Tag: dam

  • ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಒಡೆಯಿತು ಅಣೆಕಟ್ಟು – 9 ಮಂದಿ ಸಾವು

    ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಒಡೆಯಿತು ಅಣೆಕಟ್ಟು – 9 ಮಂದಿ ಸಾವು

    ಮುಂಬೈ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಮಳೆರಾಯನ ಆರ್ಭಟಕ್ಕೆ ರತ್ನಗಿರಿ ಜಿಲ್ಲೆಯ ಚಿಲುನ್ ತಹಸಿಲ್‍ನಲ್ಲಿರುವ ಟಿವ್ರೆ ಕಿಂಡಿ ಅಣೆಕಟ್ಟು ಒಡೆದಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ.

    ಅಣೆಕಟ್ಟು ಒಡೆದ ಪರಿಣಾಮ ತಗ್ಗು ಪ್ರದೇಶದಲ್ಲಿದ್ದ ಏಳು ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, ಸುಮಾರು 18-20 ಜನರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ. ರತ್ನಗಿರಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಈ ದುರಂತ ನಡೆದಿದೆ ಎಂದು ಊಹಿಸಲಾಗಿದೆ.

    ಅಣೆಕಟ್ಟಿನ ಬಳಿಯ ಸಣ್ಣ ಹಳ್ಳಿಯ ಸುಮಾರು 19 ಜನರು ಕಣ್ಮರೆಯಾಗಿದ್ದಾರೆ. ಅವರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈವರೆಗೆ ಮೂರು ಮಹಿಳೆಯರು ಸೇರಿದಂತೆ ಒಟ್ಟು 9 ಜನರ ಶವಗಳನ್ನು ರಕ್ಷಣಾ ತಂಡ ಪತ್ತೆಹಚ್ಚಿದೆ.

    ಇದಲ್ಲದೆ ಸ್ಥಳೀಯ ಆಡಳಿತವು ಪೊಲೀಸರ ಸಹಯೋಗದೊಂದಿಗೆ ರಾಷ್ಟೀಯ ವಿಪತ್ತು ಪಡೆ(ಎನ್‍ಡಿಆರ್‍ಎಫ್) ರಕ್ಷಣಾ ಕಾರ್ಯನಿರ್ವಹಿಸುತ್ತಿದೆ. ಹಳ್ಳಿಗಳಲ್ಲಿ ಉಂಟಾದ ಪ್ರವಾಹದ ಅಬ್ಬರಕ್ಕೆ ಸುಮಾರು 12 ಮನೆಗಳು ಕೊಚ್ಚಿಹೋಗಿವೆ. ಹಾಗೆಯೇ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹಿಂದೆಯೇ ಅಣೆಕಟ್ಟೆ ಬಿರುಕು ಬಿಟ್ಟಿತ್ತು. ಈ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೆವು. ಈ ಸ್ಥಿತಿ ಬರುವ ಮುಂಚೆಯೇ ಅಣೆಕಟ್ಟಿನ ದುರಸ್ಥಿ ಕಾರ್ಯ ಮಾಡಿದ್ದರೆ ಹಲವು ಜೀವಗಳು ಉಳಿಯುತ್ತಿದ್ದವು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಹಾರಾಷ್ಟ್ರ ಸಿಎಂ ತನಿಖೆ ನಡೆಸಲು ಆದೇಶಿಸಿದ್ದು, ಅಣೆಕಟ್ಟಿನ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾವುದು. ಜಿಲ್ಲಾಡಳಿತವನ್ನು ಸಂಪರ್ಕಿಸಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಹಾಗೂ ಜನರ ಸುರಕ್ಷತೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದಿದ್ದಾರೆ.

  • ಡ್ಯಾಂನಲ್ಲಿ ಪ್ಲಾಸ್ಟಿಕ್ ಬಾಟಲ್ ತರುವ ಚಾಲೆಂಜ್- ನೀರು ಪಾಲದ ಇಬ್ಬರು ವಿದ್ಯಾರ್ಥಿಗಳು

    ಡ್ಯಾಂನಲ್ಲಿ ಪ್ಲಾಸ್ಟಿಕ್ ಬಾಟಲ್ ತರುವ ಚಾಲೆಂಜ್- ನೀರು ಪಾಲದ ಇಬ್ಬರು ವಿದ್ಯಾರ್ಥಿಗಳು

    ಚಿಕ್ಕಬಳ್ಳಾಪುರ: ಡ್ಯಾಂ ನಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದು ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಬಳಿಯ ದಂಡಿಗಾನಹಳ್ಳಿ ಡ್ಯಾಂನಲ್ಲಿ ನಡೆದಿದೆ.

    23 ವರ್ಷದ ಅಭಿಲಾಷ್ ಹಾಗೂ ಸತೀಶ್ ಶಿವಕುಮಾರ್ ಮೃತರು. ಬೆಂಗಳೂರಿನ ಕೆ. ನಾರಾಯಣಪುರ ಬಳಿಯ ಕ್ರಿಸ್ತು ಜಯಂತಿ ಕಾಲೇಜಿನ ವಿದ್ಯಾರ್ಥಿಗಳಾದ ಇವರು ಕಾರಿನಲ್ಲಿ ಓರ್ವ ಯುವತಿ ಸೇರಿ ನಾಲ್ವರು ಯುವಕರು ದಂಡಿಗಾನಹಳ್ಳಿ ಡ್ಯಾಂಗೆ ಆಗಮಿಸಿದ್ದರು. ಘಟನೆಯಲ್ಲಿ ಕೆವಿನ್ ಮೆಂಡೋಸ್ ಹಾಗೂ ಬುವಾಜ್ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ಇನ್ನೂ ಡ್ಯಾಂನ ಕೊನೆಯಲ್ಲಿ ಈಜಾಡುತ್ತಿದ್ದ ರಕ್ಷಿತಾ ಘಟನೆಯಿಂದ ಬೆಚ್ಚಿಬಿದ್ದು ನೀರಿನಿಂದ ಹೊರಬಂದಿದ್ದಾಳೆ. ನೀರಿನಲ್ಲಿ ಈಜಾಡುತ್ತಾ ಆಡವಾಡುತ್ತಿದ್ದ ನಾಲ್ವರು ಯುವಕರು ಡ್ಯಾಂನಲ್ಲಿ ಎಲ್ಲಿಂದಲೋ ತೇಲಿ ಬಂದ ಪ್ಲಾಸ್ಟಿಕ್ ಬಾಟಲಿಯನ್ನು ನಾನು ತರುತ್ತೇನೆ ಎಂದು ಚಾಲೆಂಜ್ ಹಾಕಿಕೊಂಡಿದ್ದಾರೆ. ಈ ವೇಳೆ ಡ್ಯಾಂ ಆಳ ಅರಿಯದ ಯುವಕರು ಪ್ಲಾಸ್ಟಿಕ್ ಬಾಟಲಿ ತರುವ ಭರದಲ್ಲಿ ಮೊದಲು ಸತೀಶ್ ಶಿವಕುಮಾರ್ ನೀರಿನಲ್ಲಿ ಮುಳುಗಿದ್ರೇ ಅವನನ್ನ ಹುಡುಕಿಕೊಂಡು ಹೋದ ಅಭಿಲಾಷ್ ಸಹ ನೀರಿನಲ್ಲಿ ಮುಳುಗಿದ್ದಾನೆ.

    ಅಷ್ಟರಲ್ಲೇ ಸ್ಥಳದಲ್ಲಿದ್ದ ಸ್ಥಳೀಯರು ಉಳಿದ ಇಬ್ಬರು ಯುವಕರನ್ನು ದಡಕ್ಕೆ ಕರೆತಂದಿದ್ದಾರೆ. ಸದ್ಯ ಇಬ್ಬರು ಯುವಕರು ನೀರುಪಾಲಾಗಿದ್ದು ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಆಗ್ನಿಶಾಮಕ ದಳ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿದ್ದು ನೀರಿನಲ್ಲಿ ಮುಳುಗಡೆ ಆಗಿರುವ ಇಬ್ಬರು ಯುವಕರ ಮೃತದೇಹಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಜ್ಯವನ್ನು ಮತ್ತೆ ಆವರಿಸುತ್ತಾ ಭೀಕರ ಕ್ಷಾಮ?

    ರಾಜ್ಯವನ್ನು ಮತ್ತೆ ಆವರಿಸುತ್ತಾ ಭೀಕರ ಕ್ಷಾಮ?

    ಬೆಂಗಳೂರು: ರಾಜ್ಯಕ್ಕೆ ಮತ್ತೊಂದು ಭೀಕರ ಕ್ಷಾಮ ಎದುರಾಗಲಿದೆ. ಮೇ ಹೋಗಿ ಜೂನ್ ಕೂಡ ಮುಗಿಯುತ್ತಾ ಬಂದಿದೆ. ಆದರೂ ರಾಜ್ಯದ ಹಲವೆಡೆ ಮಳೆಯಾಗುತ್ತಿಲ್ಲ. ಜಲಾಶಯಗಳಲ್ಲಿ ನೀರು ಕಾಣಿಸಿಕೊಂಡಿಲ್ಲ. ಬಿತ್ತನೆ ಕಾರ್ಯ ಆಗಿಲ್ಲ. ಹೀಗಾಗಿ ರಾಜ್ಯ ಮತ್ತೊಮ್ಮೆ ಭೀಕರ ಬರಗಾಲವನ್ನು ಎದುರಿಸಲು ಸಜ್ಜಾಗಬೇಕಾಗಿದೆ.

    ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು, ಕೆರೆ- ಕುಂಟೆಗಳು, ಜಲಾಶಯಗಳು ಒಣಗಿ ಹೋಗಿವೆ. ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಜೋರಾಗಿದೆ. ರೈತರು ಬಿತ್ತನೆ ಮಾಡಲು ಸಾಧ್ಯವಾಗದೇ ಪರದಾಡ್ತಿದ್ದಾರೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಮಳೆ ಪ್ರಮಾಣದಲ್ಲಿ ಭಾರೀ ಕುಸಿತವಾಗಿದೆ.

    ರಾಜ್ಯದಲ್ಲಿ ಮತ್ತೆ ಭೀಕರ ಬರ?
    ರಾಜ್ಯದಲ್ಲಿ ವಾಡಿಕೆಗಿಂತ ಶೇ.31ರಷ್ಟು ಕಡಿಮೆ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ಶೇ.47, ಮಲೆನಾಡು ಪ್ರದೇಶದಲ್ಲಿ ಶೇ.49ರಷ್ಟು ನೀರಿನ ಕೊರತೆಯಿದೆ. ಕಳೆದ ವರ್ಷ 145 ಟಿಎಂಸಿ ನೀರು ಹರಿದಿದ್ದು, ಈ ಬಾರಿ ಜೂನ್ ನಲ್ಲಿ ಕೇವಲ 6 ಟಿಎಂಸಿ ನೀರು ಮಾತ್ರ ಜಲಾಶಯಗಳಿಗೆ ಹರಿದು ಬಂದಿದೆ.

    ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕಳೆದ 46 ವರ್ಷಗಳಲ್ಲೇ ಕಡಿಮೆ ನೀರು ಸಂಗ್ರಹವಾಗಿದೆ. ಕಳೆದ ಬಾರಿ 54 ಟಿಎಂಸಿ ನೀರು, ಈ ಬಾರಿ 2.35 ಟಿಎಂಸಿ ನೀರು ಸಂಗ್ರಹವಾಗಿದೆ. ಜುಲೈನಲ್ಲಿ ವಾಡಿಕೆಯಷ್ಟು ಮಳೆ ಸುರಿದರೂ ಜಲಾಶಯಗಳು ತುಂಬುವುದು ಕಷ್ಟವಾಗಲಿದೆ. ಮಳೆಯ ಕೊರತೆಯಿಂದ ಅಂತರ್ಜಲ ಪ್ರಮಾಣ ಶೇ.85 ರಷ್ಟು ಕುಸಿತವಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಕಷ್ಟವಾಗಲಿದೆ ಎಂಬುದಾಗಿ ತಿಳಿದುಬಂದಿದೆ.

  • ಡ್ಯಾಂಗೆ ಮುತ್ತಿಗೆ ಹಾಕಲು ರೈತರು ಸಿದ್ಧತೆ

    ಡ್ಯಾಂಗೆ ಮುತ್ತಿಗೆ ಹಾಕಲು ರೈತರು ಸಿದ್ಧತೆ

    ಮಂಡ್ಯ: ಜಿಲ್ಲೆಯಲ್ಲಿ ನೀರಿಗಾಗಿ ಅನ್ನದಾತರ ಅಹೋರಾತ್ರಿ ಧರಣಿ ನಡೆಯುತ್ತಿದ್ದು, 8 ದಿನಗಳು ಕಳೆದಿದ್ದರೂ ಸರ್ಕಾರ ಸ್ಪಂದಿಸಲಿಲ್ಲ. ಹೀಗಾಗಿ ರೈತರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ನೀರು ಬಿಡದ ಹಿನ್ನೆಲೆಯಲ್ಲಿ ಮಂಡ್ಯದಿಂದ ಕೆಆರ್‍ಎಸ್‍ವರೆಗೆ ಜಾಥಾ ನಡೆಸಿ ಮುತ್ತಿಗೆಗೆ ಹಾಕಲು ರೈತರು ಪ್ಲಾನ್ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಗುರುವಾರ ರಾತ್ರಿ, ಕಾವೇರಿ ಜಲಾಶಯಗಳಿಂದ ನೀರು ಬಿಡಿಸುವ ಅಧಿಕಾರ ನನ್ನ ಕೈಯಲ್ಲಿ ಇಲ್ಲ. ಅದು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಕೈಯಲ್ಲಿದೆ. ರೈತರು ಬೇಕಿದ್ದರೆ ದೆಹಲಿಗೆ ಹೋಗಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲಿ ಎಂದು ಹೇಳಿಕೆ ನೀಡಿದ್ದರು.

    ಈ ನಡುವೆ ಮಂಡ್ಯದಲ್ಲಿ ನೀರಿಗಾಗಿ ಅನ್ನದಾತರು ನಡೆಸುತ್ತಿರುವ ಅಹೋರಾತ್ರಿ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಕೆಆರ್‍ಎಸ್‍ವರೆಗೆ ಜಾಥಾ ನಡೆಸಿ, ಡ್ಯಾಂಗೆ ಮುತ್ತಿಗೆ ಹಾಕಲು ರೈತರು ತೀರ್ಮಾನಿಸಿದ್ದಾರೆ.

    ಸಿಎಂ ಆಡಿದ ಮಾತುಗಳಿಂದ ನಿಖಿಲ್ ಚುನಾವಣೆಯಲ್ಲಿ ಸೋತ ಬಳಿಕ ಮಂಡ್ಯದಿಂದ ಸಿಎಂ ದೂರ ಆಗುತ್ತಿದ್ದಾರಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

  • ಸಿದ್ದರಾಮಯ್ಯ ಮಂಜೂರು ಮಾಡಿದ್ದ ಯೋಜನೆಗೆ ಸ್ವಪಕ್ಷೀಯ ಸಚಿವನೇ ಅಡ್ಡಿ

    ಸಿದ್ದರಾಮಯ್ಯ ಮಂಜೂರು ಮಾಡಿದ್ದ ಯೋಜನೆಗೆ ಸ್ವಪಕ್ಷೀಯ ಸಚಿವನೇ ಅಡ್ಡಿ

    ಬಳ್ಳಾರಿ: ಜಿಲ್ಲೆಯಲ್ಲಿ ಸೇಡಿನ ರಾಜಕೀಯ ಆರಂಭವಾಯ್ತಾ ಎನ್ನುವ ಅನುಮಾನವೊಂದು ಮೂಡಿದೆ. ಯಾಕೆಂದರೆ ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ ಕಾಮಗಾರಿಗೆ ಸ್ವಪಕ್ಷೀಯ ಸಚಿವನಿಂದಲೇ ಅಡ್ಡಿಯಾಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಮುಜುರಾಯಿ ಸಚಿವ ಪಿಟಿ ಪರಮೇಶ್ವರ್ ನಾಯಕ್ ಹಾಗೂ ಶಾಸಕ ಭೀಮಾ ನಾಯ್ಕೆ ನಡುವೆ ನೀರಾವರಿ ಯೋಜನೆಗಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಮೂಲಕ ಬಳ್ಳಾರಿಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ನಾಯಕರ ಜಗಳ ಬೀದಿಗೆ ಬಂದಿದೆ. ಭೀಮಾ ನಾಯ್ಕ್ ಹೀಗೆ ರೈತ ಸಭೆಯಲ್ಲಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ವಿರುದ್ಧ ಪರಮೇಶ್ವರ್ ನಾಯ್ಕ್ ಸೇಡು ತೀರಿಸಿಕೊಳ್ಳಲು ಹಗರಿಬೊಮ್ಮನಹಳ್ಳಿಯ ಜನರ 50 ವರ್ಷದ ಕನಸಾಗಿರುವ 26 ಹಳ್ಳಿಗೆ ಜೀವನಾಡಿಯಾಗುವ ಮಾಲವಿ ಜಲಾಶಯಕ್ಕೆ ನೀರುಣಿಸುವ ಯೋಜನೆಗೆ ಅಡ್ಡಿ ಪಡಿಸಿದ್ದಾರೆ ಆರೋಪ ಕೇಳಿಬಂದಿದೆ.

    ಅಡ್ಡಿ ಯಾಕೆ?:
    ಕಾಮಗಾರಿ ಕೆಲಸದಲ್ಲಿ ಪರ್ಸೆಂಟೆಜ್ ಸಿಕ್ಕಿಲ್ಲ ಎಂದು ಪಿಟಿಪಿ ಯೋಜನೆಗೆ ಅಡ್ಡಿ ಪಡಿಸುತ್ತಿದ್ದಾರೆ. ನಾಮಫಲಕದಲ್ಲಿ ತನ್ನ ಹೆಸರು ಹಾಕುವಂತೆ ಪಿಟಿಪಿ ಮಸಲತ್ತು ಹಾಕಿದ್ದಾರೆ. ಇವನ್ಯಾವ ಸಚಿವರು ಯೋಜನೆ ಭೂಮಿ ಪೂಜೆ ಮಾಡೋಕೆ? ಎರಡು ವರ್ಷದಿಂದ ಪಿಟಿಪಿ ಕಿರುಕುಳ ಕೊಡುತ್ತಿದ್ದಾನೆ. ಈ ವಿಷಯವನ್ನ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿ ಎಲ್ಲರ ಗಮನಕ್ಕೂ ತಂದಿದ್ದರೂ ಬಗೆ ಹರಿದಿಲ್ಲ. ಈಗ ನನ್ನ ಕೈಯಲ್ಲಿ ತಡಿಯೋಕ್ ಆಗಲ್ಲ, ಒಂದಲ್ಲ ಹತ್ತು ಸಾವಿರ ರೈತರನ್ನ ಸಚಿವನ ಮನೆ ಮುಂದೆ ಸೇರಿಸ್ತೀನಿ ಎಂದು ಪರಮೇಶ್ವರ್ ನಾಯ್ಕ್ ಹೇಳುವ ಮೂಲಕ ರೈತರ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಯೋಜನೆ ಹಿನ್ನೆಲೆಯೇನು?:
    ಹಗರಿಬೊಮ್ಮನಹಳ್ಳಿ ಕ್ಷೇತ್ರದ 26 ಹಳ್ಳಿಗೆ ನೀರುಣಿಸುವ ಮಾಲವಿ ಜಲಾಶಯಕ್ಕೆ ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ನೀರುಣಿಸಲು 153 ಕೋಟಿ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಭೂಮಿ ಪೂಜೆ ಮಾಡಿದ್ದರು. ಆದರೆ ಒಂದೂವರೆ ವರ್ಷವಾದರೂ ಯೋಜನೆ ಪೂರ್ಣವಾಗಿಲ್ಲ. ಯೋಜನೆ ವಿಳಂಬಕ್ಕೆ ಸಚಿವರು ಕಾರಣ ಎಂದು ಶಾಸಕ ಭೀಮಾನಾಯ್ಕ್ ಆರೋಪಿಸುತ್ತಿದ್ದಾರೆ.

    ಮಾಲವಿಗೆ ನೀರೊಯ್ಯಲು ಹೂವಿನಹಡಗಲಿ ಕ್ಷೇತ್ರದ ರಾಜೊಳ್ಳಿಯ ಬಳಿ ಜಾಕ್ವೆಲ್ ಕೂರಿಸಿ, ಪೈಪ್ ಲೈನ್ ಮಾಡಬೇಕು. ಹೀಗಾಗಿ ತನ್ನ ಕ್ಷೇತ್ರದ ರೈತನ ನೆರವಿನಿಂದ ಸಚಿವ ಪಿಟಿಪಿ ಈ ಯೋಜನೆ ಪೂರ್ಣವಾಗಲು ಬಿಡ್ತಿಲ್ಲ ಎಂದು ಭೀಮಾನಾಯಕ್ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

  • ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲು – ಮತ್ತೊಬ್ಬನಿಗಾಗಿ ಶೋಧ ಕಾರ್ಯ

    ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲು – ಮತ್ತೊಬ್ಬನಿಗಾಗಿ ಶೋಧ ಕಾರ್ಯ

    ಬೀದರ್: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಬಳಿ ನಡೆದಿದೆ.

    ಕಾಶಿನಾಥ್ ಪಾಟೀಲ್ (17) ಹಾಗೂ ನಾಗರಾಜ್ (16) ಸೆಲ್ಫಿ ಕ್ಲಿಕ್ಕಿಸಿಕೊಳ್ಳವ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಬೇಸಿಗೆ ರಜೆ ಇದ್ದ ಕಾರಣ ಕಾಶಿನಾಥ್ ಹಾಗೂ ನಾಗರಾಜ್ ದುಬಲಗುಂಡಿಯಿಂದ ಮಾವನ ಮನೆಗೆ ಬಂದಿದ್ದರು. ಈ ವೇಳೆ ಇಬ್ಬರು ಕಾರಂಜಾ ಡ್ಯಾಂನಲ್ಲಿ ಹತ್ತಿರ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

    ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಇಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ನೀರಿನಲ್ಲಿ ಬಿದ್ದ ಕಾಶಿನಾಥ್ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಬಗ್ಗೆ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಚಿವ ರೇವಣ್ಣಗೆ ಎಚ್ಚರಿಕೆ ನೀಡಿದ ಕೆ.ಆರ್.ಪೇಟೆ ರೈತರು

    ಸಚಿವ ರೇವಣ್ಣಗೆ ಎಚ್ಚರಿಕೆ ನೀಡಿದ ಕೆ.ಆರ್.ಪೇಟೆ ರೈತರು

    -ಸಚಿವರಿಂದ ಮಲತಾಯಿ ಧೋರಣೆ: ರೈತರ ಆಕ್ರೋಶ

    ಮಂಡ್ಯ: ಬೆಳೆದು ನಿಂತಿರುವ ಕಬ್ಬು ಮತ್ತು ಭತ್ತದ ಬೆಳೆಗಳನ್ನು ಉಳಿಸಿಕೊಳ್ಳಲು ಹೇಮಾವತಿ ನದಿಗೆ ಗೊರೂರು ಜಲಾಶಯದಿಂದ ನೀರು ಹರಿಸಬೇಕು. ಇಲ್ಲದಿದ್ದರೆ ಸಚಿವ ರೇವಣ್ಣ ಅವರ ಮನೆಯ ಮುಂದೆ ಸಾಮೂಹಿಕವಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಮತ್ತು ಕಸಬಾ ಹೋಬಳಿಯಲ್ಲಿ ರೈತರು ಅಸಹಾಯಕತೆ ಹೊರಹಾಕುತ್ತಿದ್ದಾರೆ.

    ಕೆ.ಆರ್.ಪೇಟೆ ತಾಲೂಕಿನಲ್ಲಿ ಬೆಳೆದು ನಿಂತಿರುವ ಕಬ್ಬು ಮತ್ತು ಭತ್ತದ ಬೆಳೆಗಳನ್ನು ಉಳಿಸಿಕೊಳ್ಳಲು ಗೊರೂರು ಜಲಾಶಯದಿಂದ ಒಂದು ಸಾವಿರ ಕ್ಯೂಸೆಕ್ ನೀರನ್ನು ಹೇಮಾವತಿ ನದಿಗೆ ಹರಿಸಿ ಎಂದು ರೈತರು ಆಗ್ರಹಿಸಿದ್ದಾರೆ. ಅಲ್ಲದೆ ಮಂದಗೆರೆ ನದಿ ಅಣೆಕಟ್ಟೆಯ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ಕನಿಷ್ಠ 10 ದಿನಗಳ ಕಾಲ ನೀರು ಹರಿಸಬೇಕು ಎಂದು ರೈತ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ. ಹಾಗೆಯೇ ರೈತರ ಸಮಸ್ಯೆಗಳಿಗೆ ಪರಿಹಾರ ನೀಡದೇ ಸಚಿವ ರೇವಣ್ಣ ಅವರು ಕೃಷ್ಣರಾಜಪೇಟೆ ತಾಲೂಕಿನ ರೈತರನ್ನು ಮಲತಾಯಿ ಧೋರಣೆಯಿಂದ ಕಾಣುತ್ತಿದ್ದಾರೆ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ.

    ಹೊಳೆನರಸೀಪುರ ರೈತರಿಗೆ ಶ್ರೀರಾಮದೇವರ ಅಣೆಕಟ್ಟೆಯ ನಾಲೆಯ ಮೂಲಕ ನೀರು ಹರಿಸಿ ಬೇಸಿಗೆ ಬೆಳೆ ಬೆಳೆಯಲು ಅನುವು ಮಾಡಿಕೊಟ್ಟಿರುವ ಸಚಿವ ರೇವಣ್ಣ, ಕೆ.ಆರ್.ಪೇಟೆ ತಾಲೂಕಿನ ರೈತರು ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ನದಿಗೆ ನೀರು ಹರಿಸಲು ಆದೇಶ ನೀಡದೆ ಕೃಷ್ಣರಾಜಪೇಟೆಯ ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೋಮವಾರದ ಒಳಗೆ ಗೊರೂರು ಜಲಾಶಯದಿಂದ ಹೇಮಾವತಿ ನದಿಗೆ ನೀರು ಹರಿಸದಿದ್ದರೆ ಹೊಳೆನರಸೀಪುರದಲ್ಲಿನ ಸಚಿವ ರೇವಣ್ಣ ಅವರ ಮನೆಯ ಮುಂದೆ ವಿಷಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಜೊತೆಗೆ ಗೊರೂರು ಜಲಾಶಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ರೇವಣ್ಣ ಅವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನೀರು ಹರಿಸದಿದ್ದರೆ ಕೃಷ್ಣರಾಜಪೇಟೆ ತಾಲೂಕಿನ ರೈತರು ಪ್ರತಿಭಟನೆ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಬಾರಿ ಬೇಸಿಗೆ ಬೆಳೆಗೆ ನೀರು ಕಟ್- ಸರ್ಕಾರದ ಪತ್ರದಲ್ಲಿ ಏನಿದೆ?

    ಈ ಬಾರಿ ಬೇಸಿಗೆ ಬೆಳೆಗೆ ನೀರು ಕಟ್- ಸರ್ಕಾರದ ಪತ್ರದಲ್ಲಿ ಏನಿದೆ?

    ಬೆಂಗಳೂರು: ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯ ಇಳಿಕೆ ಹಿನ್ನಲೆಯಲ್ಲಿ ಈ ಬಾರಿ ಬೇಸಿಗೆ ಬೆಳೆಗೆ ರೈತರ ಜಮೀನಿಗೆ ನೀರು ಬಿಡದಂತೆ ಜಲಸಂಪನ್ಮೂಲ ಇಲಾಖೆಯ ಸೂಚನೆ ನೀಡಿದೆ.

    ರಾಜ್ಯದ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಕೊರತೆ ಉಂಟಾಗುತ್ತದೆ. ಸದ್ಯ ಜಲಾಶಯಗಳಲ್ಲಿ ಇರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಬಳಸಬೇಕು. ಯಾವುದೇ ಕಾರಣಕ್ಕೂ ಬೇಸಿಗೆ ಬೆಳೆಗೆ ನೀರು ಬಿಡುಗಡೆ ಮಾಡಬಾರದು ಎಂದು ಜಲಸಂಪನ್ಮೂಲ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಪತ್ರದ ಮೂಲಕ ವಿವಿಧ ಜಲಾಶಯಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಬೆಳಗಾವಿ, ಕಲಬುರಗಿ, ಬೆಂಗಳೂರು, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಹಾಗೂ ಬೆಂಗಳೂರಿನ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಾವೇರಿ ನಿರಾವರಿ ನಿಗಮ ನಿಯಮಿತ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಬೇಸಿಗೆ ಬೆಳಗೆ ರೈತರಿಗೆ ನೀರು ಬಿಡದಂತೆ ಸೂಚಿಸಲಾಗಿದೆ.

    ಪತ್ರದಲ್ಲಿ ಏನಿದೆ?
    ಜಲ ಸಂಪನ್ಮೂಲ ಇಲಾಖೆ ಅಡಿಯಲ್ಲಿನ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರನ್ನು ಬೇಸಿಗೆಯಲ್ಲಿ ಹಾಗೂ ನೀರಿನ ಅಭಾವವಿರುವ ಪರಿಸ್ಥಿತಿಯಲ್ಲಿ ವ್ಯವಸ್ಥಿತವಾಗಿ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ನಿರ್ಧರಿಸಲು ಆಯಾ ಪ್ರಾದೇಶಿಕ ಆಯುಕ್ತರುಗಳಿಗೆ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗಿದೆ. 2018 ಡಿಸೆಂಬರ್ 16ರಂದು ಕಂದಾಯ ಸಚಿವರ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಮಳೆ ಕೊರತೆಯ ಹಿನ್ನೆಲೆಗಳಲ್ಲಿ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಲಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಜಲಾಶಯದ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲು ನಿರ್ಣಯಿಸಲಾಗಿದೆ.

    ಪ್ರಸ್ತುತ ಜಲಾಶಯಗಳಲ್ಲಿ ಒಳಹರಿವು ಇಲ್ಲದ ಕಾರಣದಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವವನ್ನು ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗುವುದನ್ನು ತಪ್ಪಿಸಲು, ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ವ್ಯವಸ್ಥಿತವಾಗಿ ಆಧ್ಯತೆಯ ಮೇರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಕ್ಕೆ ಶಾಲಾ ಪ್ರವಾಸಕ್ಕೆ ಹೋಗಿದ್ದ ಬಾಲಕ ಡ್ಯಾಂನಲ್ಲಿ ಬಿದ್ದು ಸಾವು

    ಹೊಸ ವರ್ಷಕ್ಕೆ ಶಾಲಾ ಪ್ರವಾಸಕ್ಕೆ ಹೋಗಿದ್ದ ಬಾಲಕ ಡ್ಯಾಂನಲ್ಲಿ ಬಿದ್ದು ಸಾವು

    ಕೋಲಾರ: ಹೊಸ ವರ್ಷದ ಪ್ರಯುಕ್ತ ಶಾಲೆಯಿಂದ ಡ್ಯಾಂ ವೀಕ್ಷಣೆಗೆ ತೆರಳಿದ್ದ ಶಾಲಾ ಬಾಲಕನೊಬ್ಬ ಈಜಲು ಹೋಗಿ ಕಾಲು ಜಾರಿ ಮೃತಪಟ್ಟಿರುವ ಘಟನೆ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.

    ಬಂಗಾರಪೇಟೆ ತಾಲೂಕಿನ ಕಾವರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ 7 ತರಗತಿ ವಿದ್ಯಾರ್ಥಿ ಆಕಾಶ್(12) ಮೃತಪಟ್ಟ ಬಾಲಕ. ಆಕಾಶ್ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಬಳಿ ಇರುವ ಮುಷ್ಟ್ರರಹಳ್ಳಿ ಡ್ಯಾಂಗೆ ಬಿದ್ದು ಮೃತಪಟ್ಟಿದ್ದಾನೆ.

    ಮಂಗಳವಾರ ಹೊಸ ವರ್ಷದ ಪ್ರಯುಕ್ತ ಶಾಲೆಯಿಂದ ಡ್ಯಾಂ ವೀಕ್ಷಣೆಗೆ ಶಾಲಾ ವಿದ್ಯಾರ್ಥಿಗಳ ಜೊತೆ ಆಕಾಶ್ ಪ್ರವಾಸ ಹೋಗಿದ್ದ. ಈ ಸಂದರ್ಭದಲ್ಲಿ ಡ್ಯಾಂ ಬಳಿ ಈಜಲು ಹೋಗಿ ಅಲ್ಲಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

    ಘಟನಾ ಸ್ಥಳಕ್ಕೆ ಕಾಮಸಮುದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾವೇರಿ ಪ್ರತಿಮೆ ನಿರ್ಮಾಣದಿಂದ ಕೆಆರ್‌ಎಸ್ ಗೆ ಕಂಟಕ – ಸರ್ಕಾರದ ನಿರ್ಧಾರಕ್ಕೆ ಎಂಜಿನಿಯರ್ಸ್ ವಿರೋಧ

    ಕಾವೇರಿ ಪ್ರತಿಮೆ ನಿರ್ಮಾಣದಿಂದ ಕೆಆರ್‌ಎಸ್ ಗೆ ಕಂಟಕ – ಸರ್ಕಾರದ ನಿರ್ಧಾರಕ್ಕೆ ಎಂಜಿನಿಯರ್ಸ್ ವಿರೋಧ

    ಮೈಸೂರು: ಕೆ.ಆರ್. ಎಸ್ ಜಲಾಶಯದ ಮುಂಭಾಗದಲ್ಲಿ 120 ಅಡಿ ಎತ್ತರ ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆರಂಭದಲ್ಲೆ ವಿರೋಧ ವ್ಯಕ್ತವಾಗಿದೆ.

    ಮೈಸೂರಿನ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ ನಲ್ಲಿ ನಡೆದ ಸಭೆಯಲ್ಲಿ ನಿವೃತ್ತ ಎಂಜಿನಿಯರ್ ಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾವೇರಿ ಪ್ರತಿಮೆ ಹಾಗೂ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಬೃಂದಾವನವನ್ನು ಅಭಿವೃದ್ಧಿ ಪಡಿಸಲು ಮುಂದಾದ್ರೆ ಇದು ಕೆ.ಆರ್. ಅಣೆಕಟ್ಟೆಗೆ ಕಂಟಕವಾಗಲಿದೆ ಎಂದು ಎಚ್ವರಿಕೆ ನೀಡಿದ್ರು.

    ಸುಮಾರು 20ಕ್ಕೂ ಹೆಚ್ಚು ನುರಿತ ಹಿರಿಯ ಎಂಜಿನಿಯರ್ ಗಳು ಸಭೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿದ್ದಾರೆ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು, 120 ಅಡಿ ಎತ್ತರ ನಿರ್ಮಾಣ ಮಾಡಬೇಕಾದರೆ ಸುಮಾರು 40 ಅಡಿ ಆಳದಿಂದ ಅಡಿಪಾಯ ತೆಗೆಯಬೇಕಾಗುತ್ತೆ. ಅಷ್ಟೇ ಅಲ್ಲದೆ ಡ್ಯಾಂ ಭೂಕಂಪನ ವಲಯದಲ್ಲಿ ನಿರ್ಮಿಸಿರುವುದರಿಂದ ಡ್ಯಾಂ ಬಿರುಕು ಬಿಡುತ್ತದೆ ಎಂಬ ಅಭಿಪ್ರಾಯ ಪಟ್ಟರು.

    ಡ್ಯಾಂ ಬಳಿ ಡಿಸ್ನಿಲ್ಯಾಂಡ್ ಮಾದರಿ ನಿರ್ಮಾಣ ಮಾಡಲು ಸುಮಾರು 400 ಎಕ್ಕರೆ ಪ್ರದೇಶ ಬೇಕಾಗುತ್ತೆ. ಇದರಿಂದ ಡ್ಯಾಂ ಸುತ್ತಮುತ್ತಲು ಕೃಷಿ ಪ್ರದೇಶ ಇರುವ ಕಾರಣ ರೈತರ ಜಮೀನನ್ನು ವಶಕ್ಕೆ ಪಡೆಯಬೇಕಾಗುತ್ತೆ ಇದು ಸರಿಯಾದ ನಿರ್ಧಾರವಲ್ಲ ಅಂತಾ ರೈತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews