Tag: Dasara Special

  • ದಸರಾಕ್ಕೆ 280 ಹೆಚ್ಚುವರಿ ಬಸ್ಸುಗಳ ನಿಯೋಜನೆ

    ದಸರಾಕ್ಕೆ 280 ಹೆಚ್ಚುವರಿ ಬಸ್ಸುಗಳ ನಿಯೋಜನೆ

    ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಪ್ರಯಾಣಿಕರ ಬೇಡಿಕೆಯನುಸಾರ ಮುಂದಿನ 10 ದಿನಗಳವರೆಗೆ ಮೈಸೂರಿಗೆ 280 ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ.

    ದಸರಾ ಪ್ರಯುಕ್ತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಸೆ.25ರಂದು ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆ ಅಂಗವಾಗಿ ದಸರಾ ವಿಶೇಷ ಬಸ್ಸುಗಳಿಗೆ ಚಾಲನೆ ನೀಡಲಾಯಿತು.ಇದನ್ನೂ ಓದಿ: ಇಂದು ಮಹಿಷ ದಸರಾ – ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ

    ಮುಂದಿನ 10 ದಿನಗಳವರೆಗೆ ಮೈಸೂರು ರಸ್ತೆ ಬಸ್ ನಿಲ್ದಾಣದಲ್ಲಿ ದಸರಾ ಕ್ಯಾಂಪ್ ಇರಲಿದ್ದು, ಬೆಂಗಳೂರು ಕೇಂದ್ರೀಯ ವಿಭಾಗ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ವಿಭಾಗಗಳಿಂದ ಒಟ್ಟು 280 ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.

    ಈ ಸಂದರ್ಭದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ), ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೆಂಪೇಗೌಡ ಬಸ್ ನಿಲ್ದಾಣ, ವಿಭಾಗೀಯ ನಿಯಂತ್ರಣಾಧಿಕಾರಿ ಬೆಂಗಳೂರು ಕೇಂದ್ರೀಯ ವಿಭಾಗ ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಾಲಕ ನಿರ್ವಾಹಕರಿಗೆ ಹಾಗೂ ಪ್ರಯಾಣಿಕರಿಗೆ ಸಿಹಿ ವಿತರಿಸುವ ಮೂಲಕ ಶುಭ ಕೋರಿದರು.ಇದನ್ನೂ ಓದಿ: S L Bhyrappa | ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ

  • ದಸರಾ | ಬೆಂಗಳೂರು, ಬೆಳಗಾವಿ, ಮೈಸೂರಿಗೆ ವಿಶೇಷ ರೈಲು

    ದಸರಾ | ಬೆಂಗಳೂರು, ಬೆಳಗಾವಿ, ಮೈಸೂರಿಗೆ ವಿಶೇಷ ರೈಲು

    ಬೆಂಗಳೂರು: ನಾಡಹಬ್ಬ ಮೈಸೂರು ದಸರಾ (Mysuru Dasara) ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ದಸರಾ ಹಬ್ಬ ಕಣ್ತುಂಬಿಕೊಳ್ಳಲು ರಾಜ್ಯದ ಬೇರೆ ಬೇರೆ ಕಡೆಯಿಂದ ಜನರು ಆಗಮಿಸುತ್ತಾರೆ. ಈ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ವಿಶೇಷ ರೈಲುಗಳು ಸಂಚರಿಸಲಿವೆ.

    ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಬೆಳಗಾವಿ ಮತ್ತು ಮೈಸೂರು ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ. ರೈಲು ಸಂಖ್ಯೆ, ದಿನಾಂಕ, ಸ್ಥಳ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.ಇದನ್ನೂ ಓದಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ – ಅಲ್ಪಾವಧಿಯಲ್ಲಿ 2,000 ಕೋಟಿ ರೂ. ಲಾಭಗಳಿಸಿದ ವೀರೇಂದ್ರ ಪಪ್ಪಿ

    1. ರೈಲು ಸಂಖ್ಯೆ 06271/06272: ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ–ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು:

    • ರೈಲು ಸಂಖ್ಯೆ 06271 2025ರ ಸೆಪ್ಟೆಂಬರ್ 30ರಂದು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಸಂಜೆ 7 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 7.30ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.
    • ರೈಲು ಸಂಖ್ಯೆ 06272  2025ರ ಅಕ್ಟೋಬರ್ 1 ರಂದು ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 7.45ಕ್ಕೆ ಮೈಸೂರಿಗೆ ತಲುಪಲಿದೆ. ಈ ರೈಲು ಮಾರ್ಗದಲ್ಲಿ ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಯಶವಂತಪುರ, ಕೆಎಸ್‌ಆರ್‌ ಬೆಂಗಳೂರು ಮತ್ತು ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

    2. ರೈಲು ಸಂಖ್ಯೆ 06273/06274 ಮೈಸೂರು–ಬೆಳಗಾವಿ–ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು:

    • ರೈಲು ಸಂಖ್ಯೆ 06273 2025ರ ಅಕ್ಟೋಬರ್ 2ರಂದು ಮೈಸೂರಿನಿಂದ ರಾತ್ರಿ 11.45ಕ್ಕೆ ಹೊರಟು, ಅಕ್ಟೋಬರ್ 3 ರಂದು ಮಧ್ಯಾಹ್ನ 12.30ಕ್ಕೆ ಬೆಳಗಾವಿಯನ್ನು ತಲುಪಲಿದೆ. ಈ ರೈಲು ಮಂಡ್ಯ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.
    • ರೈಲು ಸಂಖ್ಯೆ 06274 2025ರ ಅಕ್ಟೋಬರ್ 3ರಂದು ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5.00ಕ್ಕೆ ಬೆಂಗಳೂರಿನ ಎಸ್‌ಎಂವಿ ಟರ್ಮಿನಲ್ ತಲುಪಲಿದೆ. ಇದು ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

    3. ರೈಲು ಸಂಖ್ಯೆ 06275/06276 ಎಸ್‌ಎಂವಿಟಿ ಬೆಂಗಳೂರು–ಬೆಳಗಾವಿ–ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು:

    • ರೈಲು ಸಂಖ್ಯೆ 06275 2025ರ ಅಕ್ಟೋಬರ್ 4 ರಂದು ಬೆಂಗಳೂರಿನ ಎಸ್‌ಎಂವಿಟಿಯಿಂದ ಸಂಜೆ 7 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ.
    • ರೈಲು ಸಂಖ್ಯೆ 06276 2025ರ ಅಕ್ಟೋಬರ್ 5ರಂದು ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5.00ಕ್ಕೆ ಬೆಂಗಳೂರಿನ ಎಸ್‌ಎಂವಿಟಿಗೆ ತಲುಪಲಿದೆ.

    ಈ ರೈಲು ಎರಡೂ ದಿಕ್ಕಿನಲ್ಲಿಯೂ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.

    ಮೇಲೆ ತಿಳಿಸಿದ ಎಲ್ಲಾ ರೈಲುಗಳು (06271/06272, 06273/06274 ಮತ್ತು 06275/06276) ಒಟ್ಟು 19 ಬೋಗಿಗಳನ್ನು ಹೊಂದಿದ್ದು, ಅವುಗಳಲ್ಲಿ 1 ಎಸಿ 2-ಟೈರ್, 3 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 3 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್‌/ಡಿ ಬೋಗಿಗಳು ಇರಲಿವೆ.

    ಹಬ್ಬದ ಸಮಯದಲ್ಲಿ ಪ್ರಯಾಣಿಕರು ಈ ವಿಶೇಷ ಸೇವೆಗಳ ಸದುಪಯೋಗ ಪಡೆದುಕೊಳ್ಳುಬೇಕು, ಹೆಚ್ಚಿನ ವಿವರಗಳಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು, ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡಬಹುದು ಅಥವಾ ಹತ್ತಿರದ ರೈಲು ನಿಲ್ದಾಣವನ್ನು ಸಂಪರ್ಕಿಸಬಹುದು.ಇದನ್ನೂ ಓದಿ: ಮಣಿಪುರ ಮಾತುಕತೆ ಸಫಲ; ರಾಷ್ಟ್ರೀಯ ಹೆದ್ದಾರಿ ತೆರೆಯಲು ಕುಕಿ ಗ್ರೂಪ್ ಒಪ್ಪಿಗೆ

     

  • ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    ಶ್ವಯುಜ ಶುಕ್ಲ ಪಾಡ್ಯಮಿಯಿಂದ ದಶಮಿಯತನಕ ಆಚರಿಸಲ್ಪಡುವ ಪವಿತ್ರ ಮಹಿಮೆಯಿಂದ ಕೂಡಿದ ಹಬ್ಬವೇ ನವರಾತ್ರಿ. ಒಂಬತ್ತು ರಾತ್ರಿಗಳ ಆಚರಿಸಲ್ಪಡುವ ಹಬ್ಬವಾಗಿರುವುದರಿಂದ ಇದಕ್ಕೆ ನವರಾತ್ರಿ ಎಂದು ಹೆಸರು ಬಂದಿದೆ.

    ನವರಾತ್ರಿ ಹಬ್ಬದ ಒಂಭತ್ತು ದಿನವೂ ಶಕ್ತಿ ದೇವಿ ಜಗನ್ಮಾತೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ನಂತರ ಮೂರು ದಿನ ಮಹಾಲಕ್ಷ್ಮಿಯನ್ನೂ, ಕೊನೆಯ ಮೂರು ದಿನ ಮಹಾ ಸರಸ್ವತಿಯನ್ನು ಪೂಜಿಸಲಾಗುತ್ತಿದೆ. ಮಹಾಕಾಳಿ ತಾಮಸ ಗುಣಕ್ಕೂ, ಮಹಾಲಕ್ಷ್ಮಿ ರಾಜಸಗುಣಕ್ಕೂ, ಮಹಾಸರಸ್ವತಿ ಸಾತ್ವಿಕ ಗುಣದ ಸಂಕೇತ. ನವರಾತ್ರಿ ಆಚರಿಸುವ ಭಕ್ತರು ತಾಮಸದಿದ ರಾಜಸದೆಡೆಗೆ, ರಾಜಸದಿಂದ ಸಾತ್ವಿಕದೆಡೆಗೆ ಬಂದಾಗ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತದೆ.

    ನವರಾತ್ರಿ ವೇಳೆ ದೇವಿಯ ಪೂಜೆ, ದೇವಿ ಭಾಗವತ, ದುರ್ಗ ಸಪ್ತಶತೀ, ಲಲಿತಾ ಸಹಸ್ರನಾಮ ಪವಿತ್ರ ಸ್ತೋತ್ರಗಳ ಮತ್ತು ಮಂತ್ರಗಳ ಪಠಣ ಹಾಗೂ ಪಾರಾಯಣ ನಡೆಯುತ್ತದೆ. ನವದುರ್ಗೆಯರ ಆರಾಧನೆಯ ಹಿನ್ನೆಲೆಯಲ್ಲಿ ಇಂದಿನಿಂದ ಪ್ರತಿದಿನ ದೇವಿಯ ಒಂದೊಂದು ಅವತಾರದ ವಿವರಣೆಯನ್ನು ಪಬ್ಲಿಕ್ ಟಿವಿ ಪ್ರಕಟಿಸಲಿದೆ.

    ಒಂಬತ್ತು ದುರ್ಗೆಯರು:
    1. ಶೈಲಪುತ್ರಿ
    2. ಬ್ರಹ್ಮಚಾರಿಣಿ
    3. ಚಂದ್ರಘಂಟಾ
    4. ಕೂಷ್ಮಾಂಡಾ
    5. ಸ್ಕಂದ ಮಾತೆ
    6. ಕಾತ್ಯಾಯನಿ
    7. ಕಾಳರಾತ್ರಿ
    8. ಮಹಾಗೌರಿ
    9. ಸಿದ್ಧಿದಾತ್ರಿ


    ಪರ್ವತ ರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ದಸರಾ ದಿನ ಈ ದೇವಿಯನ್ನು ಮೊದಲಿಗೆ ಆರಾಧಿಸುತ್ತಾರೆ. ಈ ದೇವಿಯನ್ನು ಆರಾಧಿಸಲು ಒಂದು ಕಥೆಯಿದೆ. ಪ್ರಜಾಪತಿ ಬಹ್ಮನ ಮಗನಾದ ದಕ್ಷ ತನ್ನ 27 ಮಂದಿ ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದ್ದಳು.

    ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಹಿಮಾವೃತವಾಗಿರುವ ಕೈಲಾಸ ಅಥವಾ ಸ್ಮಶಾನದಲ್ಲಿ ವಾಸ, ಕುತ್ತಿಗೆಗೆ ನಾಗರಹಾವು ಇರುವ ಶಿವನಿಗಿಂತ ನನ್ನ ಚೆಲುವೆಯಾಗಿರುವ ಮಗಳಿಗೆ ಉತ್ತಮನಾಗಿರುವ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.

    ಶಿವನ ವಿಚಾರದಲ್ಲಿ ಅಸಮಾಧಾನವನ್ನು ಹೊರಹಾಕುತ್ತಿದ್ದ ದಕ್ಷ ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಆಗಮಿಸುವಂತೆ ಎಲ್ಲ ಮಕ್ಕಳಿಗೆ, ಬಂಧು ಮಿತ್ರರಿಗೆ ಆಹ್ವಾನ ನೀಡಿದ್ದ. ಈ ಸಮಾರಂಭಕ್ಕೆ ದಕ್ಷ ಪ್ರವೇಶಿಸುತ್ತಿದ್ದಂತೆ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಈ ವೇಳೆ ದಕ್ಷ, “ಶಿವ ದೇವರು ಆಗಿರಬಹುದು. ಆದರೆ ಅವನಿಗೆ ನಾನು ಮಾವ. ಸಂಬಂಧದಲ್ಲಿ ನಾನು ಆತನಿಗಿಂತ ದೊಡ್ಡವ. ಶಿವ ಎದ್ದು ನಿಂತು ನನಗೆ ಗೌರವ ನೀಡಬಹುದಿತ್ತು. ಈ ರೀತಿ ಅಗೌರವ ಸಲ್ಲಿಸಿದ್ದು ಸರಿಯಲ್ಲ” ಎಂದು ಮನಸ್ಸಿನಲ್ಲೇ ಕಹಿಯನ್ನು ಅನುಭವಿಸಿದ.

    ಕೆಲ ಸಮಯದ ಬಳಿಕ ದಕ್ಷ ಮತ್ತೊಂದು ಯಜ್ಞವನ್ನು ಆಯೋಜಿಸಿದ. ಈ ಬಾರಿ ಮಗಳು ದಾಕ್ಷಾಯಿಣಿ ಮತ್ತು ಶಿವನಿಗೆ ಆಹ್ವಾನ ನೀಡದೇ ಎಲ್ಲ ಮಕ್ಕಳಿಗೆ ಆಹ್ವಾನ ನೀಡಿದ್ದ. ತಂದೆ ಯಾಗವನ್ನು ಆಯೋಜಿಸಿದ ವಿಚಾರ ತಿಳಿದು ಮಗಳು ಶಿವನ ಜೊತೆ,”ನಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣವೇ” ಎಂದು ಕೇಳುತ್ತಾಳೆ. ಇದಕ್ಕೆ ಶಿವ,”ಯಾವುದೇ ಶುಭ ಸಮಾರಂಭಕ್ಕೆ ಆಹ್ವಾನ ಇಲ್ಲದೇ ಹೋಗಬಾರದು. ತವರು ಮನೆ ಸೇರಿದಂತೆ ಎಲ್ಲಿಗೂ ಹೋಗಬಾರದು” ಎಂದು ತಿಳಿಹೇಳುತ್ತಾನೆ. ಇದಕ್ಕೆ ದಾಕ್ಷಾಯಿಣಿ,”ಕೆಲಸದ ಒತ್ತಡದಲ್ಲಿ ಯಾವುದೋ ಅನಿವಾರ್ಯ ಕಾರಣದಿಂದಾಗಿ ತಂದೆಗೆ ಮರೆತುಹೋಗಿರಬಹುದು. ತಂದೆ ಮನೆಗೆ ಹೋಗಲು ಮಗಳಿಗೆ ಆಹ್ವಾನ ಯಾಕೆ ಬೇಕು”ಎಂದು ಪ್ರಶ್ನಿಸುತ್ತಾಳೆ. ತೆರಳುವುದು ಬೇಡ ಎಂದು ಹೇಳಿದರೂ ಪತ್ನಿಯ ಹಠಕ್ಕೆ ಕರಗಿ ಶಿವ ತಂದೆಯ ಮನೆಗೆ ಹೋಗಲು ಅನುಮತಿ ನೀಡುತ್ತಾನೆ.

    ಪತಿಯಿಂದ ಅನುಮತಿ ಸಿಕ್ಕಿದ್ದೆ ತಡ ದಾಕ್ಷಾಯಿಣಿ ಶಿವನ ವಾಹನ ನಂದಿಯನ್ನೇರಿ, ಕೈಗೆ ಸಿಕ್ಕ ಉಡುಗೊರೆಯನ್ನು ಹಿಡಿದುಕೊಂಡು ತಂದೆಯ ಯಜ್ಞ ಸಮಾರಂಭಕ್ಕೆ ತೆರಳುತ್ತಾಳೆ. ಮಗಳನ್ನು ನೋಡಿದ ಕೂಡಲೇ ದಕ್ಷ,”ನಾನು ನಿನಗೆ ಆಹ್ವಾನ ನೀಡಿಲ್ಲ. ಬಂದಿದ್ದು ಯಾಕೆ? ನಿನ್ನ ಪತಿಯನ್ನೂ ಕರೆದುಕೊಂಡು ಬಂದಿದ್ದೀಯಾ” ಎಂದು ಪ್ರಶ್ನೆ ಮಾಡುತ್ತಾನೆ. ತಂದೆ ಮನ ನೋಯಿಸಿದರೂ ಆ ನೋವನ್ನು ತಡೆದುಕೊಳ್ಳುತ್ತಾಳೆ. ಯಜ್ಞ ಆರಂಭವಾದ ಬಳಿಕವೂ ದಕ್ಷ ಮತ್ತೆ ಶಿವನ ವಿರುದ್ಧ ಕಿಡಿಕಾರುತ್ತಾನೆ.”ನೀನು ಪತಿಯನ್ನು ಸೇರು. ಇಲ್ಲಿಂದ ಹೊರಟು ಹೋಗು” ಎಂದು ಅವಮಾನಿಸುತ್ತಾನೆ. ಈ ಎಲ್ಲರ ಮುಂದೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿ ಶಿವನನ್ನು ಧ್ಯಾನಿಸುತ್ತಾ,”ಪತಿಯೇ ನಾನು ನಿಮ್ಮ ಮಾತನ್ನು ಕೇಳಿ ಇಲ್ಲಿಗೆ ಬಾರಬಾರದಿತ್ತು. ತಂದೆ ನಿಮಗೆ ಮಾಡಿದ ಈ ಅವಮಾನವನ್ನು ನಾನು ಸಹಿಸಲಾರೆ” ಎಂದು ಪ್ರಾರ್ಥಿಸಿ ಮುಂದಿದ್ದ ಯಜ್ಞ ಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ.

    ಪತಿಯನ್ನು ಅವಮಾನಿಸಿದ್ದನ್ನು ಸಹಿಸದೆ ಯಜ್ಞ ಕುಂಡಕ್ಕೆ ಹಾರಿಕೊಂಡಿದ್ದ ದಾಕ್ಷಾಯಿಣಿಗೆ ಅಂದಿನಿಂದ `ಸತಿ’ ಎಂಬ ಹೆಸರು ಬಂತು. ಸತಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ‘ಶೈಲಪುತ್ರಿ’ ಎಂದು ಹೆಸರುವಾಸಿಯಾಗುತ್ತಾಳೆ. ಮತ್ತೆ ಶಿವನ ಮಡದಿಯಾಗುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರ ಸೂಚನೆ ಏನೋ ಎಂಬಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣುಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯ ನಡೆಯುತ್ತದೆ. ಶೈಲಪುತ್ರಿ ವೃಷಭ ವಾಹನದ ಮೇಲೆ ಕುಳಿತು, ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಹಿಡಿದುಕೊಂಡಿರುತ್ತಾಳೆ.

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    8.ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv