Tag: dairy

  • ಬಿಎಸ್‍ವೈ ಡೈರಿ ಕಾಂಗ್ರೆಸ್ ಸ್ವಯಂ ಸೃಷ್ಟಿಸಿರುವ ನಕಲಿ ದಾಖಲೆ: ಅರುಣ್ ಜೇಟ್ಲಿ

    ಬಿಎಸ್‍ವೈ ಡೈರಿ ಕಾಂಗ್ರೆಸ್ ಸ್ವಯಂ ಸೃಷ್ಟಿಸಿರುವ ನಕಲಿ ದಾಖಲೆ: ಅರುಣ್ ಜೇಟ್ಲಿ

    ನವದೆಹಲಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ 1800 ಕೋಟಿ ರೂ.ಯನ್ನು ಬಿಜೆಪಿ ಹೈಕಮಾಂಡ್‍ಗೆ ನೀಡಿದ್ದಾರೆ. ಅದನ್ನ ಡೈರಿಯಲ್ಲಿ ಬರೆದಿಟ್ಟಿದ್ದಾರೆ ಎನ್ನುವುದು ಕಾಂಗ್ರೆಸ್ ಸೃಷ್ಟಿಸಿರುವ ನಕಲಿ ದಾಖಲೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ.

    ಈ ಸಂಬಂಧ ಜೇಟ್ಲಿ ಅವರು ತಮ್ಮ ಬ್ಲಾಗ್‍ನಲ್ಲಿ ಬರೆದು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ಸಿನ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಶುಕ್ರವಾರ ಬಿಎಸ್‍ವೈ ವಿರುದ್ಧ ಮಾಡಿದ ಆರೋಪಕ್ಕೆ ಆಧಾರ ಕ್ಯಾರವಾನ್ ವರದಿಯಾಗಿದೆ. ಇದು ಕಾಂಗ್ರೆಸ್ ನಾಯಕರೇ ಬೇಕು ಅಂತ ಸೃಷ್ಟಿಸಿರುವ ನಕಲಿ ದಾಖಲೆ. ಕಾಂಗ್ರೆಸ್ ಅವರೇ ತಯಾರಿಸಿರುವ ನಕಲಿ ಮತ್ತು ಸುಳ್ಳು ದಾಖಲೆಗಳ ಪೋಟೋಕಾಪಿಯನ್ನೇ ಯಡಿಯೂರಪ್ಪ ಅವರ ಡೈರಿ ಎಂದು ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ದಿನಕ್ಕೊಂದು ಹೊಸ ಕಥೆಯನ್ನು ಕಟ್ಟುತ್ತ, ಚುನಾವಣಾ ಸಂದರ್ಭದಲ್ಲಿ ಜನರ ತಲೆ ಕೆಡಿಸುವ ಕೆಲಸ ಮಾಡುತ್ತಿದೆ. ಆದರೆ ಮತದಾರರು ರಾಜಕಾರಣಿಗಳಿಗಿಂತ ಬುದ್ಧಿವಂತರು. ಅವರು ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಪುಲ್ವಾಮಾದಂತಹ ದಾಳಿ ನಡೆಯುತ್ತಲೇ ಇರುತ್ತೆ, ಪಾಕ್ ಮೇಲೆ ವಿಮಾನ ದಾಳಿ ನಡೆಸಿದ್ದು ಸರಿಯಲ್ಲ: ಸ್ಯಾಮ್ ಪಿತ್ರೋಡಾ

    ಈ ಹಿಂದೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಬಾಲಕೋಟ್‍ನಲ್ಲಿ ಭಾರತೀಯ ವಾಯುಪಡೆ ನಡೆಸಿದ ಉಗ್ರರ ಮೇಲಿನ ದಾಳಿಯನ್ನು ಪ್ರಶ್ನಿಸಿದ್ದರು. ಈ ವಿವಾದಾತ್ಮಕ ಹೇಳಿಕೆಗಳಿಂದ ಕಾಂಗ್ರೆಸ್ಸಿಗೆ ಆಗಿರುವ ಅವಮಾನ, ಮುಜುಗರವನ್ನು ಮುಚ್ಚಿ ಹಾಕಲು, ಶುಕ್ರವಾರ ಕಾಂಗ್ರೆಸ್ ಬಿಎಸ್‍ವೈ ವಿರುದ್ಧ ನಕಲಿ ಡೈರಿ ಸೃಷ್ಟಿಸಿ ಅದನ್ನು ಬಳಸಿಕೊಂಡಿದೆ ಅಂತ ವ್ಯಂಗ್ಯವಾಡಿದರು. ಇದನ್ನೂ ಓದಿ:ದಾಳಿ ನಡೆಯದೇ ಇದ್ದರೂ ಬಿಎಸ್‍ವೈ ಡೈರಿ ಐಟಿಗೆ ಸಿಕ್ಕಿದ್ದು ಹೇಗೆ?

    ವಾಯುದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರನ್ನು ಭಾರತೀಯ ವಾಯುಸೇನೆ ನೆಲಸಮ ಮಾಡಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲೇ ಪ್ರಸಾರವಾಗಿದೆ. ಆದ್ರೆ ಈ ಬಗ್ಗೆ ಪ್ರತಿಪಕ್ಷಗಳು ಮಾತ್ರ ನಂಬಲು ತಯಾರಿಲ್ಲ ಎಂದು ಬರಹದಲ್ಲಿ ಕಿಡಿಕಾರಿದರು.

  • ಬಿಎಸ್‍ವೈ ಕಪ್ಪ ಕಾಣಿಕೆ ಡೈರಿ ನಕಲಿ- ಐಟಿ ಇಲಾಖೆ ಸ್ಪಷ್ಟನೆ

    ಬಿಎಸ್‍ವೈ ಕಪ್ಪ ಕಾಣಿಕೆ ಡೈರಿ ನಕಲಿ- ಐಟಿ ಇಲಾಖೆ ಸ್ಪಷ್ಟನೆ

    -ಬಿಜೆಪಿಯಿಂದ ಕಾಂಗ್ರೆಸ್‍ಗೆ 10 ಪ್ರಶ್ನೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೇಲಿನ ಕಪ್ಪ ಕಾಣಿಕೆಯ ಡೈರಿ ಪ್ರಕರಣ ಠುಸ್ ಆಗಿದೆ. ಐಟಿ ಇಲಾಖೆ ಇದನ್ನು ಫೇಕ್ ಎಂದಿದ್ದು, ಹಸ್ತಾಕ್ಷರ ನಕಲಿ ಎಂದಿದೆ. ಇನ್ನೊಂದೆಡೆ ಬಿಜೆಪಿ ಕಾಂಗ್ರೆಸ್ ನಾಯಕರಿಗೆ ಕೇಸ್ ಸಂಬಂಧ 10 ಪ್ರಶ್ನೆಗಳನ್ನು ಕೇಳಿದೆ.

    ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಎಸ್‍ವೈ ಕಪ್ಪ ಕಾಣಿಕೆಯ ಡೈರಿ ಕೇಸ್ ಸ್ಫೋಟವಾದ ವೇಗದಲ್ಲೇ ಠುಸ್ಸಾಗಿದೆ. ಡೈರಿ ಪ್ರಕರಣವನ್ನ ಕಾಂಗ್ರೆಸ್ ಹೊರಬಿಡುತ್ತಲೇ ಎಚ್ಚೆತ್ತ ಬಿಜೆಪಿ ಇದನ್ನ ನಕಲಿ ಎಂದು ಹೇಳಿತ್ತು. ಉದ್ದೇಶಪೂರ್ವಕವಾಗಿ ಇದನ್ನ ಬಿಡುಗಡೆ ಮಾಡಲಾಗಿದೆ ಎಂದು ಹರಿಹಾಯ್ದಿತ್ತು. ಇದಕ್ಕೆ ಪೂಕರವೆಂಬಂತೆ ಆದಾಯ ತೆರಿಗೆ ಇಲಾಖೆ ಕೂಡ ಈ ಕುರಿತು ಸ್ಪಷ್ಟನೆ ನೀಡಿದೆ. ಡಿಕೆಶಿ ಮನೆಯಲ್ಲಿ ಸಿಕ್ಕಿ ಡೈರಿ ನಕಲಿ, ಸಹಿ ಕುರಿತು ನಾವು ಆಗಲೇ ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಿ ಪರೀಕ್ಷೆ ಮಾಡಲಾಗಿದೆ ಎಂದು ಐಟಿ ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಡೈರಿ ಇಟ್ಕೊಂಡು ಡಿಕೆಶಿ ಚೌಕಾಶಿ – ಸತ್ಯ ಬಿಚ್ಚಿಟ್ಟ ಐಟಿ ಇಲಾಖೆ

    ಕಾಂಗ್ರೆಸ್ `ಡೈರಿ ರಾಜಕೀಯಕ್ಕೆ’ ಬಿಜೆಪಿ ಪ್ರಶ್ನೆಗಳೇನು?
    * ಪ್ರಶ್ನೆ 1: ಡೈರಿ ನಿಮಗೆ ಸಿಕ್ಕಿದ್ದು ಯಾವಾಗ..?
    * ಪ್ರಶ್ನೆ 2: ಯಾರು ಈ ಡೈರಿಯನ್ನು ತಂದುಕೊಟ್ಟರು..?
    * ಪ್ರಶ್ನೆ 3: ಡೈರಿಯನ್ನು ಎಲ್ಲಿ ಕೊಟ್ಟರು..?
    * ಪ್ರಶ್ನೆ 4: ಒರಿಜಿನಲ್ ಡೈರಿ ಎಲ್ಲಿ..?
    * ಪ್ರಶ್ನೆ 5: ಏಕೆ ಇದುವರೆಗೂ ಈ ಡೈರಿ ಆಧರಿಸಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಲಿಲ್ಲ..?
    * ಪ್ರಶ್ನೆ 6: 2013 ಮೇ ತಿಂಗಳಿನಿಂದ ನಿಮ್ಮದೇ ಪಕ್ಷದ ಆಡಳಿತ ಇದ್ದರೂ ಯಾವುದೇ ತನಿಖೆ ನಡೆಸದೇ ಇರಲು ಕಾರಣವೇನು..?
    * ಪ್ರಶ್ನೆ 7: ಡೈರಿಯು ಡಿ.ಕೆ.ಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಾಗಿದೆ.
    * ಪ್ರಶ್ನೆ 8: ಈ ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಕಾಂಗ್ರೆಸ್ ಈಗ ಏಕೆ ದೂರು ನೀಡದಿರಲು ಕಾರಣವೇನು?
    * ಪ್ರಶ್ನೆ 9: ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿತ್ತು ಎಂದು ನಮೂದಾಗಿತ್ತು. ಆಗ ಯಡಿಯೂರಪ್ಪ ಡೈರಿ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ..?
    * ಪ್ರಶ್ನೆ 10: ಡೈರಿ ಪ್ರಕರಣ ಜನಲೋಕಪಾಲ್ ತನಿಖೆಗೆ ಸೂಕ್ತವಾದುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಆರೋಪ ಮಾಡಿದವರು ದೂರು ನೀಡಬೇಕೆ ಅಥವಾ ದೂರಿಗೆ ಒಳಗಾದವರೇ..?  ಇದನ್ನೂ ಓದಿ: ಕಾಂಗ್ರೆಸ್ ಬಿಚ್ಚಿಟ್ಟ ಡೈರಿಯ ಸತ್ಯಾಂಶವನ್ನು ಅಲ್ಲಗಳೆದ ಐಟಿ ಇಲಾಖೆ

    ಡೈರಿ ಕೇಸ್ ನಕಲಿ ಎಂದು ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಸಿದ ಬಿಎಸ್‍ವೈ, ಇದು ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣ ಎಂದಿದ್ದಾರೆ. ಅಲ್ಲದೆ ಬಿಎಸ್‍ವೈ ಪುತ್ರ ರಾಘವೇಂದ್ರ `ಇದು ಜೋಕ್ ಆಫ್ ದಿ ಇಯರ್’ ಅಂದಿದ್ದರು. ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಡೈರಿಯಲ್ಲಿರೋದು ಯಡಿಯೂರಪ್ಪ ಸಹಿಯೇ. ಇದ್ರಲ್ಲಿ ಯಾವುದೇ ಅನುಮಾನ ಬೇಡ. ಬೇಕಿದ್ರೆ ಈ ಬಗ್ಗೆ ಲೋಕಪಾಲ ತನಿಖೆ ಆಗಲಿ ಎಂದು ಹೇಳಿದ್ರು.

    ಒಟ್ಟಿನಲ್ಲಿ ಬಿಎಸ್‍ವೈ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎನ್ನಲಾದ ಡೈರಿ ಕೇಸ್ ಸದ್ಯಕ್ಕೆ ತಣ್ಣಗಾದಂತೆ ಕಂಡುಬರುತ್ತಿದ್ದು, ಮುಂದಿನ ಪ್ರತಿಕ್ರಿಯೆಗಳನ್ನು ಕಾದು ನೋಡಬೇಕಿದೆ.

  • ಬಿಎಸ್‍ವೈ ಡೈರಿ ಇಟ್ಕೊಂಡು ಡಿಕೆಶಿ ಚೌಕಾಶಿ – ಸತ್ಯ ಬಿಚ್ಚಿಟ್ಟ ಐಟಿ ಇಲಾಖೆ

    ಬಿಎಸ್‍ವೈ ಡೈರಿ ಇಟ್ಕೊಂಡು ಡಿಕೆಶಿ ಚೌಕಾಶಿ – ಸತ್ಯ ಬಿಚ್ಚಿಟ್ಟ ಐಟಿ ಇಲಾಖೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಡೈರಿ ಸಿಕ್ಕಿದ್ದೇ ಸಿಕ್ಕಿದ್ದು, ಒಳಗಿನ ಒಂದೊಂದು ಅಂಶಗಳು ಬಯಲಾಗ್ತಾನೇ ಇವೆ. ಪವರ್ ಫುಲ್ ಮಿನಿಸ್ಟರ್ ಎಂದೇ ಕರೆಸಿಕೊಳ್ಳುವ ಡಿಕೆಶಿ ಅದೊಂದು ಡೈರಿ ಇಟ್ಕೊಂಡು ತಾನು ಬಚಾವಾಗೋಕೆ ಪ್ರಯತ್ನ ಪಟ್ಟಿದ್ದಾರೆ. ನೀವು ಇದನ್ನು ತನಿಖೆ ಮಾಡಲೇಬೇಕು ಇಲ್ಲ ನನ್ನ ತನಿಖೆಯಲ್ಲಿ ರಿಯಾಯಿತಿ ಕೊಡಬೇಕು ಎಂದು ಚೌಕಾಶಿಗಿಳಿದಿದ್ದರು ಎಂಬ ಮಾಹಿತಿ ಲಭಿಸಿದೆ.

    ಹೌದು. ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರೋ ಬಿಎಸ್‍ವೈ ಕಪ್ಪ ಕಾಣಿಕೆಯ ಡೈರಿಯದ್ದೇ ಒಂದು ಕಥೆಯಾದ್ರೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ಸೈಡ್‍ಲೈನ್ ಸ್ಟೋರಿ ಕುತೂಹಲ ಹೆಚ್ಚಿಸಿದೆ. ಡಿಕೆ ಶಿವಕುಮಾರ್ ಮನೆಯ ಮೇಲೆ ದಾಳಿ ನಡೆದಾಗ ಯಾರು ಕೂಡ ಆ ಮನೆಯಲ್ಲಿ ಈ ಡೈರಿ ಸಿಕ್ಕಿದೆ ಎಂದು ಊಹೆಯನ್ನು ಮಾಡೋದಕ್ಕೆ ಆಗಿರಲಿಲ್ಲ. ಅದು ಪ್ರತಿಪಕ್ಷ ನಾಯಕರಿಗೆ ಸಂಬಂಧಿಸಿದ್ದ ಡೈರಿ ಡಿಕೆ ಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿತ್ತು. ಆದ್ರೆ, ಈ ಡೈರಿಯನ್ನು ವಶ ಪಡೆಯೋದಕ್ಕೆ ಆಗಲಿ, ತನಿಖೆ ಮಾಡೋದಕ್ಕೆ ಆಗಲಿ ಐಟಿ ಇಲಾಖೆಗೆ ಇಷ್ಟ ಇರ್ಲಿಲ್ಲ. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಡಿಕೆ ಶಿವಕುಮಾರ್ ಅದನ್ನೂ ಸೀಜ್ ಮಾಡಿ ತನಿಖೆ ಮಾಡಬೇಕು ಎಂದು ಹಠ ಹಿಡಿದಿದ್ದರು ಎನ್ನಲಾಗಿದೆ.

    ಯಾವಾಗ ಬಿಎಸ್‍ವೈ ಹಸ್ತಾಕ್ಷರ ಇದೆ ಎಂದು ಹೇಳಲಾದ ಡೈರಿಯನ್ನು ತನಿಖೆ ಮಾಡೋದಕ್ಕೆ ಐಟಿ ಇಲಾಖೆ ಒಲವು ತೋರಿಸುತ್ತಾ ಇಲ್ಲವೆಂದು ಗೊತ್ತಾಯ್ತೊ, ಆಗ ಡಿಕೆ ಶಿವಕುಮಾರ್ ಅದನ್ನು ತನಿಖೆ ಮಾಡೋದಿಲ್ಲ ಅನ್ನೋದಾದ್ರೆ ತಮಗೂ ತನಿಖೆಯಲ್ಲಿ ರಿಯಾಯಿತಿ ಕೊಡಿ ಎಂದು ಚೌಕಾಸಿಗೆ ಇಳಿದಿದ್ದರು. ಇದಕ್ಕೆ ಸೊಪ್ಪು ಹಾಕದ ಇಲಾಖೆ ತಮ್ಮ ಕೆಲಸವನ್ನು ತಮ್ಮ ಪಾಡಿಗೆ ನೀಟಾಗಿ ಮಾಡಿತ್ತು ಎಂದು ಐಟಿ ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ.

    ಒಟ್ಟಿನಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಬೇಕು ಅಂದುಕೊಂಡಿದ್ದ ಡಿಕೆಶಿ ಚೌಕಾಸಿ ವ್ಯವಹಾರ ವರ್ಕೌಟ್ ಆಗಿಲ್ಲ. ಅತ್ತ ಯಡಿಯ್ಯೂರಪ್ಪಗೂ ಕ್ಲೀನ್ ಚಿಟ್ ಸಿಕ್ಕಿದ್ರೆ, ಇತ್ತ ಡಿಕೆ ಶಿವಕುಮಾರ್ 75 ಕೋಟಿ ಆಸ್ತಿ ಕಳೆದುಕೊಳ್ಳುವಂತಾಗಿದೆ.

  • ಕಾಂಗ್ರೆಸ್ ಬಿಚ್ಚಿಟ್ಟ ಡೈರಿಯ ಸತ್ಯಾಂಶವನ್ನು ಅಲ್ಲಗಳೆದ ಐಟಿ ಇಲಾಖೆ

    ಕಾಂಗ್ರೆಸ್ ಬಿಚ್ಚಿಟ್ಟ ಡೈರಿಯ ಸತ್ಯಾಂಶವನ್ನು ಅಲ್ಲಗಳೆದ ಐಟಿ ಇಲಾಖೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂಪ್ಪ ಕೇಂದ್ರ ನಾಯಕರಿಗೆ ಕಪ್ಪ ನೀಡಿದ್ದಾರೆ ಎನ್ನಲಾದ ಡೈರಿಯೊಂದರ ಕೆಲ ಪುಟಗಳನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿತ್ತು. ಇದೀಗ ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿಯ ಸತ್ಯಾಂಶವನ್ನು ಐಟಿ ಇಲಾಖೆ ಅಲ್ಲಗಳೆಯುವ ಮೂಲಕ ಯಡಿಯೂರಪ್ಪರಿಗೆ ಕ್ಲೀನ್ ಚಿಟ್ ನೀಡಿದೆ.

    ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ವರ್ಷಾಂತ್ಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಜಿ ಬಿ.ಆರ್. ಬಾಲಕೃಷ್ಣನ್, ಕಾಂಗ್ರೆಸ್ ಬಿಡುಗಡೆ ಮಾಡಿರುವ ದಾಖಲೆಗಳೆಲ್ಲ ನಕಲಿ. ಒಂದು ಐಟಿ ದಾಳಿಯಲ್ಲಿ ನಮ್ಮ ಸಿಬ್ಬಂದಿಗೆ ಕೆಲ ದಾಖಲೆಗಳು ಸಿಕ್ಕಾಗ, ಅವನ್ನೆಲ್ಲ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆ ದಾಖಲೆಗಳೆಲ್ಲ ಫೋಟೋ ಕಾಪಿಗಳು ಆಗಿದ್ದರಿಂದ ಹೈದರಾಬಾದ್ ಸಿಎಸ್‍ಎಫ್‍ಎಲ್ ಸತ್ಯಾಂಶ ಕಂಡು ಹಿಡಿಯಲಿಲ್ಲ. ನಮ್ಮ ಅಭಿಪ್ರಾಯದ ಪ್ರಕಾರ ಅದೊಂದು ಸುಳ್ಳು ದಾಖಲೆ ಎಂದು ಸ್ಪಷ್ಟಪಡಿಸಿದರು.

    ಶುಕ್ರವಾರ ಬಿಡುಗಡೆ ಮಾಡಿರುವ ದಾಖಲೆಗಳ ಮೊದಲ ಪುಟ ನಮಗೆ ಸಿಕ್ಕಿರಲಿಲ್ಲ. ಹಾಗಾಗಿ ಹಣ ವರ್ಗಾವಣೆಯ ಬಗ್ಗೆ ಬರೆದಿರುವ ಆ ಪುಟಗಳು ಶುದ್ಧ ಸುಳ್ಳು ಎಂದು ಬಾಲಕೃಷ್ಣನ್ ಖಚಿತಪಡಿಸಿದರು.

    ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿದಾಗ ಕೆಲ ದಾಖಲಾತಿಗಳು ಲಭ್ಯವಾಗಿದ್ದವು. ಆ ದಾಖಲೆಗಳನ್ನ ತೋರಿಸಿ ಡಿ.ಕೆ.ಶಿವಕುಮಾರ್ ತನಿಖೆಯಿಂದ ರಿಯಾಯಿತಿ ಪಡೆದುಕೊಳ್ಳಲು ಮುಂದಾಗಿದ್ದರು. ನಾವು ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿ ಸಹಾಯ ಮಾಡಲಿಲ್ಲ. ಈ ವೇಳೆ ಲಭ್ಯವಾಗಿರುವ ಕೆಲ ದಾಖಲೆಗಳ ಲಾಭ ಪಡೆಯಲು ಸಚಿವರು ಮುಂದಾಗಿದ್ದರು. ಕಾನೂನು ಪ್ರಕಾರವಾಗಿ ಯಾವ ಕ್ರಮಕೈಗೊಳ್ಳಬೇಕು ಆ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ ಎಂದು ಬಾಲಕೃಷ್ಣನ್ ತಿಳಿಸಿದರು.

  • ಒಂದೇ ಸಾರಿ 10 ಕೋಟಿ ನೋಡಿದ್ರೆ ನಂಗೆ ಹೃದಯಾಘಾತ ಆಗ್ಬಹುದು: ಸೊಗಡು ಶಿವಣ್ಣ

    ಒಂದೇ ಸಾರಿ 10 ಕೋಟಿ ನೋಡಿದ್ರೆ ನಂಗೆ ಹೃದಯಾಘಾತ ಆಗ್ಬಹುದು: ಸೊಗಡು ಶಿವಣ್ಣ

    ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎಂದು ಹೇಳಲಾದ ಡೈರಿಯೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಆ ಡೈರಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಹೆಸರು ಕೂಡ ಉಲ್ಲೇಖವಾಗಿದೆ. ಈ ಬಗ್ಗೆ ಅವರೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೊಗಡು ಶಿವಣ್ಣ, ಆ ಡೈರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನಾವು ಡೈರಿಯನ್ನು ಯಾವತ್ತೂ ಬರೆದಿಲ್ಲ. ಮಾಧ್ಯಮಗಳಲ್ಲಿ ಡೈರಿ ಬಗ್ಗೆ ಬಂದ ಸುದ್ದಿ ತಿಳಿದು ನನಗೆ ಆಶ್ಚರ್ಯವಾಯಿತು. ಇದೊಂದು ಕೆಟ್ಟಕಾಲವಾಗಿದೆ. ಬೇಕಾದರೆ ಮಂಪರು ಪರೀಕ್ಷೆ ಮಾಡಲಿ. ನನ್ನಿಂದಲೇ ಮಂಪರು ಪರೀಕ್ಷೆ ಶುರುವಾಗಲಿ ಎಂದು ಹೇಳಿದ್ದಾರೆ.


    ನನ್ನ ಜೀವನದಲ್ಲೇ ನಾನು 10 ಕೋಟಿ ರೂ. ನೋಡಿಲ್ಲ. ಈಗ ನನ್ನ ಹೃದಯ ಚೆನ್ನಾಗಿದೆ. ಒಂದು ವೇಳೆ ಒಂದೇ ಬಾರಿಗೆ 10 ಕೋಟಿ ರೂ. ನೋಡಿದರೆ ನನಗೆ ಹೃದಯಾಘಾತ ಆಗಬಹುದು. ನಾನು 20 ವರ್ಷ ಎಂಎಲ್‍ಎ ಆಗಿದ್ದಾಗ, 6-8 ತಿಂಗಳ ಮಂತ್ರಿ ಆಗಿದ್ದಾಗ ನಾನು ಹಣವನ್ನೇ ನೋಡಿಲ್ಲ ಎಂದರು.

    ಮೂರು ಚುನಾವಣೆಗೆ ನನ್ನ ಬಳಿ ಹಣವೇ ಇರಲಿಲ್ಲ. ಆ ಡೈರಿಯ ಬಗ್ಗೆ ಹೇಳುವುದಕ್ಕೂ ನನಗೆ ನಾಚಿಕೆಯಾಗುತ್ತದೆ. ನನ್ನ ಹೆಸರು ಮತ್ತು ಪಕ್ಷದ ಹೆಸರನ್ನು ಹಾಳು ಮಾಡಲು ದೇಶ ದ್ರೋಹಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಹೆಸರಿಗೆ ಮಸಿ ಬಳಿಯಲು ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸೊಗಡು ಶಿವಣ್ಣ ಹೇಳಿದರು.

  • ಬಿಎಸ್‍ವೈ ಡೈರಿ ಪ್ರಕರಣ- ಕಾಂಗ್ರೆಸ್ ಮುಂದೆ 10 ಪ್ರಶ್ನೆಗಳನ್ನಿಟ್ಟ ಸಿ.ಟಿ.ರವಿ

    ಬಿಎಸ್‍ವೈ ಡೈರಿ ಪ್ರಕರಣ- ಕಾಂಗ್ರೆಸ್ ಮುಂದೆ 10 ಪ್ರಶ್ನೆಗಳನ್ನಿಟ್ಟ ಸಿ.ಟಿ.ರವಿ

    ಬೆಂಗಳೂರು: ಕಾಂಗ್ರೆಸ್ಸಿನಿಂದ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ವಿರುದ್ಧ ಡೈರಿ ಆರೋಪ ವಿಚಾರ, ಕಾಂಗ್ರೆಸ್ಸಿಗೆ 10 ಪ್ರಶ್ನೆ ಕೇಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡೈರಿಯ ಪ್ರತಿ ಹಾಳೆಯಲ್ಲೂ ಯಾರೂ ಸಹಿ ಮಾಡಲ್ಲ. ಡೈರಿಯಲ್ಲಿ ಹಣ ಕೊಟ್ಟಿರೋದು ಬರೆದಿರೋರು, ತಮ್ಮಗೆ ಬಂದಿರೋ ಹಣದ ಬಗ್ಗೆಯೂ ಬರೆಯಬೇಕಲ್ಲವಾ? 2010 ಪೂರ್ವದಲ್ಲಿ ಯಡಿಯೂರಪ್ಪ ಅವರು ಸಂಖ್ಯಾಶಾಸ್ತ್ರದ ಪ್ರಕಾರ ‘ಯಡ್ಯೂರಪ್ಪ’ ಅಂತಾ ಸಹಿ ಮಾಡುತ್ತಿದ್ದರು. ಇದೊಂದು ಕಾಂಗ್ರೆಸ್ ಸಂಚು. ಚೌಕಿದಾರರು ವರ್ಸಸ್ ಚೋರ್‍ದಾರರ ನಡುವಿನ ಚುನಾವಣೆ ಇದು ಎಂದು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಬಿಎಸ್ ವೈ ಡೈರಿ ಪ್ರಕರಣ- ಇದು ಜೋಕ್ ಆಫ್ ದಿ ಇಯರ್ ಅಂದ್ರು ಬಿ.ವೈ.ರಾಘವೇಂದ್ರ

    ಮೂರು ಬಾರಿ ಸಹಿ ಬದಲಾವಣೆ:
    ಮೊದಲು ಬಿಎಸ್‍ವೈ “ಯಡಿಯೂರಪ್ಪ ” ಎಂದು ಸಹಿ ಮಾಡುತ್ತಿದ್ದರು. ಬಳಿಕ ಸಂಖ್ಯಾಶಾಸ್ತ್ರದ ಪ್ರಕಾರ “ಯಡ್ಯೂರಪ್ಪ” ಎಂದು ಬದಲಾಯಿಸಿಕೊಂಡರು. ಆದರೇ ಇತ್ತೀಚಿಗೆ ಮತ್ತೆ “ಬಿ.ಎಸ್.ಯಡಿಯೂರಪ್ಪ” ಎಂದು ಮತ್ತೆ ಹಳೆಯ ಸಹಿಯನ್ನೇ ಮಾಡುತ್ತಿದ್ದಾರೆ ಎಂದು ಸಿ.ಟಿ ರವಿ ತಿಳಿಸಿದ್ದಾರೆ.  ಇದನ್ನೂ ಓದಿ:ಫೇಕ್ ಡೈರಿ ಮುದ್ರಿಸುವ ಅವಸರದಲ್ಲಿ ಕಾಂಗ್ರೆಸ್ ತಪ್ಪು ಮಾಡಿದೆ: ಬಿಎಸ್‍ವೈ ವ್ಯಂಗ್ಯ

    ಕಾಂಗ್ರೆಸ್ ಮುಂದಿಟ್ಟ ಪ್ರಶ್ನೆಗಳು:
    1. ಡೈರಿ ನಿಮಗೆ ಸಿಕ್ಕಿದ್ದು ಯಾವಾಗ?
    2. ಯಾರು ಈ ಡೈರಿಯನ್ನು ತಂದುಕೊಟ್ಟರು?
    3. ಡೈರಿಯನ್ನು ಎಲ್ಲಿ ಕೊಟ್ಟರು?
    4. ಒರಿಜಿನಲ್ ಡೈರಿ ಎಲ್ಲಿ?
    5. ಏಕೆ ಇದುವರೆಗೂ ಈ ಡೈರಿ ಆದರಿಸಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಲಿಲ್ಲ?


    6. 2013 ಮೇ ತಿಂಗಳಿನಿಂದ ನಿಮ್ಮದೇ ಪಕ್ಷದ ಆಡಳಿತ ಇದ್ದರೂ ಯಾವುದೇ ತನಿಖೆ ನಡೆಸದೇ ಇರಲು ಕಾರಣವೇನು?
    7. ಯಡಿಯೂರಪ್ಪನವರದ್ದೆಂದು ಹೇಳಲಾದ ಡೈರಿಯು ಡಿ.ಕೆ.ಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಾಗಿದೆ.
    8. ಈ ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಕಾಂಗ್ರೆಸ್ ಈಗ ಏಕೆ ದೂರು ನೀಡದಿರಲು ಕಾರಣವೇನು?
    9 ಎಂಎಲ್ ಸಿ ಗೋವಿಂದರಾಜುಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿತ್ತು ಎಂದು ನಮೂದಾಗಿತ್ತು. ಆಗ ಯಡಿಯೂರಪ್ಪ ಡೈರಿ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ?
    10. ಡೈರಿ ಪ್ರಕರಣ ಜನಲೋಕಪಾಲ್ ತನಿಖೆಗೆ ಸೂಕ್ತವಾದುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಆರೋಪ ಮಾಡಿದವರು ದೂರು ನೀಡಬೇಕೆ ಅಥವಾ ದೂರಿಗೆ ಒಳಗಾದವರು ನೀಡಬೇಕೆ? ಎಂದು ಪ್ರಶ್ನಿಸಿದ್ದಾರೆ.

    ಬಿಎಸ್‍ವೈ ಡೈರಿ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ ಬಿಎಸ್‍ವೈ ವಿರುದ್ಧ ಆರೋಪಿಸುತ್ತಿದ್ದಾರೆ. ಆದ್ರೆ ಇನ್ನೊಂದೆಡೆ ಬಿಜೆಪಿ ನಾಯಕರು ಬಿಎಸ್‍ವೈ ಪರ ನಿಂತು ಇದು ಕಾಂಗ್ರೆಸ್ ಅವರ ಸಂಚು ಎಂದು ಕಿಡಿಕಾರುತ್ತಿದ್ದಾರೆ.

  • ಫೇಕ್ ಡೈರಿ ಮುದ್ರಿಸುವ ಅವಸರದಲ್ಲಿ ಕಾಂಗ್ರೆಸ್ ತಪ್ಪು ಮಾಡಿದೆ: ಬಿಎಸ್‍ವೈ ವ್ಯಂಗ್ಯ

    ಫೇಕ್ ಡೈರಿ ಮುದ್ರಿಸುವ ಅವಸರದಲ್ಲಿ ಕಾಂಗ್ರೆಸ್ ತಪ್ಪು ಮಾಡಿದೆ: ಬಿಎಸ್‍ವೈ ವ್ಯಂಗ್ಯ

    ಬೆಂಗಳೂರು: ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿಯಲ್ಲಿನ ತಪ್ಪನ್ನು ಗುರುತಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

    ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಗನ ಮದುವೆಗೆ 1,000 ಕೋಟಿ ರೂ. ನೀಡಿದ್ದೇನೆ ಎಂದು ಒಂದು ಪ್ರತಿಯಲ್ಲಿದೆ. ಆದರೆ ಮತ್ತೊಂದು ಪ್ರತಿಯಲ್ಲಿ 10 ಕೋಟಿ ರೂ. ನೀಡಿದ್ದೇನೆ ಎಂದು ಉಲ್ಲೇಖಿಸಲಾಗಿದೆ. ಮುದ್ರಿಸುವ ಅವಸರದಲ್ಲಿ ಯಾರೋ ಹೀಗೆ ಮಾಡಿದ್ದಾರೆ. ಕಾಂಗ್ರೆಸ್ ನಿನ್ನೆ ಕೀಳು ಮಟ್ಟದ ರಾಜಕಾರಣ ಮಾಡಿದೆ ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

    ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕೇಂದ್ರ ನಾಯಕರಿಗೆ 1,800 ಕೋಟಿ ರೂ. ನೀಡಿದ್ದಾರೆ. ಈ ಡೈರಿಯ ಪ್ರತಿ ಪುಟದಲ್ಲಿ ಬಿಎಸ್ ಯಡಿಯೂರಪ್ಪ ಅವರ ಹಸ್ತ ಬರಹದ ಜೊತೆ ಸಹಿ ಇದೆ. ಅಷ್ಟೇ ಅಲ್ಲದೇ ಈ ಪ್ರಕರಣ ವಿಚಾರಣೆಗೆ ಯೋಗ್ಯವಾಗಿದ್ದು, ಹೊಸದಾಗಿ ನೇಮಕಗೊಂಡಿರುವ ಲೋಕಾಪಲರಿಗೆ ಈ ಡೈರಿಯ ಬಗ್ಗೆ ತನಿಖೆ ನಡೆಸಲು ಆದೇಶ ನೀಡಬೇಕೆಂದು ಅವರು ಹೇಳಿದ್ದರು.

    ಕಾಂಗ್ರೆಸ್ ಆರೋಪಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಬಿ.ಎಸ್.ಯಡಿಯೂರಪ್ಪ ಅವರು, ಇದು ನಕಲಿ ಡೈರಿ. ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಲು, ಸುಳ್ಳು ಸುದ್ದಿಯನ್ನು ಹರಡಲು ಹೀಗೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ನೀಡುತ್ತೇನೆ ಎಂದು ತಿಳಿಸಿದ್ದರು.

    ಡೈರಿಯಲ್ಲಿ ಏನಿದೆ?
    ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ 1 ಸಾವಿರ ಕೋಟಿ, ಅರುಣ್ ಜೇಟ್ಲಿ ಮತ್ತು ಗಡ್ಕರಿ ಅವರಿಗೆ 150 ಕೋಟಿ, ರಾಜನಾಥ್ ಸಿಂಗ್ ಅವರಿಗೆ 100 ಕೋಟಿ, ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ 50 ಕೋಟಿ ರೂ. ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ನಿತಿನ್ ಗಡ್ಕರಿ ಮಗಳ ಮದುವೆಗೆ 10 ಕೋಟಿ ನೀಡಿದ್ದು, ತನ್ನ ವಿರುದ್ಧದ ಕೇಸ್‍ಗಳ ವಕಾಲತ್ತಿಗೆ 50 ಕೋಟಿ ರೂ. ಹಣವನ್ನು ಯಡಿಯೂರಪ್ಪ ನೀಡಿದ್ದಾರೆ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ.

  • ಬಿಎಸ್‍ವೈ ಡೈರಿ ಪ್ರಕರಣ- ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯೆ

    ಬಿಎಸ್‍ವೈ ಡೈರಿ ಪ್ರಕರಣ- ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎಂದು ಹೇಳಲಾದ ಡೈರಿಯೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ತಲ್ಲಣವೇರ್ಪಟ್ಟಿದೆ. ಈ ಕುರಿತು ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯಿಸಿದ್ದಾರೆ.

    ಕಾಂಗ್ರೆಸ್ ನಾಯಕರಿಗೆ ವಿನಯ್ ಅವರೇ ಡೈರಿ ನೀಡಿದ್ದಾರೆ ಎಂಬ ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅವರವರ ವೈಯಕ್ತಿಕ ವಿಚಾರವಾಗಿದೆ. ಅಲ್ಲಿ ಏನೇನ್ ಆಗಿದೆ ಎಂದು ನನಗೆ ಗೊತ್ತಿಲ್ಲ. ಇತ್ತೀಚೆಗೆ ಒಂದು ಆಡಿಯೋ ಕೂಡ ರಿಲೀಸ್ ಆಗಿತ್ತು. ಇದೀಗ ಡೈರಿ ಕೇಸ್ ನಲ್ಲಿ ಸಿಕ್ಕಾಕ್ಕೊಂಡಿದ್ದಾರೆ. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.

    ಆ ಡೈರಿ ಎಲ್ಲಿತ್ತು ಅನ್ನೋದೇ ನನಗೆ ಗೊತ್ತಿಲ್ಲ. ಆ ಡೈರಿಗೂ ನಮಗೂ ಸಂಬಂಧವಿಲ್ಲ. ನಾನೇ ಆ ಡೈರಿಯನ್ನು ನೋಡಿಲ್ಲ. ಹೀಗಾಗಿ ನಾನು ಕೊಟ್ಟಿದ್ದೀನಿ ಎಂದು ಹೇಗೆ ಹೇಳುತ್ತಾರೆ. ಅದಕ್ಕೆ ಅರ್ಥನೂ ಇಲ್ಲ ಅಂದ್ರು.

    ನನ್ನನ್ನು ಕಿಡ್ನಾಪ್ ಮಾಡಿಸಿದ್ದು ಇದೇ ಯಡಿಯೂರಪ್ಪ ಅವರ ಪಿಎ. ಅದರಲ್ಲಿ ಯಾವುದೇ ಅನುಮಾನನೇ ಇಲ್ಲ. ಅದಾದ ಬಳಿಕ ನಾನು ಕಿಡ್ನಾಪ್ ವಿಚಾರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೇಸ್ ಇತ್ತೀಚೆಗೆ ಸಿಸಿಬಿ ಹಸ್ತಾಂತರ ಆದ ಬಳಿಕ ಎಲ್ಲ ವಿಚಾರಣೆ ಆರಂಭವಾದ ನಂತರ ಸಂತೋಷ್, ಸಿಸಿಬಿಗೆ ಹಸ್ತಾಂತರ ಮಾಡಿದುದರ ಬಗ್ಗೆ ಪ್ರಶ್ನೆ ಮಾಡಿ ಹೈ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಹೀಗಾಗಿ ಈ ಲೈನ್ ನಲ್ಲಿ ನಾನು ಹೋರಾಟ ಮಾಡುತ್ತಾ ಬರುತ್ತಿದ್ದೇನೆ. ಈ ಮಧ್ಯೆ ಯಾವುದೋ ಡೈರಿ ವಿಚಾರದ ಕುರಿತು ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಅಂದ್ರು.

    ಡೈರಿ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ನಾನು ಎಲ್ಲಿ ಬೇಕಾದ್ರೂ ಪ್ರಮಾಣ ಮಾಡಲು ರೆಡಿಯಾಗಿದ್ದೇನೆ. ನಾನು ಇಂದಿನವರೆಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿಯೇ ಮಾಡಿಲ್ಲ. ನನ್ನನ್ನು ಕಿಡ್ನಾಪ್ ಮಾಡಲು ಸುಪಾರಿ ಕೊಟ್ಟಿದ್ದೇ ಸಂತೋಷ್. ಆತ ಯಾಕೆ ಮಾಡಿದ ಅನ್ನೋದಕ್ಕೆ ಅವನೇ ಬಾಯಿ ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ರು.

    ಇದೇ ವೇಳೆ ಅವರು ಕಾಂಗ್ರೆಸ್ ನವರು ಬಿಡುಗಡೆ ಮಾಡಿರುವ ಡೈರಿಯ ಮೂಲ(ಒರಿಜಿನಲ್) ಕಾಪಿ ಎಲ್ಲಿದೆ ಎಂದು ಪ್ರಶ್ನಿಸಿದ್ರು. ಐಟಿ ದಾಳಿಯಾದ ಸಂದರ್ಭದಲ್ಲಿ ಅವರ ಮನೆಯಿಂದ ವಶಪಡಿಸಿಕೊಂಡಿರುವ ಎಲ್ಲದಕ್ಕೂ ಒಂದು ನೋಟ್ ಮಾಡಿ ದಾಖಲಾತಿಗಳನ್ನು ಎಂಟ್ರಿ ಮಾಡುತ್ತಾರೆ. ಅಲ್ಲದೆ ಆ ದಾಖಲಾತಿಗೆ ಇವರ ಬಳಿ ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಹೀಗಾಗಿ ಆ ಮಹರು ಪಟ್ಟಿಯಲ್ಲಿ ಡೈರಿ ವಿಚಾರ ಇರಬೇಕಲ್ವ ಎಂದು ವಿನಯ್ ಹೇಳಿದ್ರು.

    ಇಂದು ಯಡಿಯೂರಪ್ಪ ಅವರಿಗೆ ಈ ಪರಿಸ್ಥಿತಿ ಬರಲು ಅವರು ಪಕ್ಕದಲ್ಲಿ ಇಟ್ಟುಕೊಂಡ ಶನಿಯೇ ಕಾರಣ. ಆ ಶನಿ ಪ್ರಭಾವ ಬಿಎಸ್‍ವೈ ಮೇಲೆ ಪರಿಣಾಮ ಬೀಳುತ್ತಿದೆ. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಇನ್ನಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಿದ್ರು.

    ಬಿಎಸ್‍ವೈ ಆಪ್ತ ಸಂತೋಷ್ ಹಾಗೂ ಈಶ್ವರಪ್ಪ ಆಪ್ತ ವಿನಯ್ ಒಡನಾಟ ಚೆನ್ನಾಗಿಯೇ ಇತ್ತು. ಆ ಸಂದರ್ಭದಲ್ಲಿ ಡೈರಿ ವಿನಯ್ ಬಳಿ ಇತ್ತು. ಹೀಗಾಗಿ ಆ ಡೈರಿ ಪಡೆದುಕೊಳ್ಳಲು ಸಂತೋಷ್ ವಿನಯ್ ನನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೆಲ ಬಿಜೆಪಿ ನಾಯಕರು ಸಹ ವಿನಯ್ ಸಂಪರ್ಕ ಮಾಡಿ ಡೈರಿ ಕೊಟ್ಬಿಡು ಎಂದಿದ್ದರು. ಡೈರಿಯನ್ನ ಬಿಎಸ್ ವೈ ಆಪ್ತರೇ ಕಾಂಗ್ರೆಸ್ ನಾಯಕರಿಗೆ ತಲುಪಿಸಿದ್ದಾರೆ ಎಂದು ಈಶ್ವರಪ್ಪ ಆಪ್ತ ವಿನಯ್ ಹೊಸ ಬಾಂಬ್ ಹಾಕಿದ್ದಾರೆ.

  • ಬಿಎಸ್‍ವೈ ಡೈರಿ ಪ್ರಕರಣಕ್ಕೆ ಟ್ವಿಸ್ಟ್ – ಬಿಜೆಪಿಯಿಂದ ದಾಖಲೆ ಬಿಡುಗಡೆ

    ಬಿಎಸ್‍ವೈ ಡೈರಿ ಪ್ರಕರಣಕ್ಕೆ ಟ್ವಿಸ್ಟ್ – ಬಿಜೆಪಿಯಿಂದ ದಾಖಲೆ ಬಿಡುಗಡೆ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ 1800 ಕೋಟಿ ಡೈರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ದೊರೆತಿದೆ.

    ಡೈರಿಯಲ್ಲಿರೋದು ಯಡಿಯೂರಪ್ಪ ಸಹಿ ಅಲ್ಲವೇ ಅಲ್ಲ ಎಂದು ಹೇಳಲಾಗುತ್ತಿದೆ. ಡೈರಿಯಲ್ಲಿರುವ ಸಹಿಗೂ ಬಿಎಸ್‍ವೈ ಸಹಿಗೂ ವ್ಯತ್ಯಾಸ ಇದೆ ಎಂದು ಸಹಿಯ ಅಸಲಿ, ನಕಲಿ ಬಗ್ಗೆ ದಾಖಲೆಯನ್ನು ಯಡಿಯೂರಪ್ಪ ಆಪ್ತರು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: 1800 ಕೋಟಿ ಬಿಎಸ್‌ವೈ ಡೈರಿ ಬಾಂಬ್ – ಗಡ್ಕರಿಗೆ 150 ಕೋಟಿ, ಅಡ್ವಾಣಿಗೆ 50 ಕೋಟಿ!

    2009ರಲ್ಲಿ ಸಚಿವರಾಗಿದ್ದ ಶರದ್ ಪವಾರ್‍ಗೆ ಬಿಎಸ್‍ವೈ ಪತ್ರ ಬರೆದಿದ್ದರು. ಈ ಪತ್ರವನ್ನು ಇಂದು ಬಿಎಸ್‍ವೈ ಆಪ್ತರು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ರಿಲೀಸ್ ಮಾಡಿದ ಡೈರಿಯಲ್ಲಿರುವ ಸಹಿಗೂ ಈ ಸಹಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಯೂರಿಯಾ ಬಗ್ಗೆ ಜುಲೈ 2009ರಲ್ಲಿ ಬಿಎಸ್‍ವೈ ಬರೆದಿದ್ದ ಪತ್ರವನ್ನೂ ಬಿಡುಗಡೆ ಮಾಡುವ ಮೂಲಕ ಸಹಿಯ ಪ್ರತಿ ಅಕ್ಷರ ವ್ಯತ್ಯಾಸ ತೋರಿಸಿ ಮಾರ್ಕ್ ಮಾಡಿ ದಾಖಲೆ ಬಿಡುಗಡೆಗೊಳಿಸಿದ್ದಾರೆ. ಇದನ್ನೂ ಓದಿ: ದಾಳಿ ನಡೆಯದೇ ಇದ್ದರೂ ಬಿಎಸ್‍ವೈ ಡೈರಿ ಐಟಿಗೆ ಸಿಕ್ಕಿದ್ದು ಹೇಗೆ?

    ಹಾಗಾದ್ರೆ ಶುಕ್ರವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿರುವ ಯಡಿಯೂರಪ್ಪ ಸಹಿ ನಕಲಿಯೋ ಅಥವಾ ಅಸಲಿಯೋ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ. ಇತ್ತ ಸಿಬಿಡಿಟಿ ಕೂಡ ಇದು ಬಿಎಸ್‍ವೈ ಅವರ `ಕೈ’ ಬರಹ ಅಲ್ಲ ಅಂತ ಸ್ಪಷ್ಟನೆ ನೀಡುತ್ತಿದೆ.

    ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳ ಆರೋಪ ಕೇವಲ ರಾಜಕೀಯ ಕೆಸರೆರಚಾಟಕ್ಕೆ ಮಾತ್ರನಾ. ಹಾಗೂ ತಾರ್ಕಿಕ ಅಂತ್ಯಕ್ಕೆ ಈ ಪ್ರಕರಣವನ್ನು ತೆಗೆದುಕೊಂಡು ಹೋಗೋದಿಲ್ಲವಾ ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ. ಇದನ್ನೂ ಓದಿ: ಬಿಎಸ್‍ವೈ ಡೈರಿ ಡಿಕೆಶಿ ಮನೆ ಸೇರಿದ್ದು ಹೇಗೆ?

     

  • ಬಿಎಸ್‍ವೈ ಡೈರಿ ಡಿಕೆಶಿ ಮನೆ ಸೇರಿದ್ದು ಹೇಗೆ?

    ಬಿಎಸ್‍ವೈ ಡೈರಿ ಡಿಕೆಶಿ ಮನೆ ಸೇರಿದ್ದು ಹೇಗೆ?

    ಬೆಂಗಳೂರು: ಬಿಜೆಪಿಯ ನಾಯಕರ ಒಳ ಜಗಳದಿಂದಾಗಿ ಯಡಿಯೂರಪ್ಪ ಬರೆದಿದ್ದ ಡೈರಿ ಡಿಕೆ ಶಿವಕುಮಾರ್ ಕೈ ಸೇರಿತ್ತು ಎಂದು ಕಾಂಗ್ರೆಸ್ ಹೇಳಿದೆ.

    ಬಿಜೆಪಿಯ ಮೂವರು ನಾಯಕರ ಒಳ ಜಗಳದಿಂದಾಗಿ ಡೈರಿ ಡಿಕೆ ಶಿವಕುಮಾರ್ ಕೈ ಸೇರಿತ್ತು. ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿ ಈ ಡೈರಿ ವಶಪಡಿಸಿಕೊಂಡಿತ್ತು. 2017 ರಿಂದ ಈ ಡೈರಿ ಆದಾಯ ತೆರಿಗೆ ಇಲಾಖೆಯಲ್ಲೇ ಇದ್ದು, ನಂತರ ಈ ಡೈರಿಯ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ ಎಂದು ಕಾಂಗ್ರೆಸ್ ‘ಕ್ಯಾರವಾನ್’ ವರದಿಯನ್ನು ಉಲ್ಲೇಖಿಸಿ ಆರೋಪಿಸಿದೆ.

    ಕಾಂಗ್ರೆಸ್ ಆರೋಪ ಏನು?
    2017 ರಿಂದ ಡೈರಿ ಐಟಿ ಇಲಾಖೆಯ ಬಳಿ ಈ ಡೈರಿಯಲ್ಲಿ ನೀಡಿರುವ ಮಾಹಿತಿಯಂತೆ ಬಿಜೆಪಿ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದ ವೇಳೆ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಭಾರೀ ಮೊತ್ತದ ಹಣವನ್ನು ಹೈಕಮಾಂಡ್‍ಗೆ ರವಾನೆ ಮಾಡಿದ್ದರು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

    ಸೂಕ್ತ ಸಮಯದಲ್ಲಿ ಡೈರಿಯ ವಿಚಾರವನ್ನು ಬಹಿರಂಗ ಪಡಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಲಾಗಿತ್ತು. ಇದರಂತೆ ಈಗ ಬಹಿರಂಗ ಪಡಿಸಲಾಗಿದೆ. ಆದರೆ ಐಟಿ ಅಧಿಕಾರಿಗಳ ಬಳಿ ಡೈರಿ ಇದ್ದರೂ ಕೂಡ ಏಕೆ ಕ್ರಮಕೈಗೊಳ್ಳಲಿಲ್ಲ ಎಂಬುದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.

    ಡಿಕೆಶಿಗೆ ಸಿಕ್ಕಿದ್ದು ಹೇಗೆ?
    ಬಿಎಸ್‍ವೈ ನಿವಾಸದಲ್ಲಿ ಇದ್ದ ಡೈರಿಯನ್ನು ಕಳವು ಮಾಡಿ ಅದರ ಜೆರಾಕ್ಸ್ ಪ್ರತಿಯನ್ನು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿತ್ತು. ಬಿಎಸ್ ಯಡಿಯೂರಪ್ಪ ಅವರ ಆಪ್ತ ಸಿಬ್ಬಂದಿಯೇ ಈ ಡೈರಿಯನ್ನು ಕಳ್ಳತನ ಮಾಡಿದ್ದರು. ಬಿಜೆಪಿಯಿಂದ ಹೊರಬಂದ ಬಿಎಸ್‍ವೈ ಅವರು ಕೆಜೆಪಿ ಪಕ್ಷ ಬಲ ಪಡಿಸುವ ನಿಟ್ಟಿನಲ್ಲಿ ಇದ್ದರು. ಈ ವೇಳೆ ಅನಂತಕುಮಾರ್, ಈಶ್ವರಪ್ಪ, ಆರ್. ಅಶೋಕ್ ಅವರೊಂದಿಗಿನ ಸಂಬಂಧಗಳು ಹದೆಗೆಟ್ಟಿದ್ದ ಕಾರಣ ಅವರೇ ಡೈರಿ ಕಳ್ಳತನದ ಹಿಂದೆ ಶಾಮೀಲಾಗಿದ್ದರು.

    ರಾಜಕೀಯವಾಗಿ ಬಿಎಸ್‍ವೈ ಅವರಿಗೆ ಹಿನ್ನಡೆ ಉಂಟು ಮಾಡಲು ಬಿಜೆಪಿ ನಾಯಕರೇ ಈ ಡೈರಿಯನ್ನು ತೆಗೆದಿದ್ದಾರೆ. ಕಾಂಗ್ರೆಸ್ಸಿನ ಪ್ರಭಾವಿ ರಾಜಕಾರಣಿಗೆ ಡೈರಿಯ ಜೆರಾಕ್ಸ್ ಪ್ರತಿ ರವಾನೆ ಮಾಡಿ ಆ ಮೂಲಕ ಬಿಎಸ್‍ವೈರನ್ನು ಸಕ್ರೀಯ ರಾಜಕಾರಣವನ್ನು ಅಂತ್ಯ ಮಾಡುವುದು ಇದರ ಉದ್ದೇಶವಾಗಿತ್ತು. ಹೀಗಾಗಿ ಡೈರಿಯ ಜೆರಾಕ್ಸ್ ಪ್ರತಿಯನ್ನು ಡಿಕೆ ಶಿವಕುಮಾರ್ ಮಾತ್ರವಲ್ಲದೇ ಇತರೇ ನಾಯಕರಿಗೂ ತಲುಪಿಸಿದ್ದರು ಎಂದು ಕಾಂಗ್ರೆಸ್ ಹೇಳಿದೆ.

    ಕಾಂಗ್ರೆಸ್ ಪ್ರಶ್ನೆ:
    ಐಟಿ ಅಧಿಕಾರಿಗಳಿಗೆ ಸಿಕ್ಕ ಡೈರಿಯಲ್ಲಿ ಇಷ್ಟೆಲ್ಲಾ ಮಾಹಿತಿ ಇದ್ದರು ಕೂಡ ಡೈರಿ ಸತ್ಯಾಂಶ ಏಕೆ ಹೊರಬೀಳಲಿಲ್ಲ? ಐಟಿ ಏಕೆ ಯಾವುದೇ ಸ್ಪಷ್ಟ ತನಿಖೆ ನಡೆಸಿಲ್ಲ? ಇದು ಅಸಲಿಯೋ? ನಕಲಿಯೋ? ಎಂದು ಐಟಿ ಏಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸುರ್ಜೆವಾಲಾ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

    ಬಿಎಸ್‍ವೈ ಸ್ಪಷ್ಟನೆ:
    ಕಾಂಗ್ರೆಸ್ ಪಕ್ಷದ ಆರೋಪವನ್ನು ಅಲ್ಲಗೆಳೆದಿರುವ ಬಿಎಸ್‍ವೈ ರಾಜಕೀಯ ಲಾಭಕ್ಕಾಗಿ ಮಾತ್ರ ಈ ಆರೋಪ ಮಾಡಲಾಗಿದೆ. ಡೈರಿ ಬಗ್ಗೆ ಈ ಹಿಂದೆಯೇ ತನಿಖೆ ನಡೆಸಲಾಗಿದ್ದು, ನನ್ನ ಕೈ ಬರಹ ಕೂಡ ಪಡೆದು ಪರೀಕ್ಷೆ ನಡೆಸಲಾಗಿದೆ. ಬಳಿಕವೇ ಇದು ನಕಲಿ ಡೈರಿ ಎಂದು ದೃಢವಾಗಿದೆ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.