Tag: Daughter Of Parvathamma

  • ಪಾರ್ವತಮ್ಮನ ಮಗಳು ಇನ್ವೆಸ್ಟಿಗೇಟಿವ್ ಆಫೀಸರ್ ವೈದೇಹಿ!

    ಪಾರ್ವತಮ್ಮನ ಮಗಳು ಇನ್ವೆಸ್ಟಿಗೇಟಿವ್ ಆಫೀಸರ್ ವೈದೇಹಿ!

    ಬೆಂಗಳೂರು: ದಿಶಾ ಎಂಟರ್ ಪ್ರೈಸಸ್ ಮೂಲಕ ಕೆ.ಎಂ ಶಶಿಧರ್ ನಿರ್ಮಾಣ ಮಾಡಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಇದೇ ತಿಂಗಳ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹರಿಪ್ರಿಯಾ ನಾಯಕಿಯಾಗಿ ನಟಿಸಿರೋ ಈ ಚಿತ್ರವೀಗ ಎಲ್ಲ ದಿಕ್ಕಿನಲ್ಲಿಯೂ ಪ್ರೇಕ್ಷಕರನ್ನು ಮೋಡಿಗೀಡು ಮಾಡಿದೆ. ಅದುವೇ ಪ್ರೇಕ್ಷಕರನ್ನು ಕೈ ಹಿಡಿದು ಥೇಟರಿಗೆ ಕೈ ಹಿಡಿದು ಕರೆ ತರುವ ನಿರೀಕ್ಷೆಗಳೂ ದಟ್ಟವಾಗಿವೆ.

    ಇದು ಶಂಕರ್ ಜೆ ನಿರ್ದೇಶನದ ಚೊಚ್ಚಲ ಚಿತ್ರ. ಮೊದಲ ಪ್ರಯತ್ನದಲ್ಲಿಯೇ ಅವರು ಹೊಸಾ ಥರದ ಕಥೆಯೊಂದನ್ನು ಕಮರ್ಶಿಯಲ್ ಶೈಲಿಯಲ್ಲಿಯೇ ಹೇಳಲು ಮುಂದಾಗಿದ್ದಾರೆ. ಈ ಚಿತ್ರ ಆರಂಭ ಕಾಲದಿಂದಲೂ ಹರಿಪ್ರಿಯಾ ಅವರ ಗೆಟಪ್ಪುಗಳ ಝಲಕ್ಕಿನಿಂದಲೇ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿತ್ತು. ಟಾಮ್ ಬಾಯ್ ಲುಕ್ ಅಂತೂ ಎಲ್ಲರನ್ನೂ ಸೆಳೆದುಕೊಂಡಿತ್ತು. ಇದನ್ನೂ ಓದಿ: ಡಾಟರ್ ಆಫ್ ಪಾರ್ವತಮ್ಮ ಮತ್ತು ಟಗರು ಕಾಕ್ರೋಚ್!

    ಈ ಚಿತ್ರದಲ್ಲಿ ಹರಿಪ್ರಿಯಾ ಎರಡು ಶೇಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲ್ಯಾಷ್‍ಬ್ಯಾಕ್‍ನಲ್ಲಿ ಕಾಲೇಜು ಹುಡುಗಿಯಾಗಿ ಟಾಮ್ ಬಾಯ್ ಲುಕ್‍ನಲ್ಲಿ ಅವರು ಕಂಗೊಳಿಸಿದ್ದಾರೆ. ಇನ್ನುಳಿದಂತೆ ಎಂಥಾದ್ದೇ ಪ್ರಕರಣವನ್ನಾದರೂ ಲೀಲಾಜಾಲವಾಗಿ ಬೆಂಬೀಳುವ ಖಡಕ್ ಸಿಐಡಿ ಅಧಿಕಾರಿಯಾಗಿಯೂ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರೇನೆಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಹರಿಪ್ರಿಯಾ ಪಾತ್ರದ ಹೆಸರು ವೈದೇಹಿ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಇದನ್ನೂ ಓದಿ: ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಇಲ್ಲಿ ಕ್ರೈಂ ಥ್ರಿಲ್ಲರ್ ಕಥೆಯ ಜೊತೆ ಜೊತೆಗೇ ತಾಯಿ ಮಗಳ ಸೆಂಟಿಮೆಂಟ್ ದೃಶ್ಯಗಳೂ ಪ್ರಧಾನವಾಗಿರಲಿದೆ. ಸಾಮಾನ್ಯವಾಗಿ ಪೊಲೀಸ್ ಪಾತ್ರವೆಂದಾಕ್ಷಣ ಅಬ್ಬರ ಅರಚಾಟಗಳಿರುತ್ತವೆಂಬ ವಾತಾವರಣವಿದೆ. ಆದರೆ ಸೂಕ್ಷ್ಮ ಸಂವೇದನೆ ಹೊಂದಿರೋ ಈ ಪಾತ್ರ ಎಲ್ಲಕ್ಕಿಂತಲೂ ಭಿನ್ನವಾಗಿ ನೋಡುಗರೆಲ್ಲರ ಆಳಕ್ಕಿಳಿಯುವಷ್ಟು ಸಶಕ್ತವಾಗಿದೆ ಎಂಬುದು ಚಿತ್ರತಂಡದ ಭರವಸೆ.

  • ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಬೆಂಗಳೂರು: ಅಪಾರ ಅಭಿಮಾನಿ ಬಳಗವನ್ನು ಹೊಂದಿರುವವರು ಸುಮಲತಾ ಅಂಬರೀಶ್. ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿರೋ ಅವರು ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜೇಯ್ ರಾವ್ ತಾಯಿಯಾಗಿ ನಟಿಸಿದ್ದರು. ಇದೀಗ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನಾಯಕಿ ಹರಿಪ್ರಿಯಾ ಅಮ್ಮನಾಗಿ ಭಾವನಾತ್ಮಕವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ.

    ನಿರ್ದೇಶಕ ಶಂಕರ್ ಜೆ ಕಥೆ ಬರೆಯೋ ಸಂದರ್ಭದಲ್ಲಿ ತಾವು ಸೃಷ್ಟಿಸಿದ ಪಾತ್ರಗಳಿಗೆ ಯಾವುದೇ ಕಲಾವಿದರನ್ನು ಕಲ್ಪಿಸಿಕೊಂಡಿರಲಿಲ್ಲವಂತೆ. ಕಥೆ ಬರೆದು, ಸ್ಕ್ರಿಪ್ಟ್ ರೆಡಿಯಾದ ನಂತರವಷ್ಟೇ ಪಾತ್ರಗಳಿಗೆ ಕಲಾವಿದರ ಆಯ್ಕೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರಂತೆ. ಈ ಸಂದರ್ಭದಲ್ಲಿ ಇಡೀ ಕಥೆಯ ಜೀವಾಳದಂತಿರೋ ತಾಯಿಯ ಪಾತ್ರಕ್ಕೆ ಸುಮಲತಾ ಅಂಬರೀಶ್ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರಂತೆ.

    ನಿರ್ದೇಶಕರು ಇಂಥಾದ್ದೊಂದು ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಸುಮಲತಾ ಅವರು ಬ್ಯುಸಿಯಾಗಿ ಬಿಟ್ಟಿದ್ದರು. ಆಗ ಚಿತ್ರವೊಂದರ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಂಡಿದ್ದರಂತೆ. ಈ ನಡುವೆಯೇ ಶಂಕರ್ ಕಥೆ ಮತ್ತು ಅಮ್ಮನ ಪಾತ್ರದ ಮಹತ್ವವನ್ನು ವಿವರಿಸಿ ಹೇಳಿದ್ದರಂತೆ. ಕಥೆ ಕೇಳಿ ಥ್ರಿಲ್ ಆದ ಸುಮಲತಾ ತಮ್ಮ ಪಾತ್ರವನ್ನೂ ಮೆಚ್ಚಿಕೊಂಡು ಆಗಲೇ ಒಪ್ಪಿಗೆ ಸೂಚಿಸಿದ್ದರಂತೆ. ಹೀಗೆ ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಈ ಚಿತ್ರದಲ್ಲವರು ತಾಯಿಯ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ.

    ಇದೀಗ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣಕ್ಕಿಳಿದಿದ್ದಾರೆ. ಇದೇ ತಿಂಗಳ ಇಪ್ಪತ್ಮೂರರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಅದಾದ ಮಾರನೇ ದಿನವೇ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಅವರ ಪಾತ್ರ ನಿಜಕ್ಕೂ ಹೇಗಿದೆ ಎಂಬ ಕುತೂಹಲವಂತೂ ಎಲ್ಲರಲ್ಲಿಯೂ ಇದ್ದೇ ಇದೆ.

  • ಡಾಟರ್ ಆಫ್ ಪಾರ್ವತಮ್ಮನ ಟ್ರೈಲರ್ ಬಂತು!

    ಡಾಟರ್ ಆಫ್ ಪಾರ್ವತಮ್ಮನ ಟ್ರೈಲರ್ ಬಂತು!

    ಬೆಂಗಳೂರು: ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಬಗ್ಗೆ ಎಲ್ಲ ವರ್ಗದ ಪ್ರೇಕ್ಷಕರೂ ಆಕರ್ಷಿತರಾಗಿದ್ದಾರೆ. ಹಂತ ಹಂತವಾಗಿ ಜನರ ಗಮನವನ್ನು ಸೆಳೆಯುತ್ತಾ ಬಂದಿರೋ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಅಸಲಿ ಮ್ಯಾಟರ್ ಏನೆಂಬುದರ ಝಲಕ್ ಈಗ ಟ್ರೈಲರ್ ಮೂಲಕ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

    ಜೆ ಶಂಕರ್ ನಿರ್ದೇಶನ ಮಾಡಿರೋ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ತುಂಬಾ ಅಬ್ಬರ ಶುರುವಿಟ್ಟಿದೆ. ಈವರೆಗೂ ಥರ ಥರದ ಪಾತ್ರಗಳಿಗೆ ಜೀವ ತುಂಬುತ್ತಲೇ ಪರಿಪೂರ್ಣ ನಟಿಯಾಗಿ ಗುರುತಿಸಿಕೊಂಡಿರುವವರು ಹರಿಪ್ರಿಯಾ. ನಾಯಕಿ ಪ್ರಧಾನವಾದ ಈ ಚಿತ್ರದಲ್ಲಿ ಹರಿಪ್ರಿಯಾ ಬೇರೆಯದ್ದೇ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆಂಬ ಮಾತುಗಳಿದ್ದವು. ಅದೀಗ ಟ್ರೈಲರ್ ಮೂಲಕ ನಿಜವಾಗಿದೆ.

    ಒಂದು ಕ್ರೈಂ ಮತ್ತು ಅದರ ಸುತ್ತಾ ನಡೆಯೋ ಥ್ರಿಲ್ಲರ್ ಕಥಾನಕವನ್ನು ಡಾಟರ್ ಆಫ್ ಪಾರ್ವತಮ್ಮ ಚಿತ್ರ ಒಳಗೊಂಡಿದೆ. ಇಲ್ಲಿ ಹೆಣ್ಣು ಮಗಳೊಬ್ಬಳ ನಿಗೂಢ ಕೊಲೆಯ ಸಿಕ್ಕು ಬಿಡಿಸುವ, ದುಷ್ಟರನ್ನು ಎದುರು ಹಾಕಿಕೊಂಡು ಜಯಿಸಿಕೊಳ್ಳುವ ಇನ್ವೆಸ್ಟಿಗೇಟಿವ್ ಆಫಿಸರ್ ಆಗಿ ಹರಿಪ್ರಿಯಾ ನಟಿಸಿದ್ದಾರೆ. ಇದರೊಂದಿಗೆ ಅಮ್ಮ ಮಗಳ ಭಾವನಾತ್ಮಕ ಕಥೆಯನ್ನೂ ಕೂಡಾ ಈ ಚಿತ್ರ ಒಳಗೊಂಡಿದೆ. ಸುಮಲತಾ ಅಂಬರೀಶ್ ಹರಿಪ್ರಿಯಾರ ತಾಯಿಯಾಗಿ ನಟಿಸಿದ್ದಾರೆ. ಇದಿಷ್ಟು ಸುಳಿವನ್ನು ಈ ಪಾದರಸದಂಥಾ ಟ್ರೈಲರ್ ಜಾಹೀರು ಮಾಡಿದೆ.

    ಈ ಚಿತ್ರವನ್ನು ದಿಶಾ ಎಂಟರ್ ಪ್ರೈಸಸ್ ಮೂಲಕ ಕೆಎಂ ಶಶಿಧರ್ ನಿರ್ಮಾಣ ಮಾಡಿದ್ದಾರೆ. ವಿಜಯಲಕ್ಷ್ಮಿ ಹಾಗೂ ಕೃಷ್ಣೇಗೌಡರೂ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ಅರುಳ್ ಕೆ ಸೋಮಸುಂದರನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ, ಪ್ರಗತಿ ರಿಷಬ್ ಶೆಟ್ಟಿ ಮತ್ತು ಪುಟ್ಟರಾಜು ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.

  • ಡಾಟರ್ ಆಫ್ ಪಾರ್ವತಮ್ಮನ ಅದ್ಭುತ ಲಿರಿಕಲ್ ವೀಡಿಯೋ!

    ಡಾಟರ್ ಆಫ್ ಪಾರ್ವತಮ್ಮನ ಅದ್ಭುತ ಲಿರಿಕಲ್ ವೀಡಿಯೋ!

    – ಜೀವಕಿಲ್ಲಿ ಜೀವ ಬೇಟೆ ಪಾಪಿ ಯಾರು ಇಲ್ಲಿ…?

    ಚಿತ್ರೀಕರಣ ಶುರುವಾದಾಗಿನಿಂದಲೂ ಹರಿಪ್ರಿಯಾ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಸದ್ದು ಮಾಡುತ್ತಲೇ ಸಾಗಿ ಬಂದಿದೆ. ಇದೀಗ ಈ ಚಿತ್ರದ ಲಿರಿಕಲ್ ವೀಡಿಯೋ ಒಂದು ಬಿಡುಗಡೆಯಾಗಿದೆ. ಪಿಆರ್‍ಕೆ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡನ್ನು ಬಿಡುಗಡೆಗೊಳಿಸಿರೋ ರೋರಿಂಗ್ ಸ್ಟಾರ್ ಶ್ರೀಮುರುಳಿ ಮನದುಂಬಿ ಮಾತಾಡಿದ್ದಾರೆ. ಚಿತ್ರತಂಡವನ್ನು ಮೆಚ್ಚಿಕೊಳ್ಳುತ್ತಲೇ ಶುಭ ಕೋರಿದ್ದಾರೆ.

    ವಿಶೇಷವೆಂದರೆ, ಈಗ ಬಿಡುಗಡೆಯಾಗಿರೋ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಬರೆದಿರೋದು ಟಗರು ಡಾಲಿ ಖ್ಯಾತಿಯ ಧನಂಜಯ್. `ಜೀವಕಿಲ್ಲಿ ಜೀವ ಬೇಟೆ ಪಾಪಿ ಯಾರು ಇಲ್ಲಿ. ಕೊಂದು ತಿನ್ನೊ ರೂಲೆ ಉಂಟು ಪಾಪ ಯಾವುದಿಲ್ಲಿ’ ಎಂಬ ಈ ಹಾಡಿಗೆ ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾರ್ತಿಕ್, ಚೆನ್ನಾಜಿ ರಾವ್, ನಾರಾಯಣ್ ಶರ್ಮಾ ಮತ್ತು ಮಿಥುನ್ ಮುಕುಂದನ್ ಈ ಹಾಡಿಗೆ ಧ್ವನಿಯಾಗಿದ್ದಾರೆ.

    ದಿಶಾ ಎಂಟರ್ ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಇದರ ಈ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿರುವ ರೋರಿಂಗ್ ಸ್ಟಾರ್ ಶ್ರೀಮುರುಳಿ ಧನಂಜಯ್ ಅವರ ಬಹುಮುಖ ಪ್ರತಿಭೆಯನ್ನು ಕೊಂಡಾಡಿದ್ದಾರೆ. ತಮಗೆ ಡಾಲಿಯ ನಟನೆ ಇಷ್ಟ ಅಂದಿರೋ ಶ್ರೀಮುರುಳಿ, ಡಾಟರ್ ಆಫ್ ಪಾರ್ವತಮ್ಮನಾಗಿ ನಟಿಸಿರೋ ಹರಿಪ್ರಿಯಾರ ನಟನೆಯನ್ನೂ ಮೆಚ್ಚಿ ಮಾತಾಡಿದ್ದಾರೆ.

    ಈ ಹಾಡು ಪಿಆರ್ ಕೆ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದಾಕ್ಷಣದಿಂದಲೇ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಧನಂಜಯ್ ಅವರು ಬದುಕಿನ ದ್ವಂದ್ವ, ವಾಸ್ತವಗಳನ್ನು ಕಟ್ಟಿ ಕೊಡುವಂಥಾ ಸಾಲುಗಳ ಮೂಲಕವೇ ಈ ಹಾಡನ್ನು ವಿಶೇಷವಾಗಿಸಿದ್ದಾರೆ.

    ಬಹುಶಃ ಈ ಹಾಡು ಕೇಳಿದ ಯಾರೇ ಆದರೂ ಧನಂಜಯ್ ಅವರ ಟ್ಯಾಲೆಂಟಿನ ಬಗ್ಗೆ ಅಚ್ಚರಿ ಸೂಚಿಸದಿರಲು ಸಾಧ್ಯವಿಲ್ಲ. ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಅವರಂತೂ ಈ ಹಾಡನ್ನು ವಿಭಿನ್ನ ರಾಗಗಳ ಪಟ್ಟಿನಿಂದ ಮತ್ತೂ ವಿಶೇಷವಾಗಿಸಿದ್ದಾರೆ.

    ಒಟ್ಟಾರೆಯಾಗಿ ಹೇಳೋದಾದರೆ ಶಂಕರ್ ಜೆ ನಿರ್ದೇಶನದ ಈ ಚಿತ್ರವೀಗ ಈ ಹಾಡಿನ ಮೂಲಕ ಮತ್ತಷ್ಟು ಮಂದಿಯನ್ನು ಸೆಳೆದುಕೊಂಡಿದೆ. ಈ ಹಾಡೇ ಇಡೀ ಸಿನಿಮಾ ವಿಭಿನ್ನ ಕಂಟೆಂಟು ಹೊಂದಿದೆ ಎಂಬ ಸೂಚನೆಯನ್ನೂ ರವಾನಿಸುವಂತಿದೆ.

    ಹರಿಪ್ರಿಯಾ ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರೋ ಡಾಟರ್ ಆಫ್ ಪಾರ್ವತಮ್ಮನಿಗೆ ಈ ಲಿರಿಕಲ್ ವೀಡಿಯೋ ಸಾಂಗಿನಿಂದ ಮತ್ತಷ್ಟು ಫ್ಯಾನ್ಸ್ ಹುಟ್ಟಿಕೊಳ್ಳೋದಂತೂ ಗ್ಯಾರೆಂಟಿ!