Tag: D-Group Employee

  • ಕಂಠಪೂರ್ತಿ ಕುಡಿದು ಹಿರಿಯ ಅಧಿಕಾರಿಗಳಿಗೇ ಅವಾಜ್ ಹಾಕೋ ಡಿ ಗ್ರೂಪ್ ನೌಕರ

    ಕಂಠಪೂರ್ತಿ ಕುಡಿದು ಹಿರಿಯ ಅಧಿಕಾರಿಗಳಿಗೇ ಅವಾಜ್ ಹಾಕೋ ಡಿ ಗ್ರೂಪ್ ನೌಕರ

    – ವಿಡಿಯೋ ಮಾಡಿ ಈತನ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ಆಗ್ರಹ

    ಬೆಂಗಳೂರು: ಪ್ರತಿ ದಿನವೂ ಡಿ ಗ್ರೂಪ್ ನೌಕರನೋರ್ವ ಕಂಠಪೂರ್ತಿ ಕುಡಿದು ಹಿರಿಯ ಅಧಿಕಾರಿಗಳಿಗೆ ಕ್ಯಾರೆ ಅನ್ನದೇ ಅವಾಜ್ ಹಾಕುತ್ತಾನೆ. ನಿತ್ಯವು ಈತನ ರಂಪಾಟದಿಂದ ಬೇಸತ್ತ ಅಧಿಕಾರಿಗಳು ವಿಡಿಯೋ ಮಾಡಿ ಈತನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

    ಪ್ರತಿನಿತ್ಯ ಕಂಠಪೂರ್ತಿ ಕುಡಿದು ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರನ್ನ ಹಿಗ್ಗಾಮುಗ್ಗಾ ನಿಂದಿಸುವ ಡಿ ಗ್ರೂಪ್ ನೌಕರನ ಹೆಸರು ಸುರೇಶ್. ಈತ ಬೆಂಗಳೂರು ಹೊರವಲಯದ ನೆಲಮಂಗಲ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಕಚೇರಿಯಲ್ಲಿ ಈತನ ದರ್ಬಾರ್ ಮೀತಿ ಮೀರಿದೆ. ಕೆಲಸದ ಸಮಯದಲ್ಲೇ ಕಾಲು ಮೇಲೆ ಕಾಲು ಹಾಕಿ ಹಿರಿಯ ಅಧಿಕಾರಿಗೆ ಧಮ್ಕಿ ಹಾಕುವುದು, ಮಹಿಳಾ ಅಧಿಕಾರಿಗಳ ಮುಂದೆ ಅಸಭ್ಯ ವರ್ತನೆ ತೋರುವುದೇ ಈತನ ನಿತ್ಯ ಕೆಲಸವಾಗಿದೆ.

    ಬೆಳ್ಳಂಬೆಳಗ್ಗೆಯೇ ಕೆಲಸಕ್ಕೆ ಕುಡಿದು ಬರುವ ಸುರೇಶ್ ರಂಪಾಟದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಆತನ ಕಾಟಕ್ಕೆ ಯಾರೂ ಬ್ರೇಕ್ ಹಾಕುತ್ತಿಲ್ಲ. ಈತನ ಬಗ್ಗೆ ಹೀಗಾಗಲೇ ಇತರೇ ಸಿಬ್ಬಂದಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳು ಹಿಂದೇಟು ಹಾಕಿದ್ದಾರೆ.

    ಪ್ರತಿ ನಿತ್ಯವೂ ಈತನ ರಂಪಾಟದಿಂದ ಕಚೇರಿಯಲ್ಲಿರುವ ಅಧಿಕಾರಿಗಳು ಮಾತ್ರ ಬೇಸತ್ತಿದ್ದಾರೆ. ಈತನ ರಂಪಾಟ ತಾಳಲಾರದೆ ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ, ಈಗಲಾದರೂ ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

  • ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನ ಅಮಾನತು ಮಾಡಿದ ಪ್ರಭು ಚೌವ್ಹಾಣ್

    ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನ ಅಮಾನತು ಮಾಡಿದ ಪ್ರಭು ಚೌವ್ಹಾಣ್

    ಕಲಬುರಗಿ: ಜಿಲ್ಲೆಯ ಪಶುಸಂಗೋಪನೆ ಇಲಾಖೆಗೆ ಸಚಿವ ಪ್ರಭು ಚೌವ್ಹಾಣ್ ಧಿಡೀರ್ ಭೇಟಿ ನೀಡಿದ್ದು, ಸತತ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನು ಅಮಾನತು ಮಾಡಿದ್ದಾರೆ.

    ‘ಡಿ’ ಗ್ರೂಪ್ ನೌಕರ ಉಪೇಂದ್ರರನ್ನು ಅಮಾನತುಗೊಳಿಸಲಾಗಿದೆ. ಸತತ 2 ತಿಂಗಳಿನಿಂದ ಕರ್ತವ್ಯಕ್ಕೆ ಬರದೆ ಉಪೇಂದ್ರ ಗೈರಾಗಿದ್ದರು. ಕಚೇರಿ ಭೇಟಿ ವೇಳೆ ಈ ವಿಚಾರ ತಿಳಿದ ಸಚಿವರು ಬೇಜವಾಬ್ದಾರಿ ತೋರಿದ ನೌಕರನ ಮೇಲೆ ಗರಂ ಆಗಿ ಅಮಾನತು ಮಾಡಿದ್ದಾರೆ. ಇದೇ ವೇಳೆ ಪಶು ಆಸ್ಪತ್ರೆ ಅವ್ಯವಸ್ಥೆ ಕಂಡು ಉಪನಿರ್ದೇಶಕ ಹನುಮಂತಪ್ಪ ಮೇಲೂ ಸಚಿವರು ಗರಂ ಆಗಿದ್ದು, ಆಸ್ಪತ್ರೆಯಲ್ಲಿನ ಎಕ್ಸ್-ರೇ ಮಷಿನ್, ಪಿಠೋಪಕರಣಗಳು ತುಕ್ಕು ಹಿಡಿದಿರುವುದನ್ನ ಕಂಡು ಎಲ್ಲವನ್ನು 1 ತಿಂಗಳಿನಲ್ಲಿ ಸರಿಪಡಿಸುವಂತೆ ಸೂಚಿಸಿದ್ದಾರೆ.

    ಈ ಹಿಂದೆ ಬೀದರ್‍ನಲ್ಲಿ ಪಶು ವೈದ್ಯಕೀಯ ಕಚೇರಿಗೆ ಪ್ರಭು ಚವ್ಹಾಣ್ ಅವರು ದಿಢೀರ್ ಭೇಟಿ ನೀಡಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದ ಕಾರಣಕ್ಕೆ ಸಚಿವರನ್ನು ಕಂಡು ಕಂಗಾಲಾಗಿದ್ದರು. ಕಚೇರಿಯಲ್ಲಿ ಸ್ವಚ್ಛತೆ ಕಾಪಾಡದೇ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಾನುವಾರು ಅಭಿವೃದ್ಧಿ ಅಧಿಕಾರಿ ಎನ್. ಗಾಂಧಿ ಹಾಗೂ ‘ಡಿ’ ಗ್ರೂಪ್ ನೌಕರ ಬಾಬು ಗುಟ್ಕಾ ಹಾಗೂ ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಬಂದಿದ್ದರು. ಇವರನ್ನು ಗಮನಿಸಿದ ಸಚಿವರು ಇಬ್ಬರನ್ನು ಅಮಾನತುಗೊಳಿಸುವಂತೆ ಆದೇಶ ನೀಡಿದ್ದರು.

    ಕೆಲಸಕ್ಕೆ ಗೈರಾದ ಅಧಿಕಾರಿಗಳಿಗೂ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗಿತ್ತು. ಕೆಲಸಕ್ಕೆ ಹಾಜರಾಗದ 6ಕ್ಕೂ ಹೆಚ್ಚು ಅಧಿಕಾರಿಗಳ ಹೆಸರನ್ನು ಪಡೆದು ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ. ಅಲ್ಲದೆ ಕರ್ತವ್ಯ ಲೋಪ ಮಾಡುವ ಸಿಬ್ಬಂದಿ ಅಥವಾ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

  • 3 ಸಾವಿರ ಸಂಬಳ, 12 ಬಾರಿ ವಿದೇಶ ಪ್ರವಾಸ- ಬಿಬಿಎಂಪಿ ಡಿ- ಗ್ರೂಪ್ ನೌಕರನ ಕಥೆಯಿದು

    3 ಸಾವಿರ ಸಂಬಳ, 12 ಬಾರಿ ವಿದೇಶ ಪ್ರವಾಸ- ಬಿಬಿಎಂಪಿ ಡಿ- ಗ್ರೂಪ್ ನೌಕರನ ಕಥೆಯಿದು

    ಬೆಂಗಳೂರು: ಬಿಬಿಎಂಪಿಯ ಡಿ- ಗ್ರೂಪ್ ನೌಕರನೊಬ್ಬ ತಿಂಗಳಿಗೆ 3 ಸಾವಿರ ಸಂಬಳ ಪಡೆಯುತ್ತಲೇ 12 ಬಾರಿ ವಿದೇಶ ಸುತ್ತಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.

    ಡಿ ಗ್ರೂಪ್ ನೌಕರ ಬಾಬು ಈ ರೀತಿ 12 ಬಾರಿ ವಿದೇಶ ಸುತ್ತಿದ್ದಾನೆ. ಈತ ಬಿಬಿಎಂಪಿಗೆ 1988ರಲ್ಲಿ ಎಂಟ್ರಿ ಕೊಟ್ಟಿದ್ದಾನೆ. ತಮ್ಮ ಕೆಲಸದ ಅವಧಿಯಲ್ಲಿ ಕಸ ವಿಲೇವಾರಿ ಕಲಿಯಲು 4 ಬಾರಿ ವಿದೇಶಕ್ಕೆ ಹೋಗಿದ್ದು, ಮತ್ತೊಂದೆಡೆ 28 ವರ್ಷ ಬಿಬಿಎಂಪಿ ಕೆಲಸದಲ್ಲಿ ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ್ದಾನೆ ಎಂದು ಡಿ-ಗ್ರೂಪ್ ನೌಕರ ಬಾಬು ವಿರುದ್ಧ ಬಿಎಂಟಿಎಫ್‍ಗೆ ದೂರು ಸಲ್ಲಿಸಲಾಗಿದೆ.

    ಸದ್ಯ ಡಿ ಗ್ರೂಪ್ ನೌಕರ ಬಾಬು ವಿರುದ್ಧ ಎಸಿಬಿ ದಾಳಿಯೂ ಮಾಡಿದೆ. ಈ ವೇಳೆ ಅನುಮತಿ ಇಲ್ಲದೇ ವಿದೇಶ ಪ್ರವಾಸ ಮಾಡಿರುವ ಬಗ್ಗೆ ಕಚೇರಿ ವರದಿಯನ್ನು ಕೇಳಿದೆ. ಆಗ ಬರೋಬ್ಬರಿ 12 ಬಾರಿ ಪ್ರವಾಸ ಮಾಡಿರುವ ಬಗ್ಗೆ ಮಾಹಿತಿ ತಿಳಿದಿದೆ. ನೌಕರ ಬಾಬು 4 ಬಾರಿ ಕಸ ವಿಲೇವಾರಿ ಕಲಿಯಲು ವಿದೇಶ ಹೋಗಲು ಅನುಮತಿ ಪಡೆದಿದ್ದಾನೆ. ಆದರೆ ಉಳಿದ ವಿದೇಶ ಪ್ರವಾಸದ ವಿಚಾರ ಈಗ ಕೋರ್ಟ್ ಮೆಟ್ಟಿಲು ಹತ್ತಿದೆ.

    ನೌಕರ ಬಾಬು 28 ವರ್ಷ ಬಿಬಿಎಂಪಿಯಲ್ಲಿ ಕೆಲಸ ಮಾಡಿದ್ದಾನೆ. ಆದರೆ ಸುಮಾರು 85 ಲಕ್ಷ ಆದಾಯ ಲೆಕ್ಕ ನೀಡಲಾಗಿದೆ. ಅಚ್ಚರಿಯೆಂದರೆ ಖರ್ಚು ವೆಚ್ಚ ಕಳೆದ ಆದಾಯಕ್ಕಿಂತ 66 ಲಕ್ಷಕ್ಕೂ ಹೆಚ್ಚು ಆಸ್ತಿ ಪತ್ತೆಯಾಗಿದೆ. ಈ ಸಂಬಂಧ ಎಸಿಬಿ ದಾಳಿಯೂ ಆಗಿದೆ. ಅಲ್ಲದೇ ಅನುಮತಿ ಇಲ್ಲದೇ ದುಬೈ ಸೇರಿದಂತೆ ಬೇರೆ ಬೇರೆ ದೇಶಗಳ ಪ್ರವಾಸಕ್ಕಾಗಿ ಪಾಲಿಕೆ ಆಯುಕ್ತರು ವಜಾಗೊಳಿಸುವ ನಿರ್ಧಾರ ಬಗ್ಗೆ ಸಹ ಕಳೆದ 2 ತಿಂಗಳ ಹಿಂದೆ ಪ್ರಕಟವಾಗಿದೆ. ಆದರೂ ಈಗ ಇನ್ನೂ ಕೆಲಸದಿಂದ ವಜಾವಾಗಿಲ್ಲ.

    ಇದೇ ಡಿ ಗ್ರೂಪ್ ನೌಕರ ಬಾಬು ವಿರುದ್ಧ ಪಾಲಿಕೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬಿಎಂಟಿಎಫ್ ಗೆ ದೂರು ದಾಖಲಾಗಿದೆ. ಸದ್ಯಕ್ಕೆ ನೌಕರ ಬಾಬು ಸಿವಿರಾಮನ್ ನಗರ ಪಾಲಿಕೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಪಾಲಿಕೆಯಲ್ಲಿ ಈ ಪ್ರಕರಣ ಸದ್ಯ ಚರ್ಚೆಗೆ ಗ್ರಾಸವಾಗಿದೆ. ವಿದೇಶ ಪ್ರವಾಸ ಮಾಡಿ ವರ್ಷಗಳೇ ಕಳೆದರೂ, ಆಯುಕ್ತರು ವಜಾ ವಿಚಾರವಾಗಿ ತೆಗೆದುಕೊಂಡ ನಿರ್ಧಾರ 2 ತಿಂಗಳ ಹಿಂದಿನದ್ದಾಗಿದೆ. ಇಷ್ಟೆಲ್ಲ ಆದರೂ ಬಾಬು ಮಾತ್ರ ಎಲ್ಲ ಕೇಸ್ ಕೋರ್ಟ್ ಅಂಗಳದಲ್ಲಿದೆ. ನನಗೆ 300 ಕೋಟಿ ಆಸ್ತಿ ಇದೆ. ಕೇಸ್ ಎದುರಿಸಲು ನಾ ಸಿದ್ಧ ಎಂದು ಸಮಜಾಯಿಸಿ ನೀಡಿದ್ದಾನೆ.

    ಇತ್ತ ಬಾಬು ವಿದೇಶ ಪ್ರವಾಸ ಹಾಗೂ ಮೀತಿ ಮೀರಿದ ಆದಾಯದ ಬಗ್ಗೆ ವಕೀಲ ರಾಮಕೃಷ್ಣ ಈಗಲೂ ಕಾನೂನು ಹೋರಾಟ ಮುಂದುವರಿಸಿದ್ದಾರೆ. 2 ಸಾವಿರ ತೆಗೆದುಕೊಳ್ಳುತ್ತಿದ್ದ ಡಿ ಗ್ರೂಪ್ ನೌಕರ ಬಾಬು ಈಗ 30 ಸಾವಿರ ಸಂಬಳ ತೆಗೆದುಕೊಳ್ಳುತ್ತಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv