Tag: Daily wage Workers

  • ನರೇಗಾ ಯೋಜನೆಯಡಿ ಕೆರೆ ಹೂಳೆತ್ತುತ್ತಿದ್ದಾನೆ ಬಿಕಾಂ ಮುಗಿಸಿದ ಯುವಕ

    ನರೇಗಾ ಯೋಜನೆಯಡಿ ಕೆರೆ ಹೂಳೆತ್ತುತ್ತಿದ್ದಾನೆ ಬಿಕಾಂ ಮುಗಿಸಿದ ಯುವಕ

    ಧಾರವಾಡ: ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಕೂಲಿಕಾರರಿಗೆ ನರೇಗಾ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಕೆಲಸ ನೀಡಿದೆ. ಕೆರೆ ಹೂಳೆತ್ತುವ ಈ ಕಾರ್ಯಕ್ಕೆ ಈಗ ಪದವಿ ಮುಗಿಸಿದವರೂ ಬರುವಂತಾಗಿದೆ.

    ಜಿಲ್ಲೆಯ ಪ್ರಭುನಗರ ಹೊನ್ನಾಪುರ ಗ್ರಾಮದ ಪದವಿ ಮುಗಿಸಿದ ಯುವಕ ಪ್ರಕಾಶ್ ಕೆರೆ ಹೂಳೆತ್ತುವ ಕಾಮಗಾರಿಗೆ ಬರುತ್ತಿದ್ದಾನೆ. ಬಿಕಾಂ ಮುಗಿಸಿರುವ ಇವರಿಗೆ ಈಗ ಕೆಲಸ ಇಲ್ಲ. ಹೀಗಾಗಿ ನರೇಗಾ ಕಾಮಗಾರಿ ಆರಂಭವಾಗುತಿದ್ದಂತೆ ಇವರು ಸಹ ಕೆರೆ ಹೂಳೆತ್ತುವ ಕೆಲಸಕ್ಕೆ ಹೋಗುತ್ತಿದ್ದಾರೆ. ದಿನಕ್ಕೆ 275 ರೂ.ಗಳಿಗೆ ಕೂಲಿ ಮಾಡುತ್ತಿದ್ದು, ವಾರಕ್ಕೆ 1,925 ರೂ.ಗಳನ್ನ ಗಳಿಸಿ ಜೀವನ ಸಾಗಿಸುತಿದ್ದಾರೆ.  ಇದನ್ನೂ ಓದಿ: ನರೇಗ ಕೂಲಿ ಕೆಲಸ ಮಾಡ್ತಿದ್ದ ಎಂಎಸ್ಸಿ ಪದವೀಧರೆ- ಸಚಿವರಿಂದ ಉದ್ಯೋಗದ ಭರವಸೆ

    ಲಾಕ್‍ಡೌನ್ ಪರಿಣಾಮವಾಗಿ ಕೆಲಸ ಇಲ್ಲದ ಪದವೀಧರರು ಸಹ ನರೇಗಾ ಯೋಜನೆಯಡಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುತಿದ್ದಾರೆ. ಅಲ್ಲದೆ ರೈತರ ಬಳಿ ಕೂಲಿ ಕೆಲಸಕ್ಕೆ ಹೋಗುತಿದ್ದ ಹಲವು ಕಾರ್ಮಿಕರು ಹಾಗೂ ಕಡಿಮೆ ಜಮೀನು ಇರುವ ರೈತರಿಗೆ ನರೇಗಾ ಆಸರೆಯಾಗಿದೆ. ಸದ್ಯ ಗ್ರಾಮದ ಕೆರೆ ಹೂಳೆತ್ತುವ ಕೆಲಸ ನಡೆದಿದ್ದು, ಕೆರೆ ಕೆಲಸ ಮುಗಿನ ನಂತರ ನರೇಗಾದಲ್ಲಿ ಬೇರೆ ಕೆಲಸ ಸಿಕ್ಕರೆ ಜನ ಅಲ್ಲಿಗೇ ಹೋಗಲಿದ್ದಾರೆ.

  • 37 ಬಸ್‍ಗಳಲ್ಲಿ 1,100 ಜನ ಕಾರ್ಮಿಕರನ್ನ ಕಳಿಸಿಕೊಟ್ಟ ದ.ಕ ಜಿಲ್ಲಾಡಳಿತ

    37 ಬಸ್‍ಗಳಲ್ಲಿ 1,100 ಜನ ಕಾರ್ಮಿಕರನ್ನ ಕಳಿಸಿಕೊಟ್ಟ ದ.ಕ ಜಿಲ್ಲಾಡಳಿತ

    – ವಲಸೆ ಕಾರ್ಮಿಕರು ಪುರಭವನಕ್ಕೆ ಆಗಮಿಸದಂತೆ ಡಿಸಿ ಸೂಚನೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಮಂಗಳೂರಿನಲ್ಲಿದ್ದ ವಲಸೆ ಕಾರ್ಮಿಕರನ್ನು ಕೊನೆಗೂ ಇಂದು ಬೆಳಗ್ಗಿನ ಜಾವ ಅವರ ಊರಿಗೆ ಕಳುಹಿಸಿಕೊಟ್ಟಿದೆ.

    ಮಂಗಳೂರಿನ ಟೌನ್ ಹಾಲ್ ಬಳಿಯಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ 37 ಬಸ್‍ಗಳಲ್ಲಿ 1,100 ಜನ ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಕಳುಹಿಸಿಕೊಡಲಾಯಿತು.

    ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಯಿಂದ ನೂರಾರು ಕಾರ್ಮಿಕರು ಮಂಗಳವಾರ ಏಕಾಏಕಿ ಮಂಗಳೂರಿಗೆ ಆಗಮಿಸಿದ್ದರು. ಟೌನ್ ಹಾಲ್‍ನಲ್ಲಿ ಜಮಾಯಿಸಿದ್ದ ಅವರನ್ನು ಅವರ ಗ್ರಾಮಗಳಿಗೆ ಕಳುಹಿಸಲು ಪಾಲಿಕೆ ಕಮಿಷನರ್ ಅಜಿತ್ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಬೆಳಗ್ಗೆ ಪ್ರಯಾಣ ಆರಂಭಿಸಿರುವ ಕೂಲಿ ಕಾರ್ಮಿಕರು ಇಂದು ಸಂಜೆಯ ವೇಳೆಗೆ ತಮ್ಮ ತಮ್ಮ ಊರು ತಲುಪಲಿದ್ದಾರೆ.

    ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪುರಭವನಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, ವಲಸೆ ಕಾರ್ಮಿಕರು ಪುರಭವನಕ್ಕೆ ಆಗಮಿಸದಂತೆ ಸೂಚನೆ ನೀಡಿದ್ದಾರೆ. ಸರ್ಕಾರದ ಸೂಚನೆಯಂತೆ ವಲಸೆ ಕಾರ್ಮಿಕರಿಗೆ ಪ್ರಯಾಣದ ವ್ಯವಸ್ಥೆ ಮಾಡುತ್ತೇವೆ. ಅವರ ಸ್ವಗ್ರಾಮಕ್ಕೆ ಹಾಗೂ ಕೆಲಸದ ಸ್ಥಳಗಳಿಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    ವಲಸೆ ಕಾರ್ಮಿಕರು ತಾವು ಇರುವ ಸ್ಥಳದಲ್ಲಿಯೇ ಇರಬೇಕು. ಆಯಾ ವಾರ್ಡ್ ನಲ್ಲಿ ಸ್ಥಳೀಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲಿದ್ದಾರೆ. ನಂತರ ಕಾರ್ಮಿಕರಿಗೆ ಪ್ರಯಾಣದ ಬಗ್ಗೆ ಸೂಚನೆ ನೀಡಲಾಗುವುದು. ಗುತ್ತಿಗೆದಾರರು ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಲು ನಗರಕ್ಕೆ ಕರೆ ತಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟೇ ಅಲ್ಲದೆ ಅಂತವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

  • ನರೇಗಾ ಯೋಜನೆಯಡಿ ಪ್ರತಿದಿನ 250 ಜನರಿಗೆ ಕೆಲಸ- ಕಾಮಗಾರಿ ಪರಿಶೀಲಿಸಿದ ಖಂಡ್ರೆ

    ನರೇಗಾ ಯೋಜನೆಯಡಿ ಪ್ರತಿದಿನ 250 ಜನರಿಗೆ ಕೆಲಸ- ಕಾಮಗಾರಿ ಪರಿಶೀಲಿಸಿದ ಖಂಡ್ರೆ

    ಬೀದರ್: ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಚೆಕ್ ಡ್ಯಾಮ್ ಹಾಗೂ ಮೊರಂಬಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಸಮೀಪ ಗಿಡ ನೆಡಲು ಗುಣಿ ತೊಡುತ್ತಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಈಶ್ವರ್ ಖಂಡ್ರೆ ಅವರು ಕಾಮಗಾರಿಯನ್ನು ಪರಿಶೀಲಿಸಿದರು.

    ಶನಿವಾರ ಅಧಿಕಾರಿಗಳ ತಂಡದೊಂದಿಗೆ ಉಚ್ಛಾ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಲಾಕ್‍ಡೌನ್ ಮಾಡಿರುವುದರಿಂದ ಬಡ ಜನರು, ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷೇತ್ರದ ಬಡಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಈಗಾಗಲೇ ವೈಯಕ್ತಿಕವಾಗಿ ಆಹಾರದ ಪೊಟ್ಟಣ, ತರಕಾರಿ ಕಿಟ್ ನೀಡುವ ಮೂಲಕ ನೆರವು ನೀಡಲಾಗಿದೆ ಎಂದರು.

    ಬಡವರು, ಕೂಲಿ ಕಾರ್ಮಿಕರು ಸಂಕಷ್ಟದಲ್ಲಿರುವ ಸಮಯದಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಎಲ್ಲ 40 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನರೇಗಾದಡಿ ಪ್ರತಿ ಗ್ರಾಮ ಪಂಚಾಯಿತಿಯಿಂದ ಪ್ರತಿದಿನ ಕನಿಷ್ಟ 250 ಜನರಿಗೆ ಕೆಲಸ ನೀಡುವಂತೆ ಸೂಚನೆ ನೀಡಲಾಗಿದೆ. ಯಾರೂ ಆತಂಕ ಪಡಬೇಕಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿದಿನ ಒಬ್ಬರಿಗೆ 275 ರೂ. ಯಂತೆ ಕನಿಷ್ಟ 25 ದಿನ ಕೆಲಸ ನೀಡುವಂತೆ ಸೂಚನೆ ನೀಡಲಾಗಿದೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದರು. ಈ ವೇಳೆ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್ ಇದ್ದರು.