Tag: dakshina kashi

  • ದಕ್ಷಿಣ ಕಾಶಿ ಶಿವಗಂಗೆ ತೀರ್ಥ ಕಂಬದ ಬಳಿ ತೆಗೆದ ಚಂದನ್, ಕವಿತಾ ಫೋಟೋ ವೈರಲ್

    ದಕ್ಷಿಣ ಕಾಶಿ ಶಿವಗಂಗೆ ತೀರ್ಥ ಕಂಬದ ಬಳಿ ತೆಗೆದ ಚಂದನ್, ಕವಿತಾ ಫೋಟೋ ವೈರಲ್

    – ಶೂ ಧರಿಸಿ ನಿಂತ ಫೋಟೋಗೆ ಭಾರೀ ವಿರೋಧ
    – ಸೂಕ್ತ ಕ್ರಮಕ್ಕೆ ನೆಟ್ಟಿಗರು ಒತ್ತಾಯ

    ನೆಲಮಂಗಲ: ಪ್ರವಾಸಿ ಸ್ಥಳಗಳನ್ನು ಉಳಿಸುವುದು ಹಾಗೂ ಆ ಕ್ಷೇತ್ರದ ಪಾವಿತ್ರತೆ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆದರೆ ಇಂಥವುಗಳ ಬಗ್ಗೆ ಜಾಗೃತಿ ಮೂಡಿಸಬೇಕಾದವರೇ ಇಲ್ಲಿ ಸ್ವಲ್ಪ ಸಮಯದ ಮೋಜು ಮಸ್ತಿ ಮಾಡಿ ಎಲ್ಲವನ್ನೂ ಮಣ್ಣು ಪಾಲು ಮಾಡಿದ ಘಟನೆ ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶ್ರೀ ಕ್ಷೇತ್ರ ದಕ್ಷಿಣಕಾಶಿ ಶಿವಗಂಗೆಯ ಪವಿತ್ರ ಬೆಟ್ಟದ ತುತ್ತತುದಿಯ ತೀರ್ಥ ಕಂಬದ ಪ್ರಾಂಗಣವನ್ನು ಅಪವಿತ್ರ ಮಾಡಿದ ಆರೋಪ ಕಿರುತೆರೆ ನಟ ಹಾಗೂ ನಟಿ ಮೇಲೆ ಬಂದಿದೆ.

    ಕಿರುತೆರೆ ನಟಿ ಕವಿತಾ ಹಾಗೂ ನಟ ಚಂದನ್, ದಕ್ಷಿಣ ಕಾಶಿ ಶ್ರೀ ಕ್ಷೇತ್ರ ಶಿವಗಂಗೆ ಬೆಟ್ಟದಲ್ಲಿ ತೀರ್ಥ ಕಂಬದ ಬಳಿ ಶೂ ಧರಿಸಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಚಂದನ್ ತಮ್ಮ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಇದೀಗ ಈ ಫೋಟೋ ಭಾರೀ ವಿವಾದಕ್ಕೆ ಕಾರಣವಾಗಿದೆ. ನೆಲಮಂಗಲ ತಾಲೂಕಿನ ಶಿವಗಂಗೆಯ ಬೆಟ್ಟದ ತುತ್ತ ತುದಿಯಲ್ಲಿ ಧಾರಾವಾಹಿ ನಟರ ಮೋಜುಮಸ್ತಿ ಭಕ್ತರಿಗೆ ಬೇಸರ ಮೂಡಿಸಿದೆ.

    ದಕ್ಷಿಣಕಾಶಿ ಪುರಾಣ ಪ್ರಸಿದ್ಧ ಶ್ರೀ ಗಂಗಾಧರೇಶ್ವರ ಸ್ವಾಮಿ ನೆಲೆಸಿರುವ ಪುಣ್ಯ ಕ್ಷೇತ್ರ ಶಿವಗಂಗೆ. ಜನವರಿ 15ರ ಮಕರ ಸಂಕ್ರಾಂತಿಯ ದಿನ ಈ ತೀರ್ಥ ಕಂಬದಲ್ಲಿ ಉದ್ಭವಾದ ಜಲದಿಂದ, ಪ್ರಸಿದ್ಧ ಗಿರಿಜಾ ಕಲ್ಯಾಣವಾಗುತ್ತದೆ. ತೀರ್ಥೋದ್ಭವವಾಗುವ ಸ್ಥಳದಲ್ಲಿ ಇದೀಗ ಅಪವಿತ್ರವಾಗಿದೆ. ಪವಾಡ ರೀತಿಯಲ್ಲಿ ಗಂಗೆ ಉತ್ಪತ್ತಿಯಾಗುವ ಪವಿತ್ರ ಕ್ಷೇತ್ರದಲ್ಲಿ ಇದೀಗ ಅಪಚಾರದ ಮಾತು ಕೇಳಿಬರುತ್ತಿದೆ.

    ಕೊರೊನಾ ಸಮಯದಲ್ಲೂ ಬೆಟ್ಟದ ಮೇಲೆ ತಾರಾ ಜೋಡಿ ಮಸ್ತ್ ಎಂಜಾಯ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನಟ ನಟಿಯ ವಿರುದ್ಧ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದೆ. ದೇವರ ಮಹಿಮೆ ತಿಳಿಯದೆ ಶೂ ಧರಿಸಿ ಫೋಟೋ ತೆಗೆದುಕೊಂಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ದೇವಾಲಯದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ನಟ ನಟಿಯ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

  • ಕತ್ತಲ ಲೋಕದಲ್ಲಿ ಬಂಗಾರದ ದೀಪಗಳ ಸಾಲು

    ಕತ್ತಲ ಲೋಕದಲ್ಲಿ ಬಂಗಾರದ ದೀಪಗಳ ಸಾಲು

    ಕೋಲಾರದ ದಕ್ಷಿಣ ಕಾಶಿ ಅಂತರಗಂಗೆಯಲ್ಲಿ ಶಿವದೀಪೋತ್ಸವದ ಬೆಗರು

    ಕೋಲಾರ: ಜಿಲ್ಲೆಯ ದಕ್ಷಿಣ ಕಾಶಿ ಅಂತರಗಂಗೆಯ ಬೆಟ್ಟದಲ್ಲಿ ಹುಣ್ಣಿಮೆಯ ರಾತ್ರಿಯನ್ನು ಮತ್ತಷ್ಟು ಉಜ್ವಲಗೊಳಿಸಿದ್ದು ಶುಕ್ರವಾರದಂದು ನಡೆದ ದಕ್ಷಿಣಕಾಶಿ ಶ್ರೀಕಾಶಿವಿಶ್ವೇಶ್ವರಸ್ವಾಮಿ ದೇವಾಲಯದ ಶಿವದೀಪೋತ್ಸವ.

    ದಕ್ಷಿಣಕಾಶಿ ಶ್ರೀಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಶಿವದೀಪೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯ್ತು. ಈ ದೇವಾಲಯದ ವಿಶೇಷವೇನೆಂದ್ರೆ ಕಾಶಿಗೆ ಹೋಗದವರು ದಕ್ಷಿಣಕಾಶಿ ಅಂತರಗಂಗೆಗೆ ಬಂದು ಬಸವನ ಬಾಯಲ್ಲಿ ಕಾಶಿಯಿಂದಲೇ ಹರಿದು ಬರುವ ಆ ಗಂಗೆಯನ್ನು ಕುಡಿದು ಪುನೀತರಾಗುತ್ತಾರೆ. ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆ ದಿನದಂದು ಶಿವನು ರಾಕ್ಷಸರನ್ನು ಸಂಹರಿಸಿದ್ದನು ಎಂದು ಪುರಾಣದಲ್ಲಿದೆ. ಆ ಕಾರಣಕ್ಕೆ ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆ ದಿನದಂದು ಕಾಶಿ ವಿಶ್ವೇಶ್ವರನಿಗೆ ವಿಶೇಷವಾಗಿ ವಜ್ರಾಲಂಕಾರ ಮಾಡಿ ಶಿವ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನದಂದು ಬೆಟ್ಟದಲ್ಲಿ ಎತ್ತ ನೋಡಿದರತ್ತ ದೀಪಗಳ ಸಾಲು, ಇಲ್ಲಿ ಬಂದವರಿಗಂತೂ ಇದೇನು ಭೂ ಲೋಕವೋ ಇಲ್ಲಾ, ದೇವಲೋಕವೋ ಎಂಬ ಅನುಮಾನ. ಕತ್ತಲ ಲೋಕದಲ್ಲಿ ಬಂಗಾರದ ದೀಪಗಳು ಅಂತರಗಂಗೆಯ ಬೆಟ್ಟದಲ್ಲಿ ಪ್ರಜ್ವಲಿಸುತ್ತಿತ್ತು.

    ಕಳೆದ ಹಲವು ವರ್ಷಗಳಿಂದ ಪೊಲೀಸ್ ಪೇದೆ ಗೋಪಾಲ್ ಕಾಶಿವಿಶ್ವೇಶ್ವರನ ಅನುಗ್ರಹದಿಂದ ಅಂತರಗಂಗೆಯಲ್ಲಿ ಲಕ್ಷ ದೀಪೋತ್ಸವವನ್ನು ಮಾಡುವ ಮೂಲಕ ಶಿವನಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ವರ್ಷದ ಇಡೀ ಸಂಬಳವನ್ನು ತನ್ನ ಖರ್ಚಿಗೆ ಬೇಕಾದಷ್ಟು ಬಳಸಿಕೊಂಡು ಉಳಿದ ಸಂಬಳವನ್ನು ದೇವರ ಸೇವೆಗೆ ಮುಡುಪಾಗಿಟ್ಟಿದ್ದಾರೆ.

    ಈ ವಿಶೇಷ ದಿನದಂದು ಲಕ್ಷ ದೀಪ ಹಚ್ಚಿ ಶಿವನನ್ನು ಪ್ರಾರ್ಥನೆ ಮಾಡಿದ್ರೆ ಜನರ ಇಷ್ಟಾರ್ಥಗಳು ಈಡೇರುತ್ತವೆ ಅನ್ನೋ ನಂಬಿಕೆ ಇಲ್ಲಿದೆ. ಹಾಗಾಗಿ ಇಂಥಾದೊಂದು ಸುಂದರ ಕ್ಷಣಗಳನ್ನು ಸವಿಯಲು ಕೋಲಾರ ಸೇರಿದಂತೆ ಇತರ ತಾಲೂಕು ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಜನರು ಅಂತರಗಂಗೆ ಬೆಟ್ಟಕ್ಕೆ ಬಂದು ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಹಾಗೆಯೇ ಬಂದ ಸಾವಿರಾರು ಜನಕ್ಕೂ ಇಲ್ಲಿ ಪ್ರಸಾದ, ಕುಡಿಯುವ ನೀರು, ಸೇರಿದಂತೆ ಸಕಲ ವ್ಯವಸ್ಥೆಗಳನ್ನು ವ್ಯವಸ್ಥೆ ಮಾಡಲಾಗಿತ್ತು.

    ದೀಪೋತ್ಸವದ ಸುಂದರ ದೃಶ್ಯಗಳು ಎಂತಹವರನ್ನು ಮಂತ್ರ ಮುಗ್ಧಗೊಳಿಸಿತ್ತು, ಭಕ್ತಿಯ ಪರಾಕಾಷ್ಠೆ ಹುಕ್ಕಿ ಆಕಾಶದ ಬೆಳ್ಳಿ ಚುಕ್ಕಿಯ ಸಾಲಿನಂತಿದ್ದ ದೀಪಗಳ ಸಾಲು ಕಂಡು ಭಕ್ತಾಧಿಗಳು ಸಂತೋಷಪಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ

    ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ

    ಬೆಂಗಳೂರು: ಒಂದೆಡೆ ದಟ್ಟ ಮಂಜಿನಿಂದ ಆವೃತ್ತವಾಗಿರುವ ಬೆಟ್ಟ. ಮತ್ತೊಂದೆಡೆ ಬೆಟ್ಟ ಹತ್ತುತ್ತಿರುವ ಪ್ರವಾಸಿಗರ ದಂಡು. ಈ ದೃಶ್ಯಗಳೆಲ್ಲ ಕಂಡುಬಂದದ್ದು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಶಿವಗಂಗೆ ಬೆಟ್ಟದಲ್ಲಿ.

    ಚುಮುಚುಮು ಚಳಿಯಲ್ಲಿ ದಟ್ಟವಾದ ಮಂಜಿನ ಪ್ರಕೃತಿ ಸೌಂದರ್ಯವನ್ನು ಸವಿಯಲು, ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಪುಣ್ಯ ಕ್ಷೇತ್ರ ಶಿವಗಂಗೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.

    ಮಳೆಗಾಲ ಮುಗಿದು ಈಗಾಗಲೇ ಚಳಿಗಾಲ ಕೂಡ ಅಂತ್ಯದಲ್ಲಿದೆ. ಆದರೆ ಪ್ರವಾಸಿಗರ ತಾಣ ಹಾಗೂ ಪುಣ್ಯ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ಶಿವಗಂಗೆ ಬೆಟ್ಟದಲ್ಲಿ ದಟ್ಟ ಮಂಜು ಆವರಿಸುತ್ತಿದ್ದು ಚಾರಣಿಗರನ್ನ ಕೈಬೀಸಿ ಕರೆಯುತ್ತಿದೆ. ಪ್ರಕೃತಿ ಸೊಬಗನ್ನ ಸವಿಯಲು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಶಿವಗಂಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.

    ಈ ದಟ್ಟ ಮಂಜಿನಲ್ಲಿ ಬೆಟ್ಟದ ಮೇಲೆ ಹತ್ತುತ್ತಿದ್ದರೆ ಮೋಡದ ಒಳಗೆ ಓಡಾಡಿದ ರೀತಿಯಲ್ಲಿ ಅನುಭವವಾಗುತ್ತದೆ. ಈ ರೀತಿಯ ಮಂಜಿನ ಅನುಭವ ಪಡೆಯಬೇಕೆಂದರೆ ಮಲೆನಾಡು ಅಥವಾ ಕರಾವಳಿ ಪ್ರದೇಶಕ್ಕೆ ಹೋಗಬೇಕಿತ್ತು. ಆದ್ರೆ ಬೆಂಗಳೂರಿಗೆ ಕೂಗಳತೆ ದೂರದಲ್ಲಿಯೇ ಈ ಪ್ರಕೃತಿ ಸೊಬಗನ್ನು ಸವಿಯಲು ಅವಕಾಶ ಸಿಕ್ಕಿರುವುದು ಪ್ರವಾಸಿಗರಿಗೆ ಸಂತಸ ತಂದಿದೆ.

     

    ಬಂಡೆಗಳು ತೇವಗೊಳ್ಳುವ ಹಿನ್ನೆಲೆಯಲ್ಲಿ ಕೆಲವರು ಸಂಪೂರ್ಣ ಬೆಟ್ಟ ಹತ್ತಲಾಗದೆ ಅರ್ಧಕ್ಕೆ ಕೆಳಗಿಯುತ್ತಾರೆ. ಈ ಪ್ರಕೃತಿಯ ವಿಸ್ಮಯ ನೋಡುಗರನ್ನ ಕೈ ಬೀಸಿ ಕರೆಯುತ್ತಿದೆ ಅಂತಾರೆ ಪ್ರವಾಸಿಗರು.