Tag: Dantewada

  • ನಕ್ಸಲ್ ದಾಳಿ: ಯೋಧರ ಬಲಿದಾನ ವ್ಯರ್ಥವಾಗಲು ಬಿಡಲ್ಲ-ಮೋದಿ

    ನಕ್ಸಲ್ ದಾಳಿ: ಯೋಧರ ಬಲಿದಾನ ವ್ಯರ್ಥವಾಗಲು ಬಿಡಲ್ಲ-ಮೋದಿ

    ರಾಯ್ಪುರ: ಛತ್ತಿಸ್‍ಗಢದ ದಂತೇವಾಡಾದ ಬಳಿ ಬಿಜೆಪಿ ನಾಯಕರು ತೆರೆಳುತ್ತಿದ್ದ ಬೆಂಗಾವಲು ವಾಹನದ ಮೇಲೆ ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ಮಾಡಿದ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ.

    ಘಟನೆಯ ಕುರಿತು ಟ್ವೀಟ್ ಮಾಡಿದ ಪ್ರಧಾನಿ, ಛತ್ತೀಸ್‍ಗಢದಲ್ಲಿ ಮಾವೋವಾದಿಗಳು ನಡೆಸಿದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ವೀರ ಮರಣವಪ್ಪಿದ ಸೈನಿಕರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ವೀರ ಯೋಧರ ಬಲಿದಾನವನ್ನು ಯಾವುದೇ ಕಾರಣಕ್ಕೂ ವ್ಯರ್ಥವಾಗಲು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದಾಳಿಯ ಕುರಿತು ಪ್ರತಿಕ್ರಿಯಿಸಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಡಿಐಜಿ ಪಿ.ಸುಂದರ್ ರಾಜ್, ದಂತೇವಾಡ ಜಿಲ್ಲೆಯ ಕುವಾಂಕೋಡ ಇಲಾಖೆಯಲ್ಲಿ ದಾಳಿ ನಡೆದಿದೆ. ನಕ್ಸಲರು ದಾಳಿಯಲ್ಲಿ ಶಾಸಕರ ವಾಹನದೊಂದಿಗೆ ಭದ್ರತಾ ಸಿಬ್ಬಂದಿಯ ವಾಹನವನ್ನು ಗುರಿಯಾಗಿಸಿಕೊಂಡಿದ್ದರು. ಈ ದಾಳಿಯಲ್ಲಿ ಚಾಲಕ ಮತ್ತು ಮೂವರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ದಾಳಿಯ ಬೆನ್ನಲ್ಲೆ ದಂತೇವಾಡ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಸಿಆರ್ ಪಿಎಫ್ ಮತ್ತು ಪೊಲೀಸ್ ತಂಡಗಳನ್ನು ನೇಮಿಸಲಾಗಿದೆ. ದಾಳಿ ನಡೆದ ಸುತ್ತಲಿನ ಪರಿಸರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

    ಏನಿದು ಘಟನೆ?:
    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಭೀಮಾ ಮಂಡಾವಿ ಪ್ರಚಾರ ಕಾರ್ಯವನ್ನು ನಡೆಸಲು ತೆರಳುತ್ತಿದ್ದ ವೇಳೆ ನಕ್ಸಲರು ದಾಳಿ ನಡೆಸಿದ್ದರು. ಸ್ಫೋಟದ ತೀವ್ರತೆಗೆ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲೇ ಶಾಸಕ ಸೇರಿದಂತೆ ಐವರು ಮೃತಪಟ್ಟಿದ್ದರು.

    ನಕ್ಸಲರ ದಾಳಿಯ ಕುರಿತು ಮಾಹಿತಿ ಲಭಿಸುತ್ತಿದಂತೆ ಸಿಆರ್ ಪಿಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಛತ್ತೀಸ್‍ಗಢ ಸಿಎಂ ಭೂಪೇಶ್ ಬಾಗೇಲ್ ಕಠಿಣ ಕ್ರಮಕೈಗೊಳ್ಳುವಂತೆ ಡಿಐಜಿಗೆ ಸೂಚನೆ ನೀಡಿದ್ದಾರೆ. ದಾಳಿ ನಡೆದ ಪ್ರದೇಶದಲ್ಲಿ ಗುರುವಾರ ಚುನಾವಣೆ ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 80 ಸಾವಿರ ರಕ್ಷಣಾ ಸಿಬ್ಬಂದಿ, ಡ್ರೋಣ್ ಕ್ಯಾಮೆರಾಗಳನ್ನು ಸರ್ಕಾರ ನಿಯೋಜನೆ ಮಾಡಿದೆ.