Tag: dalit

  • ದಲಿತ ಸಮುದಾಯ 3 ಗುಂಪಾಗಿ ವರ್ಗೀಕರಿಸಿ ಮೀಸಲಾತಿ ಹಂಚಿಕೆ ಜಾರಿಗೆ ಸಂಪುಟ ನಿರ್ಧಾರ

    ದಲಿತ ಸಮುದಾಯ 3 ಗುಂಪಾಗಿ ವರ್ಗೀಕರಿಸಿ ಮೀಸಲಾತಿ ಹಂಚಿಕೆ ಜಾರಿಗೆ ಸಂಪುಟ ನಿರ್ಧಾರ

    ಬೆಂಗಳೂರು: ದಲಿತ ಸಮುದಾಯವನ್ನು 3 ಗುಂಪಾಗಿ ವರ್ಗೀಕರಿಸಿ ಮೀಸಲಾತಿ ಹಂಚಿಕೆ ಜಾರಿಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

    ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮುದಾಯ ಶೇ.6 (5% + 1% ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸೇರಿ), ಸ್ಪೃಶ್ಯ ಸಮುದಾಯ ಶೇ.5 (ಸ್ಪೃಶ್ಯ 4% + 1% ಇತರೆ ಸೇರಿ) ಕಲ್ಪಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

    ಬೆಂಬಲಿಗರ ಜೊತೆ ವಿಧಾನಸೌಧಕ್ಕೆ ಬೃಹತ್ ಹಾರ ಹಾಗೂ ಸ್ವೀಟ್ ಬಾಕ್ಸ್ ಹಿಡಿದುಕೊಂಡು ಮಾಜಿ ಸಚಿವ ಆಂಜನೇಯ ಆಗಮಿಸಿದ್ದರು. ಸಿಎಂಗೆ ಹಾರ ಹಾಕಿ ಸಿಹಿ ತಿನ್ನಿಸಿ ದಲಿತ ನಾಯಕರು ಸಂಭ್ರಮಿಸಿದರು.

    ಅಲೆಮಾರಿ ಸಮುದಾಯದ ಕೆಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಕೆಂಗಲ್ ಗೇಟ್ ಬಳಿ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲೆಮಾರಿ ಸಮುದಾಯವನ್ನ ಇತರೆ ಸಮುದಾಯದ ಜೊತೆ ಸೇರಿಸಿ ಶೇ.5% ಮೀಸಲಾತಿ ವ್ಯಾಪ್ತಿಗೆ ಸೇರಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸಂಪುಟ ಸಭೆ ನಿರ್ಣಯದ ಬಗ್ಗೆ ಶಿವರಾಜ್ ತಂಗಡಗಿ ಮಾತನಾಡಿ, ಇಂದು ಐತಿಹಾಸಿಕ ನಿರ್ಧಾರವನ್ನ ಮಾಡಲಾಗಿದೆ. 3 ಗುಂಪಾಗಿ ವರ್ಗಿಕರಿಸಿ ಮೀಸಲಾತಿ ನೀಡಲಾಗಿದೆ. ಎಡಗೈ, ಬಲಗೈ ಹಾಗೂ ಇತರೆ ಅಂತಾ ವರ್ಗೀಕರಿಸಲಾಗಿದೆ. ಎಲ್ಲರ ಒಪ್ಪಿಗೆ ಪಡೆದು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಎಲ್ಲರಿಗೂ ತೃಪ್ತಿ ಕೊಡುವ ರೀತಿ ಆಗಿದೆ ಎಂದು ತಿಳಿಸಿದ್ದಾರೆ.

    ಹೆಚ್‌ಕೆ ಪಾಟೀಲ್ ಪ್ರತಿಕ್ರಿಯಿಸಿ, ಎಲ್ಲರೂ ಸಂತೋಷ, ಸಮಾಧಾನದಿಂದ ಬಂದಿದ್ದೇವೆ. ನಾಳೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಸರ್ಕಾರ ನಿರ್ಧಾವರನ್ನ ಹೇಳ್ತಾರೆ. ಮುನಿಯಪ್ಪ, ಮಹದೇವಪ್ಪ, ತಂಗಡಗಿ, ಪರಮೇಶ್ವರ್ ಸಂತೋಷದಲ್ಲಿದ್ದಾರೆ ಎಂದು ಹೇಳಿದ್ದಾರೆ.

    ಆಹಾರ ಸಚಿವ ಕೆಹೆಚ್. ಮುನಿಯಪ್ಪ ಮಾತನಾಡಿ, ಅಧಿವೇಶನದ ಸಂದರ್ಭದಲ್ಲಿ ನಾವು ಯಾವುದೇ ಪತ್ರಿಕಾ ಹೇಳಿಕೆಗಳನ್ನು ಕೊಡುವ ಹಾಗಿಲ್ಲ. ನಾಳೆ ಮುಖ್ಯಮಂತ್ರಿಗಳೇ ಇದರ ಕುರಿತು ಹೇಳಿಕೆ ನೀಡಲಿದ್ದಾರೆ. ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳಿಗೂ ಸಾಮಾಜಿಕ ನ್ಯಾಯ ಸಿಕ್ಕಿದ್ದು, ಯಾವ ಜಾತಿಗೂ ಅನ್ಯಾಯವಾಗದ ರೀತಿಯಲ್ಲಿ ತೀರ್ಮಾನವಾಗಿದೆ.
    ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.

  • ದುರಹಂಕಾರಿ ಅಂದ್ರೂ ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ: ಸಿದ್ದರಾಮಯ್ಯ

    ದುರಹಂಕಾರಿ ಅಂದ್ರೂ ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ: ಸಿದ್ದರಾಮಯ್ಯ

    – ಮುಂದುವರಿದ ಜಾತಿ ಹೆಸರಿನಲ್ಲಿ ಸಮಾವೇಶ ಮಾಡಿದರೆ ಅದು ಜಾತೀಯತೆ
    – ಹಿಂದುಳಿದ ವರ್ಗದವರು ಸಮಾವೇಶ ಮಾಡಿದರೆ ಅದು ಜಾತೀಯತೆ ಆಗಲ್ಲ

    ಬೆಂಗಳೂರು: ನನ್ನನ್ನು ದುರಹಂಕಾರಿ ಎನ್ನುತ್ತಾರೆ. ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ಶ್ರೀ ಕಾಗಿನೆಲೆ (Kaginele Mutt) ಮಹಾಸಂಸ್ಥಾನ ಕನಕಗುರುಪೀಠ, ಶಾಖಾಮಠ, ಕೇತೋಹಳ್ಳಿ ಬೆಂಗಳೂರಿನ ಭಕ್ತ ಭಂಡಾರದ ಕುಟೀರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಮ್ಮ ಸಮುದಾಯದವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ವಿದ್ಯಾವಂತರಾದರೆ ಸ್ವಾಭಿಮಾನ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

    ಮೇಲ್ವರ್ಗದ ಬಡವ ಬಂದರೆ ಏನು ಸ್ವಾಮಿ ಎನ್ನುತ್ತಾರೆ. ದಲಿತನೊಬ್ಬ (Dalits) ವಿದ್ಯಾವಂತ ಶ್ರೀಮಂತ ಬಂದರೆ ಏಕವಚನದಲ್ಲಿ ಮಾತನಾಡಿಸುತ್ತಾರೆ. ನನ್ನನ್ನು ನೋಡಿದಾಗ ಕೆಲವರು ಸಿದ್ದರಾಮಯ್ಯಗೆ ದುರಹಂಕಾರ ಎನ್ನುತ್ತಾರೆ. ಆದರೆ ನಾನು ಸ್ವಾಭಿಮಾನಿಯೇ ಹೊರತು ದುರಹಂಕಾರಿ ಅಲ್ಲ. ನನ್ನನ್ನ ದುರಹಂಕಾರಿ ಅಂದರೆ ಕೇರ್ ಮಾಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: Heart Attack | ರಾಜ್ಯದಲ್ಲಿಂದು ಐವರು ಬಲಿ – ವಿದ್ಯಾರ್ಥಿಗಳ ಹೃದಯ ತಪಾಸಣೆಗೆ ರಾಜಣ್ಣ ಸೂಚನೆ

    ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕಿದೆ. ಅವರು ದುರಹಂಕಾರಿ ಅಂದರು ಐ ಡೋಂಟ್ ಕೇರ್. ನಿಮ್ಮನ್ನು ದುರಹಂಕಾರಿ ಅಂದರೂ ಸ್ವಾಭಿಮಾನಿಗಳಾಗಿ ಬದುಕಿ ಎಂದು ಸಲಹೆ ನೀಡಿದರು.

    ಬಂಗಾರಪ್ಪ ಅವರನ್ನು ಆಹ್ವಾನಿಸಲು ಹೋದಾಗ 25 ಲಕ್ಷ ರೂ. ದುಡ್ಡು ಕೊಡಲು ಬಂದರು. ಆಗ ಕುರುಬರು (Kurubas) ಅಷ್ಟು ಬಡವರಿಲ್ಲ ಅಂತ ವಾಪಸ್‌ ನೀಡಿದೆ. ಹರಿ‌ಕೋಡೆ ಅವರು ನಾನು ಊಟ ಹಾಕಿಸುತ್ತೇನೆ ಎಂದಿದ್ದರು. ಅವರಿಗೂ ಬೇಡ ಎಂದೆವು. 5-6 ಲಕ್ಷ ಜನ ಸೇರಿದ ಕಾರ್ಯಕ್ರಮದಲ್ಲಿ ಯಾರಿಗೆ ಮಠ ಇಲ್ವೋ ಅವರಿಗೆಲ್ಲ ಈ ಮಠ ಅಂತ ಘೋಷಣೆ ಮಾಡಿದೆವು ಎಂದು ಹಳೆಯ ನೆನಪು ಹಂಚಿಕೊಂಡರು. ಇದನ್ನೂ ಓದಿ: ಮಲಗಿದ್ದಲ್ಲೇ ಹೃದಯಾಘಾತದಿಂದ ಯೋಧ ಸಾವು ಹುಟ್ಟೂರಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಮಠಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಮಠಗಳು ಆಗದಿದ್ದರೆ ಶಿಕ್ಷಣ, ಆರೋಗ್ಯ ಸಂಘಟನೆ ಆಗುವುದಿಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಜಾತಿಯನ್ನ ಗುರುತಿಸಬೇಕು, ಜಾತಿಯನ್ನ ನಾಶ ಮಾಡಬೇಕು ಎಂದು ಕುವೆಂಪು ಹೇಳಿದರು. ಎಲ್ಲರ ಸರ್ವೋದಯ ಆಗಬೇಕು ಎಂದು ಮಹಾತ್ಮ ಗಾಂಧೀಜಿ ಕರೆ ನೀಡಿದ್ದರು. ಕುವೆಂಪು ಅವರು ಸಮಪಾಲು, ಸಮಬಾಳು ಆಗ್ಬೇಕು ಎಂದರು. ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಹಂಚಿಕೆ ಆಗಬೇಕು ಎಂದು ತಿಳಿಸಿದರು.

     

    ಜಾತಿಗೊಂದು ಮಠ ಬೇಡ ಎಂದು ನಾನು ಹೇಳುವುದಿಲ್ಲ. ಜಾತಿ ಎಂಬುದು ವಾಸ್ತವಿಕ, ಮುಂದುವರಿದ ಜಾತಿ (Caste) ಹೆಸರಿನಲ್ಲಿ ಸಮಾವೇಶ ಮಾಡಿದರೆ ಅದು ಜಾತೀಯತೆ ಆಗುತ್ತದೆ. ಹಿಂದುಳಿದ ವರ್ಗದವರು ಜಾತಿ ಸಮಾವೇಶ ಮಾಡಿದರೆ ಅದು ಜಾತೀಯತೆ ಆಗುವುದಿಲ್ಲ. ಎಲ್ಲರೂ ವಿದ್ಯಾವಂತರಾಗಿ, ಸಂಘಟಿತರಾಗಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ಶೋಷಿತ ವರ್ಗದ ಜನ ಇದನ್ನು ಪಾಲನೆ ಮಾಡಬೇಕು. ಇಲ್ಲವಾದರೆ ಸಮ ಸಮಾಜ ಆಗುವುದು ಕಷ್ಟ. ನಾವು ಕುರುಬರನ್ನೇ ಅಭಿವೃದ್ಧಿ ಪಡಿಸಲು ಈ ಮಠ ಕಟ್ಟಿಲ್ಲ. ಅನ್ಯಾಯವಾಗಿರುವವರಿಗೆ ಈ ಮಠ ಕಟ್ಟಿದ್ದೇವೆ. ಎಲ್ಲರೂ ಮುಖ್ಯ ವಾಹಿನಿಗೆ ಬರಬೇಕು ಆಗ ಮಾತ್ರ ಸಮ ಸಮಾಜ ನಿರ್ಮಾಣ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.

    ಬೇರೆಯವರು ಮಾಡಿರುವ ಮಠ ತಪ್ಪು ಎಂದು ನಾನು ಹೇಳುವುದಿಲ್ಲ. ಸಿದ್ದರಾಮಯ್ಯ ಸಮುದಾಯಕ್ಕೆ ಏನು ಮಾಡಿದ್ದಾನೆ ಎಂದು ಕೆಲವರು ಕೇಳುತ್ತಾರೆ. ಕೇಳುವುದು ಒಳ್ಳೆಯದು ಯಾವತ್ತು ಪ್ರಶ್ನೆ ಮಾಡಿ ಒಪ್ಪಿಕೊಳ್ಳಬೇಕು ಎಂದು ಸಮಾಜಕ್ಕಾಗಿ ನಾನು ಏನೇನು ಮಾಡಿದ್ದೇನೆ ಎಂಬುದನ್ನು ಸಿದ್ದರಾಮಯ್ಯ ಈ ಕಾರ್ಯಕ್ರಮದಲ್ಲಿ ವಿವರಿಸಿದರು.

  • ರಾಜ್ಯಸಭೆಯಲ್ಲಿ ಕಾಂಗ್ರೆಸ್ ಕುರಿತ ದೇವೇಗೌಡರ ಹೇಳಿಕೆ ಸರಿಯಾಗಿದೆ: ಛಲವಾದಿ ನಾರಾಯಣಸ್ವಾಮಿ

    ರಾಜ್ಯಸಭೆಯಲ್ಲಿ ಕಾಂಗ್ರೆಸ್ ಕುರಿತ ದೇವೇಗೌಡರ ಹೇಳಿಕೆ ಸರಿಯಾಗಿದೆ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರದ ವಿಚಾರದಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ ಎಚ್.ಡಿ.ದೇವೇಗೌಡರು (HD Devegowda) ಪ್ರಸ್ತಾಪ ಮಾಡಿದ್ದು ಸರಿ ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಕರ್ನಾಟಕದಲ್ಲಿ ದಲಿತರ ದುರ್ಬಳಕೆ, ಅಧಿಕಾರಿಗಳ ಆತ್ಮಹತ್ಯೆ, ಭ್ರಷ್ಟಾಚಾರ ಮಿತಿ ಮೀರಿರುವುದು, 136 ಶಾಸಕರಿದ್ದರೂ ಅಭದ್ರತೆಯ ವಾತಾವರಣ ಸಂಬಂಧಿತ ದೇವೇಗೌಡರ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆಯವರು ಆಕ್ಷೇಪ ಎತ್ತಲು ಯಾವುದೇ ಕಾರಣ ಇಲ್ಲ. ದಲಿತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ಸಿನ ವಿರುದ್ಧವಾಗಿ ಮಾನ್ಯ ಖರ್ಗೆಜೀ ಅವರೇ ಮಾತನಾಡಬೇಕಿತ್ತು ಎಂದು ಛಲವಾದಿ ಅಭಿಪ್ರಾಯಪಟ್ಟರು.

    ದಲಿತರ ಪರವಾಗಿ ಮಾತನಾಡಲು ಅವರಿಗೆ ಬಾಯಿಯೇ ಬರುತ್ತಿಲ್ಲ. ಆದರೆ ದೇವೇಗೌಡರು (Devegowda) ದಲಿತ ಸಮುದಾಯಗಳ ಬಗ್ಗೆ ಆಗಿರುವ ಅನ್ಯಾಯ ಸರಿಪಡಿಸಲು ರಾಜ್ಯಸಭೆಯಲ್ಲಿ ಸಮಯೋಚಿತವಾಗಿ ಮಾತನಾಡಿದ್ದಾರೆ ಎಂದು ತಿಳಿಸಿದರು. ಇದೊಂದು ಭಂಡತನದ ಸರಕಾರ. ಮಾನ್ಯ ಮುಖ್ಯಮಂತ್ರಿಗಳು ಯಾವುದಕ್ಕೂ ಸಮರ್ಪಕ ಉತ್ತರ ಕೊಡುವುದಿಲ್ಲ ಎಂದು ಟೀಕಿಸಿದರು.

    ವಾಲ್ಮೀಕಿ ನಿಗಮದಲ್ಲಿ 187 ಕೋಟಿ ನುಂಗಲಾಯಿತು. ಪರಿಶಿಷ್ಟ ಜಾತಿ- ಪರಿಶಿಷ್ಟ ವರ್ಗಗಳಿಗೆ ಇಟ್ಟಿದ್ದ ಹಣ 25 ಸಾವಿರ ಕೋಟಿ ರೂ. ಹಣವನ್ನು ಇದೇ ಕಾಂಗ್ರೆಸ್ ಸರಕಾರ ನುಂಗಿದೆ. ಖರ್ಗೆಯವರು ಇದರ ಬಗ್ಗೆ ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು. ಇವತ್ತಿನ ವರೆಗೆ ಚಕಾರ ಎತ್ತಿಲ್ಲ. ನೀವು ಯಾರ ಪರ ಇದ್ದೀರಿ ಎಂದು ಕೇಳಿದರು. ಅದು 187 ಕೋಟಿ ಅಲ್ಲ; ಬರೀ 87 ಕೋಟಿ ಎಂದೇ ಮುಖ್ಯಮಂತ್ರಿಗಳು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಅಂದ ಮೇಲೆ ಸತ್ಯವನ್ನು ಒಪ್ಪಿಕೊಂಡರಲ್ಲವೇ? ಈ ಸತ್ಯ ಒಪ್ಪಿಕೊಳ್ಳಲು ಖರ್ಗೆಜೀ ಅವರಿಗೆ ಏನಾಗಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.

    ಆತ್ಮಹತ್ಯೆ ಪತ್ರ ಬರೆದಿಟ್ಟು ಚಂದ್ರಶೇಖರ್ ಅವರು ತೀರಿಕೊಂಡರು. ಇನ್ನೂ ಅನೇಕರು ಪ್ರಾಣತ್ಯಾಗ ಮಾಡಿದ್ದಾರೆ. ಎಸ್‍ಐ ಪರಶುರಾಂ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ, ಮನೆಯವರಿಗೆ ಕೆಲಸ ಕೊಡುವುದಾಗಿ ಗೃಹಸಚಿವರೇ ತಿಳಿಸಿದ್ದರು. ಇಲ್ಲಿನವರೆಗೆ ಕೂಡ ಒಂದೇ ಒಂದು ನಯಾಪೈಸೆ ಕೊಟ್ಟಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು.

    ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಗುರುವಾರ ಮಾತನಾಡಿದ ದೇವೇಗೌಡರು, ಲೋಕಸಭೆಯಲ್ಲಿ ಬಿಜೆಪಿಗೆ ಸಿಕ್ಕಿರುವುದು 240 ಸ್ಥಾನಗಳಷ್ಟೇ ಎಂದು ಕಾಂಗ್ರೆಸ್‌ ನಾಯಕರು ಲೇವಡಿ ಮಾಡುತ್ತಿದ್ದಾರೆ. ಆದರೆ, ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್‌ 136 ಸ್ಥಾನಗಳನ್ನು ಗೆದ್ದುಕೊಂಡಿದೆ. ಅದರಿಂದ ಉಪಯೋಗವೇನು? ಕರ್ನಾಟಕದಲ್ಲಿ ಇರುವುದು ಅತ್ಯಂತ ಭ್ರಷ್ಟ ಸರಕಾರ ಎಂದು ಗುಡುಗಿದ್ದರು.

  • ದಲಿತ ಯುವತಿಗೆ ನಿಂದನೆ – ಅಥಣಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ವಿರುದ್ಧ ಎಫ್‌ಐಆ‌ರ್

    ದಲಿತ ಯುವತಿಗೆ ನಿಂದನೆ – ಅಥಣಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ವಿರುದ್ಧ ಎಫ್‌ಐಆ‌ರ್

    ಚಿಕ್ಕೋಡಿ : ದೂರು ಕೊಡಲು ಪೊಲೀಸ್ ಠಾಣೆಗೆ ಬಂದ ದಲಿತ ಯುವತಿಯೊಬ್ಬಳಿಗೆ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ (DySP) ಪ್ರಶಾಂತ್ ಮುನ್ನೋಳಿ (Prashant Munnolli) ಮತ್ತು ಪೊಲೀಸ್ ಪೇದೆ ಸದಾಶಿವ ಪಾಟೀಲ್‌ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.

    ಅಥಣಿ ಪಟ್ಟಣದ ಆಸ್ಪತ್ರೆಯೊಂದರ ವೈದ್ಯರಾಗಿರುವ ಸಾಗರ ಭಾವಿ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕಳೆದ ಆರು ತಿಂಗಳಿಂದ ನಿರಂತರ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕೊನೆಗೆ ಮದುವೆಯಾಗುವುದಿಲ್ಲವೆಂದು ಹೇಳಿದ್ದಾನೆ ಎಂದು ಆರೋಪಿಸಿ ಯುವತಿಯು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದನ್ನೂ ಓದಿ: ಕರ್ನಾಟಕವನ್ನ ಲೂಟಿ ಹೊಡೀತಿದ್ದಾರೆ.. ರಕ್ಷಣೆ ಮಾಡಿ – ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ

     

    ದೂರು ನೀಡಿದ ಬಳಿಕ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಡಿವೈಎಸ್‌ಪಿ ಕಚೇರಿಗೆ ಹೋದಾಗ ಪ್ರಶಾಂತ್ ಮುನ್ನೋಳ್ಳಿ ಮತ್ತು ಪೊಲೀಸ್ ಪೇದೆ ಸದಾಶಿವ ಪಾಟೀಲ್ ಜಾತಿ ನಿಂದನೆ ಮಾಡಿ ಯುವತಿಯನ್ನು ಠಾಣೆಯಿಂದ ಹೊರಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಉಪಚುನಾವಣೆ ಬಳಿಕ ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಹೈಕಮಾಂಡ್‌ನಿಂದ ಸೂಚನೆ – ಜನಾರ್ದನರೆಡ್ಡಿ

    ನೊಂದ ಯುವತಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ವಿವರಿಸಿದಾಗ ಡಿವೈಎಸ್‌ಪಿ ಮತ್ತು ಪೊಲೀಸ್ ಪೇದೆ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅಥಣಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

     

  • ಮೀಸಲಾತಿ ಸ್ಥಗಿತ ಬಗ್ಗೆ ರಾಹುಲ್ ಹೇಳಿಕೆ – ದಲಿತರ ಹಣ ನುಂಗಿ ಹೀಗೆ ಮಾತಾಡುವ ಕಾಂಗ್ರೆಸಿಗರು ಪಾಪಿಗಳು: ಛಲವಾದಿ

    ಮೀಸಲಾತಿ ಸ್ಥಗಿತ ಬಗ್ಗೆ ರಾಹುಲ್ ಹೇಳಿಕೆ – ದಲಿತರ ಹಣ ನುಂಗಿ ಹೀಗೆ ಮಾತಾಡುವ ಕಾಂಗ್ರೆಸಿಗರು ಪಾಪಿಗಳು: ಛಲವಾದಿ

    ಬೆಂಗಳೂರು: ರಾಹುಲ್ ಗಾಂಧಿಯವರ (Rahul Gandhi) ಹೇಳಿಕೆಯಿಂದ ಕಾಂಗ್ರೆಸ್ (Congress) ಪಕ್ಷವು ದಲಿತ (Dalit) ವಿರೋಧಿ ಮತ್ತು ಮೀಸಲಾತಿ ವಿರೋಧಿ ಎಂಬುದು ಸಾಬೀತಾಗಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ವಿಶ್ಲೇಷಿಸಿದರು.

    ಸ್ವಾತಂತ್ರ್ಯ ಉದ್ಯಾನವನದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದೇಶದ ಪ್ರಥಮ ಪ್ರಧಾನಿ ನೆಹರೂ ಅವರು ತಾವು ಮೀಸಲಾತಿ (Reservation) ವಿರೋಧಿ ಎಂದಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿಯವರೂ ಅದನ್ನೇ ಮುಂದುವರೆಸಿದ್ದರು. ಈಗ ರಾಹುಲ್ ಗಾಂಧಿಯವರು ಈ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದು ಟೀಕಿಸಿದರು. ನೆಹರೂ- ಇಂದಿರಾ ಗಾಂಧಿ ಕುಟುಂಬವು ಮೀಸಲಾತಿ ವಿರೋಧಿ ಪರಂಪರೆಯನ್ನು ಹೊಂದಿದೆ ಎಂದು ಆಕ್ಷೇಪಿಸಿದರು.

    1961ರಲ್ಲಿ ನೆಹರೂ ಅವರು ಈ ದೇಶದಲ್ಲಿ ಯಾವುದೇ ರೀತಿಯ ಮೀಸಲಾತಿಗಳಿಗೆ (Reservation) ತಾವು ವಿರುದ್ಧ ಇರುವುದಾಗಿ ತಿಳಿಸಿದ್ದರು. ಮೀಸಲಾತಿಯಿಂದ ಅಧಿಕಾರ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಕುಂಠಿತ ಆಗಲಿದೆ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು, ನೆಹರೂ ಅವರು ಆ ಕಾಲದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೀಸಲಾತಿ ವಿರೋಧಿಸಿ ಬರೆದ ಪತ್ರವನ್ನು ಸದನದಲ್ಲಿ ಪ್ರಸ್ತಾಪಿಸಿ ಪತ್ರವನ್ನು ಪ್ರದರ್ಶನ ಮಾಡಿದ್ದಾರೆ ಎಂದು ಛಲವಾದಿ ವಿವರಿಸಿದರು. ಇದನ್ನೂ ಓದಿ: ದಲಿತ ವಿಕಲಚೇತನ ವ್ಯಕ್ತಿಗೆ ಹಂಚಿಕೆಯಾದ ಜಾಗದಲ್ಲಿ ಸಿದ್ದರಾಮಯ್ಯ ಮನೆ: ಹೆಚ್‌ಡಿಕೆ ಬಾಂಬ್‌

    ನಂತರ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅದೇರೀತಿ ನಡೆದುಕೊಂಡಿದ್ದರು. ಈಗ ರಾಹುಲ್ ಗಾಂಧಿಯವರು ಅದೇ ಮನೋಭಾವವನ್ನು ಪ್ರದರ್ಶನ ಮಾಡಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 50 ಸೀಟನ್ನೂ ಗೆದ್ದಿರಲಿಲ್ಲ. ಆಗ ಕೇವಲ ಸದನದ ನಾಯಕರಾಗಲು ಖರ್ಗೇಜೀ ಅವರಿಗೆ ಆ ಸ್ಥಾನ ಕೊಟ್ಟಿದ್ದರು. 2019ರಲ್ಲೂ ಕಾಂಗ್ರೆಸ್ ಅಧಿಕೃತ ವಿಪಕ್ಷ ಆಗಲಿಲ್ಲ. ಆಗ ಪಶ್ಚಿಮ ಬಂಗಾಳದ ಚೌಧರಿಯನ್ನು ಸದನದ ನಾಯಕರನ್ನಾಗಿ ಮಾಡಿದ್ದರು. ಈಗ ಅಧಿಕೃತ ವಿಪಕ್ಷ ಸ್ಥಾನ ಲಭಿಸಿದಾಗ ಅವರನ್ನೆಲ್ಲ ದೂರ ಮಾಡಿ ತಾವೇ ಆ ಸ್ಥಾನ ಪಡೆದಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

    ಬಿಜೆಪಿ ದಲಿತ ವಿರೋಧಿ ಎನ್ನುವ ಕಾಂಗ್ರೆಸ್ಸಿನ ಸಚಿವರು ಈಗ ಯಾರು ದಲಿತ ವಿರೋಧಿ ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಿದೆ ಎಂದು ಸವಾಲು ಹಾಕಿದರು. ಮೀಸಲಾತಿ ಹೆಚ್ಚಿಸಿದವರು ನಾವು, ನೀವು ದಲಿತ ವಿರೋಧಿಗಳು ಮತ್ತು ಮೀಸಲಾತಿ ವಿರೋಧಿಗಳು. ಕಾಂಗ್ರೆಸ್ಸಿನವರು ಪಾಪಿಗಳಲ್ಲವೇ ಎಂದು ಪ್ರಶ್ನಿಸಿದರು.

    ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದಲಿತರಿಗೆ ಮೀಸಲಿಟ್ಟ, ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಗಂಗಾ ಕಲ್ಯಾಣ ಯೋಜನೆಯಿಂದ ಆರಂಭಿಸಿ, ಅವರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಚುನಾವಣೆಗೆ ನೇರವಾಗಿ ಬಳಸಿದ್ದೀರಲ್ಲವೇ? ದಲಿತರ ಹಣ ತಿನ್ನಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಪಾಪದವರ ಹಣ ತಿಂದ ಎಂಥ ಪಾಪಿಗಳು ನೀವು ಕಾಂಗ್ರೆಸ್‍ನವರು. ನೀವು ಪಾಪಿಗಳಲ್ಲವೇ? ಉತ್ತರ ಕೊಡಿ ಎಂದು ಛಲವಾದಿ ಆಗ್ರಹಿಸಿದರು.

    ರಾಹುಲ್‌ ಗಾಂಧಿ ಹೇಳಿದ್ದೇನು?
    ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಜಾರ್ಜ್‌ಟೌನ್‌ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದ ನಡೆಸಿದರು. ಮೀಸಲಾತಿಯು ಎಷ್ಟು ಕಾಲ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ, ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದಾಗ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಕಾಂಗ್ರೆಸ್ ಪಕ್ಷವು ಆಲೋಚನೆ ಮಾಡಲಿದೆ. ಈಗ ಸಮಾನತೆಯ ಪರಿಸ್ಥಿತಿ ಇಲ್ಲ ಎಂದು ಅವರು ಉತ್ತರಿಸಿದ್ದರು.

  • ದಲಿತ ಯುವಕನ ಕೈ ಕತ್ತರಿಸಿದ ರೌಡಿಶೀಟರ್‌ಗಳ ಕಾಲಿಗೆ ಕನಕಪುರ ಪೊಲೀಸರಿಂದ ಗುಂಡೇಟು

    ದಲಿತ ಯುವಕನ ಕೈ ಕತ್ತರಿಸಿದ ರೌಡಿಶೀಟರ್‌ಗಳ ಕಾಲಿಗೆ ಕನಕಪುರ ಪೊಲೀಸರಿಂದ ಗುಂಡೇಟು

    ರಾಮನಗರ: ಬೆಳ್ಳಂಬೆಳಿಗ್ಗೆ ರೌಡಿಶೀಟರ್‌ಗಳ (Rowdy Sheeter) ಮೇಲೆ ಕನಕಪುರ ನಗರ ಪೊಲೀಸರು (Kanakapura City Police) ಗುಂಡಿನ ದಾಳಿ ನಡೆಸಿದ್ದಾರೆ.

    ಸಿಪಿಐ ಮಿಥುನ್ ಶಿಲ್ಪಿ ಹಾಗೂ ಪಿಎಸ್‌ಐ ಮನೋಹರ್ ಅವರು ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

    ಕಳೆದ ವಾರ ಕನಕಪುರ ತಾಲೂಕಿನ ಮಳಗಾಳು ಗ್ರಾಮದ ದಲಿತ (Dalit) ಯುವಕ ಅನೀಶ್ ಅವರ ಎಡಗೈ ಕತ್ತರಿಸಿ ಈ ರೌಡಿ ಶೀಟರ್‌ಗಳು ಪರಾರಿಯಾಗಿದ್ದರು. ಆರೋಪಿಗಳ ಬಂಧಿಸುವಂತೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದನ್ನೂ ಓದಿ: ಮುಷರಫ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಮುಂದಾದ ಕೇರಳ ಬ್ಯಾಂಕ್‌ ನೌಕರರ ಸಂಘ!

    ಇಂದು ಖಚಿತ ಮಾಹಿತಿ ಪಡೆದು ಇಂದು ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಕಗ್ಗಲೀಪುರದ ವ್ಯಾಲಿ ಸ್ಕೂಲ್ ರೋಡ್ ಬಳಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

    ಆರೋಪಿಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಕುಮಾರ್ ಅವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ರೋಹಿತ್‌ ವೆಮುಲಾ ದಲಿತ ವಿದ್ಯಾರ್ಥಿಯಲ್ಲ – ತನಿಖೆ ಪೂರ್ಣ, ಹೈಕೋರ್ಟ್‌ಗೆ  ಅಂತಿಮ ವರದಿ ಸಲ್ಲಿಕೆ

    ರೋಹಿತ್‌ ವೆಮುಲಾ ದಲಿತ ವಿದ್ಯಾರ್ಥಿಯಲ್ಲ – ತನಿಖೆ ಪೂರ್ಣ, ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಕೆ

    – ಎಲ್ಲಾ ಆರೋಪಿಗಳಿಗೆ ಕ್ಲೀನ್‌ ಚಿಟ್‌
    – ತೆಲಂಗಾಣ ಪೊಲೀಸರಿಂದ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ

    ಹೈದರಾಬಾದ್‌: ರೋಹಿತ್‌ ವೆಮುಲಾ (Rohit Vemula) ದಲಿತ ವಿದ್ಯಾರ್ಥಿಯಲ್ಲ. ತನ್ನ ಜಾತಿಯ (Caste)  ಗುರುತು ಬಹಿರಂಗವಾಗಬಹುದು ಎಂಬ  ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತೆಲಂಗಾಣ ಪೊಲೀಸರು (Telangana Police)  ಹೈಕೋರ್ಟ್‌ಗೆ ತಿಳಿಸಿ ಪ್ರಕರಣದ ತನಿಖೆಯನ್ನು ಕೊನೆಗೊಳಿಸಿದ್ದಾರೆ.

    2016ರ ಜನವರಿಯಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಆತ್ಮಹತ್ಯೆ ಬಳಿಕ ವಿಶ್ವವಿದ್ಯಾನಿಲಯಗಳಲ್ಲಿ ದಲಿತರ ಮೇಲಿನ ತಾರತಮ್ಯದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು.

    ವೆಮುಲಾ ಕುಟುಂಬ ದಲಿತರು (Dalit) ಎಂಬುದನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳು ಸಿಗದ ಕಾರಣ ಪೊಲೀಸರು ಈಗ ಪ್ರಕರಣದ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ. ವೆಮುಲಾ ಕುಟುಂಬದ ಜಾತಿ ಪ್ರಮಾಣ ಪತ್ರ ನಕಲಿಯಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅಂತಿಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ರಾಯ್‌ಬರೇಲಿ ನಂಟು – ಇಲ್ಲಿದೆ ಕುತೂಹಲಕಾರಿ ಘಟ್ಟಗಳು

    ಹೈಕೋರ್ಟ್‌ ಈಗ ಕೆಳ ನ್ಯಾಯಾಲಯದಲ್ಲಿ ಈ ವರದಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುವಂತೆ  ವೆಮುಲಾ ಕುಟುಂಬಸ್ಥರಿಗೆ ಸೂಚಿಸಿದೆ.

    ಸಿಕಂದರಾಬಾದ್‌ನ ಮಾಜಿ ಸಂಸದ ಬಂಡಾರು ದತ್ತಾತ್ರೇಯ, ಎಂಎಲ್‌ಸಿ ಎನ್. ರಾಮಚಂದರ್ ರಾವ್, ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾ ರಾವ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಎಬಿವಿಪಿ ಮುಖಂಡರು ಸೇರಿದಂತೆ ಹಲವಾರನ್ನು ಪ್ರಕರಣದ ಆರೋಪಿಗಳನ್ನಾಗಿ ಮಾಡಲಾಗಿತ್ತು.ಈಗ ಪೊಲೀಸರು ಎಲ್ಲರನ್ನು ಆರೋಪದಿಂದ ಕೈ ಬಿಟ್ಟಿದ್ದಾರೆ.

    ರೋಹಿತ್ ಅವರ ಸಹೋದರ ರಾಜಾ ವೇಮುಲಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಇದೊಂದು ಅಸಂಬದ್ಧ ವರದಿ. ನನ್ನ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೇ 4 ರಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಲು ಕುಟುಂಬ ಮುಂದಾಗಿದೆ. 2017 ರಲ್ಲಿ ಪೊಲೀಸರು ತನಿಖೆಯನ್ನು ನಿಲ್ಲಿಸಿದ್ದಾರೆ ಮತ್ತು ಜಾತಿ ದೃಢೀಕರಣದ ವಿಷಯದಲ್ಲಿ 15 ಸಾಕ್ಷಿಗಳ ಹೇಳಿಕೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಅವರು ಟೀಕಿಸಿದರು. ಇದನ್ನೂ ಓದಿ: ಚುನಾವಣೆ ಕಾರಣಕ್ಕೆ ಮೇ 7 ರಂದು ಕೇಜ್ರಿವಾಲ್‌ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ: ಸುಪ್ರೀಂ

    2015ರಲ್ಲಿ ನಡೆದ ಪ್ರಕರಣ ಏನು? ಆರೋಪ ಏನು?
    26 ವರ್ಷದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಸೇರಿದಂತೆ ವಿವಿಯ ಐದು ವಿದ್ಯಾರ್ಥಿಗಳು ಪ್ರತಿಭಟನೆಯೊಂದರ ವೇಳೆ ಎಬಿವಿಪಿ ವಿದ್ಯಾರ್ಥಿ ನಾಯಕರ  ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ನಂತರ ಐವರನ್ನೂ ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ವಿವಿ ವಿಚಾರಣೆ ಬಳಿಕ ರೋಹಿತ್ ಸೇರಿ ಎಲ್ಲರನ್ನೂ ಆರೋಪ ಮುಕ್ತಗೊಳಿಸಲಾಗಿತ್ತು.

    ಸಿಕಂದರಬಾದ್ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ, ವಿವಿ ಜಾತಿವಾದಿಗಳ, ಉಗ್ರವಾದಿಗಳ, ದೇಶವಿರೋಧಿ ರಾಜಕೀಯದ ಬೀಡಾಗಿದ್ದು, ಎಬಿವಿಪಿ ಮುಖಂಡನ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳದೆ ವಿವಿ ಮೂಕಪ್ರೇಕ್ಷಕನಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಗೆ ಪತ್ರ ಬರೆದು ದೂರು ನೀಡಿದ್ದರು.

    ಈ ಪತ್ರದ ಬಳಿಕ ಮಾನವ ಸಂಪನ್ಮೂಲ ಸಚಿವಾಲಯ ವಿವಿಗೆ ಪತ್ರ ಬರೆದು ವಿದ್ಯಾರ್ಥಿಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನೆ ಮಾಡಿತ್ತು. ಪತ್ರದ ಹಿನ್ನೆಲೆಯಲ್ಲಿ ವಿವಿ ಡಿ. 21ರಂದು ರೋಹಿತ್ ಮತ್ತು ಇತರ ನಾಲ್ವರನ್ನು ಅಮಾನತುಗೊಳಿಸಿ, ಹಾಸ್ಟೆಲ್ ಮತ್ತು ಕೆಫೆಟೇರಿಯಾದಿಂದಲೂ ಹೊರ ಹಾಕಿತ್ತು. ಅಮಾನತು ಮಾಡಿದ್ದಕ್ಕೆ 2016ರ ಜನವರಿ 17 ರಂದು ರೋಹಿತ್‌ ವೆಮುಲಾ ಮನನೊಂದು ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷಗಳು ದೇಶವ್ಯಾಪಿ ಪ್ರತಿಭಟನೆ ನಡೆಸಿದ್ದವು.

    ರೋಹಿತ್‌ ವೆಮುಲಾ ಪಿಎಚ್‌ಡಿ ಸಂಶೋಧನೆ ಮಾಡುತ್ತಿದ್ದಾಗ ಪ್ರತಿ ತಿಂಗಳು 25 ಸಾವಿರ ರೂ. ಫೆಲೋಶಿಪ್‌ ಪಡೆಯುತ್ತಿದ್ದರು. ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳ್ಳದ ಕಾರಣ ವೆಮುಲಾಗೆ ಬರುತ್ತಿದ್ದ ಫೆಲೋಶಿಪ್‌ ನಿಲ್ಲಿಸಲಾಗಿತ್ತು.

  • ಯಾದಗಿರಿಯಲ್ಲಿ ಯುವಕರಿಂದ ಮನೆ ಮುಂದೆಯೇ ದಲಿತನ ಹತ್ಯೆ

    ಯಾದಗಿರಿಯಲ್ಲಿ ಯುವಕರಿಂದ ಮನೆ ಮುಂದೆಯೇ ದಲಿತನ ಹತ್ಯೆ

    – 18 ಗಂಟೆಗಳ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ

    ಯಾದಗಿರಿ: ಅನ್ಯಕೋಮಿನ ಯುವಕನಿಂದ ದಲಿತ (Dalit) ಯುವಕನ‌ ಹತ್ಯೆಯಾಗಿರುವ ಘಟನೆ ಯಾದಗಿರಿ (Yadagiri) ನಗರದ ಶಹಾಪೂರ ಪೇಟ್ ಬಡಾವಣೆಯಲ್ಲಿ ನಡೆದಿದೆ.

    ರಾಕೇಶ್ (22) ಕೊಲೆಯಾಗಿರುವ ಯುವಕನಾಗಿದ್ದು, ಫಯಾಜ್ ಹಾಗೂ ಆಸೀಫ್‌ ಕೊಲೆ ಮಾಡಿರುವ ಆರೋಪಿಗಳು. ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಮನೆ ಮುಂದೆಯೇ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ರಾಕೇಶ್‌ ಕುಟುಂಬಸ್ಥರು ಹೇಳಿದ್ದಾರೆ. ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನೇಹಾ ಹತ್ಯೆಗೆ ವ್ಯಾಪಕ ಖಂಡನೆ – ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ; ವಿದ್ಯಾರ್ಥಿಗಳಿಂದಲೂ ಬೆಂಬಲ

    ರಾಕೇಶ್ ಕೊಲೆ ಪ್ರಕರಣವನ್ನ ಮರೆಮಾಚಲು ಪೊಲೀಸ್ ಇಲಾಖೆ ಯತ್ನ ನಡೆಸಿದೆ. ತಡರಾತ್ರಿ ಕೊಲೆಯಾಗಿದ್ದರೂ ಪೊಲೀಸರು ಕೇಸ್ ದಾಖಲಿಸಿಕೊಂಡಿಲ್ಲ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

    ಎಫ್‌ಐರ್‌ ಕಾಫಿಯಲ್ಲಿರುವ ದೂರಿನ ವಿವರ

    ಈಗ ಹಿಂದೂ ಯುವಕನ ಕುಟುಂಬಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬೆಂಗಾವಲಾಗಿ ನಿಂತುಕೊಳ್ಳುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ‌. ಕೂಡಲೇ ಅಲರ್ಟ್ ಆದ ಪೊಲೀಸರು ಕೊಲೆ ನಡೆದ 18 ಗಂಟೆಗಳ ಬಳಿಕ ಕೊಲೆಯಾದ ಯುವಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನವೇ ಗೆಲುವಿನ ಖಾತೆ ತೆರೆದ ಬಿಜೆಪಿ!

    ಖುದ್ದು ಎಸ್‌ಪಿ ಸಂಗೀತಾ ಜಿ ಅವರು ಸ್ಥಳದಲ್ಲೇ ನಿಂತು ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

     

  • ಹುಡುಗಿಗೆ ಬೈಕ್‌ನಲ್ಲಿ ಡ್ರಾಪ್‌ ಕೊಟ್ಟ ದಲಿತ ಯುವಕನಿಗೆ ಶಾದಿಮಹಲ್‌ನಲ್ಲಿ ಹಲ್ಲೆ – ಪೋಕ್ಸೋ ಕೇಸ್‌ ದಾಖಲು

    ಹುಡುಗಿಗೆ ಬೈಕ್‌ನಲ್ಲಿ ಡ್ರಾಪ್‌ ಕೊಟ್ಟ ದಲಿತ ಯುವಕನಿಗೆ ಶಾದಿಮಹಲ್‌ನಲ್ಲಿ ಹಲ್ಲೆ – ಪೋಕ್ಸೋ ಕೇಸ್‌ ದಾಖಲು

    ದಾವಣಗೆರೆ: ಹುಡುಗಿಯನ್ನು ದಲಿತ (Dalit) ಯುವಕನೊಬ್ಬ ಬೈಕ್‌ನಲ್ಲಿ ಡ್ರಾಪ್‌ ಮಾಡಿದ್ದಕ್ಕೆ ಅತನ ವಿರುದ್ಧ ಪೋಕ್ಸೋ ಕೇಸ್‌ (POCSO Case) ದಾಖಲಾದ ಘಟನೆ ದಾವಣಗೆರೆ (Davanagere) ನಗರದ ಆರ್‌ಟಿಒ ಸರ್ಕಲ್‌ನಲ್ಲಿ ನಡೆದಿದೆ.

    ಜಾಲಿ ನಗರದ ಯುವಕ ಶ್ರೀನಿವಾಸ್‌ 17 ವರ್ಷದ ಪರಿಚಯಸ್ಥ ಹುಡುಗಿಯನ್ನು ಶುಕ್ರವಾರ ಸಂಜೆ 5:30ಕ್ಕೆ ಬೈಕಿನಲ್ಲಿ ಕುಳ್ಳಿರಿಸಿ ಹೋಗುತ್ತಿದ್ದಾಗ 20ಕ್ಕೂ ಹೆಚ್ಚು ಯುವಕರು ಆತನನ್ನು ಹಿಂಬಾಲಿಸಿ ತಡೆದು ನಿಲ್ಲಿಸಿದ್ದಾರೆ.

    ಆಕೆಗೆ ಹೇಗೆ ಬೈಕಿನಲ್ಲಿ ಡ್ರಾಪ್‌ ಕೊಡ್ತೀಯಾ ಎಂದು ಪ್ರಶ್ನಿಸಿ ಶಾದಿಮಹಲ್‌ಗೆ (Shadi Mahal) ಕರೆದೊಯ್ದು ರಾತ್ರಿಯಿಡಿ ಹಲ್ಲೆ ನಡೆಸಿದ್ದಾರೆ‌. ಮಧ್ಯರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.  ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದ್ದಕ್ಕೆ ಹಲ್ಲೆ – ಮುಸ್ಲಿಂ ಮಹಿಳೆಯನ್ನು ಭೇಟಿಯಾಗಿ ಧೈರ್ಯ ತುಂಬಿದ ಚೌಹಾಣ್‌

    ಬೆಳಗ್ಗೆ ಶ್ರೀನಿವಾಸ್ ಬೇರೆಯವರ ಬಳಿಯಿಂದ ಮೊಬೈಲ್‌ ಬಳಸಿ ಪೋಷಕರಿಗೆ ಪೋನ್‌ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಹಲ್ಲೆಗೊಳಗಾದ ಶ್ರೀನಿವಾಸ್‌ ಈಗ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ತಡರಾತ್ರಿ 2:30ರ ವೇಳೆಗೆ ಶ್ರೀನಿವಾಸ್ ವಿರುದ್ದ ಹುಡುಗಿಯ ತಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಮುಂಭಾಗ ಜಮಾಯಿಸಿದ ಹಿಂದೂ ಸಂಘಟನೆಯ ಮುಖಂಡರು, ಇದರಲ್ಲಿ ಯುವಕನದ್ದು ಯಾವುದೇ ತಪ್ಪಿಲ್ಲ. ಪರಿಚಯಸ್ಥ ಹುಡುಗಿ ಡ್ರಾಪ್‌ ಕೇಳಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಯುವಕನ‌ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

    ಈಗಾಗಲೇ ಯುವಕನಿಗೆ ನಿಶ್ಚಿತಾರ್ಥ ಆಗಿದೆ. ಯುವಕ ತಪ್ಪು ಮಾಡಿದ್ದರೇ ಪೊಲೀಸರಿಗೆ ಒಪ್ಪಿಸಬೇಕಾಗಿತ್ತು. ಖಾಸಗಿ ಶಾದಿ ಮಹಲ್‌ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದು ಎಷ್ಟು ಸರಿ? ಈ ಪೋಕ್ಸೋ ಕೇಸ್‌  ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.

    ದಲಿತ ಸಮುದಾಯಕ್ಕೆ ಸೇರಿದ ಯುವಕನಾಗಿರುವ ಕಾರಣ ಈಗ ಹಲ್ಲೆ ನಡೆಸಿದ ಯುವಕರ ವಿರುದ್ಧ ಅಟ್ರಾಸಿಟಿ ಕೇಸ್‌ ಹಾಕಲು ಸಿದ್ಧತೆ ನಡೆಯುತ್ತಿದೆ.

  • ಉಪ ಸಭಾಧ್ಯಕ್ಷರ ಬಗ್ಗೆ ದಲಿತ ಕಾರ್ಡ್ ಬಿಟ್ಟ ಸರ್ಕಾರಕ್ಕೆ ಕುಮಾರಸ್ವಾಮಿ ತಿರುಗೇಟು

    ಉಪ ಸಭಾಧ್ಯಕ್ಷರ ಬಗ್ಗೆ ದಲಿತ ಕಾರ್ಡ್ ಬಿಟ್ಟ ಸರ್ಕಾರಕ್ಕೆ ಕುಮಾರಸ್ವಾಮಿ ತಿರುಗೇಟು

    ಬೆಂಗಳೂರು: ಉಪ ಸಭಾಧ್ಯಕ್ಷರ ವಿಷಯದಲ್ಲಿ ದಲಿತ ಕಾರ್ಡ್ ಬಿಟ್ಟ ಕಾಂಗ್ರೆಸ್ (Congress) ಪಕ್ಷಕ್ಕೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ದಲಿತರ ಬಗ್ಗೆ ಇಷ್ಟು ಪ್ರೇಮ ತೋರಿಸುವ ಕಾಂಗ್ರೆಸ್ ಈಗಲಾದರೂ ದಲಿತ ಮುಖ್ಯಮಂತ್ರಿಯನ್ನು ಮಾಡಲಿ ಎಂದು ಸವಾಲು ಹಾಕಿದರು.

    ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಇಬ್ಬರು ಸಚಿವರು ಉಪ ಸಭಾಧ್ಯಕ್ಷರ ಬಗ್ಗೆ ಕಾಳಜಿ ತೋರಿಸಿದ್ದಾರೆ. ಆದರೆ ಅವರನ್ನು ಇನ್ನೊಬ್ಬ ಶಾಸಕರು ಬೇಡ ಎಂದ ಉಪ ಸಭಾಧ್ಯಕ್ಷರ ಹುದ್ದೆಯಲ್ಲಿ ಕೂರಿಸಿದ್ದಾರೆ. ಅವರಿಗಾಗಿ ಇವರು ಸಚಿವ ಸ್ಥಾನವನ್ನು ತ್ಯಾಗ ಮಾಡಲಿ ಎಂದು ಟಾಂಗ್ ನೀಡಿದ್ದಾರೆ.

    ಕೆಲವೊಮ್ಮೆ ಅಧಿಕಾರ ಮತ್ತು ಅಜ್ಞಾನ ಒಟ್ಟೊಟ್ಟಿಗೆ ಸಾಗುತ್ತವೆ. ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಜೀವಂತ ಸಾಕ್ಷಿ. 2018ರಲ್ಲಿ ಹೆಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಹೊರರಾಜ್ಯಗಳ ಗಣ್ಯರಿಗೆ ಆತಿಥ್ಯ ನೀಡಲು ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿರಲಿಲ್ಲವೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

    ಸ್ವತಃ ಮುಖ್ಯಮಂತ್ರಿಗಳು, ಸಂಸದೀಯ ಸಚಿವರು, ಇನ್ನೂ ಕೆಲ ಮಂತ್ರಿಗಳು ಸದನವನ್ನೇ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಆಗ ನಾನು ಕೇವಲ ನಿಯೋಜಿತ ಮುಖ್ಯಮಂತ್ರಿ. ರಾಜಭವನದ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಲ್ಲಾ ವ್ಯವಸ್ಥೆ ಮಾಡಿರುತ್ತದೆ ಎಂಬುದು ಇವರಿಗೆ ತಿಳಿಯದೆ?

    ಪ್ರಮಾಣವನ್ನೇ ಸ್ವೀಕರಿಸದ ನಿಯೋಜಿತ ಮುಖ್ಯಮಂತ್ರಿ ಯಾವುದಾದರೂ ಆದೇಶ ನೀಡಲು ಸಾಧ್ಯವೇ? ಇಷ್ಟಕ್ಕೂ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭಕ್ಕೂ, ಪಕ್ಷದ ಕಾರ್ಯಕ್ರಮಕ್ಕೂ ಹೋಲಿಕೆಯೇ? ಇಷ್ಟು ಸಾಮಾನ್ಯ ತಿಳಿವಳಿಕೆ ಸ್ವತಃ ಮುಖ್ಯಮಂತ್ರಿ ಹಾಗೂ ಸಂಸದೀಯ ಸಚಿವರಿಗೆ ಇಲ್ಲ ಎಂದರೆ ಏನು ಹೇಳುವುದು? ಇಂಡಿಯಾ ಒಕ್ಕೂಟದ ಸಭೆಗೆ ಬಂದ ಹೊರರಾಜ್ಯಗಳ ನಾಯಕರಿಗೆ ಐಎಎಸ್ ಅಧಿಕಾರಿಗಳನ್ನು ಚಾಕರಿಗೆ ಬಿಟ್ಟಿದ್ದು ತಪ್ಪು ಎಂಬುದು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಗಿಳಿಪಾಠ ಒಪ್ಪಿಸುವ ಸ್ವಯಂಘೋಷಿತ ಸಂವಿಧಾನ ತಜ್ಞರಿಗೆ ಶೋಭೆಯೇ?

    ಉಪ ಸಭಾಧ್ಯಕ್ಷರು ದಲಿತರೆನ್ನುವ ಟ್ರಂಪ್ ಕಾರ್ಡ್ ತೇಲಿಬಿಟ್ಟಿದೆ ಸರ್ಕಾರ. ದಲಿತರೆನ್ನುವ ಕಾರಣಕ್ಕೆ ಉಪ ಸಭಾಧ್ಯಕ್ಷರ ಮೇಲೆ ಅನುಕಂಪದ ಹೊಳೆ ಹರಿಸುವ ಕಾಂಗ್ರೆಸ್, ಅವರಿಗೆ ಸಚಿವ ಸ್ಥಾನವನ್ನೇ ನೀಡಬಹುದಿತ್ತು. ನೀಡಲಿಲ್ಲ ಯಾಕೆ? ಶಾಸಕ ಪುಟ್ಟರಂಗಶೆಟ್ಟಿ ಅವರು ಬೇಡವೇ ಬೇಡ ಎಂದ ಹುದ್ದೆಯನ್ನು ರುದ್ರಪ್ಪ ಲಮಾಣಿ ಅವರ ತಲೆಗೆ ಕಟ್ಟಿದ್ದು ಯಾಕೆ? ಇದನ್ನೂ ಓದಿ: ಮಾಜಿ ಸಿಎಂ ಬಿಎಸ್‌ವೈಗೆ ಗೌರವ ಡಾಕ್ಟರೇಟ್

    ಇಂಥ ಅತಿಯಾದ ಜಾಣತನ, ಭಂಡತನ ಯಾಕೆ? ಸಂಪುಟ ರಚನೆ ವೇಳೆ ರುದ್ರಪ್ಪ ಲಮಾಣಿ ಅವರು ದಲಿತರೆನ್ನುವುದು ಕಾಂಗ್ರೆಸ್‌ಗೆ ಗೊತ್ತಿರಲಿಲ್ಲವೇ? ದಲಿತ ಕಾರ್ಡ್ ಬಿಟ್ಟ ಪ್ರಿಯಾಂಕ್ ಖರ್ಗೆ ಅಥವಾ ಕೃಷ್ಣ ಭೈರೇಗೌಡರಿಗೆ ಅಷ್ಟು ದಲಿತ ಪ್ರೇಮ ಇದ್ದರೆ ಅವರ ಸಚಿವಗಿರಿಯನ್ನು ಲಮಾಣಿ ಅವರಿಗೇ ಬಿಟ್ಟುಕೊಟ್ಟು ಈ ಇಬ್ಬರಲ್ಲಿ ಒಬ್ಬರು ಉಪ ಸಭಾಧ್ಯಕ್ಷರಾಗಲಿ.

    ದಲಿತ ಮುಖ್ಯಮಂತ್ರಿ ಕೂಗು ಕಾಂಗ್ರೆಸ್ ಪಕ್ಷದಲ್ಲಿ ಬಹಳ ದಿನಗಳಿಂದ ಇದೆ. ಹಿಂದೆ ಖರ್ಗೆ ಅವರಿಗೆ ಸಿಎಂ ಹುದ್ದೆ ಕೈ ತಪ್ಪುವಂತೆ ಮಾಡಲಾಗಿತ್ತು. ಈಗ ದಲಿತ ಮುಖ್ಯಮಂತ್ರಿ ಮಾಡಲು ಇದೇ ಸಕಾಲ. ದಲಿತರನ್ನೇ ಸಿಎಂ ಮಾಡಲಿ. ನುಡಿದಂತೆ ನಡೆಯುವ ಪಕ್ಷಕ್ಕೆ ಇದು ಅಸಾಧ್ಯವೇನಲ್ಲ. ಅಲ್ಲವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್‌ ಕರೆನ್ಸಿ ಆಗುತ್ತಾ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]