Tag: cyclone Amphan

  • ಅಂಫಾನ್ ಚಂಡಮಾರುತ – ಐಎಂಡಿಯನ್ನು ಶ್ಲಾಘಿಸಿದ ವಿಶ್ವ ಹವಾಮಾನ ಸಂಸ್ಥೆ

    ಅಂಫಾನ್ ಚಂಡಮಾರುತ – ಐಎಂಡಿಯನ್ನು ಶ್ಲಾಘಿಸಿದ ವಿಶ್ವ ಹವಾಮಾನ ಸಂಸ್ಥೆ

    ನವದೆಹಲಿ: ಅಂಫಾನ್ ಚಂಡಮಾರುತ ಸಂಬಂಧ ನಿಖರ ಮಾಹಿತಿಯನ್ನು ನೀಡಿ ಭಾರೀ ಅನಾಹುತವನ್ನು ತಪ್ಪಿಸಿದ್ದಕ್ಕೆ ವಿಶ್ವ ಹವಾಮಾನ ಸಂಸ್ಥೆ(ಡಬ್ಲ್ಯೂಎಂ) ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯನ್ನು ಶ್ಲಾಘಿಸಿದೆ.

    ಜೂನ್ 2 ರಂದು ಐಎಂಡಿ ಡೈರೆಕ್ಟರ್ ಜನರಲ್ ಮೃತ್ಯುಂಜಯ ಮಹಾಪಾತ್ರ ಅವರಿಗೆ ಡಬ್ಲ್ಯೂಎಂಒ ಕಾರ್ಯದರ್ಶಿ ಜನರಲ್ ಇ ಮನನೆಕೋವಾ ಪತ್ರ ಬರೆದು ಮೆಚ್ಚುಗೆ ಸೂಚಿಸಿದ್ದಾರೆ.

    ಯಾವಾಗ ಚಂಡುಮಾರುತ ಬರುತ್ತದೆ? ಅದರ ಪಥ ಹೇಗಿರಲಿದೆ? ಯಾವೆಲ್ಲ ಪ್ರದೇಶಗಳಿಗೆ ಹಾನಿಯಾಗಬಹುದು? ಗಾಳಿಯ ವೇಗ ಎಷ್ಟಿರಬಹುದು ಈ ಬಗ್ಗೆ ಐಎಂಡಿ ಮೂರು ದಿನದ ಮೊದಲೇ ನಿಖರವಾಗಿ ಊಹಿಸಿ ಮಾಹಿತಿ ನೀಡಿತ್ತು. ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯವಾಯಿತು ಎಂದು ಡಬ್ಲ್ಯೂಎಂಒ ಪತ್ರದಲ್ಲಿ ಶ್ಲಾಘಿಸಿದೆ.

    ಐಎಂಡಿಯ ಸೇವೆ ನಮಗೆಲ್ಲ ‘ಅತ್ಯುತ್ತಮ ಪಾಠ’ ಎಂದು ಡಬ್ಲ್ಯೂಎಂಒ ಬಣ್ಣಿಸಿದೆ. ಅಷ್ಟೇ ಅಲ್ಲದೇ ಡಬ್ಲ್ಯೂಎಂಒ ಸಿಂಗಾಪುರ, ಬಹರೇನ್ ದೇಶಗಳಿಗೂ ಐಎಂಡಿ ನೀಡಿದ ಡೇಟಾವನ್ನು ಅಧ್ಯಯನಕ್ಕೆ ಕಳುಹಿಸಿ ಕೊಟ್ಟಿದೆ.

    199ರ ನಂತರ ಬರುತ್ತಿರುವ ಈ ಸೂಪರ್ ಚಂಡಮಾರುತ ಭಾರೀ ಅನಾಹುತವನ್ನೇ ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿತ್ತು. ಹೀಗಾಗಿ ಭಾರತ ಮೊದಲೇ ಶ್ರೀಲಂಕಾ, ಬಾಂಗ್ಲಾದೇಶಕ್ಕೆ ಮಾಹಿತಿ ರವಾನಿಸಿತ್ತು. ಎರಡು ದಿನಕ್ಕೂ ಮೊದಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಭಾಗದಲ್ಲಿದ್ದ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿತ್ತು. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮುಂದುವರಿದ ಇಸ್ರೋ ಪರಾಕ್ರಮ: ಜಿಸ್ಯಾಟ್-17 ಉಪಗ್ರಹ ಉಡಾವಣೆ ಮಾಡಿದ್ದು ಯಾಕೆ?

    ಮೇ 18ರಂದು ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಅಂಫಾನ್ ಚಂಡಮಾರುತ ಮೇ 20ರಂದು ಪಶ್ಚಿಮ ಬಂಗಾಳದ ಸುಂದರ್ ಬನ್ ಮತ್ತು ಕರಾವಳಿ ಭಾಗಕ್ಕೆ ಅಪ್ಪಳಿಸಿತ್ತು. 260 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು ಒಟ್ಟು ಭಾರತದಲ್ಲಿ 90ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

    https://www.facebook.com/publictv/posts/4369546059729779

     

  • ಮಳೆ ಮಾರುತಗಳ ತೇವಾಂಶವನ್ನೆಲ್ಲ ಹೀರಿಕೊಂಡ ಅಂಫಾನ್ ಚಂಡಮಾರುತ- ಮುಂಗಾರು ವಿಳಂಬ

    ಮಳೆ ಮಾರುತಗಳ ತೇವಾಂಶವನ್ನೆಲ್ಲ ಹೀರಿಕೊಂಡ ಅಂಫಾನ್ ಚಂಡಮಾರುತ- ಮುಂಗಾರು ವಿಳಂಬ

    ಧಾರವಾಡ: ಕೊರೊನಾ ಲಾಕ್‍ಡೌನ್‍ದಿಂದ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದ ರೈತರು ಈ ಮುಂಗಾರಿನಲ್ಲಾದರೂ ಒಂದಷ್ಟು ಬೆಳೆ ತೆಗೆದುಕೊಳ್ಳೋಣ ಅನ್ನೋ ಲೆಕ್ಕಾಚಾರದಲ್ಲಿದ್ದರು. ಆದರೆ ಮುಂಗಾರು ಮಳೆಯೂ ಸಹ ಈಗ ವಿಳಂಬವಾಗಿ ಬರಲಿದೆ ಅನ್ನೋ ಅಂಶ ತಿಳಿದಿದೆ.

    ಈಗಾಗಲೇ ರೈತರು ಮುಂಗಾರು ಬಿತ್ತನೆಗೆ ಕಾದು ಕುಳಿತ್ತಿದ್ದರು. ಆದರೆ ಮುಂಗಾರು ಮಳೆ ವಿಳಂಬವಾಗಿ ಉತ್ತರ ಕರ್ನಾಟಕಕ್ಕೆ ಬರಲಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಸದ್ಯದ ಹವಾಮಾನ ಅಧ್ಯಯನದ ಪ್ರಕಾರ, ನಾಲ್ಕೈದು ದಿನ ಮುಂಗಾರು ವಿಳಂಬ ಆಗಬಹುದು ಎನ್ನಲಾಗುತ್ತಿದೆ.

    ಕಳೆದ ಸಲ ಒಂದು ವಾರ ವಿಳಂಬ ಅಂತ ಮುಂಚಿತವಾಗಿ ತಿಳಿಸಲಾಗಿತ್ತು. ಆದರೆ ಅದು ಮೂರು ವಾರಕ್ಕೆ ಹೋಗಿತ್ತು. ಹೀಗಾಗಿ ನಾಲ್ಕೈದು ದಿನದ ವಿಳಂಬ ಇನ್ನೂ ಹೆಚ್ಚಾದರೂ ಅಚ್ಚರಿ ಇಲ್ಲ. ಇದಕ್ಕೆಲ್ಲ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಬಂದ ಅಂಫಾನ್ ಚಂಡ ಮಾರುತವೇ ಕಾರಣವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಸುರಿಸಬೇಕಿದ್ದ ಮಳೆ ಮಾರುತಗಳ ತೇವಾಂಶವನ್ನೆಲ್ಲ ಈ ಅಂಫಾನ್ ಸಂಪೂರ್ಣವಾಗಿ ಹೀರಿಕೊಂಡು ಹೋಗಿದೆ. ಇದರಿಂದ ಈ ಭಾಗದಲ್ಲಿ ಆವಿಯಾಗಿ ಮೋಡ ಸೇರಿದ್ದ ನೀರಿನ ಒಂದಂಶ ಮಳೆಯೂ ಈಗ ಸಿಗದಂತಾಗಿದೆ.

    ಮತ್ತೊಂದೆಡೆ ಅರಬ್ ತೀರದ ವಾಯುಭಾರ ಕುಸಿತದಿಂದ ಮಳೆ ಬರಲಿದ್ದ ಮಾರುತಗಳು ಸಹ ಸದ್ಯ ಪಶ್ಚಿಮ ದಿಕ್ಕಿನತ್ತ ಚಲನೆ ಆರಂಭಿಸಿವೆಯಂತೆ. ಇದರಿಂದಾಗಿ ಜೂನ್ 1ರ ಹೊತ್ತಿಗೆ ಮುಂಗಾರು ಮಳೆ ಕೇರಳ ಪ್ರವೇಶಿಸಿದರೂ ಅದು ಉತ್ತರ ಕರ್ನಾಟಕ ಭಾಗಕ್ಕೆ ಬರಲು ಕನಿಷ್ಠ ಒಂದು ವಾರ ಬೇಕಾಗಬಹುದು ಎಂದು ಹವಾಮಾನ ತಜ್ಞ ಆರ್.ಎಚ್. ಪಾಟೀಲ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

  • ಕೊರೊನಾ ಸಂಕಷ್ಟದ ನಡುವೆ ಭಾರತಕ್ಕೆ ಅಪ್ಪಳಿಸಲಿದೆ ಅಂಫಾನ್ ಚಂಡಮಾರುತ – ಪ್ರಧಾನಿ ಮೋದಿ ಸಭೆ

    ಕೊರೊನಾ ಸಂಕಷ್ಟದ ನಡುವೆ ಭಾರತಕ್ಕೆ ಅಪ್ಪಳಿಸಲಿದೆ ಅಂಫಾನ್ ಚಂಡಮಾರುತ – ಪ್ರಧಾನಿ ಮೋದಿ ಸಭೆ

    ನವದೆಹಲಿ: ಕೊರೊನಾ ಮಹಾಮಾರಿ ಸಂಕಷ್ಟದ ನಡುವೆ ದೇಶಕ್ಕೆ ಅಂಫಾನ್ ಚಂಡಮಾರುತ ಅಪ್ಪಳಿಸಲಿದ್ದು, ಪರಿಸ್ಥಿತಿ ನಿರ್ವಹಣೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಪೂರ್ವಭಾವಿ ಸಭೆ ಕರೆದಿದ್ದಾರೆ.

    ನವದೆಹಲಿಯಲ್ಲಿ ಸಂಜೆ ನಾಲ್ಕು ಗಂಟೆಗೆ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

    ಮುನ್ನೆಚ್ಚರಿಕೆ ಕ್ರಮವಾಗಿ ಮೇ 15ರ ನಂತರ ಬಂಗಾಳ ಕೊಲ್ಲಿ ಸಮೀಪ ಯಾರೂ ಕೂಡ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಕಳೆದ ವರ್ಷ ಫಣಿ ಚಂಡಮಾರುತ ಸೃಷ್ಟಿಯಾಗಿತ್ತು ಈ ವರ್ಷ ಅಂಫಾನ್ ಚಂಡಮಾರುತ ಸೃಷ್ಟಿಯಾಗುತ್ತಿದ್ದು, ಆತಂಕ ಹೆಚ್ಚಿಸಿದೆ.