Tag: dalit

  • ಪೊಲೀಸರೇನು ಹುಚ್ಚರಾ? ಪ್ರತಿಭಟನಾಕಾರರ ಮೇಲೆ ಯಾದಗಿರಿ ಎಸ್.ಪಿ ಗರಂ

    ಪೊಲೀಸರೇನು ಹುಚ್ಚರಾ? ಪ್ರತಿಭಟನಾಕಾರರ ಮೇಲೆ ಯಾದಗಿರಿ ಎಸ್.ಪಿ ಗರಂ

    ಯಾದಗಿರಿ: ಪೊಲೀಸರೇನು ಹುಚ್ಚರಾ ಎಂದು ಪ್ರತಿಭಟನಾ ನಿರತರರಿಗೆ ಸಿನಿಮಾ ಸ್ಟೈಲ್‍ನಲ್ಲಿ ಯಾದಗಿರಿ ಎಸ್.ಪಿ ಋಷಿಕೇಶ್ ಭಗವಾನ್ ಗರಂ ಆಗಿದ್ದಾರೆ.

    ಇಂದು ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರ ಸಹಿತ ನಾಮಫಲಕ ಹಾಕುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಸಂರ್ಘಷ ಏರ್ಪಟಿತ್ತು. ಹೀಗಾಗಿ ಸ್ಥಳಕ್ಕೆ ಎಸ್.ಪಿ ಋಷಿಕೇಶ್ ಭಗವಾನ್ ಭೇಟಿ ನೀಡಿದ್ದರು.

    ಈ ಸಂದರ್ಭದಲ್ಲಿ ಪ್ರತಿಭಟನೆ ಮಾಡುತ್ತಿದ್ದವರು ಪೊಲೀಸರ ವಿರುದ್ಧ ಘೋಷಣೆ ಕೂಗಲು ಮುಂದಾದರು. ಇದರಿಂದ ಸಿಡಿಮಿಡಿಗೊಂಡ ಎಸ್.ಪಿ ಋಷಿಕೇಶ್ ಪೊಲೀಸರು ನಿಮಗೆ ಹಚ್ಚಾರ ತರ ಕಾಣುತ್ತೇವಾ? ನಾವು ಏನ್ ಮಾಡಿದ್ದೀವಿ ನಿಮಗೆ ಎಂದು ಪ್ರತಿಭಟನಾಕಾರರ ವಿರುದ್ಧ ಗರಂ ಆದರು.

    ಇದೇ ತಿಂಗಳ 8ರಂದು ವಡಗೇರಾ ಪಟ್ಟಣದ ಹಳೆ ಪೊಲೀಸ್ ಠಾಣೆ ಮುಂದೆ ದಲಿತ ಸಮುದಾಯದಿಂದ ಅಂಬೇಡ್ಕರ್ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ಆದರೆ ನಾಮ ಫಲಕ ಅಳವಡಿಕೆಗೆ ಅನುಮತಿ ಇಲ್ಲವೆಂದು ಪೊಲೀಸರು ಅದನ್ನು ತೆರವುಗೊಳಿಸಿದ್ದರು. ನಾಮ ಫಲಕವನ್ನು ಅನಧಿಕೃತವಾಗಿ ಅಳವಡಿಸಲಾಗಿದೆ ಎಂಬ ಆರೋಪದ ಮೇಲೆ 8 ಜನರ ಮೇಲೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

    ಈ ವಿಚಾರದಲ್ಲಿ ಪೊಲೀಸರಿಗೆ ಕುರುಬ ಸಮುದಾಯದ ಕುಮ್ಮಕ್ಕಿದೆ. ಅದ್ದರಿಂದ ನಾಮಫಲಕ ತೆರವುಗೊಳಿಸಿದ್ದಾರೆಂದು ದಲಿತ ಸಂಘಟನೆಗಳು ಆರೋಪಿಸಿ, ತೆರವುಗೊಳಿಸಿದ ಜಾಗದಲ್ಲಿಯೇ ನಾಮಫಲಕ ಹಾಕಬೇಕೆಂದು ಹಳೆ ಠಾಣೆ ಹಿಂಭಾಗದ ರಸ್ತೆ ತಡೆದು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ.

  • ಅಂಬೇಡ್ಕರ್ ನಾಮಫಲಕ ಬಳಕೆ ವಿಚಾರ – ಎರಡು ಸಮುದಾಯಗಳ ಮಧ್ಯೆ ಕಿತ್ತಾಟ

    ಅಂಬೇಡ್ಕರ್ ನಾಮಫಲಕ ಬಳಕೆ ವಿಚಾರ – ಎರಡು ಸಮುದಾಯಗಳ ಮಧ್ಯೆ ಕಿತ್ತಾಟ

    ಯಾದಗಿರಿ: ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಸಹಿತ ನಾಮ ಫಲಕ ಅಳವಡಿಸುವ ವಿಚಾರಕ್ಕಾಗಿ ವಡಗೇರಾ ಪಟ್ಟಣದಲ್ಲಿ ಕುರುಬ ಸಮುದಾಯ ಮತ್ತು ದಲಿತ ಸಂಘಟನೆಗಳ ನಡುವೆ ಕಿತ್ತಾಟ ಆರಂಭವಾಗಿದೆ.

    ಇದೇ ತಿಂಗಳ 8ರಂದು ವಡಗೇರಾ ಪಟ್ಟಣದ ಹಳೆ ಪೊಲೀಸ್ ಠಾಣೆ ಮುಂದೆ ದಲಿತ ಸಮುದಾಯದಿಂದ ಅಂಬೇಡ್ಕರ್ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ಆದರೆ ನಾಮ ಫಲಕ ಅಳವಡಿಕೆಗೆ ಅನುಮತಿ ಇಲ್ಲವೆಂದು ಪೊಲೀಸರು ಅದನ್ನು ತೆರವುಗೊಳಿಸಿದ್ದರು. ಮತ್ತು ನಾಮ ಫಲಕವನ್ನು ಅನಧಿಕೃತವಾಗಿ ಅಳವಡಿಸಲಾಗಿದೆ ಎಂಬ ಆರೋಪದ ಮೇಲೆ 8 ಜನರ ಮೇಲೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

    ಈ ವಿಚಾರಕ್ಕೆ ಈಗ ಪೊಲೀಸರು ಕುರುಬ ಸಮುದಾಯದ ಕುಮ್ಮಕ್ಕಿನಿಂದ ನಾಮಫಲಕ ತೆರವುಗೊಳಿಸಿದ್ದಾರೆಂದು ದಲಿತ ಸಂಘಟನೆಗಳು ಆರೋಪಿಸಿ, ತೆರವುಗೊಳಿಸಿದ ಜಾಗದಲ್ಲಿಯೇ ನಾಮಫಲಕ ಹಾಕಬೇಕೆಂದು ಹಳೆ ಠಾಣೆ ಹಿಂಭಾಗದ ರಸ್ತೆ ತಡೆದು ದಲಿತ ಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ. ಆದರೆ ಇನ್ನೊಂದು ಕಡೆ ಯಾವುದೇ ಕಾರಣಕ್ಕೂ ನಾಮ ಫಲಕ ಅಳವಡಿಸಬಾರದೆಂದು ವಿರೋಧಿಸಿ ಕುರುಬ ಸಮುದಾಯದಿಂದಲೂ ಸಹ ಪ್ರತಿಭಟನೆ ಮಾಡುತ್ತಿದ್ದಾರೆ.

    ಈ ಸಂಬಂಧ ವಡಗೇರಾ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಗ್ರಾಮದಲ್ಲಿ ವ್ಯಾಪಕ ಪೊಲೀಸ್ ಭದ್ರತೆ ನೀಡಲಾಗಿದೆ.

  • ಮರಾಠ ಯುವತಿಯನ್ನು ಪ್ರೀತಿಸಿದ ದಲಿತ ಯುವಕ- ಅವಾಚ್ಯ ಶಬ್ದದಿಂದ ನಿಂದಿಸಿ ಧಮ್ಕಿ ಹಾಕಿದ ಎಂಎಲ್‍ಸಿ

    ಮರಾಠ ಯುವತಿಯನ್ನು ಪ್ರೀತಿಸಿದ ದಲಿತ ಯುವಕ- ಅವಾಚ್ಯ ಶಬ್ದದಿಂದ ನಿಂದಿಸಿ ಧಮ್ಕಿ ಹಾಕಿದ ಎಂಎಲ್‍ಸಿ

    ಕಾರವಾರ: ದಲಿತ ಯುವಕ ಹಾಗೂ ಮರಾಠ ಯುವತಿ ಪ್ರೀತಿಗೆ ಬೆಂಬಲಿಸಿದ ದಲಿತರಿಗೆ ಹಾಗೂ ಪೊಲೀಸರಿಗೆ ಸಚಿವ ಆರ್.ವಿ ದೇಶಪಾಂಡೆ ಆಪ್ತ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಘೋಟ್ನೇಕರ್ ಅವಾಚ್ಯ ಶಬ್ದದಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

    ಯುವತಿ ಘೋಟ್ನೇಕರ್ ಜನಾಂಗಕ್ಕೆ ಸೇರಿದವಳಾಗಿದ್ದು, ದಲಿತ ಯುವಕನನ್ನು ಪ್ರೀತಿಸಿದ್ದಳು. ಮನೆಯಲ್ಲಿ ತಮ್ಮ ಪ್ರೀತಿ ಒಪ್ಪದ ಕಾರಣಕ್ಕೆ ಇಬ್ಬರು ಕೂಡ ಓಡಿಹೋಗಿದ್ದರು. ಈ ಹಿನ್ನೆಲೆ ಠಾಣೆಯಲ್ಲಿ ದೂರು ದಾಖಲಿಸಿ ಅವರಿಬ್ಬರ ವಿವಾಹ ಮಾಡಿಸಲು ದಲಿತ ಸಂಘಟನೆ ಕಾರ್ಯಕರ್ತರು ಮುಂದಾಗಿದ್ದರು. ಆದರೆ ತನ್ನ ಪ್ರಭಾವ ಬಳಸಿ ಯುವತಿಯನ್ನು ಯುವಕನಿಂದ ಬೇರ್ಪಡಿಸಲು ಘೋಟ್ನೇಕರ್ ಪ್ರಯತ್ನಿಸಿದ್ದರು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದರು ಎಂದು ಆರೋಪಿಸಿ ದಲಿತ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ದಲಿತ ಮುಖಂಡರು ಹಾಗೂ ಪೊಲೀಸರಿಗೆ ಠಾಣೆಯಲ್ಲಿಯೇ ಘೋಟ್ನೇಕರ್ ಧಮ್ಕಿ ಹಾಕಿದ್ದಾರಂತೆ. ಹೀಗಾಗಿ ದಲಿತ ಸಂಘಟಕರು ಇದನ್ನು ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಘೋಟ್ನೇಕರ್ ವಿರುದ್ಧ ದೂರನ್ನು ಕೂಡ ದಾಖಲಿಸಿದ್ದಾರೆ.

  • ಅಂತರ್ಜಾತಿ ವಿವಾಹ, ಎರಡು ಕುಟುಂಬದ ನಡುವೆ ಗಲಾಟೆ – ಇಬ್ಬರ ಕೈ ಬೆರಳು ಕಟ್

    ಅಂತರ್ಜಾತಿ ವಿವಾಹ, ಎರಡು ಕುಟುಂಬದ ನಡುವೆ ಗಲಾಟೆ – ಇಬ್ಬರ ಕೈ ಬೆರಳು ಕಟ್

    ಕಾರವಾರ: ಅಂತರ್ಜಾತಿ ವಿವಾಹ ಸಂಬಂಧವಾಗಿ ಎರಡೂ ಕುಟುಂಬಗಳು ಬಡಿದಾಡಿಕೊಂಡು ಯುವಕನ ಕುಟುಂಬದ ಆರು ಜನರು ಗಂಭೀರ ಗಾಯಗೊಂಡ ಘಟನೆ ಬನವಾಸಿಯಲ್ಲಿ ನಡೆದಿದೆ.

    ಬನವಾಸಿಯ ಕೃಷ್ಣಚೆನ್ನಯ್ಯ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಕುನವಳ್ಳಿಯ ಮಡಿವಾಳ ಜನಾಂಗದ ಯುವತಿಯನ್ನು ಪ್ರೀತಿಸಿದ್ದು, ಎಂಟು ದಿನದ ಹಿಂದೆ ಬೆಂಗಳೂರಿನಲ್ಲಿ ಮದುವೆಯಾಗಿದ್ದರು.

    ಯುವಕ ದಲಿತ ಎಂಬ ಕಾರಣಕ್ಕೆ ಯುವತಿಯ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮದುವೆ ಮಾಡಿಕೊಂಡು ಜೋಡಿಗಳು ಇಂದು ಬೆಂಗಳೂರಿನಿಂದ ಊರಿಗೆ ಬಂದಿದ್ದಾರೆ. ಈ ಮದುವೆಗೆ ಯಾವುದೇ ಅಧಿಕೃತ ದಾಖಲೆ ಇಲ್ಲದನ್ನು ತಿಳಿದ ಯುವತಿ ಕುಟುಂಬದವರು ಯುವತಿಯನ್ನು ಅಪಹರಿಸಿ ಕರೆದುಕೊಂಡು ಹೋಗಲು ಬನವಾಸಿಗೆ ಬಂದಿದ್ದಾರೆ.

    ಈ ವೇಳೆ ಮನೆಯಲ್ಲಿ ಮದುವೆಯಾದ ನವ ಜೋಡಿಗಳು ಇರಲಿಲ್ಲ. ಇದರಿಂದ ಕೋಪಗೊಂಡ ಯುವತಿಯ ಚಿಕ್ಕಪ್ಪ ಹೊಳಿಯಪ್ಪ ಶಾನವಳ್ಳಿ ಮತ್ತು ಸಂಬಧಿಕರು ಯುವಕನ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಎರಡೂ ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದ್ದು ಯುವಕನ ಸಹೋದರ ಹಾಗೂ ಮಾವನಿಗೆ ಮಚ್ಚಿನಿಂದ ಹೊಡೆದಿದ್ದು ಬೆರಳುಗಳು ತುಂಡಾಗಿವೆ. ಈ ಬಡಿದಾಟದಲ್ಲಿ ಒಟ್ಟು ಆರು ಜನರಿಗೆ ಗಂಭೀರ ಗಾಯವಾಗಿದೆ.

    ಗಾಯಾಳುಗಳನ್ನು ಬನವಾಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಎರಡೂ ಕುಟುಂಬದ ವಿರುದ್ಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೇಶದಲ್ಲಿರುವ ಜಾತಿ ವರ್ಗೀಕರಣ ನಿರ್ನಾಮ ಆಗ್ಬೇಕು: ಪರಮೇಶ್ವರ್

    ದೇಶದಲ್ಲಿರುವ ಜಾತಿ ವರ್ಗೀಕರಣ ನಿರ್ನಾಮ ಆಗ್ಬೇಕು: ಪರಮೇಶ್ವರ್

    ಚಿತ್ರದುರ್ಗ: ನಾನು ಪಿಹೆಚ್‍ಡಿ ಮಾಡಿದ್ದರೂ, ಡಿಸಿಎಂ ಆಗಿದ್ದರೂ ಕೂಡ ದಲಿತ ಅಂತಲೇ ನನ್ನನ್ನು ಕರೆಯುತ್ತಾರೆ. ಯಾವ ದೇಶದಲ್ಲೂ ಸಹ ಭಾರತದಲ್ಲಿರುವಂತೆ ಜಾತಿ ವರ್ಗೀಕರಣ ಇಲ್ಲ. ನನ್ನ ದೃಷ್ಟಿಯಲ್ಲಿ ಜಾತಿ ವರ್ಗೀಕರಣ ನಿರ್ನಾಮ ಆಗಬೇಕು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

    ಚಳ್ಳಕೆರೆ ತಾಲೂಕಿನ ಬೆಳಗೆರೆ ಕಟ್ಟೆಮನೆ ಏಕಾದಶಿ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ಬಿ ಆರ್ ಅಂಬೇಡ್ಕರ್ ಅವರ ದಾರಿಯಲ್ಲಿ ಬಂದು ನಾವು ವಿದ್ಯಾವಂತರಾಗಿದ್ದೇವೆ. ಅದರಲ್ಲೂ ನಾನು ಪಿಎಚ್‍ಡಿ ಮಾಡಿದ್ದರೂ ಸಹ ದಲಿತ ಎಂಬ ಹಣೆಪಟ್ಟಿ ಮಾತ್ರ ಸಡಿಲವಾಗಿಲ್ಲ. ಅಲ್ದೇ ಛಲವಾದಿ ಸಮಾಜದ ಕೋಟ್ಯಂತರ ಜನ ವಿದ್ಯಾವಂತರಾಗಿದ್ದರೂ ಸಹ ಛಲವಾದಿ ಸಮುದಾಯದವರು ಕೀಳೆಂಬ ಭಾವನೆ ಮಾತ್ರ ಹಾಗೇ ಉಳಿದಿದೆ ಎಂದು ಜಾತಿ ವರ್ಗೀಕರಣ ವಿರುದ್ಧ ಪ್ರತಿಕ್ರಿಯಿಸಿದರು.

    ಜಾತಿ ವರ್ಗೀಕರಣ ವ್ಯವಸ್ಥೆ ಮಾಡಿದ್ದೇ ಬೇರೆ ಕಾರಣಕ್ಕಾಗಿ, ಅವರ ವೃತ್ತಿಯ ಆಧಾರದ ಮೇರೆಗೆ ಅವರನ್ನು ವರ್ಗೀಕರಣ ಮಾಡಿದ್ದಾರೆ ವಿನಾಃ ಮೇಲೂ ಕೀಳು ಎಂಬ ಭಾವನೆಯಿಂದ ಮಾಡಲಿಲ್ಲ. ಆದ್ರೆ ದುರ್ದೈವ ವರ್ಷ ವರ್ಷ ಕಳೆದ ಹಾಗೇ ಜಾತಿ ಪದ್ಧತಿ ಮೇಲೂ ಕೀಳು, ಅತಿ ಕೀಳು ಎಂಬ ಮಟ್ಟಕ್ಕೆ ಬಂದು ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ನಾವೆಷ್ಟೇ ಬುದ್ದಿವಂತರಾದರೂ ಸಹ ನಮ್ಮ ಮುಂದೆ ಜಾತಿ ಎಂಬ ಹೆಸರು ತೆಗೆದುಬಿಡುತ್ತಾರೆ. ಅಂಬೇಡ್ಕರ್, ಒನಕೆ ಓಬವ್ವ, ಮತ್ತು ಸಾಲು ಮರದ ತಿಮ್ಮಕ್ಕ ಅವರು ಛಲವಾದಿ ಸಮುದಾಯದಿಂದ ಬಂದವರು ಅಂತಾರೆ. ಜೊತೆಗೆ ನಾನು ಅನೇಕ ದೇಶಗಳಿಗೆ ಹೋಗಿ ಬಂದಿದ್ದೇನೆ. ಯಾವ ದೇಶದಲ್ಲೂ ಸಹ ಈ ರೀತಿ ಜಾತಿ ವರ್ಗೀಕರಣ ಇಲ್ಲ, ನನ್ನ ದೃಷ್ಟಿಯಲ್ಲಿ ಜಾತಿ ವರ್ಗೀಕರಣ ನಿರ್ನಾಮ ಆಗಬೇಕು ಎಂದು ಹೇಳಿದರು.

    ದಲಿತ ಮಹಿಳೆಯರ ಬಗ್ಗೆ ಮನನೊಂದು ಮಾತನಾಡಿದ ಅವರು ದಲಿತ ಮಹಿಳೆಯರನ್ನು ನಗ್ನಗೊಳಿಸಿ, ಬೆಂಕಿಯಿಟ್ಟ ದೃಶ್ಯ ನೆನೆದಾಗ ಜಾತಿ ವ್ಯವಸ್ಥೆ ಬೇಕಾ ಎಂದು ಪ್ರಶ್ನಿಸಬೇಕು ಎನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಸ್ತುತ ರಾಜಕಾರಣ ದೇಶದಲ್ಲೇ ವಿಭಿನ್ನವಾಗಿದೆ. ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಹೇಳಿದರು.

    ಚುನಾವಣೆ ಬಳಿಕ ಕಾಂಗ್ರೆಸ್ ನಲ್ಲಿ ಕೆಲವರು ಎಡಗೈ, ಬಲಗೈ ಜನಾಂಗದವರ ವೋಟ್ ಹಾಕಿದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಎರಡೂ ಕೈಗಳೂ ಕಾಂಗ್ರೆಸ್ ಜೊತೆಗಿವೆ. ಈ ಕಾಂಗ್ರೆಸ್ ಪಕ್ಷ ದಲಿತರು, ಶೋಷಿತರ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆ ಎಲ್ಲರಲ್ಲಿದ್ದೂ ನನ್ನನ್ನು ಎಲ್ಲರೂ ಅಭಿಮಾನದಿಂದ ಭವಿಷ್ಯದ ಸಿಎಂ ಅಂದಿದ್ದೀರಿ. ಆದರೆ ಇಲ್ಲಿ ಬೇರೆ ಮಟ್ಟದಲ್ಲೇ ರಾಜಕಾರಣ ಆಗುತ್ತದೆ. ನಾನು ಹೋರಾಟ ಮಾಡುವವನು ಹೊರತು, ಅಧಿಕಾರಕ್ಕಾಗಿ ಕತ್ತಿ ಗುರಾಣಿ ಹಿಡಿಯೋದಿಲ್ಲ. ಅಂಬೇಡ್ಕರ್ ನನಗೆ ಪೆನ್ನು ಕೊಟ್ಟು ಹೋಗಿದ್ದಾರೆ, ಪೆನ್ನು ಕತ್ತಿಗಿಂತ ಹರಿತ ಎಂದು ಹೇಳಲಾಗುತ್ತದೆ. ಹೀಗಾಗಿ ನೀವೆಲ್ಲ ಪೆನ್ ಹಿಡಿಯಬೇಕು ಎಂದರು.

    ಸರ್ಕಾರಿ ಶಾಲೆ ಮಕ್ಕಳಿಗೆ ಬಸ್ ಪಾಸ್ ವಿಚಾರ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ಪಾಸ್ ಕೊಡುವ ಚಿಂತನೆ ಮಾಡುತ್ತೇವೆ. ಇದೀಗ ಮೊದಲ ಹಂತದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಪಾಸ್ ವಿತರಿಸುವುದಾಗಿ ತಿಳಿಸಿದರು.

    ಮಾಜಿ ಶಾಸಕ ಕೆ.ಎನ್ ರಾಜಣ್ಣನವರ ಸಮ್ಮಿಶ್ರ ಸರ್ಕಾರದ ಭವಿಷ್ಯ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಹೇಳಿಕೆ. ಸಮ್ಮಿಶ್ರ ಸರ್ಕಾರ, ಐದು ವರ್ಷ ಪೂರೈಸುತ್ತದೆ ಸಚಿವ ಸ್ಥಾನಕ್ಕಾಗಿ ನಾಯಕ ಸಮಾಜದ ಪ್ರತಿಭಟನೆಗೆ ಪ್ರತಿಕ್ರಿಯೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪರಿಶೀಲನೆ ನಡೆಸುತ್ತೇವೆ ಎಂದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ರಾಜಕೀಯ ವಿಶ್ಲೇಷಣೆ ಮಾಡಿಲ್ಲ. ಅದನ್ನು ಆಗಸ್ಟ್ ಮೊದಲ ವಾರದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯಕ್ಕೆ ಭೇಟಿ ನೀಡಿದ್ದು, ಆ ವೇಳೆ ಸಂಪೂರ್ಣ ವಿಶ್ಲೇಷಣೆ ಮಾಡುತ್ತೇವೆ ಎಂದರು.

  • ಚಾಣಕ್ಯನಿಗೆ ಪ್ರತಿಭಟನೆ ಬಿಸಿ – ಗದ್ದಲದ ಗೂಡಾಯ್ತು ಮೈಸೂರಿನ ಸಂವಾದ ಕಾರ್ಯಕ್ರಮ

    ಚಾಣಕ್ಯನಿಗೆ ಪ್ರತಿಭಟನೆ ಬಿಸಿ – ಗದ್ದಲದ ಗೂಡಾಯ್ತು ಮೈಸೂರಿನ ಸಂವಾದ ಕಾರ್ಯಕ್ರಮ

    ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸಿದ್ದ ದಲಿತ ಮುಖಂಡರ ನಡುವಿನ ಸಂವಾದ ಸಮಾವೇಶದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಹೇಳಿಕೆ ಚರ್ಚೆಗೆ ಕಾರಣವಾಯಿತು. ಈ ಕುರಿತು ಚರ್ಚೆ ವೇಳೆ ಅಮಿತ್ ಶಾ ಅವರು ಪ್ರತಿಕ್ರಿಯೆ ನೀಡಿ, ಸಚಿವರ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲವೆಂದು ಹೇಳಿದರು. ಇದರಿಂದ ಕೆರಳಿದ ದಲಿತ ಹೋರಾಟಗಾರ ಚೊರನಹಳ್ಳಿ ಶಿವಣ್ಣ ಅಮಿತ್ ಶಾ ಹೇಳಿಕೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು. ಈ ಘಟನೆ ಸಂವಾದ ಕಾರ್ಯಕ್ರಮದಲ್ಲಿ ಕೆಲಕಾಲ ಬಿಜೆಪಿ ಮುಖಂಡರು ಹಾಗೂ ಶಿವಣ್ಣ ನಡುವೆ ಮಾತಿನ ಚಕಮಕಿಗೆ ಕಾರಣಯಿತು.

    ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಶಿವಣ್ಣ ಅವರನ್ನು ಬಲವಂತವಾಗಿ ಸಂವಾದ ಕಾರ್ಯಕ್ರಮದಿಂದ ಹೊರಕ್ಕೆ ಕರೆದೊಯ್ದರು. ಈ ವೇಳೆ ಅನಂತ ಕುಮಾರ್ ಹೆಗ್ಡೆ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಶಿವಣ್ಣ ಆಗ್ರಹಿಸಿದರು.

    ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ರಾಜ್ಯ ಬಿಜೆಪಿ, ಅಮಿತ್ ಶಾ ಅವರು ಭಾಗವಹಿಸಿದ್ದ ದಲಿತ ಸಂವಾದ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಗುಂಡಾಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿದೆ. ದೇಶದಲ್ಲಿ ದಲಿತರಿಗೆ ಬಿಜೆಪಿ ಪ್ರಮುಖ ಪಕ್ಷವಾಗಿರುವುದನ್ನು ಅರಗಿಸಲು ಸಾಧ್ಯವಾಗದೇ ಸಿಎಂ ಇಂದು ಸಣ್ಣತನದ ಗಿಮಿಕ್ ಮಾಡಿದ್ದಾರೆ. ಅಮಿತ್ ಶಾ ಅವರ ಸಾರ್ವಜನಿಕ ಸಂವಾದ ಕಾರ್ಯಕ್ರಮದ ವೇಳೆ ಕೆಲ ಗುಂಡಾಗಳನ್ನು ಕಳುಹಿಸಿದ್ದಾರೆ. ಮಮತಾ ಬ್ಯಾನರ್ಜಿ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಈ ವಿಚಾರದಲ್ಲಿ ಯಾರು ಉತ್ತಮ ಎನ್ನುವ ಸ್ಪರ್ಧೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಿ ತಿರುಗೇಟು ನೀಡಿದೆ.

  • ಅತಂತ್ರ ಸ್ಥಿತಿಯಲ್ಲಿವೆ ಅನಿಷ್ಠ ಮಲ ಹೊರುತ್ತಿದ್ದ ಕುಟುಂಬಗಳು

    ಅತಂತ್ರ ಸ್ಥಿತಿಯಲ್ಲಿವೆ ಅನಿಷ್ಠ ಮಲ ಹೊರುತ್ತಿದ್ದ ಕುಟುಂಬಗಳು

    ಕೋಲಾರ: ಅದು ದೀನ ದಲಿತರ ಏಳಿಗೆಗೆ ಇರುವ ಸರ್ಕಾರದ ಅಂಗ ಸಂಸ್ಥೆ, ಏಳಿಗೆ ಮಾಡ್ತೀವೆಂದು ದಲಿತರಿಂದ ಸಾವಿರಾರು ರೂಪಾಯಿಯನ್ನ ಪಡೆದಿದೆ. ಲಕ್ಷಾಂತರ ರೂಪಾಯಿ ಸಾಲ ಕೊಡುವುದಾಗಿ ಹಣ ಕಟ್ಟಿಸಿಕೊಂಡು ಇದುವರೆಗೂ ಯಾವುದೇ ಸಾಲವೂ ಇಲ್ಲದೆ, ಕಟ್ಟಿದ ಹಣವೂ ಸಿಗದೆ ಅನಿಷ್ಠ ಮಲ ಹೊರುತ್ತಿದ್ದ ಕುಟುಂಬಗಳು ಕಂಗಾಲಾಗಿವೆ.

    ಸಾಲಕ್ಕಾಗಿ ಬ್ಯಾಂಕ್‍ನಲ್ಲಿ ಸಾವಿರಾರು ರೂಪಾಯಿ ಹಣ ಪಾವತಿಸಿರುವ ಅರ್ಜಿಗಳನ್ನು ತೋರಿಸುತ್ತಿರುವ ಮಹಿಳೆಯರು, ಮತ್ತೊಂದೆಡೆ ಸರ್ಕಾರ ನೆರವು ನೀಡದೆ ಇದ್ರೆ ನಾವು ಮತ್ತೆ ಮಲ ಹೊರುವ ಅನಿಷ್ಠ ಮಾಡುವುದಾಗಿ ಎಚ್ಚರಿಸುತ್ತಿರುವ ಸಫಾಯಿ ಕರ್ಮಾಚಾರಿಗಳು. ಇದು ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಸಾವಿರಾರು ಕುಟುಂಬಗಳ ಪರಿಸ್ಥಿತಿ.

    ಹೌದು. ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಮಲಹೊರುವ ವೃತ್ತಿಯಲ್ಲಿದ್ದ ಸಾವಿರಾರು ಜನರಿಗೆ ಪುನರ್ ಉದ್ಯೋಗ ಹಾಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿಯಲ್ಲಿ ಬ್ಯಾಂಕ್‍ನಲ್ಲಿ ಸಾವಿರಾರು ರೂಪಾಯಿ ಹಣ ಠೇವಣಿ ಇಡಲಾಗಿದೆ. ಅದರಂತೆ ಒಂದು ಲಕ್ಷಕ್ಕೆ ತಲಾ 9 ಸಾವಿರ ರೂಪಾಯಿಯಂತೆ ಫಲಾನುಭವಿಗಳು ಬ್ಯಾಂಕ್‍ಗೆ ಪಾವತಿ ಮಾಡಿದ್ದಾರೆ. ಆದ್ರೆ ಬಡವರಿಗೆ 6 ತಿಂಗಳು ಕಳೆದ್ರೂ ಇದುವರೆಗೂ ಸಾಲವೂ ಸಿಗದೆ, ಕಟ್ಟಿದ ಹಣವೂ ಇಲ್ಲದೇ ಕಂಗಾಲಾಗಿದ್ದಾರೆ.

    ರಾಜ್ಯದಲ್ಲಿ ಮಲ ಹೊರುವ ಅನಿಷ್ಠ ಪದ್ದತಿಯನ್ನು ನಿಷೇಧಿಸಲಾಗಿದೆ. ಇತ್ತ ಅನಿಷ್ಠ ಪದ್ದತಿಯಲ್ಲಿ ತೊಡಗಿದ್ದವರು ಕುಡಿತದ ಚಟ ಸೇರಿದಂತೆ, ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇಂತಹ ಕುಟುಂಬಗಳು ಜೀವನ ನಿರ್ವಹಣೆಗಾಗಿ ಕುಟುಂಬದ ಪೋಷಣೆ ಮಹಿಳೆಯರ ಹೆಗಲ ಮೇಲಿದ್ದು ಜೀವನ ಸಾಗಿಸುತ್ತಿದ್ದಾರೆ.

    ಸರ್ಕಾರವು ರೂಪಿಸಿರುವ ಯೋಜನೆಗಳ ಮೂಲಕ ನಮಗೆ ಪುನರ್ವಸತಿ ಹಾಗೂ ಉದ್ಯೋಗ ಕಲ್ಪಿಸಿದ್ದೇ ಆದಲ್ಲಿ ಸಾಕಷ್ಟು ಅನಕೂಲವಾಗಲಿದೆ. ಇಲ್ಲವಾದಲ್ಲಿ ನಾವು ಅನಿಷ್ಟ ಮಲ ಹೊರುವ ವೃತ್ತಿಯನ್ನೇ ಮುಂದುವರೆಸಬೇಕಾಗುತ್ತೆ ಎಂಬ ಕೂಗು ಇಲ್ಲಿನ ಗ್ರಾಮಸ್ಥರಲ್ಲಿದೆ.

    ಸರ್ಕಾರ ಮಲ ಹೊರುವ ಅನಿಷ್ಠ ಪದ್ಧತಿಯನ್ನು ನಿಷೇಧಿಸಿದೆ. ಇಲ್ಲಿನ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಿ ಉದ್ಯೋಗದ ನೆರವು ನೀಡುವುದು ಆದ್ಯ ಕರ್ತವ್ಯ. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಮ್ಮದು.

    https://youtu.be/6M03AUV28c8

  • ಪಾಕಿಸ್ತಾನ ಮೇಲ್ಮನೆಗೆ ಹಿಂದೂ ಸಂಸದೆ ಆಯ್ಕೆ

    ಪಾಕಿಸ್ತಾನ ಮೇಲ್ಮನೆಗೆ ಹಿಂದೂ ಸಂಸದೆ ಆಯ್ಕೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಸಂಸದೆಯೊಬ್ಬರು ಮೇಲ್ಮನೆಗೆ ಆಯ್ಕೆ ಆಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಕೃಷ್ಣಕುಮಾರಿ ಕೊಹ್ಲಿ ಅವರನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮೇಲ್ಮನೆಗೆ ಆಯ್ಕೆ ಮಾಡಿದೆ.

    ಸಿಂಧ್ ಪ್ರಾಂತ್ಯದ ಥಾರ್ ಪ್ರದೇಶಕ್ಕೆ ಸೇರಿದ 39 ವರ್ಷದ ಕೊಹ್ಲಿ ಮಾರ್ಚ್ 3ರಂದು ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದರು. ಮಾಧ್ಯಮಗಳಲ್ಲಿ ಆರಂಭದಲ್ಲಿ ಕೃಷ್ಣಕುಮಾರಿ ಮೊದಲ ಹಿಂದೂ ಸಂಸದೆಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿಗಳು ಪ್ರಕಟವಾಗಿತ್ತು. ಆದರೆ ಕೃಷ್ಣಕುಮಾರಿ ಕೊಹ್ಲಿಗಿಂತಲೂ ಹಿಂದೆ ರತ್ನ ಭಗವನ್ ದಾಸ್ ಎಂಬವರು ಮೇಲ್ಮಗೆ ಆಯ್ಕೆ ಆಗಿದ್ದರು. ಪಿಪಿಪಿಯಿಂದ ಆಯ್ಕೆ ಆಗಿದ್ದ ಅವರು 2012ರ ವರೆಗೆ ಮೇಲ್ಮನೆಯ ಸದಸ್ಯರಾಗಿದ್ದರು.

    1979ರ ಫೆಬ್ರವರಿಯಲ್ಲಿ ಜನಿಸಿದ ಕೃಷ್ಣಕುಮಾರಿ ಕೊಹ್ಲಿ 16ನೇ ವಯಸ್ಸಿನಲ್ಲಿ 9ನೇ ತರಗತಿ ಓದುತ್ತಿದ್ದಾಗ ಮದುವೆಯಾಗಿದ್ದರು. ಮದುವೆಯಾದ ನಂತರ ಓದು ಮುಂದುವರಿಸಿ 2013ರಲ್ಲಿ ಸಮಾಜಶಾಸ್ತ್ರದಲ್ಲಿ ಸಿಂಧ್ ವಿಶ್ವವಿದ್ಯಾಲಯದಿಂದ  ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 20 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದಲ್ಲಿ 2% ಹಿಂದೂ ಧರ್ಮದವರಿದ್ದಾರೆ.

  • ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

    ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

    ಮೈಸೂರು: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಪೋಷಕರೇ ತಮ್ಮ ಮಗಳನ್ನ ಹತ್ಯೆ ಮಾಡಿರೋ ಆರೋಪ ಕೇಳಿಬಂದಿದೆ.

    ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾದ ಸುಷ್ಮಾ(20) ಮೃತ ಯುವತಿ. ಪೋಷಕರು ಸುಷ್ಮಾಳಿಗೆ ಜಮೀನಿನಲ್ಲಿ ವಿಷ ಕುಡಿಸಿ ಸುಟ್ಟು ಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸುಷ್ಮಾ ಎಚ್.ಡಿ.ಕೋಟೆ ಆಲನಹಳ್ಳಿ ಗ್ರಾಮದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸಿದ್ದಳು. ಇದಕ್ಕೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿ, ಆಕೆಯನ್ನು ಕಾಲೇಜಿನಿಂದ ಬಿಡಿಸಿದ್ದರು ಎಂದು ತಿಳಿದುಬಂದಿದೆ.

    ಕಾಲೇಜಿನಿಂದ ಬಿಡಿಸಿದ್ದರೂ ಕೂಡ ಸುಷ್ಮಾ ಯುವಕನೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದಳು. ಈ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ತಮ್ಮ ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿದೆ.

    ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್‍ನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

  • ದಲಿತರಿಗೆ ಸಾಮಾಗ್ರಿ ನೀಡಿದ್ರೆ 1 ಸಾವಿರ ದಂಡ- ಸಿಎಂ ಜಿಲ್ಲೆಯಲ್ಲಿ ಬಹಿಷ್ಕಾರ ಪೀಡೆ

    ದಲಿತರಿಗೆ ಸಾಮಾಗ್ರಿ ನೀಡಿದ್ರೆ 1 ಸಾವಿರ ದಂಡ- ಸಿಎಂ ಜಿಲ್ಲೆಯಲ್ಲಿ ಬಹಿಷ್ಕಾರ ಪೀಡೆ

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ದಲಿತರಿಗೆ ಸವರ್ಣಿಯರು ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತರದಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಲಿತರು ಗ್ರಾಮದಲ್ಲಿರುವ ಸವರ್ಣಿಯರ ಅಂಗಡಿಗಳಲ್ಲಿ ಮನೆ ಸಾಮಗ್ರಿಗಳನ್ನ ಖರೀದಿಸುವಂತಿಲ್ಲ. ಒಂದು ವೇಳೆ ದಲಿತರಿಗೆ ಸಾಮಾಗ್ರಿಗಳನ್ನು ನೀಡಿದರೆ ಅಂತಹವರಿಗೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ದಲಿತರನ್ನು ಕೂಲಿ ಕೆಲಸಕ್ಕೂ ಸಹ ಕರೆಯಬಾರದು ಎಂದು ದಿಗ್ಬಂಧನ ವಿಧಿಸಿ ಬಹಿಷ್ಕಾರ ಹಾಕಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.

    ಈ ಸಂಬಂಧ ತಹಶೀಲ್ದಾರ್ ಕಚೇರಿಗೆ ತರದಲೆ ಗ್ರಾಮದ ದಲಿತ ಮುಖಂಡರು ಮತ್ತು ದಲಿತ ಸಂಘಟನೆ ಕಾರ್ಯಕರ್ತರು ಭೇಟಿ ನೀಡಿ ಗ್ರಾಮದ ಪರಿಸ್ಥಿತಿ ವಿವರಿಸಿ ತಪ್ಪಿತ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ಕ್ಷುಲಕ ಕಾರಣಕ್ಕೆ ದಲಿತರು ಮತ್ತು ಸವರ್ಣಿಯರ ನಡುವೆ ಊರ ಹಬ್ಬದ ವೇಳೆ ಜಗಳ ಉಂಟಾಗಿತ್ತು. ಈಗ ಮತ್ತೆ ಊರ ಹಬ್ಬ ಮಾಡುವ ವೇಳೆ ಹಳೇ ಜಗಳದ ಹಿನ್ನೆಲೆಯಲ್ಲಿ ಸವರ್ಣಿಯರು ದಲಿತರಿಗೆ ಬಹಿಷ್ಕಾರ ಹಾಕಿ ಹಬ್ಬ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.