Tag: Dambaru

  • 6 ಕಿ.ಮೀ ರಸ್ತೆಗೆ 6 ಕೋಟಿ- ರಾತ್ರಿ ಹಾಕಿದ್ದ ಡಾಂಬರ್ ಬೆಳಗ್ಗೆ ಕೈಯಲ್ಲಿ

    6 ಕಿ.ಮೀ ರಸ್ತೆಗೆ 6 ಕೋಟಿ- ರಾತ್ರಿ ಹಾಕಿದ್ದ ಡಾಂಬರ್ ಬೆಳಗ್ಗೆ ಕೈಯಲ್ಲಿ

    ಚಿಕ್ಕಮಗಳೂರು: 6 ಕಿ.ಮೀ. ರಸ್ತೆಗೆ 6 ಕೋಟಿ ರೂ. ಒಂದು ವರ್ಷದ ಹಿಂದೆ ಬಿಡುಗಡೆಯಾಗಿತ್ತು. ಆದರೆ ಒಂದು ವರ್ಷದಿಂದ ಕಾಮಗಾರಿ ಮಾಡಿದ ಗುತ್ತಿಗೆದಾರ ಹಾಗೂ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಮಾಡಿದ್ದು ಮೂರೇ ಮೂರು ಕಿ.ಮೀ. ರಸ್ತೆ. ಅದು ರಾತ್ರಿ ಹಾಕಿದ ಡಾಂಬರ್ ಬೆಳಗ್ಗೆ ಕೈಗೆ ಬರುವಂತೆ ಎಂದು ಆರೋಪಿಸಿರೋ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿಕ್ಕನಕೂಡಿಗೆ ಗ್ರಾಮಸ್ಥರು ಗುತ್ತಿಗೆದಾರ ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ನೇರ ರಸ್ತೆಗೆ ಡಾಂಬರ್ ಹಾಕಿ, ಅಪಾಯಕಾರಿ ತಿರುವುಗಳಿಗೆ ಹಿಡಿಗಾತ್ರದ ಕಲ್ಲನ್ನ ಹಾಸಿ ಹಾಗೇ ಬಿಟ್ಟಿದ್ದಾರೆ. ಕಲ್ಲಿನ ಮೇಲೆ ಪ್ರತಿದಿನ ಏಳೋರು, ಬೀಳೋರು ಹತ್ತಾರು ಜನ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ರಸ್ತೆ ಪ್ರವಾಸೋದ್ಯಮಕ್ಕೂ ಸಹಕಾರಿಯಾಗುತ್ತಿತ್ತು. ಯಾಕಂದರೆ ಚಿಕ್ಕಮಗಳೂರು ಪ್ರವಾಸಿ ಜಿಲ್ಲೆಯಾಗಿದ್ದು, ಎರಡು ಧಾರ್ಮಿಕ ಶಕ್ತಿ ಕೇಂದ್ರಗಳು ಇವೆ. ಶೃಂಗೇರಿಯಿಂದ ಹೊರನಾಡಿಗೆ ಈ ಮಾರ್ಗದಲ್ಲಿ ಕೇವಲ 32 ಕಿ.ಮೀ. ಬೇರೆ ಮಾರ್ಗ ಅಂದ್ರೆ ಅದು 80 ಕಿ.ಮೀ. ದೂರವಾಗುತ್ತದೆ. ಹೀಗಾಗಿ ಈ ರಸ್ತೆ ಪ್ರವಾಸಿಗರು ಹಾಗೂ ಭಕ್ತರಿಗೂ ಅನುಕೂಲವಾಗಲಿದೆ. ಸಾಲದ್ದಕ್ಕೆ ಈ ಮಾರ್ಗದಲ್ಲಿ ಹತ್ತಾರು ಹಳ್ಳಿಗಳಿವೆ. ನಾಲ್ಕೈದು ಸಾವಿರ ಜನಸಂಖ್ಯೆ ಇದೆ. ಇಷ್ಟು ಮಾತ್ರವಲ್ಲದೆ ನಕ್ಸಲ್ ಪೀಡಿತ ಪ್ರದೇಶ.

    ಯಾವಾಗ ರಸ್ತೆ ಅವಸ್ಥೆ ಹೀಗಾಯ್ತೋ ಈ ಮಾರ್ಗದಲ್ಲಿ ಓಡಾಡ್ತಿದ್ದ ಬಸ್ಸುಗಳು ಕೂಡ ನಿಂತಿವೆ. ಎಲ್ಲರೂ ಆಟೋದಲ್ಲಿ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಮಳೆಗಾಲ ಶುರುವಾಗುತ್ತೆ. ಆಗ ರಸ್ತೆ ಕಾಮಗಾರಿ ಕಾರ್ಯ ನಿಂತೇ ಹೋಗುತ್ತೆ. ಈ ಕಲ್ಲಿನ ಹಾದಿಯಲ್ಲಿ ಓಡಾಡೋದು ಅಸಾಧ್ಯ ಅನ್ನೋದು ಸ್ಥಳೀಯರ ಆತಂಕವಾಗಿದೆ.

    ರಸ್ತೆ ಅವಸ್ಥೆ ಬಗ್ಗೆ ಶಾಸಕರು, ಅಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯರು ಹಾಗೂ 75 ಶಾಲಾ ಮಕ್ಕಳು 50 ರೂಪಾಯಿ ಕೊಟ್ಟು ಆಟೋ-ಜೀಪ್‍ಗಳಲ್ಲಿ ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ. ನಮಗೆ ಕ್ವಾಲಿಟಿ-ಕ್ವಾಂಟಿಟಿ ಯಾವುದೂ ಬೇಡ. ಜಲ್ಲಿ ಮೇಲೆ ಡಾಂಬರ್ ಹಾಕಿ ಸಾಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಆದರೆ ಸಂಬಂಧಪಟ್ಟವರು ಸಂಬಂಧವಿಲ್ಲದಂತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಬಂದಿದ್ದ ಅಧಿಕಾರಿಯ ಕಾರು ಈ ಜಲ್ಲಿಯ ರಸ್ತೆ ಮೇಲೆ ಹತ್ತಿಲ್ಲ. ಜನರ ಕೈಲಿ ಕಾರನ್ನ ತಳ್ಳಿಸಿಕೊಂಡಿದ್ದಾರೆ. ಆದರೂ ರಸ್ತೆ ಕಾಮಗಾರಿ ಮುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗುಂಡಿಬಿದ್ದ ಕೆಸರು ರಸ್ತೆಯಲ್ಲಿ ನಾರಿಯರ ನಾಟಿ – ಟಾರ್ ಹಾಕಿದ ಐದೇ ದಿನಕ್ಕೆ ಕಿತ್ತುಬಂದ ಡಾಂಬರು!

    ಗುಂಡಿಬಿದ್ದ ಕೆಸರು ರಸ್ತೆಯಲ್ಲಿ ನಾರಿಯರ ನಾಟಿ – ಟಾರ್ ಹಾಕಿದ ಐದೇ ದಿನಕ್ಕೆ ಕಿತ್ತುಬಂದ ಡಾಂಬರು!

    ಮೈಸೂರು/ಚಿಕ್ಕಬಳ್ಳಾಪುರ: ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿನ ನಾಗನಹಳ್ಳಿ-ಹೆಗ್ಗಡೆಪುರದ ರಸ್ತೆಯಲ್ಲಿ ಗುಂಡಿಗಳು ಬಿಟ್ರೆ ಏನೂ ಇಲ್ಲ. ಡಾಂಬರು ಹಾಕಿದ್ದ ರಸ್ತೆ ಹಾಳಾಗಿ ಹೋಗಿದೆ.

    ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಕ್ಷೇತ್ರ ಇದಾಗಿದ್ದು, ಇದೀಗ ರಿಪೇರಿಗೆ ಆಗ್ರಹಿಸಿ ಬೇಸತ್ತ ಊರಿನವರು ಈಗ ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ರಸ್ತೆ ಹಾಳಾಗಿ ಗುಂಡಿ ಬಿದ್ದಿದೆ. ಮಳೆಯಿಂದ ರಸ್ತೆಯೇ ಕೆರೆಯಂತಾಗಿ ಕೆಸರು ತುಂಬಿದೆ. ಇದು ಓಡಾಡುವುದಕ್ಕೆ ಯೋಗ್ಯವಾಗಿಲ್ಲ ಬದಲಾಗಿ ಭತ್ತದ ನಾಟಿಗೆ ಯೋಗ್ಯವಾಗಿದೆ ಎಂದು ಗ್ರಾಮದ ರೈತ ಮಹಿಳೆಯರು ರಸ್ತೆಯಲ್ಲೇ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಸ್ತೆ ದುರಸ್ತಿಗೊಳಿಸುವಂತೆ ಸಾಕಷ್ಟು ಬಾರಿ ಗ್ರಾಮಸ್ಥರು ಮನವಿ ಮಾಡಿದ್ರೂ, ಗ್ರಾಮಸ್ಥರ ಮನವಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸಿದ ಕಾರಣ ಗ್ರಾಮಸ್ಥರು ಈ ವಿನೂತನ ರೀತಿಯ ಪ್ರತಿಭಟನೆ ಮಾಡಿದ್ದಾರೆ.

    ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಎ ರಸ್ತೆ-ಹರಿಹಳ್ಳ-ಗೌಡಹಳ್ಳಿ ಮಾರ್ಗದ ರಸ್ತೆಗೆ ಐದು ದಿನಗಳ ಹಿಂದೆಯಷ್ಟೇ ಹಾಕಿದ್ದ ಡಾಂಬರು ಕಿತ್ಕೊಂಡು ಬರ್ತಿದೆ. 1 ಕೋಟಿ ರೂಪಾಯಿ 17 ಲಕ್ಷ ರೂಪಾಯಿ ಖರ್ಚು ಮಾಡಿ ಒಂದೂವರೆ ಕಿಲೋ ಮೀಟರ್ ರಸ್ತೆಗೆ ಟಾರ್ ಹಾಕಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ಮೂಲದ ಗುತ್ತಿಗೆದಾರ ಜಯಪ್ರಕಾಶ್ ಅನ್ನೋರು ಕಾಮಗಾರಿ ನಡೆಸಿದ್ದು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.