Tag: cyclonic storm

  • ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    – `ಶಕ್ತಿ’ ಹೆಸರು ಕೊಟ್ಟಿದ್ದೇ ಲಂಕಾ; ಅ.7ರ ವರೆಗೆ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ

    ಮುಂಬೈ: ಅರಬ್ಬಿ ಸಮುದ್ರದಲ್ಲಿ ಶಕ್ತಿ ಚಂಡಮಾರುತ (Shakti Cyclone) ಅಬ್ಬರ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ಅ.7ರ ವರೆಗೆ ಮಹಾರಾಷ್ಟ್ರದಲ್ಲಿ (Maharashtra) ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಇದು ಮುಂಗಾರು ಬಳಿಕ ಅರಬ್ಬಿ ಸಮುದ್ರದಲ್ಲಿ ಅಪ್ಪಳಿಸುವ ಮೊದಲ ಚಂಡಮಾರುತವಾಗಿದೆ.

    ಚಂಡಮಾರುತ ಬೀಸುವ ಹಿನ್ನೆಲೆ ಮುಂಬೈ (Mumbai), ಥಾಣೆ, ಪಾಲ್ಘರ್, ರಾಯಗಡ್, ರತ್ನಗಿರಿ ಮತ್ತು ಸಿಂಧುದುರ್ಗ ಸೇರಿದಂತೆ ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಮಹಾರಾಷ್ಟ್ರದ ಒಳಭಾಗಗಳಲ್ಲಿ, ಅದ್ರಲ್ಲೂ ಮುಖ್ಯವಾಗಿ ಪೂರ್ವ ವಿದರ್ಭ ಮತ್ತು ಮರಾಠವಾಡದ ಕೆಲ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

    ಉತ್ತರ ಕೊಂಕಣದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಸ್ಥಳೀಯ ಆಡಳಿತ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಕಂದಮ್ಮಗಳ ಜೀವ ತೆಗೆದ ಕೆಮ್ಮಿನ ಸಿರಪ್ – ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

    ಗುಜರಾತ್‌ಗೆ ಅಪ್ಪಳಿಸಲಿದೆ ಚಂಡಮಾರುತ
    ಹವಾಮಾನ ಇಲಾಖೆ (IMD) ವಿಜ್ಞಾನಿ ಅಭಿಮನ್ಯು ಚೌಹಾಣ್ ಪ್ರಕಾರ, ಈಶಾನ್ಯ ಅರೇಬಿಯನ್‌ ಸಮುದ್ರದಲ್ಲಿ (Arabian Sea) ಚಂಮಾರುತ ತೀವ್ರಗೊಂಡಿದೆ. ಗಂಟೆಗೆ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಅಕ್ಟೋಬರ್‌ 6ರಂದು ಬೆಳಗ್ಗಿನ ವೇಳೆಗೆ ಚಂಡಮಾರುತವು ಗುಜರಾತ್‌ ಕಡೆಗೆ ಬೀಸುವ ನಿರೀಕ್ಷೆಯಿದೆ. ಆದಾಗ್ಯೂ ರಾಜ್ಯದಲ್ಲಿ ಮಳೆಯ ಪರಿಣಾಮ ಕಡಿಮೆ ಇರಲಿದ್ದು, ಗಾಳಿಯು ಗಂಟೆಗೆ 40-55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

    ಶಕ್ತಿ ಚಂಡಮಾರುತ ಎದುರಿಸಲು ಸಕಲ ತಯಾರಿ
    ಇನ್ನೂ ಶಕ್ತಿ ಚಂಡ ಮಾರುತ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರ (Maharashtra Government) ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ವಿಪತ್ತು ನಿರ್ವಹಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಬೇಕು, ಕರಾವಳಿ ಮತ್ತು ತಗ್ಗು ಪ್ರದೇಶಗಳಲ್ಲಿ ನೆಲೆಸಿರುವ ಜನರನ್ನ ಸ್ಥಳಾಂತರಿಸಲು ಕ್ರಮ ವಹಿಸಬೇಕು, ಮೀನುಗಾರರು ಸಮುದ್ರಕ್ಕಿಳಿದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ‌

    ಸೈಕ್ಲೋನ್‌ ಶಕ್ತಿ ಈಗ ಎಲ್ಲಿದೆ?
    ಹವಾಮಾನ ಇಲಾಖೆ ಪ್ರಕಾರ, ಶಕ್ತಿ ಚಂಡಮಾರುತವು ಪ್ರಸ್ತುತ ಗುಜರಾತ್‌ನ ನಲಿಯಾದಿಂದ ನೃಋತ್ಯಕ್ಕೆ ಸುಮಾರು 270 ಕಿಮೀ ದೂರದಲ್ಲಿ, ಪೋರ್‌ಬಂದರ್‌ನಿಂದ ಪಶ್ಚಿಮಕ್ಕೆ 300 ಕಿಮೀ ಮತ್ತು ದಕ್ಷಿಣಕ್ಕೆ 360 ಕಿಮೀ ದೂರದಲ್ಲಿದೆ. ಸುಮಾರು 8 ಕಿಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಚಲಿಸುತ್ತಿದ್ದು, 100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದನ್ನೂ ಓದಿ: ಪಾಕಿನ ಎಫ್‌-16 , ಜೆಎಫ್‌-17 ಯುದ್ಧ ವಿಮಾನಗಳನ್ನು ಹೊಡೆದಿದ್ದೇವೆ: ಏರ್ ಚೀಫ್ ಮಾರ್ಷಲ್

    `ಶಕ್ತಿ’ ಹೆಸರು ಕೊಟ್ಟಿದ್ದೇ ಶ್ರೀಲಂಕಾ
    ʻಶಕ್ತಿʼ ಚಂಡಮಾರುತದ ಹೆಸರು ಗಮನ ಸೆಳೆದಿದೆ. ಆದ್ರೆ ಚಂಡಮಾರುತಕ್ಕೆ ʻಶಕ್ತಿʼ ಎಂದು ಹೆಸರು ಕೊಟ್ಟಿದ್ದೇ ಶ್ರೀಲಂಕಾ. ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಏಷ್ಯಾ ಮತ್ತು ಪೆಸಿಫಿಕ್‌ನ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ನಿರ್ವಹಿಸುವ ಸಂಘಟಿತ ವ್ಯವಸ್ಥೆಯ ಅಡಿಯಲ್ಲಿ ಶ್ರೀಲಂಕಾ ʻಶಕ್ತಿʼ ಎಂದು ಹೆಸರಿಸಿದೆ. 2020ರಲ್ಲಿ ಪರಿಚಯಿಸಲಾದ ಈ ಸಂಘಟಿತ ವ್ಯವಸ್ಥೆಯು ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸದಸ್ಯರಾಷ್ಟ್ರಗಳನ್ನು ಒಳಗೊಂಡಿದೆ.

    ಚಂಡಮಾರುತವನ್ನು ಸುಲಭವಾಗಿ ಗುರುತಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇದಕ್ಕೆ ಹೆಸರುಗಳನ್ನು ನೀಡಲಾಗುತ್ತದೆ. ಈ ಋತುವಿನ ಮೊದಲ ಚಂಡಮಾರುತ ಇದಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ‘ಶಕ್ತಿ’ ಅಬ್ಬರ – ಮಹಾರಾಷ್ಟ್ರದಲ್ಲಿ ಅ.7ರವರೆಗೆ ಭಾರೀ ಮಳೆ ಸಾಧ್ಯತೆ

  • ಡಾನಾ ಚಂಡಮಾರುತ | 14 ಜಿಲ್ಲೆಗಳಲ್ಲಿ ಶಾಲೆಗಳು ಬಂದ್‌, 800 ಪರಿಹಾರ ಕೇಂದ್ರ ಸ್ಥಾಪನೆ, ಒಡಿಶಾ-ಬಂಗಾಳದಲ್ಲಿ ಫುಲ್‌ ಅಲರ್ಟ್‌

    ಡಾನಾ ಚಂಡಮಾರುತ | 14 ಜಿಲ್ಲೆಗಳಲ್ಲಿ ಶಾಲೆಗಳು ಬಂದ್‌, 800 ಪರಿಹಾರ ಕೇಂದ್ರ ಸ್ಥಾಪನೆ, ಒಡಿಶಾ-ಬಂಗಾಳದಲ್ಲಿ ಫುಲ್‌ ಅಲರ್ಟ್‌

    – ಏನಿದು ಡಾನಾ ಚಂಡಮಾರುತ? – ಚಂಡಮಾರುತಗಳಿಗೆ ಏಕೆ ಹೆಸರಿಡಬೇಕು?

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಗುರುವಾರ ಬಂಗಾಳಕೊಲ್ಲಿ ತೀರ ಪ್ರದೇಶಗಳಿಗೆ ʻಡಾನಾʼ ಚಂಡಮಾರುತ (Cyclone Dana) ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂಗಾರು ಮಳೆ ಋತುವಿನ ನಂತರ ಉಷ್ಣವಲಯದ ಮೊದಲ ಚಂಡಮಾರುತ ಇದಾಗಿದೆ.

    ಪೂರ್ವ– ಮಧ್ಯ ಬಂಗಾಳಕೊಲ್ಲಿ (Bengal) ಹಾಗೂ ಅಂಡಮಾನ್ ಸಮುದ್ರದ ಉತ್ತರಕ್ಕೆ ವಾಯುಭಾರ ಕುಸಿತ ಉಂಟಾಗಿದೆ. ಇದು ‍ಪಶ್ಚಿಮ– ವಾಯುವ್ಯ ದಿಕ್ಕಿನೆಡೆಗೆ ಚಲಿಸಿ ಬುಧವಾರದ ವೇಳೆಗೆ ಅಂದ್ರೆ ಅಕ್ಟೋಬರ್‌ 23ರ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಅಕ್ಟೋಬರ್ 24ರ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಉತ್ತರ ಬಂಗಾಳ ಕೊಲ್ಲಿಯ ತೀರ ಪ್ರದೇಶಕ್ಕೆ ಅಪ್ಪಳಿಸಲಿದೆ. ವಾಯುವ್ಯ ದಿಕ್ಕಿಗೆ ಚಲಿಸಲಿರುವ ಈ ಚಂಡಮಾರುತ ಗುರುವಾರ (ಅ.24) ರಾತ್ರಿ ಅಥವಾ ಶುಕ್ರವಾರ (ಅ.25) ಮುಂಜಾನೆ ಒಡಿಶಾದ ಪುರಿಗೆ ಅಪ್ಪಳಿಸಲಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 100 ರಿಂದ 120 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.

    ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗಲಿದೆ. ಅಕ್ಟೋಬರ್ 23 ರಿಂದಲೇ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಗಂಟೆಗೆ 90 ರಿಂದ 120 ಕಿಮಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಇದನ್ನು ತೀವ್ರ ಚಂಡಮಾರುತ ಎಂದು ವರ್ಗೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಮತ್ತು ಬಂಗಾಳದಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದೆ. ಹಲವೆಡೆ ಶಾಲಾ ಕಾಲೇಜುಗಳಿಗೆ ಸಂಪೂರ್ಣ ರಜೆ ಘೋಷಣೆ ಮಾಡಲಾಗಿದೆ. ಚಂಡಮಾರುತವನ್ನು ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಸಕಲ ತಯಾರಿ ಮಾಕೊಳ್ಳುತ್ತಿದೆ. ಅಷ್ಟಕ್ಕೂ ಡಾನಾ ಚಂಡ ಮಾರುತ ಎಂದರೇನು? ಡಾನಾ ಹೆಸರು ಬಂದಿದ್ದು ಹೇಗೆ? ಚಂಡಮಾರುತಗಳಿಗೆ ಏಕೆ ಹೆಸರಿಡಬೇಕು? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… ಅದಕ್ಕೂ ಮುನ್ನ ʻಚಂಡಮಾರುತʼ ಎಂದರೇನು? ಎಂಬುದನ್ನು ನೋಡೋಣ….

    ಚಂಡಮಾರುತ ಎಂದರೇನು?

    ಚಂಡಮಾರುತ ಎಂಬುದು ಹವಾಮಾನಕ್ಕೆ ಸಂಬಂಧಿಸಿದ ಒಂದು ವಿದ್ಯಮಾನ. ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಗಾಳಿ ಜೋರಾಗಿ ಪ್ರದಕ್ಷಿಣೆ ಇಲ್ಲವೇ ಅಪ್ರದಕ್ಷಿಣಾ ಪಥದಲ್ಲಿ ಸುರುಳಿ ಸುತ್ತುತ್ತಾ ಕಡಿಮೆ ಒತ್ತಡ ಇರುವ ಪ್ರದೇಶದತ್ತ ಮುನ್ನುಗ್ಗುವುದೇ ಚಂಡಮಾರುತ.

    ʻಡಾನಾʼ ಎಂದರೇನು?

    ಡಾನಾ ಎಂಬುದು ಅರೇಬಿಕ್‌ ಪದವಾಗಿದೆ. ಡಾನಾ ಎಂದರೆ ಅಮೂಲ್ಯ ಮತ್ತು ಸುಂದರವಾದ ಮುತ್ತು ಎಂದು ಹೆಸರು. ಈ ಹೆಸರನ್ನು ಪರ್ಷಿಯನ್‌ ಮತ್ತು ಕೊಲ್ಲಿಯ ಅರಬ್‌ ರಾಷ್ಟ್ರಗಳಲ್ಲಿ ಬಳಸಲಾಗುತ್ತದೆ. ಅಲ್ಲಿ ಪರ್ಲ್‌ ಡೈವಿಂಗ್‌ (ಸಮುದ್ರದಾಳದಲ್ಲಿ ಮುತ್ತು ಹುಡುಕುವ ಕೆಲಸ) ಮಹತ್ವದ ವೃತ್ತಿಯಾಗಿದೆ. ಪರ್ಷಿಯನ್‌ ಭಾಷೆಯಲ್ಲಿ ʻಡಾನಾʼ ಎಂದರೆ ದಾನಾ, ಅನುದಾನ, ಮುಂತಾದ ಅರ್ಥಗಳನ್ನು ಸೂಚಿಸುತ್ತದೆ. ಉಷ್ಣವಲಯದ ಚಂಡಮಾರುತಗಳಿಗೆ ಅಂತಾರಾಷ್ಟ್ರೀಯವಾಗಿ ಹೆಸರಿಸುವ ವ್ಯವಸ್ಥೆಯ ಭಾಗವಾಗಿ ಕತಾರ್ ಈ ಹೆಸರನ್ನಿಟ್ಟಿದೆ.

    ಚಂಡಮಾರುತಗಳಿಗೆ ಹೆಸರಿಡಲು ಕಾರಣ ಏನು?

    ಹಿಂದೂ ಮಹಾಸಾಗರದಲ್ಲಿ ಹುಟ್ಟುವ ಚಂಡಮಾರುತಗಳಿಗೆ ಹೆಸರಿಡುವ ಪ್ರಕ್ರಿಯೆ ಆರಂಭವಾಗಿದ್ದು 2000ನೇ ಇಸವಿಯಿಂದ. 2000ನೇ ಇಸವಿಯಲ್ಲಿ ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ಒಮನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್ ದೇಶಗಳನ್ನು ಒಳಗೊಂಡ WMO/ESCAP (ವಿಶ್ವ ಹವಾಮಾನ ಸಂಸ್ಥೆ/ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಮತ್ತು ಪೆಸಿಫಿಕ್) ಎಂಬ ಗುಂಪು ಚಂಡಮಾರುತಗಳಿಗೆ ಹೆಸರಿಡಲು ಪ್ರಾರಂಭಿಸಿತು. 2018ರಲ್ಲಿ WMO/ESCAP ಗುಂಪು ವಿಸ್ತರಿಸಿದ್ದರಿಂದ ಈ ಒಕ್ಕೂಟಕ್ಕೆ ಇರಾನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ರಾಷ್ಟ್ರಗಳು ಸೇರ್ಪಡೆಯಾದವು. ಈ ಗುಂಪಿನ 13 ರಾಷ್ಟ್ರಗಳು ತಲಾ 13 ಹೆಸರುಗಳನ್ನ ಪಟ್ಟಿ ಮಾಡಿ ಸಲಹೆ ರೂಪದಲ್ಲಿ ಕಳುಹಿಸಿದ ನಂತರ WMO/ESCAP ಪ್ಯಾನೆಲ್ ಆನ್ ಟ್ರಾಪಿಕಲ್ ಸೈಕ್ಲೋನ್ಸ್ (PTC) ಪಟ್ಟಿಯನ್ನು ಅಂತಿಮಗೊಳಿಸಿತು. ಬಳಿಕ 2020ರ ಏಪ್ರಿಲ್‌ನಲ್ಲಿ ಭಾರತೀಯ ಹಮಾವಾನ ಇಲಾಖೆ 169 ಚಂಡಮಾರುತ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿತು.

    ಚಂಡಮಾರುತಗಳಿಗೆ ಏಕೆ ಹೆಸರಿಡಬೇಕು?

    ಚಂಡಮಾರುತಗಳಿಗೆ ಹೆಸರಿಡುವುದರಿಂದ ಸುಲಭವಾಗಿ ಗುರುತಿಸಬಹುದು. ಚಂಡಮಾರುತಗಳನ್ನು ಸುಲಭವಾಗಿ ಗುರುತಿಸಲು ಮತ್ತು ಹವಾಮಾನ-ಸಂಬಂಧಿತ ಅಪಾಯಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ವಿಪತ್ತು ನಿರ್ವಹಣೆ, ವೈಜ್ಞಾನಿಕ ವಿಷಯಗಳನ್ನ ಸರಳವಾಗಿ ಅರ್ಥೈಸಿಕೊಂಡು ವಿಪತ್ತು ನಿರ್ವಹಣೆಗೆ ಪೂರಕವಾಗಿ ಕೆಲಸ ಮಾಡಬಹುದು.

    ಚಂಡಮಾರುತ ಎದುರಿಸಲು ಒಡಿಶಾ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

    1. ಪ್ರವಾಸಿಗಳು ಮತ್ತು ಯಾತ್ರಾರ್ಥಿಗಳಿಗೆ ಅಕ್ಟೋಬರ್‌ 23ಕ್ಕೆ ಮುಂಚಿತವಾಗಿ ಪುರಿಯಿಂದ ಹೊರಡುವಂತೆ ಸೂಚನೆ ನೀಡಲಾಗಿದೆ.
    2. ಅ.23 ರಿಂದ 25ರ ವರೆಗೆ ಮುನ್ನೆರಿಕಾ ಕ್ರಮವಾಗಿ 14 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
    3. ಅಕ್ಟೋಬರ್ 23 ರಿಂದ 25ರ ವರೆಗೆ ಎಲ್ಲಾ ರಕ್ಷಣಾ ಸಿಬ್ಬಂದಿಗೆ ರಜೆ ಕಡಿತಗೊಳಿಸಿದೆ
    4. ಅಣುಕು ಕಾರ್ಯಾಚರಣೆ ಮೂಲಕ ಜಾಗೃತಿ ಮೂಡಿಸುತ್ತಿದೆ
    5. ಡಾನಾ ಚಂಡಮಾರುತಕ್ಕೆ ತುತ್ತಾಗುವ ಸಂಭಾವ್ಯ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
    6. 10 ಜಿಲ್ಲೆಗಳಲ್ಲಿ ಒಟ್ಟು 17 ಒಡಿಆರ್‌ಎಎಫ್ ತಂಡಗಳನ್ನು ನಿಯೋಜಿಸಲು ಮುಂದಾಗಿದೆ. ಜೊತೆಗೆ ಮೂರು ODRAF ತಂಡಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗುತ್ತಿದೆ.
    7. ಪಶ್ಚಿಮ ಬಂಗಾಳದಲ್ಲೂ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಸೇನೆಯ ರಕ್ಷಣಾ ತಂಡ, ಕೋಸ್ಟ್‌ ಗಾರ್ಡ್‌ ತಂಡಗಳೂ ಫೀಲ್ಡಿಗಿಳಿದಿವೆ.

    800ಕ್ಕೂ ಹೆಚ್ಚು ಪರಿಹಾರ ಕೇಂದ್ರ ಸ್ಥಾಪನೆ

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತೀವ್ರ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇರುವುದರಿಂದ ಒಡಿಶಾ ಸರ್ಕಾರ 800ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ. ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು 250ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ್ದು, ರಕ್ಷಣಾ ಸಿಬ್ಬಂದಿ ಹಾಗೂ ನೌಕರರಿಗೆ ಅಗತ್ಯ ಸೂಚನೆಗಳನ್ನು ಕೊಟ್ಟಿದ್ದಾರೆ.

    ಒಡಿಶಾ, ಬಂಗಾಳದಲ್ಲಿ ಸರ್ಕಾರಗಳು ಫುಲ್‌ ಅಲರ್ಟ್‌

    ಎರಡೂ ರಾಜ್ಯಗಳು ಚಂಡಮಾರುತ ಎದುರಿಸಲು ನಾನಾ ಕ್ರಮಗಳನ್ನು ಕೈಗೊಂಡಿವೆ. ಈಗಾಗಲೇ ಕರಾವಳಿ ಪ್ರದೇಶಗಳಲ್ಲಿರುವ ಜನರನ್ನು ಸ್ಥಳಾಂತರಿಸಲು ಮುಂದಾಗಿವೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಿವೆ. ಗಂಜಾಂ, ಪುರಿ, ಜಗತ್‌ಸಿಂಗ್‌ಪುರ್, ಕೇಂದ್ರಪಾರ, ಭದ್ರಕ್, ಬಾಲಸೋರ್, ಮಯೂರ್‌ಭಂಜ್, ಕಿಯೋಂಜರ್, ಧೆಂಕನಲ್, ಜಾಜ್‌ಪುರ್, ಅಂಗುಲ್, ಖೋರ್ಧಾ, ನಯಾಗರ್ ಮತ್ತು ಕಟಕ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದರೊಂದಿಗೆ ಕರಾವಳಿ ಪ್ರದೇಶಗಳಲ್ಲಿ ಹೆದ್ದಾರಿ ಮತ್ತು ರೈಲು ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

    ಗುರುವಾರ ಒಡಿಶಾದ ಪುರಿ, ಖುರ್ದಾ, ಗಂಜಾಂ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷನೆ ಮಾಡಿದೆ. ಜೊತೆಗೆ ಪಶ್ಚಿಮ ಬಂಗಾಳದಲ್ಲೂ ಪುರ್ಬಾ ಮತ್ತು ಪಶ್ಚಿಮ ಮೇದಿನಿಪುರ್ ಮತ್ತು ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಬುಧವಾರ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಅಲ್ಲದೇ ಸ್ಥಳಾಂತರಗೊಂಡ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಪ್ರಮಾಣದ ದಾಸ್ತಾನು, ನೀರು ಇತ್ಯಾದಿ ಸೌಲಭ್ಯಗಳನ್ನು ಸೈಕ್ಲೋನ್‌ ಶೆಲ್ಟರ್‌ಗಳಲ್ಲಿ ಸಂಗ್ರಹಿಸಿಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಶೂನ್ಯ ಅಪಘಾತ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

    ಗಣ್ಯರ ಭೇಟಿಯೂ ರದ್ದು

    ಡಾನಾ ಚಂಡಮಾರುತ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೂರು ದಿನಗಳ ಒಡಿಶಾ ಭೇಟಿಯು ರದ್ದಾಗಿದೆ. ರಾಷ್ಟ್ರಪತಿಗಳು ಒಡಿಶಾದ ಬಂಗ್ರಿಪೋಸಿ, ಉಪರಬೇಡ, ರಾಯರಂಗಪುರ, ಪುರಿ ಮತ್ತು ಭುವನೇಶ್ವರಕ್ಕೆ ಭೇಟಿ ನೀಡಬೇಕಿತ್ತು. ಜೊತೆಗೆ ಭಾರತ-ಬಾಂಗ್ಲಾದೇಶ ಗಡಿಯಲ್ಲಿ 450 ಕೋಟಿ ರೂಪಾಯಿ ವೆಚ್ಚದ ಆಧುನಿಕ ಪ್ರಯಾಣಿಕ ಟರ್ಮಿನಲ್ ಅನ್ನು ಉದ್ಘಾಟಿಸಲು ಬುಧವಾರ ಪಶ್ಚಿಮ ಬಂಗಾಳದ ಪೆಟ್ರಾಪೋಲ್‌ಗೆ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಕೂಡ ಚಂಡಮಾರುತದಿಂದಾಗಿ ರದ್ದಾಗಿದೆ.

  • ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಸಾಧ್ಯತೆ

    ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಸಾಧ್ಯತೆ

    ಬೆಂಗಳೂರು: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

    ಬಂಗಾಳಕೊಲ್ಲಿ ಮತ್ತು ಅರಬೀ ಸಮುದ್ರದಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತ ಹಿನ್ನೆಲೆ ಮೋಡ ಕವಿದ ವಾತಾವರಣ ಇರಲಿದ್ದು, ರಾಜ್ಯದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇನ್ನೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲೂ ಸಾಧಾರಣ ಮಳೆಯಾಗಲಿದ್ದು, ಬೆಂಗಳೂರಿನಲ್ಲಿ ಶೀತಗಾಳಿ ಬೀಸುತ್ತಿದ್ದು, ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗಲಿದೆ ಎಂದು ಹವಾಮಾನ ತಙ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಆಂಧ್ರ, ಒಡಿಶಾಗೆ ಚಂಡಮಾರುತ ಅಪ್ಪಳಿಸುವ ಭೀತಿ- ಮುಂಬೈನಲ್ಲಿ ಭಾರಿ ಮಳೆ ಸಾಧ್ಯತೆ

    kerala rain

    ಮತ್ತೊಂದೆಡೆ ಉತ್ತರ ಗುಜರಾತ್, ಉತ್ತರ ಮತ್ತು ವಾಯುವ್ಯ ಮಹಾರಾಷ್ಟ್ರದಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮಳೆಯಿಂದಾಗಿ ಪಾಲ್ಘರ್, ಥಾಣೆ, ಮುಂಬೈನಲ್ಲಿ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ. ಡಿ.4ರಂದು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ – ಇಂದಿನಿಂದ ಆಟೋ ದರ ಕಾಸ್ಟ್ಲಿ