Tag: dam

  • ಭಾರೀ ಅನಾಹುತದಿಂದ ಬದುಕುಳಿದ ಐದು ವಿದ್ಯಾರ್ಥಿಗಳು!

    ಭಾರೀ ಅನಾಹುತದಿಂದ ಬದುಕುಳಿದ ಐದು ವಿದ್ಯಾರ್ಥಿಗಳು!

    ಮಂಗಳೂರು: ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ, ವಿದ್ಯಾರ್ಥಿಗಳಲ್ಲಿ ಐವರು ನೀರಿನ ಪ್ರವಾಹಕ್ಕೆ ಸಿಲುಕಿ, ಬದುಕುಳಿದ ಘಟನೆ ಮಂಗಳೂರು ತಾಲೂಕಿನ ನಾವೂರ ಗ್ರಾಮದಲ್ಲಿ ನಡೆದಿದೆ.

    ವಾಲ್ಮೀಕಿ ಜಯಂತಿ ನಿಮಿತ್ತ ಇಂದು ಶಾಲಾಗಳಿಗೆ ಸರ್ಕಾರಿ ರಜೆ ಘೋಷಿಸಲಾಗಿತ್ತು. ಹೀಗಾಗಿ ನಾವೂರ ಗ್ರಾಮ ಸಮೀಪದ ಲಕ್ಷ್ಮಿ ವಿಷ್ಣು ಮೂರ್ತಿ ದೇವಸ್ಥಾನದ ಬಳಿ ಹರಿಯುವ ನೇತ್ರಾವತಿ ನದಿಗೆ 11 ಜನರ ವಿದ್ಯಾರ್ಥಿಗಳ ತಂಡ ಈಜಾಡಲು ತೆರಳಿತ್ತು. ಈ ವೇಳೆ ಶಂಭೂರು ಎಎಂಆರ್ ಡ್ಯಾಂನಿಂದ ಏಕಾಏಕಿ ನೀರನ್ನು ಹೊರಬಿಡಲಾಗಿತ್ತು. ನೀರಿನ ರಭಸವನ್ನು ಗಮನಿಸಿದ 6 ಮಂದಿ ವಿದ್ಯಾರ್ಥಿಗಳು ಈಜಿ ದಡ ಸೇರಿದ್ದಾರೆ.

    ಉಳಿದ ಐವರು ವಿದ್ಯಾರ್ಥಿಗಳಿಗೆ ಈಜಲು ಸಾಧ್ಯವಾಗದೇ ನದಿಯ ಇನ್ನೊಂದು ಬದಿಯ ದೊಡ್ಡ ಬಂಡೆಯ ಮೇಲೆ ಹತ್ತಿದ್ದಾರೆ. ಮಕ್ಕಳು ಅಲ್ಲಿಂದ ಪಾರಾಗಲು ಪರದಾಡುವಂತಾಗಿತ್ತು. ನದಿಯ ದಂಡೆ ಸೇರಿದ್ದ 6 ವಿದ್ಯಾರ್ಥಿಗಳು ಬೊಬ್ಬೆ ಹಾಗೂ ಕಿರುಚಾಟ ಕೇಳಿಸಿಕೊಂಡ, ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾದರು. ಹಗ್ಗ ಕೊಟ್ಟು ಒಬ್ಬೊಬ್ಬರನ್ನೇ ರಕ್ಷಿಸಿದ್ದಾರೆ.

    ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿ, ವಿದ್ಯಾರ್ಥಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡು, ನಿಮಗೆ ನದಿಯ ಆಳ ಗೊತ್ತಿಲ್ಲದಿದ್ದರೆ ಸ್ಥಳೀಯರನ್ನು ಕೇಳಬೇಕಿತ್ತು. ಯಾರೇ ಪ್ರಾಣ ಹೋಗಿದ್ದರೂ ನಷ್ಟ ಅಲ್ಲವೇ. ಡ್ಯಾಂ ಹತ್ತಿರವೇ ಇದೆ. ನಿಮಗೆ ಈಜಾಡುವ ಉದ್ದೇಶವಿದ್ದರೆ ಮಾಹಿತಿ ಪಡೆಯಬೇಕಿತ್ತು. ಒಂದು ವೇಳೆ ಸ್ಥಳೀಯರು ಬಾರದಿದ್ದರೇ ಐವರ ಜೀವವೇ ಹೋಗುತ್ತಿತ್ತು ಎಂದು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾರಾಷ್ಟ್ರದ ಕೊಯ್ನಾ ಜಲಾಶದಿಂದ ಮತ್ತಷ್ಟು ನೀರು ಕೃಷ್ಣಾ ನದಿಗೆ ಬಿಡುಗಡೆ

    ಮಹಾರಾಷ್ಟ್ರದ ಕೊಯ್ನಾ ಜಲಾಶದಿಂದ ಮತ್ತಷ್ಟು ನೀರು ಕೃಷ್ಣಾ ನದಿಗೆ ಬಿಡುಗಡೆ

    ಚಿಕ್ಕೋಡಿ: ಮಹಾರಾಷ್ಟ್ರ ಸತಾರ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದ್ದು, ನದಿ ಪಾತ್ರದ ಜನರು ಆತಂಕಕ್ಕೊಳಗಾಗಿದ್ದಾರೆ.

    ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಮಳೆಯಿಂದಾಗಿ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಸತಾರ ಜಿಲ್ಲೆಯ ಕೊಯ್ನಾ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ 50 ಸಾವಿರ ಕ್ಯೂಸೆಕ್ ಹೆಚ್ಚುವರಿ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

    ಈಗಾಗಲೇ ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ 98 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದುಬರುತ್ತಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು-ಕಲ್ಲೋಳ, ಭೋಜ-ಕಾರದಗಾ, ಭೋಜವಾಡ-ಕುನ್ನೂರು ಹಾಗೂ ದತ್ತವಾಡ-ಮಲಿಕವಾಡ ಸೇತುವೆಗಳು ಮುಳುಗಿದೆ. ಹಲವು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವುಂಟಾಗಿದೆ.

    ಇಂದಿನಿಂದ ಪುನಃ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈಗಾಗಲೇ ಹಿಪ್ಪರಗಿ ಹಾಗೂ ಆಲಮಟ್ಟಿ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿ ಜಲಾಶಯಗಳು ಭರ್ತಿಯಾಗಿದೆ. ಹೀಗಾಗಿ ಅಧಿಕ ಪ್ರಮಾಣದ ನೀರನ್ನು ಜಲಾಶಯಗಳಿಂದ ಹೊರ ಹಾಕಲಾಗುತ್ತಿದೆ. ಇದರಿಂದಾಗಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುನ್ನೆಚ್ಚರಿಕೆ ನೀಡದೆ ತುಂಗಭದ್ರಾ ನದಿಗೆ ಭಾರೀ ಪ್ರಮಾಣದ ನೀರು- ರೈತರು ಆಕ್ರೋಶ

    ಮುನ್ನೆಚ್ಚರಿಕೆ ನೀಡದೆ ತುಂಗಭದ್ರಾ ನದಿಗೆ ಭಾರೀ ಪ್ರಮಾಣದ ನೀರು- ರೈತರು ಆಕ್ರೋಶ

    ರಾಯಚೂರು: ತುಂಗಭದ್ರಾ ಜಲಾಶಯದಿಂದ ಎರಡು ಲಕ್ಷ ಕ್ಯೂಸೆಕ್‍ನಷ್ಟು ಪ್ರಮಾಣದ ನೀರು ನದಿಗೆ ಹರಿಸಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು, ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಸಿಂಧನೂರು, ಮಾನ್ವಿ ತಾಲೂಕಿನಲ್ಲಿ ನೂರಾರು ಎಕರೆ ಜಮೀನು ಜಲಾವೃತವಾಗಿದ್ದು, ಕೋಟ್ಯಾಂತರ ರೂಪಾಯಿ ಬೆಳೆ ನಷ್ಟವಾಗಿದೆ. ಜಮೀನಿನಲ್ಲಿನ ಪಂಪ್ ಸೆಟ್‍ಗಳು ಸಹ ಮುಳುಗಡೆಯಾಗಿದೆ. ನದಿ ಪಾತ್ರದ ಗ್ರಾಮಗಳು ಪ್ರವಾಹ ಪರಿಸ್ಥಿತಿಯಿಂದ ಕಂಗೆಟ್ಟಿವೆ. ಮುನ್ನೆಚ್ಚರಿಕೆಯನ್ನ ನೀಡದೆ ಏಕಾಏಕಿ ಭಾರೀ ಪ್ರಮಾಣದ ನೀರನ್ನ ತುಂಗಭದ್ರಾ ನದಿಗೆ ಹರಿಸಿರುವುದಕ್ಕೆ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾನ್ವಿ ತಾಲೂಕಿನ ಹೆಡವಿಯಾಳ, ಚೀಕಲಪರ್ವಿ, ಮದ್ಲಾಪುರ, ಕಾತರಕಿ ಗ್ರಾಮದ ಭತ್ತ ಹಾಗೂ ಹತ್ತಿಬೆಳೆ ನದಿಪಾಲಾಗಿದೆ. ಚೀಕಲಪರ್ವಿಯಲ್ಲಿರುವ ವಿಜಯದಾಸರ ಕಟ್ಟೆ ಜಲಾವೃತವಾಗಿದೆ. ವಿಜಯದಾಸರು ತಪ್ಪಸ್ಸು ಮಾಡಿದ ಸ್ಥಳ ಈಗ ಬಹುತೇಕ ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುರು ರಾಘವೇಂದ್ರ ಸ್ವಾಮಿ ಸನ್ನಿಧಿ ಮಂತ್ರಾಲಯದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿ ದಂಡೆಯಲ್ಲಿರುವ ಮಠದ ಆವರಣದಲ್ಲಿನ ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ರಾಯರ ಆರಾಧನೆ ಹಿನ್ನೆಲೆ ಸ್ನಾನ ಘಟ್ಟದಲ್ಲಿ ಮಾಡಿದ್ದ ವ್ಯಸ್ಥೆಗಳೆಲ್ಲಾ ಅಸ್ತವ್ಯಸ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ವ್ಯಕ್ತಿ – ಮೊಬೈಲಿನಲ್ಲಿ ಸೆರೆ

    ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ವ್ಯಕ್ತಿ – ಮೊಬೈಲಿನಲ್ಲಿ ಸೆರೆ

    ಚಿಕ್ಕಮಗಳೂರು: ತುಂಬಿ ಹರಿಯುತ್ತಿದ್ದ ಭದ್ರಾ ಬಲ ದಂಡೆ ನಾಲೆಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಸಮೀಪ ನಡೆದಿದೆ.

    ದಾವಣಗೆರೆ ಮೂಲದ ಪ್ರವಾಸಿ ಬಸವರಾಜ್ ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ. ಬಸವರಾಜ್ ತನ್ನ ಐವರು ಸ್ನೇಹಿತರೊಂದಿಗೆ ಎರಡು ದಿನಗಳ ಹಿಂದೆ ಪ್ರವಾಸಕ್ಕೆಂದು ಲಕ್ಕವಳ್ಳಿ ಡ್ಯಾಂಗೆ ಬಂದಿದ್ದರು. ಈ ವೇಳೆ ಸಹ ಸ್ನೇಹಿತರು ಅಲ್ಲೇ ನಾಲೆಯ ಮತ್ತೊಂದು ಬದಿಯಲ್ಲಿ ಅಡುಗೆ ಮಾಡುವ ವೇಳೆ ಬಸವರಾಜ್ ಏಕಾಂಗಿಯಾಗಿ ಈಜುತ್ತಿದ್ದರು. ಅವರ ಸ್ನೇಹಿತರು ಬೇಡ ಬಾ ಎಂದ್ರು ಬಾರದ ಬಸವರಾಜ್ ಈಜುತ್ತಲೇ ಸ್ನೇಹಿತರು ನೋಡುತ್ತಿದ್ದಂತೆಯೇ ಮುಳುಗಿ ಹೋಗಿದ್ದಾರೆ.

    ಈ ಸನ್ನಿವೇಶವನ್ನ ಸ್ನೇಹಿತರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಎರಡು ದಿನಗಳಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮೃತದೇಹ ಸಿಗುವ ಲಕ್ಷಣಗಳು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಈ ನಾಲೆ ದಾವಣಗೆರೆಗೆ ಹೋಗಿ ವಾಣಿವಿಲಾಸ ಸಾಗರದವರೆಗೂ ಹರಿಯಲಿದೆ.

    ದಾವಣಗೆರೆಯಿಂದ ಕೂಡ ನೂರಾರು ಜನ ಬಂದು ಮೃತದೇಹ ಹುಡುಕಾಟ ನಡೆಸುತ್ತಿದ್ದಾರೆ. ನಲ್ಲೂರು ಬಳಿ ನಾಲೆ ಎರಡು ವಿಭಾಗವಾಗಿ ಹರಿಯಲಿದೆ. ಒಂದು ವಾಣಿವಿಲಾಸ ಸಾಗರಕ್ಕೆ ಹೋದರೆ ಮತ್ತೊಂದು ಬೇರೆ ಕಡೆ ಹೋಗುತ್ತೆದೆ. ಸದ್ಯಕ್ಕೆ ಪೊಲೀಸರು ಮಾರ್ಗದುದ್ದಕ್ಕೂ ಹುಡುಕುತ್ತಿದ್ದಾರೆ.

    ನಲ್ಲೂರು ಪೊಲೀಸರು, ಸ್ಥಳಿಯರು ಮತ್ತು ಈಜು ತಜ್ಞರು ಮೃತದೇಹ ತೇಲಿಬರಬಹುದೆಂದು ಕಾಯುತ್ತಿದ್ದಾರೆ. ಈ ಘಟನೆ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮಳೆಯ ಆರ್ಭಟಕ್ಕೆ ಕೇರಳದಲ್ಲಿ 20 ಬಲಿ- ಕೊಚ್ಚಿ ವಿಮಾನ ನಿಲ್ದಾಣ ಬಂದ್

    ಮಳೆಯ ಆರ್ಭಟಕ್ಕೆ ಕೇರಳದಲ್ಲಿ 20 ಬಲಿ- ಕೊಚ್ಚಿ ವಿಮಾನ ನಿಲ್ದಾಣ ಬಂದ್

    ತಿರುವನಂತಪುರಂ: ಕೇರಳ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 20 ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವುಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಪೆರಿಯಾರ್ ನದಿಯು 2013ರ ನಂತರ ಇದೇ ಮೊದಲ ಬಾರಿಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಅವಾಂತರಗಳಿಗೆ ಎಡೆಮಾಡಿಕೊಟ್ಟಿದೆ. ಮಾಹಿತಿಗಳ ಪ್ರಕಾರ ಇಡುಕ್ಕಿ ಜಿಲ್ಲೆಯ 11 ಮಂದಿ, ಮಲಪ್ಪುರಂನ 6 ಮಂದಿ, ಕೋಜಿಕೋಡು 2 ಹಾಗೂ ವಯನಾಡ್ ಜಿಲ್ಲೆಯಲ್ಲಿ 1 ಮಂದಿ ಮಳೆಯಿಂದಾಗಿ ಮೃತಪಟ್ಟಿದ್ದಾರೆ. ಅಲ್ಲದೇ ಪಲಕ್ಕಾಡ್, ವಯನಾಡ್ ಹಾಗೂ ಕೋಜಿಕೋಡು ಜಿಲ್ಲೆಗಳಲ್ಲಿ 7 ಮಂದಿ ನಾಪತ್ತೆಯಾಗಿದ್ದರೆಂದು ತಿಳಿದು ಬಂದಿದೆ.

    ನಾಪತ್ತೆಯಾದವರ ಶೋಧಕ್ಕೆ ಎನ್.ಡಿ.ಆರ್.ಎಫ್ ತಂಡ ಕಾರ್ಯಚರಣೆ  ನಡೆಸುತ್ತಿದೆ. ರಾಜ್ಯ ಸರ್ಕಾರವು ತುರ್ತು ಪರಿಸ್ಥಿತಿ ನಿಯಂತ್ರಣಕ್ಕಾಗಿ ಸೇನಾ ಹಾಗೂ ಎನ್.ಡಿ.ಆರ್.ಎಫ್ ಮೊರೆಹೋಗಿದ್ದು, ಸಾಕಷ್ಟು ರಕ್ಷಣಾ ತಂಡಗಳು ಈಗಾಗಲೇ ಕಾರ್ಯಚರಣೆ ನಡೆಸುತ್ತಿವೆ.

    ಇಡುಕ್ಕಿ ಡ್ಯಾಂ ನಿಂದ ನೀರನ್ನು ಹೊರಬಿಟ್ಟ ಪರಿಣಾಮ ಪೆರಿಯಾರ್ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ನೀರು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದೊಳಗೂ ನುಗ್ಗಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ವಿಮಾನ ನಿಲ್ದಾಣವನ್ನು ಬಂದ್ ಮಾಡಿದ್ದಾರೆ. ಅಲ್ಲದೇ ಕೊಚ್ಚಿಯಿಂದ ತೆರಳಬೇಕಿದ್ದ ಹಾಗೂ ಆಗಮಿಸುವ ವಿಮಾನಗಳನ್ನು ಮಾರ್ಗಮಧ್ಯೆ ಬದಲಾವಣೆಗೊಳ್ಳುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಸುರಿಯುತ್ತಿರುವ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದು, ಇಂದಿನಿಂದ ಎರ್ನಾಕುಲಂನ ಇಡಮಳಯಾರ್ ಜಲಾಶಯ ಹಾಗೂ ಕೋಜಿಕೋಡುವಿನ ಕಕ್ಕಾಯಂ ಜಲಾಶಯಗಳ ನೀರನ್ನು ಹೊರಬಿಡಲಾಗಿದೆ.

    ರಾಜ್ಯದ ಒಟ್ಟು 22 ಜಲಾಶಯಗಳು ತುಂಬಿದ್ದರ ಪರಿಣಾಮ ಜಲಾಶಯಗಳಿಂದ ಹೆಚ್ಚುವರಿ ಪ್ರಮಾಣದ ನೀರನ್ನು ನೀರನ್ನು ಹೊರಬಿಟ್ಟಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಇಡುಕ್ಕಿ ಜಲಾಶಯವು ಬರೊಬ್ಬರಿ 26 ವರ್ಷಗಳ ಬಳಿಕ ತುಂಬಿದ್ದರ ಪರಿಣಾಮ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿದು ಬಿಡಲಾಗಿದೆ.

    ಕೇರಳ ಸರ್ಕಾರವು ಮುಂಜಾಗ್ರತ ಕ್ರಮವಾಗಿ ಕೋಜಿಕೋಡು, ವಯನಾಡ್, ಪಲಕ್ಕಾಡ್, ಇಡುಕ್ಕಿ, ಮಲಪ್ಪುರಂ ಹಾಗೂ ಕೊಲ್ಲಂ ಜಿಲ್ಲೆಯ ಶಾಲಾ-ಕಾಲೇಜುಗಳಿ ರಜೆ ಘೋಷಿಸಿದೆ. ಅಲ್ಲದೇ ಅಲಪುಜಾದಲ್ಲಿ ನಡೆಯಲಿರುವ ಪ್ರಸಿದ್ಧ ದೋಣಿ ಸ್ಪರ್ಧೆಯನ್ನು ಸಹ ಮುಂದೂಡಲಾಗಿದೆ.

    https://twitter.com/pranavkichu10/status/1027470911111229440

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ನೀರಿನ ಸೆಳೆತಕ್ಕೆ ಸಿಲುಕಿದ್ದ ಯುವಕನ ರಕ್ಷಣೆ

    ನೀರಿನ ಸೆಳೆತಕ್ಕೆ ಸಿಲುಕಿದ್ದ ಯುವಕನ ರಕ್ಷಣೆ

    ಮಂಗಳೂರು: ಡ್ಯಾಂ ನಲ್ಲಿ ಈಜಾಡೋಕೆ ಹೋಗಿ ನೀರಿನ ಸೆಳೆತಕ್ಕೆ ಸಿಲುಕಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿದ ಘಟನೆ ನಗರದ ಮರವೂರಿನಲ್ಲಿ ನಡೆದಿದೆ.

    ಬಜ್ಪೆ ನಿವಾಸಿ ಶರತ್ ಸ್ಥಳೀಯರು ರಕ್ಷಿಸಿದ ಯುವಕ. ಫಲ್ಗುಣಿ ನದಿಗೆ ಅಡ್ಡಲಾಗಿ ಮರವೂರು ಡ್ಯಾಂ ಇದೆ. ಇತ್ತೀಚೆಗೆ ಅಧಿಕ ಮಳೆಯಾಗಿದ್ದರಿಂದ ಡ್ಯಾಂ ಭರ್ತಿಯಾಗಿತ್ತು. ಆದ್ದರಿಂದ ನೀರನ್ನು ಹೊರಬಿಡಲಾಗುತ್ತಿದೆ. ಸ್ನೇಹಿತರ ಜೊತೆ ಡ್ಯಾಂ ನೋಡೋಕೆ ಹೋಗಿದ್ದ ಶರತ್ ಈಜಾಡಲು ನೀರಿಗೆ ಇಳಿದಿದ್ದಾನೆ. ಈ ವೇಳೆ ನೀರಿನ ಸೆಳೆತ ಜಾಸ್ತಿ ಕಾರಣ ಶರತ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

    ಸ್ಥಳದಲ್ಲಿದ್ದ ಸ್ಥಳೀಯ ಜತೀನ್ ಡಿಸೋಜಾ, ಶರತ್ ನೀರಿನ ಸೆಳೆತಕ್ಕೆ ಒಳಗಾಗಿದ್ದನ್ನು ಗಮನಿಸಿ ತಕ್ಷಣ ರಕ್ಷಣೆಗೆ ಮುಂದಾಗಿದ್ದಾರೆ. ನಂತರ ಟ್ಯೂಬ್ ಮತ್ತು ಹಗ್ಗದ ಮೂಲಕ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಜೀವ ಪಣಕಿಟ್ಟು ಜತೀನ್ ಡಿಸೋಜಾ ಯುವಕನನ್ನು ರಕ್ಷಣೆ ಮಾಡಿದ್ದು, ಯುವಕನ ಪ್ರಾಣ ಉಳಿಸಿದ್ದಾರೆ.

    ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಯುವಕನೊಬ್ಬ ಡ್ಯಾಂನಲ್ಲಿ ಮುಳುಗಿ ಮೃತಪಟ್ಟಿದ್ದನು. ಮತ್ತೊಂದು ಅನಾಹುತ ನಡೆಯುವ ಮುನ್ನ ಸ್ಥಳೀಯರು ಯುವಕನನ್ನು ರಕ್ಷಣೆ ಮಾಡಿದ್ದಾರೆ.

  • ಕರ್ನಾಟಕದ ಜಲಾಶಯಗಳು ಎಲ್ಲಿವೆ? ಸಂಗ್ರಹ  ಸಾಮರ್ಥ್ಯ ಎಷ್ಟು? ಇಲ್ಲಿದೆ ಮಾಹಿತಿ

    ಕರ್ನಾಟಕದ ಜಲಾಶಯಗಳು ಎಲ್ಲಿವೆ? ಸಂಗ್ರಹ ಸಾಮರ್ಥ್ಯ ಎಷ್ಟು? ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಅವಧಿಗೂ ಮುನ್ನವೇ ಅನೇಕ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ನದಿ ಹಾಗೂ ಕಾಲುವೆ ತೀರದ ರೈತರಲ್ಲಿ ಮಂದಹಾಸ ಮೂಡಿದೆ.

    ರಾಜ್ಯದ ಕೆಲವು ಪ್ರಮುಖ ಜಲಾಶಯಗಳು ಎಲ್ಲಿವೆ, ಯಾವ ನದಿಗೆ ನಿರ್ಮಾಣವಾಗಿದೆ, ಜಲಾಶಯದ ಎತ್ತರ, ಉದ್ದ, ಪೂರ್ಣ ಮಟ್ಟ ಹಾಗೂ ಸಂಗ್ರಹ ಸಾಮರ್ಥ್ಯ ಎಷ್ಟು, ಲಾಭ ಪಡೆಯುವ ಜಿಲ್ಲೆಗಳು, ನಿರ್ಮಾಣವಾದ ವರ್ಷ ಮತ್ತು ಜಲಾಶಯದ ಉದ್ದೇಶ ಯಾವುದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

    13 ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಬಸವಸಾಗರ, ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ, ತುಂಗಭದ್ರಾ, ಲಿಂಗನಮಕ್ಕಿ, ಭದ್ರಾ, ಘಟಪ್ರಭಾ, ಮಲಪ್ರಭಾ, ಹಾರಂಗಿ, ಸೂಪಾ ಹಾಗೂ ವಾಣಿ ವಿಲಾಸ ಡ್ಯಾಂ ಮಾಹಿತಿ ಇಲ್ಲಿದೆ.

    ಆಲಮಟ್ಟಿ/ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯ
    ಎಲ್ಲಿದೆ: ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ತಾಲೂಕಿನ ಆಲಮಟ್ಟಿ
    ನದಿ: ಕೃಷ್ಣಾ
    ಎತ್ತರ: 52.05 ಮೀ.
    ಉದ್ದ: 1,565.15 ಮೀ.
    ಪೂರ್ಣ ಮಟ್ಟ: 519.1 ಮೀ.
    ಸಂಗ್ರಹ ಸಾಮರ್ಥ್ಯ: 123 ಟಿಎಂಸಿ
    ಲಾಭ ಪಡೆಯುವ ಜಿಲ್ಲೆಗಳು: ವಿಜಯಪುರ, ಬಾಗಲಕೋಟೆ
    ನಿರ್ಮಾಣವಾದ ವರ್ಷ: 2005 ಜುಲೈ
    ಉದ್ದೇಶ: ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆ

     

    ಬಸವಸಾಗರ/ನಾರಾಯಣಪುರ ಜಲಾಶಯ
    ಎಲ್ಲಿದೆ: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಾರಾಯಣಪುರ
    ನದಿ: ಕೃಷ್ಣಾ
    ಎತ್ತರ: 29.72 ಮೀ.
    ಉದ್ದ: 10,637 ಮೀ.
    ಪೂರ್ಣ ಮಟ್ಟ: 492.23 ಮೀ.
    ಸಂಗ್ರಹ ಸಾಮರ್ಥ್ಯ: 33.33 ಟಿಎಂಸಿ
    ಲಾಭ ಪಡೆಯುವ ಜಿಲ್ಲೆಗಳು: ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ
    ನಿರ್ಮಾಣವಾದ ವರ್ಷ: 1982
    ಉದ್ದೇಶ: ಕುಡಿಯುವ ನೀರು ಪೂರೈಕೆ, ನೀರಾವರಿ ಹಾಗೂ ವಿದ್ಯುತ್

    ಕೆಆರ್‌ಎಸ್‌/ಕೃಷ್ಣರಾಜಸಾಗರ
    ಎಲ್ಲಿದೆ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್
    ನದಿ: ಕಾವೇರಿ
    ಎತ್ತರ: 42.67 ಮೀ
    ಉದ್ದ: 2,620 ಮೀ.
    ಪೂರ್ಣ ಮಟ್ಟ: 124.80 ಅಡಿ
    ಸಂಗ್ರಹ ಸಾಮರ್ಥ್ಯ: 49.50 ಟಿಎಂಸಿ
    ಲಾಭ ಪಡೆಯುವ ಜಿಲ್ಲೆಗಳು: ಮಂಡ್ಯ, ಮೈಸೂರು, ಬೆಂಗಳೂರು
    ನಿರ್ಮಾಣವಾದ ವರ್ಷ: 1938
    ಉದ್ದೇಶ: ಕುಡಿಯುವ ನೀರು ಪೂರೈಕೆ, ನೀರಾವರಿ ಹಾಗೂ ವಿದ್ಯುತ್

    ಕಬಿನಿ
    ಎಲ್ಲಿದೆ: ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ
    ನದಿ: ಕಬಿನಿ/ಕಪಿಲಾ (ಕಾವೇರಿ ಉಪನದಿ)
    ಎತ್ತರ: 166 ಅಡಿ
    ಉದ್ದ: 12,927 ಅಡಿ
    ಪೂರ್ಣ ಮಟ್ಟ: 2,284 ಅಡಿ
    ಸಂಗ್ರಹ ಸಾಮರ್ಥ್ಯ: 19.50 ಟಿಎಂಸಿ
    ಲಾಭ ಪಡೆಯುವ ಜಿಲ್ಲೆ: ಮೈಸೂರು, ಬೆಂಗಳೂರು, ಚಾಮರಾಜನಗರ
    ನಿರ್ಮಾಣವಾದ ವರ್ಷ: 1974
    ಉದ್ದೇಶ: ನೀರಾವರಿ, ಕುಡಿಯುವ ನೀರಿಗಾಗಿ

    ಹೇಮಾವತಿ
    ಎಲ್ಲಿದೆ: ಹಾಸನ ಜಿಲ್ಲೆಯ ಗೊರೂರು
    ನದಿ: ಹೇಮಾವತಿ
    ಎತ್ತರ: 44.5 ಮೀ.
    ಉದ್ದ: 4,692 ಮೀ.
    ಪೂರ್ಣ ಮಟ್ಟ: 2,922 ಅಡಿ
    ಸಂಗ್ರಹ ಸಾಮರ್ಥ್ಯ: 37.103 ಟಿಎಂಸಿ
    ಲಾಭ ಪಡೆಯುವ ಜಿಲ್ಲೆಗಳು: ಹಾಸನ, ತುಮಕೂರು, ಮಂಡ್ಯ, ಮೈಸೂರು
    ನಿರ್ಮಾಣವಾದ ವರ್ಷ: 1979
    ಉದ್ದೇಶ: ನೀರಾವರಿ, ಕುಡಿಯುವ ನೀರಿಗಾಗಿತುಂಗಭದ್ರಾ
    ಎಲ್ಲಿದೆ: ಕೊಪ್ಪಳ ತಾಲೂಕಿನ ಮುನಿರಾಬಾದ್
    ನದಿ: ತುಂಗಭದ್ರಾ
    ಎತ್ತರ: 49.50 ಮೀ.
    ಉದ್ದ: 2,449 ಮೀ.
    ಪೂರ್ಣ ಮಟ್ಟ: 1,633.00 ಅಡಿ
    ಸಂಗ್ರಹ ಸಾಮರ್ಥ್ಯ: 133 ಟಿಎಂಸಿ
    ಲಾಭ ಪಡೆಯುವ ಜಿಲ್ಲೆಗಳು: ಬಳ್ಳಾರಿ, ಕೊಪ್ಪಳ, ರಾಯಚೂರು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕೆಲವು ಜಿಲ್ಲೆ
    ನಿರ್ಮಾಣವಾದ ವರ್ಷ: 1953
    ಉದ್ದೇಶ: ವಿದ್ಯುತ್, ಕುಡಿಯುವ ನೀರು, ಕೈಗಾರಿಕೆ ಹಾಗೂ ನೀರಾವರಿ
    ವಿಶೇಷತೆ: ಆಂಧ್ರಪ್ರದೇಶ ಹಾಗೂ ಕರ್ನಾಟಕ ಜಂಟಿ ಪಾಲುದಾರಿಕೆಯಲ್ಲಿ ಜಲಾಶಯ ನಿರ್ಮಾಣ

    ಲಿಂಗನಮಕ್ಕಿ
    ಎಲ್ಲಿದೆ: ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಲಿಂಗನಮಕ್ಕಿ
    ನದಿ: ಶರಾವತಿ
    ಎತ್ತರ: 192 ಅಡಿ
    ಉದ್ದ: 2,749.29 ಮೀ.
    ಪೂರ್ಣ ಮಟ್ಟ: 1,819.00 ಅಡಿ
    ಸಂಗ್ರಹ ಸಾಮರ್ಥ್ಯ: 151.75 ಟಿಎಂಸಿ
    ಲಾಭ ಪಡೆಯುವ ಜಿಲ್ಲೆ: ಇಡಿ ರಾಜ್ಯ (ವಿದ್ಯುತ್)
    ನಿರ್ಮಾಣವಾದ ವರ್ಷ: 1964
    ಉದ್ದೇಶ: ವಿದ್ಯುತ್ ಉತ್ಪಾದನೆ

    ಭದ್ರಾ
    ಎಲ್ಲಿದೆ: ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ತಾಲೂಕಿನ ಲಕ್ಕವಳ್ಳಿ
    ನದಿ: ಭದ್ರಾ
    ಎತ್ತರ: 59.13 ಮೀ.
    ಉದ್ದ: 1,708 ಮೀ.
    ಪೂರ್ಣ ಮಟ್ಟ: 186.00 ಅಡಿ
    ಸಂಗ್ರಹ ಸಾಮರ್ಥ್ಯ: 71 ಟಿಎಂಸಿ
    ಲಾಭ ಪಡೆಯುವ ಜಿಲ್ಲೆಗಳು: ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ
    ನಿರ್ಮಾಣವಾದ ವರ್ಷ: 1965
    ಉದ್ದೇಶ: ನೀರಾವರಿ, ವಿದ್ಯುತ್ ಉತ್ಪಾದನೆ

    ಘಟಪ್ರಭಾ/ ರಾಜ ಲಖಮಗೌಡ ಜಲಾಶಯ
    ಎಲ್ಲಿದೆ: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್
    ನದಿ: ಘಟಪ್ರಭಾ
    ಎತ್ತರ: 48.3 ಮೀ.
    ಉದ್ದ: 10,183 ಮೀ.
    ಪೂರ್ಣ ಮಟ್ಟ: 2,175.00 ಅಡಿ
    ಸಂಗ್ರಹ ಸಾಮರ್ಥ್ಯ: 51 ಟಿಎಂಸಿ
    ಲಾಭ ಪಡೆಯುವ ಜಿಲ್ಲೆಗಳು: ಬೆಳಗಾವಿ, ಬಾಗಲಕೋಟೆ
    ನಿರ್ಮಾಣವಾದ ವರ್ಷ: 1977
    ಉದ್ದೇಶ: ನೀರಾವರಿ, ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ

    ಮಲಪ್ರಭಾ/ ರೇಣುಕಾ ಸಾಗರ ಜಲಾಶಯ
    ಎಲ್ಲಿದೆ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ
    ನದಿ: ಮಲಪ್ರಭಾ
    ಎತ್ತರ: 154.53 ಮೀ.
    ಉದ್ದ: 154. 52 ಮೀ.
    ಪೂರ್ಣ ಮಟ್ಟ: 2,079 ಅಡಿ
    ಸಂಗ್ರಹ ಸಾಮರ್ಥ್ಯ: 34.35
    ಲಾಭ ಪಡೆಯುವ ಜಿಲ್ಲೆಗಳು: ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ
    ನಿರ್ಮಾಣವಾದ ವರ್ಷ: 1972
    ಉದ್ದೇಶ: ನೀರಾವರಿ, ಕುಡಿಯುವ ನೀರು ಪೂರೈಕೆ

    ಹಾರಂಗಿ
    ಎಲ್ಲಿದೆ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹುಡಗುರು
    ನದಿ: ಹಾರಂಗಿ
    ಎತ್ತರ: 49.99 ಮೀ.
    ಉದ್ದ: 845.82 ಮೀ.
    ಪೂರ್ಣ ಮಟ್ಟ: 2,859 ಅಡಿ
    ಸಂಗ್ರಹ ಸಾಮರ್ಥ್ಯ: 8.5 ಟಿಎಂಸಿ
    ಲಾಭ ಪಡೆಯುವ ಜಿಲ್ಲೆಗಳು: ಕೊಡಗು, ಮೈಸೂರು
    ನಿರ್ಮಾಣವಾದ ವರ್ಷ: 1982
    ಉದ್ದೇಶ: ನೀರಾವರಿ

    ಸೂಪಾ
    ಎಲ್ಲಿದೆ: ಉತ್ತರ ಕನ್ನಡ ಜಿಲ್ಲೆ ಜೋಯಿಡಾ
    ನದಿ: ಕಾಳಿ ನದಿ
    ಎತ್ತರ: 101 ಮೀ.
    ಉದ್ದ: 332 ಮೀ.
    ಪೂರ್ಣ ಮಟ್ಟ: 564.00 ಮೀ.
    ಸಂಗ್ರಹ ಸಾಮರ್ಥ್ಯ: 147 ಟಿಎಂಸಿ
    ಲಾಭ ಪಡೆಯುವ ಜಿಲ್ಲೆ: ಉತ್ತರ ಕನ್ನಡ
    ನಿರ್ಮಾಣವಾದ ವರ್ಷ: 1987
    ಉದ್ದೇಶ: ನೀರಾವರಿ, ವಿದ್ಯುತ್

    ವಾಣಿ ವಿಲಾಸ
    ಎಲ್ಲಿದೆ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆ
    ನದಿ: ವೇದಾವತಿ ನದಿ
    ಎತ್ತರ: 43.28 ಮೀ.
    ಉದ್ದ: 405.50 ಮೀ.
    ಪೂರ್ಣ ಮಟ್ಟ: 652.28 ಮೀಟರ್
    ಸಂಗ್ರಹ ಸಾಮರ್ಥ್ಯ: 30 ಟಿಎಂಸಿ
    ಲಾಭ ಪಡೆಯುವ ಜಿಲ್ಲೆ: ಚಿತ್ರದುರ್ಗ
    ನಿರ್ಮಾಣವಾದ ವರ್ಷ: 1907
    ಉದ್ದೇಶ: ನೀರಾವರಿ

  • ಶಿಥಿಲಾವಸ್ಥೆ ತಲುಪಿದ ಕಂಪ್ಲಿ ಸೇತುವೆ – ನಿಲ್ಲದ ಲಾರಿಗಳ ಸಂಚಾರ

    ಶಿಥಿಲಾವಸ್ಥೆ ತಲುಪಿದ ಕಂಪ್ಲಿ ಸೇತುವೆ – ನಿಲ್ಲದ ಲಾರಿಗಳ ಸಂಚಾರ

    ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ತುಂಗಭದ್ರಾ ಸೇತುವೆ ನಿರ್ಮಿಸಿ ಸುಮಾರು ವರ್ಷಗಳೇ ಕಳೆದು ಸೇತುವೆ ಶಿಥಿಲಾವಸ್ಥೆ ತಲುಪಿದೆ. ಆದರೆ ಹೊಸ ಸೇತುವೆ ನಿರ್ಮಾಣವಾಗಬೇಕೆಂಬುದು ಕಂಪ್ಲಿ ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

    ಈ ಸೇತುವೆ ಮೇಲೆ 16.5 ಟನ್ ಗಿಂತ ಹೆಚ್ಚು ವಾಹನಗಳ ಸಂಚಾರವನ್ನು ನಿಷೇಧ ಮಾಡಿ ಆರು ವರ್ಷಗಳೇ ಕಳೆದಿದೆ. ಆದರು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶವಿದ್ದರು ಪಾಲನೆಯಾಗದೆ ಇರುವುದು ಸಾರ್ವಜನಿಕರ ಆರೋಪವಾಗಿದೆ.

    ತುಂಗಭದ್ರ ನದಿಗೆ ನೀರು ಬಿಟ್ಟ ಕಾರಣ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹೊಸ ಬಸ್ ನಿಲ್ದಾಣ ಪ್ರತಿದಿನ ಲಾರಿ ನಿಲ್ದಾಣವಾಗಿ ಮಾರ್ಪಡಾಗಿದೆ. ರಾತ್ರಿ ಹತ್ತು ಗಂಟೆವರೆಗೆ ಲಾರಿಗಳನ್ನು ಪೊಲೀಸರು ನಿಲ್ಲಿಸಿ ನಂತರ ತಹಶೀಲ್ದಾರರ ಆದೇಶವಾಗಿದೆ ಎಂದು ಲಾರಿಗಳನ್ನು ಬಿಡದೆ ಚಾಲಕರಿಂದ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಬಳಿಕ ಲಾರಿಗಳನ್ನು ಬಿಡಲಾಗುತ್ತಿದೆ ಎಂದು ಚಾಲಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಥಳದಲ್ಲಿ ತಹಶೀಲ್ದಾರ ಶರಣಮ್ಮ ಕಾರು ಬಂದ ಸಂದರ್ಭದಲ್ಲಿ ಸಾರ್ವಜನಿಕರು ಕಾರಿಗೆ ಮುತ್ತಿಗೆ ಹಾಕಿ ಅವರ ಜೊತೆ ಮಾತಿನ ಚಕಮಕಿ ಮಾಡಿದ ಘಟನೆಯೂ ನಡೆದಿದೆ.

  • ರೈತರಿಗೆ ಒಂದೆಡೆ ಸಂತಸ- ಮತ್ತೊಂದೆಡೆ ಪ್ರವಾಹದ ಭೀತಿ!

    ರೈತರಿಗೆ ಒಂದೆಡೆ ಸಂತಸ- ಮತ್ತೊಂದೆಡೆ ಪ್ರವಾಹದ ಭೀತಿ!

    ರಾಯಚೂರು: ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ರೈತ ಒಂದೆಡೆ ಸಂತಸ ಪಡುತ್ತಿದ್ದರೆ, ಮತ್ತೊಂದೆಡೆ ಪ್ರವಾಹದ ಭೀತಿ ಎದುರಿಸುತ್ತಿದ್ದಾನೆ.

    ಹೌದು, ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಸಿರುವುದು ಒಂದೆಡೆ ರೈತರಿಗೆ ಸಂತಸ ತಂದರೆ, ಇನ್ನೊಂದೆಡೆ ಪ್ರವಾಹ ಭೀತಿ ಎದುರಾಗಿದೆ. ಜಲಾಶಯದಿಂದ 1 ಲಕ್ಷ ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆ ಜಿಲ್ಲೆಯ ನಡುಗಡ್ಡೆ ಗ್ರಾಮಗಳು ಜಲಾವೃತವಾಗಿವೆ.

    ಲಿಂಗಸುಗೂರಿನ ಮ್ಯಾದರಗಡ್ಡಿ, ಕಡದರ ಗಡ್ಡಿ ಸೇರಿದಂತೆ ಮೂರು ಗಡ್ಡೆಗಳ ಸುತ್ತಲೂ ನೀರು ಆವರಿಸಿಕೊಂಡಿದೆ. ಸಂಚಾರ, ವಿದ್ಯುತ್ ಸೇರಿದಂತೆ ಎಲ್ಲವೂ ಕಡಿತಗೊಂಡಿದೆ. ಜಾನುವಾರುಗಳನ್ನ ಕಟ್ಟಿಕೊಂಡು ಗಡ್ಡೆಯಲ್ಲೇ ಕುಟುಂಬಗಳು ಉಳಿದುಕೊಂಡಿವೆ. ಶೀಲಹಳ್ಳಿ ಸೇತುವೆ ಈಗಾಗಲೇ ಮುಳುಗಿದ್ದು, ಐದಾರು ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಂಡಿದೆ.

    ರಾಯಚೂರು ತಾಲೂಕಿನ ಕುರ್ವಕುಲಾ, ಕುರ್ವಾಕುರ್ದಾ ಗ್ರಾಮಗಳು ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಹೆಚ್ಚಿನ ಪ್ರಮಾಣ ನೀರು ನದಿಗೆ ಹರಿದು ಬಂದಿದ್ದರಿಂದ ರೈತರ ಪಂಪ್ ಸೆಟ್ ಗಳು ಸಹ ನೀರಿನಲ್ಲಿ ಮುಳುಗಿಹೋಗಿವೆ.

    ಈಗಾಗಲೇ ಜಿಲ್ಲಾಡಳಿತವು ನೀರಿನಲ್ಲಿ ಈಜುವುದು, ತೆಪ್ಪ ಬಳಸುವುದನ್ನೂ ನಿಷೇಧಿಸಿದೆ. ಅಲ್ಲದೇ ನದಿ ತಟದ ಬಳಿ ಯಾರೂ ಹೋಗಬಾರದು ಎಂದು ಮುನ್ನೆಚ್ಚರಿಕೆ ನೀಡಿದೆ. ಅಗತ್ಯವಿದ್ದಲ್ಲಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

  • ಕಂಪ್ಲಿ ಸೇತುವೆ ಬಳಿ ಒಂದರ ಹಿಂದೆ ಒಂದರಂತೆ ಎರಡು ಮೊಸಳೆಗಳು ಪತ್ತೆ!

    ಕಂಪ್ಲಿ ಸೇತುವೆ ಬಳಿ ಒಂದರ ಹಿಂದೆ ಒಂದರಂತೆ ಎರಡು ಮೊಸಳೆಗಳು ಪತ್ತೆ!

    ಬಳ್ಳಾರಿ: ಜಿಲ್ಲೆಯ ಕಂಪ್ಲಿ ಬಳಿಯ ತುಂಗಭದ್ರಾ ನದಿ ನೀರಿನ ರಭಸಕ್ಕೆ ಮೊಸಳೆಗಳು ಹೊರ ಬಂದಿವೆ. ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಂಪ್ಲಿ ಸೇತುವೆ ಕೆಳಗೆ ಎರಡು ಮೊಸಳೆಗಳು ಹೊರಬಂದಿದೆ.

    ಒಂದರ ಹಿಂದೆ ಮತ್ತೊಂದರಂರೆ ಎರಡು ಮೊಸಳೆ ಪತ್ತೆಯಾಗಿದ್ದು, ಮತ್ತಷ್ಟು ಮೊಸಳೆ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಮೊಸಳೆಗಳ ಫೋಟೋವನ್ನು ಸೆರೆ ಹಿಡಿದಿದ್ದಾರೆ. ಅಲ್ಲದೇ ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಿದ ಬೆನ್ನಲ್ಲೇ ಗುರುವಾರ ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಆನೆಗೊಂದಿ- ಕಡೆಬಾಗಿಲು ಸೇತುವೆ ಸಮೀಪದಲ್ಲೇ ಮೊಸಳೆ ಕಾಣಿಸಿಕೊಂಡಿದೆ. ಸಾರ್ವಜನಿಕರು ಇದರ ವಿಡಿಯೋ ಮಾಡಿದ್ದಾರೆ. ಜನ ಸಾಮಾನ್ಯರು ಓಡಾಡುವ ಸ್ಥಳದಲ್ಲೇ ಮೊಸಳೆ ಕಾಣಿಸಿಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.