Tag: dasara elephants

  • ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್‌: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್‌?

    ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್‌: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್‌?

    ಮೈಸೂರು: ರಾತ್ರೋರಾತ್ರಿ ಅರಮನೆ ಆವರಣಕ್ಕೆ ಬಂದು ದಸರಾ ಆನೆಗಳನ್ನು (Dasara Elephants) ತಬ್ಬಿಕೊಂಡು ರೀಲ್ಸ್ ಮಾಡಿರುವ ಘಟನೆ ಮೈಸೂರಿನ (Mysuru) ಅರಮನೆ ಆವರಣದಲ್ಲಿ (Palace Ground) ನಡೆದಿದೆ.

    ಯುವತಿಯೋರ್ವಳು ದಸರಾ ಆನೆಗಳನ್ನು ತಬ್ಬಿಕೊಂಡು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ರಾತ್ರೋರಾತ್ರಿ ಯಾರು ಇಲ್ಲದ ವೇಳೆ ಕರಿಕಲ್ಲುತೊಟ್ಟಿ ಮೂಲಕ ಅರಮನೆ ಆವರಣಕ್ಕೆ ಎರಡು ಕಾರುಗಳಲ್ಲಿ ಪ್ರವೇಶ ಪಡೆದಿರುವ ಯುವತಿ ಆನೆಗಳು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ಹೋಗಿ ಫೋಟೊಶೂಟ್ ಮಾಡಿಸಿದ್ದಾಳೆ. ಮೊಬೈಲ್‌ನ ಫ್ಲ್ಯಾಶ್‌ ಲೈಟ್ ಬಳಸಿಕೊಂಡು ರೀಲ್ಸ್ ಮಾಡಿ, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ.

    ಅರಮನೆ ನಿಯಮಗಳ ಪ್ರಕಾರ, ಆನೆಗಳು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ರಾತ್ರಿ ವೇಳೆ ಯಾರು ಹೋಗುವಂತಿಲ್ಲ. ಫ್ಲ್ಯಾಶ್‌ ಲೈಟ್‌ಗಳನ್ನ ಬಳಸಿ ಫೋಟೊಶೂಟ್‌ ಮಾಡುವಂತಿಲ್ಲ. ಸದ್ಯ ಈ ವಿಡಿಯೋ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಅರಣ್ಯ ಅಧಿಕಾರಿಗಳು ಪ್ರಭಾವಿಗಳ ಮುಂದೆ ಮಂಡಿಯೂರಿ ಕಾಡು ಪ್ರಾಣಿಗಳ ಜೊತೆ ಚೆಲ್ಲಾಟಕ್ಕಿಳಿದಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿ ವಿಡಿಯೋ ಡಿಲೀಟ್ ಮಾಡಿದ್ದಾಳೆ.ಇದನ್ನೂ ಓದಿ: ಇಂದು ಸಿಂಹಾಸನ ಜೋಡಣೆ ಕಾರ್ಯ – ಮೈಸೂರು ಅರಮನೆ ಅರ್ಧ ದಿನ ಪ್ರವಾಸಿಗರಿಗೆ ನಿರ್ಬಂಧ

  • ದಸರಾ ನಿಮಿತ್ತ ಸಿಡಿಮದ್ದು ತಾಲೀಮು – ವಿಚಲಿತಗೊಂಡ ಗಜಪಡೆಯ ಶ್ರೀಕಂಠ, ಹೇಮಾವತಿ

    ದಸರಾ ನಿಮಿತ್ತ ಸಿಡಿಮದ್ದು ತಾಲೀಮು – ವಿಚಲಿತಗೊಂಡ ಗಜಪಡೆಯ ಶ್ರೀಕಂಠ, ಹೇಮಾವತಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಹಿನ್ನೆಲೆ ಸೋಮವಾರ (ಸೆ.15) ಸಿಡಿಮದ್ದು ತಾಲೀಮು ನಡೆಸಲಾಯಿತು.

    ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಅಶ್ವರೋಹಿ ದಳ ಹಾಗೂ ಆನೆಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸಮ್ಮುಖದಲ್ಲಿ ಸಿಡಿಮದ್ದು ತಾಲೀಮು ನಡೆಸಲಾಯಿತು. ಈ ವೇಳೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಅಭಿಮನ್ಯು, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಗೋಪಿ, ಸುಗ್ರೀವಾ, ಶ್ರೀಕಂಠ, ಪ್ರಶಾಂತ, ಕಾವೇರಿ, ಲಕ್ಷ್ಮಿ, ಹೇಮಾವತಿ ಹಾಗೂ ರೂಪ ಒಟ್ಟು 14 ಆನೆಗಳು ಹಾಗೂ ಅಶ್ವರೋಹಿ ದಳದ 30 ಕುದುರೆಗಳು ಭಾಗಿಯಾಗಿದ್ದವು.ಇದನ್ನೂ ಓದಿ: ಮೈಸೂರು ದಸರಾ – ಮೊದಲ ತಂಡದ ಭೀಮನಿಗಿಂತ ಸುಗ್ರೀವನೇ ಬಲಶಾಲಿ

    ಸಿಡಿಮದ್ದು ತಾಲೀಮು ವೇಳೆ ಸಶಸ್ತ್ರ ಮೀಸಲು ಪಡೆ ಪೊಲೀಸರು 21 ಭಾರಿ ಕುಶಾಲತೋಪು ಸಿಡಿಸಿದರು. ಸಿಡಿಮದ್ದಿನ ಶಬ್ದಕ್ಕೆ ಕುದುರೆಗಳು ಚದುರಿದವು ಹಾಗೂ ಶ್ರೀಕಂಠ, ಹೇಮಾವತಿ ಆನೆಗಳು ಸ್ವಲ್ಪ ವಿಚಲಿತಗೊಂಡವು.

  • ಮಾವುತರಿಗೆ ಕುಕ್ಕರ್ ಗಿಫ್ಟ್‌ ಕೊಟ್ಟು ಊಟ ಹಾಕಿಸಿದ ವಿಜಯಲಕ್ಷ್ಮಿ ದರ್ಶನ್‌

    ಮಾವುತರಿಗೆ ಕುಕ್ಕರ್ ಗಿಫ್ಟ್‌ ಕೊಟ್ಟು ಊಟ ಹಾಕಿಸಿದ ವಿಜಯಲಕ್ಷ್ಮಿ ದರ್ಶನ್‌

    ದರ್ಶನ್ ಜೈಲು ಪಾಲಾದ್ರೂ ಮೈಸೂರು ನಂಟು ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಮರೆಯದಿರುವುದು ವಿಶೇಷ. ದರ್ಶನ್ ಅನುಪಸ್ಥಿತಿಯಲ್ಲೂ ಅವರ ಪತ್ನಿ ವಿಜಯಲಕ್ಷ್ಮಿ ದಸರಾ ಆನೆ ಮಾವುತರ ಕುಟುಂಬಕ್ಕೆ ಉಡುಗೊರೆ ಕೊಟ್ಟು ಊಟ ಹಾಕಿಸಿದ್ದಾರೆ.

    ದರ್ಶನ್‌ (Darshan) ತಾಯಿ ಕೂಡ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿದ್ದ ಗಜಪಡೆ ನೋಡಿ ಖುಷಿ ಪಟ್ಟರು. ಮಾವುತರ 60 ಕುಟುಂಬಕ್ಕೆ ವಿಜಯಲಕ್ಷ್ಮಿ ಕುಕ್ಕರ್ ಉಡುಗೊರೆ ನೀಡಿದ್ದಾರೆ. ಜೊತೆಗೆ ಭೋಜನದ ವ್ಯವಸ್ಥೆ ಮಾಡಿಸಿದ್ದರು.

    ಮೈಸೂರಿನ ದಸರಾ ಆನೆ (Mysuru Dasara Elephants) ನೋಡಿ ಖುಷಿಪಟ್ಟ ವಿಜಯಲಕ್ಷ್ಮಿ ಮಾವುತರಿಗೆ ಕೈಯ್ಯಾರೆ ಕುಕ್ಕರ್ ಕೊಟ್ಟಿದಾರೆ. ವಿಜಯಲಕ್ಷ್ಮಿಯವರ ಈ ಕೆಲಸಕ್ಕೆ ನಟ ಧನ್ವಿರ್ ಜೊತೆಯಾಗಿದ್ರು. ಮಾವುತರು ಒಬ್ಬೊಬ್ರಾಗಿ ಬಂದು ವಿಜಯಲಕ್ಷ್ಮಿ ಅವರಿಂದ ಕುಕ್ಕರ್ ಸ್ವೀಕರಿಸಿದ್ರು. ಹಿಂದೆ ದರ್ಶನ್ ಅನೇಕ ಬಾರಿ ಮೈಸೂರಿಗೆ ಭೇಟಿ ಕೊಟ್ಟು ಮಾವುತರಿಗೆ ಸಹಾಯ ಮಾಡಿದ್ದರಂತೆ. ಇದೀಗ ಆ ಪರಂಪರೆಯನ್ನ ವಿಜಯಲಕ್ಷ್ಮಿ ಮುಂದುವರಿಸಿದ್ದಾರೆ ಎನ್ನಲಾಗ್ತಿದೆ.

    ಸೆಪ್ಟೆಂಬರ್ 22 ರಿಂದ ಅಕ್ಟೋಬರ್‌ 2ರ ವರೆಗೆ ಈ ಬಾರಿಯ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ದಸರಾ ಮೆರವಣಿಗೆಯಲ್ಲಿ ಭಾಗಿಯಾಗುವ 2 ತಂಡದ 14 ಆನೆಗಳು ಈಗಾಗಳೇ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿವೆ.

  • ಮೈಸೂರು ದಸರಾ – ಮೊದಲ ತಂಡದ ಭೀಮನಿಗಿಂತ ಸುಗ್ರೀವನೇ ಬಲಶಾಲಿ

    ಮೈಸೂರು ದಸರಾ – ಮೊದಲ ತಂಡದ ಭೀಮನಿಗಿಂತ ಸುಗ್ರೀವನೇ ಬಲಶಾಲಿ

    ಮೈಸೂರು: ನಾಡಹಬ್ಬ ದಸರಾ ಮಹೋತ್ಸವ (Dasara Festival) ಹಿನ್ನೆಲೆ ಸೋಮವಾರ (ಆ.25) ದಸರಾ ಗಜಪಡೆಯ ಎರಡನೇ ತಂಡ ಮೈಸೂರಿಗೆ (Mysuru) ಬಂದಿವೆ. ಮೊದಲ ದಿನದ ತಾಲೀಮಿಗೂ ಮುನ್ನ ಅರಮನೆ ಅಂಗಳಕ್ಕೆ ಆಗಮಿಸಿರುವ ಆನೆಗಳ ತೂಕ ಪರೀಕ್ಷಿಸಲಾಗಿದ್ದು, ಈ ಪೈಕಿ ಮೊದಲ ತಂಡದಲ್ಲಿ ಹೆಚ್ಚು ತೂಕ ಹೊಂದಿರುವ ಭೀಮನಿಗಿಂತ ಸುಗ್ರೀವ ಆನೆ ಹೆಚ್ಚು ಬಲಶಾಲಿಯಾಗಿದ್ದಾನೆ ಅನ್ನೋದು ಗೊತ್ತಾಗಿದೆ.

    ಎರಡನೇ ತಂಡದ ಆನೆಗಳ ತೂಕದ ವಿವರ:
    ಸುಗ್ರೀವ: 5,545 ಕೆ.ಜಿ
    ಶ್ರೀಕಂಠ: 5,540 ಕೆ.ಜಿ
    ಗೋಪಿ: 4,990 ಕೆ.ಜಿ
    ರೂಪ: 3,320 ಕೆ.ಜಿ
    ಹೇಮಾವತಿ: 2440 ಕೆ.ಜಿ

    ಮೊದಲ ತಂಡದ ಆನೆಗಳ ತೂಕದ ವಿವರ:
    ಅಭಿಮನ್ಯು: 5,360 ಕೆ.ಜಿ
    ಭೀಮ: 5,465 ಕೆ.ಜಿ
    ಧನಂಜಯ: 5,310 ಕೆ.ಜಿ
    ಕಾವೇರಿ: 3,010 ಕೆ.ಜಿ
    ಲಕ್ಷ್ಮೀ: 3,730 ಕೆ.ಜಿ
    ಏಕಲವ್ಯ: 5,305 ಕೆ.ಜಿ
    ಮಹೇಂದ್ರ: 5,120 ಕೆ.ಜಿ
    ಕಂಜನ್: 4,880 ಕೆ.ಜಿ
    ಪ್ರಶಾಂತ: 5,110 ಕೆ.ಜಿ

    ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ಮಾಡಲಾಯಿತು. ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಬೆಳಗ್ಗೆ, ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ. ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ `ನಂದಿನಿ’ ಪಾರ್ಲರ್ – ಗ್ರಾಹಕರಿಗೆ 175ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯ

  • Public TV Explainer | ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಯಾರಾಗ್ತಾರೆ ಮುಂದಿನ ಸಾರಥಿ?

    Public TV Explainer | ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಯಾರಾಗ್ತಾರೆ ಮುಂದಿನ ಸಾರಥಿ?

    ಜಂಬೂ ಸವಾರಿಯಿಲ್ಲದೇ ಮೈಸೂರು ದಸರಾ (Mysuru Dasara) ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಮೈಸೂರು ದಸರಾ ಮಹೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಈ ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ಅಂದ್ರೆ ಆನೆಗಳೇ ಆಕರ್ಷಣೆ. ಮೈಸೂರು ಮಹಾರಾಜರ ಆಡಳಿತದ ನಂತರವೂ ಆನೆಯ ಮೇಲೆ ಅಂಬಾರಿ ಹೊರುವ ಪರಂಪರೆ ಸಾಗಿ ಬಂದಿದೆ. ಅದೇ ರೀತಿ ಈ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತ ಆನೆಗಳ ಇತಿಹಾಸ ಅಷ್ಟೇ ವಿಸ್ಮಯ. ಹೀಗೆ ಇತಿಹಾಸ ನಿರ್ಮಿಸಿ ಹೋದ ಹಳೆಯ ಆನೆಗಳ ಸಾಲಿನಲ್ಲಿ ಈಗ ಅಭಿಮನ್ಯುವೇ (Abhimanyu Elephant) ಕೊನೆಯವನಾಗಿದ್ದು, ದಶಕಗಳಿಂದ ಈಚೆಗೆ ಬಂದ ಆನೆಗೆ ಅಂಬಾರಿ ಹೊರುವ ಹೊಣೆ ಬಿಟ್ಟುಕೊಡುವ ಕಾಲ ಬಂದೇ ಬಿಟ್ಟಿದೆ.

    ಹೌದು. ಪ್ರಸಕ್ತ ವರ್ಷದ ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ಶುರುವಾಗಿದೆ. ನಾಡಹಬ್ಬ ದಸರಾದ ಐತಿಹಾಸಿಕ ಜಂಬೂ ಸವಾರಿಯಲ್ಲಿ ಈ ಬಾರಿಯೂ 59 ವರ್ಷ ವಯಸ್ಸಿನ ಅಭಿಮನ್ಯು ಆನೆಯೇ ಅಂಬಾರಿ ಹೊರಲಿದೆ. ದಸರಾ ಮಹೋತ್ಸವಲ್ಲಿ ಪಾಲ್ಗೊಳ್ಳಲಿರುವ 14 ಆನೆಗಳ ಪೈಕಿ 9 ಆನೆಗಳ ಪಟ್ಟಿಯನ್ನ ಈಗಾಗಲೇ ಬಿಡುಗಡೆ ಮಾಡಿದ್ದು, ಆಗಸ್ಟ್‌ 4ರಂದು (ಸೋಮವಾರ) ಅವು ಗಜಪಯಣದ ಮೂಲಕ ಅರಮನೆ ಅಂಗಳಕ್ಕೆ ಬಂದಿಳಿಯಲಿವೆ.

    ಮೊದಲ ಹಂತದಲ್ಲಿ ನಾಡಿಗೆ ಬರಲಿರುವ 9 ಆನೆಗಳು

    ಮತ್ತಿಗೋಡು ಶಿಬಿರದಲ್ಲಿರುವ ಅಭಿಮನ್ಯು (59 ವರ್ಷ), ಮತ್ತಿಗೋಡು ಶಿಬಿರದ ಭೀಮ (25 ವರ್ಷ), ದುಬಾರೆ ಶಿಬಿರದ ಕಂಜನ್‌ (24), ಧನಂಜಯ (44), ಪ್ರಶಾಂತ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40), ದುಬಾರೆ ಶಿಬಿರದ ಕಾವೇರಿ (45/ಹೆಣ್ಣಾನೆ), ಬಳ್ಳೆಯ ಲಕ್ಷ್ಮಿ (53/ಹೆಣ್ಣಾನೆ).

    ಮುಂದಿನ ವರ್ಷ ಅಂಬಾರಿ ಹೊತ್ತರೆ ಮುಗಿಯಿತು:

    ದಸರಾ ಆನೆಗಳಿಗೂ (Dasara Elephants) ಶತಮಾನದ ನಂಟು ಇದೆ. ಎಲ್ಲೆಡೆ ಹೊಸ ಪೀಳಿಗೆ ಪ್ರವೇಶಿಸಿದಂತೆ ಮೈಸೂರಿನ ಆನೆಗಳಲ್ಲೂ ಬದಲಾವಣೆ ಆಗುತ್ತಿದೆ. ಆದ್ರೆ ಈಗ ಇರುವ ಹಳೆಯ ಆನೆಗಳ ಪೈಕಿ ಅಭಿಮನ್ಯುನೇ ಹಿರಿಯ. 59 ವರ್ಷ ವಯಸ್ಸಿನ ಅಭಿಮನ್ಯು ಮುಂದಿ ವರ್ಷ ಅಂಬಾರಿ ಹೊತ್ತರೆ ಮುಗಿಯಿತು. ಏಕೆಂದರೆ ಅರಣ್ಯ ಅಧಿಕಾರಿಗಳು ಹೇಳುವಂತೆ 60 ವರ್ಷ ತುಂಬಿದ ಆನೆಗಳಿಗೆ ನಿಯಮದಂತೆ ನಿವೃತ್ತಿ ಕೊಡಬೇಕು. ಅಭಿಮನ್ಯುವಿಗೆ ಈಗ 59 ವರ್ಷ ವಯಸ್ಸಾಗಿದ್ದು, ಮುಂದಿನ ವರ್ಷ 60ನೇ ವಯಸ್ಸಿಗೆ ಕಾಲಿಡಲಿದ್ದಾನೆ. ಮುಂದಿನ ವರ್ಷ ಅಂಬಾರಿ ಹೊತ್ತರೆ ಅಲ್ಲಿಗೆ ಅಭಿಮನ್ಯು ಇತಿಹಾಸ ಪುಟ ಸೇರಿಕೊಳ್ಳಲಿದ್ದಾನೆ ಎನ್ನುತ್ತಾರೆ ಡಿಸಿಎಫ್‌ ಪ್ರಭು.

    ಅಭಿಮನ್ಯು ಹೆಮ್ಮರವಾಗಿ ಬೆಳೆದಿದ್ದು ಹೇಗೆ?

    1951ರ ಸಮಯದಲ್ಲಿ ಸುರ್ಗುಜಾ ಮಧ್ಯಪ್ರದೇಶದ ಭಾಗವಾಗಿತ್ತು. ಆದ್ರೆ 2000 ಇಸವಿಯ ನಂತರ ಛತ್ತಿಸ್‌ಘಡದ ಜಿಲ್ಲೆಯಾಗಿ ಸೇರ್ಪಡೆಯಾಯಿತು. ಈ ಸ್ಥಳಕ್ಕೂ ನಮ್ಮ ಕರ್ನಾಟಕಕ್ಕೂ ನಂಟು ಇದೆ. ಅದು ಹೇಗೆ ಅಂತೀರಾ..? ಈ ಹಿಂದೆ ಸುಮಾರು 3 ದಶಕಗಳ ಕಾಲ ಸರ್ಗುಜಾದಲ್ಲಿ ಆನೆಗಳ ಹಾವಳಿ ಮಿತಿ ಮೀರಿತ್ತು. ಆನೆಗಳನ್ನ ಸೆರೆ ಹಿಡಿಯಬೇಕು, ಉಪಟಳ ತಪ್ಪಿಸಬೇಕು ಅನ್ನೋ ಕೂಗು ಸರ್ಗೂಜಾ ಭಾಗದಲ್ಲಿ ಜೋರಾಗಿತ್ತು. ಸ್ಥಳೀಯರ ಒತ್ತಡಕ್ಕೆ ಮಣಿದ ಅಂದಿನ ಮಧ್ಯಪ್ರದೇಶದ ರಾಜ್ಯ ಸರ್ಕಾರ ಆನೆಗಳನ್ನ ಸೆರೆ ಹಿಡಿಯೋದಕ್ಕೇನೋ ಅನುಮತಿ ನೀಡಿತು. ಆದ್ರೆ ಅವುಗಳನ್ನ ಸೆರೆ ಹಿಡಿಯುವ ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ. ಆಗ ಮಧ್ಯಪ್ರದೇಶದ ಚಿತ್ತ ಹಾಯಿಸಿದ್ದು, ಕರ್ನಾಟಕದತ್ತ. ಖೆಡ್ಡಕ್ಕೆ ಕೆಡವುವ ಕಾರ್ಯಾಚರಣೆಯಲ್ಲಿ ಕರ್ನಾಟಕದ ಆನೆಗಳು ಆಗಲೇ ಬಲಶಾಲಿಗಳಾಗಿ ಗುರುತಿಸಿಕೊಂಡಿದ್ದವು. ಇಲ್ಲಿಂದ ಆನೆಗಳನ್ನ ಕರೆದುಕೊಂಡು ಬಂದು ಆನೆಗಳನ್ನ ಸೆರೆಹಿಡಿಯುವ ತೀರ್ಮಾನಕ್ಕೆ ಅಲ್ಲಿನ ಸರ್ಕಾರ ಮುಂದಾಯಿತು. ಅದರಂತೆ ಇಂದಿನ ಅಂಬಾರಿ ಹೊರುವ ಕ್ಯಾಪ್ಟನ್‌ ಅಭಿಮನ್ಯು ಸೇರಿ ಹಲವು ಆನೆಗಳ ತಂಡವನ್ನ ಸರ್ಗುಜಾಕ್ಕೆ ಕರೆದೊಯ್ಯಲಾಯ್ತು. ನೀರಿಕ್ಷೆಯಂತೆ ನಮ್ಮ ಆನೆಗಳು ಸರ್ಗುಜಾದಲ್ಲಿ ಸುಮಾರು 42 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿಯಾದವು. ಈ ಆನೆ ಸೆರೆ ಕಾರ್ಯಾಚರಣೆ ಆಗ The Last Migration – Wild Elephant Captureʼ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿತು. ಇದು ನಮ್ಮ ಅಭಿಮನ್ಯುವಿನ ಮೇಲಿನ ಅಭಿಮಾನ ಹೆಚ್ಚಿಸಿ ಈಗಲೂ ಅಪರೇಷನ್ ಎಂದರೆ ʻಅಭಿಮನ್ಯುʼ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಆದ್ರೆ ಇನ್ನೊಂದು ವರ್ಷ ಕಳೆದರೆ ಆಮೇಲೆ ಅಭಿಮನ್ಯು ಅಂಬಾರಿ ಹೊರುವ ಸೌಭಾಗ್ಯದಿಂದ ದೂರವಾಗಲಿದ್ದಾನೆ ಅನ್ನೋದು ವಿಷಾದನೀಯ.

    ಅಂಬಾರಿ ಹೊತ್ತ ಆನೆಗಳು ಅಜರಾಮರ

    ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ಆನೆಗಳು ಭಾಗಿಯಾಗಿವೆ. ಇಂತ ಆನೆಗಳ ಪಟ್ಟಿ ನೂರಕ್ಕೂ ಅಧಿಕ. ಆದ್ರೆ ಅಂಬಾರಿ ಹೊತ್ತ ಆನೆಗಳ ಸಂಖ್ಯೆ ಕಡಿಮೆ. ಇದರಲ್ಲಿ ಶತಮಾನಗಳಷ್ಟು ಹಳೆಯಾದ ಜಯಮಾರ್ತಾಂಡ ಆನೆಯೇ ಅತ್ಯಂತ ಹಿರಿಯ. ಈತನೇ ಅಂಬಾರಿ ಹೊತ್ತ ಮೊದಲಿಗ. ಹಲವಾರು ವರ್ಷ ಮಾರ್ತಾಂಡ ಯಶಸ್ವಿಯಾಗಿ ತನ್ನ ಜವಾಬ್ದಾರಿ ನಿಭಾಯಿಸಿ ಮಹಾರಾಜರ ಪ್ರೀತಿಗೂ ಪಾತ್ರನಾಗಿದ್ದ. ಈಗಲೂ ಅರಮನೆಯ ದೊಡ್ಡ ದ್ವಾರದ (ಜಯಮಾರ್ತಾಂಡ ದ್ವಾರ) ರೂಪದಲ್ಲಿ ಅಜರಾಮರನಾಗಿದ್ದಾನೆ. ಆನಂತರ ವಿಜಯಬಹದ್ದೂರ್, ರಾಮಪ್ರಸಾದ್, ನಂಜುಂಡ, ಐರಾವತ, ಮೋತಿಲಾಲ್, ರಾಜೇಂದ್ರ, ಬಿಳಿಗಿರಿ, ದ್ರೋಣ, ಬಲರಾಮ, ಅರ್ಜುನನ ನಂತರ ಅಭಿಮನ್ಯು ಈ ಸ್ಥಾನ ಅಲಂಕರಿಸಿದ್ದಾನೆ.

    ಕೆಲ ಆನೆಗಳ ಅಕಾಲಿಕ ಮರಣ

    ಇನ್ನು ದಸರೆಯಲ್ಲಿ ಪಾಲ್ಗೊಂಡು ವಿಶ್ವವಿಖ್ಯಾತಿಯಾಗಿದ್ದ ಆನೆಗಳ ಪೈಕಿ ಕೆಲ ಆನೆಗಳು ಅಕಾಲಿಕ ಮರಣಕ್ಕೆ ತುತ್ತಾಗಿ ಕಹಿ ಸುದ್ದಿ ನೀಡಿದ ಘಟನೆಗಳೂ ನಮ್ಮ ಕಣ್ಣಮುಂದಿವೆ. ಹೌದು. ಈ ಹಿಂದೆ ದ್ರೋಣ ಆನೆ ವಿದ್ಯುತ್‌ ದುರಂತದಿಂದ ಸಾವನ್ನಪ್ಪಿತ್ತು. 2023ರಲ್ಲಿ ಎಲ್ಲರ ಮನೆ ಮಾತಾಗಿದ್ದ ಅರ್ಜುನ ಆನೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹಾಸನದಲ್ಲಿ ಕಾಡಾನೆ ತಿವಿತದಿಂದ ಸಾವನ್ನಪ್ಪಿತ್ತು. ಕೋಟ್ಯಂತರ ಅಭಿಮಾನಿಗಳು ಅರ್ಜುನನ್ನ ನೆನೆದು ಕಣ್ಣೀರಿಟ್ಟಿದ್ದರು. ಇದೀಗ ಸರ್ಕಾರ ಅರ್ಜುನನ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನೂ ಘೋಷಣೆ ಮಾಡಿದೆ. ಇದಕ್ಕೆ ಒಂದು ವರ್ಷದ ಮುನ್ನವೇ ಅಂಬಾರಿ ಹೊರುವ ಆನೆಗಳ ಸಾಲಿನಲ್ಲಿದ್ದ ಗೋಪಾಲಕೃಷ್ಣ ಆನೆಯೂ ಅಯ್ಯಪ್ಪ ಎಂಬ ಆನೆ ಜೊತೆಗೆ ಕಾದಾಟ ನಡೆಸಿ ಸಾವನ್ನಪ್ಪಿತ್ತು. ದಸರೆ, ಗಜಪಯಣ ಬಂತೆಂದರೆ, ಆನೆ ಪ್ರಿಯರಿಗೆ ಇದು ಮರೆಯಲಾಗದ ಕಹಿ ಘಟನೆ.

    elephant gopalaswamy

    ಅಭಿಮನ್ಯು ನಂತರದ ಯಜಮಾನ ಯಾರು?

    ದಸರಾ ಪ್ರತಿ ವರ್ಷದ ನಾಡ ಹಬ್ಬ. ಮೈಸೂರು ದಸರಾವೆಂದರೆ ಅದು ಜಂಬೂ ಸವಾರಿಯೂ ಹೌದು. ಅಭಿಮನ್ಯು ನಿವೃತ್ತಿ ನಂತರ ಹಳೆ ತಲೆಮಾರಿನ ಆನೆಗಳ ಕೊಂಡಿ ಮುಗಿಯಲಿದೆ. ಬಳಿಕ ಹೊಸ ತಲೆಮಾರಿನ ಆನೆಗಳದ್ದೇ ಕಾಲ. 2026ರ ನಂತರ ಹೊಸ ಕ್ಯಾಪ್ಟನ್ ಬೇಕೇ ಬೇಕು. ಇದಕ್ಕಾಗಿ ಈಗಿನಿಂದಲೇ ಅರಣ್ಯ ಇಲಾಖೆ ತಯಾರಿಯನ್ನೂ ಮಾಡಿಕೊಂಡಿದೆ. ದಶಕದ ಹಿಂದೆಯಷ್ಟೆ ಸೆರೆ ಸಿಕ್ಕು ನಾಲೈದು ವರ್ಷದಿಂದ ದಸರಾಕ್ಕೆ ಬರುತ್ತಿರುವ ಆನೆಗಳಿಗೂ ಅಂಬಾರಿ ಹೊರುವ ಅವಕಾಶ ಸಿಗಲಿದೆ. ಇದರಲ್ಲಿ ಧನಂಜಯ, ಮಹೇಂದ್ರ, ಭೀಮಾ, ಗೋಪಿ, ಪ್ರಶಾಂತ, ಏಕಲವ್ಯ ಆನೆಗಳಿವೆ. ಇವುಗಳಲ್ಲಿ ಧನಂಜಯ ಇಲ್ಲವೇ ಮಹೇಂದ್ರಗೆ ಮುಂದಿನ ಅವಕಾಶ ಸಿಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

    ಅಂಬಾರಿ ಆನೆಗಳ ಸಿನಿಮಾ ನಂಟು

    ಹಲವು ಆನೆಗಳು ಅಂಬಾರಿ ಹೊತ್ತು ಹೆಸರುವಾಸಿಯಾಗಿವೆ. ಅಲ್ಲದೇ ಸಿನಿಮಾ ನಂಟನ್ನು ಹೊಂದಿರುವುದು ವಿಶೇಷ. ಹೌದು. ಐರಾವತ ಆನೆಯಂತು ಹಾಲಿವುಡ್‌ ಸಿನಿಮಾದಲ್ಲೇ ನಟಿಸಿ ಸೈ ಎನಿಸಿಕೊಂಡಿದೆ. 1935ರಲ್ಲಿ ತೆರೆ ಕಂಡ ʻದಿ ಎಲಿಫೆಂಟ್‌ ಬಾಯ್‌ʼ ಅನ್ನೋ ಚಿತ್ರದಲ್ಲಿ ನಟಿಸಿದ್ದ. ಇನ್ನೂ ಅಣ್ಣಾವ್ರ ಸೂಪರ್‌ ಹಿಟ್‌ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ರಾಜೇಂದ್ರ ಆನೆ. ಅಣ್ಣಾವ್ರ ಗಂಧದ ಗುಡಿ ಸಿನಿಮಾ ನೋಡುವಾಗೆಲ್ಲ ರಾಜೇಂದ್ರ ಕಣ್ಮುಂದೆ ಬರುತ್ತಾನೆ. ಇನ್ನೂ ಅಭಿಮನ್ಯು ಕೂಡ ವಿಶೇಷ ಸಾಕ್ಷ್ಯಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ದ್ರೋಣ ಆನೆಯೂ ಸ್ಟೋರ್ಡ್‌ ಆಫ್‌ ಟಿಪ್ಪು ಸುಲ್ತಾನ್‌ ಧಾರಾವಾಹಿಯಲ್ಲಿ ಕಾಣಿಸಿಕೊಂಡಿತ್ತು.

    ಹೀಗೆ ಮೈಸೂರು ದಸರಾದ ಮುಕುಟ ಮಣಿಗಳಂತೆ ಕಾಣಿಸಿಕೊಳ್ಳುವ ದಸರಾ ಆನೆಗಳ ಇತಿಹಾಸ ಅವಿಸ್ಮರಣೀಯವಾಗಿದೆ. ಆದ್ರೆ ಅಭಿಮನ್ಯು ನಂತರ ಯಾರಾಗಲಿದ್ದಾರೆ ಅಂಬಾರಿಯ ಸಾರಥಿ ಅನ್ನೋದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

    ಮೋಹನ ಬನ್ನಿಕುಪ್ಪೆ

  • Mysuru Dasara | ಜಂಬೂ ಸವಾರಿ ರೂಟ್‌ ಮ್ಯಾಪ್‌ ಹೇಗಿದೆ?

    Mysuru Dasara | ಜಂಬೂ ಸವಾರಿ ರೂಟ್‌ ಮ್ಯಾಪ್‌ ಹೇಗಿದೆ?

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಅಂಬಾವಿಲಾಸ ಅರಮನೆಯಲ್ಲಿ ಭರದ ಸಿದ್ಧತೆ ನಡೆದಿದೆ.

    ಈ ನಡುವೆ ಜಿಲ್ಲಾಡಳಿತ ಜಂಬೂ ಸವಾರಿ ಮಾರ್ಗವನ್ನ ಬದಲಾವಣೆ ಮಾಡಿದೆ. ಅರಮನೆ ಆವರಣದಲ್ಲಿ ಜಂಬೂ ಸವಾರಿ ಮಾರ್ಗ ಬದಲಾವಣೆ ಮಾಡಿದ್ದು, ಹೊಸ ಸಂಪ್ರದಾಯ ಆರಂಭಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

    ಪ್ರತಿ ಬಾರಿ ಅಂಬಾರಿ ಕಟ್ಟಿದ ನಂತರ ಆನೆ ನೇರವಾಗಿ ಪುಷ್ಪಾರ್ಚನೆಗೆ ಬಂದು ನಿಲ್ಲುತ್ತಿತ್ತು. ಆದ್ರೆ ಈ ಬಾರಿ ಪುಷ್ಪಾರ್ಚನೆಗೆ ಮೊದಲೇ ಸುಮಾರು 400 ಮೀಟರ್ ಸಂಚಾರ ಮಾಡುವಂತೆ ಪ್ಲಾನ್ ಮಾಡಲಾಗಿದೆ. ಅಂಬಾರಿ ಕಟ್ಟಿದ ನಂತರ ಅಭಿಮನ್ಯುವು ತ್ರಿನಯನೇಶ್ವರ ದೇವಸ್ಥಾನ ತಲುಪಿ, ಅಲ್ಲಿಂದ ಶ್ವೇತ ವರಹ ದೇವಸ್ಥಾನ ಬಳಿ ಸಾಗಿ ನಂತರ ಗಣ್ಯರ ಬಳಿ ಬಂದು ನಿಲ್ಲುತ್ತದೆ. ಹೀಗಾಗಿ ಗಣ್ಯರ ಪುಷ್ಪಾರ್ಚನೆಗೆ ಮುನ್ನವೇ 10 ಸಾವಿರಕ್ಕೂ ಹೆಚ್ಚು ಮಂದಿಗೆ ಅಂಬಾರಿಯಲ್ಲಿ ಅಲಂಕಾರ ಭೂಷಿತಳಾದ ತಾಯಿ ಚಾಮುಂಡಿ ದರ್ಶನ ಕೊಡಲಿದ್ದಾಳೆ.

    10 ರಿಂದ 15 ಸಾವಿರ ಆಸನ ವ್ಯವಸ್ಥೆ:
    ಇನ್ನೂ ಕೋವಿಡ್‌ ಸಮಯ ಹೊರತುಪಡಿಸಿ ಉಳಿದೆಲ್ಲ ವರ್ಷ ಜಂಬೂ ಸವಾರಿಗೆ ಅರಮನೆ ಆವರಣದಲ್ಲಿ 25 ರಿಂದ 30 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ 10 -15 ಸಾವಿರ ಹೆಚ್ಚುವರಿ ಆಸನಗಳ ವ್ಯವಸ್ಥೆಗೆ ಜಿಲ್ಲಾಡಳಿತ ಪ್ಲ್ಯಾನ್‌ ಮಾಡಿದೆ. ಹಾಗಾಗಿ 40 ಸಾವಿರ ಆಸನಗಳ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಮೆರವಣಿಗೆಯಲ್ಲಿ 9 ಆನೆಗಳು ಭಾಗಿ:
    ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಮೆರವಣಿಗೆಗೆ ಸಂಬಂಧಿಸಿದಂತೆ ಮಾತನಾಡಿರುವ ಡಿಸಿಎಫ್ ಪ್ರಭುಗೌಡ, ಕಳೆದ 50 ದಿನಗಳಿಂದ ಆನೆಗಳಿಗೆ ತಯಾರಿ ನೀಡಿದ್ದೇವೆ, ಯಾವುದೇ ಸಮಸ್ಯೆಗಳಿಲ್ಲ. ಯಶಸ್ವಿಯಾಗಿ ಜಂಬೂ ಸವಾರಿ ಮಾಡುವ ಕಾನ್ಪಿಡೆನ್ಸ್‌ನಲ್ಲಿದ್ದೇವೆ. ನಿನ್ನೆ ಸಂಜೆ ಕೂಡ ಮಾವುತ, ಕಾವಾಡಿಗರ ತಂಡದ ಜೊತೆ ಸಭೆ ಮಾಡಿದ್ದೇವೆ ಅವರೆಲ್ಲರೂ ಕೂಡ ಉತ್ಸಾಹದಲ್ಲಿದ್ದಾರೆ. 14 ಆನೆಗಳ ಪೈಕಿ 9 ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. 5 ಆನೆಗಳು ಮೀಸಲು ಆನೆಗಳಾಗಿರಲಿವೆ. ಇವು ಮೆರವಣಿಗೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ಶ್ರೀರಂಗಪಟ್ಟಣ ಜಂಬೂ ಸವಾರಿ ಮೆರವಣಿಗೆ ವೇಳೆ ಲಕ್ಷ್ಮಿ ಆನೆ ಗಲಿಬಿಲಿ ಆಗಿತ್ತು. ಅದು ಲಾರಿ ಹತ್ತೋಕೆ ಹಠ ಮಾಡಿತ್ತು. ಅದನ್ನ ಹೊರತು ಪಡಿಸಿದ್ರೆ ಜನ ನೋಡಿ ನಮ್ಮ ಆನೆಗಳು ಗಾಬರಿಯಾಗಲ್ಲ. ಆ ರೀತಿಯ ಯಾವುದೇ ತೊಂದರೆ ಇಲ್ಲ ಎಂದು ಡಿಸಿಎಫ್ ಪ್ರಭುಗೌಡ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • Mysuru Dasara | ನಾಡಿಗೆ ಬಂದು ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್‌ ಅಭಿಮನ್ಯು & ಟೀಂ

    Mysuru Dasara | ನಾಡಿಗೆ ಬಂದು ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್‌ ಅಭಿಮನ್ಯು & ಟೀಂ

    – ಬರೋಬ್ಬರಿ 5,820 ಕೆಜಿ ತೂಗಿದ ಅಭಿಮನ್ಯು
    – ಮಾಜಿ ಕ್ಯಾಪ್ಟನ್ ಅರ್ಜುನನ ಸ್ಥಾನಕ್ಕೇರಿದ ಧನಂಜಯ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾಗಿರುವ ದಸರಾ ಗಜಪಡೆಗೆ ಮಂಗಳವಾರ ತೂಕದ ಪರೀಕ್ಷೆ ಮಾಡಲಾಯ್ತು. ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳ ತೂಕ ಹಾಕಲಾಯ್ತು. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರೋ ಸಾಯಿರಾಂ ಅಂಡ್ ಕಂ ತೂಕ ಮಾಪನ ಕೇಂದ್ರದಲ್ಲಿ ಆನೆಗಳಿಗೆ ತೂಕ ಮಾಡಲಾತು. ಈ ತೂಕ ಪರೀಕ್ಷೆಯಲ್ಲಿ 3ನೇ ಬಾರಿಗೆ ಕ್ಯಾಪ್ಟನ್ ಅಭಿಮನ್ಯು ಟೀಂನ ಆನೆಗಳು ಭಾಗಿ ಆಗಿದ್ದವು. ಅಭಿಮನ್ಯು, ಭೀಮ, ಏಕಲವ್ಯ, ಲಕ್ಷ್ಮಿ, ವರಲಕ್ಷ್ಮಿ, ಕಂಜನ್, ಹಿರಣ್ಯ, ಗೋಪಿ, ಪ್ರಶಾಂತ, ಮಹೇಂದ್ರ ಸೇರಿ 14 ಆನೆಗಳು ಭಾಗಿ ಆಗಿದ್ದವು.

    ಇನ್ನೂ ದಸರೆ ಗಜಪಡೆಯ ಕ್ಯಾಪ್ಟನ್ ಮತ್ತು ಅಂಬಾರಿ ಹೊರಲಿರುವ ಅಭಿಮನ್ಯು ತೂಕದಲ್ಲೂ ಅಗ್ರಸ್ಥಾನ ಪಡೆದಿದ್ದಾನೆ. ಕಳೆದ ಬಾರಿ 5,560 ಕೆಜಿ ತೂಕ ಹೊಂದಿದ್ದ ಅಭಿಮನ್ಯು, ಈ ಬಾರಿಯೂ 5,820 ಕೆಜಿ ತೂಕ ಹೊಂದಿದ್ದಾನೆ. ಒಂದೇ ತಿಂಗಳ ಅಂತರದಲ್ಲಿ 260 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ – ಯಾರಿಗೆ ಗದ್ದುಗೆ?

    ದಸರೆ ಗಜಪಡೆಯ ತೂಕ ಹೀಗಿದೆ…
    ಕ್ಯಾಪ್ಟನ್ ಅಭಿಮನ್ಯು – 5,820 ಕೆಜಿ
    ಸುಗ್ರೀವ – 5,540 ಕೆಜಿ
    ಭೀಮ – 5,380 ಕೆಜಿ
    ಗೋಪಿ – 5,280 ಕೆಜಿ
    ಧನಂಜಯ – 5,255 ಕೆಜಿ
    ಪ್ರಶಾಂತ – 5,240 ಕೆಜಿ
    ಮಹೇಂದ್ರ – 5,150 ಕೆಜಿ
    ಏಕಲವ್ಯ – 5,095 ಕೆಜಿ
    ಕಂಜನ್ – 4,725 ಕೆಜಿ
    ರೋಹಿತ – 3,930 ಕೆಜಿ
    ದೊಡ್ಡಹರವೆ ಲಕ್ಷ್ಮಿ – 3,570 ಕೆಜಿ
    ವರಲಕ್ಷ್ಮಿ – 3,555 ಕೆಜಿ
    ಹಿರಣ್ಯ – 3,160 ಕೆಜಿ
    ಲಕ್ಷ್ಮಿ – 2,625 ಕೆಜಿ

    ಇನ್ನೂ ಈ ಬಾರಿ ಜಂಬೂಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಮುಂದೆ ಸಾಗಿದರೆ, ಅಭಿಮನ್ಯುಗೆ ಹಿರಣ್ಯ ಲಕ್ಷ್ಮಿ ಆನೆಗಳು ಕುಮ್ಕಿ ಆನೆಗಳಾಗಲಿವೆ. ನಿಶಾನೆ ಆನೆಯಾಗಿ ಧನಂಜಯ ಆಯ್ಕೆಯಾಗಿದ್ದಾನೆ. ನೌಫತ್ ಆನೆಯಾಗಿ ಗೋಪಿ ಆಯ್ಕೆ ಆಗಿದ್ದು, ಜಂಬೂಸವಾರಿಯಲ್ಲಿ 9 ಆನೆಗಳು ಭಾಗಿಯಾಗಲಿವೆ. ಇದನ್ನೂ ಓದಿ: ಕೋವಿಡ್ ಕಾಲದಲ್ಲಿ ಪಿಪಿಇ ಕಿಟ್ ಖರೀದಿ ಅಕ್ರಮ – ಕಿದ್ವಾಯಿ ಆಸ್ಪತ್ರೆಯ ಆರ್ಥಿಕ ಸಲಹೆಗಾರ ಅಮಾನತು

    ನವರಾತ್ರಿಯ 5ನೇ ದಿನವು ಅರಮನೆಯಲ್ಲಿ ಪೂಜಾಕೈಂಕರ್ಯ ನೆರವೇರಿಸಲಾಯ್ತು. ಅರಮನೆಯ ಪೂಜೆಯಲ್ಲಿ ಭಾಗಿಯಾದ ಪಟ್ಟ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಲಿಗೆ ಪೂಜೆ ಮಾಡಲಾಯ್ತು. ಪಟ್ಟದ ಆನೆ ಕಂಜನ್, ನಿಶಾನೆ ಆನೆಯಾಗಿರುವ ಭೀಮ ಪೂಜೆಯಲ್ಲಿ ಭಾಗಿ ಆಗಿದ್ದವು. ಇಂದು ಸಹ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸಲಾಯ್ತು.

    ರೈತರಿಗೆ ಪ್ರೋತ್ಸಾಹ ನೀಡಲು ಹಾಲು ಕರೆಯುವ ಸ್ಪರ್ಧೆ:
    ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ರೈತ ದಸರಾ ಸಮಿತಿಯಿಂದ ರೈತರಿಗೆ ಉತ್ತೇಜನ ನೀಡಲು ಹಾಲು ಕರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಮೈಸೂರಿನ ಜೆ.ಕೆ.ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ಬಂದ ಏಳು ಮಂದಿ ರೈತರು ತಮ್ಮ ಹಸುನಿನ ಜೊತೆ ಭಾಗಿ ಆಗಿದ್ರು. ಕಳೆದ ಬಾರಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗಿದೆ. ಈ ಹಾಲು ಕರೆಯುವ ಸ್ಪರ್ಧೆಯನ್ನು ಬೆಳಗ್ಗೆ ಮತ್ತು ಸಂಜೆ ವೇಳೆ ಎರಡುಹೊತ್ತು ನಡೆಸಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ 20 ನಿಮಿಷ ಹಾಲು ಕರೆಯಲು ಕಾಲಾವಕಾಶ ನೀಡಲಾಗುತ್ತದೆ. ಎರಡೂ ಸಮಯದಲ್ಲಿ ವೇಳೆ ಹೆಚ್ಚು ತೂಕದ ಹಾಲನ್ನು ಯಾರು ಕರೆಯುತ್ತಾರೋ ಅವರನ್ನು ವಿಜೇತರನ್ನಾಗಿ ಘೋಷಣೆ ಮಾಡಲಾಗುತ್ತದೆ. ಗೆದ್ದವರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ಬಹುಮಾನ ನೀಡಲಾಗುತ್ತದೆ.

    ಅರಮನೆ ಆವರಣದಲ್ಲಿ `ಯೋಗ’ ಸರಪಳಿ:
    ಮೈಸೂರು ದಸರೆ ಮಹೋತ್ಸವ ಐದೇ ದಿನಕ್ಕೆ ಕಾಲಿಟ್ಟಿದೆ. ಯೋಗ ದಸರಾ ಉಪ ಸಮಿತಿಯಿಂದ ಅರಮನೆ ಆವರಣದಲ್ಲಿ ಯೋಗ ಸರಪಳಿ ನಿರ್ಮಿಸಲಾಯಿತು. ಪ್ರಜಾಪ್ರಭುತ್ವಕ್ಕಾಗಿ ಯೋಗ ಸರಪಳಿ ಎಂಬ ಶೀರ್ಷಿಕೆ ಅಡಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಯೋಗಪಟುಗಳು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಂವಿಧಾನ ಪೀಠಿಕೆ ಬೋಧನೆಯ ಜೊತೆಗೆ ಪ್ರಜಾಪ್ರಭುತ್ವದ ಆಶಯಗಳನ್ನು ಸಾರುವ ಪ್ಲೇಕಾರ್ಡ್ ಪ್ರದರ್ಶನ ಮಾಡಿದರು. ಬಳಿಕ ವಿವಿಧ ಬಗೆಯ ಆಸನಗಳನ್ನು ಪ್ರದರ್ಶಿಸಿದ ಯೋಗಪಟುಗಳು ಎಲ್ಲರ ಗಮನ ಸೆಳೆದರು.

  • ದಸರಾ ಆನೆ ಸೊಂಡಿಲು, ದಂತ ಹಿಡಿದು ರೀಲ್ಸ್ – ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ

    ದಸರಾ ಆನೆ ಸೊಂಡಿಲು, ದಂತ ಹಿಡಿದು ರೀಲ್ಸ್ – ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ

    ಮೈಸೂರು: ದಸರಾ ಗಜಪಡೆಯನ್ನು ಮೈಸೂರಲ್ಲಿ (Mysuru Dasara) ಕೆಲವರು ತಮ್ಮ ರೀಲ್ಸ್ ಶೋಕಿಗೆ ಬಳಸಲು ಆರಂಭಿಸಿದ್ದಾರೆ. ಮೈಸೂರಿನ ಅರಮನೆ ಆವರಣಕ್ಕೆ ಪ್ರತಿದಿನವೂ ಹಲವು ಅನಾಮಿಕರು ಬಂದು ಆನೆ ಸೊಂಡಿಲು, ದಂತಗಳನ್ನು ಹಿಡಿದು ಪೋಸ್‌ ಕೊಡುತ್ತಾ ರೀಲ್ಸ್ ಮಾಡುತ್ತಿದ್ದಾರೆ.

    ಆನೆಗಳ ಮುಂದೆ ಫೋಟೊಶೂಟ್‌ಗಾಗಿ ಅರಣ್ಯ ಅಧಿಕಾರಿಗಳು ಅನುಮತಿ ಕೊಡುವ ಮೂಲಕ ಆನೆಗಳ ವಿಚಾರದಲ್ಲಿ ಅರಣ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿದಂತಿದೆ. ಮೊನ್ನೆಯಷ್ಟೆ ಎರಡು ಆನೆಗಳ ನಡುವೆ ಕಾಳಗ ನಡೆದು ಆತಂಕ ಸೃಷ್ಟಿಸಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತಂತೆ ಕಾಣುತ್ತಿಲ್ಲ.

    ಈ‌ ಹಿಂದೆ ಕೂಡ ಆನೆ ಮುಂದೆ ಫೋಟೋ ತೆಗೆದಿದ್ದರಿಂದ ಹಲವು ಅವಾಂತರ ಸೃಷ್ಟಿಯಾಗಿತ್ತು. ಆದರ, ಈಗ ಕೆಲವರ ರೀಲ್ಸ್ ಶೋಕಿಗೆ ದಸರಾ ಆನೆಗಳ ಬಳಕೆ ಹೆಚ್ಚಾಗಿದೆ. ಅರಣ್ಯ ಅಧಿಕಾರಿಗಳು ದುಡ್ಡಿಗೆ ಮಣಿದರಾ ಅಥವಾ ಒತ್ತಡಕ್ಕೆ ಮಣಿದರಾ ಎಂಬ ಪ್ರಶ್ನೆ ಮೂಡಿದೆ.

    ಆದರೆ, ದಿನ ನಿತ್ಯ ಅರಮನೆ ಆವರಣದ ಅನಾಮಿಕ ವ್ಯಕ್ತಿಗಳ ರೀಲ್ಸ್ ಶೋಕಿ ಮಾತ್ರ ಹೆಚ್ಚಾಗಿದೆ. ರೀಲ್ಸ್ ಹೆಸರಿನಲ್ಲಿ ಅರಣ್ಯ ಅಧಿಕಾರಿಗಳು ದುಡ್ಡು ಮಾಡುತ್ತಿದ್ದಾರೆ ಎಂಬ ಮಾತು ಜೋರಾಗಿದೆ.

  • Mysuru Dasara 2024 | 2ನೇ ತಂಡದ 5 ಆನೆಗಳು ಕಾಡಿನಿಂದ ನಾಡಿಗೆ

    Mysuru Dasara 2024 | 2ನೇ ತಂಡದ 5 ಆನೆಗಳು ಕಾಡಿನಿಂದ ನಾಡಿಗೆ

    ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2024) ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 2ನೇ ತಂಡದ 5 ಆನೆಗಳು ಗುರುವಾರ ಕಾಡಿನಿಂದ ನಾಡಿಗೆ ಹೊರಟಿವೆ.

    ಈ ಬಾರಿಯೂ ಅಭಿಮನ್ಯು ಕ್ಯಾಪ್ಟನ್‌ ಆಗಿದ್ದು, ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯು (Abhimanyu Elephant) ತಂಡಕ್ಕೆ ಗುರುವಾರ (ಇಂದು) ಮಹೇಂದ್ರ, ಸುಗ್ರೀವ, ಹಿರಣ್ಯ, ಲಕ್ಷ್ಮಿ ಮತ್ತು ಪ್ರಶಾಂತ ಆನೆಗಳು ಸೇರ್ಪಡೆಯಾಗಲಿವೆ. ಇದನ್ನೂ ಓದಿ: ರಾಜಮನೆತನ, ಸರ್ಕಾರ ಮಧ್ಯೆ ನಿಲ್ಲದ ಚಾಮುಂಡಿ ಪ್ರಾಧಿಕಾರ ಸಂಘರ್ಷ – ಮೊದಲ ಸಭೆಯಲ್ಲಿ ಏನೇನು ಚರ್ಚೆಯಾಗಿದೆ?

    ವೀರನಹೊಸಹಳ್ಳಿಯಲ್ಲಿ ಆ.21ರಂದು ವಿದ್ಯುಕ್ತವಾಗಿ ಆನೆಗಳಿಗೆ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ತಂಡದಲ್ಲಿ ಅಭಿಮನ್ಯು, ಗೋಪಿ, ಭೀಮ, ಧನಂಜಯ, ರೋಹಿತ, ಏಕಲವ್ಯ ಕಂಜನ್, ವರಲಕ್ಷ್ಮಿ ಮತ್ತು ದೊಡ್ಡ ಹರವೆ ಆನೆ ಶಿಬಿರದ ಲಕ್ಷ್ಮಿ ಆನೆಗಳು ಮೈಸೂರಿಗೆ ಆಗಮಿಸಿದ್ದವು. ಇದನ್ನೂ ಓದಿ: ಮುಡಾ ಸಂಕಷ್ಟದ ಹೊತ್ತಲ್ಲೇ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ

    ಸೆ.5ರ ಸಂಜೆ ಎರಡನೇ ಹಂತದಲ್ಲಿ 5 ಆನೆಗಳು ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿದ್ದು, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಹಿಂದಿನ ಆಯುಕ್ತರ ಅಮಾನತು ಆದೇಶವೇ ಸರ್ಕಾರಕ್ಕೆ ಸುಸೈಡ್ ನೋಟ್: ಶಾಸಕ ಶ್ರೀವತ್ಸ

    ಗಜಪಡೆಗೆ ಮರಳು ಮೂಟೆ ತಾಲೀಮು:
    ಈಗಾಗಲೆ ಅರಮನೆ ಅಂಗಳದಲ್ಲಿರುವ ಮೊದಲ ಬ್ಯಾಚ್‌ನ ಆನೆಗಳಿಗೆ ಮರಳು ಮೂಟೆ ಹೊರುವ ತಾಲೀಮು ನೀಡಲಾಗುತ್ತಿದೆ. ಅರಮನೆಯಿಂದ ಸಯ್ಯಾಜೀರಾವ್ ರಸ್ತೆ, ಆಯುವೇರ್ದಿಕ್ ವೃತ್ತದ ಮೂಲಕ ಜಂಬೂ ಬಜಾರ್ ತಲುಪಿ ಹೈವೇ ಸರ್ಕಲ್ ಮೂಲಕ ದಸರಾ ಗಜಪಡೆ ಬನ್ನಿಮಂಟಪ ತಲುಪಲಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ ತಾಲೀಮು ನಡೆಯುತ್ತಿದೆ.

  • ಮೈಸೂರು ದಸರಾ 2024| ಗಜಪಡೆಗೆ ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು

    ಮೈಸೂರು ದಸರಾ 2024| ಗಜಪಡೆಗೆ ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು

    ಮೈಸೂರು: ದಸರಾ (Dasara 2024) ಗಜಪಡೆಗೆ (Dasara Elephants) ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು ಆರಂಭಗೊಂಡಿದೆ.

    ಮರಳು ಮೂಟೆ ಹೊರಿಸುವ ಮೂಲಕ ಜಂಬೂ ಸವಾರಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮರಳು ಮೂಟೆ ಹೊರಿಸುವ ಮುನ್ನ ಕೋಡಿ ಸೋಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದಸರಾ ಗಜಪಡೆಗೆ, ಗಾದಿ, ನಮ್ದಾ, ತೊಟ್ಟಿಲು, ಹಗ್ಗ ಹಾಗೂ ಮರಳು ಮೂಟೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

    ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಲಕ್ಷ್ಮೀ ಹಾಗೂ ವರಲಕ್ಷ್ಮೀ ಆನೆಗಳಿಗೆ ಸಾಂಕೇತಿಕವಾಗಿ ಡಿಸಿಎಫ್ ಡಾ.ಐ.ಬಿ ಪ್ರಭುಗೌಡ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.

    ಇದರೊಂದಿಗೆ ಗಜಪಡೆಗೆ ವಾಕಿಂಗ್ ಮಾಡಿಸಲಾಗುತ್ತದೆ. ಅರಮನೆಯಿಂದ ಸಯ್ಯಾಜೀರಾವ್ ರಸ್ತೆ, ಆಯುವೇರ್ದಿಕ್ ವೃತ್ತದ ಮೂಲಕ ಜಂಬೂ ಬಜಾರ್ ತಲುಪಿ ಹೈವೇ ಸರ್ಕಲ್ ಮೂಲಕ ದಸರಾ ಗಜಪಡೆ ಬನ್ನಿಮಂಟಪ ತಲುಪಲಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ ತಾಲೀಮು ನಡೆಯಲಿದೆ. ಜಂಬೂಸವಾರಿಯ ದಿನ ಯಾವುದೇ ತೊಂದರೆಯಾಗದಿರಲಿ ಎಂದು ತಾಲೀಮು ನಡೆಸಲಾಗುತ್ತಿದೆ.