍ನಲ್ಲಂತೂ ಯಡಿಯೂರಪ್ಪ ಅವರಿಗೆ ಸಿಟ್ಟು ಬಂದಿದ್ದೇ ಕಡಿಮೆ ಅಂತೆ. ಉದ್ಯಮಿಗಳ ಹಾಗೂ ರಾಜ್ಯದ ಅಧಿಕಾರಿಗಳ ಜೊತೆಗೆ ಫುಲ್ ಖುಷಿಯಾಗಿದ್ದಾರಂತೆ. ಜತೆಗೆ ಆಗಾಗ್ಗೆ ಫೋಟೋ ಶೂಟ್ ಕೂಡ ನಡೀತಾ ಇದೆ ಎನ್ನುವುದು ಫಾರಿನ್ ಸ್ಪೆಷಲ್.

    ಸಿಎಂ ಯಡಿಯೂರಪ್ಪ ಅವರು ದಾವೋಸ್‍ಗೆ ತೆರಳಿದ ಮೊದಲ ದಿನವೇ ಸಿಂಗಲ್ ಆಗಿ ವಾಕ್ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಕೂಲಿಂಗ್ ಕನ್ನಡಕ, ಟೋಪಿ, ಫುಲ್ ಗೌನ್ ಹಾಕೊಂಡು ವಾಕ್ ಮಾಡಿದ್ದ ಫೋಟೋ ಫುಲ್ ವೈರಲ್ ಆಗಿತ್ತು. ಸಿಎಂ ದಾವೋಸ್‍ನಿಂದ ಶುಕ್ರವಾರ ವಾಪಸ್ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ ಇವತ್ತು ಸಂಜೆ ಆರ್ಥಿಕ ಸಮ್ಮೇಳನದ ಎಲ್ಲ ಸಭೆಗಳನ್ನು ಮುಗಿಸಿ ಯಡಿಯೂರಪ್ಪ ಅವರು ದಾವೋಸ್ ಸಿರಿಯನ್ನು ಮನಸೊರೆಗೊಂಡರು ಎನ್ನಲಾಗಿದೆ. ದಾವೋಸ್ ಸುತ್ತಮುತ್ತ ರೌಂಡ್ ಹಾಕಿದ ಅವರು ನಗು ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    ಕರ್ನಾಟಕದಲ್ಲಿದ್ದಾಗ ಸಿಎಂ ಯಡಿಯೂರಪ್ಪ ಅವರು ಯಾವ ವಿಚಾರಕ್ಕೆ ಖುಷಿಯಾಗಿ ಇರ್ತಾರೆ, ಯಾವ ವಿಚಾರಕ್ಕೆ ಗರಂ ಆಗ್ತಾರೆ ಅಂತ ತಲೆಕೆಡಿಸಿಕೊಳ್ಳುತ್ತಿದ್ದ ಅಧಿಕಾರಿಗಳು, ಆಪ್ತರು ಈಗ ಕೂಲ್ ಆಗಿದ್ದಾರಂತೆ. ದಾವೋಸ್‍ನಲ್ಲಿ ಆ ಟೆನ್ಶನ್ ಇಲ್ಲ. ಬಹುತೇಕ ಎಲ್ಲ ಉದ್ಯಮಿಗಳ ಜತೆ ನಗುನಗುತ್ತಲೇ ಮಾತನಾಡುತ್ತಾರೆ. ನಮ್ಮ ಜತೆಯಲ್ಲೂ ಖುಷಿ ಖುಷಿಯಿಂದ ಮಾತಣಾಡುತ್ತಾರೆ. ನಮ್ಮ ರಾಜಾಹುಲಿ ಫುಲ್ ಖುಷ್ ಖುಷ್. ಮುಖದಲ್ಲಿ ಸದಾ ಸ್ಮೈಲ್ ಸ್ಮೈಲ್ ಎನ್ನುತ್ತಿದೆ ದಾವೋಸ್‍ನಲ್ಲಿ ಅವರ ಜತೆ ಇರುವ ಆಪ್ತ ಬಳಗ.

  • ದಾವೋಸ್ ಆರ್ಥಿಕ ಶೃಂಗಸಭೆ- ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕವೇ ಫೇವರೇಟ್

    ದಾವೋಸ್ ಆರ್ಥಿಕ ಶೃಂಗಸಭೆ- ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕವೇ ಫೇವರೇಟ್

    ದಾವೊಸ್ (ಸ್ವಿಟ್ಜರ್ಲೆಂಡ್): ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದ ಮೂರನೇ ದಿನವಾದ ಇಂದು ಕರ್ನಾಟಕದ ಪಾಲಿಗೆ ಫಲಪ್ರದವಾಗಿ ಪರಿಣಮಿಸಿತು. ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಅವರು ಪ್ರತಿಷ್ಠಿತ ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು. ಇದರಲ್ಲಿ ದಸ್ಸಾ ಸಿಸ್ಟಮ್ಸ್, ಅರ್ಸೆಲಾರ್ ಮಿತ್ತಲ್, ಭಾರತ್ ಫೋರ್ಜ್, ಲಾಕ್ ಹೀಡ್ ಮಾರ್ಟಿನ್, ಲುಲು ಗ್ರೂಪ್ ಮತ್ತು ನೊವೊ ನಾರ್ಡಿಸ್ಕ್ ಮೊದಲಾದ ಕಂಪೆನಿಗಳು ಸೇರಿದ್ದವು.

    ತಮ್ಮನ್ನು ಭೇಟಿಯಾದ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿದ ಸಿಎಂ ಯಡಿಯೂರಪ್ಪ ಅವರು, ಕರ್ನಾಟಕ ಸರ್ಕಾರವು ಹೂಡಿಕೆದಾರರಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಿದೆ. ಜೊತೆಗೆ ಎಲ್ಲ ರೀತಿಯ ಅಡಚಣೆಗಳನ್ನು ನಿವಾರಿಸಲಿದೆ ಎಂದು ಸ್ಪಷ್ಟ ಪಡಿಸಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಹೂಡಿಕೆಗೆ ಸೂಕ್ತ ನೆರವು ಒದಗಿಸಲಿದ್ದಾರೆ ಎಂದು ತಿಳಿಸಿದರು.

    ಈಗಾಗಲೇ ಬೆಂಗಳೂರಿನಲ್ಲಿ ಅಸ್ತಿತ್ವ ಹೊಂದಿರುವ ದಸ್ಸಾ ಸಿಸ್ಟಮ್ಸ್ 3ಡಿಎಸ್ ಅವರಿಂದ ಹೂಡಿಕೆಯ ಕುರಿತು ಅತ್ಯಂತ ಭರವಸೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಕಂಪೆನಿಯ ಉಪಾಧ್ಯಕ್ಷ ಫ್ಲಾರೆನ್ಸ್ ವರ್ಝೆಲೆನ್ ಅವರು ಬೆಂಗಳೂರು ಹಾಗೂ ಯಾವುದಾದರೂ ಜಿಲ್ಲೆಯಲ್ಲಿ ಎರಡು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ವಹಿಸುವುದಾಗಿ ತಿಳಿಸಿದರು. `ನಾವು ಪ್ರತಿ ಕೇಂದ್ರದಲ್ಲಿ ಪ್ರತಿ ವರ್ಷ ತಲಾ 2,000 ಯುವಕರಿಗೆ ತರಬೇತಿ ನೀಡಿ, ದೊಡ್ಡ ಕಂಪೆನಿಗಳಲ್ಲಿ ಕೌಶಲ್ಯಪೂರ್ಣ ಉದ್ಯೋಗ ಪಡೆಯಲು ಅರ್ಹರನ್ನಾಗಿಸಲಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಯುವಕರಿಗೆ ತರಬೇತಿ ನೀಡಲು ತಾವು ಆಸಕ್ತರಾಗಿದ್ದೇವೆ’ ತಿಳಿಸಿದರು.

    ಎಂಜಿನಿಯರಿಂಗ್ ಪದವೀಧರರಿಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದ ಫ್ಲಾರೆನ್ಸ್ ವರ್ಝೆಲೆನ್ ಅವರು, ಈ ಕೇಂದ್ರಗಳ ಸ್ಥಾಪನೆಗೆ ಒಂದು ದಶಲಕ್ಷ ಯುರೋ ಹೂಡಿಕೆ ಮಾಡಲಾಗುವುದು ಎಂದರು. ಬೆಂಗಳೂರು ರಕ್ಷಣಾ ಉಪಕರಣಗಳು ಹಾಗೂ ಎರೋಸ್ಪೇಸ್ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಈ ವಲಯಗಳಲ್ಲಿ ತರಬೇತಿ ಹೊಂದಿದ ಯುವಕರಿಗೆ ಬೇಡಿಕೆ ಇರುವ ಕುರಿತು ಸಿಎಂ ಗಮನ ಸೆಳೆದಾಗ ವರ್ಝೇಲೆನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಅಂತಹ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

    ಉಕ್ಕಿನ ಕೈಗಾರಿಕೆಗಳ ಪ್ರಮುಖ ಉದ್ಯಮಿ ಲಕ್ಷ್ಮಿ ಎನ್.ಮಿತ್ತಲ್ ಮಂಗಳವಾರ ರಾತ್ರಿ ನಡೆದ ಸಿಐಐ ಭೋಜನ ಕೂಟದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದರು. ಇಂದು ಬೆಳಗ್ಗೆಯೂ ಕರ್ನಾಟಕ ಪೆವಿಲಿಯನ್‍ಗೆ ಆಗಮಿಸಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕುರಿತು ಚರ್ಚೆ ನಡೆಸಿದರು. ಅವರ ಕಂಪೆನಿಯು ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 3,000 ಎಕರೆ ಭೂಮಿ ಹೊಂದಿದೆ.

    `2010ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಉಕ್ಕು ತಯಾರಿಕಾ ಘಟಕ ಸ್ಥಾಪನೆಗೆ ಅನುಮತಿ ನೀಡಿದ್ದು, ಕಾರಣಾಂತರಗಳಿಂದ ಇದಕ್ಕೆ ಅಡಚಣೆಗಳು ಉಂಟಾಗಿವೆ. ಈಗ ತಾವು ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿ ಎಂದು ಲಕ್ಷ್ಮಿ ಎನ್.ಮಿತ್ತಲ್ ಮನವಿ ಮಾಡಿದರು. ಕರ್ನಾಟಕದಲ್ಲಿ ಸೌರ ವಿದ್ಯುತ್ ಸ್ಥಾವರದಲ್ಲಿ ಹೂಡಿಕೆ ಮಾಡುವುದಾಗಿ ಮಿತ್ತಲ್ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಉಕ್ಕು ತಯಾರಿಕಾ ಘಟಕ ಹಾಗೂ ಸೌರ ವಿದ್ಯುತ್ ಸ್ಥಾವರಗಳೆರಡರ ಯೋಜನೆಯನ್ನೂ ಕೂಡಲೇ ಪ್ರಾರಂಭಿಸುವಂತೆ ಸಲಹೆ ನೀಡಿದರು. ಅದಕ್ಕೆ ಮಿತ್ತಲ್ ಅವರು ಈ ಕೂಡಲೇ ಉಕ್ಕಿನ ಉಪಯೋಗದ ಕುರಿತ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.

    ಲುಲು ಗ್ರೂಪ್ ಅಧ್ಯಕ್ಷ ಯೂಸುಫ್ ಅಲಿ ಅವರು ಕರ್ನಾಟಕದಲ್ಲಿ ಸರಕು ಸಾಗಾಣಿಕೆ ವಲಯದಲ್ಲಿ 2000 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದರು. ಈ ಸಂಸ್ಥೆಯು ವಿಶೇಷವಾಗಿ ಕೃಷಿ ಉತ್ಪನ್ನ ಹಾಗೂ ಶೀಘ್ರ ಕೊಳೆತುಹೋಗುವ ತರಕಾರಿ, ಆಹಾರ ವಸ್ತುಗಳು, ಹಣ್ಣು ಹಂಪಲು ಹಾಗೂ ಪುಷ್ಪಗಳ ಸಾಗಾಣಿಕೆಗೇ ಹೂಡಿಕೆ ಮಾಡಲಿದೆ.

    ಕೈಗಾರಿಕಾ ಸಚಿವ ಜಗದೀಶ್ ಎಸ್. ಶೆಟ್ಟರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರೂ ಸಹ ಸಭೆಗಳಲ್ಲಿ ಭಾಗವಹಿಸಿದ್ದರು.

  • ದುಬಾರಿ ಬೆಲೆಯ ಗೌನ್ ಧರಿಸಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಿಂಚಿದ ದೀಪಿಕಾ

    ದುಬಾರಿ ಬೆಲೆಯ ಗೌನ್ ಧರಿಸಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಿಂಚಿದ ದೀಪಿಕಾ

    ದಾವೋಸ್: ಬಾಲಿವುಡ್‍ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಇತ್ತೀಚಿಗೆ ಸ್ವಿಟ್ಜರ್ಲ್ಯಾಂಡ್ ನ ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕ್ರಿಸ್ಟಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬರೋಬ್ಬರಿ 2.2 ಲಕ್ಷ ರೂ. ಬೆಲೆಯ ದುಬಾರಿ ಗೌನ್‍ ಧರಿಸಿ ದೀಪಿಕಾ ಮಿಂಚಿದ್ದಾರೆ.

    ಬರೋಬ್ಬರಿ 2.2 ಲಕ್ಷ ರೂ. ಬೆಲೆಯ ನೀಲಿ ಬಣ್ಣದ ಗೌನ್‍ನಲ್ಲಿ ದೀಪಿಕಾ ಮಿಂಚಿ ಎಲ್ಲರ ಗಮನ ಸೆಳೆದಿದ್ದಾರೆ. ವೇದಿಕೆ ಮೇಲೆ ನೀಲಿ ಗೌನ್‍ನಲ್ಲಿ ದೀಪಿಕಾ ಕ್ರಿಸ್ಟಲ್ ಅವಾರ್ಡ್ ಪಡೆಯುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ದೀಪಿಕಾ ಅವರ ದೇಹದ ಶೇಪ್‍ಗೆ ತಕ್ಕಂತೆ ಈ ಗೌನ್ ಡಿಸೈನ್ ಮಾಡಲಾಗಿತ್ತು. ಈ ದುಬಾರಿ ಗೌನ್‍ಗೆ ಚೌಕ ಆಕಾರದ ನೆಕ್‍ಲೈನ್, ಪ್ಯಾಡೆಡ್ ಶೋಲ್ಡರ್, ಕೇಪ್ ಸ್ಲೀವ್ಸ್ ಫಿನಿಷಿಂಗ್ ನೀಡಲಾಗಿದೆ. ಈ ಗೌನ್ ಧರಿಸಿದ್ದ ದೀಪಿಕಾ ಅದಕ್ಕೆ ಮ್ಯಾಚಿಂಗ್ ಡೈಮಂಡ್ ಮತ್ತು ಸಫೈರ್ ಇಯರ್‍ರಿಂಗ್ ಹಾಕಿದ್ದರು. ನೋಡಲು ಸಿಂಪಲ್ ಆಗಿ ಕಾಣಿಸಿದರೂ ದೀಪಿಕಾ ಅವರ ಗೌನ್ ಲುಕ್ ಎಲ್ಲರ ಗಮನ ಸೆಳೆದಿದೆ. ವೇದಿಕೆ ಮೇಲೆ ಗೌನ್‍ನಲ್ಲಿ ಕ್ರಿಸ್ಟಲ್ ಅರ್ವಾಡ್ ಜೊತೆ ದೀಪಿಕಾ ಮಿಂಚಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದಕ್ಕಾಗಿ ದೀಪಿಕಾ ಅವರಿಗೆ ಕ್ರಿಸ್ಟಲ್ ಅವಾರ್ಡ್ 2020 ನೀಡಿ ಗೌರವಿಸಲಾಗಿದೆ. ಸ್ಟಾರ್ ನಟಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳನ್ನು ದೀಪಿಕಾ ಮಾಡುತ್ತಾ ಬಂದಿದ್ದಾರೆ. ಖಿನ್ನತೆಗೆ ಒಳಗಾದರಿಗೆ ಸಹಾಯ ಮಾಡುವ ಉದ್ದೇಶದಿಂದ 2015ರಲ್ಲಿ `ಲೀವ್ ಲವ್ ಲಾಫ್’ ಸಂಸ್ಥೆಯನ್ನು ದೀಪಿಕಾ ಸ್ಥಾಪಿಸಿದ್ದಾರೆ. ಈ ಮೂಲಕ ಖಿನ್ನತೆಗೆ ಒಳಗಾದವರು ಆ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತಿದ್ದಾರೆ.

    ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ದೀಪಿಕಾ, ತಾವು ಖಿನ್ನತೆಗೆ ಒಳಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. 2014ರಲ್ಲಿ ಪ್ರಾರಂಭವಾದ ಖಿನ್ನತೆ ಮತ್ತು ಆತಂಕದಿಂದ ಸಾಕಷ್ಟು ಬಾರಿ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರ ಮಾಡಿದ್ದೆ. ಆದರೆ ನನ್ನ ತಾಯಿ ನನ್ನನ್ನು ಖಿನ್ನತೆಯಿಂದ ಹೊರಗೆ ಕರೆದುಕೊಂಡು ಬಂದರು. ಖಿನ್ನತೆ ಮತ್ತು ಆತಂಕಕ್ಕೆ ಚಿಕಿತ್ಸೆ ನೀಡಲಾಗುತ್ತೆ. ನನ್ನ ಅನುಭವದ ಪ್ರಕಾರ ಸ್ವೀಕಾರವು ಚೇತರಿಕೆಯ ಮೊದಲ ಹೆಜ್ಜೆಯಾಗಿದೆ ಎಂದು ಭಾಷಣ ಮಾಡಿದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

  • ರಾಜಾಹುಲಿ ಯಡಿಯೂರಪ್ಪಗೆ ದಾವೋಸ್‍ನಲ್ಲೂ ಉಪ್ಪಿಟ್ಟು, ವಡೆ!

    ರಾಜಾಹುಲಿ ಯಡಿಯೂರಪ್ಪಗೆ ದಾವೋಸ್‍ನಲ್ಲೂ ಉಪ್ಪಿಟ್ಟು, ವಡೆ!

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಕೆಲವೊಂದು ವಿಚಾರದಲ್ಲಿ ಬಹಳ ಶಿಸ್ತು. ಊಟ, ತಿಂಡಿ, ವಾಕಿಂಗ್ ವಿಚಾರದಲ್ಲಂತೂ ಅವರದ್ದು ಮಿಸ್ಟರ್ ಪರ್ಫೆಕ್ಟ್. ಮನೆಯಲ್ಲಿದ್ದಾಗಲೂ ಅಷ್ಟೇ, ಹೊರಗೆ ಹೋದಾಗಲೂ ಅಷ್ಟೇ. ಫುಡ್ ಸ್ಟೈಲ್ ಮಾತ್ರ ಚೇಂಜ್ ಆಗೋದು ಕಷ್ಟ. ಅಂತಹ ಯಡಿಯೂರಪ್ಪಗೆ ದಾವೋಸ್‍ನಲ್ಲೂ ಅವರ ಕೇಳಿದ ತಿಂಡಿ, ಊಟದ ವ್ಯವಸ್ಥೆ ಆಗ್ತಿದೆಯಂತೆ. ಅದೇ ಯಡಿಯೂರಪ್ಪ ಉಪ್ಪಿಟ್ಟು ಟೇಸ್ಟು.

    ಹೌದು. ಯಡಿಯೂರಪ್ಪಗೆ ಉಪ್ಪಿಟ್ಟು ಅಂದ್ರೆ ಬಲು ಇಷ್ಟ. ಬೆಳಗ್ಗೆ ತಿಂಡಿಗೆ ಅವರಿಗೆ ವೆರೈಟಿ ಐಟಂ ಇರಬೇಕು. ಕನಿಷ್ಠ ಮೂರು ವೆರೈಟಿ ಆದರೂ ಇರಬೇಕು. ಉಪ್ಪಿಟ್ಟು, ರೊಟ್ಟಿ, ದೋಸೆ, ಇಡ್ಲಿ, ವಡೆ ಅವರಿಗೆ ತಿಂಡಿಯಲ್ಲಿ ಮಾಮೂಲಿ ಐಟಂ. ಆದರೆ ಇದೀಗ ಯಡಿಯೂರಪ್ಪ 6 ದಿನಗಳ ಕಾಲ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಈಗ ಅವರ ಫುಡ್ ಕಲ್ಚರ್ ಚೇಂಜ್ ಆಗುತ್ತಾ ಅನ್ನೋ ಕುತೂಹಲವಿತ್ತು. ಆದರೆ ಫುಡ್‍ನಲ್ಲಿ ದೊಡ್ಡ ಬದಲಾವಣೆಯೇನೂ ಆಗಿಲ್ಲವಂತೆ. ದಾವೋಸ್‍ಗೆ ಹೋದಾಗಿನಿಂದ ಯಡಿಯೂರಪ್ಪಗೆ ನಮ್ ಕಲ್ಚರ್ ಫುಡ್ ಆಗುತ್ತಿದೆ ಅನ್ನೋದು ಲೇಟೆಸ್ಟ್ ಸುದ್ದಿ.

    ಯಡಿಯೂರಪ್ಪ ದಾವೋಸ್‍ಗೆ ಪ್ರಯಾಣ ಬೆಳೆಸಿದ ಮಾರನೇ ದಿನ ಸೋಮವಾರ ಯಡಿಯೂರಪ್ಪ ಬಿಸಿಬಿಸಿ ಶಾವಿಗೆ ಉಪ್ಪಿಟ್ಟು ತಿಂದ್ರಂತೆ. ಆಗಲೇ ನಾಳೆಗೆ ರವೆ ಉಪ್ಪಿಟ್ಟು ಸಿಗಬಹುದಾ ಅಂತ ಪ್ರಶ್ನೆ ಮಾಡಿದ್ರಂತೆ. ಯಡಿಯೂರಪ್ಪ ಕೇಳಿದ್ದಕ್ಕೆ ರವೆ ಉಪ್ಪಿಟ್ಟು, ವಡೆ, ಇಡ್ಲಿಯನ್ನ ಅಧಿಕಾರಿಗಳು ರೆಡಿ ಮಾಡಿಸಿದ್ದಾರೆ. ಇವತ್ತು ಮಂಗಳವಾರ ಬೆಳಗ್ಗೆ ಉಪ್ಪಿಟ್ಟು, ವಡೆ, ಇಡ್ಲಿ ತಿಂದು ಯಡಿಯೂರಪ್ಪ ಸೂಪರ್ ಅಂದ್ರಂತೆ. ಅಷ್ಟೇ ಅಲ್ಲ ನಮ್ ತಿಂಡಿ ಸಿಕ್ಕಿದ್ಮೇಲೆ ಅವರ ಲವಲವಿಕೆ ಹೆಚ್ಚಾಗಿದ್ದು, ಸಿಂಗಲ್ ವಾಕಿಂಗ್ ಜೋರಾಗಿಯೇ ನಡೆಯುತ್ತಿದೆ ಅಂತೆ. ಯಡಿಯೂರಪ್ಪ ಉಪ್ಪಿಟ್ಟು ತಿಂದ್ರೆ ಬೇರೆ ಅಧಿಕಾರಿಗಳು ಅಯ್ಯೋ ನಮ್ಗೆ ಹೊಸ ಟೇಸ್ಟ್ ನೋಡೋಣ ಅಂತ ವೆರೈಟಿ ಹುಡುಕುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

  • ದಾವೋಸ್‍ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆ ಉದ್ಘಾಟನೆ- ಮೊದಲ ದಿನದಲ್ಲೇ ಭರ್ಜರಿ ಹೂಡಿಕೆ ಮಾತುಕತೆಗೆ ಸಿಎಂ ಚಾಲನೆ

    ದಾವೋಸ್‍ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆ ಉದ್ಘಾಟನೆ- ಮೊದಲ ದಿನದಲ್ಲೇ ಭರ್ಜರಿ ಹೂಡಿಕೆ ಮಾತುಕತೆಗೆ ಸಿಎಂ ಚಾಲನೆ

    ದಾಮೋಸ್: ಸ್ವಿಟ್ಜರ್ಲೆಂಡ್‍ನ ದಾವೋಸ್‍ನಲ್ಲಿ ಇಂದಿನಿಂದ 4 ದಿನಗಳ ವಿಶ್ವ ಆರ್ಥಿಕ ಶೃಂಗ ಸಭೆಗೆ ಚಾಲನೆ ಕೊಡಲಾಯ್ತು. ಕರ್ನಾಟಕದಿಂದ ಈ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ಮೊದಲ ದಿನದಿಂದಲೇ ಜಾಗತಿಕ ಮಟ್ಟದ ಉದ್ಯಮಿಗಳ ಜೊತೆ ಯಶಸ್ವಿಯಾಗಿ ಹೂಡಿಕೆ ಕುರಿತು ಮಾತುಕತೆ ಆರಂಭಿಸಿತು. ಕರ್ನಾಟಕದಲ್ಲಿ ಸೆಂಟರ್ ಫಾರ್ ಇಂಟರ್ ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭಿಸಲು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ರಾಜ್ಯದಲ್ಲಿ ಹೂಡಿಕೆದಾರರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯದ ನಿಯೋಗ ಪ್ರಮುಖ ಹೆಜ್ಜೆಯಿಟ್ಟಿದೆ.

    ದಾವೋಸ್‍ನಲ್ಲೇ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ನಲ್ಲಿ ಕರ್ನಾಟಕ ಪೆವಿಲಿಯನ್ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೂರಟ್ ಸಾನ್ಮೆಝ್ ಅವರು ಮಾತನಾಡುತ್ತ, ವ್ಯಾಪಾರ ವಹಿವಾಟಿನಲ್ಲಿ ನೈತಿಕತೆಯು ಕಡಿಮೆಯಾಗುತ್ತಿರುವ ಕುರಿತು ಹೂಡಿಕೆದಾರರು ಕಳವಳ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಗಳು ಸೆಂಟರ್ ಫಾರ್ ಇಂಟರ್ ನೆಟ್ ಆಫ್ ಎಥಿಕಲ್ ಥಿಂಗ್ಸ್ ಅನ್ನು ಪ್ರಾರಂಭಿಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಯಲು ಈ ಕೇಂದ್ರ ಸಹಕಾರಿ ಎಂದು ವಿವರಿಸಿದರು. ಕರ್ನಾಟಕ ರಾಜ್ಯವು ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸುವುದಾದರೆ, ಈ ಕೇಂದ್ರವನ್ನು ಕೂಡಲೇ ಸ್ಥಾಪಿಸುವಂತೆ ಸಲಹೆ ನೀಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಕೇಂದ್ರವನ್ನು ಸ್ಥಾಪಿಸುವ ಭರವಸೆ ನೀಡಿದರು.

    ಕರ್ನಾಟಕ ಪೆವಿಲಿಯನ್ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯವರು ಸುಲಲಿತ ವಹಿವಾಟು ನಡೆಸಲು ಸರ್ಕಾರ ಹೂಡಿಕೆದಾರರಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅಭಿವೃದ್ಧಿಯ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲು ರಾಜ್ಯ ಸರ್ಕಾರ ಉತ್ಸುಕವಾಗಿದ್ದು, ಜಾಗತಿಕ ಮಟ್ಟದಲ್ಲಿ ಕರ್ನಾಟಕ ಮುಂಚೂಣಿಗೆ ಬರಲು ನೆರವಾಗುವ ಅಧ್ಯಯನಗಳನ್ನು ಕೈಗೊಳ್ಳಲು ಆಸಕ್ತಿ ವಹಿಸಿದೆ ಎಂದು ತಿಳಿಸಿದರು.

    ಸುಸ್ಥಿರ ಕೈಗಾರಿಕೆಗಳನ್ನು ರೂಪಿಸುವ ಮೂಲಕ ಕರ್ನಾಟಕ ರಾಜ್ಯವು ವರ್ಲ್ಡ್ ಎಕನಾಮಿಕ್ ಫೋರಂ 2020ರ ಗುರಿ ಸಾಧನೆಗೆ ಸಕ್ರೀಯವಾಗಿ ಶ್ರಮಿಸಲಿದೆ. ಭಾರತದ ಪ್ರಮುಖ ಕೈಗಾರಿಕಾ ರಾಜ್ಯವಾಗಿ ಹೊರಹೊಮ್ಮುವ ಮೂಲಕ ಜಾಗತಿಕ ಮಟ್ಟದಲ್ಲಿಯೂ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ರಾಜ್ಯ ಪ್ರಮುಖ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

    ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಭಾರತ ಮತ್ತು ಏಷ್ಯಾ ಅಜೆಂಡಾದ ಪ್ರಾದೇಶಿಕ ಮುಖ್ಯಸ್ಥ ವಿರಾಜ್ ಮೆಹ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಫಾರಿನ್ ಟೂರ್‌ಗೆ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡ ರಾಜಾಹುಲಿ

    ಫಾರಿನ್ ಟೂರ್‌ಗೆ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡ ರಾಜಾಹುಲಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸದಾಕಾಲ ಹೊರಗೆ ಕಾಣಿಸಿಕೊಳ್ಳೋದು ತಮ್ಮ ನೆಚ್ಚಿನ ಶ್ವೇತ ವರ್ಣದ ಸಫಾರಿ ಡ್ರೆಸ್‍ನಲ್ಲೇ. ಅವರಿಗೂ ಬಿಳಿ ಸಫಾರಿಗೂ ಅವಿನಾಭಾವ ನಂಟು. ಆದರೆ ಅಪರೂಪವೆಂದರೂ ಸರಿಯೇ ಕೆಲವೊಮ್ಮೆ ಮಾತ್ರ ಯಡಿಯೂರಪ್ಪನವರು ತಮ್ಮ ಬಿಳಿ ಸಫಾರಿಗೆ ರಜೆ ಕೊಡುತ್ತಾರೆ. ಆ ಸಂದರ್ಭ ಇಂದು ಮತ್ತೆ ಬಂದಿದೆ. ಯಡಿಯೂರಪ್ಪನವರು ಇಂದು ಅಪರೂಪಕ್ಕೆ ಸೂಟು ಬೂಟು ಧರಿಸಿ ಮಿಂಚುತ್ತಿದ್ದರು. ಸ್ವಿಟ್ಜರ್ಲೆಂಡ್ ಗೆ ಹೊರಟ ಹಿನ್ನೆಲೆಯಲ್ಲಿ ಸಿಎಂ ಇಂದು ತಮ್ಮ ಬಿಳಿ ಬಣ್ಣದ ಸಫಾರಿ ಬದಲು ಸೂಟು ಬೂಟು ಧರಿಸಿದ್ದರು.

    ಸ್ವಿಟ್ಜರ್ಲೆಂಡ್‍ನ ದಾವೋಸ್ ಗೆ ಹೊರಟ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಬೆಳಗ್ಗೆಯೇ ಸೂಟು ಧರಿಸಿ ಸಿದ್ಧವಾಗಿದ್ರು. ವಿಮಾನ ನಿಲ್ದಾಣಕ್ಕೆ ಹೊರಡಲು ತಮ್ಮ ಧವಳಗಿರಿ ನಿವಾಸದಿಂದ ಇಂದು ಬೆಳಗ್ಗೆ ಹೊರಗೆ ಬಂದ ಯಡಿಯೂರಪ್ಪನವರನ್ನು ಕಂಡು ಎಲ್ಲರೂ ಅಚ್ಚರಿಗೊಂಡರು. ಯಡಿಯೂರಪ್ಪನವರು ಮದುಮಗನಂತೆ ಸೂಟ್ ಧರಿಸಿದ್ದರು. ಇನ್ ಮಾಡಿದ್ದ ವೈಟ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕಪ್ಪು ಶೂ, ಶರ್ಟ್ ಮೇಲೆ ನೇವಿ ಗ್ರೇ ಬಣ್ಣದ ಕೋಟ್ ಧರಿಸಿ ಸಿಎಂ ಮಿಂಚುತ್ತಿದ್ರು.

    ಇವತ್ತಷ್ಟೇ ಅಲ್ಲ, ದಾವೋಸ್ ಶೃಂಗ ಸಭೆ ನಡೆಯುವ ಐದು ದಿನಗಳೂ ಸಿಎಂ ಸೂಟ್ ಧರಿಸುತ್ತಾರೆ. ಐದು ದಿನಗಳಿಗೆ ಐದು ವಿವಿಧ ಬಣ್ಣಗಳ ವೈವಿಧ್ಯಮಯ ಸೂಟ್ಸ್ ಗಳನ್ನು ಮುಖ್ಯಮಂತ್ರಿಗಳು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ದಿನಕ್ಕೊಂದು ಸೂಟ್ಸ್ ಧರಿಸಿ ಸಿಎಂ ಜಾಗತಿಕ ಮಟ್ಟದ ಉದ್ಯಮಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಸಿಎಂ ತಮ್ಮ ಜೊತೆ ನಾಲ್ಕು ಸೂಟ್ ಕೇಸ್ ಗಳಲ್ಲಿ ಸೂಟ್ ಗಳು, ಚಳಿ ತಡೆಯಲು ಬೆಚ್ಚನೆಯ ಉಡುಪುಗಳು, ಸಾದಾ ಉಡುಪುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ದಾವೋಸ್ ನಲ್ಲಿ ಚಳಿ ತಡೆಯಲು ಒಂದಷ್ಟು ಸ್ವೆಟರ್, ಸಾಕ್ಸ್, ಗ್ಲೌಸ್ ಗಳನ್ನು ಮಕ್ಕಳು ಸಹ ಯಡಿಯೂರಪ್ಪಗೆ ಕೊಟ್ಟು ಕಳಿಸಿದ್ದಾರಂತೆ. ಒಟ್ಟಿನಲ್ಲಿ ಮುಖ್ಯಮಂತ್ರಿಗಳು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡೇ ಫಾರಿನ್ ಗೆ ಹೊರಟಿದ್ದಾರೆ.