ದಾವಣಗೆರೆ: ಜಿಲ್ಲೆಯಲ್ಲಿ ನಡೆದ ಯುವ ಕಾಂಗ್ರೆಸ್ (Congress) ಪದಗ್ರಹಣ ಕಾರ್ಯಕ್ರಮದಲ್ಲಿ `ಕೈ’ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆದಿದೆ.
ಯೂತ್ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಹೆಚ್.ಎಸ್ ಮಂಜುನಾಥ್ ಗೌಡ, ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಮುಂದೆಯೇ ಬಣ ರಾಜಕೀಯ ಹಿನ್ನೆಲೆ `ಕೈ’ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಕಾರ್ಯಕ್ರಮದ ವೇಳೆ ಎರಡು ಬಣಗಳ ಮಧ್ಯೆ ವಾಗ್ಯುದ್ಧ ಮತ್ತು ತಳ್ಳಾಟ ನಡೆಯಿತು.
ನಿಕಟಪೂರ್ವ ಅಧ್ಯಕ್ಷರ ಪದಾಧಿಕಾರಿಗಳು ಮತ್ತು ನೂತನ ಅಧ್ಯಕ್ಷರ ಬಣಗಳ ನಡುವೆ ಭಿನ್ನಮತ ಸ್ಫೋಟಗೊಂಡು, ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ಒಂದು ಬಣ ಆಕ್ರೋಶ ಹೊರಹಾಕಿದರೆ, ಇನ್ನೊಂದು ಬಣ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಹಿಂದಿನ ಪದಾಧಿಕಾರಿಗಳು, ನಿಕಟಪೂರ್ವ ಅಧ್ಯಕ್ಷರಿಗೆ ಆಹ್ವಾನ ನೀಡಿಲ್ಲ, ಹಾಲಿ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ, ನಿಕಟಪೂರ್ವ ಅಧ್ಯಕ್ಷ ನಿಖಿಲ್ ಕೊಂಡಜ್ಜಿಯವರನ್ನು ಆಹ್ವಾನ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.
ನಿಕಟಪೂರ್ವ ಜಿಲ್ಲಾಧ್ಯಕ್ಷರಿಂದ ಅಧಿಕಾರ ಹಸ್ತಾಂತರ ಮಾಡಬೇಕು, ಆದರೆ ಅಧಿಕೃತವಾಗಿ ಆಹ್ವಾನ ಮಾಡದೆ ಕಡೆಗಣಿಸಿದ್ದಾರೆ. ಕೈ,ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆಯನ್ನು ಕೊನೆಗೂ ಹಿರಿಯ ಕಾಂಗ್ರೆಸ್ ಮುಖಂಡರು ಮಧ್ಯ ಪ್ರವೇಶ ಮಾಡಿ, ಪರಿಸ್ಥಿತಿಯನ್ನು ಸರಿಪಡಿಸಿದರು.
ದಾವಣಗೆರೆ: ವಂದೇ ಭಾರತ್ ರೈಲಿನಲ್ಲಿ (Vande Bharat Train) ಬೆಂಕಿ ಕಾಣಿಸಿಕೊಂಡ ಘಟನೆ ದಾವಣಗೆರೆಯಲ್ಲಿ (Davangere) ನಡೆದಿದೆ.
ಧಾರವಾಡದಿಂದ ಬೆಂಗಳೂರಿಗೆ (Bengaluru) ವಂದೇ ಭಾರತ್ ರೈಲು ತೆರಳುತ್ತಿತ್ತು. ಈ ವೇಳೆ, ದಾವಣಗೆರೆ ಬಳಿ ಟ್ರೈನ್‌ನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಗೇಟ್ ಮ್ಯಾನ್ ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಬಳಿ ಮನರಂಜನಾ ಪಾರ್ಕ್ ಕಾಮಗಾರಿ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಕೂಡಲೇ ಎಚ್ಚೆತ್ತ ಸಿಬ್ಬಂದಿ ರೈಲನ್ನು ದಾವಣಗೆರೆಯಲ್ಲಿ ನಿಲ್ಲಿಸಿದ್ದಾರೆ. ರೈಲ್ವೇ ಪೊಲೀಸರು ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಸಿಬ್ಬಂದಿ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ದಾವಣಗೆರೆ: ಕಾರು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಯುವತಿಯರು ಮೃತಪಟ್ಟಿರುವ ಘಟನೆ ದಾವಣಗೆರೆ(Davanagere) ಜಿಲ್ಲೆಯ ಹರಿಹರ(Harihara) ತಾಲೂಕಿನ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಚಿನ್ ಬುಧವಾರ ಸಂಜೆ ಸಂಬಂಧಿಗಳಾದ ಸುಮಾ ಮತ್ತು ಪಲ್ಲವಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಬರುವಾಗ ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಯುವತಿಯರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಸುಮಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗಳಾಗಿದ್ದ ಪಲ್ಲವಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್ – 31 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಗಂಭೀರ ಗಾಯಗಳಾದ ಸಚಿನ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಹಾಗೂ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ(Malebennuru Police Station) ಪ್ರಕರಣ ದಾಖಲಾಗಿದೆ.
ದಾವಣಗೆರೆ: ಯುವತಿಯೊಬ್ಬಳು ರೈಲ್ವೇ ಹಳಿ ದಾಟುತ್ತಿದ್ದಾಗ ರೈಲು (Train) ಡಿಕ್ಕಿಯಾಗಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಹರಿಹರ (Harihara) ನಿಲ್ದಾಣದಲ್ಲಿ ನಡೆದಿದೆ.
ಮೃತಳನ್ನು ಬಳ್ಳಾರಿ ಮೂಲದ ಶ್ರಾವಣಿ (23) ಎಂದು ಗುರುತಿಸಲಾಗಿದೆ. ಯುವತಿ ಮೊಬೈಲ್‍ನಲ್ಲಿ ಮಾತನಾಡುತ್ತಾ, ರೈಲು ಬರುವುದನ್ನು ಗಮನಿಸದೇ ರೈಲ್ವೇ ಹಳಿ ದಾಟಲು ಯತ್ನಿಸಿದ್ದಾಳೆ. ಈ ವೇಳೆ ರೈಲು ಆಕೆಗೆ ಡಿಕ್ಕಿಯಾಗಿದೆ. ಪರಿಣಾಮ ಆಕೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಇದನ್ನೂ ಓದಿ: ಸಂಧಾನಕ್ಕೆಂದು ಕರೆದು ದಂಪತಿ ಕತ್ತು ಸೀಳಿ ಬರ್ಬರ ಹತ್ಯೆ – 2 ವರ್ಷದ ಮಗುವಿನ ಎದುರೇ ಕೊಲೆ
ಶ್ರಾವಣಿ ಮೈಸೂರಿನಲ್ಲಿ (Mysuru) ಎಂಬಿಎ ಓದುತ್ತಿದ್ದಳು. ಹರಿಹರಕ್ಕೆ ಶುಭ ಕಾರ್ಯಕ್ಕೆ ಸಂಬಂಧಿಕರ ಮನೆಗೆ ಬಂದಿದ್ದಳು. ರಾತ್ರಿ ಮೈಸೂರಿಗೆ ಹೋಗಲು ರೈಲು ನಿಲ್ದಾಣಕ್ಕೆ ಬಂದು, ಹಳಿ ದಾಟುತ್ತಿರುವಾಗ ಈ ಅವಘಡ ಸಂಭವಿಸಿದೆ.
ದಾವಣಗೆರೆ: ಹರಿಹರ (Harihara) ತಾಲೂಕಿನ ಕೊಕ್ಕನೂರು ಆಂಜನೇಯ ಸ್ವಾಮಿಗೆ ದುಡ್ಡಿನ ಪಲ್ಲಕ್ಕಿ ಉತ್ಸವ (Duddina Palankki Utsava) ಅದ್ದೂರಿಯಾಗಿ ನೆರವೇರಿದೆ.
ಉತ್ಸವ ಹೊರಟ ಪಲ್ಲಕ್ಕಿಗೆ ಈ ಬಾರಿ 12 ಲಕ್ಷ ರೂ. ನಗದು ಹಣದಲ್ಲಿ ಅಲಂಕಾರ ಮಾಡಲಾಗಿತ್ತು. ಪಲ್ಲಕ್ಕಿ ಕೊಕ್ಕನೂರು ಗ್ರಾಮದ ಪ್ರತಿ ಮನೆ ಮನೆಗೆ ತೆರಳಿತ್ತು. ಈ ವೇಳೆ ಪಲ್ಲಕ್ಕಿಗೆ ಭಕ್ತರು ನೋಟಿನ ಹಾರ ಹಾಕಿ ಭಕ್ತಿ ಸಮರ್ಪಣೆ ಮಾಡಿದ್ದಾರೆ. ಅಲ್ಲದೇ ನೋಟಿನ ಹಾರ ಹಾಕಿ ಹರಕೆ ಕಟ್ಟಿಕೊಳ್ಳುವ, ಹರಕೆ ತೀರಿಸುವ ಸಂಪ್ರದಾಯ ಸಹ ಇಲ್ಲಿದೆ. ಇದನ್ನೂ ಓದಿ: 1 ಲಕ್ಷ ಪಾವತಿಸಿ ಶೂಟಿಂಗ್ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ
ದುಡ್ಡಿನ ಪಲ್ಲಕ್ಕಿ ಉತ್ಸವದಲ್ಲಿ ಈ ಬಾರಿ ಒಟ್ಟು 14.80 ಲಕ್ಷ ರೂ. ಸಂಗ್ರಹವಾಗಿದೆ. ಕಳೆದ ಪಲ್ಲಕ್ಕಿ ಉತ್ಸವದಲ್ಲಿ 12 ಲಕ್ಷ ರೂ. ಸಂಗ್ರಹವಾಗಿತ್ತು. ಈ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ.
ಕೊಕ್ಕನೂರು ಆಂಜನೇಯ ದೇವಸ್ಥಾನ ಅತೀ ಪ್ರಸಿದ್ಧಿ ಪಡೆದಿದ್ದು, ಇಲ್ಲಿನ ಆಂಜನೇಯ ಸ್ವಾಮಿ ಭಕ್ತಿಯಿಂದ ಬರುವ ಭಕ್ತರ ಸಂಕಷ್ಟಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ. ಇದನ್ನೂ ಓದಿ: ಕೋರ್ಟ್‌ಗೆ ಗೈರು, ಸಿನಿಮಾ ವೀಕ್ಷಣೆಗೆ ದರ್ಶನ್ ಹಾಜರ್
ಇತ್ತೀಚೆಗೆ ನಡೆದಿದ್ದ ನ್ಯಾಮತಿ ಎಸ್‍ಬಿಐ ಬ್ಯಾಂಕ್‍ನ ಕಳ್ಳತನಕ್ಕೂ ಮುನ್ನ ಹಾಗೂ ಕಳ್ಳತನದ ಬಳಿಕ ಅರೋಪಿಗಳು ಇದೇ ದೇವಾಲಯದಲ್ಲಿ ಪೂಜೆ ನಡೆಸಿದ್ದರು. ಈಗ ಅದೇ ದೇವಸ್ಥಾನದ ಹುಂಡಿ ಕಳುವಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಈ ದರೋಡೆ ನಡೆದಿತ್ತು. ಬ್ಯಾಂಕ್ ಕಿಟಕಿಯ ಸರಳನ್ನು ಮುರಿದು, 12.96 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಹೋಗುವಾಗ ಬ್ಯಾಂಕ್ ತುಂಬೆಲ್ಲಾ ಕಾರದ ಪುಡಿಯನ್ನು ಚೆಲ್ಲಿ ಎಸ್ಕೇಪ್ ಆಗಿದ್ದರು. ಈ ಎಲ್ಲಾ ಆರೋಪಿಗಳ ಬಂಧನವಾಗಿದ್ದು, ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು 1.13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಬುರ್ಖಾಧಾರಿ ಮಹಿಳೆಯರು!
ದಾವಣಗೆರೆ: ಜಿಲ್ಲಾ ನ್ಯಾಯಾಧೀಶರ (Judge) ಮನೆಗೆ ಕಳ್ಳರು ಕನ್ನ ಹಾಕಲು ಯತ್ನಿಸಿ, ಪೊಲೀಸರನ್ನು ಕಂಡು ಪರಾರಿಯಾದ ಘಟನೆ ದಾವಣಗೆರೆಯ (Davangere) ಕುಂದುವಾಡ ಬಳಿಯ ತುಂಗಭದ್ರಾ ಬಡಾವಣೆಯಲ್ಲಿ ನಡೆದಿದೆ.
ಮನೆಯ ಹಿಂದಿನ ಬಾಗಿಲಿನಿಂದ 5 ಜನರ ಕಳ್ಳರ ಗ್ಯಾಂಗ್ ಕಳ್ಳತನಕ್ಕೆ ಬಂದಿದೆ. ಈ ವೇಳೆ ಜಡ್ಜ್ ಮನೆಗೆ ಭದ್ರತೆ ನೀಡಿದ್ದ ಪೊಲೀಸರನ್ನು ಕಂಡು ಕಳ್ಳರು ಪರಾರಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಳ್ಳರು ಪೊಲೀಸರನ್ನ ಕಂಡು ಓಡಿ ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಒಂದು ವಾರದ ಮುಂಚೆ ಅದೇ ಏರಿಯಾದಲ್ಲಿ ಮೂರು ಮನೆಯಲ್ಲಿ ಕಳ್ಳತನ ನಡೆದಿತ್ತು. ಮೂರು ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ ಕದ್ದು ಕಳ್ಳರು ಪರಾರಿಯಾಗಿದ್ದರು. ಮೂರು ಮನೆ ಕಳ್ಳತನದ ಬಳಿಕ ಜಡ್ಜ್ ಮನೆಗೆ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.
ಈ ಸಂಬಂಧ ವಿದ್ಯಾನಗರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ: ನ್ಯಾಕ್ ಕಮಿಟಿಯಿಂದ (NAAC) ಎ++ ಗ್ರೇಡ್ ನೀಡಲು ಲಂಚ ಪಡೆದ ಪ್ರಕರಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ (Davangere University) ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಸಿಬಿಐ (CBI) ಬಂಧಿಸಿದ ಬೆನ್ನಲ್ಲೇ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ದಾವಣಗೆರೆ ವಿವಿ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿದೆ. ಕೆಸಿಎಸ್‍ಆರ್ ನಿಯಮದ ಪ್ರಕಾರ ಆರು ತಿಂಗಳವರೆಗೆ ಅವರನ್ನು ಅಮಾನತಿನಲ್ಲಿಡಲು ಸಿಂಡಿಕೇಟ್ ನಿರ್ಣಯಕೈಗೊಂಡಿದೆ. ಆದೇಶದ ಪ್ರತಿಯನ್ನು ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ ಕುಂಬಾರ್ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ.
ನ್ಯಾಕ್‍ನ ತಪಾಸಣಾ ಸಮಿತಿ ಸದಸ್ಯರಾಗಿರುವ ಗಾಯತ್ರಿ ದೇವರಾಜ್ ಅವರನ್ನು ಲಂಚ ಪಡೆದ ಆರೋಪದ ಮೇಲೆ ಇತ್ತಿಚೆಗೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಆಂಧ್ರ ಪ್ರದೇಶದ ವಿಜಯವಾಡದ ಕೆಎಲ್‍ಇಎಫ್ ಯುನಿವರ್ಸಿಟಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಪಡೆದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.
ಜೆಎನ್‍ಯು ಪ್ರೊಫೆಸರ್ ಸೇರಿದಂತೆ ಒಟ್ಟು 10 ಜನರನ್ನು, 37 ಲಕ್ಷ ರೂ. ನಗದು, 6 ಲ್ಯಾಪಟಾಪ್, ಐಫೋನ್ ಲಂಚ ಪಡೆಯುವಾಗ ಸಿಬಿಐ ಬಂಧಿಸಿತ್ತು. ಎ++ ಗ್ರೇಡ್ ನೀಡಲು ಒಂದು ಕೋಟಿ ರೂ.ಗೂ ಹೆಚ್ಚು ಲಂಚದ ಹಣಕ್ಕೆ ನ್ಯಾಕ್ ಕಮಿಟಿ ಬೇಡಿಕೆ ಇಟ್ಟಿತ್ತು. ನ್ಯಾಕ್ ಕಮಿಟಿಯಲ್ಲಿ ದಾವಣಗೆರೆ ವಿವಿಯ ಏಕೈಕ ಪ್ರೊ.ಗಾಯತ್ರಿ ದೇವರಾಜ್ ಸ್ಥಾನ ಪಡೆದಿದ್ದರು.
ಈ ಹಿಂದೆ ಅವರು ಒಂದು ವರ್ಷ 4 ತಿಂಗಳುಗಳ ಕಾಲ ದಾವಣಗೆರೆ ವಿವಿಯ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದರು. ಸದ್ಯ ಮೈಕ್ರೋ ಬಯೋಲಜಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ದಾವಣಗೆರೆ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Microfinance) ಕಿರುಕುಳ ತಡೆಗಟ್ಟಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಸಿದ್ಧತೆ ಮಾಡಿಕೊಂಡಿದೆ. ರಾಜ್ಯಪಾಲರ ಅಂಕಿತಕ್ಕೆ ಸುಗ್ರೀವಾಜ್ಞೆ ಕಳುಹಿಸಿದೆ. ಈ ನಡುವೆಯೂ ಸಾರ್ವಜನಿಕರ ಮೇಲೆ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರಿದೆ. ಅದನ್ನೋದಕ್ಕೆ ದಾವಣಗೆರೆಯ (Davangere) ಈ ಪ್ರಕರಣ ಸಾಕ್ಷಿಯಾಗಿದೆ.
ನಿಮಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಬೇಕು ಅಂದ್ರೆ 58,000 ಕಟ್ಟಬೇಕು ಎಂದು ಚಂದ್ರಶೇಖರ್‌ಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೇಳಿದ್ದಾರೆ. ದಾಖಲೆ ಪ್ರಕಾರ ಕೇವಲ 99 ರೂಪಾಯಿ ಕಟ್ಟಿದರೆ ಸಾಲ ಮುಕ್ತವಾಗುತ್ತದೆ. ಆದರೆ ಇದೀಗ ಮೈಕ್ರೋ ಫೈನಾನ್ಸ್ ಸಿಬ್ಬಂದಿ 58,000 ಕಟ್ಟಲೇಬೇಕು ಎಂದು ಚಂದ್ರಶೇಖರ್‌ಗೆ ಕಿರುಕುಳ ನೀಡುತ್ತಿದ್ದಾರೆ. ಚಂದ್ರಶೇಖರ್ ಕಿರುಕುಳ ತಾಳಲಾರದೆ ಈ ಬಗ್ಗೆ ಆರ್‌ಬಿಐಗೆ ಪತ್ರ ಬರೆಯಲು ಮುಂದಾಗಿದ್ದಾರೆ.
ಆನ್‌ಲೈನ್‌ನಲ್ಲಿ ಸಾಲ ಪಡೆದರು ಸಹ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನಿಲ್ಲುತ್ತಿಲ್ಲ. ಎಲ್ಲಾ ಹಣವನ್ನು ಬಡ್ಡಿ ಸಮೇತ ಕಟ್ಟಿದರೂ ಕೂಡ ಇನ್ನೂ ಹಣ ಕಟ್ಟಿ ನಂತರ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡುತ್ತೇವೆ ಎಂದು ಸತಾಯಿಸುತ್ತಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ. ಜೊತೆಗೆ ದೂರು ನೀಡುವುದಾಗಿಗೂ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬಾವಿಯಲ್ಲಿ ಪತ್ತೆಯಾದ ಬುಲೆಟ್ ಬೈಕ್ ಸುತ್ತ ಅನುಮಾನದ ಹುತ್ತ!