Tag: daiva

  • ದೈವಾರಾಧನೆ ಪವಿತ್ರವಾದದ್ದು.. ಅದನ್ನು ಅಪಹಾಸ್ಯ ಮಾಡಬೇಡಿ: ಪ್ರೇಕ್ಷಕರಿಗೆ ಹೊಂಬಾಳೆ ಫಿಲ್ಮ್ಸ್‌ ಮನವಿ

    ದೈವಾರಾಧನೆ ಪವಿತ್ರವಾದದ್ದು.. ಅದನ್ನು ಅಪಹಾಸ್ಯ ಮಾಡಬೇಡಿ: ಪ್ರೇಕ್ಷಕರಿಗೆ ಹೊಂಬಾಳೆ ಫಿಲ್ಮ್ಸ್‌ ಮನವಿ

    – ಕಾಂತಾರ ಚಾಪ್ಟರ್‌ 1 ವೀಕ್ಷಣೆ ವೇಳೆ ಅಭಿಮಾನಿಗಳ ಹುಚ್ಚಾಟಕ್ಕೆ ಬೇಸರ

    ದೈವಾರಾಧನೆ ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಸಂಪ್ರದಾಯ. ಅದನ್ನು ಹಾಸ್ಯಾಸ್ಪದವಾಗಿ ಅಣಕು ಪ್ರದರ್ಶನ ಮಾಡಬೇಡಿ ಎಂದು ‘ಕಾಂತಾರ ಚಾಪ್ಟರ್‌ 1’ ಸಿನಿಮಾ ಪ್ರೇಕ್ಷಕರಲ್ಲಿ ಹೊಂಬಾಳೆ ಫಿಲ್ಮ್ಸ್‌ ಮನವಿ ಮಾಡಿಕೊಂಡಿದೆ.

    ಕಾಂತಾರ ಚಾಪ್ಟರ್‌ 1 ಸಿನಿಮಾ ಥಿಯೇಟರ್‌ಗಳಲ್ಲಿ ಕೆಲ ಪ್ರೇಕ್ಷಕರ ಅನುಚಿತ ವರ್ತನೆಗೆ ಹೊಂಬಾಳೆ ಫಿಲ್ಮ್ಸ್‌ ಬೇಸರ ವ್ಯಕ್ತಪಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.

     

    View this post on Instagram

     

    A post shared by Hombale Films (@hombalefilms)

    ಪೋಸ್ಟ್‌ನಲ್ಲಿ ಏನಿದೆ?
    ‘ತುಳುನಾಡಿನ ಸಂಸ್ಕೃತಿಯ ಪ್ರೌಢತೆಯ ಸಂಕೇತವಾದ ದೈವಾರಾಧನೆ ನಮ್ಮ ನಂಬಿಕೆ, ಭಕ್ತಿ ಹಾಗೂ ತಾಯ್ನಾಡಿನ ಹೆಮ್ಮೆಯ ಪ್ರತಿರೂಪವಾಗಿದೆ. ಕಾಂತಾರ ಮತ್ತು ಕಾಂತಾರ ಚಾಪ್ಟರ್‌ 1 ಚಿತ್ರಗಳನ್ನು ನಾವು ಗೌರವದೊಂದಿಗೆ ದೈವಗಳ ಮಹಿಮೆಯನ್ನು ಕೊಂಡಾಡುವ ಸದುದ್ದೇಶದಿಂದ ನಿರ್ಮಿಸಿದ್ದೇವೆ. ದೈವಾರಾಧನೆ ಗೌರವ ಹಾಗೂ ಅಚಲ ಭಕ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ಶ್ರಮಪಟ್ಟು ಕೆಲಸ ಮಾಡಿದ್ದೇವೆ. ಇದರೊಂದಿಗೆ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾರಿ ಯಶಸ್ವಿಯಾಗಿದ್ದೇವೆ. ಪ್ರೇಕ್ಷಕರಿಂದ ಬಂದಿರುವ ಅಪಾರವಾದ ಪ್ರೀತಿಗೆ ಹಾಗೂ ಪ್ರೋತ್ಸಾಹಕ್ಕೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

    ಆದಾಗ್ಯೂ, ಇತ್ತೀಚೆಗೆ ಕೆಲವು ಜನರು ಚಿತ್ರದಲ್ಲಿ ತೋರಿಸಿದ ದೈವಪಾತ್ರಗಳನ್ನು ಅನುಕರಿಸುತ್ತಾ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಚಿತ್ರಗಳಲ್ಲಿ ತೋರಿಸಲಾದ ದೈವಾರಾಧನೆ ಅಥವಾ ದೈವಪೂಜೆ ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಸಂಪ್ರದಾಯಕ್ಕೆ ಆಧಾರಿತವಾಗಿದೆ. ಇದನ್ನು ಹಾಸ್ಯಾಸ್ಪದವಾಗಿ ಅಣುಕು ಪ್ರದರ್ಶನ ಮಾಡುವಂತಿಲ್ಲ. ಇಂತಹ ಕೃತ್ಯಗಳು ನಮ್ಮ ನಂಬಿಕೆ ಮತ್ತು ಧಾರ್ಮಿಕ ಸಂವೇದನೆಯನ್ನು ಹೀನಗೊಳಿಸುತ್ತವೆ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ತೀವ್ರ ನೋವುಂಟು ಮಾಡುತ್ತವೆ.

    ಆದ್ದರಿಂದ, ಹೊಂಬಾಳೆ ಫಿಲ್ಮ್ಸ್‌, ಜನತೆ ಹಾಗೂ ಪ್ರೇಕ್ಷಕರಿಗೆ ಮನವಿ ಮಾಡಿಕೊಳ್ಳುತ್ತದೆ. ದೈವಪಾತ್ರಗಳನ್ನು ಅನುಕರಿಸುವುದು, ಧ್ವನಿಯನ್ನು ಹೋಲುವುದು ಅಥವಾ ಅವರ ರೂಪ-ವೇಷಧಾರಣೆ ಮಾಡುವುದು ಸೇರಿದಂತೆ ಯಾವುದೇ ರೀತಿಯ ಕೃತ್ಯಗಳಿಂದ ದೂರವಿರಿ. ಇದನ್ನು ಚಿತ್ರಮಂದಿರಗಳಲ್ಲಿ ಆಗಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಲಿ ಎಲ್ಲೂ ಮಾಡುವಂತಿಲ್ಲ. ದೈವಾರಾಧನೆಯ ಪವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಆರಾಧನೆಯ ಆಧ್ಯಾತ್ಮಿಕ ಮಹತ್ವವನ್ನು ಎಲ್ಲರೂ ಗುರುತಿಸಿ, ಗೌರವದಿಂದ ನಡೆದುಕೊಳ್ಳಬೇಕು. ನಮ್ಮ ಚಿತ್ರಗಳ ಮೂಲಕ ನಾವು ಸಂಭ್ರಮಿಸಿದ ನಂಬಿಕೆಯನ್ನು ಯಾವುದೇ ಸಂದರ್ಭದಲ್ಲಿ ಹಾಸ್ಯಾಸ್ಪದವಾಗಲು ಅವಕಾಶ ನೀಡಬಾರದು. ಈ ಅಮೂಲ್ಯ ಸಾಂಸ್ಕೃತಿಕ ಪರಂಪರೆಯ ಪವಿತ್ರತೆಯನ್ನು ಕಾಪಾಡಲು ನೀವು ನೀಡುತ್ತಿರುವ ನಿರಂತರ ಪ್ರೋತ್ಸಾಹ ಮತ್ತು ಸಹಕಾರಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು’ ಎಂದು ಹೊಂಬಾಳೆ ಫಿಲ್ಮ್ಸ್‌ ಮನವಿ ಮಾಡಿಕೊಂಡಿದೆ.

    ದೇಶ-ವಿದೇಶಗಳಲ್ಲಿ ಅ.2 ರಂದು ರಿಲೀಸ್‌ ಆದ ಕಾಂತಾರ ಚಾಪ್ಟರ್‌ 1 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಸಿಗುತ್ತಿದೆ. ಸಿನಿಮಾ ನೋಡಿ ಕೆಲ ಪ್ರೇಕ್ಷಕರು ಭಾವೋದ್ವೇಗಕ್ಕೆ ಒಳಗಾಗಿ, ದೈವದಂತೆ ನರ್ತಿಸುವುದು, ಕೂಗುವುದು.. ಹೀಗೆ ಹಾಸ್ಯಾಸ್ಪದ ರೀತಿಯಲ್ಲಿ ಅಣಕು ಪ್ರದರ್ಶನ ಮಾಡುತ್ತಿದ್ದಾರೆ. ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

    ದೈವಗಳ ವಿಚಾರವಾಗಿ ಹೀಗೆ ಹುಚ್ಚಾಟ ಮಾಡುವವರಿಗೆ ಬುದ್ಧಿ ಹೇಳಿ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ತುಳುಕೂಟ ಪತ್ರ ಬರೆದಿತ್ತು. ಅದರಂತೆ ಹೊಂಬಾಳೆ ಫಿಲ್ಮ್ಸ್‌ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.

  • 36 ವರ್ಷಗಳ ಬಳಿಕ ಒಂದಾದ ತಾಯಿ-ಮಗ; ದೈವ ನುಡಿದಂತೆ ವರ್ಷದೊಳಗೆ ಮಗ ವಾಪಸ್

    36 ವರ್ಷಗಳ ಬಳಿಕ ಒಂದಾದ ತಾಯಿ-ಮಗ; ದೈವ ನುಡಿದಂತೆ ವರ್ಷದೊಳಗೆ ಮಗ ವಾಪಸ್

    ಮಂಗಳೂರು: ಆತ ಮನೆ ಬಿಟ್ಟು ಮುಂಬೈ ಸೇರಿ 36 ವರ್ಷ ಕಳೆದಿತ್ತು. ಕೆಲಸ ಅರಸಿ ಮುಂಬೈ ಸೇರಿದ್ದ ಮಂಗಳೂರಿನ (Mangaluru) ಯುವಕ ಬಳಿಕ ಮಾನಸಿಕ ಆಘಾತದಿಂದ ಮನೆಯವರ ಸಂಪರ್ಕ ಕಡಿದುಕೊಂಡಿದ್ದ. ಆರೋಗ್ಯ ಸುಧಾರಿಸಿದರೂ ಮನೆಯ ಸಂಪರ್ಕ ಸಾಧ್ಯವಾಗಲೇ ಇಲ್ಲ. ಇದೀಗ, ಮನೆ ದೈವ ಮಂತ್ರದೇವತೆ ಅಭಯದಂತೆ ಮನೆಮಗ ಮನೆ ಸೇರಿದ್ದಾನೆ. 36 ವರ್ಷಗಳ ಬಳಿಕ ತಾಯಿ ಮಗ ಒಂದಾಗಿದ್ದಾರೆ. ಇದು ದೈವ ಪವಾಡ ಅಂತ ಮನೆಯವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡುಬಿದ್ರೆಯ (Mudbidri) ಇರುವೈಲು ಗ್ರಾಮದ ಸಂಕಪ್ಪ ಹಾಗೂ ಗೋಪಿ ದಂಪತಿಯ ಹಿರಿಯ ಪುತ್ರ ಚಂದ್ರಶೇಖರ್, ತಮ್ಮ 25ನೇ ವಯಸ್ಸಿನಲ್ಲಿ ಉದ್ಯೋಗ ಅರಸಿ ಮುಂಬೈಯತ್ತ ತೆರಳಿದ್ದರು. ಆ ಬಳಿಕ ಕೆಲ ತಿಂಗಳು ಪತ್ರದ ಮುಖೇನ ಮನೆಯವರೊಂದಿಗೆ ಸಂಪರ್ಕದಲ್ಲಿದ್ದರು. ನಂತರ ಸಂಪರ್ಕ ಕಡಿದುಕೊಂಡು ಎಲ್ಲಿದ್ದಾರೆಂದು ಪತ್ತೆಯೇ ಇರಲಿಲ್ಲ. ಮಾನಸಿಕ ಆಘಾತಗೊಂಡಿದ್ದ ಬಳಿಕ ದೇವಸ್ಥಾನ, ಮಠ, ಮಂದಿರಗಳಲ್ಲಿ ದಿನ ಕಳೆಯುತ್ತಿದ್ದರಂತೆ. ಇದನ್ನೂ ಓದಿ: ಕಬಿನಿಯಿಂದ 25 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ – ಯಾವುದೇ ಕ್ಷಣದಲ್ಲಿ ಮತ್ತಷ್ಟು ನೀರು ಬಿಡುಗಡೆ

    36 ವರ್ಷದ ಹಿಂದೆ ಮುಂಬೈನಲ್ಲಿ ಅಲೆದಾಡುತ್ತಿದ್ದ ಚಂದ್ರಶೇಖರ್ ಸ್ಥಿತಿ ಕಂಡು ಮುಂಬೈನ ಬಾಲು ಕಾಂಬ್ಳಿ ಎಂಬವರು ತಮ್ಮ ಮನೆಗೆ ಕರೆದೊಯ್ದು ಆರೈಕೆ ಮಾಡಿ, ಚಿಕಿತ್ಸೆ ಕೊಡಿಸಿದ್ದರು. ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ ಚಂದ್ರಶೇಖರ್ ಮರಳಿ ಕೆಲಸಕ್ಕೆ ಸೇರಿದ್ದರು. ಜತೆಗೆ ರಾತ್ರಿ ಶಾಲೆಗೆ ಸೇರಿ ಓದು ಮುಂದುವರಿಸಿದ್ದರು. ಆದರೂ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಊರಿಗೂ ಬಂದಿರಲಿಲ್ಲ. ಪುತ್ರನಿಗಾಗಿ ಮೂರೂವರೆ ದಶಕಗಳ ಕಾಲ ಹೆತ್ತತಾಯಿ ದೇವರನ್ನು ಬೇಡಿಕೊಳ್ಳದ ದಿನಗಳಿಲ್ಲ. ಮನೆ ದೈವ ಮಂತ್ರದೇವತೆಗೆ ಮಗನಿಂದಲೇ ಕೋಲ ಸೇವೆ ಕೊಡಿಸುತ್ತೇನೆ ಎಂದು ಹರಕೆಯನ್ನೂ ಹೊತ್ತಿದ್ದರು. ಬಳಿಕ ಮನೆಯಲ್ಲಿ ನಡೆದ ಮಂತ್ರದೇವತೆ ದೈವದ ದರ್ಶನ ವೇಳೆ ಆತ ಜೀವಂತವಾಗಿ ಇದ್ದಾನೆ ಅಂತ ಅಭಯ ನೀಡಿತ್ತು. ಒಂದು ವರ್ಷದೊಳಗೆ ಮನೆಗೆ ಬರುವಂತೆ ಮಾಡುತ್ತೇನೆ ಎಂದು ಅಭಯ ನೀಡಿತ್ತು. ಹೀಗಾಗಿ ಮತ್ತೊಮ್ಮೆ ದರ್ಶನ ಸೇವೆ ನೀಡಲು ಮನೆಯವರು ತಯಾರಿ ನಡೆಸಿದ್ದರು.

    ದೈವ ಮಂತ್ರದೇವತೆ ನುಡಿಯಂತೆ ದರ್ಶನ ಸೇವೆಗೆ ಮೂರು ದಿನಗಳ ಮೊದಲು ಚಂದ್ರಶೇಖರ್ ಮನೆ ಸೇರಿದ್ದಾರೆ. ಮುಂಬೈನವರೊಬ್ಬರು ಚಂದ್ರಶೇಖರ್ ಇರುವ ಸುಳಿವು ನೀಡಿದ್ದರು. ಅದೇ ಸುಳಿವುನಲ್ಲಿ ಹುಡಕಾಟ ನಡೆಸಿದಾಗ ಪತ್ತೆಯಾದ. ಇದೀಗ ಚಂದ್ರಶೇಖರ್ ತಾಯಿಗೆ 80 ವರ್ಷ ದಾಟಿದೆ. ಜೀವನದ ಇಳಿವಯಸ್ಸಿನಲ್ಲಿ ಮಗ ಮನೆ ಸೇರಿದ್ದು, ಕಂಡು ತಾಯಿಯ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ಇದು ಮನೆ ದೈವ ಮಂತ್ರ ದೇವತೆಯಿಂದಲೇ ಸಾಧ್ಯ ಆಯ್ತು ಅನ್ನೋದು ಮನೆಯವರು ನಂಬಿಕೆ. ಇದನ್ನೂ ಓದಿ: ಬೆಳಗಾವಿ | ಭಾರೀ ಮಳೆಗೆ ಮುಳುಗಿತು ಹಬ್ಬಾನಟ್ಟಿ ಮಾರುತಿ ದೇವಸ್ಥಾನ – ಎಲ್ಲೆಲ್ಲಿ ಏನಾಗಿದೆ?

  • ಉಡುಪಿ| ದೈವದ ಕಾರಣಿಕ – 28 ವರ್ಷಗಳ ಬಳಿಕ ಮನೆಗೆ ಮರಳಿ ಬಂದ ಮಗ

    ಉಡುಪಿ| ದೈವದ ಕಾರಣಿಕ – 28 ವರ್ಷಗಳ ಬಳಿಕ ಮನೆಗೆ ಮರಳಿ ಬಂದ ಮಗ

    ಉಡುಪಿ: ಮನೆ ಬಿಟ್ಟು ಹೋದ ಮಗ, ಮೂರು ದಶಕಗಳ ನಂತರ ಮನೆಗೆ ಹಿಂತಿರುಗಿದ್ದಾನೆ. ಗುರುತೇ ಸಿಗದ ಮಗನನ್ನು ಅಪ್ಪ ಕಂಡು ಹಿಡಿದದ್ದೇ ರೋಚಕ. ಈ ಘಟನೆ ನಡೆದಿದ್ದು ಉಡುಪಿ (Udupi) ಜಿಲ್ಲೆಯ ಪಡುಕುಡೂರು ಎಂಬ ಗ್ರಾಮದ ಹಳ್ಳಿಯಲ್ಲಿ. ದೈವದ ಕಾರಣಿಕದಂತೆಯೇ ಎಲ್ಲಾ ನಡೆದಿದೆ ಎನ್ನಲಾಗಿದೆ.

    ಕರಾವಳಿಯ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಯಲ್ಲಿ ದೈವಗಳ ಪವಾಡವನ್ನು ಯಾರು ಅಲ್ಲಗಳಿಯುವುದಿಲ್ಲ. ಜನ ಇಟ್ಟ ನಂಬಿಕೆ ಮತ್ತು ಶ್ರದ್ಧೆಗೆ ತಕ್ಕ ಪ್ರತಿಫಲ ದೈವಗಳಿಂದ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಇದನ್ನೂ ಓದಿ: ಕ್ರಿಸ್‌ಮಸ್ ಹಬ್ಬ – ಕೋಲಾರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ದೀಪಾಲಂಕಾರ

    ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಪಡುಕುಡೂರು ಎಂಬ ಗ್ರಾಮದ ಕಥೆಯಿದು. ಇಲ್ಲಿನ ಸುಂದರ ಪೂಜಾರಿ ಎಂಬವರಿಗೆ ಮೂರು ಮಕ್ಕಳಲ್ಲಿ ಬೋಜ ಪೂಜಾರಿ ಒಬ್ಬ ಗಂಡು ಸಂತಾನ. ಆತ ಯಾವುದೋ ಒಂದು ಕಾರಣಕ್ಕೆ ಮನೆ ಬಿಟ್ಟು ಹೋಗುತ್ತಾನೆ. ಹೋದವ ಬರೋಬ್ಬರಿ 28 ವರ್ಷ ಮನೆ ಕಡೆ ತಲೆ ಹಾಕಿಲ್ಲ, ಸಂಪರ್ಕವೇ ಇಲ್ಲ. ಬದುಕಿದ್ದಾನೋ ಸತ್ತಿದ್ದಾನೋ ಎಂಬ ಮಾಹಿತಿಯೂ ಕುಟುಂಬಕ್ಕಿಲ್ಲ. ತಂದೆ-ತಾಯಿ, ಸೋದರಿಯರು ದೈವ ದೇವರ ಮುಂದೆ ಮಾಡಿದ ಪ್ರಾರ್ಥನೆ, ಹೊತ್ತ ಹರಕೆ ಈಗ ಫಲಕೊಟ್ಟಿದೆ. ಮನೆ ಮಗ ಬೋಜ ಪೂಜಾರಿ ಮನೆಗೆ ಬಂದಿದ್ದಾನೆ.

    80ರ ಹರೆಯದ ತಂದೆಯ ಬೇಸರ ಕಳೆದು ಮೊಗದಲ್ಲಿ ನಗು ಮೂಡಿದೆ. ಪಡುಕುಡೂರಿನ ಭದ್ರಕಾಳಿ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗುಡಿಗೆ ತನ್ನ 12ನೇ ವಯಸ್ಸಿನಿಂದ ಇಂದಿನವರೆಗೆ ಸಲ್ಲಿಸುತ್ತಿರುವ ಚಾಕರಿಗೆ ಫಲ ಸಿಕ್ಕಿದೆ ಎಂದು ಮನೆ, ಊರು ಸಂಭ್ರಮಪಟ್ಟಿದೆ. ಇದನ್ನೂ ಓದಿ: ಶಿವಣ್ಣಗೆ ಇಂದು ಶಸ್ತ್ರಚಿಕಿತ್ಸೆ – ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಪೂಜೆ

    ಮಾತು ಮತ್ತು ದೈಹಿಕವಾಗಿ ಸಂಪೂರ್ಣ ಬದಲಾಗಿದ್ದ ಬೋಜ ಪೂಜಾರಿಯನ್ನು ತಂದೆ ಪತ್ತೆ ಹಚ್ಚಿದ್ದು, ಕೈಯಲ್ಲಿರುವ ಒಂದು ಗುಳ್ಳೆಯಿಂದ. ಮದುವೆಯಾಗಿ ಪತ್ನಿ, ಮಗಳ ಜೊತೆ ಹುಬ್ಬಳ್ಳಿಯಲ್ಲಿ ಸಂಸಾರ ಮಾಡಿಕೊಂಡಿರುವ ಬೋಜ ಅವರಿಗೆ ಮತ್ತೆ ತನ್ನ ಹುಟ್ಟೂರಿನ ಕಡೆ ಒಲವು ಮೂಡಿದೆ. ಊರಿಗೆ ಬಂದು ನೆಲೆ ಕಂಡುಕೊಳ್ಳುವ ಆಸೆ ಹುಟ್ಟಿದೆ.

  • ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ವೃದ್ಧ 6 ದಿನಗಳ ಬಳಿಕ ಕಾಡಿನಲ್ಲಿ ಪತ್ತೆ!

    ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ವೃದ್ಧ 6 ದಿನಗಳ ಬಳಿಕ ಕಾಡಿನಲ್ಲಿ ಪತ್ತೆ!

    – 82 ವರ್ಷದ ಹಿರಿ ಜೀವ ಬದುಕುಳಿದಿದ್ದೇ ಪಾವಡ
    – ಕಾಪಾಡಿದ್ದೇ ಊರಿನ ದೈವಗಳೆಂಬ ನಂಬಿಕೆ

    ಮಂಗಳೂರು: ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ 82 ವರ್ಷದ ವಯೋವೃದ್ಧ ಇದ್ದಕ್ಕಿದಂತೆ ಕಣ್ಮರೆಯಾಗಿದ್ದರು. 6 ದಿನಗಳ ಸತತ ಹುಡುಕಾಟದ ಬಳಿಕ ವೃದ್ಧ ಪತ್ತೆಯಾದ ರೋಚಕ ಘಟನೆ ನಡೆದಿದೆ. ಆ ಹಿರಿಯ ಜೀವ ಆ ಭಯಾನಕ ಕಾಡಲ್ಲಿ ಬದುಕುಳಿದಿದ್ದೇ ಪವಾಡ. ಕೇವಲ ನೀರು ಕುಡಿದೇ ಇದ್ದ ಅವರನ್ನ ಕಾಪಾಡಿದ್ದೇ ಊರಿನ ದೈವಗಳು ಎಂಬ ನಂಬಿಕೆ ಈಗ ಮನೆ ಮಾತಾಗಿದೆ.

    ಹೌದು. ಕಟ್ಟಿಗೆ ತರಲೆಂದು ಮನೆ ಸಮೀಪದ ಕಾಡಿಗೆ ಹೋಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ (Belthangady, Dakshina Kannada) ತಾಲೂಕಿನ ಶಿಬಾಜೆ ಗ್ರಾಮದ ಐಂಗುಡ ನಿವಾಸಿ 82 ವರ್ಷದ ವಾಸು ರಾಣ್ಯ 6 ದಿನಗಳ ಬಳಿಕ ಕಾಡಿನಲ್ಲಿ ಪತ್ತೆಯಾದ ಘಟನೆ ನಡೆದಿದೆ. ಶಿಬಾಜೆ ಗ್ರಾಮದ ವಾಸು ರಾಣ್ಯ ಎಂಬವರು ಮೇ 21 ರಂದು ಬೆಳಗ್ಗೆ ಕೈಯಲ್ಲಿ ಕತ್ತಿ ಹಿಡಿದು ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದು ಎಂದು ಅವರ ಮನೆಯವರು ಸುಮ್ಮನಿದ್ದರು. ಮಧ್ಯಾಹ್ನದವರೆಗೂ ವಾಸು ರಾಣ್ಯ ಅವರು ಮನೆಗೆ ಬರದೇ ಇದ್ದಾಗ ಸ್ಥಳೀಯರ ಜೊತೆ ಹುಡುಕಾಟ ನಡೆಸಲಾಗಿತ್ತು. ಸುಮಾರು 5 ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು ರಾಣ್ಯ ಪತ್ತೆಯಾಗಿರಲಿಲ್ಲ. ತನ್ನನ್ನು ಯಾರೋ ಬಾ ಬಾ ಎಂದು ಕರೆದಂತಾಯಿತು. ಹಾಗಾಗಿ ಧ್ವನಿಯ ಹಿಂದೆ ನಾನು ಹೋದೆ. ಆಹಾರವನ್ನೇನೂ ತಾನು ತೆಗೆದುಕೊಳ್ಳದೆ ಕೇವಲ ನೀರು ಮಾತ್ರ ಕುಡಿಯುತ್ತಿದ್ದೆ ಎಂದು ಕನವರಿಕೆಯಂತೆ ಹೇಳುತ್ತಿದ್ದರು. ವಾಸು ರಾಣ್ಯ ನಾಪತ್ತೆಯಾದ ದಿನ ಈ ಪರಿಸರದಲ್ಲಿ ವಿಪರೀತ ಗುಡುಗು, ಮಿಂಚು ಮಳೆ ಬಂದಿದ್ದರೂ ಆ ಸಮಯದಲ್ಲಿ ಒಬ್ಬಂಟಿಯಾಗಿ ಕಾಡಲ್ಲೇ ಇದ್ದರಂತೆ. ಇದನ್ನೂ ಓದಿ: ವರ್ತೆ ಪಂಜುರ್ಲಿ ಅಭಯ ನಿಜವಾಯ್ತು- ಕೊಲೆ ಆರೋಪಿ ನ್ಯಾಯಾಲಯಕ್ಕೆ ಶರಣು!

    ಮೇ 26 ರಂದು ಬೆಳಗ್ಗೆ ಮನೆಯವರು ಆಡು ಮೇಯಿಸಲೆಂದು ಮನೆ ಸಮೀಪವಿರುವ ಗುಡ್ಡೆಗೆ ತೆರಳಿದ್ದಾಗ ಕೂ…ಕೂ…ಎಂಬ ಶಬ್ದ ಕೇಳಿ ಬಂದಿದೆ. ಸದ್ದಿನ ಜಾಡು ಹಿಡಿದು ಸ್ಥಳೀಯರು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದಾಗ ಮನೆಯ ಮೇಲಿನ ಭಾಗದ ಬಂಡಿಹೊಳೆ ಕಾಡಿನ ಸುಮಾರು 3 ಕಿ.ಮೀ. ದೂರದಲ್ಲಿ ವಾಸು ರಾಣ್ಯ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಕೊಕ್ಕಡ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ವಾಸು ರಾಣ್ಯ ಅವರು ಆರೋಗ್ಯವಾಗಿದ್ದಾರೆ. ವಾಸು ರಾಣ್ಯ ಅವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕೆಲಸ ಶ್ಲಾಘನೀಯ.

    ವಾಸು ಜೀವಂತವಾಗಿ ಇರುವ ಬಗ್ಗೆ ಭರವಸೆಯನ್ನೆ ಕಳೆದುಕೊಂಡಿದ್ದ ಊರ ಜನರಲ್ಲಿ ಈಗ ಸಂಭ್ರಮ ಮನೆಮಾಡಿದೆ. ವಾಸು ಅವರನ್ನು ಆ 6 ದಿನ ರಕ್ಷಣೆ ನೀಡಿದ್ದೇ ಆ ಊರಿನ ದೈವಗಳು ಎಂಬ ನಂಬಿಕೆ ಊರಿನವರದ್ದು. ಬದುಕುಳಿಯಲು ಶಕ್ತಿ ನೀಡಿದ್ದೇ ವಾಸು ಕುಟುಂಬಸ್ಥರು ನಂಬಿ ಸೇವೆ ಸಲ್ಲಿಸುತ್ತಿರುವ ದೈವಗಳು ಎಂಬ ನಂಬಿಕೆ ಈಗ ಮನೆಮಾತಾಗಿದೆ. ಅದು ಏನೇ ಇರಲಿ 82 ವರ್ಷದ ವಾಸುರಾಣ್ಯ ದಟ್ಟಕಾಡಿನ ನಡುವೆ 6 ದಿನಗಳ ಕಾಲ ಬದುಕುಳಿದಿದ್ದೇ ಒಂದು ಪವಾಡ.

  • ‘ಕೊರಗಜ್ಜ’ ಚಿತ್ರಕ್ಕೆ ಅಭಯ ನೀಡಿದ ದೈವ ಕೊರಗಜ್ಜ

    ‘ಕೊರಗಜ್ಜ’ ಚಿತ್ರಕ್ಕೆ ಅಭಯ ನೀಡಿದ ದೈವ ಕೊರಗಜ್ಜ

    ತ್ರಿವಿಕ್ರಮ ಸಪಲ್ಯ ನಿರ್ಮಾಣದ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ನಡಿ, ಸುಧೀರ್ ಅತ್ತಾವರ್ (Sudhir Attavar) ನಿರ್ದೇಶನದ  ಅತೀ ನಿರೀಕ್ಷಿತ  ಕೊರಗಜ್ಜ ಸಿನಿಮಾದ ‘ಮೋಷನ್ ಪೋಸ್ಟರ್‌’ ಜೊತೆ ಫಸ್ಟ್ ಲುಕ್ ಸಿದ್ಧಗೊಂಡಿದ್ದು, ಕೊರಗಜ್ಜ (Koragajja) ದೈವದ ಕಳೆ-ಕಾರ್ಣಿಕ ಮತ್ತು ಪಾವಿತ್ರ್ಯತೆಗೆ ಯಾವುದೇ ಧಕ್ಕೆ ಬಾರದಂತೆ ಅದನ್ನು ವಿನ್ಯಾಸ ಗೊಳಿಸಿ ಮೊದಲಿಗೆ ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತೆ ವಿಷೇಶ ಕೋಲಸೇವೆ ನೀಡಿ, ಅದೇ ಸಮಯದಲ್ಲಿ   ಶ್ರೀ ದೈವಗಳ ಸಮಕ್ಷಮದಲ್ಲಿ ದೈವದ (Daiva) ಒಪ್ಪಿಗೆಗಾಗಿ  ಪ್ರದರ್ಶಿಸಿದರು. ಶ್ರೀ ದೈವಗಳಿಂದ ಫಸ್ಟ್ ಲುಕ್ ಅನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಅನುಮತಿಯನ್ನು ಭಯ-ಭಕ್ತಿಯಿಂದ ಬೇಡಿಕೊಂಡು, ಒಪ್ಪಿಗೆ ಪಡೆಯಲಾಯ್ತು.

    ಆದರೆ ಎಲ್ಲೆಂದರಲ್ಲಿ ಈ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರನ್ನು ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ಸಾರ್ವಜನಿಕರು ದುರುಪಯೋಗ ಪಡಿಸಬಾರದು ಎಂದು ದೈವಗಳು ಅಪ್ಪಣೆ ನೀಡಿದವು.ಮೋಷನ್ ಪೋಸ್ಟರನ್ನು ವಿಶೇಷವಾಗಿ ವಿನ್ಯಸಗೊಳಿಸಿದ್ಧರೂ ದೈವಗಳು ಒಪ್ಪಿಗೆ ನೀಡದಿದ್ದರೆ ಅದನ್ನು ಬಿಡುಗಡೆಗೊಳಿಸುವುದು ಅಸಾದ್ಯವಾಗಬಹುದಿತ್ತು.ಈ ರಿಸ್ಕನ್ನು ನಿರ್ದೇಶಕ ಮತ್ತು  ನಿರ್ಮಾಪಕರು ತೆಗೆದುಕೊಂಡಿದ್ದರು. ಚಿತ್ರತಂಡವು ಪ್ರತೀ ಹಂತದಲ್ಲೂ ಕೊರಗಜ್ಜ ಹಾಗೂ ಶ್ರೀ ದೈವಗಳ ಆಶಿರ್ವಾದ ಪಡೆದೇ ಮುಂದಡಿ ಇಡುತ್ತಿರುವುದು ವಿಶೇಷ.

     

    ಈ ಅಪರೂಪದ  ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಮೋಟಮ್ಮ, ಖ್ಯಾತ ಕಲಾವಿದೆ ಭವ್ಯ ಮತ್ತು ಸುಪುತ್ರಿ ಅದಿತಿ, ಎಡಿಟರ್ ಈಪಿ ವಿದ್ಯಾಧರ್ ಶೆಟ್ಟಿ, ಖ್ಯಾತ ಗಾಯಕ ರಮೇಶ್ಚಂದ್ರ, ನಾಯಕ ನಟ ಭರತ್ ಸೂರ್ಯ, ಶ್ಲಾಘ್ಯ ಕಮಲಿನಿ  ಹಾಗೂ ಚಿತ್ರತಂಡದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.

  • ಬಬ್ಬುಸ್ವಾಮಿ ದೈವಾರಾಧನೆಯಲ್ಲಿ ರಕ್ಷಿತ್ ಶೆಟ್ಟಿ ಭಾಗಿ

    ಬಬ್ಬುಸ್ವಾಮಿ ದೈವಾರಾಧನೆಯಲ್ಲಿ ರಕ್ಷಿತ್ ಶೆಟ್ಟಿ ಭಾಗಿ

    ನ್ನಡದ ಹೆಸರಾಂತ ನಟ ರಕ್ಷಿತ್ ಶೆಟ್ಟಿ (Rakshit Shetty) ಸಾಲು ಸಾಲು ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ರಕ್ಷಿತ್ ನೆಲೆಸಿದ್ರೂ ಹುಟ್ಟೂರಿನ ನಂಟನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.

    ಶನಿವಾರ ಮತ್ತು ಭಾನುವಾರ ಬೆಂಗಳೂರಿನಿಂದ ಬಿಡುವು ತೆಗೆದುಕೊಂಡು ಅವರು ತಮ್ಮ ಹುಟ್ಟೂರಿಗೆ ಹೋಗಿದ್ದರು. ದೈವ ದೇವರು ಊರಿನ ಉತ್ಸವ ಹಬ್ಬದಲ್ಲಿ ಅವರು ಭಾಗಿಯಾಗಿದ್ದರು. ದೈವ ದೇವರು ಅಂದ್ರೆ ಮಿಸ್ ಮಾಡಿಕೊಳ್ಳೋದೇ, ಅಷ್ಟಮಿ ಬಂದ್ರೆ ತಪ್ಪದೆ ಅವರು ಊರಲ್ಲಿ ಹಾಜರಾಗ್ತಾರೆ.

     

    ಈ ನಡುವೆ ಕರಾವಳಿಯ ಕಾರ್ಣಿಕದ ಬಬ್ಬು ಸ್ವಾಮಿ (Babbuswamy) ದೈವದ (Daiva) ನೇಮೋತ್ಸವದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಭಾಗಿಯಾಗಿದ್ದಾರೆ. ಅಲೆವೂರು ಜೋಡು ರಸ್ತೆಯಲ್ಲಿ ನಡೆದ 118ನೇ‌ ನೇಮೋತ್ಸವದಲ್ಲಿ  ಭಾಗವಹಿಸಿ, ಕೆಲಕಾಲ ದೈವಸ್ಥಾನದ ಕಾರ್ಯಕ್ರಮದಲ್ಲಿ ಪ್ರಸಾದ ಸ್ವೀಕರಿಸಿದರು.

  • ‘ಕಾಂತಾರ’ ಶೂಟಿಂಗ್ ಮುನ್ನ ದೈವಗಳ ದರ್ಶನ ಪಡೆದ ರಿಷಬ್

    ‘ಕಾಂತಾರ’ ಶೂಟಿಂಗ್ ಮುನ್ನ ದೈವಗಳ ದರ್ಶನ ಪಡೆದ ರಿಷಬ್

    ರಿಷಬ್ ಶೆಟ್ಟಿ ಅಂಡ್ ಟೀಮ್ ಕಾಂತಾರ ಸಿನಿಮಾದ ಚಿತ್ರೀಕರಣಕ್ಕೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ರಿಷಬ್ ದೈವಗಳ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾದ ಚಿತ್ರೀಕರಣ ನಿರ್ವಿಘ್ನವಾಗಿ ನಡೆಯಲು ಮತ್ತೆ ದೈವಗಳ (Daiva) ದರ್ಶನ ಪಡೆಯುತ್ತಿರುವ ರಿಷಬ್ ಶೆಟ್ಟಿ. ಮಂಗಳೂರಿನ ಗುರುಪುರ ವಜ್ರದೇಹಿ ಮಠದ ದೈವ ಕೋಲಕ್ಕೆ ರಿಷಬ್ ಭೇಟಿ ನೀಡಿದ್ದು, ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ರಿಷಬ್ ಭಾಗಿಯಾಗಿದ್ದಾರೆ.

    ಸ್ವಯಂಪ್ರೇರಿತವಾಗಿ ದೈವದ ಅಭಯ ಪಡೆಯಲು ಆಗಮಿಸಿದ ರಿಷಬ್ ಶೆಟ್ಟಿಗೆ, ಧೈರ್ಯ ಕಳೆದುಕೊಳ್ಳದಂತೆ ದೈವದ ಸೂಚನೆ ಸಿಕ್ಕಿದೆ. ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ ಎಂದು ದೈವ ಸೂಚನೆ ನೀಡಿದೆ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ದೈವ ಆಶೀರ್ವದಿಸಿದೆ.

    ಈಗಾಗಲೇ ರಿಲೀಸ್ ಆಗಿರುವ ಕಾಂತಾರ (Kantara) ಚಾಪ್ಟರ್ 1 ಸಿನಿಮಾದ ಟೀಸರ್ (Teaser) ಕೋಟಿ ಕೋಟಿ ವೀವ್ಸ್‌ ಪಡೆದಿದೆ. ಟೀಸರ್ ನೋಡಿದ ಭಾರತವೇ ಬೆಚ್ಚಿ ಬಿದ್ದಿದೆ. ಟೀಸರ್ ನಲ್ಲಿ ತೋರಿಸಲಾದ ಆಶಯ ಮತ್ತು ರಿಷಬ್ ಶೆಟ್ಟಿ ಕಂಡು ದಕ್ಷಿಣದ ಬಹುತೇಕ ಸ್ಟಾರ್ ನಟರು ಫಿದಾ ಆಗಿದ್ದರು. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಕಲಾವಿದರು ಮೆಚ್ಚಿ ಶುಭ ಹಾರೈಸಿದ್ದರು.

    ‘ಕಾಂತಾರ’ ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಬ್ ಶೆಟ್ಟಿ (Rishabh Shetty) ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತಿದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.

     

    ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಷಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.

  • ಬಿಜೆಪಿ ಟಿಕೆಟ್‍ಗಾಗಿ ದೈವದ ಮೊರೆ ಹೋದ ಮಡಿಕೇರಿ ಆಕಾಂಕ್ಷಿ ಭರತೀಶ್

    ಬಿಜೆಪಿ ಟಿಕೆಟ್‍ಗಾಗಿ ದೈವದ ಮೊರೆ ಹೋದ ಮಡಿಕೇರಿ ಆಕಾಂಕ್ಷಿ ಭರತೀಶ್

    ಮಡಿಕೇರಿ: ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಬಿಜೆಪಿ (BJP) ಪಾಳಯದಲ್ಲಿ ಟಿಕೆಟ್‍ಗಾಗಿ ನಾನಾ ಕಸರತ್ತು ನಡೆಯುತ್ತಿದೆ. ಹಾಲಿ ಶಾಸಕರು ಹಾಗೂ ಹೊಸ ಮುಖಗಳು ಸಾಕಷ್ಟು ಲಾಬಿ ನಡೆಸುತ್ತಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ಯಾರಿಗೆ ಟಿಕೆಟ್ ನೀಡಿದರೆ ಆ ಕ್ಷೇತ್ರ ಪಕ್ಷದ ಪಾಲಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಮಡಿಕೇರಿ (Madikeri) ಕ್ಷೇತ್ರದ ಪ್ರಬಲ ಆಕಾಂಕ್ಷಿಯೊಬ್ಬರು ರಾತ್ರಿ ವೇಳೆಯಲ್ಲಿ ದೈವದ (Daiva) ಮೊರೆ ಹೋಗಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

    ಬಿಜೆಪಿ ಟಿಕೆಟ್ ಆಕಾಂಕ್ಷಿ ಅಗಿರುವ ಬಿ.ಬಿ ಭರತೀಶ್ ಎಂಬವರು ಮಡಿಕೇರಿ ನಗರದ ಮುತ್ತಪ್ಪನ್ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ದೈವಾರಾಧಾನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ಒಂಭತ್ತು ಕೋಲಗಳ ಅರಾಧನೆ ನಡೆಯುವ ಸಂದರ್ಭದಲ್ಲಿ ಭರತೀಶ್ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ತಮಗೆ ಟಿಕೆಟ್ ದೊರೆಯುವಂತೆ ಹಾಗೂ ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ನಿಮಗೆ ಬಿಟ್ಟಿದ್ದೇನೆ- ಕಾಂತಾದೇವಿ ಛೋಪ್ರಾ ಕಣ್ಣೀರು

    ಬಳಿಕ ಸುದ್ದಿಗಾರರೊಂದಿಗೆ ಮಾತಾನಾಡಿ, ಇದೇ ಮೊದಲ ಬಾರಿಗೆ ಮುತ್ತಪ್ಪನ್ ದೇವಾಲಯಕ್ಕೆ ಬಂದಿದ್ದೇನೆ. ದೇವರ ಬಳಿ ಇಷ್ಟಾರ್ಥ ಈಡೇರುವಂತೆ, ಕೊಡಗಿನಲ್ಲಿ (Kodagu) ಪ್ರಕೃತಿ ವಿಕೋಪಗಳು ನಡೆಯದೆ ಇರಲಿ ಹಾಗೂ ನಾಡು ಸಮೃದ್ಧಿಯಿಂದ ಇರುವಂತೆ ಪೂಜೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಹೈಕಮಾಂಡ್‍ನಿಂದ ಈಗಾಗಲೇ ಬಿಜೆಪಿ ಪಾಳಯದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ತೀರ್ಮಾನವಾಗಿದೆ. ತಮಗೂ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಭರತೀಶ್ ಇತ್ತೀಚಿಗೆ ದೇವಾಲಯಗಳನ್ನು ಸುತ್ತುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಮಾನ್ವಿ ಕ್ಷೇತ್ರದಲ್ಲಿ ಜೋರಾದ ಕಾಂಗ್ರೆಸ್ ಟಿಕೆಟ್ ಫೈಟ್- ಸ್ಥಳೀಯರಿಗೆ ಮಣೆ ಹಾಕದಿದ್ದರೆ ಬಂಡಾಯದ ಎಚ್ಚರಿಕೆ

  • ದೈವದ ಹೆಸರಿನಲ್ಲಿ ಮಹಿಳೆಗೆ ಮದುವೆ ಅಭಯ- ಜನಾಕ್ರೋಶದ ಬೆನ್ನಲ್ಲೇ ನರ್ತಕ ಪಲಾಯನ

    ದೈವದ ಹೆಸರಿನಲ್ಲಿ ಮಹಿಳೆಗೆ ಮದುವೆ ಅಭಯ- ಜನಾಕ್ರೋಶದ ಬೆನ್ನಲ್ಲೇ ನರ್ತಕ ಪಲಾಯನ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೊಲದ ಅಂಬಾರಕೊಡ್ಲನಲ್ಲಿ ದೈವನರ್ತಕ ತನ್ನ ಸ್ವಾರ್ಥಕ್ಕಾಗಿ ವಿವಾಹಿತ ಮಹಿಳೆಯೊಬ್ಬಳಿಗೆ ದೈವದ ಹೆಸರಿನಲ್ಲಿ ತಾನೇ ಮದುವೆಯಾಗುವ ಅಭಯ ನೀಡಿದ ಪ್ರಕರಣವೀಗ ಜನರ ತೀವ್ರ ವಿರೋಧದ ನಂತರ ಮತ್ತೊಂದು ತಿರುವು ಪಡೆದುಕೊಂಡಿದೆ.

    ಹೌದು. ದೈವನರ್ತಕರೊಬ್ಬರು ವಿವಾಹಿತ (Married Woman) ಮಹಿಳೆಯೊಬ್ಬರಿಗೆ ದೈವದ ಹೆಸರಿನಲ್ಲಿ ಮದುವೆಯಾಗುವ ಅಭಯ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಬದುಕಿನ ಕಷ್ಟ ಹೇಳಿಕೊಳ್ಳಲು ಬಂದ ಬೆಳಗಾವಿ ಮೂಲದ ಮಹಿಳೆಗೆ ಅಂಬಾರಕೊಡ್ಲ ಗ್ರಾಮದ ದೈವನರ್ತಕ ಚಂದ್ರಹಾಸ, ತುಂಬಿದ ಸಭೆಯಲ್ಲಿ ಮದ್ವೆ ಮಾಡಿಕೊಳ್ಳುವ ಮಾತಾಡಿರೋದು ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಇವತ್ತಿಂದ ಈಕೆ ನನ್ನ ಅರ್ಧಾಂಗಿ – ಇದು ಸತ್ಯ..ಸತ್ಯ ಮಹಿಳೆಗೆ ಮದುವೆ ಅಭಯಕೊಟ್ಟ ದೈವನರ್ತಕ

    ದೈವದ ಹೆಸರಿನಲ್ಲಿ ವಿವಾಹಿತ ಮಹಿಳೆಗೆ ತಾನೇ ಮದುವೆಯಾಗುವ ಅಭಯ ನೀಡಿ ವಿವಾದಕ್ಕೆ ಜನರ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಅಂಕೋಲದ ಅಂಬಾರಕೊಡ್ಲನಲ್ಲಿನ ತನ್ನ ನಿವಾಸದಿಂದ ದೈವ ನರ್ತಕ ಚಂದ್ರಹಾಸ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ. ಕೆಂಡದಮಾಸ್ತಿ ದುರ್ಗಾ ದೇವಸ್ಥಾನ ಖಾಲಿ ಹೊಡೆಯುತ್ತಿದ್ದು, ಸಹೋದರ ಹಾಗೂ ಆತನ ತಾಯಿ ಮಾತ್ರ ಸ್ಥಳದಲ್ಲಿದ್ದರು. ಈತ ಬೆಳಗಾವಿ ಮೂಲದ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂಬ ಸುದ್ದಿ ಹರಡುತ್ತಿದೆ. ಈ ಕುರಿತು ಪಬ್ಲಿಕ್ ಟಿವಿ ಸ್ಥಳಕ್ಕೆ ಹೋಗಿ ವಿಚಾರಿಸಿದ್ರೆ ಆತನ ಕುಟುಂಬಸ್ಥರು ಹೇಳೋದೆ ಬೇರೆ.

    ಒಂದೆಡೆ ದೈವ ನರ್ತಕನ ಮಾತುಗಳು ಸಾಕಷ್ಟು ಅನುಮಾನ ಸೃಷ್ಟಿಸಿದೆ. ಇತ್ತ ದೈವ ನರ್ತನನಿಂದ ಅಭಯ ಪಡೆದ ಬೆಳಗಾವಿಯ ವಿವಾಹಿತ ಮಹಿಳೆ ಸಹ ನಾಪತ್ತೆಯಾಗಿದ್ದಾಳೆ. ದೈವ ನರ್ತಕ ಚಂದ್ರಹಾಸನಿಗೆ ಪತ್ನಿ ಹಾಗೂ ಓರ್ವ ಮಗಳು ಸಹ ಇದ್ದಾರೆ. ಆದರೆ ಅವರು ದೂರವಿದ್ದಾರೆ. ಇವರು ದೈವ ನರ್ತನದ ವೇಳೆ ಹೇಳಿದಂತೆ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಹ ಇದೆ. ಆದರೆ ಇದ್ಯಾವುದಕ್ಕೂ ಸ್ಪಷ್ಟ ಉತ್ತರ ಅವರ ಕುಟುಂಬದವರು ಸ್ಪಷ್ಟನೆ ನೀಡಲು ಸಿದ್ಧರಿಲ್ಲ. ಇನ್ನು ದೈವನರ್ತಕನ ವಿರುದ್ಧ ಜನಶಕ್ತಿ ವೇದಿಕೆ ವಂಚನೆ ಪ್ರಕರಣ ದಾಖಲಿಸಲು ಮುಂದಾಗಿದೆ.

    ಸದ್ಯಕ್ಕಂತೂ ದೈವ ನರ್ತಕನ ವಿವಾಹಿತ ಮಹಿಳೆಗೆ ನೀಡಿದ ಅಭಯ ದೊಡ್ಡ ಸದ್ದು ಮಾಡುತ್ತಿದ್ದು ಜನರ ಆಕ್ರೋಶ ಹೆಚ್ಚಾಗಿದೆ. ಇವೆಲ್ಲವುದಕ್ಕೆ ತೆರೆಎಳೆಯಬೇಕು ಎಂದರೆ ದೈವನರ್ತಕನ ಪತ್ನಿ ಹಾಗೂ ಆತನೇ ಸ್ಪಷ್ಟನೆ ನೀಡಿ ಈ ಪ್ರಕರಣಕ್ಕೆ ತೆರೆಎಳೆಯಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೈವಗಳ ವಿಚಾರ ಮಾತನಾಡಿ ಮತ್ತೆ ಪರ ವಿರೋಧದ ಚರ್ಚೆ ಹುಟ್ಟು ಹಾಕಿದ ನಟ ಕಿಶೋರ್

    ದೈವಗಳ ವಿಚಾರ ಮಾತನಾಡಿ ಮತ್ತೆ ಪರ ವಿರೋಧದ ಚರ್ಚೆ ಹುಟ್ಟು ಹಾಕಿದ ನಟ ಕಿಶೋರ್

    ರಾವಳಿ ಭಾಗದ ದೈವಗಳ (Daiva) ಬಗ್ಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಪ್ರಚಾರ ಸಿಗುತ್ತಿದೆ. ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ, ಅದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಅನೇಕರು ದೈವಗಳ ಹೊಸ ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ದೈವಗಳ ನಂಬಿಕೆ ಮತ್ತು ಅಪನಂಬಿಕೆಗಳ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ (Discussion) ನಡೆಯುತ್ತಿದೆ. ಈ ಚರ್ಚೆಗೆ ಕಾರಣವಾಗಿದ್ದು ನಟ ಕಿಶೋರ್ (Kishor) ಹಾಕಿರುವ ಪೋಸ್ಟ್ ಎನ್ನುವುದು ಗಮನಿಸಬೇಕಾದ ಅಂಶ.

    ಇತ್ತೀಚೆಗಷ್ಟೇ ದೈವಗಳಿಗೆ ಅಪಮಾನ ಮಾಡಿದವರು ಹೇಗೆ ರಕ್ತಕಾರಿಕೊಂಡು ಸತ್ತರು ಎಂದು ತೋರಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇಂಥದ್ದೊಂದು ವಿಡಿಯೋ ನೋಡಿದ್ದ ಕಿಶೋರ್ ಅವರು, ನಂಬಿಕೆ ಮತ್ತು ಮೂಢನಂಬಿಕೆ ಕುರಿತಾಗಿ ಸುದೀರ್ಘ ಬರೆದು ಪೋಸ್ಟ್ ಮಾಡಿದ್ದರು.  ಆ ಫೋಸ್ಟ್ ಕುರಿತಾಗಿಯೇ ಚರ್ಚೆ ನಡೆದಿದೆ. ಕಿಶೋರ್ ಹೇಳಿದ ಮಾತಿಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ನಂಬಿಕೆ ಮತ್ತು ಮೂಢನಂಬಿಕೆ ಬಗ್ಗೆ ಮಾತನಾಡಿದ ಕಿಶೋರ್, ತಾವೇ ನಟಿಸಿದ್ದ ಕಾಂತಾರ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವಿದೆ. ಮೂಢನಂಬಿಕೆಯ ಬಗ್ಗೆ ಮಾತನಾಡುವವರು ಅದನ್ನು ಪ್ರಚೋದಿಸುವಂತಹ ಚಿತ್ರದಲ್ಲಿ ನಟಿಸಿದ್ದು ಯಾಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅವರವರ ನಂಬಿಕೆ ಬಗ್ಗೆ ಯಾರೂ ಮಾತನಾಡಬಾರದು. ಅದನ್ನು ಅವರ ಪಾಲಿಗೆ ಬಿಟ್ಟುಬಿಡಬೇಕು ಎಂದೂ ಸಲಹೆ ನೀಡಿದ್ದಾರೆ.

    ಕಾಂತಾರ ಸಿನಿಮಾ ಬಂದ ನಂತರ ದೈವಗಳ ಬಗ್ಗೆ ರೀಲ್ಸ್ ಮಾಡಲಾಯಿತು. ಬೇರೆ ಬೇರೆ ಸನ್ನಿವೇಶಗಳಿಗೆ ಆ ಸಿನಿಮಾದ ದೃಶ್ಯಗಳನ್ನು ಹೋಲಿಸಲಾಯಿತು. ಹಾಗೆ ಮಾಡಬೇಡಿ ಎಂದು ಸ್ವತಃ ರಿಷಬ್ ಶೆಟ್ಟಿ (Rishabh Shetty) ಅವರೇ ಕೇಳಿಕೊಂಡರೂ, ಇಂತಹ ಸಾಕಷ್ಟು ಘಟನೆಗಳು ನಡೆಯುತ್ತಲೇ ಇವೆ. ಈ ಕಾರಣದಿಂದಾಗಿಯೇ ಕಿಶೋರ್ ಸುದೀರ್ಘ ಬರಹವೊಂದನ್ನು ಬರೆದರು, ಇದೀಗ ಆ ಬರಹದ ಬಗ್ಗೆಯೂ ಚರ್ಚೆ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]