Tag: dairy

  • ಕಾಂಗ್ರೆಸ್‌ನಲ್ಲೇ ಒಳ ರಾಜಕಾರಣ| ತಗ್ಗಿದ ಭೀಮಾನಾಯ್ಕ್ ಬಲ- ರಾಘವೇಂದ್ರಗೆ ರಾಬಕೊವಿ ಫಲ

    ಕಾಂಗ್ರೆಸ್‌ನಲ್ಲೇ ಒಳ ರಾಜಕಾರಣ| ತಗ್ಗಿದ ಭೀಮಾನಾಯ್ಕ್ ಬಲ- ರಾಘವೇಂದ್ರಗೆ ರಾಬಕೊವಿ ಫಲ

    – ಅವಿರೋಧವಾಗಿ ಹಿಟ್ನಾಳ್ ಆಯ್ಕೆ
    – ಧಮ್ಮು ತಾಕತ್ತು ಏನೆಂದು ತೋರಿಸಿದ್ದೇನೆ
    – ಹಾಲು ಒಕ್ಕೂಟದ ಕಚೇರಿಗೆ ಬಾರದ ಭೀಮಾನಾಯ್ಕ್‌

    ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ(ರಾಬಕೊವಿ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಪಾಲಾಗಿದೆ.

    ಕಳೆದ ಎಂಟು ವರ್ಷಗಳಿಂದ ರಾಬಕೊವಿ ಹಾಗೂ ಐದು ವರ್ಷ ರಾಜ್ಯ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಮಾಜಿ ಶಾಸಕ ಭೀಮಾನಾಯ್ಕ್ (Bheema Naik) ಈ ಬಾರಿಯೂ ಅಧ್ಯಕ್ಷ ಸ್ಥಾನ ಅಲಂಕರಿಸುವ ವಿಶ್ವಾಸದಲ್ಲಿದ್ದರು. ಆದರೆ ಅಧ್ಯಕ್ಷರಾಗಲು ಬೇಕಿರುವ ನಿರ್ದೇಶಕರ ಸಂಖ್ಯಾಬಲ ಇಲ್ಲದ ಕಾರಣ ಕೆಎಂಫ್ ಮೇಲಿನ ಅವರ ಭೀಮಬಲವನ್ನು ಕುಸಿಯುವಂತೆ ಮಾಡಿತು.

    ಕೊನೆಗಳಿಗೆವರೆಗೂ ಕೆಲವು ನಿರ್ದೇಶಕರು ಅವರ ಪರ ಬರಬಹುದು ಎನ್ನುವ ಕಾರಣಕ್ಕೆ ಬಳ್ಳಾರಿವರೆಗೂ ಬಂದಿದ್ದ ಭೀಮಾನಾಯ್ಕ್ ರಾಬಕೊವಿ ಹಾಲು ಒಕ್ಕೂಟದ ಕಚೇರಿವರೆಗೂ ಬರಲಿಲ್ಲ. ಅಲ್ಲದೇ ಬಳ್ಳಾರಿ ಸೇರಿ ಕೊಪ್ಪಳ, ರಾಯಚೂರು ಜಿಲ್ಲೆಯ ಕಾಂಗ್ರೆಸ್ (Congress0 ನಾಯಕರ ಒಳ ರಾಜಕಾರಣ ಭೀಮಾನಾಯ್ಕ್‌ಗೆ ಭಾರೀ ಮುಖಭಂಗವನ್ನುಂಟು ಮಾಡಿತು. ರಾಬಕೊವಿ ಅಧ್ಯಕ್ಷ ಸ್ಥಾನ ಅಲಂಕರಿಸಬೇಕು ಎನ್ನುವ ಲೆಕ್ಕಚಾರವನ್ನೇ ಬುಡಮೇಲು ಮಾಡಿತು. ಇದೇ ಕಾರಣಕ್ಕೆ ಒಕ್ಕೂಟದ ಕಚೇರಿಗೂ ಕಾಲಿಡದ ಭೀಮಾನಾಯ್ಕ್ ಖಾಸಗಿ ಹೋಟೆಲ್‌ನಲ್ಲಿ ಉಳಿದು ವಾಪಸ್‌ ಸ್ವಕ್ಷೇತ್ರಕ್ಕೆ ಮರಳಿದರು. ಇದನ್ನೂ ಓದಿ: ಒಡಿಶಾ | ಅರಣ್ಯ ಅಧಿಕಾರಿ ಮನೆ ಮೇಲೆ ವಿಜಿಲೆನ್ಸ್ ದಾಳಿ – ಸಂಪತ್ತಿನ ಖಜಾನೆ ಪತ್ತೆ!

    8 ಜನರ ಬೆಂಬಲ:
    ರಾಬಕೊವಿ ಹಾಲು ಒಕ್ಕೂಟಕ್ಕೆ ಒಟ್ಟು 12 ನಿರ್ದೇಶಕ ಸ್ಥಾನಗಳಿದ್ದು, 1 ಸರ್ಕಾರಿ ನಾಮ ನಿರ್ದೇಶನ, 5 ಸರ್ಕಾರಿ ಅಧಿಕಾರಿಗಳ ವೋಟ್‌ಗಳಿವೆ. ಆದರೆ ಚುನಾಯಿತ 12 ನಿರ್ದೇಶಕರ ಪೈಕಿ 7 ನಿರ್ದೇಶಕರು, ರಾಘವೇಂದ್ರ ಹಿಟ್ನಾಳ್ ಪರ ಮತ್ತು 5 ನಿರ್ದೇಶಕರು ಭೀಮಾನಾಯ್ಕ್ ಪರ ಇದ್ದರು. ರಾಘವೇಂದ್ರ ಹಿಟ್ನಾಳ್‌ರನ್ನು ನಾಮನಿರ್ದೇಶನ ಸದಸ್ಯರಾಗಿ ಸರ್ಕಾರ ನೇಮಕ ಮಾಡಿದ್ದರಿಂದ ಹಿಟ್ನಾಳ್ ಸದಸ್ಯ ಬಲ 8ಕ್ಕೆ ಏರಿಕೆಯಾಯಿತು. ಹೀಗಾಗಿ ಬಹುಮತ ಇಲ್ಲ ಎನ್ನುವ ಸುಳಿವು ಅರಿತು ಭೀಮಾನಾಯ್ಕ್ ನಾಮಪತ್ರ ಸಲ್ಲಿಸಲು ಆಗಮಿಸಲೇ ಇಲ್ಲ. ಇದೇ ಕಾರಣಕ್ಕೆ ರಾಬಕೊವಿಗೆ ರಾಘವೇಂದ್ರ ಹಿಟ್ನಾಳ್ ಅನಾಯಸವಾಗಿ, ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.

    ಒಳ ರಾಜಕಾರಣದ ಪೆಟ್ಟು:
    ರಾಘವೇಂದ್ರ ಹಿಟ್ನಾಳ್ ರಾಬಕೊವಿ ಅಧ್ಯಕ್ಷರಾಗಿ ಆಯ್ಕೆಯಾಗುವುದರ ಹಿಂದೆ ನಾಲ್ಕು ಜಿಲ್ಲೆಗಳ ಒಳ ರಾಜಕಾರಣ ಕೆಲಸ ಮಾಡಿದೆ. ವಿಶೇಷವಾಗಿ ಬಳ್ಳಾರಿ, ಕೊಪ್ಪಳದಲ್ಲಿನ ಕೆಲವು ಕಾಂಗ್ರೆಸ್ ಮುಖಂಡರು ಹಾಗೂ ಸ್ವತಃ ಕಾಂಗ್ರೆಸ್‌ನವರೇ ಗುನ್ನಾ ಇಟ್ಟಿದ್ದಾರೆ. ಇತ್ತೀಚೆಗೆ ಭೀಮಾನಾಯ್ಕ್ ಅಖಂಡ ಬಳ್ಳಾರಿ ಜಿಲ್ಲೆಯ ಯಾವ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲಿಲ್ಲ. ಮಂತ್ರಿಯಂತೆ ವರ್ತಿಸುವ ಸ್ವಭಾವ ಭೀಮಾನಾಯ್ಕ್‌ಗೆ ತಿರುಗುಬಾಣವಾಗಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ರಾಬಕೊವಿ ಅಧ್ಯಕ್ಷರಾಗಲು ಬಂದ ಕೊಪ್ಪಳ ಶಾಸಕ ಹಿಟ್ನಾಳ್ ಮತ್ತು ಅವರ ಬೆಂಬಲಿಗರಿಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರೇ ಅತಿಥ್ಯ ಕಲ್ಪಿಸಿದ್ದು ಕಂಡು ಬಂತು. ಇದನ್ನೂ ಓದಿ: 15 ವರ್ಷದಿಂದ ನಡೆಯುತ್ತಿದೆ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ- ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು

    ಅವಿರೋಧ ಆಯ್ಕೆ:
    ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಯಾದರು.

    ಚುನಾವಣೆ ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಹಾಲು ಒಕ್ಕೂಟದ ಕಚೇರಿಯಲ್ಲಿ ಚುನಾವಣೆ ಅಧಿಕಾರಿ ಇರುವ ಕೊಠಡಿಗೆ ಆಗಮಿಸಿದ ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷ ಸ್ಥಾನಕ್ಕೆ, ಎನ್.ಸತ್ಯನಾರಾಯಣ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಎದುರಾಗಿ ಯಾವುದೇ ನಾಮಪತ್ರ ಸಲ್ಲಿಸದೇ ಇರುವುದರಿಂದ 1 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಚುನಾವಣೆಗೆ ಬೇಕಿದ್ದ ಬಹುಮತ ಇರುವ ಕಾರಣಕ್ಕೆ ತಲೆಗಳ ಲೆಕ್ಕ ಹಾಕಿ ಎದುರಾಗಿ ಯಾರೂ ನಾಮ ಪತ್ರ ಸಲ್ಲಿಸದೇ ಇರದೇ ಇರುವ ಕಾರಣಕ್ಕೆ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ, ಎಸಿ ಪ್ರಮೋದ ಘೋಷಣೆ ಮಾಡಿದರು.

    ವಿಜಯೋತ್ಸವ‌ ಆಚರಣೆ:
    ರಾಬಕೊವಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಪ್ರಕಟವಾಗುತ್ತಿದ್ದಂತೆಯೇ ಕಚೇರಿ ಮುಂದೆ ಜಮಾಯಿಸಿದ್ದ ನೂರಾರು ಕಾರ್ಯಕರ್ತರು, ಹಿಟ್ನಾಳ್ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಳ್ಳಾರಿ ನಗರ ಶಾಸಕ ಭರತರೆಡ್ಡಿ, ಕಂಪ್ಲಿ ಶಾಸಕ ಜೆಎನ್ ಗಣೇಶ ಸೇರಿ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರದ ಹಲವು ಕಾಂಗ್ರೆಸ್ ಮುಖಂಡರು ಆಗಮಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.


    ಸವಾಲು ಗೆದ್ದಿದ್ದೇನೆ:
    ತಾಕತ್ತು, ಧಮ್ಮು ತೋರಿಸಲು ಅಧ್ಯಕ್ಷನಾದೆ ಎಂದ ಹಿಟ್ನಾಳ್- ಈ ಹಿಂದಿನ ಅಧ್ಯಕ್ಷರು ರಾಬಕೊವಿ ಹಾಲು ಒಕ್ಕೂಟಕ್ಕೆ ನಾಮಪತ್ರ ಸಲ್ಲಿಸಲು, ಅಧ್ಯಕ್ಷರಾಗಲು ದಮ್ಮು, ತಾಕತ್ತು ಬೇಕು ಎಂದು ಸವಾಲು ಹಾಕಿದ್ದರು. ಇದೇ ಕಾರಣಕ್ಕೆ ಅನಿರೀಕ್ಷಿತವಾಗಿ ನಾನು ಸಹಕಾರ ಕ್ಷೇತ್ರಕ್ಕೆ ಬಂದು ನನ್ನ ದಮ್ಮು, ತಾಕತ್ತು ಪ್ರದರ್ಶನ ಮಾಡಿದ್ದೇನೆ ಎಂದು ಭೀಮಾನಾಯ್ಕ್ ವಿರುದ್ದ ಕೊಪ್ಪಳ ಶಾಸಕ, ರಾಬಕೊವಿ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಆಕ್ರೋಶ ಹೊರ ಹಾಕಿದರು.

    ರಾಬಕೊವಿ ಕಚೇರಿಯಲ್ಲಿ ನಡೆದ ಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಘವೇಂದ್ರ ಹಿಟ್ನಾಳ್, ಎಲ್ಲರೂ ಕಾಂಗ್ರೆಸ್ ಪಕ್ಷದವರೇ ಇರುವುದು ನಿಜ. ಆದರೆ ಇಲ್ಲಿನ ಒಕ್ಕೂಟಕ್ಕೆ ಬರಲು ದಮ್ಮು, ತಾಕತ್ತು ಇರಬೇಕು ಎಂದು ಸವಾಲು ಹಾಕಿದ್ದರು. ನಾನು ಈ ಸವಾಲು ಗೆದ್ದಿದ್ದೇನೆ ಮತ್ತು ಇದನ್ನು ಇಷ್ಟಕ್ಕೆ ಬಿಡುತ್ತೇನೆ ಎಂದರು.

    ಇಲ್ಲಿ ಯಾರನ್ನೂ ತುಳಿಯುವ ಮಾತು ಬರುವುದಿಲ್ಲ. ಸಿಎಂ, ಡಿಸಿಎಂ ಹಾಗೂ ನಾಲ್ಕು ಜಿಲ್ಲೆಯ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿ ಕೆಲಸ ಮಾಡುತ್ತೇನೆ. ರಾಬಕೊವಿದಲ್ಲಿ ಹಲವು ಸಮಸ್ಯೆಗಳಿವೆ. ಇದು ಸಾಲದಲ್ಲಿದ್ದು ಇದೆಲ್ಲವನ್ನೂ ಸರಿಪಡಿಸುತ್ತೇನೆ. ಬಳ್ಳಾರಿಗೆ ಅನ್ಯಾಯವಾಗಿರುವುದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ರಾಬಕೊವಿಗೆ ಮಂಜೂರಾದ ಮೆಗಾ ಡೈರಿ ಬಳ್ಳಾರಿಯಲ್ಲೇ ಮಾಡುತ್ತೇವೆ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಬಳಿಕ ಎಲ್ಲಾ ತೀರ್ಮಾನ ಆಗಿದೆ ಎಂದು ಹೇಳಿದರು.

  • ಹಾಲಿಗೆ ನೀರು ಬೆರೆಸಿ ಅಕ್ರಮ – ಕೆಲಸದಿಂದ ಸಿಬ್ಬಂದಿ ವಜಾ ಮಾಡಿದ ಚಿಮುಲ್

    ಹಾಲಿಗೆ ನೀರು ಬೆರೆಸಿ ಅಕ್ರಮ – ಕೆಲಸದಿಂದ ಸಿಬ್ಬಂದಿ ವಜಾ ಮಾಡಿದ ಚಿಮುಲ್

    ಚಿಕ್ಕಬಳ್ಳಾಪುರ: ಡೈರಿಗಳ ಸಿಬ್ಬಂದಿ ಶುದ್ಧ ಹಾಲಿಗೆ ನೀರು ಮಿಶ್ರಣ ಮಾಡಿ ಹಾಲಿನ ಒಕ್ಕೂಟ ಹಾಗೂ ನಂದಿನಿ ಹಾಲಿನ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ಬಯಲಾಗಿದೆ.

    ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಚಿಮುಲ್ ಮತ್ತೆ ಸುದ್ದಿಯಲ್ಲಿದೆ. ಚಿಮುಲ್‌ಗೆ ಸರಬರಾಜು ಮಾಡುವ ಪರಿಶುದ್ಧ ಹಸುವಿನ ಹಾಲಿಗೆ ನೀರು ಮಿಶ್ರಣ ಮಾಡಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

    ಚಿಂತಾಮಣಿ ತಾಲೂಕಿನ ಮಾಡಿಕೆರೆ ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಲಿನ ಡಂಪ್ ಟ್ಯಾಂಕ್‌ಗೆ ನೀರು ಕಲಬೆರಕೆ ಮಾಡಿ, ಹಾಲಿನ ಟ್ಯಾಂಕ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಡೈರಿಗೆ ಸರಬರಾಜು ಮಾಡಿ ಈಗ ಸಿಕ್ಕಿ ಬಿದ್ದಿದ್ದಾರೆ. ಸ್ವತಃ ಡೈರಿ ಸಿಬ್ಬಂದಿ ಕಳ್ಳಾಟವನ್ನು ಮತ್ತೋರ್ವ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

    ಮಾಡಿಕೆರೆ ಹಾಲಿನ ಡೈರಿ ಬಿಎಂಸಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಹಾಲಿನ ಮಿಶ್ರಣ ಅಕ್ರಮ ವಿಚಾರ ಬಯಲಾಗುತ್ತಿದ್ದಂತೆ ಸ್ವತಃ ಚಿಮುಲ್ ಎಂ.ಡಿ. ಶ್ರೀನಿವಾಸಗೌಡ ಅಲರ್ಟ್ ಆಗಿದ್ದಾರೆ. ಡೈರಿಯ ಸಹಾಯಕ ಚೇತನ್‌ನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಹಾಲಿನ ಟ್ಯಾಂಕರ್‌ನ ಚಾಲಕನ ಮಾರ್ಗ ಬದಲಾವಣೆ ಮಾಡಿ, ಹಾಲಿಗೆ ನೀರು ಮಿಶ್ರಣ ಕಳ್ಳಾಟ ತನಿಖೆಗೆ ಸಮಿತಿಯೊಂದನ್ನು ರಚಿಸಿದ್ದಾರೆ. ಅಕ್ರಮ ತಡೆಗಟ್ಟುವ ಭರವಸೆ ನೀಡಿದ್ದಾರೆ.

  • ಬಿಜೆಪಿ ಸರ್ಕಾರದ ಬಾಕಿ 669.59 ಕೋಟಿ ರೂ. ಹಾಲು ಪ್ರೋತ್ಸಾಹಧನ ಬಿಡುಗಡೆ ಮಾಡಿ: ಶಾಸಕ ದಿನೇಶ್‌ ಗೂಳಿಗೌಡ ಮನವಿ

    ಬಿಜೆಪಿ ಸರ್ಕಾರದ ಬಾಕಿ 669.59 ಕೋಟಿ ರೂ. ಹಾಲು ಪ್ರೋತ್ಸಾಹಧನ ಬಿಡುಗಡೆ ಮಾಡಿ: ಶಾಸಕ ದಿನೇಶ್‌ ಗೂಳಿಗೌಡ ಮನವಿ

    – ಕಳೆದ 7 ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ ಹಿಂದಿನ ಸರ್ಕಾರ
    – ತುರ್ತು ಹಣ ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಿ

    ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ರೈತರಿಗೆ ಸುಮಾರು 669.59 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನವು (Milk Subsidy Price) ಬಾಕಿ ಇದ್ದು ಇದನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಮೂಲಕ ರೈತರ ತುರ್ತು ಅವಶ್ಯಕತೆಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ (Dinesh Guligowda) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಮಾಡಿದರು.

    ಇದು ಕೃಷಿ ಚಟುವಟಿಕೆಯ ಕಾಲವಾಗಿದ್ದು, ರೈತರಿಗೆ ಅನೇಕ ಖರ್ಚುಗಳು ಇರುತ್ತವೆ. ಮಕ್ಕಳ ಶೈಕ್ಷಣಿಕ ವರ್ಷವೂ ಆರಂಭವಾಗಿರುವುದರಿಂದ ಅವರ ಶೈಕ್ಷಣಿಕ ಶುಲ್ಕ, ಪುಸ್ತಕ ಇನ್ನಿತರ ಖರ್ಚುಗಳು ಇರುತ್ತವೆ. ಇನ್ನು ಮೇವು, ಪಶು ಆಹಾರ ಕೊಳ್ಳಬೇಕಿರುತ್ತದೆ. ಹೀಗಾಗಿ ತುರ್ತಾಗಿ ಈ ಹಣವನ್ನು ಬಿಡುಗಡೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಯುಪಿ ಕೋರ್ಟ್‍ನಲ್ಲೇ ಗ್ಯಾಂಗ್‍ಸ್ಟರ್ ಹತ್ಯೆ

    ಮನವಿ ಪತ್ರದಲ್ಲೇನಿದೆ?
    ರಾಜ್ಯ ಸರ್ಕಾರ ಹೈನುಗಾರರಿಗೆ ಅನುಕೂಲವಾಗಲು ರೈತರಿಗೆ ಪ್ರತಿ ಲೀಟರ್‌ ಹಾಲಿಗೆ 05 ರೂ. ಪ್ರೋತ್ಸಾಹಧನ ನೀಡುತ್ತಾ ಬಂದಿದೆ. ಇದರಿಂದ ಹೈನುಗಾರರು ಉತ್ಪಾದನೆ ಮಾಡಿದ ಹಾಲಿಗೆ ಲಾಭದಾಯಕ ದರ ಸಿಕ್ಕಿದಂತಾಗುತ್ತದೆ. ಅಲ್ಲದೆ, ನೇರವಾಗಿ ರೈತರ ಖಾತೆಗಳಿಗೆ ಹಣ ಜಮಾ ಆಗುವುದರಿಂದ ಮೇವು, ಪಶು ಆಹಾರ ಕೊಳ್ಳಲು ಈ ಪ್ರೋತ್ಸಾಹಧನವು ಅನುಕೂಲವಾಗುತ್ತದೆ. ಆದರೆ, ಹಿಂದಿನ ಸರ್ಕಾರ ಕಳೆದ 07 ತಿಂಗಳುಗಳಿಂದ ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿರುವುದಿಲ್ಲ. ಇದರಿಂದಾಗಿ ಹೈನುಗಾರರಿಗೆ ತೊಂದರೆಯಾಗುತ್ತಿದೆ.

    ಈಗ ಸುಮಾರು 669.59 ಕೋಟಿ ರೂ. ಪ್ರೋತ್ಸಾಹಧನವನ್ನು ಸರ್ಕಾರ ಹೈನುಗಾರರಿಗೆ ವಿತರಿಸಲು ಬಾಕಿ ಇದೆ. ಪ್ರತಿ ಹೈನುಗಾರರಿಗೆ ಕನಿಷ್ಠ 5 ಸಾವಿರದಿಂದ 30 ಸಾವಿರವರೆಗೂ ಪ್ರೋತ್ಸಾಹಧನ ಬರುವುದು ಬಾಕಿ ಉಳಿದುಕೊಂಡಿದೆ. ಪ್ರತಿ ತಿಂಗಳು ಸರ್ಕಾರ ರಾಜ್ಯದ ಎಲ್ಲ ಹೈನುಗಾರರಿಗೆ ಸುಮಾರು 109 ಕೋಟಿ ರೂ. ಹಾಲಿನ ಪ್ರೋತ್ಸಾಹಧನ ನೀಡಬೇಕಿದೆ.

     

    ಸಾಮಾನ್ಯ ವರ್ಗದ ಹೈನುಗಾರರಿಗೆ 2022 ರ ನವೆಂಬರ್‌ನಲ್ಲಿ 109.90 ಕೋಟಿ ರೂ, ಡಿಸೆಂಬರ್‌-109.81 ಕೋಟಿ, 2023ರ ಜನವರಿಯಲ್ಲಿ 107.89 ಕೋಟಿ, ಫೆಬ್ರವರಿ-93.56, ಮಾರ್ಚ್‌-93.89 ಕೋಟಿ, ಏಪ್ರಿಲ್‌-93.67 ಕೋಟಿ ರೂಪಾಯಿಗಳನ್ನು ನೀಡುವುದು ಬಾಕಿ ಇದೆ. ಎಸ್‌ಸಿ ವರ್ಗಕ್ಕೆ 2023ರ ಮಾರ್ಚ್‌ರಲ್ಲಿ-3.08 ಕೋಟಿ ರೂ, ಏಪ್ರಿಲ್‌-3.17 ಕೋಟಿ ರೂ. ಸಹಾಯಧನ ವಿತರಣೆ ಬಾಕಿ ಇದೆ. ಹಾಗೆಯೇ ಕಳೆದ ಹಿಂದಿನ ವರ್ಷಗಳ ಪೈಕಿ ಸಾಮಾನ್ಯ ವರ್ಗದವರಿಗೆ 2019-20 ನೇ ಸಾಲಿನಲ್ಲಿ 12.51 ಕೋಟಿ ರೂ, 2020-21 ನೇ ಸಾಲಿನಲ್ಲಿ 9.64 ಕೋಟಿ ರೂ. 2021-22 ನೇ ಸಾಲಿನಲ್ಲಿ-22.37 ಕೋಟಿ ರೂ. ಸೇರಿದಂತೆ ಒಟ್ಟಾರೆ ಕಳೆದ ಆರ್ಥಿಕ ವರ್ಷದಲ್ಲಿ 624.06 ಕೋಟಿ ರೂ ಹಾಗೂ ಹಿಂದಿನ ವರ್ಷಗಳ ಬಾಕಿ 45.53 ಕೋಟಿ ರೂ. ಸೇರಿ ಒಟ್ಟು 669.59 ಕೋಟಿ ರೂಪಾಯಿಯಷ್ಟು ಸರ್ಕಾರದಿಂದ ಹೈನುಗಾರರಿಗೆ ಸಂದಾಯವಾಗಬೇಕಿದೆ.

    ಇದರಲ್ಲಿ ಮಂಡ್ಯ ಜಿಲ್ಲೆಗೆ ಒಟ್ಟು 72.34 ಕೋಟಿ ರೂಗಳು ಹೈನುಗಾರರಿಗೆ ಸಂದಾಯವಾಗುವುದು ಬಾಕಿ ಇದೆ. 2022ರ ನವೆಂಬರ್‌ನಲ್ಲಿ 12.40 ಕೋಟಿ ರೂ, ಡಿಸೆಂಬರ್‌-12.88 ಕೋಟಿ ರೂ, 2023 ಜನವರಿಯಲ್ಲಿ-12.68 ಕೋಟಿ ರೂ, ಫೆಬ್ರವರಿ-10.90 ಕೋಟಿ ರೂ., ಮಾರ್ಚ್‌-11.92 ಕೋಟಿ ರೂ., ಏಪ್ರಿಲ್‌-11.56 ಕೋಟಿ ರೂ. ಪ್ರೋತ್ಸಾಹಧನ ನೀಡುವುದು ಬಾಕಿ ಇದೆ.

    ವಿವಿಧ ಕಾರಣಗಳಿಂದ ಪಶು ಆಹಾರ, ಮೇವಿನ ದರ ಏರಿಕೆಯಾಗಿದೆ. ಕೆಲವೆಡೆ ಗಂಟು ರೋಗ ಜಾನುವಾರುಗಳಿಗೆ ಬಾಧಿಸಿ, ಹಾಲಿನ ಇಳುವರಿ ಕೂಡ ಕಡಿಮೆಯಾಗಿದೆ, ಕೆಲವು ಜಾನುವಾರುಗಳು ಮೃತಪಟ್ಟಿವೆ. ಇದರಿಂದ ಹೈನುಗಾರರು ತೀರ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಬಾಕಿ ಇರುವ ಪ್ರೋತ್ಸಾಹಧನವನ್ನು ಸರ್ಕಾರ ಬಿಡುಗಡೆ ಮಾಡಿದಲ್ಲಿ ಹೈನುಗಾರರಿಗೆ ನೆರವಾಗುವುದು. ಮಳೆಗಾಲದಲ್ಲಿ ಪಶು ಆಹಾರ ಖರೀದಿಸಿ ದಾಸ್ತಾನು ಮಾಡಲು, ಅಲ್ಲದೆ, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಪಾವತಿಗೆ, ಅಥವಾ ದೈನಂದಿನ ಇತರ ಖರ್ಚುಗಳಿಗೆ ಅನುಕೂಲವಾಗಲಿದೆ. ರಾಜ್ಯದ ಹೈನುಗಾರರ ಹಿತ ದೃಷ್ಟಿಯಿಂದ ಈ ಪ್ರೋತ್ಸಹಧನವನ್ನು ಅತಿ ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ರೈತ ಸಮೂಹದ ಪರವಾಗಿ ಶಾಸಕ ದಿನೇಶ್‌ ಗೂಳಿಗೌಡ ಅವರು ಮನವಿ ಮಾಡಿದ್ದಾರೆ.

  • ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಪಶುಪಾಲನೆ, ಪಶುವೈದ್ಯಕೀಯ ಇಲಾಖೆ ಮಾಡಬೇಕಿದೆ: ಪ್ರೀತಂಗೌಡ

    ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಪಶುಪಾಲನೆ, ಪಶುವೈದ್ಯಕೀಯ ಇಲಾಖೆ ಮಾಡಬೇಕಿದೆ: ಪ್ರೀತಂಗೌಡ

    ಹಾಸನ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ರೈತರು ಬೇಸಾಯದ ಜೊತೆಗೆ ಹೈನುಗಾರಿಕೆ ಮೇಲೂ ಹೆಚ್ಚು ಅವಲಂಬಿತರಾಗಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಪಶುಪಾಲನೆ ಹಾಗೂ ಪಶುವೈದ್ಯಕೀಯ ಇಲಾಖೆ ಮಾಡಬೇಕಿದೆ ಎಂದು ಶಾಸಕರಾದ ಪ್ರೀತಂ.ಜೆ.ಗೌಡ ತಿಳಿಸಿದ್ದಾರೆ.

    ನಗರದ ಸಂತೆ ಪೇಟೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕರ ಕಚೇರಿ ಹಾಗೂ ತರಬೇತಿ ಕಟ್ಟಡಗಳನ್ನು ಪ್ರೀತಂ ಗೌಡ ಉದ್ಘಾಟಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತಿವೃಷ್ಠಿ, ಅನಾವೃಷ್ಠಿ ಕೃಷಿಕರ ಲಾಭ ಹಾಳು ಮಾಡಿದ್ರೂ, ಹೈನುಗಾರಿಕೆ ರೈತಾಪಿ ವರ್ಗದ ಬದುಕು ಉಳಿಸುತ್ತಿದೆ ಎಂದರು. ಇದನ್ನೂ ಓದಿ: 60ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು – ಕಣ್ಣೀರಿಟ್ಟ ರೈತ ಮಹಿಳೆ

    ಜಾನುವಾರುಗಳ ಆರೋಗ್ಯ ಸುರಕ್ಷತೆಯ ಜವಾಬ್ದಾರಿ ಪಶುವೈದ್ಯಕೀಯ ಇಲಾಖೆಯದ್ದಾಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಹೈನುಗಾರಿಕೆ ಪ್ರಧಾನ ಕಸುಬು. ಇದೇ ಅವರ ಆದಾಯ ಮೂಲವಾಗಿದೆ. ಜೊತೆಗೆ ಕುರಿ, ಕೋಳಿ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರ ಪಶುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವ ಜೊತೆಗೆ ತಮ್ಮ ಶ್ರಮವನ್ನು ಲಾಭದಾಯಕವಾಗಿಸಿಕೊಳ್ಳುವ ಬಗ್ಗೆ ಸೂಕ್ತ ತರಬೇತಿ ಒದಗಿಸಿ ಎಂದು ಮನವಿ ಮಾಡಿದರು.

    ರೈತರಿಗೆ ಬೇಕಾದ ಮಾಹಿತಿ ಮಾರ್ಗದರ್ಶನಕ್ಕೆ ಸೂಕ್ತ ನಿಗದಿತ ಸ್ಥಳ ಬೇಕಾಗಿತ್ತು. ಜೊತೆಗೆ ವೈದ್ಯಾಧಿಕಾರಿಗಳು ಪಶುವೈದ್ಯಕೀಯ ಸಿಬ್ಬಂದಿಗೂ ತರಬೇತಿ ನೀಡುವ ಮೈಸೂರು ವಿಭಾಗದ ಕಚೇರಿ ಹಾಸನದಲ್ಲಿ ಪ್ರಾರಂಭವಾಗಿರುವುದು ಸಂತೋಷದ ವಿಚಾರ. ಕಟ್ಟಡಗಳ ಉಳಿಕೆ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಮೂಲಕ ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ಅವರು ಮಾತನಾಡಿದ್ದು, ಹೈನುಗಾರಿಕೆ ಉತ್ತಮವಾಗಿರುವ ದೇಶಗಳಲ್ಲಿ ಆರ್ಥಿಕತೆಯೂ ಉತ್ತಮವಾಗಿರುತ್ತದೆ. ಪಶುಪಾಲನಾ ಇಲಾಖೆ ಅತ್ಯಂತ ಪ್ರಧಾನವಾಗಿದೆ. ಅದು ಶಕ್ತಿಯುತವಾಗಿದ್ದರೆ, ರೈತರು ಸಬಲರಾಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ಹೆಚ್ಚಿನ ರಾಸುಗಳಿದ್ದು, ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದನೆ ನಡೆಯುತ್ತಿದೆ. ಇಲಾಖೆ ಗುಣಾತ್ಮಕ ಪರಿವರ್ತನೆ ಕಾರ್ಯಕ್ರಮಗಳಿಗೆ ಒತ್ತು ನೀಡದರೆ ರೈತರಿಗೂ ಅನುಕೂಲವಾಗಲಿದೆ. ರೈತ ಸಂಜೀವಿನಿ ಜಾನುವಾರು ವಿಮಾ ಯೋಜನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ರಾಸುಗಳ ಅನಿರೀಕ್ಷಿತ ಸಾವಿನಿಂದ ಕೃಷಿಕರು ಆರ್ಥಿಕ ನಷ್ಟ ಎದುರಿಸುವ ಸಾಮಥ್ರ್ಯವಿದೆ ಎಂದರು.

    ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ಯೆಯಾದ ದಿನ. ಇಂದು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಎಲ್ಲರ ನೆನೆಪಿಗಾಗಿ ಹುತಾತ್ಮರ ದಿನವಾಗಿ ಆಚರಿಸಲಾಗಿದೆ. ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಉಳಿಸಿಕೊಳ್ಳೋಣ. ನೂತನ ಕಟ್ಟಡದ ಮೂಲಭೂತ ಸೌಕರ್ಯಕ್ಕಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಜಾನ್ವಿ, ನನ್ನ ಮಧ್ಯೆ ಹಲವು ಅಂಶ ಒಂದೇ ರೀತಿ ಇದ್ದರೂ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ: ಸಾರಾ

    ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಕೆ.ಆರ್.ರಮೇಶ್ ಮಾತನಾಡಿ, 80 ವರ್ಷಗಳ ಹಿಂದಿನ ಕಟ್ಟಡ ಶಿಥಿಲವಾಗಿದ್ದ ಕಾರಣ ಒಟ್ಟು 125 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ರಾಜ್ಯದ ಮೈಸೂರು ವಿಭಾಗದ ತರಬೇತಿ ಕೇಂದ್ರ ಹಾಸನದಲ್ಲಿ ಪ್ರಾರಂಭವಾಗುತ್ತಿದೆ. ಇಲ್ಲಿ ಪಶುವೈದ್ಯರಿಗೆ ಬುನಾದಿ ತರಬೇತಿ ಹಾಗೂ ರೈತರಿಗೆ ತರಬೇತಿ ನೀಡಲಾಗುತ್ತದೆ. ಇಲ್ಲಿ ಅತ್ಯಂತ ವ್ಯವಸ್ಥಿತ ಸೌಲಭ್ಯ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ನಗರಸಭೆ ಅಧ್ಯಕ್ಷರಾದ ಮೋಹನ್, ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್, ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರಾದ ಈ.ಕೃಷ್ಣೇಗೌಡ, ಪಶು ವೈದ್ಯಕೀಯ ತರಬೇತಿ ಸಂಸ್ಥೆ ಉಪ ನಿರ್ದೇಶಕರಾದ ನಾಗರಾಜ್, ಕೆ.ಅರ್ ಐ.ಡಿ.ಎಲ್ ಸಂಸ್ಥೆಯ ಮಹದೇವ್ ಪ್ರಸಾದ್ ಮತ್ತಿತರರು ಹಾಜರಿದ್ದರು.

  • ಮನ್‍ಮುಲ್ ಹಾಲಿಗೆ ನೀರು ಬೆರೆಸಿ ವಂಚನೆ – ತನಿಖೆ ಆರಂಭಿಸಿದ ಸಿಐಡಿ

    ಮನ್‍ಮುಲ್ ಹಾಲಿಗೆ ನೀರು ಬೆರೆಸಿ ವಂಚನೆ – ತನಿಖೆ ಆರಂಭಿಸಿದ ಸಿಐಡಿ

    ಮಂಡ್ಯ: ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿದ್ದ ನೀರು ಬೆರೆಸಿದ ಹಾಲು ಪೂರೈಕೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರೈತರ ಆಗ್ರಹಿಸುತ್ತಿದ್ದಾರೆ. ಈ ನಡುವೆ ಸಿಐಡಿ ಅಧಿಕಾರಿಗಳ ತಂಡ ಪ್ರಕರಣದ ತನಿಖೆ ಆರಂಭಿಸಿದ್ದು, ಮನ್‍ಮುಲ್ ಕಚೇರಿಗೆ ಭೇಟಿ ನೀಡಿ ಹಲವು ದಾಖಲೆಗಳನ್ನು ಸಂಗ್ರಹಿಸಿದೆ.

    ಏನಿದು ಪ್ರಕರಣ?
    ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಬೆಳಕಿಗೆ ಬಂದಿದ್ದ ಹಾಲಿಗೆ ನೀರು ಬೆರೆಸಿ ವಂಚನೆ ಮಾಡುತ್ತಿದ್ದ ಹಗರಣ ಸಾಕಷ್ಟು ಕಾರಣಗಳಿಂದ ಗಮನ ಸೆಳೆದಿತ್ತು. ಈ ಪ್ರಕರಣದ ತನಿಖೆ ಜವಾಬ್ದಾರಿ ಹೊತ್ತಿರುವ ಸಿಐಡಿ ಅಧಿಕಾರಿಗಳ ತಂಡ ಫುಲ್ ಆಕ್ಟೀವ್ ಆಗಿದ್ದು, ಈವರೆಗೆ ನಡೆದಿರುವ ತನಿಖೆ ಬಗ್ಗೆ ಪೊಲೀಸರಿಂದ ಮಾಹಿತಿ ಕಲೆ ಹಾಕುವ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಇನ್ನು ಹಳ್ಳಿಗಳಲ್ಲಿ ಸಂಗ್ರಹವಾಗುತ್ತಿದ್ದ ಹಾಲನ್ನು ಒಕ್ಕೂಟಕ್ಕೆ ಟ್ಯಾಂಕರ್ ಗಳಲ್ಲಿ ಪೂರೈಕೆ ಮಾಡುವಾಗ ಶೇ.30ರಷ್ಟು ಹಾಲನ್ನು ಖಾಸಗಿ ಡೈರಿಗಳಿಗೆ ಮಾರಾಟ ಮಾಡ್ತಿದ್ದ ವಂಚಕರು, ಉಳಿದ ಹಾಲಿಗೆ ನೀರು ಮಿಶ್ರಣ ಮಾಡಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಂಚನೆ ಮಾಡ್ತಿದ್ರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಪರಸ್ಪರ ವಾಕ್ಸಮರ ಆರಂಭಿಸಿ ಆರೋಪ ಪ್ರತ್ಯಾರೋಪಕ್ಕೆ ಇಳಿದಿದ್ರು. ಇನ್ನೊಂದೆಡೆ ಪೊಲೀಸರ ಆಮೆಗತಿ ತನಿಖೆ ವಿರುದ್ಧ ಆಕ್ರೋಶಗೊಂಡಿದ್ದ ರೈತರು ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದ್ರು. ರೈತರ ಹೋರಾಟಕ್ಕೆ ಸಂಸದೆ ಸುಮಲತಾ ಸಾಥ್ ನೀಡಿದ್ದರು.

    ಒತ್ತಡ ಹೆಚ್ಚಾದ ಬಳಿಕ ರಾಜ್ಯ ಸರ್ಕಾರ ಸಿಐಡಿಗೆ ಪ್ರಕರಣದ ತನಿಖೆಯ ಜವಾಬ್ದಾರಿ ನೀಡಿತ್ತು. ಇದೀಗ ಮನ್‍ಮುಲ್ ಗೆ ಭೇಟಿ ನೀಡಿದ್ದ ಸಿಐಡಿ ಇನ್ಸ್ ಪೆಕ್ಟರ್ ನರೇಂದ್ರ ನೇತೃತ್ವದ ತಂಡ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಅವರಿಂದ ಮಾಹಿತಿ ಪಡೆದುಕೊಂಡಿತು. ಬಳಿಕ ಮದ್ದೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ವಶಪಡಿಸಿಕೊಂಡಿರುವ ಟ್ಯಾಂಕರ್ ಗಳನ್ನು ಪರಿಶೀಲನೆ ಮಾಡಿ ಈವರೆಗೆ ನಡೆದಿರುವ ತನಿಖೆಯ ಸಂಪೂರ್ಣ ವರದಿಯನ್ನು ಪಡೆದುಕೊಂಡಿದೆ. ಇದನ್ನೂ ಓದಿ: ನೀರು ಮಿಶ್ರಿತ ಹಾಲು ಕೇಸ್ – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

    ಸಿಐಡಿ ತನಿಖೆಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ವಿಶ್ವಾಸ ವ್ಯಕ್ತಪಡಿಸಿರುವ ಮನ್ಮುಲ್ ಆಡಳಿತ ಮಂಡಳಿ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಹಾಲಿಗೆ ನೀರು ಬೆರಸಿ ವಂಚನೆ ಹಗರಣದಲ್ಲಿ ಮನ್‍ಮುಲ್ ಗೆ ನೂರಾರು ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದ್ದು, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆಂಬ ಆರೋಪವೂ ದಟ್ಟವಾಗಿದೆ. ತನಿಖೆಯ ಬಳಿಕ ಸತ್ಯಾಸತ್ಯ ಹೊರಬರಬೇಕಿದೆ.

  • ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

    ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

    ಮಂಡ್ಯ: ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲು ಪೂರೈಕೆ ಹಗರಣಕ್ಕೆ ಸಂಬಂಧಿಸಿದಂತೆ 10 ದಿನಗಳಾದ್ರು ಇನ್ನೂ ಏಕೆ ಯಾರನ್ನು ಬಂಧಿಸಿಲ್ಲ? ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಮಂಡ್ಯ ಎಎಸ್‍ಪಿ ಧನಂಜಯ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮನ್‍ಮುಲ್‍ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣ ಸಂಬಂಧ ಇಂದು ಮನ್‍ಮುಲ್ ಡೈರಿಗೆ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಪ್ರಕರಣದ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಸೀಜ್ ಆಗಿ ನಿಂತಿದ್ದ ಟ್ಯಾಂಕರನ್ನು ವೀಕ್ಷಣೆ ಮಾಡಲು ತೆರಳಿದ್ದರು. ಈ ವೇಳೆ ಮಂಡ್ಯ ಎಎಸ್‍ಪಿ ಧನಂಜಯ್ ಅವರಿಗೆ ಸೋಮಶೇಖರ್ ಅವರು ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಕೊರೊನಾ ತೊಲಗಲು ಮಾರಮ್ಮ ದೇವಿಗೆ ಕುರಿ, ಕೋಳಿ ಬಲಿ

    ಪ್ರಕರಣ ಬೆಳಕಿಗೆ ಬಂದು 10 ದಿನ ಕಳೆದದೂ ಸಹ ಇನ್ನೂ ಯಾಕೆ ಒಬ್ಬರನ್ನೂ ನೀವು ಬಂಧಿಸಿಲ್ಲ? ಇಷ್ಟೊತ್ತಿಗೆ ಎಲ್ಲರನ್ನೂ ಬಂಧಿಸಬೇಕಿತ್ತು ಎಂದು ಸಚಿವರು ಎಎಸ್‍ಪಿಯನ್ನು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಎಎಸ್‍ಪಿ ಇಲ್ಲ ಸರ್ ಒಬ್ಬ ಡ್ರೈವರನ್ನು ಬಂಧಿಸಿದ್ದೇವೆ ಎಂದರು. ಡ್ರೈವರನ್ನು ಅರೆಸ್ಟ್ ಮಾಡೋಕೆ ನೀವೋಬ್ಬರೆ ಆಗಬೇಕಾ? ಬೇರೆಯವರನ್ನು ಬಂಧನ ಮಾಡಲು ನಿಮ್ಮಿಂದ ಆಗಿಲ್ವಾ ಎಂದು ಸೋಮಶೇಖರ್ ಗರಂ ಆದರು. ಇದನ್ನೂ ಓದಿ: ನೀರು ಮಿಶ್ರಿತ ಹಾಲು ಕೇಸ್ – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

    ಹಾಲಿನ ಟ್ಯಾಂಕರ್ ವಿನ್ಯಾಸವನ್ನು ಎಲ್ಲಿ ಮಾಡಿದ್ದಾರೆ? ಹೇಗೆ ಮಾಡಿದ್ದಾರೆ ಅನ್ನೋದಾದರೂ ತಿಳಿದುಕೊಂಡಿದ್ದೀರಾ ಎಂದು ಮತ್ತೆ ಸಚಿವರು, ಎಎಸ್‍ಪಿಯನ್ನು ಪ್ರಶ್ನೆ ಮಾಡಿದರು. ಇಲ್ಲ ಸರ್ ಇನ್ನೂ ಸಹ ಅದು ಎಲ್ಲಿ ಮಾಡಿಸಿದ್ದಾರೆ ಎನ್ನೋದೆ ಪತ್ತೆಯಾಗಿಲ್ಲ ಎಂದು ಧನಂಜಯ್ ಹೇಳಿದರು. ಈ ವೇಳೆ ಸೋಮಶೇಖರ್ ಈ ಪ್ರಕರಣಕ್ಕೆ ಸಂಬಂಧ ತನಿಖೆಯನ್ನು ಚುರುಕುಗೊಳ್ಳಿಸಬೇಕೆಂದು ಎಚ್ಚರಿಕೆ ನೀಡಿದರು.

  • ನಮ್ಮ ಡೈರಿಯಲ್ಲಿ ಫೀಡ್ಸ್ ತಗಳಲ್ಲ, ನಿಮ್ಮ ಹಾಲು ಬೇಡ

    ನಮ್ಮ ಡೈರಿಯಲ್ಲಿ ಫೀಡ್ಸ್ ತಗಳಲ್ಲ, ನಿಮ್ಮ ಹಾಲು ಬೇಡ

    – ಒಬ್ಬರ ಕಥೆಯಲ್ಲಿ, ಹಲವು ರೈತರಿಗೆ ಅನ್ಯಾಯ
    – ಗ್ರಾಮದ ಬೇರೆ ರೈತರಿಂದ ಹಾಲು ಖರೀದಿ

    ಚಿಕ್ಕಮಗಳೂರು:“ನೀವು ನಮ್ಮ ಡೈರಿಯಲ್ಲಿ ಫೀಡ್ಸ್ ತೆಗೆದುಕೊಳ್ಳಲ್ಲ. ಹಾಗಾಗಿ, ಸದ್ಯಕ್ಕೆ ನಿಮ್ಮ ಹಾಲು ಬೇಡ” ಎಂದು ರೈತರಿಂದ ಡೈರಿ ಸಿಬ್ಬಂದಿ ಹಾಲು ಹಾಕಿಸಿಕೊಳ್ಳದ ಹಿನ್ನೆಲೆಯಲ್ಲಿ ರೈತ ಪ್ರತಿದಿನ ಎಂಟತ್ತು ಲೀಟರ್ ಹಾಲನ್ನ ಗಿಡಕ್ಕೆ ಸುರಿಯುತ್ತಿದ್ದಾನೆ.

    ಚಿಕ್ಕಮಗಳೂರು ತಾಲೂಕಿನ ಗವನಹಳ್ಳಿ ರೈತ ತಿರುಮಲೇಶ್ ಕಳೆದ ಆರು ವರ್ಷಗಳಿಂದ ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. 2016ರಿಂದಲೂ ತೇಗೂರು ಗ್ರಾಮದಲ್ಲಿರುವ ಡೈರಿಗೆ ಹಾಲು ಹಾಕುತ್ತಿದ್ದಾರೆ. ಆದರೆ, ಕಳೆದೊಂದು ತಿಂಗಳಿಂದ ಡೈರಿಯವರು ತಿರುಮಲೇಶ್ ಅವರ ಹಾಲನ್ನ ಹಾಕಿಸಿಕೊಳ್ಳುತ್ತಿಲ್ಲ. ಕಾರಣ ಕೇಳಿದರೆ, ನೀವು ನಮ್ಮ ಡೈರಿಯಲ್ಲಿ ಹಸುವಿಗೆ ಫೀಡ್ಸ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ, ಸದ್ಯಕ್ಕೆ ಹಾಲು ಬೇಡ. ಬೇಕಾದಾಗ ಫೋನ್  ಮಾಡುತ್ತೇವೆ ತಂದು ಹಾಕಿ ಎಂದು ಹೇಳಿದ್ದಾರೆ. ಇದರಿಂದ ರೈತ ತಿರುಮಲೇಶ್ ಕಂಗಾಲಾಗಿದ್ದಾರೆ.

    ಮೊದಲೇ ಕಳೆದೊಂದು ವರ್ಷದಿಂದ ರೈತ ಸಮುದಾಯ ಕೊರೋನಾದ ಅಬ್ಬರದಲ್ಲಿ ಸಂಕಷ್ಟಕ್ಕೀಡಾಗಿದೆ. ಹೀಗಿರುವಾಗ ಡೈರಿ ಸಿಬ್ಬಂದಿ ತಮ್ಮ ಡೈರಿಯಲ್ಲಿ ಫೀಡ್ಸ್ ತೆಗೆದುಕೊಳ್ಳಲಿಲ್ಲ ಎಂದು ಹಾಲನ್ನ ಹಾಕಿಸಿಕೊಳ್ಳದಿರುವುದರಿಂದ ರೈತ ತಿರುಮಲೇಶ್ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಒಂದೆಡೆ ಕೂಲಿ ಇಲ್ಲ. ಮತ್ತೊಂದೆಡೆ ಡೈರಿಯಲ್ಲಿ ಹಾಲು ಖರೀದಿಸಲ್ಲ. ಇತ್ತ ಹೊಲದಲ್ಲಿ ಜೋಳವೂ ಇಲ್ಲ. ಅತ್ತ ಬಣವೆಯಲ್ಲಿ ಹುಲ್ಲೂ ಇಲ್ಲ. ಕೈಯಲ್ಲಿ ದುಡ್ಡೂ ಇಲ್ಲದಂತಾಗಿದ್ದು ರೈತ ಬದುಕಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅನ್ನದಾತನ ಜೊತೆ ರೈತನ ಬೆನ್ನೆಲುಬು ಎಂದು ಕರೆಸಿಕೊಳ್ಳೋ ರಾಸುಗಳು ಕೂಡ ಉಪವಾಸದ ಸ್ಥಿತಿ ನಿರ್ಮಾಣವಾಗಿದೆ.

    ತೇಗೂರು ಗ್ರಾಮದ ಡೈರಿಯಲ್ಲಿ ಫೀಡ್ಸ್ ತಂದರೆ ಹಸು ತಿನ್ನಲ್ಲ. ಅದಕ್ಕೆ ತಿರುಮಲೇಶ್ ಬೇರೆಡೆಯಿಂದ ಫೀಡ್ಸ್ ತಂದು ರಾಸುಗಳಿಗೆ ಕೊಡುತ್ತಾರೆ. ಆದರೆ, ತೇಗೂರಿನ ಡೈರಿಯವರು ಲಾಕ್‍ಡೌನ್ ಇದೆ. ಹೋಟೆಲ್‍ಗಳೂ ಕೂಡ ಬಂದ್ ಆಗಿದೆ. ಹಾಲನ್ನ ಯಾರೂ ಖರೀದಿಸಲ್ಲ. ಬೇಕಾದಾಗ ಫೋನ್ ಮಾಡುತ್ತೇವೆ ಆಗ ತೆಗೆದುಕೊಂಡು ಬನ್ನಿ ಎಂದಿದ್ದಾರೆ.

    ಈ ಡೈರಿ ಇರೋದೆ ತೇಗೂರು, ಗವನಹಳ್ಳಿ ಹಾಗೂ ನಲ್ಲೂರು ಗ್ರಾಮದ ರೈತರಿಗಾಗಿ. ಆದರೆ, ಎಂಟತ್ತು ಕಿ.ಮೀ. ದೂರದ ಹಾಗೂ ಈ ಡೈರಿಗೆ ಸಂಬಂಧವೇ ಇಲ್ಲದ ಊರುಗಳ ಹಾಲನ್ನೂ ಖರೀದಿ ಮಾಡುವ ಡೈರಿ ಸಿಬ್ಬಂದಿ ಈ ರೈತನ ಹಾಲನ್ನ ಮಾತ್ರ ತೆಗೆದುಕೊಳ್ಳುತ್ತಿಲ್ಲ. ಅವರೆಲ್ಲಾ ನಮ್ಮ ಡೈರಿಯಲ್ಲೇ ಫೀಡ್ಸ್ ತೆಗೆದುಕೊಳ್ಳುತ್ತಾರೆ. ಹಾಗಾಗಿ, ಅವರ ಹಾಲನ್ನ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ನಿಮ್ಮ ಹಾಲು ಬೇಡ ಎಂದಿದ್ದಾರೆ. ಬೇರೆ ದಾರಿ ಇಲ್ಲದ ಈ ಹೈನುಗಾರ ಬೆಳಗ್ಗೆ-ಸಂಜೆ ಸುಮಾರು ಎಂಟತ್ತು ಲೀಟರ್ ಹಾಲನ್ನ ಗಿಡಕ್ಕೆ ಸುರಿಯುತ್ತಿದ್ದಾರೆ. ಇದು ಇವರೊಬ್ಬರ ಸಮಸ್ಯೆಯಲ್ಲ.  ಈ ರೀತಿ ಹಲವು ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ.

    ತೇಗೂರಿನ ಡೈರಿಯಲ್ಲಿ ಯಾರು ಫೀಡ್ಸ್ ತೆಗೆದುಕೊಳ್ಳುತ್ತಾರೆ ಅವರ ಹಾಲನ್ನು ತೆಗೆದುಕೊಳ್ಳುತ್ತಾರೆ. ಯಾರೂ ಖರೀದಿಸಲ್ಲ ಅವರ ಹಾಲು ಇವರಿಗೆ ಭಾರವಾಗುತ್ತೆ. ಡೈರಿಯವರ ಈ ನಡೆಯಿಂದ ತೇಗೂರು, ಗವನಹಳ್ಳಿ, ನಲ್ಲೂರಿನ ಹಲವು ರೈತರು ಕಂಗಾಲಾಗಿದ್ದಾರೆ. ಈಗ ಕೂಲಿ ಇಲ್ಲ. ಹಾಲು ತೆಗೆದುಕೊಳ್ಳುತ್ತಿಲ್ಲ. ಮಳೆ ಇಲ್ಲದೆ ಹೊಲಗದ್ದೆಗಳಲ್ಲಿ ಜೋಳವೂ ಇಲ್ಲ. ಬಣವೆ ಹುಲ್ಲೂ ಖಾಲಿಯಾಗಿದೆ. ಖಾಸಗಿಯಾಗಿ ಹುಲ್ಲು ಖರೀದಿಸಲು ಒಂದು ಹೊರೆಗೆ 150-200 ರೂಪಾಯಿ ಹಣ ಕೊಡಬೇಕು. ಹುಸುಗಳನ್ನ ತಂದ ಲೋನ್ ಕಟ್ಟಬೇಕು. ದಾರಿ ಕಾಣದೆ ಹೈನುಗಾರರು ತಲೆಮೇಲೆ ಕೈಹೊದ್ದು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಕೂಡಲೇ ಡೈರಿಯವರು ಎಲ್ಲಾ ರೈತರ ಹಾಲನ್ನ ಖರೀದಿಸಿ ರಾಸುಗಳ ಜೊತೆ ನಮ್ಮ ಹೊಟ್ಟೆಯನ್ನೂ ತುಂಬಿಸಬೇಕೆಂದು ಮನವಿ ಮಾಡಿದ್ದಾರೆ. ಡೈರಿ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಹಾಲು ಹಾಕಿಸಿಕೊಳ್ಳುವ ಡೈರಿ ಸಿಬ್ಬಂದಿ ಕೂಡ ವ್ಯವಹಾರ ಬಿಟ್ಟು ರೈತರ ಕಷ್ಟವನ್ನು ಅರಿಯಬೇಕಿದೆ.

  • ಸರ್ಕಾರಿ ಶಾಲೆಯಲ್ಲಿ ಆಕಸ್ಮಿಕ ಬೆಂಕಿ- ಬಿಸಿಯೂಟದ ದವಸ ಧಾನ್ಯ ಭಸ್ಮ

    ಸರ್ಕಾರಿ ಶಾಲೆಯಲ್ಲಿ ಆಕಸ್ಮಿಕ ಬೆಂಕಿ- ಬಿಸಿಯೂಟದ ದವಸ ಧಾನ್ಯ ಭಸ್ಮ

    ರಾಯಚೂರು: ಸರ್ಕಾರಿ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪುಸ್ತಕ, ಬಿಸಿಯೂಟದ ದವಸ ಧಾನ್ಯಗಳು ಸುಟ್ಟು ಭಸ್ಮವಾಗಿರುವ ಘಟನೆ ದೇವದುರ್ಗದ ಜಾಲಹಳ್ಳಿಯ ಶಾಲೆಯಲ್ಲಿ ನಡೆದಿದೆ.

    ಜಾಲಹಳ್ಳಿಯ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಬಿಸಿಯೂಟದ ದವಸ ಧಾನ್ಯ, ಬೈಸಿಕಲ್, ಪುಸ್ತಕಗಳು ಸೇರಿ ವಿವಿಧ ವಸ್ತುಗಳು ಬೆಂಕಿಗಾಹುತಿಯಾಗಿವೆ. 35 ಚೀಲ ಅಕ್ಕಿ, 10 ಬೈಸಿಕಲ್ ಹಾಗೂ ಕೋಣೆಯಲ್ಲಿದ್ದ ನೋಟ್ ಪುಸ್ತಕ ಸುಟ್ಟುಹೋಗಿವೆ.

    ಅಗ್ನಿಶಾಮಕದಳ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿನಂದಿಸಿದ್ದಾರೆ. ಬೆಳಗಿನ ಜಾವ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಶಾಲೆಯಿಂದ ಹೊಗೆ ಬರುತ್ತಿರುವುದನ್ನ ಗಮನಿಸಿ ಮುಖ್ಯೋಪಾಧ್ಯಾಯರು ಹಾಗೂ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಈ ಅವಘಡ ಕುರಿತಾಗಿ ಮುಖ್ಯೋಪಾಧ್ಯಾಯ ಶಾಕೀಲ್ ಸಾಬ್ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಮಹಿಳೆಗೆ ಸೋಂಕು- ಡೈರಿಯ ನಿರ್ಲಕ್ಷ್ಯಕ್ಕೆ ನೂರಾರು ಲೀಟರ್ ಹಾಲು ಚರಂಡಿ ಪಾಲು

    ಮಹಿಳೆಗೆ ಸೋಂಕು- ಡೈರಿಯ ನಿರ್ಲಕ್ಷ್ಯಕ್ಕೆ ನೂರಾರು ಲೀಟರ್ ಹಾಲು ಚರಂಡಿ ಪಾಲು

    ಬೆಂಗಳೂರು: ಗ್ರಾಮದಲ್ಲಿ ಮಹಿಳೆಗೆ ಕೊರೊನಾ ಸೋಂಕು ಬಂದ ಹಿನ್ನೆಲೆಯಲ್ಲಿ ಜಾನುವಾರುಗಳ ನೂರಾರು ಲೀಟರ್ ಹಾಲು ಚರಂಡಿ ಪಾಲಾಗಿರುವ ಘಟನೆ ಬೆಂಗಳೂರು ಹೊರವಲಯ ಮಾಗಡಿ ತಾಲೂಕಿನ ಗೊರೂರು ಗ್ರಾಮದಲ್ಲಿ ನಡೆದಿದೆ.

    ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಗೊರೂರು ಗ್ರಾಮದ ಮಹಿಳೆಗೆ ಕೊರೊನಾ ಸೋಂಕು ಬಂದಿದೆ. ಈ ಹಿನ್ನೆಲೆಯಲ್ಲಿ ಡೈರಿಯ ಸಿಬ್ಬಂದಿ ಕಳೆದ ನಾಲ್ಕು ದಿನದಿಂದ ಆ ಗ್ರಾಮಸ್ಥರಿಂದ ಹಾಲು ಖರೀದಿ ಮಾಡಿಲ್ಲ. ಇದರಿಂದ ಮನನೊಂದ ರೈತರು ತಮ್ಮ ಜಾನುವಾರುಗಳ ನೂರಾರು ಲೀಟರ್ ಹಾಲನ್ನ ಚರಂಡಿಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಾಗೃತಿ ಮೂಡಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ನಾಲ್ಕು ದಿನದ ಹಿಂದೆ ಕೋಡೆಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಸೋಂಕು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಡೇರಿಯಲ್ಲಿ ನಮ್ಮ ಗ್ರಾಮದ ಹಾಲನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಡೈರಿ ಸಿಬ್ಬಂದಿಯ ನಡೆಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ಮಧ್ಯೆ ರೈತರಿಗೆ ಮತ್ತೊಂದು ಸಂಕಷ್ಟ- ಹಾಲಿಗೆ ಸರಿಯಾದ ಬೆಲೆ ನೀಡದ್ದಕ್ಕೆ ಆಕ್ರೋಶ

    ಕೊರೊನಾ ಮಧ್ಯೆ ರೈತರಿಗೆ ಮತ್ತೊಂದು ಸಂಕಷ್ಟ- ಹಾಲಿಗೆ ಸರಿಯಾದ ಬೆಲೆ ನೀಡದ್ದಕ್ಕೆ ಆಕ್ರೋಶ

    ಹಾಸನ: ಕೊರೊನಾ ಲಾಕ್‍ಡೌನ್‍ನಿಂದಾಗಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಬದುಕು ಬೀದಿಗೆ ಬಂದಿದೆ. ಈ ವೇಳೆ ರೈತರು ಹಾಲು ಉತ್ಪಾದನೆ ಮಾಡಿ ಒಂದಷ್ಟು ಬದುಕು ಕಟ್ಟಿಕೊಂಡಿದ್ರು. ಆದರೆ ಈಗ ಹಾಲಿಗೆ ಫ್ಯಾಟ್ ಬರುತ್ತಿಲ್ಲ ಎಂದು ನೆಪ ಹೇಳಿ ಒಂದು ಲೀಟರ್ ಹಾಲಿಗೆ ಕೇವಲ 9 ರೂಪಾಯಿ ಕೊಡುತ್ತಿದ್ದು, ಕಂಗಾಲಾದ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.

    ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ ಗ್ರಾಮದ ಸುತ್ತಮುತ್ತಲಿನ ರೈತರು ಕೊರೊನಾ ಭಯ ಲೆಕ್ಕಿಸದೇ ಗುಂಪು ಗುಂಪಾಗಿ ನಿಂತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಮಯದಲ್ಲಿ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದ ಇವರು ಹೈನುಗಾರಿಕೆ ಮಾಡಿ, ಡೈರಿಗೆ ಹಾಲು ಹಾಕಿ ಹೇಗೋ ಜೀವನ ನಿರ್ವಹಣೆ ಮಾಡಿಕೊಂಡಿದ್ರು. ಆದರೆ ಈಗ ಏಕಾಏಕಿ ಹಾಲಿನ ಡೈರಿಯವರು ನಿಮ್ಮ ಹಾಲಿನಲ್ಲಿ ಸರಿಯಾದ ಎಸ್‍ಎನ್‍ಎಫ್ ಬರುತ್ತಿಲ್ಲ ಎಂದು ಹೇಳಿ ಪ್ರತಿ ಲೀಟರ್‍ಗೆ 9 ರೂಪಾಯಿ ನೀಡುತ್ತಿದ್ದಾರಂತೆ. ಇದರಿಂದ ಕಂಗಾಲಾದ ರೈತರು ಒಂದು ಲೀಟರ್ ಹಾಲು ಉತ್ಪಾದನೆಗೆ ತಗಲುವ ವೆಚ್ಚದ ಅರ್ಧದಷ್ಟು ಹಣವನ್ನೂ ಕೊಡದೆ ಹೀಗೆ ನಮ್ಮ ಬದುಕಿಗೆ ಕೊಳ್ಳಿ ಇಡ್ತಿದ್ದೀರಲ್ಲಾ ಅಂತ ಸಂತೆಶಿವರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

    ಎಸ್‍ಎನ್‍ಎಫ್ ಬರುತ್ತಿಲ್ಲ ಎಂದು ಸಂತೆಶಿವರ ಡೈರಿಯವರು ನಮ್ಮ ಹಾಲಿಗೆ ಸರಿಯಾದ ಬೆಲೆ ಕೊಡುತ್ತಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ನಾವು ಕೊಟ್ಟಷ್ಟು ಹಣ ಪಡೆದು ಬಾಯಿಮುಚ್ಚಿಕೊಂಡು ಇರಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿ ಆದರೆ ನಮ್ಮ ಬದುಕು ಹೇಗೆ ಎಂದು ರೈತರು ಕಂಗಾಲಾಗಿದ್ದಾರೆ.

    ಕೊರೊನಾದಿಂದ ಎಷ್ಟೇ ನಷ್ಟ ಆದರೂ ಕೂಡ ಹೇಗೋ ಹಾಲು ಹಾಕಿ ರೈತರು ಜೀವನ ನಡೆಸುತ್ತಿದ್ರು. ಆದರೆ ಇದೀಗ ಹಾಲಿನ ಫ್ಯಾಟ್ ಸರಿಯಾಗಿ ಬರುತ್ತಿಲ್ಲ ಎಂದು ನೆಪ ಹೇಳಿ, ಒಂದು ಲೀಟರ್‍ಗೆ 9 ರೂಪಾಯಿ ಕೊಡಲು ಮುಂದಾಗಿರುವುದು ರೈತರ ಬದುಕನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.