ಬೆಂಗಳೂರು: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಅಭಿವೃದ್ಧಿ ಕೆಲಸ ಮಾಡಲು ಬಿಡಿ. ಕೇವಲ ವಿವಾದವನ್ನೇ ಜೀವಂತ ಇಡುವ ಪ್ರಯತ್ನ ಮಾಡಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಮನವಿ ಮಾಡಿಕೊಳ್ಳುವ ಮೂಲಕ ಜಾರಕಿಹೊಳಿ ಬ್ರದರ್ಸ್ ಪರ ಬ್ಯಾಟ್ ಬೀಸಿದ ಸಚಿವರು, ಜಾರಕಿಹೊಳಿ ಸಹೋದರರ ಜೊತೆ ಕೇವಲ 10 ರಿಂದ 12 ಶಾಸಕರಿಲ್ಲ. ನಾನೂ ಸೇರಿದಂತೆ ಕಾಂಗ್ರೆಸ್ಸಿನ 78 ಶಾಸಕರು ಅವರ ಜೊತೆ ಇದ್ದೇವೆ ಎಂದು ತಿಳಿಸಿದರು.
ತುಂಗಭದ್ರಾ ಜಲಾಶಯದ ಕಾಲುವೆಗೆ ಕನ್ನ ಹಾಕಿದ್ದರಿಂದ ಹಾಗೂ ಕಾರ್ಮಿಕ ಮುಷ್ಕರದಿಂದಾಗಿ ರಾಯಚೂರು ಕೊನೆಯ ಭಾಗದ ಜಮೀನುಗಳಿಗೆ ನೀರಿನ ಕೊರತೆ ಎದುರಾಗಿದೆ. ಈ ಕುರಿತಾಗಿ ಚರ್ಚೆ ನಡೆಸಲು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ನೇತೃತ್ವದ ನಿಯೋಗವು ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸೇರಿ ಸಭೆ ನಡೆಸಿದ್ದಾರೆ.
ಕಾಲುವೆಗೆ ಕನ್ನ ಹಾಕುವುದನ್ನು ನಿಲ್ಲಿಸಬೇಕು ಹಾಗೂ ಕೊನೆಯ ಭಾಗದ ರೈತರ ಹಿತ ಕಾಪಾಡಬೇಕು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದ ನಿಯೋಗವು ಮನವಿ ಸಲ್ಲಿಸಿತು. ಈ ವೇಳೆ ಸಂಸದ ಬಿ.ವಿ.ನಾಯಕ್, ಶಾಸಕರಾದ ರಾಜಾ ವೆಂಕಟಪ್ಪ ನಾಯಕ್ ಹಾಗೂ ಬಸನಗೌಡ ಉಪಸ್ಥಿತರಿದ್ದರು. ಪರಿಶೀಲನೆ ನಡೆಸಲು ಅಧಿಕಾರಿಗಳ ತಂಡವನ್ನು ಕಳಿಸಿಕೊಡುತ್ತೇನೆ. ಶನಿವಾರ ಅಥವಾ ಭಾನುವಾರ ನಾನೇ ಬಂದು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಬೆಂಗಳೂರು: ನಿಮ್ಮ ವ್ಯವಹಾರದ ಸೂಕ್ತ ದಾಖಲೆ ಪತ್ರಗಳು ಇದ್ದರೆ ಏಕೆ ಬಿಜೆಪಿ ಮೇಲೆ ಆರೋಪ ಮಾಡುತ್ತಿರುವಿರಿ ಎಂದು ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಡಿ.ಕೆ.ಸುರೇಶ್‍ಗೆ ತಿರುಗೇಟು ಕೊಟ್ಟಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ವಾಗ್ದಾಳಿ ನಡೆಸಿರುವ ಸಂಸದೆ, ರಾಜಕೀಯ ಹಿತಾಸಕ್ತಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರು ಬಿಜೆಪಿ ನಾಯಕರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಡಿ.ಕೆ.ಸುರೇಶ್ ಅವರು ಸುಳ್ಳು ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ತೋರಿಸಿದ್ದಾರೆ. ಅವರಿಗೆ ಭಯ ಪ್ರಾರಂಭವಾಗಿದೆ ಎಂದು ಬರೆದು #JustAsking ಬಳಸಿ ಟ್ವೀಟ್ ಮಾಡಿದ್ದಾರೆ.
ಇಂದು ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಡಿಕೆ ಸುರೇಶ್, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ 2017ರ ಜೂನ್ 10 ರಂದು ಕೇಂದ್ರ ತೆರಿಗೆ ಇಲಾಖೆಗೆ ಡಿಕೆ ಶಿವಕುಮಾರ್ ಮತ್ತು ನನ್ನ ವಿರುದ್ಧ ಪತ್ರ ಬರೆದು ದೂರು ನೀಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿ ಬಿಎಸ್‍ವೈ ಬರೆದ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.
ಬಿಜೆಪಿ ತಿರುಗೇಟು:
ಡಿಕೆ ಸಹೋದರರು ಫೋಟೋ ಶಾಪ್ ಮೂಲಕ ಪತ್ರ ರೆಡಿ ಮಾಡಿದ್ದಾರೆ. ಬಿಎಸ್ ವೈ ಮೂಲ ಲೆಟರ್ ಹೆಡ್‍ಗೂ ಮತ್ತು ಡಿ.ಕೆ.ಸುರೇಶ್ ಬಿಡುಗಡೆ ಮಾಡಿರುವ ಲೆಟರ್ ಹೆಡ್‍ಗೂ ವ್ಯತ್ಯಾಸ ಇದೆ. ಲೆಟರ್ ಹೆಡ್ ಬಲಭಾಗದ ಮೇಲ್ಭಾಗದಲ್ಲಿ ಕರ್ನಾಟಕ ಮಾಜಿ ಸಿಎಂ ಅನ್ನೋದು ಮಿಸ್ ಆಗಿದೆ. ಲೆಟರ್ ಹೆಡ್ ಕೆಳಭಾಗದಲ್ಲಿ ದೆಹಲಿ ವಿಳಾಸ ಬದಲು ಬೆಂಗಳೂರು ವಿಳಾಸ ಮುದ್ರಿಸಲಾಗಿದೆ. ಇದು #420Congress ಕಾಂಗ್ರೆಸ್ ನ ಮುಂದುವರೆದ ಭಾಗ ಎಂದು ಬರೆದು ಬಿಜೆಪಿ ಟ್ವೀಟ್ ಮಾಡಿದೆ.
Difference b/w original letterhead of BSY & photoshopped letterhead of DK brothers
1. Right hand top corner “Former Chief Minister of Karnataka” missing 2.Footer “Residential address in original is New Delhi & photoshopped is Bangalore”
DK brothers by spreading fake news in media are desperately trying to bring caste into picture to save themselves & their unaccountable wealth from clutches of law & hence they restored to releasing fake photoshopped letters of BSY in press conference. #420Congress
ಬೆಳಗಾವಿ: ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಯಾರದ್ದೋ ಮಾತು ಕೇಳಿ ದಾರಿ ತಪ್ಪುತ್ತಿದ್ದು, ಅವರಿಗೆ ಗಂಡಾಂತರ ಕಾದಿದೆ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಸ್ಲಂ ಪ್ರದೇಶದಲ್ಲಿ ಇದ್ದ ಮಹಿಳೆ ಲಕ್ಷ್ಮಿ ಹೆಬ್ಬಾಳ್ಕರ್. ಅವರ ತಾಯಿಗೆ ನಾವು ಏನು ಸಹಾಯ ಮಾಡಿದ್ದೇವೆ ಎನ್ನುವುದು ಗೊತ್ತು. ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಮದ್ರಾಸ್ ಸ್ಕೂಲ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶುಲ್ಕ ಪಾವತಿಸಲಿಲ್ಲ. ಹೀಗಾಗಿ ಶಾಲೆಯ ಆಡಳಿತ ಮಂಡಳಿ ಆತನನ್ನು ಹೊರ ಹಾಕಿತ್ತು. ಆಗ ನಾನು ಒಂದಲ್ಲ ಎರಡು ಬಾರಿ ಚನ್ನರಾಜ್ ಶುಲ್ಕ ಕಟ್ಟಿರುವೆ. ಖಾನಾಪುರದಲ್ಲಿ ಹೆಬ್ಬಾಳ್ಕರ್ ಪತಿ ಮನೆಯನ್ನು ಹರಾಜು ಹಾಕಲಾಗುತ್ತಿತ್ತು. ಆಗಲೂ ನಾನು 8 ಲಕ್ಷ ರೂ. ಪಾವತಿಸಿ ಮನೆಯನ್ನು ಬಿಡಿಸಿ ಅವರಿಗೆ ಕೊಟ್ಟಿರುವೆ. ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಸಹಾಯ ಮಾಡಿರುವೆ. ಇದನ್ನು ಹೇಳಿಕೊಳ್ಳುವುದು ಸರಿಯಲ್ಲ. ಆದರೆ ನನ್ನ ಕುಟುಂಬಕ್ಕೆ ಅವಮಾನ ಮಾಡಲು ಮುಂದಾಗಿದ್ದರಿಂದ ಹೇಳಲೇಬೇಕಾಯಿತು ಎಂದು ತಿರುಗೇಟು ಕೊಟ್ಟರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕಾನೂನು ಅರಿವು ಇಲ್ಲ. ಅದನ್ನು ತಿಳಿಯಬೇಕಾದ ಅನಿವಾರ್ಯತೆ ಇದೆ. ಒಬ್ಬರ ಕುಟುಂಬದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ದೂರಿದ ಸಚಿವರು, ಹಣದಿಂದ ಶಾಸಕ ಆಗುತ್ತೇನೆ ಎನ್ನುವುದು ತಪ್ಪು ಕಲ್ಪನೆ. ಎಲ್ಲದಕ್ಕೂ ಜನ ಬೆಂಬಲ ಬೇಕಾಗುತ್ತದೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ನಾನು ತಟಸ್ಥನಾಗಿದ್ದೇನೆ. ಅದನ್ನು ಸತೀಶ್ ಜಾರಕಿಹೊಳಿ ನೋಡಿಕೊಳ್ಳುತ್ತಾರೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಮಧ್ಯಸ್ಥಿಕೆವಹಿಸಿ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು: ಕಾಂಗ್ರೆಸ್‍ನಲ್ಲಿ ಸ್ಫೋಟಕ ಬಂಡಾಯದ ಬೆಳವಣಿಗೆಗಳು ನಡೆಯುತ್ತಿದ್ದು, 13 ಮಂದಿ ಕಾಂಗ್ರೆಸ್ ಶಾಸಕರು ಪಕ್ಷ ತೊರೆಯುವ ಬೆದರಿಕೆಯನ್ನು ಒಡ್ಡಿದ್ದಾರೆ.
ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಸಂಘರ್ಷದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಅವರ ಹಸ್ತಕ್ಷೇಪ ಹೀಗೆ ಮುಂದುವರಿದ್ರೆ ನಾವು ಬಿಜೆಪಿಗೆ ಹೋಗುತ್ತೇವೆ ಎಂದು 13 ಮಂದಿ ಕಾಂಗ್ರೆಸ್ ಶಾಸಕರು ಬೆದರಿಕೆ ಒಡ್ಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕೈ ಹೈಕಮಾಂಡ್‍ಗೆ ತಲೆನೋವಾಯ್ತು ಬೆಳಗಾವಿ ಸಂಘರ್ಷ- ಸದ್ಯಕ್ಕೆ ಸುಮ್ಮನಿರಿ ಅಂದ್ರು ವೇಣುಗೋಪಾಲ್
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಸಂಘರ್ಷ ಭುಗಿಲೆದಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ನಾಯಕರಲ್ಲಿ ಭಿನ್ನಾಭಿಪ್ರಾಯ ಬಂದಿರುವ ಕುರಿತು ಶನಿವಾರ ಇಡೀ ದಿನ ವೇಣುಗೋಪಾಲ್ ಅವರು ಸಂಧಾನ ಮಾಡಿಸಲು ಚರ್ಚೆ ನಡೆಸಲಾಗಿತ್ತು. ಆದರೆ ಯಾವುದೇ ರೀತಿಯ ಪ್ರಯೋಜನವೂ ಆಗಿರಲಿಲ್ಲ.
ಈ ನಡುವೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹೆಬ್ಬಾಳ್ಕರ್ ಪರ ಡಿ.ಕೆ ಶಿವಕುಮಾರ್ ನಿಂತಿದ್ದು, ಶನಿವಾರ ಬೆಳಗಾವಿಯಲ್ಲಿ ಕಾಂಗ್ರೆಸ್ ಸಭೆಯಲ್ಲೂ ಪ್ರತ್ಯಕ್ಷರಾಗಿದ್ದರು. ಇದರಿಂದ ಕೋಪಗೊಂಡ ಕಾಂಗ್ರೆಸ್ ಶಾಸಕರು ಇದೇ ರೀತಿ ಹಸ್ತಕ್ಷೇಪ ಮುಂದುವರಿಸಿದ್ರೆ, ಪಕ್ಷ ತೊರೆಯುತ್ತೇವೆ ಎಂದಿದ್ದಾರೆ ಅಂತ ತಿಳಿದು ಬಂದಿದೆ. ಸದ್ಯ ಈ ಭಿನ್ನಮತ ಶಮನ ಹೊಣೆಗಾರಿಕೆಯನ್ನು ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ವಹಿಸಿದೆ. ಆದ್ದರಿಂದ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ.
ಜಿಲ್ಲೆ ರಾಜಕೀಯದಲ್ಲಿ ಹೆಬ್ಬಾಳ್ಕರ್ ಹಸ್ತಕ್ಷೇಪ ಜಾಸ್ತಿಯಾಗುತ್ತಿದೆ. ಅಷ್ಟೇ ಅಲ್ಲದೇ ಮುಂದೆ ತಮ್ಮನ್ನು ಹಿಂದಿಕ್ಕಬಹುದು ಎನ್ನುವ ಭೀತಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಸತೀಶ್ ಜಾರಕಿಹೊರಳಿ ಅವರಿಗೆ ಎದುರಾಗಿದೆ. ಹೀಗಾಗಿ ಬದ್ಧ ವೈರಿಗಳಾಗಿದ್ದ ಜಾರಕಿಹೊಳಿ ಸಹೋದರರು ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಲ್ಲಿ ದೂರು ನೀಡಿದ್ದರು.
ಬೆಂಗಳೂರು: ಕುಮಾರಸ್ವಾಮಿ ಸರ್ಕಾರ 100 ದಿನ ಪೂರೈಸಿದ ಬೆನ್ನಲ್ಲೆ ಕೆಲ ಕೈ ಶಾಸಕರು ಬೆಂಬಲವನ್ನು ವಾಪಸ್ ಪಡೆಯುತ್ತಾರೆ ಎನ್ನುವ ವದಂತಿಯ ಹರಿದಾಡುತ್ತಿದ್ದು, ಈಗ ಮಾಜಿ ಸಿಎಂ ಸಿದ್ದರಾಮಯ್ಯ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಮಾಜಿ ಸಿಎಂ ಪರವಾಗಿ ಹೇಳಿಕೆ ನೀಡಿದರೆ ಡಿಕೆಶಿವಕುಮಾರ್ ಅವರು ಟಾಂಗ್ ನೀಡಿ ಪ್ರತಿಕ್ರಿಯಿಸಿದ್ದಾರೆ.
ಯಾರು ಏನು ಹೇಳಿದ್ದಾರೆ?
ದುಷ್ಟರು ಆರಂಭದ ಯುದ್ಧದಲ್ಲಿ ಗೆಲ್ಲಬಹುದು. ಆದರೆ ಅಂತಿಮ ಯುದ್ಧದಲ್ಲಿ ಅಲ್ಲ. ನೀವು ಜನನಾಯಕನಾಗಿರುವ ಕಾರಣ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದೀರಿ. ಬಂಡೆಕಲ್ಲಿನಂತೆ ನಾವು ನಿಮ್ಮ ಜೊತೆ ಇದ್ದೇವೆ ಎಂದು ಸುಧಾಕರ್ ಅವರು ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.
Evil can win only initial battle not the final war. Since you are people’s leader you will be chief minister again! We are rock solid with you. https://t.co/hyogZfp8kC
ಸಿದ್ದರಾಮಯ್ಯ ಅವರಿಗೆ ಅಧಿಕಾರ ಪಡೆಯಬೇಕು ಎನ್ನುವ ಆಸೆ ಇರಬಹುದು. ಆದರೆ ಎಲ್ಲದಕ್ಕೂ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಸಮ್ಮಿಶ್ರ ಸರ್ಕಾರ ಬರಲು ಎಐಐಸಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲ ಮುಖಂಡರ ಜೊತೆ ಚರ್ಚಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿಯೇ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.
ನೀವೇ ಸಿಎಂ ಸ್ಥಾನ ತೆಗೆದುಕೊಳ್ಳಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದರು. ಆದರೆ ಪ್ರಾದೇಶಿಕ ಪಕ್ಷವನ್ನು ಉಳಿಸಬೇಕಿದೆ. ಹೀಗಾಗಿ ನಿಮ್ಮವರೇ ಮುಖ್ಯಮಂತ್ರಿಯಾಗಲಿ ಅಂತಾ ನಾವು ಮಾತು ಕೊಟ್ಟಿದ್ದೇವು. ಈಗ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಗೊಂದಲ ಬೇಡ, ಅವರು ಕಾರ್ಯಕರ್ತರಿಗೆ ಧೈರ್ಯ ಹೇಳುವ ಕೆಲಸ ಮಾಡಿರಬಹುದು ಅಷ್ಟೇ ಎಂದು ಡಿಕೆಶಿ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ, ನನಗೆ ಸಂತೋಷವಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಖ ತಿರುಗಿಸಿ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಸಿಎಂ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮಗಳ ಪ್ರಶ್ನಿಸುತ್ತಿದ್ದಂತೆ ಸ್ಥಳದಿಂದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎನ್ನುವುದಕ್ಕೆ ನನ್ನ ಬೆಂಬಲವಿದೆ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಳಗಿಳಿಸಿ ಅವರು ಸಿಎಂ ಆಗುವುದಿಲ್ಲ. ನಾನು ಮತ್ತು ಸಿದ್ದರಾಮಯ್ಯ 30 ವರ್ಷಗಳಿಂದ ಸ್ನೇಹಿತರು. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರ ಹೇಳಿಕೆ ಬಗ್ಗೆ ಗೊಂದಲ ಮೂಡಿಸದೇ ಸಮ್ಮಿಶ್ರ ಸರ್ಕಾರ ನಡೆಸುವುದಕ್ಕೆ ಬಿಡಿ ಎಂದು ಮಾಧ್ಯಮಗಳ ಮೇಲೆಯೇ ಕಂದಾಯ ಸಚಿವ ಆರ್‍ವಿ. ದೇಶಪಾಂಡೆ ಗರಂ ಆದರು.
ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ಯಾವ ಸಂದರ್ಭದಲ್ಲಿ ಹೇಳಿರುವರೋ ಗೊತ್ತಿಲ್ಲ. ಸಿಎಂ ಸ್ಥಾನವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಗಾಳಿ ಸುದ್ದಿ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದರು.
ಸರ್ಕಾರ ಬರುವುದು, ಹೋಗುವುದು ನಿರಂತರ ಪ್ರಕ್ರಿಯೆ. ಹೀಗಾಗಿ ಮುಂದೆ ಮತ್ತೆ ಆಗುತ್ತೇನೆ ಅಂತಾ ಹೇಳಿರಬಹುದು. ಆದರೆ ಅವರ ಹೇಳಿಕೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಅವರು ಮುಂದೆ ಸಿಎಂ ಆಗಲೂಬಹುದು ಎಂದು ಅರಣ್ಯ ಸಚಿವ ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಬಳ್ಳಾರಿಗೆ ಆಗಮಿಸಿದ್ದು, ಅಭಿಮಾನಿಯೊಬ್ಬ 410 ಕೆಜಿ ಸೇಬು ಹಣ್ಣಿನ ಹಾರವನ್ನು ಹಾಕಿ ಸನ್ಮಾನಿಸಿದ್ದಾರೆ.
ಎನ್‍ಎಸ್‍ಯುಐ ಸಂಘಟನೆಯ ಜಿಲ್ಲಾಧ್ಯಕ್ಷ ಹಳ್ಳೇಗೌಡ ಸೇಬಿನ ಹಾರ ಮಾಡಿಸಿದವರು. 45 ಸಾವಿರ ರೂ. ಮೌಲ್ಯದ 410 ಕೆಜಿ ತೂಕದ ಸೇಬು ಹಣ್ಣುಗಳನ್ನು ಬಳಸಿ, 12 ಅಡಿ ಎತ್ತರ ಹಾಗೂ 2 ಅಡಿ ದಪ್ಪವಿರುವ ಹಾರವನ್ನು ಎರಡು ದಿನಗಳ ಪರಿಶ್ರಮದಲ್ಲಿ ಸಿದ್ಧಪಡಿಸಿದ್ದರು.
ಸೇಬಿನ ಹಾರವನ್ನು ಹಾಕಿ ಸನ್ಮಾನಿಸಲು ಎನ್‍ಎಸ್‍ಯುಐ ಸದಸ್ಯರು ನಗರದ ಮೋತಿ ವೃತ್ತದ ಬಳಿ ಸಚಿವರಿಗಾಗಿ ಸಂಜೆಯಿಂದ ಕಾಯುತ್ತಿದ್ದರು. ಆದರೆ ಮಳೆಯಿಂದಾಗಿ ಸಚಿವರು ಬರುವುದು ತಡವಾಯಿತು. ರಾತ್ರಿಯಾಗಿದ್ದರೂ ಅಭಿಮಾನಿಗಳಿಗೆ ನಿರಾಸೆ ಮಾಡಬಾರದೆಂದು ಮಳೆಯ ಮಧ್ಯದಲ್ಲಿಯೇ ಡಿ.ಕೆ.ಶಿವಕುಮಾರ್ ವಾಹನದ ಮೇಲೇರಿ ಸೇಬಿನ ಹಾರ ಹಾಕಿಸಿಕೊಂಡರು.
ಹಾರಕ್ಕಾಗಿ ಮುಗಿಬಿದ್ದ ಅಭಿಮಾನಿಗಳು
ಡಿಕೆ ಶಿವಕುಮಾರ್ ಮೋತಿ ವೃತ್ತದಿಂದ ಹೊರ ನಡೆಯುತ್ತಿದ್ದಂತೆ, ಸಂಜೆಯಿಂದ ಕಾಯುತ್ತಿದ್ದ ಜನರು ಹಾಗೂ ಅಭಿಮಾನಿಗಳು ಸೇಬು ಹಣ್ಣು ಕಿತ್ತುಕೊಳ್ಳಲು ಮುಗಿಬಿದ್ದರು. ‘ಸಿಕ್ಕಿದ್ದೇ ಸೀರುಂಡೆ’ ಎನ್ನುವಂತೆ ಎಷ್ಟು ಸಾಧ್ಯವೋ ಅಷ್ಟು ಸೇಬು ಹಣ್ಣುಗಳನ್ನು ತೆಗೆದುಕೊಂಡರು. ಒಂದು ಕೆಜಿಗೆ 100 ರೂ. ಕೊಡಬೇಕಾದ ಸೇಬು ಹಣ್ಣುಗಳು ಫ್ರೀ ಸಿಗುತ್ತವೆ ಅಂದರೆ ಯಾರು ಬೇಡ ಅಂತಾರೆ ಎಂಬಂತೆ ಹಾರವನ್ನು ಎಳೆದಾಡಿ, ವಾಹನದಿಂದ ಕೆಳಗೆ ಕೆಡವಿ ಸೇಬು ಹಣ್ಣು ಕಿತ್ತು ಜೇಬು, ಅಂಗಿ, ಟವೆಲ್ ನಲ್ಲಿ ತುಂಬಿಕೊಂಡು ಹೋದರು. ಸೇಬು ಪಡೆಯಲು ಯುವಕರು, ವಯಸ್ಸಾದವರು ಹಾರದ ಮೇಲೆ ಬೀಳುತ್ತಿದ್ದರು. ರಸ್ತೆಯ ಮೇಲೆ ಬಿದ್ದ ಹಣ್ಣಗಳನ್ನು ತಮ್ಮ ಕೈತುಂಬ ಹಿಡಿದು ಅಲ್ಲಿಂದ ಕಾಲ್ಕಿತ್ತರು.
ಚಿಕ್ಕಮಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆ ದಾಳಿಗೆ ಕೇಂದ್ರ ಸರ್ಕಾರವೇ ಕಾರಣ ಎಂಬ ಕಾಂಗ್ರೆಸ್ ನಾಯಕರುಗಳ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರವು ಕೇವಲ ಕಾಂಗ್ರೆಸ್ ಮುಖಂಡರ ಮನೆಗೆ ಮಾತ್ರ ಐಟಿ ದಾಳಿ ನಡೆಸುತ್ತಿದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಸಂಸ್ಥೆಗಳು ಅವ್ಯವಹಾರಗಳ ಹಿನ್ನೆಲೆಯಲ್ಲಿ ದಾಳಿ ನಡೆಸುತ್ತಿವೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ. ಆರೋಪಗಳಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಮುಖಂಡರುಗಳು ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ.
ಅವ್ಯವಹಾರ ಮಾಡಿದ್ದರಿಂದ ನಾಯಕರುಗಳಿಗೆ ಭಯ ಕಾಡುತ್ತಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಾರು ನ್ಯಾಯಯುತವಾಗಿರುತ್ತಾರೆ ಅವರು ಹೆದರಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ತಪ್ಪು ಮಾಡಿದವರಿಗೆ ಭಯ ಇದ್ದೇ ಇರುತ್ತದೆ. ಯಾರು ತಪ್ಪು ಮಾಡಿರುತ್ತಾರೋ ಅವರು ಖಂಡಿತವಾಗಿಯೂ ಶಿಕ್ಷೆ ಅನುಭವಿಸುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ತಿರುಗೇಟು ನೀಡಿದರು.
ದೇಶದಲ್ಲಿ ಆದಾಯ ತೆರಿಗೆ ದಾಳಿಯು ಸುಮಾರು 70 ವರ್ಷಗಳಿಂದ ದಾಳಿ ನಡಸುತ್ತಿದೆ. ಇದೇನೂ ಮೊದಲೇನಲ್ಲ ಕಾಂಗ್ರೆಸ್ ಸರ್ಕಾರದ 50 ವರ್ಷಗಳ ಅಧಿಕಾರ ಅವಧಿಯಲ್ಲಿ ನಡೆದ ಐಟಿ ದಾಳಿಗಳು ರಾಜಕೀಯ ಪ್ರೇರಿತವೇ ಎಂದು ಈ ವೇಳೆ ಪ್ರಶ್ನಿಸಿದರು.
ನನ್ನ ಬಳಿ ಹಲವು ಡೈರಿ ಇದೆ ಅಂತ ಡಿಕೆಶಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈವಾಗ ನಿಮ್ಮದೇ ಸರ್ಕಾರ ಹಾಗೂ ನಿಮ್ಮದೇ ಮುಖ್ಯಮಂತ್ರಿಗಳಿದ್ದಾರೆ. ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ನಿಮಗೆ ಇದೆ. ನಿಮ್ಮ ಬಳಿ ಯಾರದ್ದು ಬೇಕಾದರೂ ಡೈರಿ ಇರಲಿ, ಇದ್ದರೆ ಅದರಲ್ಲಿರುವವರ ವಿರುದ್ಧ ತನಿಖೆ ಕೈಗೊಳ್ಳಿ ಎಂದು ಖಾರವಾಗಿ ಉತ್ತರಿಸಿದ್ದಾರೆ.
ಮಂಡ್ಯ: ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತೆ. ನಿಮ್ಮ ವಯಸ್ಸು, ಸಮಯ, ಭವಿಷ್ಯವನ್ನು ವೇಸ್ಟ್ ಮಾಡಿಕೊಳ್ಳದೇ ಜೆಡಿಎಸ್ ಮತ್ತು ಬಿಜೆಪಿಯ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಇಂಧನ ಸಚಿವ ಡಿಕೆ.ಶಿವಕುಮಾರ್ ರಾಜ್ಯದ ಜನರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
ಈ ಬೆನ್ನಲ್ಲೇ, ಜೆಡಿಎಸ್ ಮುಖಂಡ ಸಿದ್ದರಾಮೇಗೌಡ ಅವರ ಮನೆಗೆ ಮಧ್ಯರಾತ್ರಿ ತೆರಳಿದ ಪವರ್ ಮಂತ್ರಿ ಡಿಕೆಶಿ, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ್ರು. ಪಕ್ಷ ಸೇರ್ಪಡೆ ನಂತ್ರನೂ ಮಾತನಾಡಿ ರಾಜಕಾರಣದಲ್ಲಿ ರಾತ್ರಿ ಕಾರ್ಯಾಚರಣೆಯೆಲ್ಲ ಮಾಡಬೇಕಾಗುತ್ತೆ ಎಂದು ತಮಾಷೆ ಮಾಡಿದ್ರು.
ಮಂಡ್ಯ: ಭಾರತ ಸರ್ಕಾರದ ಬಲ್ಬನ್ನು ರಮ್ಯಾ ಕೈಯಲ್ಲಿ ಹಿಡಿಸಿ ಪಕ್ಕದಲ್ಲಿ ಡಿಕೆ ಶಿವಕುಮಾರಣ್ಣ ನಿಂತುಕೊಂಡು ಹೊಸಬೆಳಕು ಯೋಜನೆ ನಮ್ಮದು ಅಂತಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.
ಮಂಡ್ಯ ಜಿಲ್ಲೆಯ, ನಾಗಮಂಗಲದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳನ್ನು ತನ್ನದೆಂದು ಹೇಳುತ್ತಿದೆ. ಬೇರೆಯವರ ಮಕ್ಕಳನ್ನು ತನ್ನ ಮಕ್ಕಳೆಂದರೆ ಅವರ ಅಪ್ಪ ಅಮ್ಮ ಹಿಡಿದುಕೊಂಡು ಹೊಡೆಯುತ್ತಾರೆ ಅಂದ್ರು.
ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ 32 ರೂಪಾಯಿಗೆ ಅಕ್ಕಿ ಖರೀದಿ ಮಾಡಿ 3 ರೂಪಾಯಿಗೆ ರಾಜ್ಯಕ್ಕೆ ಕೊಡುತ್ತೆ. 29 ರೂಪಾಯಿ ಕೇಂದ್ರ ಸರ್ಕಾರದ ಮೋದಿಯವರದು. ಆದ್ರೆ ಸಿದ್ದರಾಮಯ್ಯ ತಮ್ಮ ಫೋಟೋ ಹಾಕಿಕೊಂಡು ಅನ್ನಭಾಗ್ಯ ಯೋಜನೆ ತಮ್ಮದೆಂದು ಹೇಳುತ್ತಾರೆ ಅಂತ ಕಿಡಿಕಾರಿದ್ರು.
ಎಲ್‍ಇಡಿ ಬಲ್ಬ್ ಕೊಡುವುದು ಕೇಂದ್ರದ ಪ್ರಕಾಶ್ ಪಥ್ ಯೋಜನೆ. ಈಗಲೂ ಬಲ್ಬ್‍ನಲ್ಲಿ ಭಾರತ ಸರ್ಕಾರ ಅಂತಾನೆ ಇದೆ. ಆದ್ರೆ ಹೊರಗೆ ಕವರ್ ಚೇಂಜ್ ಮಾಡಿ ರಮ್ಯಾ ಕೈಯಲ್ಲಿ ಬಲ್ಬನ್ನು ಹಿಡಿಸಿ ಪಕ್ಕದಲ್ಲಿ ಡಿಕೆ.ಶಿವಕುಮಾರಣ್ಣ ನಿಂತುಕೊಂಡು ಹೊಸಬೆಳಕು ಯೋಜನೆ ನಮ್ಮದು ಅಂತಾರೆ. ಅದೇ ರೀತಿ ಕೇಂದ್ರ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನದೆಂದು ಹೇಳುತ್ತಿದೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಅಂತ ಹೇಳಿದ್ರು.
ಎಲ್ಲರಿಗಿಂತ ಹೆಚ್ಚು ಸಾಲ ಮಾಡಿದ ಸಿದ್ದರಾಮಯ್ಯ ಯಾವ ಕೆಲಸವೂ ಮಾಡದೇ ಕಳ್ಳಬಿಲ್ಲು ಸುಳ್ಳು ಲೆಕ್ಕಕ್ಕೆ ಸಾಲ ಮಾಡುತ್ತಿದ್ದಾರೆ. ದುಡ್ಡು ಹೊಡೆಯಲು ರಾಜ್ಯ ಸರ್ಕಾರದಲ್ಲಿ ನಾಲ್ಕೈದು ಜನ ಸಚಿವರಿದ್ದಾರೆ ಎಂದು ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಮನೆಯ ಮೇಲೆ ನಿರಂತರವಾಗಿ 4 ದಿನಗಳ ಕಾಲ ದಾಳಿ ನಡೆಸಿ ಮಹತ್ತರ ದಾಖಲೆ ವಶಕ್ಕೆ ಪಡೆದಿತ್ತು.
ದಾಳಿ ಬಳಿಕ ನಿರಂತರ ವಿಚಾರಣೆ ನಡೆಸುತ್ತಿರುವ ಐಟಿ ಅಧಿಕಾರಿಗಳು, ಬರೋಬ್ಬರಿ 7ನೇ ಬಾರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಈ ಬಾರಿ ಇಡೀ ಕುಟುಂಬಕ್ಕೆ ನೋಟೀಸ್ ನೀಡಿದ್ದು, ಇಂದು ಕುಟುಂಬ ಸಮೇತ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.
ಪ್ರತಿ ಬಾರಿಯೂ ಕೂಡ ಚಾರ್ಟೆಡ್ ಅಕೌಂಟೆಂಟ್ ಜೊತೆಯಲ್ಲಿ ವಿಚಾರಣೆಗೆ ಹಾಜರಾಗ್ತಿದ್ದ ಡಿಕೆಶಿ, ಇಂದು ಚಾರ್ಟೆಂಟ್ ಅಕೌಂಟೆಂಟ್ ಬಿಟ್ಟು ಹೆಂಡತಿ, ಮಕ್ಕಳು ಮತ್ತು ತಾಯಿಯ ಜೊತೆಯಲ್ಲಿ ವಿಚಾರಣೆ ಹಾಜರಾಗುವಂತೆ ನೋಟೀಸ್‍ನಲ್ಲಿ ತಿಳಿಸಲಾಗಿದೆ. ಇಂದು ಐಟಿ ಅಧಿಕಾರಿಗಳು ಡಿಕೆಶಿ ಕುಟುಂಬಕ್ಕೆ ಏನೇಲ್ಲಾ ಪ್ರಶ್ನೆಗಳನ್ನು ಕೇಳ್ತಾರೆ..? ಆಡಿಟರ್ ಕರೆತರದಂತೆ ಸೂಚಿಸಿರೋದು ಯಾಕೆ ಅನ್ನೋ ಕುತೂಹಲ ಎಲ್ಲರನ್ನೂ ಕಾಡ್ತಿದೆ.
ಆಗಸ್ಟ್ 2 ರಂದು ಡಿಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಗುಜರಾತ್ ಕಾಂಗ್ರೆಸ್ ಶಾಸಕರು ತಂಗಿದ್ದ ಈಗಲ್ ಟನ್ ರೆಸಾರ್ಟ್ ಮೇಲೂ ದಾಳಿ ನಡೆದಿತ್ತು.