Tag: Dammam

  • ದಮ್ಮಾಮ್ | ಕಲ್ಲಡ್ಕ ಅಬ್ರಾಡ್ ಫೋರಮ್‌ನಿಂದ ಎನ್‌ಆರ್‌ಐ ಮೀಟ್

    ದಮ್ಮಾಮ್ | ಕಲ್ಲಡ್ಕ ಅಬ್ರಾಡ್ ಫೋರಮ್‌ನಿಂದ ಎನ್‌ಆರ್‌ಐ ಮೀಟ್

    ದಮ್ಮಾಮ್: ಕಲ್ಲಡ್ಕ ಅಬ್ರಾಡ್ ಫೋರಮ್ (Kalladka Abroad Forum) ವತಿಯಿಂದ ಗಲ್ಫ್ ಎನ್ಆರ್‌ಐ ಮೀಟ್ (NRI Meet) ನ.22ರಂದು ದಮ್ಮಾಮ್ ನ ದಿಲ್ಮುನ್ ರೆಸಾರ್ಟ್‌ನಲ್ಲಿ ನಡೆಯಿತು.

    ಸಮಾವೇಶದಲ್ಲಿ ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳು, ಭಾರತ, ದುಬೈ, ಬಹರೈನ್‌ನಿಂದ ಅತಿಥಿಗಳು ಭಾಗವಹಿಸಿದ್ದರು. ಕಲ್ಲಡ್ಕ, ಗೋಳ್ತಮಜಲು, ಕೆ.ಸಿ ರೋಡ್ ಜಮಾತ್‌ನ ನಾಯಕರುಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸುಮಾರು 50ಕ್ಕೂ ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕಲ್ಲಡ್ಕದಿಂದ ಆಗಮಿಸಿದ್ದರು.

    ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲ್ಲಡ್ಕ ಅಬ್ರಾಡ್ ಫೋರಮ್ ಸೌದಿ ಅರೇಬಿಯಾ ಅಧ್ಯಕ್ಷ ಮೊಹಮ್ಮದ್ ಫಿರೋಜ್, ಕಲ್ಲಡ್ಕ ಅನಿವಾಸಿಗಳ ನೆರವಿಗಾಗಿ 2016ರಲ್ಲಿ ಕಲ್ಲಡ್ಕ ಅಬ್ರಾಡ್ ಫೋರಮ್‌ನ್ನು ಸ್ಥಾಪಿಸಲಾಯಿತು. ದಕ್ಷಿಣ ಕನ್ನಡ ಮತ್ತು ಕೇರಳದಿಂದ ಬೃಹತ್ ಸಂಖ್ಯೆಯಲ್ಲಿ ಜನರು ಗಲ್ಫ್ ರಾಷ್ಟ್ರಗಳತ್ತ ಉದ್ಯೋಗಕ್ಕಾಗಿ ಬರಲಾರಂಭಿಸಿದ ಸಂದರ್ಭದಲ್ಲಿ ಕಲ್ಲಡ್ಕದಿಂದಲೂ ದೊಡ್ಡ ಸಂಖ್ಯೆಯಲ್ಲಿ ಗಲ್ಫ್ ರಾಷ್ಟ್ರಗಳಿಗೆ ಆಗಮಿಸಿದರು. ಕಲ್ಲಡ್ಕದಿಂದ ಆಗಮಿಸಿದ ಈ ಅನಿವಾಸಿಗಳನ್ನು ಒಗ್ಗೂಡಿಸಿ ಅವರು ಸೌದಿ ಅರೇಬಿಯಾದಲ್ಲಿ ಪರಸ್ಪರ ಹೇಗೆ ಸಹಕಾರವನ್ನು ವೃದ್ಧಿಸಿಕೊಳ್ಳಬಹುದು ಮತ್ತು ಕಲ್ಲಡ್ಕ ಜಮಾತ್‌ನ ಒಟ್ಟು ಅಭಿವೃದ್ಧಿಯಲ್ಲಿ ಹೇಗೆ ಪಾಲ್ಗೊಳ್ಳುವಂತೆ ಮಾಡಬಹುದು ಎಂಬ ಚಿಂತನೆಯೊಂದಿಗೆ ಕಲ್ಲಡ್ಕ ಅಬ್ರಾಡ್ ಫೋರಮ್ ಸ್ಥಾಪಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

    ಅತಿಥಿಗಳಾಗಿ ಭಾಗವಹಿಸಿದ್ದ ಅಲ್ ಅಖ್ದೋದ್ ಸಂಸ್ಥೆಯ ಅಧ್ಯಕ್ಷ ಹುಸೈನ್ ಅಲ್ ಯಾಮಿ ಮತ್ತು ಬ್ರೈಟ್ ಸಪೋರ್ಟ್ ಕಂಪನಿಯ ಅಧ್ಯಕ್ಷ ಅಲ್ ಉಸ್ಮಾನ್ ಅಲ್ ಝಹ್ರಾನಿ, ಸೌದಿ ಅರೇಬಿಯಾವನ್ನು ಇಲ್ಲಿನ ಪ್ರಜೆಗಳು ಮಾತ್ರವಲ್ಲದೇ ಎಲ್ಲಾ ದೇಶಗಳ ಜನರು ಸೇರಿ ನಿರ್ಮಿಸಿದ್ದಾರೆ. ಹಿಂದೂ ಮುಸ್ಲಿಂ ಕ್ರೈಸ್ತವೆಂಬ ಭೇದ ಭಾವವಿಲ್ಲದೆ ಎಲ್ಲಾ ಧರ್ಮಗಳ, ದೇಶಗಳ ಒಳ್ಳೆಯ ಮನಸ್ಸುಳ್ಳವರಿಗೆ ಸೌದಿ ಅರೇಬಿಯಾ ಸೇರಿದ್ದಾಗಿದೆ ಎಂದು ಒತ್ತಿ ಹೇಳಿದರು.

    ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಕಲ್ಲಡ್ಕ ಇದರ ಅಧ್ಯಕ್ಷ ಅಬ್ದುಲ್ಲಾ ಕೋಡಿ ಮಾತನಾಡಿ, ಇದೊಂದು ಅವಿಸ್ಮರಣೀಯ ಕ್ಷಣವಾಗಿದೆ. ಇಂತಹ ಒಂದು ಸಮಾವೇಶವನ್ನು ಕೈಗೊಂಡದ್ದಕ್ಕಾಗಿ ಕಲ್ಲಡ್ಕ ಅಬ್ರಾಡ್ ಫೋರಮ್‌ನ್ನು ಶ್ಲಾಘಿಸಿದರು.

    ರಹ್ಮಾನಿಯಾ ಜುಮ್ಮಾ ಮಸ್ಜಿದ್ ಗೋಳ್ತಮಜಲು ಇದರ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹನೀಫ್ ಹಾಜಿ ಮಾತನಾಡಿ ದುಬೈ, ಬಹರೇನ್, ಇಂಡಿಯಾದಿಂದ ಜನರು ಪಾಲ್ಗೊಂಡ ಈ ಸಮಾವೇಶ ಐತಿಹಾಸಿಕವಾದುದು. ಜಮಾತ್ ವ್ಯವಸ್ಥೆ ಎಂಬುದು ಒಂದು ಶ್ರೇಷ್ಠ ವ್ಯವಸ್ಥೆಯಾಗಿದೆ. ಜಮಾತ್ ವ್ಯವಸ್ಥೆಯನ್ನು ಕೇವಲ ಧಾರ್ಮಿಕ ಕಾರ್ಯಗಳಿಗಾಗಿ ಸೀಮಿತಗೊಳಿಸದೆ ಜಮಾತ್‌ನ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಬಳಕೆಯಾಗಬೇಕು ಎಂದರು.

    ಕಲ್ಲಡ್ಕ ಅಬ್ರಾಡ್ ಫೋರಮ್ ಯುಎಇ ಅಧ್ಯಕ್ಷ ನವಾಜ್ ಗೋಳ್ತಮಜಲು, ಕಲ್ಲಡ್ಕ ಜಮಾತ್ ನ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪನಾಮ, ಅಬ್ರಾಡ್ ಫೋರಮ್ ಉಪಾಧ್ಯಕ್ಷ ಜಾವೇದ್ ಕಲ್ಲಡ್ಕ, ಅಲ್ ಅಖ್ದೋದ್ ಕಂಪೆನಿ ಆಪರೇಷನ್ ಮ್ಯಾನೇಜರ್ ಉಮ್ಮರ್ ಫಾರೂಕ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ಸಭೆಯಲ್ಲಿ ಕಲ್ಲಡ್ಕ ಇತಿಹಾಸ, ಕಲ್ಲಡ್ಕ ಅಬ್ರಾಡ್ ಫೋರಮ್ ಸ್ಥಾಪನೆ ಹಾಗೂ ಉದ್ದೇಶವನ್ನೊಳಗೊಂಡ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು. ಕಲ್ಲಡ್ಕ ಜಮಾತ್ ನ ಸುಮಾರು ನೂರು ವರುಷಗಳ ಇತಿಹಾಸವನ್ನು ಕಾರ್ಯಕ್ರಮದಲ್ಲಿ ವಿವರಿಸಲಾಯಿತು. ನೂರು ವರುಷಗಳ ಹಿಂದೆ ಕಲ್ಲಡ್ಕ ಮಸೀದಿಯನ್ನು ನಿರ್ಮಿಸಿದ ಹಿರಿಯರಿಗೆ ಮತ್ತು ಆ ನಂತರದಲ್ಲಿ 1940ರಿಂದ 1965ರ ತನಕ ಜಮಾತ್‌ಗಾಗಿ ಸೇವೆ ಸಲ್ಲಿಸಿದ ಮುಖಂಡರಿಗೆ ಮತ್ತು ಮುಸ್ಲಿಯಾರ್ ಗಳಿಗೆ ‘ಕಲ್ಲಡ್ಕ ರತ್ನ’ ಎಂಬ ಪದವಿ ನೀಡಿ ಗೌರವಿಸಲಾಯಿತು.

    ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮೊಹಮ್ಮದ್ ಹನೀಫ್‌ರವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಕಲ್ಲಡ್ಕ ಅಬ್ರಾಡ್ ಫೋರಮ್ ಉಪಾಧ್ಯಕ್ಷ ಉಮ್ಮರ್ ಫಾರೂಕ್ ಪೋರ್ಟ್ ವೇ ಮತ್ತು ಮುಜೀಬ್ ಕಲ್ಲಡ್ಕ, ಕಲ್ಲಡ್ಕ ಅಬ್ರಾಡ್ ಫೋರಮ್ ದುಬೈ ಘಟಕದ ಉಪಾಧ್ಯಕ್ಷ ರಫೀಕ್ ನೆಕ್ಕರಾಜೆ, ಗೋಳ್ತಮಜಲು ರಹ್ಮಾನಿಯಾ ಜುಮ್ಮಾ ಮಸ್ಜಿದ್ ನ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಮದಕ, ಕೆ.ಸಿ ರೋಡ್ ಜಮಾತ್ ಪ್ರಧಾನ ಕಾರ್ಯದರ್ಶಿ ಫವಾಜ್, ಕೆ.ಎನ್ ಬೇಕರಿ ಮಾಲಕ ನವಾಜ್, ಗೊಳ್ತಮಜಲು ಜಮಾತ್ ಕಮಿಟಿ ಇಕ್ಬಾಲ್ ಗೋಳ್ತಮಜಲು ಪಾಲ್ಗೊಂಡಿದ್ದರು. ಇಮ್ತಿಯಾಜ್ ಗೋಳ್ತಮಜಲು, ಹಮೀದ್ ಗೊಳ್ತಮಜಲು ಮತ್ತು ಮೊಹಮ್ಮದ್ ಷರೀಫ್ ಕೆ.ಸಿ ರೋಡ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಲ್ಲಡ್ಕ ಅಬ್ರಾಡ್ ಫಾರ್ಮ್ ಕಾರ್ಯಕಾರಿ ಸಮಿತಿ ಸದಸ್ಯ ಅಕ್ಬರ್ ಸ್ವಾಗತಿಸಿ, ಜಾಬಿರ್ ವಂದಿಸಿದರು.

  • ದಮ್ಮಾಮ್‍ನಲ್ಲಿ ಕನ್ನಡದ ಕಂಪನ್ನು ಪಸರಿಸಿದ ಕರುನಾಡ ಸಂಭ್ರಮ

    ದಮ್ಮಾಮ್‍ನಲ್ಲಿ ಕನ್ನಡದ ಕಂಪನ್ನು ಪಸರಿಸಿದ ಕರುನಾಡ ಸಂಭ್ರಮ

    ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್, ಕರ್ನಾಟಕ ಘಟಕದ ಪ್ರಯುಕ್ತ ಇತ್ತೀಚೆಗೆ 66ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ರಫಾ ಕ್ಲಿನಿಕ್ ಆಡಿಟೊರಿಯಂನಲ್ಲಿ ಆಯೋಜಿಸಲಾಗಿತ್ತು. ನಾಡಗೀತೆಯೊಂದಿಗೆ ಪ್ರಾರಂಭಗೊಂಡು ಸಭಾ ಕಾರ್ಯಕ್ರಮ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನೊಳಗೊಂಡು ವಿನೂತನ ಶೈಲಿಯಲ್ಲಿ ಸಭೆಯು ಆಯೋಜನೆಗೊಂಡಿತು.

    ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ರೌದ ಆಸ್ಪತ್ರೆ ಇಲ್ಲಿನ ಮೌಖಿಕ ಹಾಗೂ ಮ್ಯಾಕ್ಸೈಲೋಫೇಸಿಯಲ್ ಶಸ್ತ್ರಚಿಕಿತ್ಸಕ ಡಾ.ಅಭಿಜಿತ್ ವರ್ಗೀಸ್, “ಹೊರ ನಾಡಿನ ಜೀವನ ತಾಯ್ನಾಡಿನ ಬೆಲೆಯೇನೆಂಬುದನ್ನು ನಮಗೆ ತೋರಿಸಿಕೊಟ್ಟಿದೆ. ತಾಯ್ನೆಲದ ಸ್ಮರಣೆಗೆ ಅವಕಾಶವುಂಟು ಮಾಡಿದ ಈ ಕಾರ್ಯಕ್ರಮವನ್ನು ಆಯೋಜಿಸಿದ ಐ.ಎಸ್.ಎಫ್ ಪ್ರಯತ್ನ ಶ್ಲಾಘನೀಯ. ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವ ಐ.ಎಸ್.ಎಫ್ ಸ್ವಯಂಸೇವಕರ ಜೊತೆಗೆ ತಾನು ನಿಲ್ಲಲಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

    ಕನ್ನಡ ರಾಜ್ಯೋತ್ಸವ ಸಂದೇಶ ಭಾಷಣ ನೀಡಿದ ದಮ್ಮಾಮ್ ಐ.ಎಸ್.ಎಫ್ ರಾಜ್ಯ ಸಮಿತಿ ಸದಸ್ಯ ಎ.ಎಂ.ಆರಿಫ್ ಜೋಕಟ್ಟೆ ಮಾತನಾಡುತ್ತಾ, 2,000 ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆಯು 8 ಜ್ಞಾನ ಪೀಠ ಪ್ರಶಸ್ತಿಗಳನ್ನು ಲಭಿಸಿ ಕೊಟ್ಟ ಅತ್ಯಂತ ಹಳೆಯ ಭಾಷೆಯಾಗಿದ್ದು ಹಲವು ತರಹದ ನಾಡಭಾಷೆಗಳ, ನಡೆ ನುಡಿಗಳ, ಜಲ ಸಮೃದ್ಧಿಯ, ಮೌಲ್ಯ, ಸಂಸ್ಕೃತಿಗಳ ರಸಬೀಡು. ಇಂದು ದುರಾದೃಷ್ಟವಶಾತ್ ನಮ್ಮ ಒಕ್ಕೂಟ ಸರಕಾರ ಕನ್ನಡ ಮನಸ್ಸುಗಳನ್ನು ಒಡೆಯುವ ಮುಖಾಂತರ, ಅಂದರೆ ರಾಷ್ಟ್ರೀಯ ಭಾಷೆ ಹಿಂದಿಯನ್ನು ಹೇರುವ ಮುಖಾಂತರ ಕನ್ನಡ ಭಾಷೆಗೆ ತೊಡಕಾಗುವ ಕೆಲಸ ಮಾಡುತ್ತಿದೆ.

    ಹೊಸ ಶಿಕ್ಷಣ ನೀತಿಯ ಪೋಶಾಕಿನಲ್ಲಿ ಪ್ರಾದೇಶಿಕ ಭಾಷೆಗಳಿಗೆ ಕಡಿವಾಣ ಹಾಕುವ ಹುನ್ನಾರವನ್ನೂ ಕೂಡಾ ಒಕ್ಕೂಟ ಸರ್ಕಾರ ಪ್ರಯತ್ನ ಮಾಡುತ್ತಿದೆ. ಇದಲ್ಲದೆ ಐಟಿ. ಬಿಟಿ ಭರಾಟೆಯಲ್ಲಿ, ಬೃಹತ್ ಉದ್ದಿಮೆಗಳಲ್ಲಿ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಹಲವಾರು ಉದ್ಯೋಗ ವ್ಯವಸ್ಥೆಗಳಿದ್ದರೂ, ಸ್ಥಳೀಯರಿಗೆ ಉದ್ಯೋಗಾವಕಶ ನೀಡಬೇಕು ಎಂಬ ನಿಯಮವಿದ್ದರೂ ಅದನ್ನು ನೀಡದೆ ಅಕ್ರಮವೆಸಗುತ್ತಿರುವುದು ಕನ್ನಡ ನಾಡಿಗೆ ಮಾಡುವ ದ್ರೋಹವಾಗಿದೆ. ಇದೀಗ ಸ್ವಲ್ಪ ಮುಂದಕ್ಕೆ ಹೋಗಿ, ಕನ್ನಡ ಮಣ್ಣಿಗೆ ಕಿಂಚಿತ್ತೂ ಕೊಡುಗೆಗಳಿಲ್ಲದ ಪರಕೀಯರ ಹೆಸರನ್ನು ಕರುನಾಡ ಮಣ್ಣಿಗೆ ಇಡಲು ಹೊರಟಿರುವುದು ವಿಪರ್ಯಾಸ ಎಂದರು.

    ಕನ್ನಡದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಜಾತಿ ಮತ ಪಂಗಡಗಳನ್ನು ತೊರೆದು ನಾಡ ಭಾಷೆ, ಜಲ, ಸಂಸ್ಕೃತಿ, ನಾಡುನುಡಿಗಾಗಿ ನಮ್ಮ ಪೂರ್ವಿಕರ ಹಾದಿ ಅನುಸರಿ ಮತ್ತೊಮ್ಮೆ ಹೋರಾಟ, ಚಳವಳಿಗಳನ್ನು ಮಾಡಬೇಕಾದ ಅನಿವಾರ್ಯತೆಯನ್ನೂ ಈ ಸಂಧರ್ಭದಲ್ಲಿ ಒತ್ತಿ ಹೇಳಿದರು.

    ಉಪಾಧ್ಯಕ್ಷರಾದ ಎಂ. ಶರೀಫ್ ಅಡ್ಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. 3000ಕ್ಕೂ ಹೆಚ್ಚು ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಿದ ದಮ್ಮಾಮ್ ನ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೃದಯ ಶಸ್ತ್ರಚಿಕಿತ್ಸಕ ಡಾ.ಫಯಾಝ್ ರನ್ನು ಅವರ ಉದಾರ ಮನಸ್ಸು ಹಾಗೂ ಸಮಾಜ ಸೇವೆಯನ್ನು ಮನಗಂಡು ಅವರನ್ನು ಸನ್ಮಾನಿಸಲಾಯಿತು. ಐ.ಎಸ್.ಎಫ್ ದಮ್ಮಾಮ್ ಕರ್ನಾಟಕ ರಾಜ್ಯಾಧ್ಯಕ್ಷ ಮೆಹ್ರಾಜ್ ಗುಲ್ಬರ್ಗಾ ರವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

    ರಾಜ್ಯ ಸಮಿತಿ ಸದಸ್ಯರಾದ ಇಮ್ರಾನ್ ಕಾಟಿಪಳ್ಳ ಐ.ಎಸ್.ಎಫ್ ಸೌದಿ ಅರೇಬಿಯಾದಾದ್ಯಂತ ವಿವಿಧ ಕನ್ನಡಿಗ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವ ಕುರಿತು ವರದಿಯಿಟ್ಟರು. ಈ ಕುರಿತ ವಿಡಿಯೊ ಚಿತ್ರವನ್ನು ಪ್ರದರ್ಶಿಸಲಾಯಿತು. ಅನಿವಾಸಿ ಕನ್ನಡಿಗರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕನ್ನಡಿಗರಾದ ಜವಾಝ್ ಬಸ್ರೂರು ರಿಯಾದ್, ಲತೀಫ್ ಉಪ್ಪಿನಂಗಡಿ ಜೆದ್ದ, ಮುಹಮ್ಮದ್ ಯಾಸೀನ್ ಗುಲ್ಬರ್ಗಾ ಅಲ್ ಖೋಬರ್ ರವರನ್ನು ಸನ್ಮಾನಿಸಿದ ಕುರಿತು ಉಲ್ಲೇಖಿಸಿದರು.

    ಸಮಾರಂಭದ ಅಂಗವಾಗಿ ನಡೆದ ವಿನೂತನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ಅಭಿಮಾನಿಗಳ ಮನ ಗೆದ್ದಿತು. ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ, ಕರುನಾಡ ದಂತಕಥೆಗಳ ಅಲಂಕಾರಿಕ ಉಡುಗೆಗಳ ವೇಷಭೂಷಣ ಹಾಗೂ ಕನ್ನಡ ಡಿಂಡಿಮದ ಕಲರವ ಹಾಡು ನೆರೆದವರ ಹಾಗೂ ಅಂತರ್ಜಾಲ ವೀಕ್ಷಕರ ಮನಗೆದ್ದಿತು.

    ಅಕ್ಟೋಬರ್ ತಿಂಗಳಲ್ಲಿ ನಡೆಸಿದ್ದ ಗಾಂಧಿ ಜಯಂತಿ ಅಂಗವಾಗಿ ‘ಗಾಂಧಿಯಿಂದ ಗೋಡ್ಸೆಯೆಡೆಗೆ ವಾಲುತ್ತಿರುವ ಭಾರತ’ ಎಂಬ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರ ಹೆಸರುಗಳನ್ನು ಪ್ರಕಟಿಸಲಾಯಿತು. 43 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಥಮ ಸ್ಥಾನವನ್ನು ಶಬೀರ್ ರಹಿಮಾನ್, ದ್ವಿತೀಯ ಸ್ಥಾನವನ್ನು ಫಾತಿಮಾ ರಲಿಯಾ ಮತ್ತು ತೃತೀಯ ಸ್ಥಾನವನ್ನು ಫಾತಿಮಾ ನುಸೈಬಾ ಹಾಗೂ ಸಮೀನಾ ಅಲ್‍ಖೋಬರ್ ಗೆದ್ದುಕೊಂಡರು.

    ಇಂಡಿಯಾ ಫ್ರಟೆರ್ನಿಟಿ ಫೋರಂ ದಮ್ಮಾಮ್, ಕರ್ನಾಟಕ ರಾಜ್ಯಾಧ್ಯಕ್ಷ ಸಾಜಿದ್ ವಳವೂರು, ಐ.ಎಸ್.ಎಫ್ ಕೇಂದ್ರ ಸಮಿತಿ ಸದಸ್ಯ ಸಲಾವುದ್ದೀನ್ ತುಮಕೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೈಸೂರು ಚಾರಿಟೇಬಲ್ ಟ್ರಸ್ಟ್ ರಾಜ್ಯಾಧ್ಯಕ್ಷ ಸಯ್ಯದ್ ಅಮೀನ್, ಶಿವಮೊಗ್ಗ ಚಾರಿಟೇಬಲ್ ಟ್ರಸ್ಟ್ ರಾಜ್ಯಾಧ್ಯಕ್ಷ ನಯಾಝ್ ಅಹ್ಮದ್ ಮತ್ತು ಬೆಳಗಾಂ ಅಸೋಸಿಯೇಷನ್ ನ ಅಮ್ಜದ್ ಮುಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಐ.ಎಸ್.ಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಶರೀಫ್ ಕೃಷ್ಣಾಪುರ ಧನ್ಯವಾದ ಸಲ್ಲಿಸಿದರು ಮತ್ತು ಐ.ಎಸ್.ಎಫ್ ಖೋಬರ್ ಉತ್ತರ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮುನೀರ್ ಮೈಸೂರು ಕಾರ್ಯಕ್ರಮ ನಿರೂಪಿಸಿದರು.

  • ದಮ್ಮಾಮ್‍ನಲ್ಲಿ ಬಿದ್ದು ತೀವ್ರ ಗಾಯಗೊಂಡ ಮಂಗಳೂರು ನಿವಾಸಿಯನ್ನು ತವರು ತಲುಪಿಸಿದ ಇಂಡಿಯನ್ ಸೋಶಿಯಲ್ ಫೋರಮ್

    ದಮ್ಮಾಮ್‍ನಲ್ಲಿ ಬಿದ್ದು ತೀವ್ರ ಗಾಯಗೊಂಡ ಮಂಗಳೂರು ನಿವಾಸಿಯನ್ನು ತವರು ತಲುಪಿಸಿದ ಇಂಡಿಯನ್ ಸೋಶಿಯಲ್ ಫೋರಮ್

    ದಮ್ಮಾಮ್: ಕಟ್ಟಡ ಕಾಮಗಾರಿ ವೇಳೆ ಬಿದ್ದು ಗಂಭೀರ ಗಾಯಗೊಂಡು, ಆರೈಕೆ ನೀಡುವಲ್ಲಿ ಕಂಪೆನಿ ಕಡೆಗಣಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯನ್ನು ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ತವರಿಗೆ ಮರಳಿ ಕಳುಹಿಸಲು ಐ.ಎಸ್.ಎಫ್. ಯಶಸ್ವಿಯಾಗಿದೆ.

    ಮಂಗಳೂರಿನ ಬಜಾಲ್ ಮೂಲದ ಬದ್ರುದ್ದೀನ್(47) ಎಂಬವರು ಸೌದಿ ಅರೇಬಿಯಾದ ದಮ್ಮಾಮ್ ಸಮೀಪದ ಸಫ್ವಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ಸುಮಾರು 5 ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು 10 ಅಡಿ ಎತ್ತರದಿಂದ ಬಿದ್ದು ತಲೆಯ ಮೆದುಳಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನೂ ಓದಿ:ಇಂಟರ್ನೆಟ್‌ ನಿಲುಗಡೆ – ವಿಶ್ವದ ಟಾಪ್ ವೆಬ್‍ಸೈಟ್‍ಗಳು ಡೌನ್

    ಸುಮಾರು 15 ದಿನಗಳ ಕಾಲ ಚಿಕಿತ್ಸೆ ನೀಡಿದ ಕಂಪೆನಿಯು ಅವರು ಸಂಪೂರ್ಣ ಗುಣಮುಖವಾಗುವ ಮುಂಚೆಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿತ್ತು. ಆಸ್ಪತ್ರೆಯ ದುಬಾರಿ ವೆಚ್ಚವನ್ನು ತಪ್ಪಿಸಲು ಕಂಪನಿ ಹಾಗೆ ಮಾಡಿತ್ತು. ರೂಮಿಗೆ ಹಿಂದಿರುಗಿದ ಬದ್ರುದ್ದೀನ್ ಅಸ್ವಸ್ಥರಾಗಿಯೇ ಇದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರಿಗೆ ತವರಿಗೆ ಮರಳುವ ಅಗತ್ಯವಿತ್ತು. ಆದರೆ ಕಂಪನಿ ತವರಿಗೆ ಕಳುಹಿಸಲು ನಿರಾಕರಿಸಿತ್ತು. ಕಂಪನಿ ಎರಡು ವರ್ಷಗಳಿಂದ ಅವರ ಇಕಾಮ ನವೀಕರಿಸಿರಲಿಲ್ಲ ಮತ್ತು ವೇತನವನ್ನೂ ನೀಡಿರಲಿಲ್ಲ.

    ಅವರ ಸಹೋದ್ಯೋಗಿಗಳ ಮೂಲಕ ವಿಷಯ ಅರಿತ ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ಕರ್ನಾಟಕ ಘಟಕವು, ಈ ಸಂಬಂಧ ಮಾಹಿತಿ ಪಡೆಯಲು ತನ್ನ ಸದಸ್ಯರ ತಂಡ ರಚಿಸಿತು. ಅದರಂತೆ ಸದಸ್ಯರಾದ ಮಹಮ್ಮದ್ ಆಲಿ ಮೂಳೂರು ಮತ್ತು ಇಬ್ರಾಹಿಂ ಕ್ರಷ್ನಾಪುರ, ಯಾಸೀನ್ ಗುಲ್ಬರ್ಗ ಸ್ಥಳಕ್ಕೆ ಭೇಟಿ ನೀಡಿ, ಆರೋಗ್ಯದ ಬಗ್ಗೆ ವಿಚಾರಿಸಿ ರೋಗಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿದ್ದರು. ಕಂಪನಿಯನ್ನು ಸಂಪರ್ಕಿಸಿ ಅವರನ್ನು ತವರಿಗೆ ಮರಳಲು ಅವಕಾಶ ನೀಡುವಂತೆ ಕೋರಿದರು. ಕಂಪನಿ ಇದಕ್ಕೆ ಒಪ್ಪಿದರೂ ಎರಡು ತಿಂಗಳುಗಳ ಕಾಲ ಅವರನ್ನು ತವರಿಗೆ ಮರಳಿಸಿರಲಿಲ್ಲ. ಪಟ್ಟುಬಿಡದ ಇಂಡಿಯನ್ ಸೋಶಿಯಲ್ ಫೋರಮ್ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಅನುಮತಿ ಪತ್ರ ಪಡೆದು, ಜೂನ್ 5ರಂದು ಅವರನ್ನು ತವರಿಗೆ ಕಳುಹಿಸಿದೆ. ಇದನ್ನೂ ಓದಿ: ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್

    ಕೊರೊನದ ಈ ಸಂಕಷ್ಟ ಸಂದರ್ಭದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ಕರ್ನಾಟಕ ಸಂಘಟನೆಯು ಮಾಡಿದ ಮಾನವೀಯ ಸೇವೆಯೂ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.