Tag: dam

  • ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವವರು ಈಗ ಮಾತಾಡಲಿ – ರೇವಣ್ಣ

    ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವವರು ಈಗ ಮಾತಾಡಲಿ – ರೇವಣ್ಣ

    ಹಾಸನ: ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವ ಬಿಜೆಪಿಯ ಮುಖಂಡರು ನಿಂಬೆಹಣ್ಣಿನ ಬಗ್ಗೆ ಈಗ ಮಾತನಾಡಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಹೊಳೆನರಸೀಪುರದ ಚಾಕೇನಹಳ್ಳಿಯಲ್ಲಿ ಮಾತನಾಡಿದ ಅವರು, ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸಿದ ನಂತರ ವಿಮಾನ ಹಾರಾಟಕ್ಕೂ ಮುನ್ನ ಚಕ್ರಗಳಿಗೆ ನಿಂಬೆಹಣ್ಣು ಇಟ್ಟಿದ್ದಾರೆ. ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವ ಬಿಜೆಪಿ ನಾಯಕರು ಈಗ ನಿಂಬೆಹಣ್ಣಿನ ಬಗ್ಗೆ ಮಾತನಾಡಲಿ ಎಂದು ಹೇಳಿದರು.

    ಕಾವೇರಿ ಕೊಳ್ಳದಲ್ಲಿರುವ ಡ್ಯಾಂಗಳಲ್ಲಿ ನಡೆಯಬೇಕಿದ್ದ ಕೆಲಸಗಳಿಗೆ ಮುಖ್ಯಮಂತ್ರಿ ತಡೆಹಿಡಿದಿದ್ದಾರೆ. ಮೈಸೂರು, ಮಂಡ್ಯ, ಮಡಿಕೇರಿಯ ಸೇರಿದಂತೆ ವಿವಿಧೆಡೆ ನಡೆಯಬೇಕಿದ್ದ 5 ಸಾವಿರ ಕೋಟಿ ರೂ.ಗಳ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರದ ಕಾಮಗಾರಿಗಳಿಗೆ ತಡೆ ಕೊಟ್ಟಿದ್ದಾರೆ. ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿದ್ದರೂ ಕಾಮಗಾರಿ ನಿಲ್ಲಿಸಿದ್ದಾರೆ. ಬಿಜೆಪಿ ಸೇರಿದ ಅನರ್ಹರ ಕ್ಷೇತ್ರಗಳಿಗೆ ಮತ್ತು ಬಿಜೆಪಿ ಗೆದ್ದ ಕೆಲ ಕ್ಷೇತ್ರದ ಕಾಮಗಾರಿಗಳಿಗೆ ಈಗ ಕೆಲಸಕ್ಕೆ ಅನುಮತಿ ನೀಡುತ್ತಿದ್ದಾರೆ. ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿನ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ ಎಂದು ಆರೋಪಿಸಿದರು.

    ದ್ವೇಷದ ರಾಜಕಾರಣ ಬಿಡದೆ ಇದ್ದರೆ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ. ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ಸಹ ಹಾಗೆಯೇ ಇದೆ. ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ರಾಜಕೀಯ ದ್ವೇಷ ಬಿಟ್ಟು ಕೆಲಸಮಾಡಿ. ಕಾಮಗಾರಿ ತಡೆ ಹಿಡಿದ ಜಿಲ್ಲೆಗಳ ಜನತೆ ಕರ್ನಾಟಕದವರಲ್ಲವೇ? ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮರು ಚುನಾವಣೆಯಲ್ಲಿ ಕೆ.ಆರ್.ಪೇಟೆ ಸೇರಿದಂತೆ ಎಲ್ಲ ಕಡೆ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯನ್ನು ರಾಜ್ಯದಿಂದ ತೆಗೆಯುವ ಗುರಿಯೇ ನಮ್ಮ ಕೆಲಸ ಎಂದು ಬಿಜೆಪಿ ವಿರುದ್ಧ ಗುಡುಗಿದರು.

    ಹೊಳೆನರಸೀಪುರದ ಚಾಕೇನಹಳ್ಳಿ ಮಿನಿ ಡ್ಯಾಂಗೆ ಹೆಚ್.ಡಿ.ರೇವಣ್ಣ ಮತ್ತು ಕುಟುಂಬದವರಿಂದ ಬಾಗಿನ ಅರ್ಪಿಸಲಾಯಿತು. ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ಭವಾನಿ ರೇವಣ್ಣ ಭಾಗಿಯಾಗಿದ್ದರು. ಚಾಕೆನಹಳ್ಳಿ ಡ್ಯಾಂ 12 ವರ್ಷಗಳ ನಂತರ ಭರ್ತಿಯಾಗಿದ್ದು, ಕಾಮಸಮುದ್ರ ಏತನೀರಾವರಿ ಮೂಲಕ ಡ್ಯಾಂಗೆ ನೀರು ಹರಿಸಲಾಗಿದೆ. 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಡ್ಯಾಂಗೆ ಇಂದು ಬಾಗಿನ ಅರ್ಪಿಸಲಾಯಿತು.

  • ಕೋಡಿ ಹರಿದ ಮೊಟ್ಟ ಮೊದಲ ಕೆರೆ ಈಗ ಪ್ರವಾಸಿ ತಾಣ

    ಕೋಡಿ ಹರಿದ ಮೊಟ್ಟ ಮೊದಲ ಕೆರೆ ಈಗ ಪ್ರವಾಸಿ ತಾಣ

    ಚಿಕ್ಕಬಳ್ಳಾಪುರ: ಕುಡಿಯುವ ನೀರಿಗೂ ಹಾಹಾಕಾರವಿದ್ದ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಗತಕಾಲದ ಜಲವೈಭವ ಮರುಕಳುಸುತ್ತಿದೆ. ಜಿಲ್ಲೆಯಲ್ಲೇ ಈ ವರ್ಷ ಮೊಟ್ಟ ಮೊದಲ ಬಾರಿಗೆ ಜಲಾಶಯವೊಂದು ತುಂಬಿ ತುಳುಕುತ್ತಿದ್ದು, ಪ್ರವಾಸಿಗರನ್ನ ತನ್ನತ್ತ ಬರಸೆಳೆಯುತ್ತಿದೆ.

    ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಅರೆಮಲೆನಾಡು ಖ್ಯಾತಿಯ ಮಂಚೇನಹಳ್ಳಿ ಹೋಬಳಿಯ ದಂಡಿಗಾನಹಳ್ಳಿ ಡ್ಯಾಂ ಹಚ್ಚು ಹಸುರಿನ ಬೆಟ್ಟ ಗುಡ್ಡಗಳ ನಡುವೆ ಮೈದುಂಬಿ ಹರಿಯುತ್ತಿದೆ. ಕಳೆದ ಒಂದು ವಾರದಿಂದ ಜಿಲ್ಲೆಯ ಮೇಲೆ ವರುಣದೇವ ಕೃಪೆ ತೋರಿದ್ದು, ಜಿಲ್ಲೆಯ ಗತಕಾಲದ ಜಲವೈಭವ ಮರುಕಳಿಸುತ್ತಿದೆ.

    ಜಿಲ್ಲೆಯ ಹಲವು ಕೆರೆಗಳಿಗೆ ನೀರು ಹರಿದುಬಂದಿದ್ದು, ದಂಡಿಗಾನಹಳ್ಳಿ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ದಂಡಿಗಾನಹಳ್ಳಿ ಡ್ಯಾಂ ಕೋಡಿ ಹರಿದಿದೆ. ಈ ವರ್ಷ ಜಿಲ್ಲೆಯಲ್ಲೇ ಕೋಡಿ ಹರಿದ ಮೊಟ್ಟ ಮೊದಲ ಕೆರೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಫೌಸಿಯಾ ತರನಮ್ ಸಂತಸದಿಂದ ಹೇಳಿದ್ದಾರೆ.

    ಎಂದು ಬತ್ತದ ಕೆರೆಯಂತಲೇ ಫೇಮಸ್ ಆಗಿರುವ ಈ ದಂಡಿಗಾನಹಳ್ಳಿ ಜಲಾಶಯ ಬತ್ತಿದ ಉದಾಹಾರಣೆಗಳಿಲ್ಲ. ಸುತ್ತಲೂ ಹಸಿರ ತೋರಣಗಳಂತೆ ಆವರಿಸಿರುವ ಬೆಟ್ಟಗಳ ಮಧ್ಯೆ ನೆಲೆ ನಿಂತಿರುವ ಈ ದಂಡಿಗಾನಹಳ್ಳಿ ಜಲಾಶಯ ತನ್ನ ಪ್ರಾಕೃತಿಕ ಸೊಬಗಿನಿಂದ ಸದಾ ತನ್ನತ್ತ ಪ್ರವಾಸಿಗರನ್ನ ಬರಸೆಳೆಯುತ್ತದೆ ಎಂದು ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

    ದಂಡಿಗಾನಹಳ್ಳಿ ಡ್ಯಾಂ ಕೋಡಿ ಹರಿದ ವಿಷಯ ತಿಳಿದು ಜಿಲ್ಲಾಪಂಚಾಯತ್ ಸಿಇಓ ಜಲಾಶಯಕ್ಕೆ ಭೇಟಿ ನೀಡಿ ಬಾಗಿನ ಅರ್ಪಿಸಿದರು. ಅಂದಹಾಗೆ ಈ ದಂಡಿಗಾನಹಳ್ಳಿ ಡ್ಯಾಂ ತನ್ನ ಪ್ರಾಕೃತಿಕ ಸೊಬಗಿನಿಂದ ಬಲು ಆಕರ್ಷಕವಾಗಿದ್ದು, ಸದಾ ಪ್ರವಾಸಿಗರ ಮನ ಸೆಳೆಯುತ್ತದೆ.

  • ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಒಳಹರಿವು – ಕೆಆರ್​ಎಸ್ ಭರ್ತಿ

    ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಒಳಹರಿವು – ಕೆಆರ್​ಎಸ್ ಭರ್ತಿ

    ಮಂಡ್ಯ: ಕೆಆರ್​ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದ್ದು, ಒಳ ಹರಿವು ಹೆಚ್ಚಿನ ಪ್ರಮಾಣದಲ್ಲಿ ಆರಂಭವಾದ ಒಂಬತ್ತೇ ದಿನಕ್ಕೆ ಕೆಆರ್​ಎಸ್ ಅಣೆಕಟ್ಟೆ 124.80 ಅಡಿ ಗರಿಷ್ಠ ಮಟ್ಟ ತಲುಪಿದೆ.

    ಜುಲೈ 6ರಂದು ಅಣೆಕಟ್ಟೆಯಲ್ಲಿ ಕೇವಲ 84.20 ಅಡಿ ನೀರಿತ್ತು. ಆದರೆ ಐದು ದಶಕಗಳ ಬಳಿಕ ದಾಖಲೆ ಮಟ್ಟದ ಒಳ ಹರಿವು ಬಂದ ಹಿನ್ನೆಲೆಯಲ್ಲಿ ಅಣೆಕಟ್ಟು ಭರ್ತಿಯಾಗಿದೆ. ಮುಂಜಾಗೃತಾ ಕ್ರಮವಾಗಿ ಜುಲೈ 9ರಿಂದ ಹೊರ ಹರಿವು ಬಿಡದೇ ಇದ್ದರೆ ನಾಲ್ಕೇ ದಿನಕ್ಕೆ ಡ್ಯಾಂ ಭರ್ತಿಯಾಗುತ್ತಿತ್ತು. 118 ಅಡಿ ಭರ್ತಿಯಾಗುತ್ತಿದ್ದಂತೆ ಅಣೆಕಟ್ಟು ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ನೀರು ಬಿಟ್ಟಿದ್ದರಿಂದ ಈಗ ಡ್ಯಾಂ ಭರ್ತಿಯಾಗಿದೆ.

    ಒಳ ಹರಿವು ಇಳಿಮುಖವಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಹೊರ ಹರಿವು ಕಡಿಮೆ ಮಾಡಲಾಗಿತ್ತು. ಡ್ಯಾಂ ಸಂಪೂರ್ಣ ಭರ್ತಿಮಾಡಿಕೊಳ್ಳಲು ಹೊರ ಹರಿವು ಕಡಿಮೆ ಮಾಡಲಾಗಿತ್ತು.

    ಕೆಆರ್​ಎಸ್ ಜಲಾಶಯದ ನೀರಿನ ಗರಿಷ್ಟ ಮಟ್ಟ 124.80 ಅಡಿ ಆಗಿದ್ದು, ಇಂದು 124.80 ಅಡಿ ಇದೆ. ಜಲಾಶಯ ಒಳ ಹರಿವು 18,769 ಕ್ಯೂಸೆಕ್ ಆಗಿದ್ದು, 5,168 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಪ್ರಸ್ತುತ 49.452 ಟಿಎಂಸಿ ನೀರು ಸಂಗ್ರಹವಾಗಿದೆ.

    ಕಾವೇರಿ ಜಲಾನಯನ ಪ್ರದೇಶ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹೇಮಾವತಿ ಮತ್ತು ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತಿತ್ತು. ಪರಿಣಾಮ ಭಾನುವಾರ ಸಂಜೆ 2,05,852 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಸೋಮವಾರ ಬೆಳಗ್ಗೆ 2.04 ಲಕ್ಷ ಕ್ಯೂಸೆಕ್ ಇತ್ತು.

    ಸೋಮವಾರ ಬೆಳಗ್ಗೆ 122.40 ಅಡಿ ಇದ್ದ ನೀರಿನ ಮಟ್ಟವು ಹೊರ ಹರಿವಿನಿಂದ ಹೆಚ್ಚಳದಿಂದಾಗಿ ಸಂಜೆ ವೇಳೆಗೆ 121.80 ಅಡಿಗೆ ಇಳಿದಿತ್ತು. ಸೋಮವಾರ ಬೆಳಿಗ್ಗೆಯಿಂದ 1.64 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. ನಂತರ ಒಳ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಹೊರ ಹರಿವನ್ನು 50 ಸಾವಿರಕ್ಕೆ ಇಳಿಸಲಾಗಿತ್ತು. ಇದೀಗ ಒಳ ಹರಿವಿಗೆ ತಕ್ಕಂತೆ ಹೊರ ಹರಿವನ್ನು ತಗ್ಗಿಸಿದ್ದು ಮಂಗಳವಾರ 43,093 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.

    2012 ರಿಂದ 2017ರವರೆಗೆ ಬರ ಬಂದಿದ್ದರಿಂದ ಜಲಾಶಯ ಭರ್ತಿಯಾಗಿರಲಿಲ್ಲ. ಕಳೆದ ವರ್ಷ ಜುಲೈ 15 ರಂದು ಕೆಆರ್​ಎಸ್ ಭರ್ತಿಯಾಗಿತ್ತು. ಈ ಮೂಲಕ ದಶಕದ ಬಳಿಕ ಕೆಆರ್​ಎಸ್ ಅವಧಿಗೂ ಮುನ್ನವೇ ಭರ್ತಿಯಾಗಿತ್ತು. ಈ ಹಿಂದೆ 2007ರಲ್ಲಿ ಕೆಆರ್​ಎಸ್  ಜುಲೈ ತಿಂಗಳಿನಲ್ಲಿ ಭರ್ತಿಯಾಗಿತ್ತು.

  • ತುಂಗಭದ್ರಾ ಡ್ಯಾಂನ 33 ಕ್ರಸ್ಟ್ ಗೇಟ್ ಓಪನ್

    ತುಂಗಭದ್ರಾ ಡ್ಯಾಂನ 33 ಕ್ರಸ್ಟ್ ಗೇಟ್ ಓಪನ್

    – ಗಂಗಾವತಿ ಕಂಪ್ಲಿ ನಡುವಿನ ರಸ್ತೆ ಸಂಪರ್ಕ ಕಟ್

    ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವು ಹೆಚ್ಚಿದ ಪರಿಣಾಮ ಆಡಳಿತ ಮಂಡಳಿ ಜಲಾಶಯದ ಎಲ್ಲಾ ಗೇಟ್ ಗಳನ್ನು ಓಪನ್ ಮಾಡಿದೆ. ಈ ಮೂಲಕ 33 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗಿದೆ.

    ಜಲಾಶಯಕ್ಕೆ 2 ಲಕ್ಷ ಕ್ಯೂಸೆಕ್‍ಗೂ ಹೆಚ್ಚು ಒಳ ಹರಿವು ಇದೆ. ಹೀಗಾಗಿ ಜಲಾಶಯದಿಂದ 1 ಲಕ್ಷದ 31 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯಬಿಡಲಾಗಿದೆ. ಪರಿಣಾಮ ವಿರುಪಾಪುರ ಗಡ್ಡಿ ಸಂಪರ್ಕ ಕಡಿತಗೊಂಡಿದೆ. ಇದೀಗ ವಿದೇಶಿಗರ ಮೋಜಿನ ತಾಣ ವಿರುಪಾಪುರ ಗಡ್ಡಿಯ ಗ್ರಾಮಸ್ಥರಿಗೆ ಯಾವುದೇ ಸಂಪರ್ಕ ಸಿಗುತ್ತಿಲ್ಲ. ವಿದೇಶಿಗರು ಸೇರಿದಂತೆ ಸಾಕಷ್ಟು ಜನ ಗ್ರಾಮದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

    ಇತ್ತ ಜಲಾಶಯದಿಂದ ನದಿಗೆ ನೀರು ಹರಿಯಬಿಟ್ಟ ಹಿನ್ನೆಲೆಯಲ್ಲಿ ಗಂಗಾವತಿ ಕಂಪ್ಲಿ ರಸ್ತೆ ಕೂಡ ಕಡಿತಗೊಂಡಿದೆ. ನೀರು ಸೇತುವೆ ಮೇಲೆ ಹರಿಯುತ್ತಿದೆ. ಶನಿವಾರ ರಾತ್ರಿಯಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ಪ್ರಯಾಣಿಕರ ಪರದಾಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿತ್ತು.

    ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಕಾವಲುಗಾರರು ಸಿಲುಕಿಕೊಂಡಿದ್ದಾರೆ. ಉಡಚಪ್ಪ ಹಾಗೂ ರಾಘವೇಂದ್ರ ಸಿಲುಕಿಕೊಂಡವರಾಗಿದ್ದಾರೆ. ಇವರು ಇತ್ತೀಚೆಗೆ ವ್ಯಾಸರಾಜ ವೃಂದಾವನ ಧ್ವಂಸ ಮಾಡಿದಾಗಿನಿಂದ ನೇಮಕಗೊಂಡಿದ್ದರು. ಇವರಿಬ್ಬರು ಎಂದಿನಂತೆ ಶನಿವಾರ ರಾತ್ರಿ ನವವೃಂದಾವನ ಗಡ್ಡೆ ಕಾಯಲು ಹೋಗಿದ್ದರು. ಆದರೆ ಬೆಳಗಾಗುವುದರೊಳಗೆ ನದಿಗೆ ನೀರು ಬಂದಿದ್ದು, ನೀರಿನ ರಭಸದ ಹಿನ್ನೆಲೆಯಲ್ಲಿ ಮರಳಿ ಆನೆಗೊಂದಿಗೆ ಬರಲಾರದೆ ಪರದಾಡಿದ್ದಾರೆ. ನಂತರ ಅವರನ್ನು ಬೋಟ್ ಮೂಲಕ ಕಾವಲುಗಾರರನ್ನು ಕರೆತರುವ ಪ್ರಯತ್ನ ಮಾಡಲಾಯಿತು.

  • ಮೂವರು ಕಾರ್ಮಿಕರು ಬದುಕು ಕಿತ್ತುಕೊಂಡ ಅಕ್ರಮ ಗಣಿಗಾರಿಕೆ

    ಮೂವರು ಕಾರ್ಮಿಕರು ಬದುಕು ಕಿತ್ತುಕೊಂಡ ಅಕ್ರಮ ಗಣಿಗಾರಿಕೆ

    ಮಂಡ್ಯ: ಕೂಲಿ ಅರಸಿ ನೂರಾರು ಕಿಲೋಮೀಟರ್ ದೂರದಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸಿದ್ದ ಕಾರ್ಮಿಕರ ಬದುಕನ್ನು ಅಕ್ರಮ ಗಣಿಗಾರಿಕೆ ಕಿತ್ತುಕೊಂಡಿದೆ. ಅಕ್ರಮ ಕಲ್ಲುಗಣಿಕಾರಿಕೆ ಮಾಲೀಕರ ಕೈಗೆ ಸಿಕ್ಕ ಕಾರ್ಮಿಕರ ಬದುಕು ಈಗ ಅಕ್ಷರಶಃ ನರಕವಾಗಿದೆ. ಕಲ್ಲುಗಣಿಯಲ್ಲಿ ನಡೆದ ಅಕ್ರಮ ಸ್ಫೋಟಕ್ಕೆ ಕಣ್ಣು, ಕಿವಿಗಳನ್ನೇ ಕಳೆದುಕೊಂಡಿರುವ ಬಡ ಕೂಲಿ ಕಾರ್ಮಿಕರ ಕುಟುಂಬ ಬೀದಿಗೆ ಬಿದ್ದಿದೆ. ಇದೀಗ ಅನ್ಯಾಯಕ್ಕೊಳಗಾಗಿರುವ ಕುಟುಂಬ ನ್ಯಾಯಕ್ಕಾಗಿ ಕಣ್ಣೀರುಡುತ್ತಿದೆ.

    ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಡ್ಲಿ ತಾಂಡಾದ ನಿವಾಸಿಗಳು ಮೇಸ್ತ್ರಿ ಚಂದ್ರು ಪೋಮಪ್ಪ ಲಮಾಣಿ ಎಂಬಾತನ ಮಾತನ್ನು ನಂಬಿ ರಮೇಶ್, ರವಿ, ರಾಜು ಎಂಬ ಮೂವರು ಕೆಲಸ ಅರಸಿ ಮಂಡ್ಯ ಜಿಲ್ಲೆಗೆ ಆಗಮಿಸಿದ್ದರು. ಮೇಸ್ತ್ರಿ ಚಂದ್ರು ಪೋಮಪ್ಪ ಲಮಾಣಿ ಮೂವರಿಗೂ ಶ್ರೀರಂಗಪಟ್ಟಣ ತಾಲೂಕಿನ ಮುಂಡಗದೊರೆ ಗ್ರಾಮದ ಹೊರವಲಯದಲ್ಲಿರುವ ಎಂಸಿ.ಮರಿಯಪ್ಪ ಎಂಬವರ ಕಲ್ಲು ಕ್ವಾರಿಯಲ್ಲಿ ಕೆಲಸ ಕೊಡಿಸಿದ್ದನು. ದಿನಾಂಕ 24-05-2019 ರಂದು ಕಲ್ಲು ಗಣಿಗಾರಿಕೆಯಲ್ಲಿ ನಡೆದ ಅಕ್ರಮ ಸ್ಫೋಟಕ್ಕೆ ರಮೇಶ್ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ರವಿಗೆ ಎರಡು ಕಿವಿಗಳು ಕೇಳದಂತಾಗಿವೆ. ರಾಜು ಸೇರಿದಂತೆ ಮೂವರಿಗೂ ಗಂಭೀರ ಗಾಯವಾಗಿ ಈಗಷ್ಟೇ ಸ್ವಲ್ಪ ಚೇತರಿಕೆ ಕಾಣುತ್ತಿದ್ದು ಇವರನ್ನೇ ನಂಬಿದ್ದ ಮೂವರ ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ. ಸಹಾಯ ಮಾಡಬೇಕಾದ ಗಣಿಮಾಲೀಕ ಬಿಡಿಗಾಸು ನೀಡದೇ ಬೀದಿಗೆ ತಳ್ಳಿದ್ದಾನೆ.

    ಶ್ರೀರಂಗಪಟ್ಟಣ ಸುತ್ತಮುತ್ತ ನಡೆಯುವ ಗಣಿಗಾರಿಕೆಗಳಿಂದ ಕೆಆರ್‍ಎಸ್ ಅಣೆಕಟ್ಟೆಗೆ ತೊಂದರೆಯಾಗುತ್ತೆ ಎಂಬ ಕಾರಣಕ್ಕೆ ಯಾವುದೇ ಸ್ಫೋಟಕಗಳನ್ನು ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡುವ ಗಣಿ ಮಾಲೀಕರು ಬೋರ್‍ವೆಲ್ ಕುಳಿಗಳನ್ನು ತೋಡಿ, ಅಕ್ರಮವಾಗಿ ಬೃಹತ್ ಪ್ರಮಾಣದ ಸ್ಪೋಟಕ ತುಂಬಿ ಬ್ಲಾಸ್ಟ್ ಮಾಡುತ್ತ ನಿರಂತರವಾಗಿ ಗಣಿಗಾರಿಕೆ ನಡೆಸುತ್ತಲೇ ಬಂದಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಈ ರೀತಿಯ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ತಮಗೆ ಬರುವ ಮಾಮೂಲಿ ಪಡೆದು ಕರ್ತವ್ಯ ಮರೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಇಂದು ಅಕ್ರಮ ಸ್ಫೋಟಕ್ಕೆ ಮೂವರು ಕೂಲಿ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬದವರು ಪ್ರತಿ ದಿನದ ಖರ್ಚಿಗೂ ಹಣವಿಲ್ಲದೇ ಸಂಕಟ ಪಡುತ್ತಿದ್ದಾರೆ. ಪ್ರಭಾವಿಯಾದ ಗಣಿ ಮಾಲೀಕ ಎಂಸಿ.ಮರಿಯಪ್ಪ ಕಾರ್ಮಿಕರ ಯೋಗಕ್ಷೇಮ ನೋಡದೇ, ಧನ ಸಹಾಯವನ್ನೂ ಮಾಡದೇ ತನ್ನ ಪಾಡಿಗೆ ತಾನು ಆರಾಮವಾಗಿದ್ದಾನೆ ಎಂದು ಕಾರ್ಮಿಕರು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

    ಕೆಆರ್‍ಎಸ್ ಅಣೆಕಟ್ಟು ಸುತ್ತಮುತ್ತ ನಡೆಯುವ ಕಲ್ಲು ಗಣಿಗಾರಿಕೆಯ ಅಕ್ರಮ ಸ್ಫೋಟದಿಂದ ಅಣೆಕಟ್ಟೆಗೆ ತೊಂದರೆ ಆಗುವ ಸಾಧ್ಯತೆಗಳಿವೆ. ಅಧಿಕಾರಿಗಳು ಆ ರೀತಿಯ ಯಾವುದೇ ಸ್ಫೋಟ ನಡೆಯುತ್ತಲೇ ಇಲ್ಲ ಎಂಬ ಮಾತುಗಳನ್ನಾಡುತ್ತಿದ್ದರು. ಇದೀಗ ಅದೇ ಅಕ್ರಮ ಸ್ಫೋಟಕ್ಕೆ ಮೂರು ಜನ ಬಡ ಕೂಲಿಕಾರ್ಮಿಕರ ಬದುಕೇ ನಾಶವಾಗಿದೆ. ಇನ್ನಾದ್ರು ಸರ್ಕಾರ ಇತ್ತ ಗಮನಹರಿಸಿ ಭ್ರಷ್ಟ ಅಧಿಕಾರಿಗಲು, ಗಣಿಮಾಲೀಕರಿಗೆ ಶಿಕ್ಷೆ ನೀಡಿ, ಅನ್ಯಾಯಕ್ಕೊಳಗಾಗರುವ ಬಡ ಕೂಲಿ ಕಾರ್ಮಿಕರ ಹಿತ ಕಾಯಬೇಕಾಗಿದೆ.

    ಕೆಲವು ದಿನಗಳ ಹಿಂದೆ ಸಂಸದೆ ಸುಮಲತಾ ಅಂಬರೀಶ್, ಅಕ್ರಮ ಗಣಿಗಾರಿಕೆ ಕಡಿವಾಣ ಹಾಕಬೇಕಿದೆ. ಕೆಆರ್ ಎಸ್ ಆಣೆಕಟ್ಟಿನ ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಸ್ಫೋಟದಿಂದ ಆಣೆಕಟ್ಟಿಗೆ ಹಾನಿಯುಂಟಾಗುತ್ತಿದೆ ಎಂದು ಲೋಕಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.

  • ಮಹಾಮಳೆ ಅಬ್ಬರಕ್ಕೆ ಉತ್ತರ ತತ್ತರ – 3 ಜಿಲ್ಲೆಗಳಲ್ಲಿ ಪ್ರವಾಹದ ಭೀತಿ

    ಮಹಾಮಳೆ ಅಬ್ಬರಕ್ಕೆ ಉತ್ತರ ತತ್ತರ – 3 ಜಿಲ್ಲೆಗಳಲ್ಲಿ ಪ್ರವಾಹದ ಭೀತಿ

    ಬೆಂಗಳೂರು: ಮಹಾರಾಷ್ಟ್ರದಲ್ಲಿ ಆಗುತ್ತಿರುವ ಮಹಾಮಳೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಸಿದೆ. ನದಿ ಪಾತ್ರದ ಗ್ರಾಮಗಳು ಮುಳುಗಡೆಯಾಗಿವೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ ಮುಂದುವರಿದಿದ್ದು ಅದರ ಎಫೆಕ್ಟ್ ಉತ್ತರ ಕರ್ನಾಟಕದ ಮೇಲೆ ಬಡಿದಿದೆ. ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿದೆ. ನದಿ ಪಾತ್ರದ ಗ್ರಾಮಗಳು, ಜಮೀನುಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಬೆಳಗಾವಿಯ ಪೀರನವಾಡಿ, ಲಕ್ಷ್ಮಿಗಲ್ಲಿ, ಉದ್ಯಮ್ ಬಾಗ್‍ನ ಸುಮಾರು 50 ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡಿದರು. ಬಳ್ಳಾರಿ ನಾಲೆಯಿಂದ ನೀರು ಉಕ್ಕಿ ಬಂದಿದ್ದರಿಂದ ಓಂನಗರ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ಖಾನಾಪುರದ ಭಂಕಿ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಪ್ರಾಣದ ಹಂಗು ತೊರೆದು ಸೇತುವೆ ಮೇಲೆಯೇ ಜನ ಸಂಚರಿಸುತ್ತಿದ್ದಾರೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆಗಳು ಕುಸಿತವಾಗಿವೆ. ಕೃಷ್ಣಾ ನದಿಯ ಅಬ್ಬರಕ್ಕೆ ರಾಯಬಾಗ ತಾಲೂಕಿನ 8 ಸೇತುವೆಗಳು ಮುಳುಗಡೆಯಾಗಿವೆ.

    ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಯ್ನಾ ಡ್ಯಾಂ ಬಳಿ ಲಘು ಭೂಕಂಪನ ಸಂಭವಿಸಿದ್ದು ಡ್ಯಾಂಗೆ ಧಕ್ಕೆಯಾದರೆ ಕರ್ನಾಟಕಕ್ಕೆ ಅಪಾಯವಾಗುತ್ತದೆ. ಏಕಾಏಕಿ ಹೆಚ್ಚುವರಿ ನೀರು ಹರಿದರೆ ರಾಜ್ಯದಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ. ಭೂಕಂಪವಾಗಿರುವುದರಿಂದ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಚಿಕ್ಕೋಡಿ ತಾಲೂಕಿನ ನದಿಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆ ಘೋಷಿಸಲಾಗಿದೆ.

    ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ದೇಗುಲದ ಸುತ್ತಲೂ ನೀರು ಆವರಿಸಿದ್ದು ದೇಗುಲಕ್ಕೆ ತೆರಳಲು ಭಕ್ತರು ಹರಸಾಹಸ ಪಟ್ಟರು. ಆಲಮಟ್ಟಿ ಡ್ಯಾಂ ಭರ್ತಿಯಾಗಿದ್ದು, ನಾರಾಯಣಪುರ ಡ್ಯಾಂಗೆ ನೀರು ಬಿಟ್ಟ ಪರಿಣಾಮ ವಿಜಯಪುರ ಜಿಲ್ಲೆಯ ಯಲಗೂರು, ಮುದೂರ, ಕಾಳಗಿ ಸೇರಿ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ತೊಗರಿ, ಸಜ್ಜೆ, ಕಬ್ಬು ಬೆಳೆ ನಾಶವಾಗಿದೆ.

    ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದರಿಂದ ರಾಯಚೂರಿನ ಹೂವಿನಹೆಡಗಿ ಸೇತುವೆ ಸಂಚಾರ ಬಂದ್ ಆಗಿದೆ. ನಗರಗುಂಡಾ, ನಿಲುವಂಜಿ ಸೇರಿ ವಿವಿಧ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಹಾನಿಯಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಎರಡ್ಮೂರು ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು ಉತ್ತರ ಕರ್ನಾಟಕದಲ್ಲಿ ಭಾರೀ ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ.

  • ಮಡಿಕೇರಿಯಲ್ಲಿ ಉತ್ತಮ ಮಳೆಗಾಗಿ ಭಗಂಡೇಶ್ವರನ ಮೊರೆ

    ಮಡಿಕೇರಿಯಲ್ಲಿ ಉತ್ತಮ ಮಳೆಗಾಗಿ ಭಗಂಡೇಶ್ವರನ ಮೊರೆ

    ಮಡಿಕೇರಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಎದುರಾಗಿದ್ರೆ, ಇತ್ತ ಕಳೆದ ಬಾರಿ ಪ್ರವಾಹ ಸೃಷ್ಟಿಯಾಗಿದ್ದ ಮಡಿಕೇರಿಯಲ್ಲಿ ಮಳೆ ಇಲ್ಲದೆ ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯಲ್ಲಿ ಮಳೆಗಾಗಿ ಪೊಲಿಂಕಾನ ಉತ್ಸವ ನಡೆಯಿತು. ಉತ್ತಮ ಮಳೆಯಾಗಲಿ, ಆದರೆ ಕಳೆದ ಬಾರಿಯಂತೆ ಪ್ರಕೃತಿ ವಿಕೋಪ ಸಂಭವಿಸದೆ ಇರಲಿ ಎಂದು ಪ್ರಾರ್ಥಿಸಲಾಯಿತು.

    ಪ್ರತಿ ವರ್ಷ ಮಳೆ ಸುರಿದು ತ್ರಿವೇಣಿ ಸಂಗಮ ಭರ್ತಿಯಾದ ನಂತರದ ಕರ್ಕಟಕ ಅಮವಾಸ್ಯೆಯಂದು ಪೊಲಿಂಕಾನ ಅಥವಾ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯುತ್ತೆ. ಆದರೆ ಈ ಬಾರಿ ಕೊಡಗಿನಲ್ಲಿ ಉತ್ತಮ ಮಳೆಯಾಗಿಲ್ಲ. ಇಷ್ಟೋತ್ತಿಗೆ ಮಳೆಯಾಗಿ ತ್ರಿವೇಣಿ ಸಂಗಮ ಭರ್ತಿಯಾಗುತ್ತಿತ್ತು. ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಈ ಭಾಗದ ರೈತರು ಕಂಗಾಲಾಗಿದ್ದಾರೆ.

    ವಾಡಿಕೆ ಮಳೆ ಬಂದು ಕಾವೇರಿ ಜಲಾಶಯ ಭಾಗದ ರೈತರ ಬದುಕು ಹಸನಾಗಬೇಕು. ಜೀವನಾಡಿ ಕಾವೇರಿ ಭರ್ತಿಯಾಗಬೇಕು ಎನ್ನುವ ಉದ್ದೇಶದಿಂದ ಕೊಡಗಿನ ಪ್ರಸಿದ್ಧ ಪುಣ್ಯಕ್ಷೇತ್ರ ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯಲ್ಲಿ ಯಶಸ್ವಿಯಾಗಿ ಪೊಲಿಂಕಾನ ಉತ್ಸವನ್ನು ಅದ್ಧೂರಿಯಾಗಿ ನಡೆಸಿ, ಉತ್ತಮ ಮಳೆಯಾಗಿ ಕಳೆದ ಬಾರಿಯಂತೆ ಪ್ರಕೃತಿ ವಿಕೋಪ ಸಂಭವಿಸದೆ ಇರಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ.

    ಭಗಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಪೂಜೆ ನಂತರ ಬಾಳೆಕಂಬದಿಂದ ವಿಶೇಷವಾಗಿ ಸಿದ್ಧಗೊಳಿಸಿದ ಉತ್ಸವ ಮಂಟಪದಲ್ಲಿ ಮುತ್ತೈದೆಯರಿಗೆ ನೀಡುವ ಬಳೆ, ಬಿಚ್ಚೋಲೆ, ಅರಿಶಿಣ ಕುಂಕುಮ, ಸೀರೆ, ಕರಿಮಣಿ ಮುಂತಾದವನ್ನು ಇಟ್ಟು ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ ಅರ್ಪಣೆ ಮಾಡಲಾಯಿತು. ಅಲ್ಲದೆ ಇದೇ ಮಂಟಪಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನೂ ತೊಟ್ಟಿಲಲ್ಲಿ ಹಾಕಿ ನೀರಿನಲ್ಲಿ ಬಿಡಲಾಗುತ್ತದೆ.

    ಉತ್ತಮ ಮಳೆ ಸುರಿಸಿ ಕೃಷಿ ಚಟುವಟಿಕೆ ಸುಭೀಕ್ಷೆಯಾಗಿ ನಡೆಯಲು ಅನುವು ಮಾಡಿಕೊಡಲು ಕಾವೇರಿಗೆ ವಂದಿಸೋದು, ಜೊತೆಗೆ ಮುಂದೆ ಪ್ರವಾಹ ಬಾರದಂತೆ ಬೇಡಿಕೊಳ್ಳುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ.

    ನೂರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವದಲ್ಲಿ ಭಾಗಿಯಾಗಿದರು. ಹಿಂದಿನಿಂದಲೂ ಕೂಡ ಮಳೆ ಹೆಚ್ಚಾದಾಗ ಕಾವೇರಿಯ ಮಡಿಲು ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಪೊಲಿಂಕಾನ ಉತ್ಸವ ಮಹತ್ವವನ್ನು ಕೂಡ ಪಡೆದುಕೊಂಡಿದೆ.

  • ಕೇರಳ, ಕೊಡಗು ಭಾಗದಲ್ಲಿ ಮಳೆ- ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಜೀವಕಳೆ

    ಕೇರಳ, ಕೊಡಗು ಭಾಗದಲ್ಲಿ ಮಳೆ- ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಜೀವಕಳೆ

    ಕೊಡಗು/ಬೆಂಗಳೂರು: ಕೇರಳ, ಕೊಡಗಿನ ಭಾಗದಲ್ಲಿ ಭಾರೀ ಮಳೆಯಾಗ್ತಿರೋ ಕಾರಣ ಕಾವೇರಿ ಕೊಳ್ಳದ ಡ್ಯಾಮ್‍ಗಳಲ್ಲಿ ಜೀವಕಳೆ ತುಂಬಿದ್ದು, ಪಾತಾಳ ಸೇರಿದ್ದ ನೀರಿನ ಮಟ್ಟ ನಿಧಾನವಾಗಿ ಮೇಲೇರುತ್ತಿದೆ.

    ಕೆಆರ್‍ಎಸ್‍ನಲ್ಲಿ ನೀರಿನ ಮಟ್ಟ 90 ಅಡಿ ದಾಟಿದ್ದು, ಈ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ನೀರು ಹರಿಸಲಾಗಿದೆ. ಅಣೆಕಟ್ಟೆಯಿಂದ 7 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದ್ದು, 5 ಸಾವಿರ ಕ್ಯೂಸೆಕ್ ಮೆಟ್ಟೂರು ಡ್ಯಾಮ್‍ಗೂ, 2 ಸಾವಿರ ಕ್ಯೂಸೆಕ್ ನೀರು ರೈತರ ನಾಲೆಗಳಿಗೂ ಹರಿಸಲಾಗುತ್ತಿದೆ.

    ಒಂದೆಡೆ ಹರಿವು ಹೆಚ್ಚಾಗಿದೆ ಎಂದು ರೈತರು ಸಂತಸ ಪಡುತ್ತಿದ್ದರೆ, ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆಯಂತೆ ತಮಿಳುನಾಡಿಗೆ ನೀರು ಬಿಡಲಾಗಿದೆ. ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಇಂಡುವಾಳು ಗ್ರಾಮಸ್ಥರು ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ರೆಸಾರ್ಟ್‍ನಲ್ಲಿರುವ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಕಾವೇರಿ ನೀರಿನಲ್ಲಿ ವ್ಯತ್ಯಯ:
    ಕಾವೇರಿಕೊಳ್ಳಕ್ಕೆ ಹೆಚ್ಚು ನೀರು ಹರಿಯುತ್ತಿದ್ದರೂ ಸಹ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ 2 ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

  • ಕೊನೆಗೂ ಮಂಡ್ಯ ರೈತರ ಬೆಳೆಗಳಿಗೆ ನೀರು ಬಿಡಲು ತೀರ್ಮಾನ

    ಕೊನೆಗೂ ಮಂಡ್ಯ ರೈತರ ಬೆಳೆಗಳಿಗೆ ನೀರು ಬಿಡಲು ತೀರ್ಮಾನ

    ಮಂಡ್ಯ: ಕೆಆರ್‍ಎಸ್ ಅಣೆಕಟ್ಟೆ ಮೂಲಕ ರೈತರ ಬೆಳೆಗಳಿಗೆ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ಈ ಮೂಲಕ ನೀರು ಹರಿಸುವಂತೆ ನಿರಂತರವಾಗಿ ಪ್ರತಿಭಟನೆ ನಡೆಸಿದ್ದ ರೈತರಿಗೆ ಜಯಸಿಕ್ಕಿದೆ.

    ಇಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಈ ಸಭೆಯಲ್ಲಿ ಸಚಿವರಾದ ಡಿಸಿ. ತಮ್ಮಣ್ಣ, ಸಾರಾ ಮಹೇಶ್ ಸೇರಿದಂತೆ ಮಂಡ್ಯ ಜಿಲ್ಲೆಯ ಶಾಸಕರು, ಟಿ.ನರಸೀಪುರ ಮತ್ತು ಪಿರಿಯಾಪಟ್ಟಣ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

    ದೆಹಲಿಯ ಕಮಿಟಿ ಸದಸ್ಯರೂ ಭಾಗಿಯಾಗಿದ್ದ ಈ ಸಭೆಯಲ್ಲಿ, ಬೆಳೆದು ನಿಂತಿರುವ ಬೆಳೆಗಳಿಗೆ ನೀರು ನೀಡುವ ಉದ್ದೇಶದಿಂದ ಹಾಗೂ ಕುಡಿಯುವ ನೀರಿಗೆ ಅನುಕೂಲ ಒದಗಿಸುವ ಸಲುವಾಗಿ ನೀರು ಬಿಡಲು ನಿರ್ಧಾರ ಮಾಡಲಾಗಿದೆ. ನಾಳೆ ಮಧ್ಯರಾತ್ರಿಯಿಂದ ನಾಲೆಗಳ ಮೂಲಕ ನೀರು ಹರಿಸಲು ತೀರ್ಮಾನ ಮಾಡಿದ್ದೇವೆ ಎಂದು ಸಚಿವ ಪುಟ್ಟರಾಜು ಮಾಹಿತಿ ನೀಡಿದರು.

  • ಕಾರವಾರದಲ್ಲಿ ಮುಂದುವರಿದ ಮಳೆ- ಜನಜೀವನ ಅಸ್ತವ್ಯಸ್ತ

    ಕಾರವಾರದಲ್ಲಿ ಮುಂದುವರಿದ ಮಳೆ- ಜನಜೀವನ ಅಸ್ತವ್ಯಸ್ತ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಇಂದು ಕೂಡ ಮುಂದುವರಿದಿದೆ. ಜಿಲ್ಲೆಯಾದ್ಯಂತ 42.7 ಮಿ.ಮೀ ಮಳೆಯಾಗಿದ್ದು ಕರಾವಳಿ ಭಾಗದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

    ಅಂಕೋಲ ಭಾಗದಲ್ಲಿ ಗಂಗಾವಳಿ ನದಿ ನೀರು ತುಂಬಿ ತಗ್ಗು ಪ್ರದೇಶದ ಬಿಳಿಹೊಂಯ್ಗಿ ಸೇರಿದಂತೆ ಹಲವು ನದಿ ತಟದ ಗ್ರಾಮಗಳಲ್ಲಿ ನೀರು ತುಂಬಿದ್ದು ಮನೆಗಳಿಗೆ ಸಹ ಹಾನಿಯಾಗಿದೆ. ಜಿಲ್ಲೆಯ ಯಲ್ಲಾಪುರ ಜೋಯಿಡಾ ಭಾಗದಲ್ಲಿ ಗುಡ್ಡ ಕುಸಿತ ಮುಂದುವರಿದಿದ್ದು ಮಳೆಯಿಂದಾಗಿ ಭಡ್ತಿ ನದಿ ಸೇತುವೆ ಸಂಪೂರ್ಣ ಮುಳುಗಿ ಹೋಗಿದೆ.

    ಕಾಳಿ ನದಿ ಜಲಾಶಯದಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯ ತುಂಬಿದ್ದು, ಕೊಡಸಳ್ಳಿ ಡ್ಯಾಮ್ ನಿಂದ ಕದ್ರಾ ಜಲಾಶಯಕ್ಕೆ 2.1 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಇನ್ನೆರೆಡು ದಿನ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಆಗುವ ಸಾಧ್ಯತೆಯಿದ್ದು, ನದಿ ಹಾಗೂ ಸಮುದ್ರದ ಬದಿಯಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದ್ದು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಿದೆ.