Tag: Darling Krishna

  • ಲವ್ ಮಾಕ್‍ಟೇಲ್-2 ಮೂಲಕ ಮತ್ತೆ ಕಿಕ್ಕೇರಿಸಲಿದ್ದಾರೆ ಡಾರ್ಲಿಂಗ್ ಕೃಷ್ಣ

    ಲವ್ ಮಾಕ್‍ಟೇಲ್-2 ಮೂಲಕ ಮತ್ತೆ ಕಿಕ್ಕೇರಿಸಲಿದ್ದಾರೆ ಡಾರ್ಲಿಂಗ್ ಕೃಷ್ಣ

    ಬೆಂಗಳೂರು: ಡಾರ್ಲಿಂಗ್ ಕೃಷ್ಣ ಅವರು ಬೇರೆ ನಿರ್ದೇಶಕರು ನಿರ್ಮಾಪಕರ ಬಳಿ ಕೆಲಸ ಮಾಡುವುದಕ್ಕಿಂತ ತಮ್ಮದೇಯಾದ ಸಿನಿಮಾ ಮಾಡುವಲ್ಲಿ ನಿರತರಾಗಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಇತ್ತೀಚೆಗಷ್ಟೇ ತಮಗೆ ಮೂರ್ನಾಲ್ಕು ಕಥೆಗಳು ಹೊಳೆದಿವೆ ಯಾವುದನ್ನು ಸಿನಿಮಾ ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಹೇಳಿದ್ದರು. ಇದೀಗ ಇದ್ದಕ್ಕಿದ್ದಂತೆ ಮತ್ತೊಂದು ಅಚ್ಚರಿಯ ಸುದ್ದಿಯನ್ನು ಹರಿಬಿಟ್ಟಿದ್ದಾರೆ.

    ಈಗಾಗಲೇ ಎರಡ್ಮೂರು ಕಥೆಗಳಿರುವ ಕುರಿತು ಈ ಹಿಂದೆ ಹೇಳಿಕೊಂಡಿದ್ದ ಡಾರ್ಲಿಂಗ್ ಕೃಷ್ಣ ಇದೀಗ ಮತ್ತೊಂದು ಹೊಸ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಕೇವಲ ಬಿಚ್ಚಿಟ್ಟಿರುವುದು ಮಾತ್ರವಲ್ಲ ಈ ನಿಟ್ಟಿನಲ್ಲಿ ಈಗಾಗಲೇ ಸ್ಕ್ರಿಪ್ಟ್ ಬರೆಯುವುದರಲ್ಲಿ ನಿರತಾಗಿದ್ದಾರೆ. ಲವ್ ಮಾಕ್‍ಟೇಲ್ ಸಿನಿಮಾ ಥೀಯೇಟರ್‍ನಲ್ಲಿ 45 ದಿನಗಳ ಕಾಲ ಪ್ರದರ್ಶನ ಕಂಡರೆ, ಆ್ಯಪ್ ಆಧಾರಿತ ಜಾಲತಾಣಗಳಲ್ಲಿ ಇನ್ನೂ ಕಿಕ್ಕೇರಿಸುತ್ತಿದೆ.

    ಅಮೇಜಾನ್ ಪ್ರೈಮ್‍ನಂತಹ ಜಾಲತಣಗಳಲ್ಲಿ ಸಿನಿಮಾ ನೋಡುತ್ತಿರುವ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಲ್ಲದೆ ಸಿನಿಮಾ ನೋಡಿದ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ, ಸಿನಿಮಾ ಸೂಪರ್ ಆಗಿದೆ ನನಗೆ ಥೀಯೇಟರ್‍ನಲ್ಲಿ ನೋಡಲು ಸಾಧ್ಯವಾಗಲಿಲ್ಲ ಆ್ಯಪ್‍ನಲ್ಲಿ ನೋಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ 200 ರೂ.ಹಣವನ್ನು ಸಹ ನಿರ್ಮಾಪಕ ಡಾರ್ಲಿಂಗ್ ಕೃಷ್ಣಾ ಅವರ ಖಾತೆಗೆ ಹಾಕಿದ್ದಾರೆ. ಅಭಿಮಾನಿಯ ಪ್ರೀತಿ ಕಂಡ ಡಾರ್ಲಿಂಗ್ ಕೃಷ್ಣ ಫಿದಾ ಆಗಿದ್ದಾರೆ.

    ಸಿನಿಮಾ ನೋಡಿದ ಅಭಿಮಾನಿಗಳು ಲವ್ ಮಾಕ್‍ಟೇಲ್ ಮತ್ತಿನಲ್ಲಿದ್ದು, ಡಾರ್ಲಿಂಗ್ ಕೃಷ್ಣ ಸಹ ಅದೇ ಗುಂಗಿನಲ್ಲಿದ್ದಾರೆ. ಹೀಗಾಗಿ ಅವರ ಹೊಸ ಪ್ರಾಜೆಕ್ಟ್ ಹೆಸರು ಲವ್ ಮಾಕ್ಟೇಲ್-2 ಎಂದು ತಿಳಿದು ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶೀರ್ಷಿಕೆಯ ನೋಂದಣಿಯನ್ನೂ ಮಾಡಿಸಿದ್ದಾರೆ. ಅದಕ್ಕೆ ‘ಲವ್ ಮಾಕ್‍ಟೇಲ್-2’ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗಿದೆ. ‘ಲವ್ ಮಾಕ್‍ಟೇಲ್’ ಚಿತ್ರದ ಯಶಸ್ಸಿಗೆ ಕಾರಣಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಅವರು, ಅದೇ ಸಿನಿಮಾದ ಕಥೆಯನ್ನು ಮುಂದುವರಿಸಲು ಯೋಚಿಸಿದ್ದಾರಂತೆ. ಮೊದಲ ಸಿನಿಮಾವನ್ನು ಪಯಣದ ರೂಪದಲ್ಲಿ ಅವರು ತೋರಿಸಿದ್ದರು. ಅದೇ ಜರ್ನಿಯನ್ನು ಅವರು ಮುಂದುವರಿಸಲು ನಿರ್ಧರಿಸಿದ್ದಾರಂತೆ.

    ಚಿತ್ರದ ಅಂತ್ಯದಲ್ಲಿ ನಿಧಿಮಾ ನೆನಪಲ್ಲಿಯೇ ಇರುವುದಾಗಿ ‘ಆದಿ’ ಹೇಳುತ್ತಾನೆ. ಆತನ ಜೊತೆಗೆ ಪ್ರಯಾಣದಲ್ಲಿ ಜತೆಗೂಡಿ ಕಥೆ ಕೇಳಿದ ಯುವತಿಗೂ ಆತನ ಮೇಲೆ ಪ್ರೀತಿ ಮೂಡಿರುತ್ತದೆ. ಈ ಪ್ರೇಮ ಕಥನದ ಪಯಣ ಮತ್ತೆ ಮುಂದುವರಿಯಲಿದೆ. ಕಥೆಯನ್ನು ಮತ್ತೊಂದು ಮಗ್ಗುಲಲ್ಲಿ ಕೊಂಡೊಯ್ಯಲು ಕೃಷ್ಣ ಅವರಿಗೆ ಐಡಿಯಾ ಸಿಕ್ಕಿದೆಯಂತೆ. ಹೀಗಾಗಿ ಲವ್ ಮಾಕ್‍ಟೇಲ್-2 ಮೂಲಕ ಕೃಷ್ಣ ಮತ್ತಷ್ಟು ಪ್ರೇಮ ಕಥನಗಳನ್ನು ಬಿಚ್ಚಡಲಿದ್ದಾರೆಯೇ ಕಾದು ನೋಡಬೇಕಿದೆ.

    ಈ ಸಿನಿಮಾ ಯಾವಾಗ ಶುರುವಾಗಲಿದೆ, ಯಾರು ನಿರ್ಮಿಸಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಸದ್ಯಕ್ಕೆ ಕೃಷ್ಣ ಕಥೆ ಹೆಣೆಯುವುದರಲ್ಲಿ ಮಗ್ನರಾಗಿದ್ದಾರಂತೆ. ಚಿತ್ರ ನಿರ್ಮಿಸಲು ಬೇರೆ ನಿರ್ಮಾಪಕರು ಮುಂದೆ ಬಂದು, ಕೃಷ್ಣ ನಿರ್ದೇಶನ ಮಾಡುವ ಸಾಧ್ಯತೆಯೂ ಇದೆ. ಕಥೆ ಸಿದ್ಧವಾದ ಕೂಡಲೇ ಚಿತ್ರೀಕರಣ ಆರಂಭಿಸಲು ಅವರು ಯೋಚಿಸಿದ್ದಾರೆ ಎನ್ನಲಾಗಿದೆ.

    ಆದರೆ ಬೇಸರದ ಸಂಗತಿ ಎಂದರೆ ಪ್ರೇಕ್ಷಕರಿಗೆ ಅಪ್ಯಾಯಮಾನವಾಗಿರುವ ನಿಧಿಮಾ ಪಾತ್ರ ಇಲ್ಲದಿರುವುದು. ಈ ಸಿನಿಮಾದ ಮೂಲ ಕೇಂದ್ರ ಬಿಂದುವೇ ನಿಧಿಮಾ ಪಾತ್ರ ಸಿನಿಮಾ ನೋಡಿದ ಯುವಕರು ನಿಧಿಮಾಳತಹ ಪತ್ನಿ ಸಿಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಅಷ್ಟರಮಟ್ಟಿಗೆ ಈ ಪಾತ್ರ ಹುಚ್ಚು ಹಿಡಿಸಿದೆ. ಆದರೆ ನಿಧಿಮಾ ತೀರಿ ಹೋಗಿದ್ದರಿಂದ ಈ ಪಾತ್ರ ಸಹ ಮುಗಿದಿದೆ. ಹೀಗಾಗಿ ಪಾರ್ಟ್-2 ನಲ್ಲಿ ಯಾವ ರೀತಿಯ ಇಂಟರೆಸ್ಟಿಂಗ್ ಪಾತ್ರವನ್ನು ಡಾರ್ಲಿಂಗ್ ಕೃಷ್ಣ ಸೃಷ್ಟಿಸಲಿದ್ದಾರೆ. ಮಿಲನಾ ನಾಗರಾಜ್ ಮುಂದಿನ ಭಾಗದಲ್ಲಿ ನಟಿಸುತ್ತಾರಾ, ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ, ಅಥವಾ ಮುಂದಿನ ಭಾಗದಲ್ಲಿ ಅವರು ಇರುವುದಿಲ್ಲವಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಇದಕ್ಕೆ ಡಾರ್ಲಿಂಗ್ ಕೃಷ್ಣ ಅವರೇ ಉತ್ತರಿಸಬೇಕಿದೆ.

     

  • ಮೋಡಿ ಮಾಡುವ ತಯಾರಿಯಲ್ಲಿ ಡಾರ್ಲಿಂಗ್ ಕೃಷ್ಣ

    ಮೋಡಿ ಮಾಡುವ ತಯಾರಿಯಲ್ಲಿ ಡಾರ್ಲಿಂಗ್ ಕೃಷ್ಣ

    ಬೆಂಗಳೂರು: ಲವ್ ಮಾಕ್ಟೇಲ್ ಮೂಲಕ ಸಿನಿಮಾಸಕ್ತರಲ್ಲಿ ಮತ್ತು ತರಿಸಿರುವ ನಟ ನಿರ್ದೇಶಕ ಡಾರ್ಲಿಂಗ್ ಕೃಷ್ಣಾ ತಮ್ಮ ಮುಂದಿನ ಯೋಜನೆ ಕುರಿತು ಮಾತನಾಡಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಯಶಸ್ವಿ ಕಂಡಿದ್ದು, ವಿಭಿನ್ನ ಕಥಾ ಹಂದರದ ಮೂಲಕ ಡಾರ್ಲಿಂಗ್ ಕೃಷ್ಣ ಮನೆಮಾತಾಗಿದ್ದಾರೆ. ಇದೀಗ ಮತ್ತೆ ತಾವೇ ಚಿತ್ರಕಥೆ, ನಿರ್ದೇಶನ ಮಾಡಲು ಮುಂದಾಗಿದ್ದಾರೆ.

    ಸಿನಿಮಾ ಬಿಡುಗಡೆಯಾಗಿ ವಾರದ ನಂತರ ಒಂದೇ ಚಿತ್ರ ಮಂದಿರದಲ್ಲಿ ಇತ್ತು. ಇದರಿಂದ ಕೃಷ್ಣ ತೀವ್ರ ಆತಂಕಗೊಂಡಿದ್ದರು. ನಂತರದ ದಿನಗಳಲ್ಲಿ ಥೀಯೇಟರ್‍ಗಳು ಸಿಗಲು ಆರಂಭಿಸಿದವೂ ಅಷ್ಟೇ ಆಸಕ್ತಿಯಿಂದ ಪ್ರೇಕ್ಷಕರು ಸಹ ಬರಲಾರಂಭಿಸಿದರು. ಹೀಗಾಗಿ ಮಾಲ್‍ಗಳಲ್ಲಿಯೂ ಭರ್ಜರಿ ಮೂರು, ನಾಲ್ಕು ಪ್ರದರ್ಶನಗಳನ್ನು ಕಾಣಲು ಪ್ರಾರಂಭಿಸಿತು. ಹೀಗೆ ಥೀಯೇಟರ್‍ಗಳು ಹೆಚ್ಚಾಗುತ್ತಾ, ಲವ್ ಮಾಕ್ಟೇಲ್ ಹೌಸ್ ಫುಲ್ ಪ್ರದರ್ಶನ ಕಾಣಲು ಪ್ರಾರಂಭಿಸಿತು. ಜನವರಿ 31ರಂದು ತೆರೆಕಂಡ ಲವ್ ಮಾಕ್ಟೇಲ್ ಮೋಡಿ ಈಗಲೂ ಮುಂದುವರಿದಿದ್ದು, ಸತತ ಐದು ವಾರಗಳಿಂದ ಯಶಸ್ಸು ಕಾಣುತ್ತಿದೆ. ಈ ಚಿತ್ರಕ್ಕೆ ಸ್ವತಃ ಡಾರ್ಲಿಂಗ್ ಕೃಷ್ಣ ಅವರೇ ಬಂಡವಾಳ ಹಾಕಿ, ತಾವೇ ನಿರ್ದೇಶಿಸುವ ಸಾಹಸ ಮಾಡಿದ್ದರು. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ ಕೂಡ. ಅದಕ್ಕೆ ಸಾಕ್ಷಿಯೇ ಚಿತ್ರದ ಸಕ್ಸಸ್.

    ಲವ್ ಮಾಕ್ಟೇಲ್ ಗುಂಗಲ್ಲೇ ಇರುವ ಪ್ರೇಕ್ಷಕರಿಗೆ ಇದೀಗ ನಟ ಡಾರ್ಲಿಂಗ್ ಕೃಷ್ಣ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಅವರೂ ಸಹ ಇನ್ನೂ ಲವ್ ಮಾಕ್ಟೇಲ್ ಗುಂಗಲ್ಲೇ ಇದ್ದು, ಇದರ ಮಧ್ಯೆ ಈಗಾಗಲೇ ಅವರಿಗೆ ಎರಡ್ಮೂರು ಕಥೆಗಳು ತಲೆಗೆ ಬಂದಿವೆಯಂತೆ. ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂದು ತಲೆ ಕೆಡಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಇದೀಗ ಎರಡ್ಮೂರು ಕಥೆಗಳು ಹೊಳೆದಿವೆ, ಆದರೆ ಯಾವುದಕ್ಕೆ ಸಿನಿಮಾ ರೂಪ ನೀಡುವುದು ಎಂಬ ಗೊಂದಲದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

    ಸಿನಿಮಾ ಆಯ್ಕೆ ಮಾಡಿಕೊಳ್ಳುವುದು ಹಾಗೂ ನಿರ್ದೇಶಿಸುವುದರ ಕುರಿತು ತುಂಬಾ ಜಾಗೃತಿ ವಹಿಸಬೇಕಾಗಿದೆ. ಏಕೆಂದರೆ ಲವ್ ಮಾಕ್ಟೇಲ್ ಸಿನಿಮಾ ಮಾಡುವಾಗ ನಿರೀಕ್ಷೆಗಳು ಇರಲಿಲ್ಲ. ಆದರೆ ಇದೀಗ ನನ್ನ ಮೇಲೆ ನಿರೀಕ್ಷೆ ಹೆಚ್ಚಿದೆ. ಹೀಗಾಗಿ ಎಚ್ಚರಿಕೆಯಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ಅಲ್ಲದೆ ಬೇರೆ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಕಥೆಗಳನ್ನು ಕೇಳುತ್ತಿದ್ದೇನೆ, ಚೆನ್ನಾಗಿದ್ದರೆ ಖಂಡಿತ ನಟಿಸುತ್ತೇನೆ ಎಂದಿದ್ದಾರೆ.

    ಇನ್ನೂ ವಿಶೇಷ ಎಂದರೆ ಕನ್ನಡದಲ್ಲಿ ಯಶಸ್ವಿಯಾಗಿರುವ ಲವ್ ಮಾಕ್ಟೇಲ್ ಚಿತ್ರಕ್ಕೆ ಹಿಂದಿ, ತೆಲುಗು ಹಾಗೂ ತಮಿಳಿನಿಂದ ರಿಮೇಕ್ ಹಕ್ಕುಗಳಿಗೆ ಬೇಡಿಕೆ ಬಂದಿದೆಯಂತೆ. ಈ ಖುಷಿ ವಿಚಾರವನ್ನು ಸಹ ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ. ಅಲ್ಲದೆ ಲವ್ ಮಾಕ್ಟೇಲ್ ಸಕ್ಸಸ್ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ನೈಜ ಪ್ರೇಮ ಕಥೆ ಕುರಿತು ಸಹ ಹಂಚಿಕೊಂಡರು. ಇವರಿಬ್ಬರ ಈ ನೈಜ ಕೆಮಿಸ್ಟ್ರಿಯೇ ಸಿನಿಮಾ ಯಶಸ್ಸಿಗೂ ಕಾರಣ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

    ಡಾರ್ಲಿಂಗ್ ಕೃಷ್ಣ ಸದ್ಯ `ಲೋಕಲ್ ಟ್ರೇನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಇದು ಕಾಲೇಜಿನಲ್ಲಿ ನಡೆಯುವ ಪ್ರೀತಿಯ ಕಥಾ ಹಂದರವನ್ನು ಹೊಂದಿದೆಯಂತೆ. ಹಾಗೆಯೇ `ವರ್ಜಿನ್’ ಚಿತ್ರದ ಚಿತ್ರೀಕರಣ ಸಹ ನಡೆಯುತ್ತಿದ್ದು, ಇದು ಕಾಲೇಜು ನಂತರದ ಜೀವನದಲ್ಲಿ ನಡೆಯುವ ಪ್ರೀತಿಯ ಕಥೆಯನ್ನು ಹೊಂದಿದೆಯಂತೆ. ಈ ಎಲ್ಲದರ ಮಧ್ಯೆ ಕೃಷ್ಣ ಅವರು ತಮ್ಮಲ್ಲಿರುವ ಕಥೆಯನ್ನು ಸಿನಿಮಾ ಮಾಡುವ ಕುರಿತು ಸಹ ಚಿಂತನೆ ನಡೆಸಿದ್ದಾರೆ.

  • ಗಾಸಿಪ್‍ಗಳಿಗೆ ತೆರೆ- ಮಿಲನಾ ನಾಗರಾಜ್ ಕೈ ಹಿಡಿಯಲಿದ್ದಾರೆ ಡಾರ್ಲಿಂಗ್ ಕೃಷ್ಣ

    ಗಾಸಿಪ್‍ಗಳಿಗೆ ತೆರೆ- ಮಿಲನಾ ನಾಗರಾಜ್ ಕೈ ಹಿಡಿಯಲಿದ್ದಾರೆ ಡಾರ್ಲಿಂಗ್ ಕೃಷ್ಣ

    ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಸಾಲು ಸಾಲಾಗಿ ನಟ-ನಟಿಯರ ಮದುವೆ ನಡೆಯುತ್ತಿದೆ. ನಟ ನಿಖಿಲ್ ಕುಮಾರಸ್ವಾಮಿ ನಿನ್ನೆಯಷ್ಟೇ ತನ್ನ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದು, ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟ ಹಸೆಮಣೆ ಏರಲು ಸಜ್ಜಾಗಿದ್ದಾರೆ.

    ಹೌದು. ಕೃಷ್ಣ ಅವರ ಮೊದಲ ಹೆಸರು ಸುನಿಲ್ ಕುಮಾರ್. ಕೃಷ್ಣ ರುಕ್ಮಿಣಿ ಎಂಬ ಧಾರಾವಾಹಿ ಮೂಲಕ ನಟನಾಕ್ಷೇತ್ರಕ್ಕೆ ಕಾಲಿಟ್ಟು, ಮದರಂಗಿ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಡಾರ್ಲಿಂಗ್ ಕೃಷ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಈ ಮೂಲಕ ಬಹುದಿನಗಳಿಂದ ಕೇಳಿಬರುತ್ತಿದ್ದ ಗಾಸಿಪ್ ಗಳಿಗೆ ತೆರೆಬಿದ್ದಿದೆ.

    ಕೆಲ ದಿನಗಳ ಹಿಂದೆ ನಟಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಬಗ್ಗೆ ಕೆಲವೊಂದು ಗಾಸಿಪ್ ಗಳು ಹರಿದಾಡುತ್ತಿದ್ದವು. ಆದರೆ ಇಬ್ಬರೂ ಈ ಬಗ್ಗೆ ಒಪ್ಪಿಕೊಂಡಿರಲಿಲ್ಲ. ಇದೀಗ ತಮ್ಮ ಪ್ರೀತಿಯ ಬಗ್ಗೆ ಇಬ್ಬರೂ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟನೆಯ ‘ಲವ್ ಮಾಕ್ಟೇಲ್’ ಚಿತ್ರ ಇತ್ತೀಚೆಗೆ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಂಡಿದೆ. ಈ ಯಶಸ್ಸಿನ ಸಂಭ್ರಮದ ಬೆನ್ನಲ್ಲೇ ಜೋಡಿ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದೆ.

    ಸಿನಿಮಾ ಚಟುವಟಿಕೆಗಳಲ್ಲಿ ಜೊತೆಯಾಗಿಯೇ ಪಾಲ್ಗೊಳ್ಳುತ್ತಿದ್ದ ಇಬ್ಬರ ಮಧ್ಯೆ ಉತ್ತಮ ಒಡನಾಟವಿತ್ತು. ಇವರಿಬ್ಬರು ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಮೊದಲು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಇತ್ತೀಚೆಗೆ ಬಿಡುಗಡೆಯಾದ ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿಯೂ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿ ಜರ್ನಿಯೇ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲು ಕಾರಣವಾಗಿದ್ಯಂತೆ.

    ಮೊದ್ಲು ಪ್ರಪೋಸ್ ಮಾಡಿದ್ದೇ ಕೃಷ್ಣ:
    ಡಾರ್ಲಿಂಗ್ ಕೃಷ್ಣ ತನ್ನ ಮನದ ಬಯಕೆಯನ್ನು ಮಿಲನಾ ಬಳಿ ಹಂಚಿಕೊಳ್ಳುತ್ತಿದ್ದಂತೆಯೇ ಇಬ್ಬರ ಮನೆಯಲ್ಲೂ ಮದುವೆ ಮಾತುಕತೆ ನಡೆದೇ ಹೋಗಿತ್ತು. ಆದರೆ ಈ ವಿಚಾರ ಆಪ್ತರು ಹಾಗೂ ಕುಟುಂಬದ ಸದಸ್ಯರಿಗೆ ಮಾತ್ರ ತಿಳಿದಿತ್ತೇ ವಿನಃ ಜೋಡಿ ಈ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ.

    ಇದೀಗ ತಮ್ಮ ‘ಲವ್ ಮಾಕ್ಟೇಲ್’ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ಅವರು ಸುದ್ದಿಗೋಷ್ಠಿ ನಡೆಸಿದಾಗ ತಮ್ಮ ಪ್ರೀತಿಯನ್ನು ಬಹಿರಂಗ ಪಡಿಸಿದ್ದಾರೆ. ಸದ್ಯ ಈ ಇಬ್ಬರಿಗೂ ಎಲ್ಲರೂ ಶುಭ ಕೋರುತ್ತಿದ್ದು, ಆದರೆ ಮದುವೆ ಯಾವಾಗ ಎಂಬುದು ಇನ್ನೂ ನಿಗದಿಯಾಗಿಲ್ಲ.

    ಒಟ್ಟಿನಲ್ಲಿ ಈ ಜೋಡಿ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದ್ದು, ‘ನಮ್ಮಿಬ್ಬರ ನಡುವೆ ಆತ್ಮೀಯತೆ ಇದ್ದುದರಿಂದಲೇ ‘ಲವ್ ಮಾಕ್ಟೇಲ್’ ಸಿನಿಮಾವನ್ನು ಜೊತೆಯಾಗಿ ಮಾಡಲು ಸಾಧ್ಯವಾಯಿತು. ಸದ್ಯ ನಾವಿಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೇವೆ. ಹೀಗಾಗಿ ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅಲ್ಲದೆ ಮತ್ತೆ ಜೊತೆಯಾಗಿ ಸಿನಿಮಾ ಮಾಡುವ ಬಗ್ಗೆಯೂ ಸದ್ಯಕ್ಕೆ ಯಾವುದೇ ಪ್ಲಾನ್ ಮಾಡಿಲ್ಲ’ ಎಂದು ಮಿಲನಾ ತಿಳಿಸಿದ್ದಾರೆ.

  • ಕಿಚ್ಚನ ಮನಸ್ಸಿಗೂ ಹಿಡಿಸಿದ ‘ಲವ್ ಮಾಕ್ಟೇಲ್’!

    ಕಿಚ್ಚನ ಮನಸ್ಸಿಗೂ ಹಿಡಿಸಿದ ‘ಲವ್ ಮಾಕ್ಟೇಲ್’!

    ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಅಭಿನಯಿಸಿರುವ ‘ಲವ್ ಮಾಕ್ಟೇಲ್’ ಚಿತ್ರ ಬಿಡುಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕ ಪ್ರಭು ಚಿತ್ರಕ್ಕೆ ಜೈಕಾರ ಹಾಕಿದ್ದಾನೆ.

    ಸಿನಿಮಾ ಗೆದ್ದ ಖುಷಿಯಲ್ಲಿರೋ ಚಿತ್ರತಂಡಕ್ಕೆ ಈಗ ಡಬಲ್ ಸೆಲೆಬ್ರೇಷನ್ ಮಾಡೋ ಸಮಯ ಕೂಡ ಸಿಕ್ಕಿದೆ. ಅದಕ್ಕೆ ಕಾರಣ ಕಿಚ್ಚ ಸುದೀಪ್. ಯಾವುದೇ ಚಿತ್ರ ಇರಲಿ ಚಿತ್ರದ ಬಗ್ಗೆ ಒಳ್ಳೆಯ ಟಾಕ್ ಕೇಳಿ ಬಂದ್ರೆ ಸಾಕು ಆ ಚಿತ್ರದ ಬಗ್ಗೆ ನಾಲ್ಕು ಸಾಲು ಬರೆದು ಪೋತ್ಸಾಹಿಸೋದು ಕಿಚ್ಚನ ದೊಡ್ಡಗುಣ. ಇದೀಗ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ ‘ಲವ್ ಮಾಕ್ಟೇಲ್’ ಚಿತ್ರವನ್ನು ಕಿಚ್ಚ ಸುದೀಪ್ ನೋಡಿ ಮೆಚ್ಚಿಕೊಂಡಿದ್ದಾರೆ.

    ಕೇವಲ ಮೆಚ್ಚಿಕೊಂಡಿಲ್ಲ ಕೃಷ್ಣನ ಪ್ರಯತ್ನಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಬಗ್ಗೆ ಅನಿಸಿಕೆ ಹಂಚಿಕೊಂಡು ಸಾಥ್ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನ ಕಾಣುತ್ತಿರುವ ಸಂತಸದಲ್ಲಿರುವ ಡಾರ್ಲಿಂಗ್ ಕೃಷ್ಣ ಆ್ಯಂಡ್ ಟೀಂಗೆ ಕಿಚ್ಚನ ಮಾತುಗಳು ಆ ಖುಷಿಯನ್ನು ದುಪ್ಪಟ್ಟು ಮಾಡಿದೆ.

    ನಿನ್ನೆ ಬಿಡುಗಡೆಯಾಗಿರುವ ‘ಲವ್ ಮಾಕ್ಟೇಲ್’ ಚಿತ್ರ ಎಲ್ಲಾ ಕಡೆಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡು ಗೆಲುವಿನ ನಗೆ ಬೀರಿದೆ. ಇದೀಗ ಚಿತ್ರದ ಆರಂಭದಿಂದಲೂ ಸಾಥ್ ನೀಡಿದ್ದ ಅಭಿನಯ ಚಕ್ರವರ್ತಿ ಸುದೀಪ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿರೋದು ಇಡೀ ‘ಲವ್ ಮಾಕ್ಟೇಲ್’ ಚಿತ್ರತಂಡಕ್ಕೆ ಸಂತಸ ನೀಡಿದೆ. ಈ ಚಿತ್ರದ ಗೆಲುವು ಡಾರ್ಲಿಂಗ್ ಕೃಷ್ಣ ಸಿನಿ ಕರಿಯರ್‍ಗೆ ಬಿಗ್ ಬ್ರೇಕ್ ನೀಡಿದೆ.

  • ಹೃದಯ ತಟ್ಟುವ ಚಿತ್ರ ‘ಲವ್ ಮಾಕ್ಟೇಲ್’

    ಹೃದಯ ತಟ್ಟುವ ಚಿತ್ರ ‘ಲವ್ ಮಾಕ್ಟೇಲ್’

    ಡಾರ್ಲಿಂಗ್ ಕೃಷ್ಣ ಆ್ಯಕ್ಷನ್ ಕಟ್ ಹೇಳಿ ನಟಿಸಿರುವ ಚಿತ್ರ ‘ಲವ್ ಮಾಕ್ಟೇಲ್’ ಇಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರ್ತಿದೆ. ಪ್ರೇಕ್ಷಕರ ಮನಸ್ಸಿಗೆ ಲವ್ ಮಾಕ್ಟೇಲ್ ಚಿತ್ರ ಕನೆಕ್ಟ್ ಆಗಿದ್ದು, ಡಾರ್ಲಿಂಗ್ ಕೃಷ್ಣ ಮೊದಲ ನಿರ್ದೇಶನದಲ್ಲೇ ಗೆದ್ದಿದ್ದಾರೆ.

    ಮನರಂಜನೆಯ ಜೊತೆಗೆ ಪ್ರೀತಿಯ ಅಲೆಯ ಮೇಲೆ ಸಾಗೋ ಮನಮುಟ್ಟುವ, ಹೃದಯ ತಟ್ಟುವ ಪ್ರೇಮಕಥೆ ಲವ್ ಮಾಕ್ಟೇಲ್ ಚಿತ್ರದಲ್ಲಿದೆ. ಎಲ್ರೂ ಲೈಫ್ ನಲ್ಲೂ ನಡೆಯುವ ಒಂದಷ್ಟು ಲವ್ ಸ್ಟೋರಿಗಳನ್ನು ಸೇರಿಸಿ ಫ್ರೆಶ್ ಅಂಡ್ ನವಿರಾಗಿ, ಪ್ರಬುದ್ಧವಾಗಿ ಕಟ್ಟಿಕೊಡೋ ಪ್ರಯತ್ನದಲ್ಲಿ ಡಾರ್ಲಿಂಗ್ ಕೃಷ್ಣ ಗೆದ್ದಿದ್ದಾರೆ.

    ಚಿತ್ರದಲ್ಲಿ ನಾಯಕ ಆದಿಯ ಹೈಸ್ಕೂಲ್ ನಿಂದ ಆರಂಭವಾದ ಲವ್ ಸ್ಟೋರಿಗಳಿದೆ. ತರ್ಲೆ, ತುಂಟಾಟಗಳಿದೆ. ಆತನ ಜೀವನದಲ್ಲಿ ಬರುವ ಹುಡುಗಿಯರು ಈಗಿನ ಹುಡುಗಿಯರನ್ನು ರೆಪ್ರೆಸೆಂಟ್ ಮಾಡ್ತಾರೆ. ಟ್ರೂ ಲವ್ ಎಂದು ಹುಡುಕಿ ಹೊರಟ ಆದಿಗೆ ಕೊನೆಗೆ ಟ್ರೂ ಲವ್ ಸಿಕ್ಕಿದಾಗ ಯಾವ ರೀತಿ ಪ್ರಭಾವ ಬೀರುತ್ತೆ ಅನ್ನೋದೇ ಲವ್ ಮಾಕ್ಟೇಲ್ ಕಹಾನಿ. ಇಡೀ ಚಿತ್ರ ತನ್ನ ನಿರೂಪಣ ಶೈಲಿ ಹಾಗೂ ಹೊಸತನದಿಂದಲೇ ಆವರಿಸಿ ಬಿಡುತ್ತೆ. ಮನೋರಂಜನೆ ಜೊತೆಗೆ ಪ್ರೇಮಕಥೆ ಹೀಗೆ ಸಾಗುತ್ತಾ ಹೋಗಿ ಆ ಪ್ರೇಮಕಥೆ ನೋಡುಗರ ಹೃದಯತಟ್ಟುತ್ತೆ. ಇದು ನಮ್ಮದೇ ಕಥೆ ಎನ್ನುವ ಹಾಗೆ ಕನೆಕ್ಟ್ ಆಗುತ್ತೆ. ಒಟ್ಟಿನಲ್ಲಿ ಹೊಸತನದೊಂದಿಗೆ ಲವ್ ಮಾಕ್ಟೇಲ್ ಚಿತ್ರ ಪ್ರೇಕ್ಷಕರಿಗೆ ಕನೆಕ್ಟ್ ಆಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಸಿನಿರಸಿಕರು ಫುಲ್ ಖುಷ್ ಆಗಿದ್ದಾರೆ.

    ಚಿತ್ರ: ಲವ್ ಮಾಕ್ಟೇಲ್
    ನಿರ್ದೇಶಕ: ಡಾರ್ಲಿಂಗ್ ಕೃಷ್ಣ
    ನಿರ್ಮಾಪಕ: ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್
    ಸಂಗೀತ: ರಘು ದೀಕ್ಷಿತ್
    ಛಾಯಾಗ್ರಹಣ: ಶ್ರೀ ಕ್ರೇಜಿಮೈಂಡ್ಸ್
    ತಾರಾಂಗಣ: ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತ, ಇತರರ

    ರೇಟಿಂಗ್: 4/5

  • ‘ಲವ್ ಮಾಕ್ಟೇಲ್’ 4-5 ಪ್ರೀತಿಗಳ ಮಿಶ್ರಣ

    ‘ಲವ್ ಮಾಕ್ಟೇಲ್’ 4-5 ಪ್ರೀತಿಗಳ ಮಿಶ್ರಣ

    ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಟಿಸಿರುವ ಸ್ಯಾಂಡಲ್‍ವುಡ್ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ ಲವ್ ಮಾಕ್ಟೇಲ್ ಸಿನಿಮಾ ಇಂದು ಬಿಡುಗಡೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿರುವ ಚಿತ್ರದ ಸ್ಯಾಂಪಲ್‍ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಜೊತೆಗೆ ಡಾರ್ಲಿಂಗ್ ಕೃಷ್ಣ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಕೂಡ ತೊಟ್ಟಿರೋದು ಚಿತ್ರದ ಮತ್ತೊಂದು ವಿಶೇಷ.

    ಕಿಚ್ಚ ಸುದೀಪ ದನಿಯಲ್ಲಿ ಬಿಡುಗಡೆಯಾಗಿರುವ ಟ್ರೈಲರ್ ಎಲ್ಲರನ್ನು ಸಖತ್ ಇಂಪ್ರೆಸ್ ಮಾಡಿದ್ದು, ರೆಗ್ಯುಲರ್ ಕಥೆಯನ್ನೇ ಹೊಸತನದಲ್ಲಿ ಹೇಳ ಹೊರಟಿರೋ ಕೃಷ್ಣ ಪ್ರಯತ್ನಕ್ಕೆ ಎಲ್ಲರು ಬೆನ್ನು ತಟ್ಟಿದ್ದಾರೆ. ಚಿತ್ರದಲ್ಲಿ ಲವರ್ ಬಾಯ್ ಆಗಿ ಮೂರು ಶೇಡ್‍ನಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿದ್ದಾರೆ. ಮಿಲನ ನಾಗರಾಜ್ ಚಿತ್ರದ ನಾಯಕಿಯಾಗಿ ಮಿಂಚಿದ್ದಾರೆ. ಜೊತೆಗೆ ಚಿತ್ರದ ಮೇಕಪ್ ಮ್ಯಾನ್, ಕಾಸ್ಟ್ಯೂಮ್ ಡಿಸೈನರ್ ಆಗಿಯೂ ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ.

    ಶ್ರೀ ಕೇಜಿಮೈಂಡ್ಸ್ ಸಿನಿಮಾಟೋಗ್ರಫಿ, ರಘು ದೀಕ್ಷಿತ್ ಮ್ಯೂಸಿಕ್ ಲವ್ ಮೊಕ್ಟೈಲ್ ಚಿತ್ರಕ್ಕಿದೆ. ಬೆಂಗಳೂರು, ಮೈಸೂರು, ಕಳಸ, ಚಿಕ್ಕಮಗಳೂರು, ಉಡುಪಿಯ ಸುಂದರ ಲೋಕೇಷನ್ ಗಳಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸೆನ್ಸಾರ್ ನಲ್ಲಿ ಯು/ಎ ಪ್ರಮಾಣಪತ್ರ ಪಡೆದು ಪಾಸ್ ಆಗಿರೋ ಲವ್ ಮಾಕ್ಟೇಲ್ ಚಿತ್ರಕ್ಕೆ ಗ್ರ್ಯಾಂಡ್ ವೆಲ್‍ಕಮ್ ಲಭಿಸಿದೆ.

  • ಸುನೀಲ್ ನಾಗಪ್ಪ ಡಾರ್ಲಿಂಗ್ ಕೃಷ್ಣ ಆದ ಬಲು ರೋಚಕ ಕಥೆ ಇಲ್ಲಿದೆ!

    ಸುನೀಲ್ ನಾಗಪ್ಪ ಡಾರ್ಲಿಂಗ್ ಕೃಷ್ಣ ಆದ ಬಲು ರೋಚಕ ಕಥೆ ಇಲ್ಲಿದೆ!

    ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡೊದ್ರು ಲವ್ ಮೊಕ್ಟೈಲ್ ಚಿತ್ರದ್ದೇ ಸದ್ದು ಸುದ್ದಿ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ ಈ ಚಿತ್ರ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಚಿತ್ರದ ಪ್ರತಿ ತುಣುಕುಗಳಿಗೂ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು ಇದ್ರಿಂದ ಡಾರ್ಲಿಂಗ್ ಕೃಷ್ಣ ಸಂತಸಗೊಂಡಿದ್ದಾರೆ. ಇಂದು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿರುವ ಈ ಚಿತ್ರ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಇದೇ ಸಮಯದಲ್ಲಿ ಡಾರ್ಲಿಂಗ್ ಕೃಷ್ಣ ತಮ್ಮ ಜರ್ನಿಯ ಮೆಲುಕು ಹಾಕಿದ್ದಾರೆ.

    ಮೂಲತಃ ಮೈಸೂರಿನವರಾದ ಕೃಷ್ಣ ಅವರ ನಿಜವಾದ ಹೆಸರು ಸುನೀಲ್ ನಾಗಪ್ಪ. ಎಂಬಿಎ ಓದಲು ಬೆಂಗಳೂರಿಗೆ ಬಂದವರು. ಸಿನಿಮಾ ಕಡೆ ಕಣ್ಣೆತ್ತಿ ನೋಡದವರು ಸಡನ್ ಆಗಿ ಸಿನಿಮಾ ಕಡೆ ವಾಲೋಕೆ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್. ಒಮ್ಮೆ ಮೈಸೂರಿನಲ್ಲಿ ದರ್ಶನ್ ಅವರನ್ನು ಫ್ಯಾನ್ಸ್ ಮುತ್ತಿಕೊಂಡಿದ್ದನ್ನು ಕಂಡು ಪುಳಕಿತರಾದ ಕೃಷ್ಣ ನಾನು ಹೀರೋ ಆಗ್ಬೇಕು, ಸ್ಟಾರ್ ಆಗಬೇಕು ಎಂದು ಅಂದು ಕನಸು ಕಂಡವರು.

    ಅಂದಿನಿಂದಲೇ ಕನಸಿಗೆ ನೀರೆರೆಯುತ್ತಾ ಪೋಷಿಸುತ್ತಾ ಬಂದ ಕೃಷ್ಣ ಎಂಬಿಎ ಓದುತ್ತಲೇ ನಟನೆ, ಜಿಮ್, ಡಾನ್ಸ್ ತರಗತಿಗೆ ಸೇರಿಕೊಂಡು ನಟನಾಗಲು ಬೇಕಾದ ಎಲ್ಲಾ ಪಟ್ಟುಗಳನ್ನು ಕಲಿಯ ತೊಡಗಿದ್ರು. ಎಂಬಿಎ ನಂತರ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ತೀರ್ಮಾನಿಸಿದ್ರು. ಆದ್ರೆ ಇಂಡಸ್ಟ್ರಿಯಲ್ಲಿ ಯಾರೂ ಪರಿಚಯವಿರಲಿಲ್ಲ. ಆಗ ಕೈ ಹಿಡಿದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

    ಒಮ್ಮೆ ಜಿಮ್ ನಲ್ಲಿ ವರ್ಕೌಟ್ ಮಡುವಾಗ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಪರಿಚಯವಾಗಿ ಅವರ ಬಳಿ ತಾವೂ ನಟನಾಗಬೇಕೆಂಬ ಆಸೆಯನ್ನು ಹೇಳಿಕೊಂಡಾಗ ಜಾಕಿಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ರು. ಅವರ ಆರ್ಶೀವಾದದಿಂದ ಜಾಕಿಯಲ್ಲಿ ಒಂದು ಪಾತ್ರವನ್ನು ಸಹ ಕೃಷ್ಣ ಮಾಡಿದರು. ಅದಾದ ನಂತರ ಪುನೀತ್ ರಾಜ್ ಕುಮಾರ್ ಅಭಿನಯದ ಹುಡುಗರು ಚಿತ್ರದಲ್ಲಿಯೂ ಅಭಿನಯಿಸಲು ಅವಕಾಶ ಸಿಕ್ತು. ಹೀಗೆ ಹೀರೋ ಆಗಬೇಕು ಎಂದು ಬಂದವರು ಆಗಿದ್ದು ಅಸಿಸ್ಟೆಂಟ್ ಡೈರೆಕ್ಟರ್. ಆದರೆ ಮನಸ್ಸಲ್ಲಿ ಹೀರೋ ಆಗಿ ತೆರೆ ಮೇಲೆ ಮಿಂಚಬೇಕು ಎಂಬ ತುಡಿತ ಮಾತ್ರ ಹಾಗೆ ಇತ್ತು.

    ಹೀಗಿರಬೇಕಾದ್ರೆ ಆರ್ಕುಟ್ ನಲ್ಲಿ ಇವರ ಫೋಟೋ ನೋಡಿ ನಿರ್ದೇಶಕ ರವಿಗರಣಿ ಕೃಷ್ಣ ರುಕ್ಮಿಣಿ ಸೀರಿಯಲ್ ನಲ್ಲಿ ನಟಿಸಲು ಆಫರ್ ನೀಡುತ್ತಾರೆ. ಈ ಕೃಷ್ಣ ರುಕ್ಮಿಣಿ ಧಾರವಾಹಿಯೇ ಇಂದು ಸುನೀಲ್ ನಾಗಪ್ಪ ಅವರನ್ನು ಕೃಷ್ಣ ಎಂದು ಮಾಡಿದ್ದು. ಕೃಷ್ಣ ರುಕ್ಮಿಣಿ ಧಾರಾವಾಹಿ ಬಹಳ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿತು. ಕೃಷ್ಣ ಪಾತ್ರದಲ್ಲಿ ಸುನೀಲ್ ನಾಗಪ್ಪ ಕರ್ನಾಟಕದಲ್ಲಿ ಮನೆಮಾತಾದ್ರು. ಅದ್ರಲ್ಲೂ ಹುಡಿಗಿಯರ ಡ್ರೀಮ್ ಬಾಯ್ ಆಗಿ ಹೋಗಿದ್ರು ಕೃಷ್ಣ. ಅಷ್ಟರ ಮಟ್ಟಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ರು. ಇದೇ ಕಾರಣಕ್ಕೆ ತಮ್ಮ ಸುನೀಲ್ ನಾಗಪ್ಪ ಹೆಸರನ್ನು ಕೃಷ್ಣ ಎಂದು ಬದಲಾಯಿಸಿಕೊಂಡ್ರು.

    ಸೀರಿಯಲ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ರೂ ತುಡಿತ ಇದ್ದಿದ್ದು ಮಾತ್ರ ಸಿನಿಮಾ ಕಡೆಗೆ. ಆಗ ಸಿಕ್ಕ ಸಿನಿಮಾವೇ ಮದರಂಗಿ. ಅಷ್ಟೇನು ಯಶಸ್ಸು ನೀಡದಿದ್ದರೂ ಈ ಚಿತ್ರದ ‘ಡಾರ್ಲಿಂಗ್ ಡಾರ್ಲಿಂಗ್’ ಸಾಂಗ್ ಸೂಪರ್ ಹಿಟ್ ಆಯ್ತು. ಅಲ್ಲಿಂದ ಡಾರ್ಲಿಂಗ್ ಕೃಷ್ಣ ಎಂದೇ ಇಂಡಸ್ಟ್ರಿಯಲ್ಲಿ ಚಿರಪರಿಚಿತ. ಮದರಂಗಿ ಕೃಷ್ಣ ಚಿತ್ರದ ನಂತರ ಚಾರ್ಲಿ, ನಮ್ ದುನಿಯಾ ನಮ್ ಸ್ಟೈಲ್, ದೊಡ್ಮನೆ ಹುಡ್ಗ, ರುದ್ರತಾಂಡವ, ಹುಚ್ಚಾ-2 ಹೀಗೆ ಹಲವು ಸಿನಿಮಾಗಳಲ್ಲಿ ಡಾರ್ಲಿಂಗ್ ಕೃಷ್ಣ ಹೀರೋ ಆಗಿ ನಟಿಸಿದ್ರು. ಆದರೆ ಯಾವ ಚಿತ್ರವೂ ಯಶಸ್ಸು ನೀಡಲಿಲ್ಲ. ಸಾಲು ಸಾಲು ಸೋಲಿನಿಂದ ಡಾರ್ಲಿಂಗ್ ಕೃಷ್ಣ ಕಂಗೆಟ್ಟರು. ಅವಕಾಶಗಳು ಕಮ್ಮಿಯಾಯ್ತು. ಮೂರ್ನಾಲ್ಕು ವರ್ಷ ಒಂದೊಳ್ಳೆ ಕಥೆಗಾಗಿ ಕಾದು ಕುಳಿತರು. ಆದರೆ ಯಾವ ಕಥೆಯೂ ಇಷ್ಟವಾಗಲಿಲ್ಲ. ಕೈಚೆಲ್ಲಿ ಕೂತಾಗ ಬಂದ ಒಂದು ಆಲೋಚನೆಯೇ ಇಂದು ಲವ್ ಮೊಕ್ಟೈಲ್ ಚಿತ್ರವಾಗಿ ಹೊರಹೊಮ್ಮಿದೆ.

    ಲವ್ ಮೊಕ್ಟೈಲ್ ಚಿತ್ರದ ಮೂಲಕ ನಿರ್ದೇಶಕನಾಗಿ, ನಿರ್ಮಾಪಕನಾಗಿ ಕೂಡ ಡಾರ್ಲಿಂಗ್ ಕೃಷ್ಣ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. 2008ರಿಂದ ಶುರುವಾದ ಡಾರ್ಲಿಂಗ್ ಕೃಷ್ಣ ಜರ್ನಿ ಇಂದು ನಿರ್ದೇಶಕನಾಗಿ ಗಾಂಧಿ ನಗರದಲ್ಲಿ ಬಂದು ನಿಲ್ಲುವಂತೆ ಮಾಡಿದೆ. ಡೊಡ್ಡ ಬ್ರೇಕ್ ಗಾಗಿ ಕಾಯುತ್ತಿರುವ ಡಾರ್ಲಿಂಗ್ ಕೃಷ್ಣಗೆ ಲವ್ ಮೊಕ್ಟೈಲ್ ಚಿತ್ರ ದೊಡ್ಡ ಯಶಸ್ಸನ್ನು ನೀಡಲಿ. ಚಿತ್ರರಂಗದಲ್ಲಿ ಉತ್ತುಂಗಕ್ಕೆ ಬೆಳೆಯಲಿ.

     

  • ‘ಲವ್ ಮಾಕ್ಟೇಲ್’ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಡಾರ್ಲಿಂಗ್ ಕೃಷ್ಣ!

    ‘ಲವ್ ಮಾಕ್ಟೇಲ್’ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಡಾರ್ಲಿಂಗ್ ಕೃಷ್ಣ!

    ‘ಕೃಷ್ಣ-ರುಕ್ಮಿಣಿ’ ಧಾರವಾಹಿ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾದ ನಟ ಕೃಷ್ಣ. ಕೇವಲ ಒಂದೇ ಒಂದು ಸಿರೀಯಲ್ ಮೈಸೂರಿನ ಹುಡುಗನಿಗೆ ಜನಪ್ರಿಯತೆ ತಂದುಕೊಟ್ಟಿತು. ಅಪಾರ ಅಭಿಮಾನಿ ಬಳಗ ಕೂಡ ಸೃಷ್ಟಿಯಾಯಿತು. ಆ ಸಕ್ಸಸ್‍ನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಕೃಷ್ಣ ‘ಮದರಂಗಿ’ ಚಿತ್ರದ ಮೂಲಕ ಡಾರ್ಲಿಂಗ್ ಕೃಷ್ಣ ಎಂದೇ ಫೇಮಸ್ ಆದ್ರು. ಈಗ ಇದೇ ಡಾರ್ಲಿಂಗ್ ಕೃಷ್ಣ ಡೈರೆಕ್ಟರ್ ಕ್ಯಾಪ್ ತೊಟ್ಟು ತಮ್ಮದೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೌದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರೋ ‘ಲವ್ ಮಾಕ್ಟೇಲ್’ ಚಿತ್ರ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರೋ ಚಿತ್ರ.

    ಎಲ್ಲಾ ಹುಡುಗರ ಲೈಫ್‍ನಲ್ಲೂ ನಡೆಯುವ ಲವ್ ಸ್ಟೋರಿಯನ್ನೇ ಕಥೆಯಾಗಿಟ್ಟುಕೊಂಡು ಇಂದಿನ ಕಮರ್ಶಿಯಲ್ ಜಮಾನಕ್ಕೆ ಹೊಂದುವ ಹಾಗೆ ಹೆಣೆದು ನಿರ್ದೇಶನ ಮಾಡಿದ್ದಾರೆ ಡಾರ್ಲಿಂಗ್ ಕೃಷ್ಣ. ಮಿಲನ ನಾಗರಾಜ್ ಚಿತ್ರದ ನಾಯಕಿ. ಕಥೆ, ಚಿತ್ರದ ಕಥೆಯಲ್ಲಿ ಇವರದ್ದು ಸಮಪಾಲುಂಟು. ಜೊತೆಗೆ ಡಾರ್ಲಿಂಗ್ ಕೃಷ್ಣ ಜೊತೆ ಇವ್ರು ಕೂಡ ಚಿತ್ರದ ಒನ್ ಆಫ್ ದಿ ಪ್ರೊಡ್ಯೂಸರ್. ಚಿತ್ರದಲ್ಲಿ ಮೂರು ಶೇಡ್‍ನಲ್ಲಿ ಡಾರ್ಲಿಂಗ್ ಕೃಷ್ಣ ತೆರೆ ಮೇಲೆ ಕಾಣಸಿಗಲಿದ್ದಾರೆ.

    ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರಿಗೆ ಕಿಚ್ಚ ಸುದೀಪ್ ದನಿ ನೀಡಿದ್ದು, ಚಿತ್ರದ ಆಡಿಯೋ ಕೂಡ ಅಭಿನಯ ಚಕ್ರವರ್ತಿ ಬಿಡುಗಡೆ ಮಾಡಿ ಡಾರ್ಲಿಂಗ್ ಕೃಷ್ಣಗೆ ಸಾಥ್ ನೀಡಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ, ಚಿಕ್ಕಮಗಳೂರಿನ ಸುಂದರ ಲೊಕೇಶನ್‍ಗಳಲ್ಲಿ ಲವ್ ಮಾಕ್ಟೇಲ್ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ಕ್ರೇಜಿ ಮೈಂಡ್ಸ್ ಶ್ರೀ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ರಘು ದೀಕ್ಷಿತ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಬಿಡುಗಡೆಯಾಗಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಲವ್ ಮಾಕ್ಟೇಲ್ ಚಿತ್ರದ ಮೂಲಕ ಗೆಲುವಿನ ನಿರೀಕ್ಷೆಯಲ್ಲಿರುವ ಡಾರ್ಲಿಂಗ್ ಕೃಷ್ಣ ಜನವರಿ 31ಕ್ಕೆ ಸಿನಿರಸಿಕರು ಕೊಡುವ ಮಾರ್ಕ್ಸ್ ಗಾಗಿ ಕಾಯುತ್ತಿದ್ದಾರೆ.

  • ಡಾರ್ಲಿಂಗ್ ಕೃಷ್ಣನ ‘ಲವ್ ಮಾಕ್‍ಟೈಲ್’ ಬಿಡುಗಡೆಗೆ ಸಿದ್ಧ!

    ಡಾರ್ಲಿಂಗ್ ಕೃಷ್ಣನ ‘ಲವ್ ಮಾಕ್‍ಟೈಲ್’ ಬಿಡುಗಡೆಗೆ ಸಿದ್ಧ!

    ‘ಮದರಂಗಿ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ ನಟ ಕೃಷ್ಣ ಅಲ್ಲಿಂದ ಡಾರ್ಲಿಂಗ್ ಕೃಷ್ಣ ಎಂದೇ ಖ್ಯಾತಿ. ಮದರಂಗಿ ಚಿತ್ರದ ನಂತ್ರ ಬ್ಯುಸಿಯಾದ ಡಾರ್ಲಿಂಗ್ ಕೃಷ್ಣಗೆ ಯಾವ ಚಿತ್ರವೂ ಹೆಸರು ತಂದುಕೊಡಲಿಲ್ಲ. ಈಗ ಅವ್ರೆ ನಿರ್ದೇಶನಕ್ಕೆ ಇಳಿದಿರುವ ‘ಲವ್ ಮಾಕ್‍ಟೈಲ್’ ಚಿತ್ರ ಡಾರ್ಲಿಂಗ್ ಕೃಷ್ಣಗೆ ಸ್ಟಾರ್ ಪಟ್ಟ ತಂದು ಕೊಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

    ‘ಲವ್ ಮಾಕ್‍ಟೈಲ್’ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಚಿತ್ರ. ರೆಗ್ಯೂಲರ್ ಲವ್ ಸ್ಟೋರಿಗಳನ್ನೇ ವಿಭಿನ್ನವಾಗಿ ಹೇಳ ಹೊರಟಿರೋ ಕೃಷ್ಣಗೆ ಚಿತ್ರದ ಸ್ಯಾಂಪಲ್‍ಗಳಿಂದಲೇ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಸೂಪರ್ ಹಿಟ್ ಆಗಿದ್ದು, ಈ ಚಿತ್ರದಿಂದ ಕೃಷ್ಣರಲ್ಲಿದ್ದ ನಿರ್ದೇಶನದ ಟ್ಯಾಲೆಂಟ್ ಹೊರಬಂದಿದೆ.

    ‘ಲವ್ ಮಾಕ್‍ಟೈಲ್’ ಚಿತ್ರವನ್ನು ತುಂಬಾ ಪ್ಯಾಶನೇಟ್ ಹಾಗೂ ಶ್ರದ್ಧೆಯಿಂದ ಮಾಡಿದ್ದಾರೆ ಡಾರ್ಲಿಂಗ್ ಕೃಷ್ಣ. ಒಂದು ಬಿಗ್ ಬ್ರೇಕ್‍ಗಾಗಿ ಕಾಯುತ್ತಿರುವ ಟ್ಯಾಲೆಂಟೆಡ್ ನಟನಿಗೆ ಲವ್ ಮಾಕ್ಟೈಲ್ ಆ ಎಲ್ಲಾ ಗೆಲುವನ್ನು ತಂದು ಕೊಡೋದ್ರಲ್ಲಿ ದೂಸ್ರಾ ಮಾತೇ ಇಲ್ಲ.

    ನಿರ್ದೇಶನದ ಜೊತೆ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿರುವ ಕೃಷ್ಣ ಚಿತ್ರದ ತುಣುಕುಗಳಿಗೆ ಸಿಕ್ಕಿರುವ ರೆಸ್ಪಾನ್ಸ್‍ನಿಂದ ಸಖತ್ ಥ್ರಿಲ್ ಆಗಿದ್ದಾರೆ. ಜನವರಿ 31ಕ್ಕೆ ಲವ್ ಮಾಕ್‍ಟೈಲ್ ಚಿತ್ರ ಬಿಡುಗಡೆಯಾಗುತ್ತಿದ್ದು ಪ್ರೇಕ್ಷಕ ಪ್ರಭು ಚಿತ್ರ ನೋಡಿ ಏನ್? ಹೇಳ್ತಾನೆ ಅನ್ನೋದನ್ನ ಕಾದು ನೋಡಬೇಕು.

  • 17 ವರ್ಷದ ನಂತ್ರ ಹುಚ್ಚ ಸಿನಿಮಾದ ನೆನಪು ಬಿಚ್ಚಿಟ್ಟ ಸುದೀಪ್

    17 ವರ್ಷದ ನಂತ್ರ ಹುಚ್ಚ ಸಿನಿಮಾದ ನೆನಪು ಬಿಚ್ಚಿಟ್ಟ ಸುದೀಪ್

    ಬೆಂಗಳೂರು: ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಅಭಿನಯದ ಹುಚ್ಚ ಸಿನಿಮಾ ರಿಲೀಸ್ ಆಗಿ 17 ವರ್ಷ ಕಳೆದಿದೆ. ಈಗ ಅದರ ಮುಂದುವರಿದ ಭಾಗ ಹುಚ್ಚ 2 ನಿಮ್ಮನ್ನ ರಂಜಿಸುವುದಕ್ಕೆ ಸಿದ್ಧವಾಗುತ್ತಿದೆ.

    ಡಾರ್ಲಿಂಗ್ ಕೃಷ್ಣ ಹುಚ್ಚ 2 ನಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಹುಚ್ಚ 2 ಸಿನಿಮಾದ ಹಾಡುಗಳನ್ನ ಕಿಚ್ಚ ರಿಲೀಸ್ ಮಾಡಿದ್ದಾರೆ. ಅನೂಪ್ ಸೀಳಿನ್ ಚಿತ್ರದ ಹಾಡುಗಳಿಗೆ ಟ್ಯೂನ್ ಕಂಪೋಸ್ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಸುದೀಪ್, ಹುಚ್ಚ 2 ಆಡಿಯೋ ರಿಲೀಸ್ ಮಾಡಿದ್ದೇವೆ. ನನ್ನ ಸಿನಿಮಾ ರಿಲೀಸ್ ಮಾಡಿ 17 ವರ್ಷ ಆಗಿದೆ. ಆದರೆ ನನಗೆ 17 ಆಗಿದೆ ಎಂದು ಅನ್ನಿಸುತ್ತಿಲ್ಲ. ಅದರ ನೆನಪುಗಳು ಯಾವಾಗಲೂ ಅಳಿಸುವುದಿಲ್ಲ. ನಾನು ಓಂ ಪ್ರಕಾಶ್ ತುಂಬಾ ಸಿನಿಮಾ ಮಾಡಿದ್ದೇವೆ. ಆದರೆ ಈ ರೀತಿ ಮ್ಯಾಜಿಕ್ ಕ್ರಿಯೇಟ್ ಮಾಡಿಲ್ಲ. ಕೆಲವು ಸಿನಿಮಾ ಮಾತ್ರ ಈ ರೀತಿಯ ಮ್ಯಾಜಿಕ್ ಕ್ರಿಯೇಟ್ ಮಾಡುತ್ತವೆ. ಈ ಸಿನಿಮಾದಿಂದಲೇ ನಾನು ಇಲ್ಲಿವರೆಗೂ ಬಂದಿರುವುದು ಎಂದರು. ಇವತ್ತಿಗೂ ಈ ಸಿನಿಮಾವನನ್ನು ಕೈಯಲ್ಲಿ ಹಿಡಿದಿದ್ದರೆ ಇದು ನನ್ನ ಎನ್ನಿಸುತ್ತದೆ ಎಂದರು.

    ಈ ಸಿನಿಮಾ ಬಗ್ಗೆ ಹೇಳ ಬೇಕೆಂದರೆ ಟ್ರೈಲರ್ ತುಂಬಾ ಚನ್ನಾಗಿದೆ. ಈ ಸಿನಿಮಾ ನೋಡಿದರೆ ಹಳೇ ಓಂ ಪ್ರಕಾಶ್ ಕಾಣಿಸುತ್ತಾರೆ. ತುಂಬಾ ಖುಷಿಯಾಯಿತು. ಇದಕ್ಕೆ ಅನೂಪ್ ಸೀಳಿನ್ ಅವರು ಸಂಗೀತ ಕಂಪೋಸ್ ಮಾಡಿದ್ದಾರೆ. ಈ ಸಿನಿಮಾ ನನಗೆ ಹತ್ತಿರವಾದ ಸಿನಿಮಾವಾಗಿದೆ ಎಂದು ಹೇಳಿ ಚಿತ್ರತಂಡಕ್ಕೆ ಶುಭಾ ಹಾರೈಸಿ ಸಿನಿಮಾ ಯಶಸ್ವಿಯಾಗಲಿ ಎಂದು ಹೇಳಿದ್ದಾರೆ.

    ಹುಚ್ಚ – 2 ಸಿನಿಮಾದಲ್ಲಿ ದೊಡ್ಡ ತಾರಾ ಬಳಗವಿದ್ದು, ಅವಿನಾಶ್, ಸಾಯಿಕುಮಾರ್, ಸಾಧುಕೋಕಿಲಾ, ಶ್ರಾವ್ಯ, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಹಾಡು, ಟ್ರೈಲರ್ ಗಳ ಬಗ್ಗೆ ಸುದೀಪ್ ತಮ್ಮ ಮೆಚ್ಚುಗೆಯನ್ನು ಹೇಳಿಕೊಂಡಿದ್ದಾರೆ.