Tag: dam

  • ಅಬ್ಬರದ ಮಳೆಗೆ ಮಲೆನಾಡು ತತ್ತರ -ಕೊಡಗು, ತೀರ್ಥಹಳ್ಳಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

    ಅಬ್ಬರದ ಮಳೆಗೆ ಮಲೆನಾಡು ತತ್ತರ -ಕೊಡಗು, ತೀರ್ಥಹಳ್ಳಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

    – ಕೆಆರ್ ಎಸ್ ಭರ್ತಿಗೆ ಇನ್ನು 10 ಅಡಿ ಬಾಕಿ

    ಬೆಂಗಳೂರು: ಕರಾವಳಿಯಲ್ಲಿ ಮುಂಗಾರಿನ ಅಬ್ಬರ ಕಡಿಮೆಯಾಗಿದೆ. ಆದ್ರೆ ಚಿಕ್ಕಮಗಳೂರು, ಶಿವಮೊಗ್ಗ ಮಡಿಕೇರಿಯಲ್ಲಿ ವರ್ಷಧಾರೆ ನಿರಂತರವಾಗಿದೆ.

    ಇದರಿಂದ ಸಂಚಾರ ದುಸ್ತರವಾಗಿದೆ. ಹಲವು ಮನೆಗಳು ಕುಸಿದಿವೆ. ವಿದ್ಯುತ್ ಕೈಕೊಟ್ಟಿದೆ. ಹಲವು ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೊಡಗು ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನಲ್ಲಿ ಭಾರಿ ಮಳೆಯಾಗ್ತಿದ್ದು, ಶಾಲಾ ಕಾಲೇಜುಗಳಿಗೆ ಇವತ್ತು ರಜೆ ನೀಡಲಾಗಿದೆ.

    ಬೆಂಗಳೂರಲ್ಲಿ ರಾತ್ರಿಯಿಡಿ ಜಿಟಿಜಿಟಿ ಮಳೆಯಾಗಿದೆ. ಇನ್ನು 5 ದಿನ ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಇನ್ನು ಈ ಬಾರಿಯ ಮುಂಗಾರು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಗದೊಂದು ಸಂತಸ ಅಂದ್ರೆ ಸಾಮಾನ್ಯವಾಗಿ ಆಗಸ್ಟ್ ವೇಳೆಗೆ ಜಲಾಶಯಗಳು ಭರ್ತಿ ಆಗುತ್ತಿದ್ದವು. ಆದ್ರೆ, ತಿಂಗಳ ಮುಂಚೆಯೇ ಜುಲೈನಲ್ಲಿ ಬಹುತೇಕ ಡ್ಯಾಮ್‍ಗಳು ಭರ್ತಿಯಾಗಿವೆ.

    ಕಾವೇರಿ ಕೊಳ್ಳದಲ್ಲಿ ಭಾರಿ ಮಳೆಯಿಂದಾಗಿ ಕೆಆರ್ ಎಸ್‍ಗೆ ಒಂದೇ ದಿನ 3ಅಡಿ ನೀರು ಬಂದಿದ್ದು, ಭರ್ತಿಗೆ 10 ಅಡಿ ಬಾಕಿಯಿದೆ. ಕಬಿನಿ ಡ್ಯಾಮ್‍ನಿಂದ 35 ಸಾವಿರ ಕ್ಯೂಸೆಕ್ ಅಂದ್ರೆ 2 ಟಿಎಂಸಿಗೂ ಅಧಿಕ ನೀರು ತಮಿಳುನಾಡಿಗೆ ಹರೀತಿದೆ.

    ಇನ್ನು, ರಾಜ್ಯದ ಪ್ರಮುಖ ಡ್ಯಾಮ್‍ಗಳ ಇವತ್ತಿನ ನೀರಿನ ಮಟ್ಟ ಇಂತಿದೆ
    ಕೆಆರ್ ಎಸ್
    * ಸಂಗ್ರಹ ಸಾಮರ್ಥ್ಯ – 49.45 ಟಿಎಂಸಿ (124.80 ಅಡಿ)
    * ಇಂದಿನ ಮಟ್ಟ – 35.937 ಟಿಎಂಸಿ ( 114.00 ಅಡಿ)
    * ಒಳ ಹರಿವು – 34,757 ಕ್ಯೂಸೆಕ್
    * ಹೊರ ಹರಿವು – 3,615 ಕ್ಯೂಸೆಕ್
    ( ಕಳೆದ ವರ್ಷ ಜುಲೈ ವೇಳೆಗೆ 76 ಅಡಿ ನೀರಿನ ಮಟ್ಟ, 5-6 ವರ್ಷಗಳ ಹಿಂದೆ 112 ರ ಆಸುಪಾಸಿನಲ್ಲಿತ್ತು)

    ಹಾರಂಗಿ
    * ಸಂಗ್ರಹ ಸಾಮರ್ಥ್ಯ – 8.5 ಟಿಎಂಸಿ (2859 ಅಡಿ)
    * ಇಂದಿನ ಮಟ್ಟ – 7.8 ಟಿಎಂಸಿ (2856.79 ಅಡಿ)
    * ಒಳ ಹರಿವು – 12,168 ಕ್ಯೂಸೆಕ್
    * ಹೊರ ಹರಿವು – 13,406 ಕ್ಯೂಸೆಕ್

    ಕಬಿನಿ
    * ಸಂಗ್ರಹ ಸಾಮರ್ಥ್ಯ – 19.50 ಟಿಎಂಸಿ (2,284 ಅಡಿ)
    * ಈಗಿನ ಮಟ್ಟ – 18.31 ಟಿಎಂಸಿ (2,282.14 ಅಡಿ)
    * ಒಳ ಹರಿವು – 40,000 ಕ್ಯೂಸೆಕ್
    * ಹೊರ ಹರಿವು – 40,000 ಕ್ಯೂಸೆಕ್

    ಹೇಮಾವತಿ
    * ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ (2922.00 ಅಡಿ)
    * ಇಂದಿನ ಮಟ್ಟ – 27.12 ಟಿಎಂಸಿ (2910.58 ಅಡಿ)
    * ಒಳಹರಿವು – 19,847 ಕ್ಯೂಸೆಕ್
    * ಹೊರಹರಿವು – 2,350 ಕ್ಯೂಸೆಕ್

    ತುಂಗಭದ್ರಾ
    * ಸಂಗ್ರಹ ಸಾಮರ್ಥ್ಯ – 100 ಟಿಎಂಸಿ (1633 ಅಡಿ)
    * ಇಂದಿನ ಮಟ್ಟ – 46.160 ಟಿಎಂಸಿ (1615.18 ಅಡಿ)
    * ಒಳ ಹರಿವು – 38,052 ಕ್ಯೂಸೆಕ್
    * ಹೊರ ಹರಿವು – 160 ಕ್ಯೂಸೆಕ್

    ಆಲಮಟ್ಟಿ
    * ಸಂಗ್ರಹ ಸಾಮರ್ಥ್ಯ – 123.081 ಟಿಎಂಸಿ (519.6 ಮೀ.)
    * ಪ್ರಸುತ್ತ ಟಿಎಂಸಿ – 56.268 ಟಿಎಂಸಿ (514.20 ಮೀ.)
    * ಒಳಹರಿವು – 52,897 ಕ್ಯೂಸೆಕ್
    * ಹೊರಹರಿವು – 00 ಕ್ಯೂಸೆಕ್

    ಲಿಂಗನಮಕ್ಕಿ
    * ಸಂಗ್ರಹ ಸಾಮರ್ಥ್ಯ – 1,819 ಅಡಿ
    * ಇಂದಿನ ಮಟ್ಟ – 1,781 ಅಡಿ
    * ಒಳ ಹರಿವು – 41,547 ಕ್ಯೂಸೆಕ್
    * ಹೊರ ಹರಿವು – 279 ಕ್ಯೂಸೆಕ್

    ಭದ್ರಾ
    * ಸಂಗ್ರಹ ಸಾಮರ್ಥ್ಯ – 186 ಅಡಿ
    * ಇಂದಿನ ಮಟ್ಟ – 155 ಅಡಿ
    * ಒಳ ಹರಿವು – 20,079 ಕ್ಯೂಸೆಕ್
    * ಹೊರ ಹರಿವು – 230 ಕ್ಯೂಸೆಕ್

    ತುಂಗಾ
    * ಸಂಗ್ರಹ ಸಾಮರ್ಥ್ಯ – 588.24 ಮೀಟರ್
    * ಇಂದಿನ ಮಟ್ಟ – 588 ಮೀಟರ್
    * ಒಳ ಹರಿವು – 40,327 ಕ್ಯೂಸೆಕ್
    * ಹೊರ ಹರಿವು – 38,871 ಕ್ಯೂಸೆಕ್

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ರಾಜ್ಯಕ್ಕೆ ಮುಂಗಾರು ಮಳೆ ಖುಷಿ: ಜುಲೈನಲ್ಲೇ ಬಹುತೇಕ ಜಲಾಶಯಗಳು ಭರ್ತಿ

    ರಾಜ್ಯಕ್ಕೆ ಮುಂಗಾರು ಮಳೆ ಖುಷಿ: ಜುಲೈನಲ್ಲೇ ಬಹುತೇಕ ಜಲಾಶಯಗಳು ಭರ್ತಿ

    ಬೆಂಗಳೂರು: ಮುಂಗಾರು ಮಳೆ ಈ ಬಾರಿ ರಾಜ್ಯಕ್ಕೆ ಖುಷಿ ತಂದಿದೆ. ಮುಂಗಾರು ಬಹುತೇಕ ಎಲ್ಲಾ ಜಿಲ್ಲೆಗಳನ್ನು ಆವರಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮತ್ತೊಂದು ಸಂತಸ ಅಂದರೆ ಸಾಮಾನ್ಯವಾಗಿ ಆಗಸ್ಟ್ ವೇಳೆಗೆ ಜಲಾಶಯಗಳು ಭರ್ತಿ ಆಗುತ್ತಿದ್ದವು. ಆದರೆ ಈ ಬಾರಿ ತಿಂಗಳ ಮುಂಚೆಯೇ ಜುಲೈನಲ್ಲಿ ಬಹುತೇಕ ಡ್ಯಾಮ್‍ಗಳು ಭರ್ತಿಯಾಗುತ್ತಿವೆ.

    ಪ್ರತಿ ವರ್ಷವೂ ನೀರಿಗಾಗಿ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ಈಗ ಬಾಯಿ ಬಂದ್ ಮಾಡಿಕೊಂಡಿದೆ. ಕಾರಣ ಅಷ್ಟರ ಮಟ್ಟಿಗೆ ಕೆಆರ್‌ಎಸ್ ನಿಂದ ನೀರು ಹರಿದು ಹೋಗುತ್ತಿದೆ. ಇನ್ನೂ ಎರಡು ದಿನ ಮಳೆಯಾಗಲಿದ್ದು ಇವತ್ತು ಸಹ ರಾಜ್ಯದ ಹಲವೆಡೆ ಬಿಟ್ಟೂ ಬಿಡದೆ ಮಳೆಯಾಗಿದೆ.

    ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಕಳಸ, ಬಾಳೆಹೊನ್ನೂರು, ಶೃಂಗೇರಿ, ಕುದುರೆಮುಖ ಭಾಗದಲ್ಲಿ ವರುಣ ರುದ್ರನರ್ತನ ಮಾಡುತ್ತಿದ್ದಾನೆ. 3 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕಳೆದ 8-10 ವರ್ಷಗಳಿಂದ ತುಂಬದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಶೃಂಗೇರಿಯಲ್ಲಿ 15 ವರ್ಷಗಳಲ್ಲೇ ದಾಖಲೆ ಮಟ್ಟದ ಮಳೆಯಾಗಿದೆ. ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ರೈತರು ಖುಷಿ ಜೊತೆಗೆ ಕಾಫಿ, ಮೆಣಸು, ಅಡಿಕೆಗೆ ಕೊಳೆ ರೋಗದ ಭೀತಿ ಶುರುವಾಗಿದ್ದರಿಂದ ಆತಂಕದಲ್ಲಿದ್ದಾರೆ. ಕಂಬಿಹಳ್ಳಿಯಲ್ಲಿ ಗೋಡೆ ಕುಸಿದು ವನಜಾ (48) ಎನ್ನುವವರು ಮೃತಪಟ್ಟಿದ್ದಾರೆ.

    ಕೊಡಗು: ಜಿಲ್ಲೆಯಲ್ಲಿ ಮಳೆಯ ಆರ್ಭಟ ನಿಲ್ಲುತ್ತಿಲ್ಲ. ಕಾವೇರಿ ನದಿಗೆ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಮರಗಳು, ವಿದ್ಯುತ್ ಕಂಬಗಳು ಮತ್ತಷ್ಟು ನೆಲಕ್ಕೆ ಉರುಳುತ್ತಿವೆ. ಸೋಮವಾರಪೇಟೆ ತಾಲೂಕಿನ ಶುಂಠಿಕೊಪ್ಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುಡ್ಡ ಕುಸಿತ ಉಂಟಾಗಿ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಕೊಯನಾಡು ಬಳಿ ಕೆಎಸ್‍ಆರ್ ಟಿಸಿ ಬಸ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಅದೃಷ್ಟವಶಾತ್ ವಿದ್ಯುತ್ ಇಲ್ಲದ ಕಾರಣ ಅನಾಹುತ ಸಂಭವಿಸಿಲ್ಲ.

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ವರ್ಷಧಾರೆ ಆಗುತ್ತಿದೆ. ಉಪ್ಪಿನಂಗಡಿ-ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆ ಮತ್ತೆ ಮತ್ತೆ ಮುಳುಗಡೆ ಆಗುತ್ತಿದೆ. ಹಾಗಾಗಿ, ರಸ್ತೆ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ಮೂರು ದಿನಗಳಿಂದ ವ್ಯಾಪಕ ಮಳೆಯಾಗಿದ್ದು ಕೆರೆಕಟ್ಟೆಗಳು ನೀರು ತುಂಬಿ ತುಳುಕುತ್ತಿವೆ. ಶಿರಸಿ, ಸಿದ್ದಾಪುರ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕರಾವಳಿ ಭಾಗದ ಕಾರವಾರದಲ್ಲಿ ಮಳೆಯ ಆರ್ಭಟ ಅಲ್ಪಪ್ರಮಾಣದಲ್ಲಿ ಇಳಿಮುಖವಾಗಿದೆ.

    ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಕೊಯ್ನಾ ದಡದಲ್ಲಿ ನಿರಂತರ ಮಳೆಯಿಂದಾಗಿ, ಕೃಷ್ಣಾ ನದಿ ಮೈದುಂಬಿದೆ. ನೀರಿನ ಹರಿವು ಹೆಚ್ಚಾಳದಿಂದ ನದಿ ತೀರದ ಜಮಖಂಡಿಯ ಮತ್ತೂರು, ಮೈಗೂರು, ಕಂಕನವಾಡಿ, ಶೂರ್ಪಾಲಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳು ಸಿಲುಕುವ ಸಾಧ್ಯತೆ ಇದೆ. ಜಮಖಂಡಿಯ ಹಿಪ್ಪರಿಗೆ ಬ್ಯಾರೇಜ್‍ನ ಒಳ ಹಾಗೂ ಹೊರ ಹರಿವು ಹೆಚ್ಚಾಗಿದೆ. ಕೃಷಿ, ಕೂಲಿ, ಸಂತೆ ಜಾನುವಾರುಗಳಿಗೆ ಮೇವು ಸಾಗಾಟಕ್ಕೆ ಜನ ಬೋಟ್ ಅವಲಂಬಿಸುತ್ತಿದ್ದಾರೆ.

    ಧಾರವಾಡ: ಧಾರವಾಡದಲ್ಲಿ ಬೆಳಗ್ಗೆಯೇ ಮಳೆರಾಯ ಅಬ್ಬರಿಸಿದ್ದರಿಂದ ನಗರದ ಜನ ಜೀವನ ಅಸ್ತವ್ಯಸ್ತವಾಗಿ ಪರದಾಡಬೇಕಾಯಿತು.

    ಯಾದಗಿರಿ: ಜಿಲ್ಲೆಯ ಶಹಾಪೂರ, ಸುರಪುರಗಳಲ್ಲಿ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ, ದಟ್ಟವಾದ ಮೋಡಗಳು ಆವರಿಸಿದ್ದವು.

    ಕೋಲಾರ: ಕರಾವಳಿ, ಮಲೆನಾಡು ಮಾತ್ರವಲ್ಲ ಬರದ ನಾಡು ಕೋಲಾರದಲ್ಲೂ ವರ್ಷಧಾರೆ ಇದೆ. 3 ದಿನಗಳಿಂದ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಮಳೆಯಾಯಿತು. ರೈತರು ಈಗಲೇ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

     

    ಬೆಂಗಳೂರು: ಬೆಂಗಳೂರು ನಗರ, ಹೊಸಕೋಟೆ, ನೆಲಮಂಗಲ, ಆನೇಕಲ್ ಗಳಲ್ಲೂ ಮಳೆಯಾಯಿತು. ಮಧ್ಯಾಹ್ನವೇ ಮಳೆಯ ಅರ್ಭಟ ಶುರುವಾಗಿ ಅರ್ಧ ಗಂಟೆ ಬಿರುಗಾಳಿ ಸಹಿತ ಮಳೆಯಾಯಿತು. ನೆಲಮಂಗಲದ ನಿಡುವಂದ ಬಳಿ ಭಾರೀ ಮಳೆಯಿಂದಾಗಿ ರಸ್ತೆ ಕಾಣದೆ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಹೊಸಕೋಟೆ ತಾಲೂಕಿನ ಬಂಡಹಳ್ಳಿ ಹೊರವಲಯದಲ್ಲಿ ತಮಿಳುನಾಡಿನಿಂದ ಆಂಧ್ರ ಪ್ರದೇಶಕ್ಕೆ ರವಾನೆ ಆಗುತ್ತಿದ್ದ ಹೆಟೆನ್ಷನ್ ವಿದ್ಯುತ್ ಟವರ್ ಕಳಪೆ ಕಾಮಗಾರಿಯಿಂದಾಗಿ ಬಿರುಗಾಳಿಗೆ ಮುರಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ವಿದ್ಯುತ್ ತಂತಿ ಅಳವಡಿಸದ ಕಾರಣ ಅನಾಹುತ ತಪ್ಪಿದೆ.

  • ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ವರುಣನ ಆರ್ಭಟ- ಇನ್ನು ನಾಲ್ಕು ದಿನಗಳ ಕಾಲ ಭಾರೀ ಮಳೆ!

    ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ವರುಣನ ಆರ್ಭಟ- ಇನ್ನು ನಾಲ್ಕು ದಿನಗಳ ಕಾಲ ಭಾರೀ ಮಳೆ!

    ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಇನ್ನು ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಹೈ ಅಲರ್ಟ್ ಘೋಷಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 11ರ ತನಕ ಮಳೆ ಮುಂದುವರಿಯಲಿದ್ದು, ಜಿಲ್ಲಾಡಳಿತ ತುರ್ತು ನಿರ್ವಹಣೆಗೆ ಸಿದ್ಧಗೊಂಡಿದೆ. ತಗ್ಗು ಪ್ರದೇಶಗಳೂ ಜಲಾವೃತಗೊಂಡಿದ್ದು, ಅವರನ್ನು ರಕ್ಷಣಾ ತಂಡಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಪ್ರಾಕೃತಿಕ ವಿಕೋಪ ನಿಧಿಯಿಂದ ಈಗಾಗಲೇ ರಕ್ಷಣಾ ಪರಿಕರಗಳನ್ನು ಜಿಲ್ಲಾಡಳಿತ ಖರೀದಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೋಂ ಗಾರ್ಡ್‍ಗೆ ಹಸ್ತಾಂತರಿಸಿದ್ದಾರೆ.

    ಅಲ್ಲದೆ ಮಳೆಯಿಂದಾಗಿ ಹೆಚ್ಚಿನ ಅನಾಹುತವಾದಲ್ಲಿ ಕ್ರಮಕೈಗೊಳ್ಳಲು ಎರಡು ಪ್ರಾಕೃತಿಕ ವಿಪತ್ತು ನಿರ್ವಾಹಣಾ ತಂಡಗಳು ಜಿಲ್ಲೆಗೆ ಆಗಮಿಸಿದೆ. ಇನ್ನು ಜಿಲ್ಲೆಯ ಎಲ್ಲಾ ಜೀವ ನದಿಗಳೂ ಅಪಾಯದ ಮಟ್ಟ ಮೀರಿ ಮೈದುಂಬಿ ಹರಿಯುತ್ತಿದೆ. ಮಡಿಕೇರಿಯ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದೆ. ಹಾರಂಗಿ ಡ್ಯಾಂ ಭರ್ತಿಗೆ 4 ಅಡಿ ಮಾತ್ರ ಬಾಕಿಯಿದೆ. ಮಳೆ ಇದೇ ರೀತಿ ಮುಂದುವರಿದರೆ ತಗ್ಗು ಪ್ರದೇಶಗಳು ಇನ್ನಷ್ಟು ಮುಳುಗಡೆಯಾಗುವ ಭೀತಿ ಇದೆ.

    ಡ್ಯಾಂ ಲೆವಲ್
    ಕಾವೇರಿ ಕೊಳ್ಳದ ಜಲಾಶಯಗಳ ಸದ್ಯದ ನೀರಿನ ಪ್ರಮಾಣ ನೋಡೋದಾದ್ರೆ;

    ಕೆಆರ್ ಎಸ್ (ಮಂಡ್ಯ)
    * ಇಂದಿನ ಮಟ್ಟ – 108.78 ಅಡಿ ( ಗರಿಷ್ಠ 124.80 ಅಡಿ)
    * ಒಳ ಹರಿವು – 2505 ಕ್ಯೂಸೆಕ್
    * ಹೊರ ಹರಿವು – 3482 ಕ್ಯೂಸೆಕ್

    ಕಬಿನಿ (ಮೈಸೂರಿನ ಎಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿದೆ)
    * ಇಂದಿನ ಮಟ್ಟ – 2283 ಅಡಿ ( ಗರಿಷ್ಠ 2,284 ಅಡಿ)
    * ಒಳ ಹರಿವು – 22,000 ಕ್ಯೂಸೆಕ್
    * ಹೊರ ಹರಿವು – 25,000 ಕ್ಯೂಸೆಕ್

    ಹಾರಂಗಿ (ಕೊಡಗಿನ ಸೋಮವಾರಪೇಟೆಯ ಹುದ್ಗೂರು)
    * ಇಂದಿನ ಮಟ್ಟ – 2852.49 ಅಡಿ (ಗರಿಷ್ಠ 2,859 ಅಡಿ)
    * ಒಳ ಹರಿವು – 2591 ಕ್ಯೂಸೆಕ್
    * ಹೊರ ಹರಿವು – 1200 ಕ್ಯೂಸೆಕ್

    ಇನ್ನು ಕರ್ನಾಟಕವಷ್ಟೇ ಅಲ್ಲ, ಕೇರಳ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಮುಂದಿನ ಐದು ದಿನಗಳವರೆಗೆ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗಲೇ ಭಾರೀ ಮಳೆಗೆ ಮಹಾನರಿ ಮುಂಬೈ ಮುಳುಗಿ ಹೋಗಿದೆ. ಮಲಾಡ್, ಬೋರಿವಿಲಿ, ಪವಾಯಿ, ನವಿ ಮುಂಬೈ, ಥಾಣೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ನವಿ ಮುಂಬೈನಲ್ಲಿ ಮಳೆ ಆರ್ಭಟದಿಂದ ಟ್ರಾಫಿಕ್ ಉಂಟಾಗಿ ಸವಾರರು ಪರದಾಡಿದ್ರು. ಇನ್ನು ರೈಲ್ವೇ ಹಳಿಗಳು ಜಲಾವೃತವಾಗಿದ್ದು, ರಸ್ತೆಗಳು ಅಯೋಮಯವಾಗಿದೆ. ವರುಣನ ರುದ್ರ ನರ್ತನಕ್ಕೆ ಮುಂಬೈ ನಡುಗಿ ಹೋಗಿದ್ದು, ಜನ ನಿದ್ದೆ ಇಲ್ಲದೇ ದಿನ ದೂಡೋ ಸ್ಥಿತಿ ನಿರ್ಮಾಣವಾಗಿದೆ.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು ಕ್ಯೂಬಿಕ್ ಫೀಟ್ ಪರ್ ಸೆಕೆಂಡ್ ನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ- ರಾಜ್ಯದ ರೈತರ ಪಾಲಿಗೆ ಸಂತೋಷದ ಸುದ್ದಿ

    ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ- ರಾಜ್ಯದ ರೈತರ ಪಾಲಿಗೆ ಸಂತೋಷದ ಸುದ್ದಿ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ನಾಲ್ಕು ವರ್ಷದ ಬರಗಾಲಕ್ಕೆ ಈ ಬಾರಿ ಅಂತ್ಯ ಕಾಣಲಿದೆ. ಅಲ್ಲದೇ ರಾಜ್ಯದ ರೈತರ ಪಾಲಿಗೆ ಸಂತೋಷದ ಸುದ್ದಿ ನೀಡಿದೆ.

    ರಾಜಕ್ಕೆ ಜೂನ್ ತಿಂಗಳಲ್ಲಿ ಶೇಕಡಾ 25 ರಷ್ಟು ಮಳೆ ಹೆಚ್ಚಾಗಿದೆ. ನಾಲ್ಕು ವರ್ಷದಿಂದ ಮಳೆಯ ಕೊರತೆಯನ್ನು ಅನುಭವಿಸಿದ್ದ ರಾಜ್ಯ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜೂನ್ ನಲ್ಲಿ ವಾಡಿಕೆಯಂತೆ 162.4 ಮೀಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 202.3 ಮೀಲಿ ಮೀಟರ್ ಮಳೆಯಾಗಿದೆ.

    ರಾಜ್ಯದ 30 ಜಿಲ್ಲೆಗಳಲ್ಲಿ ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ಮಳೆಯ ಕೊರತೆಯಾಗಿದೆ. 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, 14 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಹೀಗಾಗಿ ರಾಜ್ಯದ ಹಲವು ಡ್ಯಾಂ ಗಳಿಗೆ ಜೀವ ಕಳೆ ತುಂಬಿದೆ.

    ಡ್ಯಾಂ ನಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇನ್ನೂ ಮಳೆ ರಾಜ್ಯದಲ್ಲಿ ಸಾಕಷ್ಟು ಅನಾಹುತ ಕೂಡ ಸೃಷ್ಟಿ ಮಾಡಿದ್ದು, ಮಳೆ ಸೃಷ್ಟಿಸಿದ ಅನಾಹುತದಿಂದಾಗಿ 119 ಜನರು ಸಾವನ್ನಪ್ಪಿದ್ದಾರೆ. ಈ ಭಾರಿ ಮುಂಗಾರು ಮಳೆ ಮುಂದಿನ ದಿನಗಳಲ್ಲಿ ಕೂಡ ಉತ್ತಮ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಸದ್ಯ ರಾಜ್ಯದ ಎಲ್ಲಾ ಡ್ಯಾಂ ಗಳು ತುಂಬುವ ನೀರಿಕ್ಷೆಗಳಿವೆ.

  • ಭಾರೀ ಮಳೆ- ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕಕ್ಕೆ ನೀರು ಬಿಡುಗಡೆ

    ಭಾರೀ ಮಳೆ- ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕಕ್ಕೆ ನೀರು ಬಿಡುಗಡೆ

    ವಿಜಯಪುರ: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಅಲ್ಲಿನ ಉಜನಿ ಜಲಾಶಯದಿಂದ ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡಲಾಗಿದೆ.

    ಉಜನಿ ಜಲಾಶಯದಿಂದ ಹರಿದು ಬಂದ ಅಪಾರ ಪ್ರಮಾಣದ ನೀರು ಜಿಲ್ಲೆಯ ಇಂಡಿ ತಾಲೂಕಿನ ಉಮರಜ ಬಳಿ ಹರಿಯುವ ಭೀಮಾ ನದಿಗೆ ಬಂದು ಸೇರಿದೆ. ಭೀಮಾ ನದಿ ತುಂಬಿ ಹರಿಯುತ್ತಿರುವುದರಿಂದ ಅಲ್ಲಿನ ರೈತರು ಸಂತಸಗೊಂಡಿದ್ದಾರೆ.

    ಜಿಲ್ಲೆಯಾದ್ಯಂತ ಕೂಡ ಉತ್ತಮ ಮಳೆ ಆಗಿರುವುದರಿಂದ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಬಳಿಯ ಡೋಣಿ ಸೇತುವೆ ತುಂಬಿ ಹರಿದಿದೆ. ತುಂಬಿ ಹರಿದ ಸೇತುವೆ ಮೇಲೆಯೇ ಅನಾಹುತ ಲೆಕ್ಕಿಸದೆ ಸರ್ಕಾರಿ ಬಸ್, ಬೈಕ್ ಸವಾರರು, ಸ್ಥಳಿಯರು ಹಾಗೂ ಗ್ರಾಮಸ್ಥರು ಸಂಚಾರ ಮಾಡಿದ್ದಾರೆ.

    ಹಡಗಿನಾಳ, ಶಿವಪುರ, ಮೂಕಿಹಾಳ, ನಾಗೂರು, ಹರನಾಳ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು ಸಂಚಾರ ಬಂದ್ ಆಗಿದೆ. ಸೇತುವೆಯನ್ನು ಎತ್ತರಿಸಬೇಕೆಂದು ಸ್ಥಳೀಯರ ಒತ್ತಾಯ ಮಾಡಿದ್ದಾರೆ.

  • ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಉಡುಪಿಯಲ್ಲಿ ತುಂಬಿತು ಅಣೆಕಟ್ಟು!

    ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಉಡುಪಿಯಲ್ಲಿ ತುಂಬಿತು ಅಣೆಕಟ್ಟು!

    ಉಡುಪಿ: ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಜಿಲ್ಲೆಯ ನಗರದ ಕುಡಿಯುವ ನೀರಿನ ಮೂಲ ತುಂಬಿದೆ.

    ಹಿರಿಯಡ್ಕದಲ್ಲಿರುವ ಬಜೆ ಅಣೆಕಟ್ಟು ತುಂಬಿ ತುಳುಕುತ್ತಿದೆ. ಮೆಕುನು ಚಂಡಮಾರುತ ಮತ್ತು ಅರಬ್ಬೀ ಸಮುದ್ರದ ವಾಯುಭಾರ ಕುಸಿತದಿಂದ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿತ್ತು. ಎರಡು ದಿನಗಳ ಕಾಲ ಸುರಿದ ಬಿರುಸಿನ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ತುಳುಕುತ್ತಿದೆ.

    ಕಾರ್ಕಳ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಸ್ವರ್ಣಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಬಜೆ ಅಣೆಕಟ್ಟು ಭರ್ತಿಯಾಗಿದೆ. ಮೇ ತಿಂಗಳ 15ರ ನಂತರ ಉಡುಪಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಪ್ರತೀ ವರ್ಷ ಎದುರಾಗುತಿತ್ತು. ಆದರೆ ಈ ಬಾರಿ ಸೂಕ್ತ ಸಮಯದಲ್ಲಿ ಮಳೆ ಬಂದಿರುವುದರಿಂದ ನೀರಿನ ಸಮಸ್ಯೆಯಾಗಿಲ್ಲ. ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ತೆರೆಯಲಾಗಿದೆ.

    ಮಳೆ ನೀರು ನೆರೆಯ ರೂಪದಲ್ಲಿ ಹರಿದು ಬರುತ್ತಿರುವುದರಿಂದ ನೀರನ್ನು ಸಮುದ್ರದ ಕಡೆ ಬಿಡಲಾಗುತ್ತಿದೆ. ಅಣೆಕಟ್ಟುವಿನಲ್ಲಿ ಭಾರೀ ಹೂಳು ತುಂಬಿಕೊಂಡಿದ್ದು, ಈ ಬಾರಿಯ ಬೇಸಿಗೆಯಲ್ಲಿ ಕೂಡಾ ಅದನ್ನು ತೆಗೆಯುವ ಕೆಲಸ ಉಡುಪಿ ನಗರಸಭೆ ಮಾಡಿಲ್ಲ. ಅಣೆಕಟ್ಟುವಿನಲ್ಲಿ ಬೇಸಿಗೆ ಅಂತ್ಯದವರೆಗೆ ನಗರಕ್ಕೆ ಬೇಕಾದಷ್ಟು ನೀರು ಹಿಡಿದಿರುವ ಸಾಮರ್ಥ್ಯವಿದೆ. ಆದರೆ ನಗರಸಭೆ ಹೂಳೆತ್ತದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೆಮಿಕಲ್ ಸೋರಿಕೆಯಿಂದ ಸುಟ್ಟು ಕರಕಲಾದ ಮರಗಳು

    ಕೆಮಿಕಲ್ ಸೋರಿಕೆಯಿಂದ ಸುಟ್ಟು ಕರಕಲಾದ ಮರಗಳು

    ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಕೆಮಿಕಲ್ ಸಾಗಿಸುತ್ತಿದ್ದ ಲಾರಿಯಿಂದ ಕೆಮಿಕಲ್ ಸೋರಿಕೆಯಾಗಿ ಮರಗಳು ಸುಟ್ಟು ಹೋಗಿರುವ ಘಟನೆ ಕಾಳಿ ನದಿಯ ಬಳಿ ನಡೆದಿದೆ.

    ಕೈಗಾಗೆ ಹೋಗಬೇಕಿದ್ದ ಲಾರಿ ದಾರಿ ತಪ್ಪಿ ಕದ್ರಾ ಕಡೆ ಬಂದಿದೆ. ಕೈಗಾ ಕಡೆ ಲಾರಿ ತಿರುಗಿಸುವಾಗ ಕೆಮಿಕಲ್ ಸೋರಿಕೆಯಾಗಿ ಮರಗಳು ಸುಟ್ಟು ಹೋಗಿವೆ. ಪಕ್ಕದಲ್ಲೇ ಹರಿಯುತ್ತಿದ್ದ ನೀರಿಗೂ ಕೆಮಿಕಲ್ ಸೇರಿಕೊಂಡಿದೆ. ಇದರಿಂದ ನೂರಾರು ಮೀನುಗಳು ಸಾವನ್ನಪ್ಪಿವೆ ಹಾಗೂ ಒಂದು ಎಮ್ಮೆ ಸತ್ತಿದೆ ಎಂದು ತಿಳಿದುಬಂದಿದೆ.

    ಕದ್ರಾ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರು ಇದಾಗಿದ್ದು, ಮುನ್ನೇಚ್ಚರಿಕಾ ಕ್ರಮವಾಗಿ ಗ್ರಾಮಕ್ಕೆ ಎರಡು ದಿನ ಕುಡಿಯುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕದ್ರಾ ಗ್ರಾಮದಲ್ಲಿ ಸುಮಾರು 5 ಸಾವಿರ ಜನ ವಾಸಮಾಡುತ್ತಾರೆ. ಎರಡು ದಿನ ಕುಡಿಯುವ ನೀರನ್ನು ಸ್ಥಗಿತ ಮಾಡಿದಲ್ಲಿ ತೊಂದರೆಯಾಗುತ್ತದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

    ಕರ್ನಾಟಕ ವಿದ್ಯುತ್ ನಿಗಮ, ಎನ್ ಪಿ ಸಿ ಕಾಲೋನಿಗಳು ಇದೇ ಗ್ರಾಮದಲ್ಲಿ ಇವೆ. ಎರಡು ದಿನ ಕುಡಿಯುವ ನೀರನ್ನು ಬಂದ್ ಮಾಡಿದಲ್ಲಿ ಬೇರೆ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

    ಲಾರಿ ಸಿಬ್ಬಂದಿಗಳು ಸೋರಿಕೆಯನ್ನು ಸರಿಪಡಿಸಿಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಯಾವುದೇ ದೂರು ದಾಖಲಾಗಿಲ್ಲ.

  • ಕನ್ನಡಿಗರ ಕೈ ತಪ್ಪಲಿದೆಯೇ ಕಾವೇರಿ ನದಿ, ಡ್ಯಾಂಗಳು?

    ಕನ್ನಡಿಗರ ಕೈ ತಪ್ಪಲಿದೆಯೇ ಕಾವೇರಿ ನದಿ, ಡ್ಯಾಂಗಳು?

    ಬೆಂಗಳೂರು: ಕಾವೇರಿ ನದಿ ಮತ್ತು ಡ್ಯಾಂಗಳು ಕನ್ನಡಿಗರ ಕೈತಪ್ಪಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ-ತಮಿಳುನಾಡು ನಡುವಿನ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ 14 ಪುಟಗಳ ಕಾವೇರಿ ಸ್ಕೀಂ ಕರಡುವನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ.

    ಇಂದು ಇದರ ಬಗ್ಗೆ ವಿಚಾರಣೆ ನಡೆಯಲಿದ್ದು, ಎಲ್ಲಾ ರಾಜ್ಯಗಳಿಂದ ಒಟ್ಟು 9 ಜನ ಸದಸ್ಯರ ನೇಮಕ ಮಾಡುವುದಾಗಿ ಸ್ಕೀಂ ಕರಡುನಲ್ಲಿ ಉಲ್ಲೇಖಿಸಲಾಗಿದೆ. ಕಾವೇರಿ ಸ್ಕೀಂನ್ನು ಏನೆಂದು ಕರೆಯಬೇಕು, ಪ್ರಾಧಿಕಾರವೋ, ಸಮಿತಿಯೋ, ಮಂಡಳಿಯೋ ಎಂಬುದನ್ನು ನ್ಯಾಯಪೀಠವೇ ತೀರ್ಮಾನಿಸುತ್ತೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಇದನ್ನೂ ಓದಿ: ಕಾವೇರಿ ಸ್ಕೀಂ ಸುಪ್ರೀಂಗೆ ಕರಡು ಅಫಿಡವಿಟ್ ಸಲ್ಲಿಕೆ: ಹೇಗಿರಲಿದೆ ಸ್ಕೀಂ? ಕಾರ್ಯಗಳು ಏನು? ಯಾರೆಲ್ಲ ಇರಲಿದ್ದಾರೆ?

    ಹಾಗಾದ್ರೆ ಕಾವೇರಿ ಡ್ರಾಫ್ಟ್ ಸ್ಕೀಂ ಕರಡುವಿನಲ್ಲಿರುವ ಅಂಶಗಳು ಏನೇನು ಅಂತ ನೋಡೋದಾದ್ರೆ..
    * ಕಾವೇರಿ ನೀರಿನ ಸಂಗ್ರಹ & ನಿಯಂತ್ರಣ
    * ಜಲಾಶಯ, ನೀರು ಬಿಡುಗಡೆಯ ಮೇಲ್ವಿಚಾರಣೆ
    * ಬಿಳಿಗುಂಡ್ಲು ಬಳಿ ನೀರಿನ ಅಳತೆ ಮಾಡುವ ಜವಾಬ್ದಾರಿ ಪ್ರಾಧಿಕಾರದ್ದೇ
    * ನ್ಯಾಯಮಂಡಳಿ ಆದೇಶದಂತೆ ಕಾವೇರಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳುವುದು
    * ಪ್ರತಿ 10 ದಿನಕ್ಕೊಮ್ಮೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ
    * ನೀರಿನ ಕೊರತೆ ಕಂಡು ಬಂದರೆ ರಾಜ್ಯಗಳ ಪಾಲಿನಲ್ಲಿ ಕಡಿತ
    * ಮುಂಗಾರು ಮಳೆಯ ಆಧರಿಸಿ ಪ್ರಾಧಿಕಾರದಿಂದ ನಿರ್ಧಾರ
    * ಕರ್ನಾಟಕದ ನಾಲ್ಕು ಡ್ಯಾಮ್‍ಗಳು, ಕೇರಳ, ತಮಿಳುನಾಡಿನ ಡ್ಯಾಂಗಳ ನಡುವೆ ಸಮನ್ವಯ
    * ಪ್ರಾಧಿಕಾರದ ಸೂಚನೆಯಂತೆ ಜಲಾಶಯಗಳ ಕಾರ್ಯನಿರ್ವಹಣೆ
    * ಕಾವೇರಿಕೊಳ್ಳದ ಬೆಳೆ ಪ್ರದೇಶ, ಬೆಳೆ ಸ್ವರೂಪದ ಬಗ್ಗೆ ನಿಗಾ
    * ಪ್ರತಿವರ್ಷ ಬೇಕಾದ ನೀರಿನ ಅಗತ್ಯತೆ ಬಗ್ಗೆ ಅಂದಾಜು ಸಲ್ಲಿಕೆ ಕಡ್ಡಾಯ
    * ಪ್ರಾಧಿಕಾರದ ಸದಸ್ಯರ ಡ್ಯಾಮ್‍ಗಳ ಭೇಟಿಗೆ ಪರಮಾಧಿಕಾರ
    * ಡ್ಯಾಮ್‍ಗಳ ಕಾಮಗಾರಿ ಗುತ್ತಿಗೆಗೆ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯ
    * ಕಾವೇರಿಕೊಳ್ಳದ ರಾಜ್ಯಗಳು ಒಪ್ಪದಿದ್ದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶ
    * ಕಾವೇರಿ ಪ್ರಾಧಿಕಾರದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರಲಿದೆ

  • ಕೀನ್ಯಾದಲ್ಲಿ ಭಾರತೀಯ ನಿರ್ಮಿಸಿದ್ದ ಡ್ಯಾಮ್ ಒಡೆದು 47 ಜನ ಸಾವು

    ಕೀನ್ಯಾದಲ್ಲಿ ಭಾರತೀಯ ನಿರ್ಮಿಸಿದ್ದ ಡ್ಯಾಮ್ ಒಡೆದು 47 ಜನ ಸಾವು

    ನೈರೋಬಿ: ಕೀನ್ಯಾದ ರಿಫ್ಟ್ ವ್ಯಾಲಿಯ ಸೊಲೈ ಪಟ್ಟಣದ ಬಳಿ ಭಾರತೀಯ ಮೂಲದ ಮನ್ಸೂಕಲ್ ಪಟೇಲ್ ನಿರ್ಮಿಸಿದ್ದ ಅಣೆಕಟ್ಟು ಒಡೆದು 47 ಮಂದಿ ಮೃತಪಟ್ಟಿದ್ದಾರೆ.

    ಮನ್ಸೂಕಲ್ ಪಟೇಲ್ ಅವರ ಒಡೆತನದ ಮೂರು ಜಲಾಶಯಗಳಲ್ಲಿ ಇದು ಒಂದಾಗಿದೆ. ಈ ಜಲಾಶಯದ ನೀರನ್ನು ಮೀನುಗಾರಿಕೆ ಹಾಗೂ ಕೃಷಿಗಾಗಿ ಬಳಸಲಾಗುತ್ತಿತ್ತು. ಕೀನ್ಯಾದಿಂದ ಯುರೋಪ್‍ಗೆ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ರಫ್ತಾಗುತ್ತಿತ್ತು. ಅಲ್ಲದೇ ಪಟೇಲ್ ಅವರು ಜರ್ಮನಿ ಹಾಗೂ ನೆದರ್ಲೆಂಡ್‍ಗೆ ಹೂವುಗಳನ್ನು ರಫ್ತು ಮಾಡುತ್ತಿದ್ದರು ಎನ್ನಲಾಗುತ್ತಿದೆ.

    ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಡ್ಯಾಮ್ ಒಡೆದಿದ್ದು, ನೀರು ಹಾಗೂ ಕೆಸರು ಸಮೀಪದ ಎರಡು ಹಳ್ಳಿಗಳಿಗೆ ನುಗ್ಗಿದೆ. ಹೀಗಾಗಿ ಅಲ್ಲಿನ ನೂರಾರು ಮನೆಗಳು ಹಾನಿಯಾಗಿವೆ. ಅಲ್ಲದೇ ವಿದ್ಯುತ್ ವ್ಯತ್ಯಯವಾಗಿದ್ದು, ನೀರಿನಲ್ಲಿ ಕಾಣೆಯಾದ ವ್ಯಕ್ತಿಗಳಿಗಾಗಿ ಹುಡುಕಾಟ ನಡೆದಿದೆ. 47 ಜನರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ಇನ್ನೂ ಅನೇಕ ಜನರು ಕಾಣೆಯಾಗಿದ್ದಾರೆ.

    ಕೀನ್ಯಾ ರೆಡ್ ಕ್ರಾಸ್ ಮತ್ತು ನಾಯಕರು, ದೇಶದ ವಿಪತ್ತು ನಿರ್ವಹಣಾ ತಂಡ ಗುರುವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ರೋಂಗೈ ಪೊಲೀಸ್ ಮುಖ್ಯಸ್ಥ ಜೋಸೆಫ್ ಕಿಯಾಕೊ ತಿಳಿಸಿದ್ದಾರೆ.

    36ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಎರಡು ಕಿ.ಮೀ. ವಿಸ್ತೀರ್ಣದವೆರೆಗೆ ನೀರು ಆವರಿಸಿದ್ದು, ಅಲ್ಲಿನ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾರ್ಚ್‍ನಿಂದ ಇಲ್ಲಿಯವರೆಗೂ ಕೀನ್ಯಾದಲ್ಲಿ ನಡೆದ ಪ್ರವಾಹ ಮತ್ತು ಜಲ ಸಂಬಂಧಿ ದುರಂತದಲ್ಲಿ 170 ಮಂದಿ ಮೃತಪಟ್ಟಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ 2,25,436 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸೇನಾ ಹೆಲಿಕಾಪ್ಟರ್‍ಗಳು ಮತ್ತು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಕೀನ್ಯಾ ಸರಕಾರ ತಿಳಿಸಿದೆ.

    ಸಂತ್ರಸ್ತರಿಗೆ 4 ಮಿಲಿಯನ್ ಯುರೋಗಳನ್ನು ಪರಿಹಾರವಾಗಿ ನೀಡಬೇಕು ಎಂದು ರೆಡ್ ಕ್ರಾಸ್ ಸಂಸ್ಥೆ ಮನವಿ ಮಾಡಿದೆ.

  • ಚಾಲಕ ಸೇರಿ ಮೂವರು ಮಕ್ಕಳು ಜಲಾಶಯದಲ್ಲಿ ಮುಳುಗಿ ದುರ್ಮರಣ

    ಚಾಲಕ ಸೇರಿ ಮೂವರು ಮಕ್ಕಳು ಜಲಾಶಯದಲ್ಲಿ ಮುಳುಗಿ ದುರ್ಮರಣ

    ಚಿಕ್ಕಬಳ್ಳಾಪುರ: ಜಲಾಶಯದಲ್ಲಿ ಮೂವರು ಮಕ್ಕಳು ಸೇರಿ ಕಾರು ಚಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.

    ಉರಿಯಾ (12), ಸಾಧ್ (7), ಸಭಾ (13) ಮತ್ತು ಚಾಲಕ ಆರೀಫ್(23) ಮೃತ ದುರ್ದೈವಿಗಳು. ಇವರು ಬೆಂಗಳೂರಿನ ಬುಕ್ಕಸಂದ್ರ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರು ಕಾರಿನಲ್ಲಿ ನಂದಿಬೆಟ್ಟ ಪ್ರವಾಸ ಮುಗಿಸಿ ಶ್ರೀನಿವಾಸ ಸಾಗರಕ್ಕೆ ಬಂದಿದ್ದರು.

    ಮಕ್ಕಳು ಆಟವಾಡಲು ಜಲಾಶಯಕ್ಕೆ ಇಳಿದಿದ್ದರು. ಆಟವಾಡುತ್ತಿದ್ದಾಗಲೇ ಮಕ್ಕಳು ಮುಳುಗಿದ್ದಾರೆ. ಇದನ್ನು ಕಂಡ ಚಾಲಕ ಆರೀಫ್ ರಕ್ಷಣೆಗೆಂದು ಅವರು ಜಲಾಶಕ್ಕೆ ಇಳಿದಿದ್ದಾರೆ. ದುರದೃಷ್ಟವಶಾತ್ ಆರೀಫ್ ಸೇರಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಳಿಕ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಕಾರ್ಯಚರಣೆ ನಡೆಸುತ್ತಿದ್ದು, ಇಬ್ಬರ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಮತ್ತಿಬ್ಬರು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.