Tag: dalit

  • ದಲಿತರ ಓಣಿಯ ಬಾವಿಗೆ ಕ್ರಿಮಿನಾಶಕ ಸಿಂಪಡಿಸಿದ ಕಿಡಿಗೇಡಿಗಳು

    ದಲಿತರ ಓಣಿಯ ಬಾವಿಗೆ ಕ್ರಿಮಿನಾಶಕ ಸಿಂಪಡಿಸಿದ ಕಿಡಿಗೇಡಿಗಳು

     

    ಕಲಬುರಗಿ: ದಲಿತರ ಓಣಿಯಲ್ಲಿರುವ ಬಾವಿಗೆ ಕಿಡಿಗೇಡಿಗಳು ಕ್ರಿಮಿನಾಶಕ ಔಷಧಿಯನ್ನು ಸಿಂಪಡಿಸಿದ ಘಟನೆ ಕಲಬುರಗಿ ಜಿಲ್ಲೆಯ ಚೆನ್ನೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಬಾವಿಗೆ ನೀರು ತರಲು ಹೋದ ವೇಳೆ ಬಾವಿಗೆ ಕ್ರಿಮಿನಾಶಕ ಸೇರಿಸಿರುವುದು ತಿಳಿದು ಬಂದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಡಿವೈಎಸ್ಪಿ ಎಸ್.ಎಸ್.ಹುನ್ನೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಳೆದ ನಾಲ್ಕು ದಿನಗಳ ಹಿಂದ ನಡೆದ ಘಟನೆಯ ಮಂಗಳವಾರ ಬೆಳಕಿಗೆ ಬಂದಿದೆ. ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೋದಿ, ಶಾ, ಬಿಎಸ್‍ವೈ ಕಟ್ಟಿಹಾಕಲು ಸಿಎಂ  ಕಟ್ಟುತ್ತಿದ್ದಾರೆ LDMK ಸೇನೆ!

    ಮೋದಿ, ಶಾ, ಬಿಎಸ್‍ವೈ ಕಟ್ಟಿಹಾಕಲು ಸಿಎಂ ಕಟ್ಟುತ್ತಿದ್ದಾರೆ LDMK ಸೇನೆ!

    ಬೆಂಗಳೂರು: ತಮಿಳುನಾಡಿನ ರಾಜಕೀಯದಲ್ಲಿ ನೀವೆಲ್ಲಾ ಎಐಡಿಎಂಕೆ, ಡಿಎಂಕೆ, ಪಿಎಂಕೆ ಹೆಸರುಗಳನ್ನ ಕೇಳಿರಬಹುದು. ಆದ್ರೆ ನಮ್ಮ ರಾಜ್ಯದಲ್ಲಿ ಆ ಹೆಸರುಗಳು ಅಷ್ಟೊಂದು ಸದ್ದು ಮಾಡಿಲ್ಲ. ಇನ್ನು ಎಲ್‍ಡಿಎಂಕೆ 2 ಹೆಸರನ್ನು ಕೇಳಿಯೇ ಇಲ್ಲ. ಆದರೆ ಈಗ ಇದೇ ಎಲ್‍ಡಿಎಂಕೆ ಸದ್ದು ಮಾಡಲು ಸಜ್ಜಾಗುತ್ತಿದೆ.

    2018ರ ಎಲೆಕ್ಷನ್‍ನಲ್ಲಿ ಇದೇ ಎಲ್‍ಡಿಎಂಕೆ ಕಾಂಬಿನೇಶನ್ ಹೆಚ್ಚು ಮಾಡಲಿದೆ. ಎಲ್ ಅಂದ್ರೆ ಲಿಂಗಾಯಿತ, ಡಿ ಅಂದ್ರೆ ದಲಿತ, ಎಂ ಅಂದ್ರೆ ಮುಸ್ಲಿಂ, ಕೆ ಸ್ಕ್ವಯರ್ ಅಂದ್ರೆ ಕುರುಬ ಪ್ಲಸ್ ಕನ್ನಡಿಗ. ಅಂದಹಾಗೆ ಈ ಕಾಂಬಿನೇಶನ್‍ನ ಕ್ಯಾಪ್ಟನ್ ಸಿಎಂ ಸಿದ್ದರಾಮಯ್ಯ. 2018ರ ಎಲೆಕ್ಷನ್‍ಗೆ ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಬಿಎಸ್‍ವೈ ಕಟ್ಟಿಹಾಕಲು ಎಲ್‍ಡಿಎಂಕೆ ಸ್ಕ್ವಯರ್ ಕಾಂಬಿನೇಶನ್ ಕಾರ್ಡ್ ಪ್ಲೇಗೆ ಮುಂದಾಗಿದ್ದಾರೆ. ಲಿಂಗಾಯಿತ, ದಲಿತ, ಮುಸ್ಲಿಂ, ಕುರುಬ ಸಮುದಾಯಗಳನ್ನು ಒಂದೆಡೆ ಸೇರಿಸಲು ತಂತ್ರ ರೂಪಿಸಿದ್ದಾರೆ.

    ಸಮುದಾಯಗಳ ಸಮಾವೇಶ ನಡೆಸ್ತಾರೆ ಸಿದ್ದು:
    ಅಂದಹಾಗೆ 2018ರ ಚುನಾವಣೆಗೆ ಸಿದ್ದರಾಮಯ್ಯ ಮುಂದಿನ ತಿಂಗಳಿನಿಂದಲೇ ಅಖಾಡಕ್ಕೆ ಇಳಿಯಲಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯಿತರನ್ನು ಸೆಳೆಯಲು ಸಿದ್ಧತೆ ನಡೆಸಿದ್ದು, ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟೆ, ಗುಲ್ಬರ್ಗಾಗಳಲ್ಲಿ ಲಿಂಗಾಯಿತರ ಬೃಹತ್ ಸಮಾವೇಶ ನಡೆಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

    ಸಚಿವರಾದ ಎಂ.ಬಿ.ಪಾಟೀಲ್, ವಿನಯ್‍ಕುಲಕರ್ಣಿ, ಉತ್ತರ ಕರ್ನಾಟಕದ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಅವರಿಗೆ ಉಸ್ತುವಾರಿ ವಹಿಸಲಾಗಿದೆ ಎಂದು ಹೇಳಲಾಗುತ್ತದೆ. ಮೂವರು ನಾಯಕರನ್ನು ಮುಂದಿಟ್ಟುಕೊಂಡು ಬಿಎಸ್‍ವೈ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸ್ತಿದ್ದು, ಕೂಡಲಸಂಗಮದಲ್ಲಿ 150 ಕೋಟಿ ವೆಚ್ಚದಲ್ಲಿ ಅಕ್ಷರಧಾಮ ಮಾದರಿಯಲ್ಲಿ ಬಸವಣ್ಣನ ಅನುಭವ ಮಂಟಪ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದು, ನವೆಂಬರ್‍ನಲ್ಲಿ ಅಡಿಗಲ್ಲು ಹಾಕುವ ಸಾಧ್ಯತೆ ಇದೆ. ಇಲ್ಲಿಯೇ ವೀರಶೈವ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮಾಸ್ಟರ್ ಫ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

    ಈ ನಡುವೆ ದಲಿತರನ್ನ ಒಗ್ಗೂಡಿಸಲು ಸಿದ್ದರಾಮಯ್ಯ ಫ್ಲ್ಯಾನ್ ಮಾಡಿದ್ದು, ದಲಿತರನ್ನ ಕಾಂಗ್ರೆಸ್‍ನತ್ತ ಸೆಳೆಯಲು ಹಲವು ಕಾಯಕ್ರಮಗಳು ರೂಪಿಸ್ತಿದ್ದಾರೆ. ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಹೆಸರಿನಲ್ಲಿ ಹಲವು ಕಾರ್ಯಕ್ರಮ ನಡೆಸುತ್ತಿದ್ದು ಮುಂದೆ ದಲಿತ, ಮುಸ್ಲಿಂ ಸಮಾವೇಶಗಳನ್ನು ನಡೆಸುತ್ತಾರೆ ಎನ್ನಲಾಗಿದೆ.

    ಈ ಎಲ್ಲದರ ಜೊತೆ ಆಗಸ್ಟ್ ನಿಂದ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮ ಆರಂಭಿಸುತ್ತಿದ್ದು, ಸಮುದಾಯಗಳ ಓಲೈಕೆಯೇ ಕಾರ್ಯಕ್ರಮದ ಪ್ರಮುಖ ಭಾಗ ಅಂತಾ ಹೇಳಲಾಗುತ್ತಿದೆ.. ಒಟ್ಟಿನಲ್ಲಿ ಸಿದ್ದರಾಮಯ್ಯ ಸದ್ದಿಲ್ಲದೆ ಸಮರಾಭ್ಯಾಸ ಆರಂಭಿಸಿದ್ದು, ಎಲ್‍ಡಿಎಂಕೆ ಕಾಂಬಿನೇಶನ್ ಎಷ್ಟರಮಟ್ಟಿಗೆ ಯಶಸ್ವಿ ಆಗುತ್ತೆ.? ಸಿಎಂಗೆ ತಿರುಗೇಟು ಕೊಡಲು ಶಾ, ಮೋದಿ, ಬಿಎಸ್‍ವೈ ಮೈಂಡ್‍ಗೇಮ್ ಏನು ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

     

  • ಈ ಗ್ರಾಮದಲ್ಲಿ ದಲಿತರನ್ನು ಮಾತನಾಡಿಸಿದ್ರೆ 500 ರೂ. ದಂಡ, ದಿನಸಿ ಸಾಮಗ್ರಿ ಕೊಟ್ರೆ 1000 ರೂ. ಫೈನ್

    ಈ ಗ್ರಾಮದಲ್ಲಿ ದಲಿತರನ್ನು ಮಾತನಾಡಿಸಿದ್ರೆ 500 ರೂ. ದಂಡ, ದಿನಸಿ ಸಾಮಗ್ರಿ ಕೊಟ್ರೆ 1000 ರೂ. ಫೈನ್

    ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿಯ ದೇವರಕೊಂಡ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದಲಿತರನ್ನು ಮಾತನಾಡಿಸಿದ್ರೆ 500 ರೂಪಾಯಿ ದಂಡ. ದಲಿತರಿಗೆ ದಿನಸಿ ಸಾಮಾನು ನೀಡಿದ್ರೆ 1 ಸಾವಿರ ದಂಡ. ಬೈಕ್‍ನಲ್ಲಿ ಡ್ರಾಪ್ ಕೊಟ್ರೆ 1500 ರೂಪಾಯಿ ದಂಡ, 21 ನೇ ಶತಮಾನದಲ್ಲೂ ಈ ರೀತಿಯ ವ್ಯವಸ್ಥೆ ಇನ್ನೂ ಉಳಿದುಕೊಂಡಿದೆ.

    ಹತ್ತು ದಿನಗಳ ಹಿಂದೆ ದಲಿತರ ಹಸುವಿನ ಕರು ಮೇಲ್ಜಾತಿಯವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಬೆಳೆಯನ್ನ ತಿಂದಿದೆ. ಇದೇ ವಿಷಯಕ್ಕೆ ದಲಿತರು ಮತ್ತು ಮೇಲ್ಜಾತಿಯವರ ಮಧ್ಯೆ ಜಗಳವಾಗಿದೆ. ಹೀಗಾಗಿ ಗ್ರಾಮದ ಹಿರಿಯರೆಲ್ಲ ಸೇರಿ ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆ.

    ಗ್ರಾಮದಲ್ಲಿ ದಲಿತರ ಮಕ್ಕಳಿಗೆ ಒಂದು ಲೋಟ ನೀರನ್ನೂ ಕೊಡ್ತಿಲ್ಲ. ದಿನಸಿ ಅಂಗಡಿಯಲ್ಲಿ ಒಂದು ಬೆಂಕಿಪೊಟ್ಟಣವನ್ನು ನೀಡ್ತಿಲ್ಲ. ಅಲ್ಲದೆ ದಲಿತರಿಗೆ ಯಾರೂ ಕೂಲಿ ಕೆಲಸ ಸಹ ನೀಡ್ತಿಲ್ಲ. ಹೀಗಾಗಿ ತುತ್ತು ಅನ್ನಕ್ಕೂ ಇಲ್ಲಿನ ದಲಿತರು ಪರದಾಡುವ ಸ್ಥಿತಿ ಎದುರಾಗಿದ್ದು, ಸಾಮೂಹಿಕವಾಗಿ ಅಡುಗೆ ತಯಾರಿಸಿ ಊಟ ಮಾಡ್ತಿದ್ದಾರೆ.

  • ವಿಡಿಯೋ: ಮುಸ್ಲಿಂ ಯುವತಿಯೊಂದಿಗೆ ಮಗ ಪರಾರಿ- ತಂದೆ, ತಮ್ಮನನ್ನು ಮರಕ್ಕೆ ಕಟ್ಟಿ ಥಳಿತ

    ವಿಡಿಯೋ: ಮುಸ್ಲಿಂ ಯುವತಿಯೊಂದಿಗೆ ಮಗ ಪರಾರಿ- ತಂದೆ, ತಮ್ಮನನ್ನು ಮರಕ್ಕೆ ಕಟ್ಟಿ ಥಳಿತ

    ವಿಜಯಪುರ: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತೆ, ಮಗ ಮಾಡಿದ ತಪ್ಪಿಗೆ ತಂದೆ ಮತ್ತು ತಮ್ಮನಿಗೆ ಮರಕ್ಕೆ ಕಟ್ಟಿ ಹೊಡೆದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಜಿಲ್ಲೆಯ ಸಿಂಧಗಿ ತಾಲೂಕಿನ ಹಾಳಗುಂಡಕನಾಳ ಗ್ರಾಮದ ದಲಿತ ಯುವಕ ನಿಂಗಪ್ಪ ಹರಿಜನ ಎಂಬಾತ ಅಲ್ಪಸಂಖ್ಯಾತ ಯುವತಿ ಮಾಶಾಬಿ ಎಂಬಾಕೆಯೊಂದಿಗೆ ಪರಾರಿಯಾಗಿದ್ದಾನೆ. ಆದ್ರೆ ಇದಕ್ಕೆ ನಿಂಗಪ್ಪ ತಂದೆಯೇ ಕಾರಣ ಅಂತಾ ಯುವತಿ ಮಾಶಾಬಿ ತಂದೆ ಮಾಬುಸಾಬ, ಅಣ್ಣ ಅಲ್ಲಾಭಕ್ಷ್ ಸೇರಿದಂತೆ ಏಳು ಜನರು ನಿಂಗಪ್ಪನ ತಂದೆ ಮರೇಪ್ಪ ಹರಿಜನ ಅವರನ್ನ ಗ್ರಾಮದ ಆಲದ ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ತಂದೆಯನ್ನು ಬಿಡಿಸಿಕೊಳ್ಳಲು ಬಂದ ಮರೇಪ್ಪ ಅವರ ಎರಡನೇ ಮಗ ರಮೇಶನನ್ನೂ ಕೂಡ ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ

    ಈ ಅಮಾನವೀಯ ಘಟನೆ ಊರಿನ ನಡು ಬೀದಿಯಲ್ಲೇ ನಡೆಯುತ್ತಿದ್ದರೂ ಯಾರೊಬ್ಬರೂ ಬಿಡಿಸದೆ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಹಲ್ಲೆಯಿಂದಾಗಿ ಮರೇಪ್ಪ ತಲೆಗೆ ಬಲವಾದ ಏಟು ಬಿದ್ದಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    https://youtu.be/uxO0nS6_Xaw

  • ಚುನಾವಣೆಗೂ ಮುನ್ನ ದಲಿತರ ಜಪ ಮಾಡ್ತಿರೋದ್ರ ಹಿಂದಿರೋ ರಣನೀತಿ ಏನು? ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಚುನಾವಣೆಗೂ ಮುನ್ನ ದಲಿತರ ಜಪ ಮಾಡ್ತಿರೋದ್ರ ಹಿಂದಿರೋ ರಣನೀತಿ ಏನು? ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಬೆಂಗಳೂರು: ಬಿಜೆಪಿ ನಾಯಕರ ದಲಿತರ ಮನೆ ಭೇಟಿ ಹಿಂದೆ ಮೋದಿ-ಷಾ ಮಾಸ್ಟರ್ ಪ್ಲಾನ್ ಇದ್ಯಾ?. ಉತ್ತರಪ್ರದೇಶದದಲ್ಲಿ ವರ್ಕೌಟ್ ಆದ ಜಾತಿ ಲೆಕ್ಕಚಾರ ಕರ್ನಾಟಕದಲ್ಲಿ ವರ್ಕೌಟ್ ಆಗುತ್ತಾ?.. ದಲಿತರ ಮನೆಯಲ್ಲಿ ಯಡಿಯೂರಪ್ಪ ಊಟ ಮಾಡಿದ್ರೆ ಸಿದ್ದರಾಮಯ್ಯರಿಗೇಕೆ ಹೊಟ್ಟೆ ಕಿಚ್ಚು ಗೊತ್ತಾಗ್ತಿಲ್ಲ. ಚುನಾವಣೆಗೂ ಮುನ್ನ ದಲಿತರ ಜಪ ಮಾಡ್ತಿರೋದ್ರ ಹಿಂದಿರೋ ರಣನೀತಿ ಏನು..? ಇದೆಲ್ಲದರ ಇನ್‍ಸೈಡ್ ಸ್ಟೋರಿ ಇಲ್ಲಿದೆ ನೋಡಿ.

    ಹೌದು. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಒಂದೇ ಒಂದು ವರ್ಷ ಬಾಕಿ ಉಳಿದಿದೆ. ಮತದಾರನ ಮನಗೆಲ್ಲಲು ರಾಜಕೀಯ ಪಕ್ಷಗಳು ಸರ್ಕಸ್ ನಡೆಸುತ್ತಿದೆ. ಕಾಂಗ್ರೆಸ್, ಜೆಡಿಎಸ್‍ಗೆ ಹೋಲಿಸಿದರೆ ಬಿಜೆಪಿ ಒಂದು ಹೆಜ್ಜೆ ಮುಂದಿದೆ. ತೆರೆಯ ಮರೆಯಲ್ಲೇ ಬಿಜೆಪಿ ರಾಜಕೀಯ ಸಮೀಕ್ಷೆ ಕೂಡ ನಡೆಸುತ್ತಿದೆ. ಅದರಲ್ಲೂ ರಾಜ್ಯ ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ಬಹಿರಂಗವಾಗುವ ಮುನ್ನವೇ ದಲಿತರ ಮನೆಗಳಿಗೆ ಎಡತಾಕುತ್ತಿದೆ.

    ಹಾಗೇ ನೋಡಿದ್ರೆ ರಾಜ್ಯದಲ್ಲಿ ಅನ್ಯ ಜಾತಿಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಯವ್ರ ಪ್ರಾಬಲ್ಯ ಹೆಚ್ಚಾಗೇ ಇದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯವ್ರ ಜನಸಂಖ್ಯೆ 1.08 ಕೋಟಿ ಇದ್ದಾರೆ. ಪರಿಶಿಷ್ಟ ಪಂಗಡದವ್ರ ಸಂಖ್ಯೆ 40.45 ಲಕ್ಷವಿದೆ. ಈ ಹಿಂದೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮತಗಳು ಕೇವಲ ಕಾಂಗ್ರೆಸ್‍ಗೆ ಮಾತ್ರ ಸೀಮಿತ ಅನ್ನೋದು ಸಂಪ್ರದಾಯವಾಗಿತ್ತು. ಆದ್ರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ. ಬಿಜೆಪಿ ಕೂಡ ದಲಿತರ ಮನವೊಲಿಕೆಯಲ್ಲಿ ತೊಡಗಿದೆ. ದಲಿತರ ಮನವೊಲಿಕೆಯ ಭಾಗವಾಗಿಯೇ ತುಮಕೂರು ಹಾಗೂ ಚಿತ್ರದುರ್ಗದಲ್ಲಿ ದಲಿತರ ಮನೆಯಲ್ಲಿ ಬಿಎಸ್‍ವೈ ಅಂಡ್ ಟೀಂ ಉಪಹಾರ ಸೇವಿಸಿ, ನಾವೂ ದಲಿತರ ಜೊತೆಯಲ್ಲಿದ್ದೀವಿ ಅಂತ ಸಮಾನತೆ ಸಂದೇಶ ರವಾನಿಸಿದ್ದಾರೆ.

    ರಾಜ್ಯದಲ್ಲೂ ಯುಪಿ ಮಾದರಿ ರಾಜತಂತ್ರ ಫಲಿಸುತ್ತಾ..?
    ಇತ್ತೀಚೆಗಷ್ಟೇ ಅಂತ್ಯಗೊಂಡ ಉತ್ತರಪ್ರದೇಶ ವಿಧಾನಸಭಾ ಚುಣಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ ಈಗ ಅದೇ ಬ್ರಹ್ಮಾಸ್ತ್ರವನ್ನು ಕರ್ನಾಟಕದಲ್ಲೂ ಪ್ರಯೋಗಿಸಲು ಹೊರಟಿದೆ. ಉತ್ತರಪ್ರದೇಶದಲ್ಲಿ ಮೇಲ್ವರ್ಗದ ಜನಸಂಖ್ಯೆ ಶೇ.22 ರಷ್ಟಿದ್ದರೂ ಕೂಡ ಹಿಂದುಳಿದ ವರ್ಗ ಜನಸಂಖ್ಯೆ ಶೇ.18 ಹಾಗೂ ಪರಿಶಿಷ್ಟರ ಜನಸಂಖ್ಯೆ ಶೇ.20 ರಷ್ಟು ಇತ್ತು. ಟಿಕೆಟ್ ಹಂಚಿಕೆ ಹಾಗೂ ಪ್ರಚಾರದ ವೇಳೆ, ಇವೆರಡೂ ವರ್ಗಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡ ಪರಿಣಾಮವಾಗಿ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿತು.

    ಈಗ ಅದೇ ತಂತ್ರವನ್ನು ಕರ್ನಾಟಕದಲ್ಲೂ ಅನುಸರಿಸಲಾಗ್ತಿದ್ದು, ದಲಿತರ ಮನವೊಲಿಕೆಯಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ. ಲಿಂಗಾಯತರು, ಒಕ್ಕಲಿಗರಂತೆ ದಲಿತರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಮೋದಿ ಅಮಿತ್ ಶಾ ಸೂಚನೆ ಮೇರೆಗೆ, ಬಿಎಸ್‍ವೈ ಅಂಡ್ ಟೀಂ ದಲಿತರ ಮನೆಗಳಿಗೆ ಎಡತಾಕುತ್ತಿದೆ ಎಂದು ಹೇಳಲಾಗ್ತಿದೆ.

    ಇದ್ರ ನಡುವೆ ಬಿಜೆಪಿ ಮಾಜಿ ಡಿಸಿಎಂ ಆರ್. ಅಶೋಕ್ ನಿವಾಸಕ್ಕೆ ಮಾದಾರ ಚೆನ್ನಯ್ಯ ಸ್ವಾಮೀಜಿ ಭೇಟಿ ನೀಡಿದ್ದು ಈ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ. ಬಿಜೆಪಿಯ ಈ ರಣನೀತಿ ಕಾಂಗ್ರೆಸ್‍ಗೆ ಅಚ್ಚರಿ ಮೂಡಿಸಿದೆ. ಎಲ್ಲೂ ಕೂಡ ದಲಿತರ ಮತಗಳು ಕೈತಪ್ಪದಂತೆ ಎಚ್ಚರಿಕೆ ವಹಿಸಲು ಕಾಂಗ್ರೆಸ್ ಕೂಡ ಎಚ್ಚರಿಕೆ ವಹಿಸಲು ತಯಾರಾಗ್ತಿದೆ.

    ಮುಂಬರುವ ಚುನಾವಣೆಯಲ್ಲಿ ದಲಿತರ ಮತಗಳು ನಿರ್ಣಾಯಕವಾಗಿರುವುದರಿಂದ ಕಾಂಗ್ರೆಸ್ ಕೂಡ ರಣತಂತ್ರಕ್ಕೆ ರೆಡಿಯಾಗ್ತಿದೆ. ಇದೆಲ್ಲಾ ಚುನಾವಣಾ ರಣತಂತ್ರ ಮಾತ್ರ. ಆದರೆ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳು ದಲಿತರ ಮನೆಯಲ್ಲಿ ಊಟ ಮಾಡಿ, ವಾಸ್ತವ್ಯ ಹೂಡಿದ ಮಾತ್ರಕ್ಕೆ ದಲಿತರು ಉದ್ಧಾರಾ ಆಗುತ್ತಾರಾ? ರಾಜಕೀಯ ಪಕ್ಷಗಳ ಈ ತಂತ್ರ ವರ್ಕೌಟ್ ಆಗುತ್ತಾ ಎನ್ನುವ ಪ್ರಶ್ನೆಗಳಿಗೆ 2019ರ ವಿಧಾನಸಭಾ ಚುನಾವಣೆ ಉತ್ತರ ನೀಡಲಿದೆ.

  • ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಬಂದಿದ್ದಕ್ಕೆ ಹೋಟೆಲಿನಿಂದ ತಿಂಡಿ: ಸುರೇಶ್ ಕುಮಾರ್ ಸಮರ್ಥನೆ

    ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಬಂದಿದ್ದಕ್ಕೆ ಹೋಟೆಲಿನಿಂದ ತಿಂಡಿ: ಸುರೇಶ್ ಕುಮಾರ್ ಸಮರ್ಥನೆ

    ಬೆಂಗಳೂರು:ನಾವು ದಲಿತರಿಗೆ ಮಾನಸಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಆದರೆ ವಿರೋಧ ಪಕ್ಷದವರು ನಾವು ಉಪಹಾರ ಸೇವಿಸಿದ ವಿಚಾರವನ್ನು ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಹೇಳಿದ್ದಾರೆ.

    ತುಮಕೂರಿನಲ್ಲಿ ದಲಿತ ನಾಯಕರ ಮನೆಯಲ್ಲಿ ಹೋಟೆಲ್ ಊಟ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, ದಲಿತರ ಮನೆಯಲ್ಲಿ ತಿಂಡಿ ತಯಾರಿಸಲಾಗಿತ್ತು. ಆದರೆ ಹೇಳಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯಡಿಯೂರಪ್ಪ ಮತ್ತವರ ಬೆಂಬಲಿಗರು ಬಂದಿದ್ದರಿಂದ ತಿಂಡಿ ಸಾಲದ ಕಾರಣ ಹೋಟೆಲಿನಿಂದ ತರಿಸಲಾಯಿತು ಎಂದು ತಿಳಿಸಿದರು.

    ಬಿಎಸ್‍ವೈ ಅವರು ಮನೆಯಲ್ಲಿ ಆಹಾರ ಸೇವಿಸಿದ್ದಾರೆ ಎಂದು ಆ ಮನೆಯವರೇ ಹೇಳಿದ್ದಾರೆ. ಆದರೆ ವಿರೋಧ ಪಕ್ಷಗಳು ಈ ವಿಚಾರವನ್ನು ಈಗ ರಾಜಕೀಯಕ್ಕೆ ಬಳಸುತ್ತಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ ಪಕ್ಷ ದಲಿತರನ್ನು ಕೇವಲ ವೋಟ್‍ಬ್ಯಾಂಕ್ ಆಗಿ ಬಳಸಿಕೊಂಡಿದೆ. ನಾವು ದಲಿತರಿಗೆ ಮಾನಸಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಹೀಗಾಗಿಯೆ ದಲಿತರ ಮನೆಗೆ ಹೋಗಿ ಉಪಹಾರ ಸೇವಿಸಿದ್ದೇವೆ. ಇದನ್ನು ಅರಿಯದ ವಿರೋಧ ಪಕ್ಷದವರು ಇದನ್ನ ರಾಜಕಾರಣ ಮಾಡಿ ದಲಿತರನ್ನ ಅವಮಾನಿಸುತ್ತಿದೆ ಎಂದರು.

    ಏನಿದು ವಿವಾದ:
    ಗುರುವಾರ ತುಮಕೂರಿನ ಕೆಳಕೋಟೆಯಲ್ಲಿ ಮಧು ಎಂಬ ದಲಿತ ಬಿಜೆಪಿ ಬೆಂಬಲಿಗರ ಮನೆಗೆ ಯಡಿಯೂರಪ್ಪ ಜೊತೆ ನಾಯಕರು ಭೇಟಿ ನೀಡಿದ್ದರು. ಈ ವೇಳೆ ನಾವು ದಲಿತರ ಮನೆಯ ಆಹಾರವನ್ನು ಸೇವಿಸಿದ್ದೇವೆ, ದಲಿತರೆಂದರೆ ನಮಗೆ ಬೇಧವಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದರು. ಅಸಲಿಗೆ ಬಿಜೆಪಿ ನಾಯಕರು ಸೇವಿಸಿದ ಉಪಹಾರವನ್ನು ತುಮಕೂರು ನಗರದ ಅರಳೂರು ಹೋಟೆಲಿನಿಂದ ತರಿಸಲಾಗಿತ್ತು. ಈ ಹೋಟೆಲಿನಿಂದ 500 ತಟ್ಟೆ ಇಡ್ಲಿ, ಚಿತ್ರಾನ್ನ ಪಾರ್ಸೆಲ್ ತೆಗೆದುಕೊಂಡು ಹೋಗಲಾಗಿತ್ತು. ಈ ವಿಚಾರವನ್ನು ಹೋಟೆಲ್ ಮಾಲೀಕ ಶಿವಕುಮಾರ್ ತಿಳಿಸಿದ್ದರು. 500 ಇಡ್ಲಿ, 500 ವಡೆ, ಚಿತ್ರಾನವ್ನು ಪಾರ್ಸೆಲ್ ತೆಗೆದುಕೊಂಡು ಹೋಗಲಾಗಿತ್ತು ಎಂದು ತಿಳಿಸಿದ್ದರು.

    https://www.youtube.com/watch?v=nX1JPNJLW68

     

  • ಕೊಪ್ಪಳದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ- ದಲಿತರಿಗೆ ಮನೆ ಬಾಡಿಗೆಗೆ ಕೊಡದೆ ಹೊರಹಾಕಿದ್ರು

    ಕೊಪ್ಪಳದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ- ದಲಿತರಿಗೆ ಮನೆ ಬಾಡಿಗೆಗೆ ಕೊಡದೆ ಹೊರಹಾಕಿದ್ರು

    ಕೊಪ್ಪಳ: ದೇಶದ 70 ನೇ ಸ್ವ್ಯಾತಂತ್ರ್ಯೋತ್ಸವದ ಹೊಸ್ತಿಲಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಮಾತ್ರ ಜೀವಂತವಾಗಿದೆ. ದಲಿತ ಕುಟುಂಬವೊಂದನ್ನು ಬಾಡಿಗೆ ಮನೆಯಿಂದ ಹೊರ ಹಾಕುವ ಮೂಲಕ, ಅಸ್ಪೃಶ್ಯತೆ ಮಾಡಿದ್ದಲ್ಲದೇ ಅಮಾನವೀಯವಾಗಿ ವರ್ತಿಸಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.

    ಕುಕನೂರು ಪಟ್ಟಣದ ಮುತ್ತಣ್ಣ ಛಲವಾದಿ ಕುಟುಂಬವನ್ನು ಮನೆ ಮಾಲೀಕ ಮನೆಯಿಂದ ಹೊರ ಹಾಕುವ ಮೂಲಕ ಅಸ್ಪೃಶ್ಯತೆ ಆಚರಿಸುವ ಜೊತೆಗೆ ಅಮಾನವೀಯವಾಗಿ ವರ್ತಿಸಿದ್ದಾರೆ.

    ಮುತ್ತಣ ನಾಲ್ಕು ದಿನದ ಹಿಂದೆ ಕುಕನೂರಿನ ಸಂಜಯ ನಗರದಲ್ಲಿನ ಹುಚ್ಚಪ್ಪ ಎಂಬುವರ ಮನೆ ಬಾಡಿಗೆ ಪಡೆದಿದ್ರು. ಸೋಮವಾರ ಬೆಳಗ್ಗೆ ತಮ್ಮ ದಿನಬಳಕೆ ವಸ್ತು ಮತ್ತು ಕುಟುಂಬ ಸಹಿತ ಬಾಡಿಗೆ ಮನೆ ಪ್ರವೇಶ ಮಾಡಿದ್ದಾರೆ. ಈ ವೇಳೆ ಹುಚ್ಚಪ್ಪರ ಮನೆಯ ನೆಲ ಮಹಡಿಯಲ್ಲಿ ಬಾಡಿಗೆಗೆ ಇರುವ ಮಹೇಶ ಉಳ್ಳಾಗಡ್ಡಿ ಎಂಬಾತ ಮುತ್ತಣ್ಣ ಛಲವಾದಿ ಮನೆ ಪ್ರವೇಶ ಮಾಡುವುದನ್ನು ಆಕ್ಷೇಪಿಸಿದ್ದಾನೆ. ಒಂದಮ್ಮೆ ಅವರಿಗೆ ಮನೆ ಬಾಡಿಗೆ ನೀಡಿದರೆ ತಾವು ಮನೆ ಖಾಲಿ ಮಾಡುವುದಾಗಿ ಬೆದರಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಮುತ್ತಣ ಮನೆಗೆ ತಂದಿದ್ದ ವಸ್ತುಗಳನ್ನು ಹೊರಹಾಕಿದ್ದಾನೆ. ಇದಕ್ಕೆ ಆಕ್ಷೇಪಿಸಿರುವ ದಲಿತ ಕುಟುಂಬ ಬೆಳಗ್ಗೆಯಿಂದ ರಾತ್ರಿಯವರೆಗೂ ತಮ್ಮ ವಸ್ತುಗಳ ಜೊತೆಗೆ ಮನೆ ಮುಂದೆ ಕುಳಿತಿದೆ. ಆದ್ರೂ, ಮನೆ ಮಾಲೀಕರ ಮತ್ತು ಸುತ್ತಲಿನ ಸವರ್ಣಿಯರ ಮನಸ್ಸು ಕರಗಿಲ್ಲ.

    ವಿಷಯ ತಿಳಿದು ಸ್ಥಳೀಯ ಪಿಎಸ್‍ಐ ಮತ್ತು ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿಗಳು ಸ್ಥಳಕ್ಕೆ ನೆಪ ಮಾತ್ರಕ್ಕೆ ಭೇಟಿ ನೀಡಿದರು. ರಾತ್ರಿವರೆಗೆ ಮನೆ ಮುಂದೆ ಕುಳಿತಿದ್ದ ಆ ಕುಟುಂಬ ತಮಗೆ ನ್ಯಾಯ ಸಿಗುವುದಿಲ್ಲ ಎಂದು ತಿಳಿದು ರಾತ್ರಿ ವೇಳೆಗೆ ದಲಿತ ಕೇರಿಯ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡ್ರು. ಇದರಿಂದ ಮನನೊಂದ ಮುತ್ತಣ್ಣನ ಪತ್ನಿ ಸತಿದೇವಿ ದಲಿತರಾಗಿ ಹುಟ್ಟಿರೋದು ತಪ್ಪಾ ಅಂತ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡ್ರು.