Tag: Dale Steyn

  • ಧೋನಿಯಿಂದ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದ ಸ್ಟೇನ್

    ಧೋನಿಯಿಂದ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದ ಸ್ಟೇನ್

    ಮುಂಬೈ: ಎಂಎಸ್ ದೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಮತ್ತೆ ಅಲಂಕರಿಸಿದ ಬಳಿಕ ತಂಡದಲ್ಲಿ ಮತ್ತೆ ಹುರುಪು ಎದ್ದು ಕಾಣಿಸುತ್ತಿದೆ. ಐಪಿಎಲ್‌ನ 15ನೇ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ಸಿಎಸ್‌ಕೆ ತಂಡ 6 ಪಂದ್ಯಗಳಲ್ಲಿ ಸೋಲನ್ನನುಭವಿಸಿತ್ತು. ಬಳಿಕ ಸಿಎಸ್‌ಕೆ ತಂಡದ ಕ್ಯಾಪ್ಟನ್ಸಿಯನ್ನು ತೊರೆದ ರವೀಂದ್ರ ಜಡೇಜಾ ಸ್ಥಾನಕ್ಕೆ ಮತ್ತೆ ಧೋನಿ ಮರಳಿದ್ದಾರೆ.

    ಭಾನುವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪಂದ್ಯದಲ್ಲಿ ಧೋನಿ ತಂಡ 13 ರನ್‌ಗಳ ಜಯ ಸಾಧಿಸಿತು. ಸಿಎಸ್‌ಕೆ ಗೆಲುವಿನ ಸಂಭ್ರಮದಲ್ಲಿರುವಾಗಲೇ ದಕ್ಷಿಣ ಆಫ್ರಿಕಾದ ಆಟಗಾರ ಡೇಲ್ ಸ್ಟೇನ್ ಧೋನಿಯ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

    ಡೇಲ್ ಸ್ಟೇನ್ ತಮ್ಮ ಜೆರ್ಸಿಯಲ್ಲಿ ಧೋನಿಯ ಹಸ್ತಾಕ್ಷರ ಪಡೆದಿರುವ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇಬ್ಬರು ಕ್ರಿಕೆಟ್ ದಿಗ್ಗಜರು ತಮ್ಮ ಅಭಿಮಾನವನ್ನು ಹಂಚಿಕೊಂಡಿರುವ ಹೃದಯಸ್ಪರ್ಶಿ ಫೋಟೋಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಶತಕ ವಂಚಿತ ಗಾಯಕ್ವಾಡ್‌ – ಧೋನಿ ಟೀಂ ಗೆ 13 ರನ್‌ಗಳ ಜಯ

    ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸಿಎಸ್‌ಕೆ ತಂಡ ಹೈದರಾಬಾದ್ ವಿರುದ್ಧ 13 ರನ್‌ಗಳ ಜಯ ಸಾಧಿಸಿತು. ಚೆನ್ನೈ ನೀಡಿದ 203 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಹೈದರಾಬಾದ್ ತಂಡ 189 ರನ್ ಪೇರಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಅಂಪೈರ್‌ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು

     

  • ಕುಟುಂಬದ ಜೊತೆ ಸಮಯ ಕಳೆಯಲು ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ: ಸ್ಟೇನ್

    ಕುಟುಂಬದ ಜೊತೆ ಸಮಯ ಕಳೆಯಲು ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ: ಸ್ಟೇನ್

    ಜೋಹಾನಬರ್ಗ್: ವಿರಾಟ್ ಕೊಹ್ಲಿ ಅವರು ನಾಯಕತ್ವವನ್ನು ತ್ಯಜಿಸಿರುವುದು ಅವರು ಉತ್ತಮ ಆಟಗಾರನಾಗಿ ಮತ್ತೊಮ್ಮೆ ಹೊರಹೊಮ್ಮಲು ಹಾಗೂ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಾಲ ಕಳೆಯಲು ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ತಿಳಿಸಿದರು.

    ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‍ನ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಹ್ಲಿ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರೆ. ನಾಯಕತ್ವದ ಹೊಣೆಯಿದ್ದರೆ ಹೆಚ್ಚು ಕಾಲ ಕುಟುಂಬದೊಂದಿಗೆ ಇರಲು ಸಾಧ್ಯವಿಲ್ಲ. ಜೊತೆಗೆ ಅನೇಕ ಜವಾಬ್ದಾರಿಗಳಿರುತ್ತದೆ. ಅದಕ್ಕಾಗಿ ನಾಯಕತ್ವವನ್ನು ತ್ಯಜಿಸಿದ್ದಾರೆ ಎಂದು ಹೇಳಿದರು.

    ಸ್ಟೇನ್ ಆರ್‌ಸಿಬಿ ತಂಡದಲ್ಲಿ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಕೊಹ್ಲಿಯೊಂದಿಗೆ ಹಾಗೂ ಅವರ ವಿರುದ್ಧವಾಗಿ ಸಾಕಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಸ್ಟೇನ್, ವೃತ್ತಿಜೀವನದಲ್ಲಿ ನೀವು ಒಂದು ನಿರ್ದಿಷ್ಟ ಹಂತವನ್ನು ತಲುಪಲು ಪ್ರಾರಂಭಿಸಿದಾಗ ನಾಯಕತ್ವದಂತಹ ಒತ್ತಡಗಳು ಕಠಿಣವಾಗಬಹುದು. ಅದರಲ್ಲೂ ಭಾರತದಂತಹ ತಂಡದ ನಾಯಕತ್ವದಲ್ಲಿ ಹೆಚ್ಚು ಒತ್ತಡ ಇರುತ್ತದೆ. ಇದಕ್ಕಾಗಿ ಕೊಹ್ಲಿ ಉತ್ತಮವಾಗಿ ಆಡಲು ನಾಯಕತ್ವವನ್ನು ತ್ಯಜಿಸಿದ್ದಾರೆ ಎಂದು ತಿಳಿಸಿದರು.

    ನಾಯಕತ್ವ ಎನ್ನುವುದು ನಿಸ್ವಾರ್ಥದಿಂದ ಕೆಲಸ ಮಾಡುವುದಾಗಿದೆ. ತಂಡಕ್ಕಾಗಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಕುಟುಂಬದ ಬಗ್ಗೆ ಹೆಚ್ಚು ಸಮಯವನ್ನು ಕೊಡಲು ಸಾಧ್ಯವಿಲ್ಲ. ಈಗ ಕೊಹ್ಲಿ ಅವರು ಎಲ್ಲಾ ಮಾದರಿಯ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಬ್ಯಾಟಿಂಗ್‍ಗೆ ಹೆಚ್ಚು ಗಮನ ನೀಡಿ ಮತ್ತೆ ಉತ್ತಮ ಪ್ರದರ್ಶನ ತೋರಲು ಹಾಗೂ ಕುಟುಂಬದೊಂದಿಗೆ ಕಳೆಯಲು ಹೆಚ್ಚು ಗಮನಹರಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪನೆ

    ಪಾರ್ಲ್‍ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ 31 ರನ್‍ಗಳಿಂದ ಗೆಲುವು ಸಾಧಿಸಿತ್ತು. ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಕೊಹ್ಲಿ 52 ರನ್(63 ಎಸೆತ) ಗಳಿಸಿದ್ದರು. ಕೊಹ್ಲಿಯ ದಿಢೀರ್ ನಿರ್ಧಾರದಿಂದ ಅನೇಕರು ಆಶ್ವರ್ಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯ – ಆಫ್ರಿಕಾಗೆ ಜಯ

  • ಹೈದರಾಬಾದ್‌ಗೆ ಲಾರಾ ಬ್ಯಾಟಿಂಗ್, ಸ್ಟೇನ್ ಬೌಲಿಂಗ್ ಕೋಚ್

    ಹೈದರಾಬಾದ್‌ಗೆ ಲಾರಾ ಬ್ಯಾಟಿಂಗ್, ಸ್ಟೇನ್ ಬೌಲಿಂಗ್ ಕೋಚ್

    ಹೈದರಾಬಾದ್: ಐಪಿಎಲ್ 2022 ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ತಂಡಕ್ಕೆ ವೆಸ್ಟ್ ಇಂಡೀಸ್‌ನ ಲೆಜೆಂಡ್ ಬ್ಯಾಟ್ಸ್‌ಮನ್‌ ಬ್ರಿಯಾನ್ ಲಾರಾ ಮತ್ತು ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಡೇಲ್ ಸ್ಟೇನ್ ಅವರನ್ನು ಹೊಸ ಸಹಾಯಕ ಸಿಬ್ಬಂದಿಯಾಗಿ ನೇಮಕಮಾಡಿಕೊಂಡಿದೆ.

    ಬ್ರಿಯಾನ್ ಲಾರಾ ಎಸ್‌ಆರ್‌ಹೆಚ್ ತಂಡದ ತರಬೇತುದಾರರಾಗಿ ನೇಮಕವಾಗಿದ್ದಾರೆ. ಬ್ಯಾಟಿಂಗ್ ಕೋಚ್ ಮತ್ತು ಕಾರ್ಯಾತಂತ್ರದ ಸಲಹೆಗಾರರಾಗಿ ಅವರನ್ನು ನೇಮಕ ಮಾಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಮಾಹಿತಿ ನೀಡಿದೆ.   ಇದನ್ನೂ ಓದಿ: ಬಿಸಿಸಿಐಯನ್ನು ಟೀಕಿಸಿ ಕೊಹ್ಲಿ ಪರ ಅಫ್ರಿದಿ ಬ್ಯಾಟಿಂಗ್

    ಐಪಿಎಲ್‌ನಲ್ಲಿ ಹಲವು ತಂಡಗಳಿಗೆ ಆಡಿರುವ ಡೇಲ್ ಸ್ಟೇನ್ ಅವರನ್ನು ಹೈದರಾಬಾದ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ನೇಮಕಮಾಡಲಾಗಿದೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳಿಧರನ್ ಅವರು ಸ್ಪಿನ್ ಬೌಲಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.

    ಭಾರತ ತಂಡದ ಮಾಜಿ ಕ್ರಿಕೆಟಿಗ ಹೇಮಂತ್ ಬದಾನಿ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ಮತ್ತು  ಆಸ್ಟ್ರೇಲಿಯಾದ ಸೈಮನ್ ಕ್ಯಾಟಿಚ್ ಅವರನ್ನು ಸಹಾಯಕ ಕೋಚ್ ಆಗಿ ನೇಮಕ ಮಾಡಲಾಗಿದೆ. ಇದನ್ನೂ ಓದಿ: ಯುವತಿಯರ ಮದುವೆ ವಯಸ್ಸು 21ಕ್ಕೆ ಏರಿಕೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ: ಶೋಭಾ ಕರಂದ್ಲಾಜೆ

     

  • ಸಚಿನ್ 190 ರನ್‍ಗೆ ಎಲ್‍ಬಿ ಆಗಿದ್ರೂ ಪ್ರೇಕ್ಷಕರ ಭಯದಿಂದ ಅಂಪೈರ್ ಔಟ್ ನೀಡಿಲ್ಲ – ಸ್ಟೇನ್

    ಸಚಿನ್ 190 ರನ್‍ಗೆ ಎಲ್‍ಬಿ ಆಗಿದ್ರೂ ಪ್ರೇಕ್ಷಕರ ಭಯದಿಂದ ಅಂಪೈರ್ ಔಟ್ ನೀಡಿಲ್ಲ – ಸ್ಟೇನ್

    ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಸಚಿನ್ ದ್ವಿಶತಕ ಹೊಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಆದರೆ ಈ ಪಂದ್ಯದಲ್ಲಿ ಸಚಿನ್ 190 ರನ್ ಗಳಿಸಿದ್ದಾಗ ಔಟಾಗಿದ್ದರೂ ಅಂಪೈರ್ ಔಟ್ ನೀಡಲಿಲ್ಲ. ಅಂಪೈರ್ ಔಟ್ ನೀಡದ್ದಕ್ಕೆ ಕಾರಣ ಪ್ರೇಕ್ಷಕರು ಎಂದು ಆಫ್ರಿಕಾದ ವೇಗಿ ಡೇಲ್ ಸ್ಟೇನ್  ಹೇಳಿದ್ದಾರೆ.

    ಕೋವಿಡ್ 19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಟಗಾರು ಕ್ರೀಡಾ ವಾಹಿನಿಗಳ ಜೊತೆ ಮಾತನಾಡಿ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಜೇಮ್ಸ್ ಆಂಡರ್ಸನ್ ಅವರ ಜೊತೆ ಮಾತನಾಡಿದ ಸ್ಟೇನ್ ಸಚಿನ್ ದ್ವಿಶತಕ ಸಿಡಿಸುವ ಮೊದಲೇ ಔಟಾಗಿದ್ದರು. ಆದರೆ ಅಂಪೈರ್ ಇಯಾನ್ ಗೌಲ್ಡ್ ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಹೇಳಿದ್ದಾರೆ.

    ಗ್ವಾಲಿಯರ್ ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಮೊದಲ ದ್ವಿಶತಕ ಸಿಡಿಸಿದ್ದರು. ಈ ವೇಳೆ 190 ರನ್ ಗಳಿಸಿದ ಸಂದರ್ಭದಲ್ಲಿ ಸಚಿನ್ ಎಲ್‍ಬಿಯಾಗಿದ್ದರು. ಈ ವಿಚಾರ ಅಂಪೈರ್ ಇಯಾನ್ ಗೌಲ್ಡ್‍ಗೆ ತಿಳಿದಿತ್ತು. ಪ್ರೇಕ್ಷಕರ ಕೂಗಾಟಕ್ಕೆ ಹೆದರಿ ನಾಟೌಟ್ ನೀಡಿದ್ದರು. ಪಂದ್ಯ ಮುಗಿದ ಬಳಿಕ ನಾನು ನೇರವಾಗಿ ಅಂಪೈರ್ ಬಳಿ ಹೋಗಿ, ಯಾಕೆ ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಪ್ರಶ್ನಿಸಿದೆ. ಇದಕ್ಕೆ ಇಯಾನ್ ಗೌಲ್ಡ್, ಸುತ್ತಲೂ ಒಮ್ಮೆ ನೋಡಿ “ಔಟ್ ತೀರ್ಪು ನೀಡಿದ್ದರೆ ನಾನು ಹೋಟೆಲಿಗೆ ಮರಳುತ್ತಿರಲಿಲ್ಲ” ಎಂದು ಉತ್ತರಿಸಿದ್ದ ವಿಚಾರವನ್ನು ಈಗ ಸ್ಟೇನ್ ನೆನಪು ಮಾಡಿಕೊಂಡಿದ್ದಾರೆ.

    2010ರ ಫೆ. 24 ರಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 50 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿತ್ತು.

    ಸೆಹ್ವಾಗ್ 9, ದಿನೇಶ್ ಕಾರ್ತಿಕ್ 79, ಯೂಸೂಫ್ ಪಠಾನ್ 36, ಧೋನಿ ಔಟಾಗದೇ 68 ರನ್( 35 ಎಸೆತ, 7 ಬೌಂಡರಿ, 4 ಸಿಕ್ಸರ್) ಹೊಡೆದಿದ್ದರು. ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಸಚಿನ್ ಔಟಾಗದೇ 147 ಎಸೆತದಲ್ಲಿ 200 ರನ್ ಹೊಡೆದಿದ್ದರು. ಈ ವಿಶ್ವ ದಾಖಲೆಯ ಇನ್ನಿಂಗ್ಸ್ ನಲ್ಲಿ 3 ಸಿಕ್ಸರ್, 25 ಬೌಂಡರಿಯನ್ನು ಹೊಡೆದಿದ್ದರು. 100 ರನ್ ರನ್ ಗಳು ಬೌಂಡರಿ ಮೂಲಕವೇ ಬಂದಿತ್ತು. ಕಠಿಣ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 42.5 ಓವರ್ ಗಳಲ್ಲಿ 248 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ 153 ರನ್ ಗಳಿಂದ ಜಯಗಳಿಸಿತ್ತು.

  • ವಿಶ್ವಕಪ್‍ನಿಂದ ದಕ್ಷಿಣ ಆಫ್ರಿಕಾ ಔಟ್ – ಐಪಿಎಲ್‍ನತ್ತ ಬೊಟ್ಟು ಮಾಡಿದ ಡುಪ್ಲೆಸಿಸ್

    ವಿಶ್ವಕಪ್‍ನಿಂದ ದಕ್ಷಿಣ ಆಫ್ರಿಕಾ ಔಟ್ – ಐಪಿಎಲ್‍ನತ್ತ ಬೊಟ್ಟು ಮಾಡಿದ ಡುಪ್ಲೆಸಿಸ್

    ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್‍ನಿಂದಲೇ ತಂಡ ವಿಶ್ವಕಪ್‍ನಲ್ಲಿ ಹಿನ್ನಡೆ ಅನುಭವಿಸಲು ಕಾರಣ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಡುಪ್ಲೆಸಿಸ್ ಅಭಿಪ್ರಾಯ ಪಟ್ಟಿದ್ದಾರೆ.

    ದಕ್ಷಿಣ ಆಫ್ರಿಕಾ ಟೀಂ ಮ್ಯಾನೇಜ್‍ಮೆಂಟ್ ತಂಡದ ಕೆಲ ಆಟಗಾರರಿಗೆ ಶ್ರೀಮಂತ ಲೀಗ್ ಆಡಲು ಅನುಮತಿ ನೀಡಬಾರದಿತ್ತು ಎಂದು ಫ್ಲಾಫ್ ಡುಪ್ಲೆಸಿಸ್ ಹೇಳಿದ್ದಾರೆ.

    ಭಾನುವಾರ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 49 ರನ್ ಗಳ ಅಂತರದಿಂದ ಸೋಲುಂಡಿತ್ತು. ಪಂದ್ಯದ ಬಳಿಕ ಮಾತನಾಡಿದ ಡುಪ್ಲೆಸಿಸ್, ತಂಡದ ಸೋಲಿನ ಬಗ್ಗೆ ಸರಿಯಾದ ಉತ್ತರ ನೀಡಲಾಗುತ್ತಿಲ್ಲ. ವಿಶ್ವಕಪ್ ದೃಷ್ಟಿಯಿಂದ ನಾವು ಐಪಿಎಲ್ ಆಡಬಾರದಿತ್ತು. ಕನಿಷ್ಠ ತಂಡದ ಪ್ರಮುಖ ವೇಗಿಯಾಗಿದ್ದ ರಬಾಡರನ್ನು ಐಪಿಎಲ್‍ನಿಂದ ದೂರ ಉಳಿಸಿಕೊಳ್ಳಬೇಕಿತ್ತು ಎಂದಿದ್ದಾರೆ.

    ಆಟಗಾರರು ವಿಶ್ರಾಂತಿ ಇಲ್ಲದೇ ನಿರಂತರವಾಗಿ ಟೂರ್ನಿಗಳಲ್ಲಿ ಆಡಿದರೆ ಇಂತಹ ಫಲಿತಾಂಶವೇ ಎದುರಾಗುತ್ತದೆ. ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆ ಎದುರಿಸಿದ್ದು ಕೂಡ ಸೋಲಿಗೆ ಕಾರಣವಾಗಿದೆ. ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ನಮ್ಮ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದಿದ್ದಾರೆ.

    ಇತ್ತ ರಬಾಡ 6 ಪಂದ್ಯಗಳಿಂದ 6 ವಿಕೆಟ್ ಗಳನ್ನು ಮಾತ್ರವೇ ಪಡೆದಿದ್ದರು. ಬಹುಮುಖ್ಯ ಟೂರ್ನಿಯಲ್ಲೇ ರಬಾಡ ಮಿಂಚಲು ವಿಫಲವಾಗಿದ್ದು ದಕ್ಷಿಣ ಅಫ್ರಿಕಾ ತಂಡದ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡಿತ್ತು. ಆದರೆ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರಬಾಡ 12 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದರು. ಆದರೆ ಟೂರ್ನಿಯಲ್ಲಿ ಗಾಯಗೊಂಡಿದ್ದ ರಬಾಡ ಸರಿಯಾದ ವಿಶ್ರಾಂತಿ ಪಡೆಯದೆ ವಿಶ್ವಕಪ್‍ನಲ್ಲಿ ಭಾಗವಹಿಸಿದ್ದರು. ಅಲ್ಲದೇ ತಂಡದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಕೂಡ ಐಪಿಎಲ್‍ನಲ್ಲೇ ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದರು.

    ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಸೋಲುವ ಮೂಲಕ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದರೆ, ಇತ್ತ ಪಾಕ್ ಸೆಮಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ. ಇದುವರೆಗೂ 6 ಪಂದ್ಯಗಳನ್ನು ಆಡಿರುವ ಪಾಕಿಸ್ತಾನ 5 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ.