Tag: Cycle Jatha

  • ತೈಲ ದರ ಏರಿಕೆ ಖಂಡಿಸಿ ಸೈಕಲ್ ಜಾಥಾ – ವಿಜಯೇಂದ್ರ, ಅಶ್ವಥ್ ನಾರಾಯಣ್ ಸೇರಿ ಬಿಜೆಪಿ ನಾಯಕರು ವಶಕ್ಕೆ

    ತೈಲ ದರ ಏರಿಕೆ ಖಂಡಿಸಿ ಸೈಕಲ್ ಜಾಥಾ – ವಿಜಯೇಂದ್ರ, ಅಶ್ವಥ್ ನಾರಾಯಣ್ ಸೇರಿ ಬಿಜೆಪಿ ನಾಯಕರು ವಶಕ್ಕೆ

    ಬೆಂಗಳೂರು: ತೈಲ ದರ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ (BJP) ನಾಯಕರು ರಸ್ತೆಗಿಳಿದಿದ್ದಾರೆ. ಇಂದು ನಗರದ ಬಿಜೆಪಿ ಕಚೇರಿಯಿಂದ ವಿಧಾನಸೌಧದ ವರೆಗೆ ನಾಯಕರು ಸೈಕಲ್ ಜಾಥಾ (Cycle Jatha) ನಡೆಸಿದರು. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

    ಇಂದು ಬೆಳಗ್ಗೆ 9:30 ಕ್ಕೆ ಬಿಜೆಪಿ ಕಚೇರಿಯಿಂದ ವಿಧಾನಸೌಧದ ವರೆಗೆ ಸೈಕಲ್ ಜಾಥಾ ಆರಂಭಿಸಲಾಯಿತು. ವಿಜಯೇಂದ್ರ ನೇತೃತ್ವದಲ್ಲಿ ಸೈಕಲ್ ಏರಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿ ನಾಯಕರು ಮುಂದಾದರು. ಆದರೆ ಬಿಜೆಪಿ ಕಚೇರಿ ಮುಂಭಾಗದಲ್ಲೇ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಇದನ್ನೂ ಓದಿ: ʻಡಿʼ ಗ್ಯಾಂಗ್‌ ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು – ಏನ್‌ ಹೇಳುತ್ತೆ ಸೆಕ್ಷನ್ಸ್‌?

    ಬಿಜೆಪಿಯವರ ಸೈಕಲ್ ಜಾಥಾ ತಡೆಗೆ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಬಿಜೆಪಿ ಕಚೇರಿ ಎದುರು 3 ಪೊಲೀಸ್ ವ್ಯಾನ್, 1 ಬಿಎಂಟಿಸಿ ಬಸ್, 4 ಪೊಲೀಸ್ ಜೀಪ್‌ಗಳನ್ನು ತಂದು ನಿಲ್ಲಿಸಲಾಗಿತ್ತು. ಬಿಜೆಪಿ ಕಚೇರಿ ಎದುರಿನ ರಸ್ತೆಯಲ್ಲಿ ಪೊಲೀಸ್ ನಾಕಾಬಂದಿ ಹಾಕಲಾಗಿತ್ತು. ಕಚೇರಿ ಎದುರಿನ ರಸ್ತೆಗೆ ಎರಡೂ ಕಡೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು.

    ಪ್ರತಿಭಟನೆಗೆ 150 ಸೈಕಲ್‌ಗಳನ್ನು ಬಿಜೆಪಿ ನಾಯಕರು ಬಾಡಿಗೆಗೆ ತಂದಿದ್ದರು. ಸಿಲ್ಕ್ ಬೋರ್ಡ್ ಬಳಿ ಇರುವ ‘ಸೈಕಲ್ ಟು ಗೋ’ ಸಂಸ್ಥೆಯಿಂದ ಸೈಕಲ್‌ಗಳನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಪ್ರತಿಭಟನಾಕಾರರನ್ನು ಬಿಜೆಪಿ ಕಚೇರಿ ದಾಟದಂತೆ ಪೊಲೀಸರು ತಡೆದರು. ಬಿಜೆಪಿ ಕಚೇರಿ ಎದುರೇ ಎಲ್ಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಇದನ್ನೂ ಓದಿ: ನಕಲಿ ಕೀ ಬಳಸಿ ಬ್ಯಾಂಕ್ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ – ದೃಶ್ಯ ಸಿಸಿಟಿವಿಯಲ್ಲಿ ಸೆರೆ!

    ಪ್ರತಿಭಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕರಾದ ಅಶ್ವಥ್ ನಾರಾಯಣ್, ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಗೆ ಅವಕಾಶ ನೀಡದೇ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

  • ಅಂಜನಾದ್ರಿಯಿಂದ ಅಯೋಧ್ಯೆಗೆ ಸೈಕಲ್ ಜಾಥಾ; ಗೋಡೆ ಬರಹ ಮಾಡುತ್ತಾ ಸವಾರಿಯ ಸಾಹಸ

    ಅಂಜನಾದ್ರಿಯಿಂದ ಅಯೋಧ್ಯೆಗೆ ಸೈಕಲ್ ಜಾಥಾ; ಗೋಡೆ ಬರಹ ಮಾಡುತ್ತಾ ಸವಾರಿಯ ಸಾಹಸ

    ಕೊಪ್ಪಳ: ರಾಮ ಬಂಟ ಹನುಮಂತನ ನಾಡು ಅಂಜನಾದ್ರಿಯಿಂದ (Anjanadri) ಅಯೋಧ್ಯೆಗೆ (Ayodhya) ಸೈಕಲ್ ಮೂಲಕ ತೆರಳಲು ಅಡಿ ಇಟ್ಟಿರೋ ಯುವಕ ಪ್ರಯಾಣ ‌ಆರಂಭಿಸಿದ್ದಾನೆ.

    ವಿಜಯಪುರ (Vijayapura) ಜಿಲ್ಲೆ ಬಸವನ ಬಾಗೇವಾಡಿ ತಾಲೂಕು ತಾಳೇವಾಡ ಗ್ರಾಮದ ಬಿ. ಸುರೇಶ ಕೋಟಗೊಂಡ ಎಂಬ ಯುವಕ ಈ ಸಾಹಸ ಯಾತ್ರೆ ಕೈಗೊಂಡಿದ್ದಾನೆ. ಇನ್ನು ಸೈಕಲ್ ಯಾತ್ರೆಯುದ್ದಕ್ಕೂ ಅಲ್ಲಲ್ಲಿ ಗೋಡೆ ಮೇಲೆ ರಾಮನ ಭಾವಚಿತ್ರ ಬಿಡಿಸುವ ಸಂಕಲ್ಪ ಮಾಡಿರುವುದು ವಿಶೇಷ. ಅಯೋಧ್ಯೆಯಲ್ಲಿ ಇದೇ ಜ.22 ರಂದು ರಾಮಮಂದಿರ ಲೋಕಾರ್ಪಣೆ ಆಗುತ್ತಿರುವ ಹಿನ್ನೆಲೆ ಸುರೇಶ ಈ ಸೈಕಲ್ ಯಾತ್ರೆ ಕೈಗೊಂಡಿದ್ದಾನೆ.‌ ಇದನ್ನೂ ಓದಿ: ರಾಮಮಂದಿರಕ್ಕಾಗಿ 30 ವರ್ಷಗಳಿಂದ ‘ಮೌನ ವ್ರತ’ – ಒಂದು ಮಾತೂ ಆಡದೇ ಇದ್ದ ಮಹಿಳೆ ಮುಖದಲ್ಲಿ ಮಂದಹಾಸ

    ರಾಮ ಭಕ್ತ ಹನುಮಂತನ ಜನ್ಮಸ್ಥಳ ಅಂಜನಾದ್ರಿಯಿಂದ ರಾಮ ಜನ್ಮಭೂಮಿ ಅಯೋಧ್ಯೆವರೆಗೂ ತೆರಳುವ ಉದ್ದೇಶ ಹೊಂದಿರುವ ಯುವಕ, ಇಂದು ಅಂಜನಾದ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೋಡೆ ಬರಹದ ಅಭಿಯಾನ ಶುರು ಮಾಡಿದ್ದಾನೆ.

    ಈ ಸಾಹಸ ಮೆಚ್ಚಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಸ್ಥಾಪಿಸಿಕೊಂಡಿರುವ `ಮೋದಿ ಬ್ರಿಗೇಡ್’ನ ಕೊಪ್ಪಳ ಜಿಲ್ಲಾ ಘಟಕದಿಂದ ಯುವಕನಿಗೆ ನೆರವಾಗಲಿ ಎಂಬ ಕಾರಣಕ್ಕೆ ಉಚಿತವಾಗಿ ಸೈಕಲ್ ಕೊಡುಗೆಯಾಗಿ ನೀಡಲಾಗಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ – ಜ.22ರಂದು ಉತ್ತರ ಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ರಜೆ

    ಅಳಿಲು ಸೇವೆ
    ಸೈಕಲ್ ಯಾತ್ರೆ ಬಗ್ಗೆ ಮಾತನಾಡಿದ ಯುವಕ ಸುರೇಶ, ದೇಶದ ಇತಿಹಾಸದಲ್ಲಿ ರಾಮಮಂದಿರ ಲೊಕಾರ್ಪಣೆ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು. ಇಂತಹ ಐತಿಹಾಸಿಕ ಘಟನೆಗೆ ನನ್ನದೂ ಒಂದು ಅಳಿಲು ಸೇವೆ ಇರಲಿ ಎಂಬ ಕಾರಣಕ್ಕೆ ನಾಡಿನಾದ್ಯಂತ ಪ್ರಭು ಶ್ರೀರಾಮಚಂದ್ರನ ಚಿತ್ರ ಬಿಡಿಸುವ ಗುರಿ ಇರಿಸಿಕೊಂಡಿದ್ದೇನೆ. ಮುಖ್ಯವಾಗಿ ಶ್ರೀರಾಮನ ಪರಮ ಭಕ್ತ ಹನುಮನ ಜನ್ಮ ಸ್ಥಾನದಿಂದಲೇ ಈ ಕಾರ್ಯ ಮಾಡಬೇಕು ಎಂಬ ಉದ್ದೇಶದಿಂದ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಚಿತ್ರ ಬಿಡಿಸುವ ಕಾರ್ಯ ಹಮ್ಮಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

    ಕಿಷ್ಕಿಂಧೆಯಿಂದ ಅಯೋಧ್ಯೆವರೆಗೂ ಎದುರಾಗುವ ಗೋಡೆಗಳಿಗೆ ಶ್ರೀರಾಮಚಂದ್ರನ ಚಿತ್ರ ಬರೆಯುತ್ತೇನೆ. ದಿನಕ್ಕೆ 50ರಿಂದ 70 ಕಿಲೋ ಮೀಟರ್ ಸಂಚರಿಸುವ ಗುರಿ ಇರಿಸಿಕೊಂಡಿದ್ದೇನೆ. ಪ್ರತಿ ಗ್ರಾಮದಲ್ಲಿ ಕನಿಷ್ಟ 2 ರಿಂದ 4 ಕಡೆ ಗೋಡೆ ಮೇಲೆ ಶ್ರೀರಾಮನ ಭಾವಚಿತ್ರ ಮೂಡಿಸುವ ಉದ್ದೇಶವಿದೆ. ಊಟ, ವಸತಿ, ಬಣ್ಣಕ್ಕೆ ದಾನಿಗಳು ನೆರವು ನೀಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: Ayodhya Ram Mandir: ಶೀಘ್ರದಲ್ಲೇ ಸಂಚರಿಸಲಿವೆ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್‌

  • ಬೊಜ್ಜು ಕರಗಿಸಬೇಕು ಅಂತ ಸೈಕಲ್ ಏರಿದ ಪೊಲೀಸ್ ಅಧಿಕಾರಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ

    ಬೊಜ್ಜು ಕರಗಿಸಬೇಕು ಅಂತ ಸೈಕಲ್ ಏರಿದ ಪೊಲೀಸ್ ಅಧಿಕಾರಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ

    ಧಾರವಾಡ: ದೇಹದ ತೂಕವನ್ನು ಇಳಿಸಬೇಕು ಎಂದು ನಿರ್ಧರಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಸೈಕಲಿಂಗ್‌ನಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಮೊದ ಮೊದಲು ಸಣ್ಣ ಪ್ರಮಾಣದಲ್ಲಿ ಸೈಕಲಿಂಗ್ ಜಾಥಾ ಮಾಡುತ್ತಿದ್ದ ಇವರು, ಇದೀಗ ಭಾರತದ ತುತ್ತ ತುದಿಯಿಂದ ಕೊನೆಯವರೆಗೂ ಸೈಕಲ್ ಏರಿ ಜಾಗೃತಿ ಮೂಡಿಸಿದ್ದಾರೆ.

    ಹೌದು, ಹುಬ್ಬಳ್ಳಿಯ ಹೆಸ್ಕಾಂನ ಇನ್ಸ್‌ಪೆಕ್ಟರ್ ಆಗಿರುವ ಮುರುಗೇಶ್ ಚನ್ನಣ್ಣವರ ಇಂತಹದ್ದೊಂದು ಸಾಧನೆ ಮಾಡಿದ್ದಾರೆ. ಸೇ ನೋ ಡ್ರಗ್ಸ್ ಎನ್ನುತ್ತ ಯುವಕರಿಗೆ ಜಾಗೃತಿ ಮೂಡಿಸುವ ಮೂಲಕ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸೈಕಲ್ ಏರಿ ಕೇವಲ 22 ದಿನಗಳಲ್ಲಿ ಜಾಥಾವನ್ನು ಅಂತ್ಯಗೊಳಿಸಿದ್ದಾರೆ.

     

    ಕೆ2ಕೆ ಎನ್ನುವ ಜಾಥಾ ಇದಾಗಿದ್ದು, ಯುವ ಜನರಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2021 ರ ಡಿಸೆಂಬರ್ ತಿಂಗಳಲ್ಲಿ ಇದು ಆರಂಭವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 9 ರಾಜ್ಯಗಳ ಮುಖಾಂತರ ಸುಮಾರು 3,649 ಕಿ.ಮೀ ಸೈಕಲ್ ಯಾತ್ರೆ ನಡೆಸಿದ್ದರು. 42 ರಿಂದ 49 ವಯಸ್ಸಿನೊಳಗಿನ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರಲ್ಲದೇ ಈ ಹಿಂದೆ ಲೋಹ ಪುರುಷ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರಂತರ ಪ್ರಯತ್ನ ಮಾಡುತ್ತೇವೆ: ಕಾಗೇರಿ ಹಾರಿಕೆ ಉತ್ತರ

    ಇದು ಯಾರು ಬೇಕಾದರೂ ಮಾಡುವ ಜಾಥಾವಂತೂ ಅಲ್ಲವೇ ಅಲ್ಲ. ಅದು ಮೊದಲೇ ಚಳಿ ಇರುವ ಪ್ರದೇಶವಾಗಿದ್ದು, ಅಲ್ಲಿ ಇವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಏನೇ ಆದರೂ ಜಾಗೃತಿಯ ಸಲುವಾಗಿ ಸೈಕಲ್ ಏರಿದ್ದ ಮುರುಗೇಶ್ ಚನ್ನಣ್ಣವರ ಕೇವಲ 22 ದಿನದಲ್ಲಿ ತಮ್ಮ ಜಾಥಾ ಅಂತ್ಯಗೊಳಿಸಿ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಭಾಜನರಾಗಿದ್ದಾರೆ. ಇವರ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

     

    ಮೊದಲಿನಿಂದಲೂ ಸೈಕಲ್ ಮೇಲೆ ಹೆಚ್ಚು ಒಲವು ಹೊಂದಿದ್ದ ಮುರುಗೇಶ್ ಈಗಾಗಲೇ ಹಲವು ರಾಷ್ಟ್ರೀಯ ಸೈಕಲ್ ಜಾಥಾಗಳಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಸಂಗೀತ ಮಾಂತ್ರಿಕ ಇಳಯರಾಜರನ್ನು ರಾಜ್ಯಸಭೆಗೆ ಸ್ವಾಗತಿಸಿದ ಪ್ರಲ್ಹಾದ್ ಜೋಶಿ

    ಇವರ ಈ ಸೈಕಲ್ ಕ್ರೇಜ್‌ಗೆ ಮನಸೋತಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಹ ಧಾರವಾಡಕ್ಕೆ ಬಂದಾಗಲೆಲ್ಲ ಇವರ ಮನೆಗೆ ಬಂದು ಸೈಕಲ್ ಜಾಥಾ ಬಗ್ಗೆ ಮತ್ತು ಇಬ್ಬರು ಸಹ ಬರ್ಲಿನ್‌ನಲ್ಲಿ ನಡೆಯುವ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರಂತೆ. ಹೀಗಾಗಿಯೇ ಅವರ ಅಕಾಲಿಕ ಮರಣದಿಂದ ಮುರುಗೇಶ್ ಈ ಬುಕ್ ಆಫ್ ರೆಕಾರ್ಡ್ ಅನ್ನು ಪುನೀತ್‌ಗೆ ಸಮರ್ಪಿಸಿದ್ದು, ಮುಂದೊಂದು ದಿನ ಬರ್ಲಿನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಅವರ ಆಸೆಯನ್ನು ನಾನು ಪೂರ್ತಿಯಾಗಿಸುತ್ತೇನೆ ಎಂಬ ಆಸೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೈಕಲ್ ರ‍್ಯಾಲಿ ಯೋಧರನ್ನು ಆತ್ಮೀಯವಾಗಿ ಬರಮಾಡಿಕೊಂಡ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

    ಸೈಕಲ್ ರ‍್ಯಾಲಿ ಯೋಧರನ್ನು ಆತ್ಮೀಯವಾಗಿ ಬರಮಾಡಿಕೊಂಡ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

    ಚಿಕ್ಕಬಳ್ಳಾಪುರ: ಆಜಾದ್ ಕೀ ಅಮೃತ ಮಹೋತ್ಸವದ ಸಂಭ್ರಮದ ಸವಿನೆನಪಿಗಾಗಿ ಯೋಧರು ಕನ್ಯಾಕುಮಾರಿಯಿಂದ ದೆಹಲಿಯ ರಾಜ್ ಘಟ್ ವರೆಗೂ ಸೈಕಲ್ ರ‍್ಯಾಲಿ ಹಮ್ಮಿಕೊಂಡಿದ್ದು, ಈ ವೇಳೆ ಯೋಧರನ್ನು ಆತ್ಮೀಯವಾಗಿ ಶಾಸಕರು ಬರಮಾಡಿಕೊಂಡರು.

    ಆಜಾದ್ ಕೀ ಅಮೃತ ಮಹೋತ್ಸವ ಪ್ರಯುಕ್ತ ಕನ್ಯಾಕುಮಾರಿಯಿಂದ ರಾಜ್ ಘಟ್ ವರೆಗೂ ಯೋಧರು ಈ ಸೈಕಲ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಮೂಲಕ ಚಿಕ್ಕಬಳ್ಳಾಪುರ ಆಂಧ್ರಪ್ರದೇಶದ ಮಾರ್ಗವಾಗಿ ದೆಹಲಿಯ ರಾಜ್ ಘಟ್ ಗೆ ತೆರಳುವಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣಕ್ಕೆ ಯೋಧರು ಆಗಮಿಸಿದ್ದಾರೆ. ಯೋಧರಿಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆತ್ಮೀಯವಾಗಿ ಬರಮಾಡಿಕೊಂಡರು. ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

    ಯೋಧ ಮಹಾಂತೇಶ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಉಗ್ರರ ದಾಳಿಯಿಂದ ಅಘ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾಗಿದ್ದರೂ, ಭಾರತದಲ್ಲಿ ಜನ ನೆಮ್ಮದಿಯಾಗಿದ್ದಾರೆ. ಇದಕ್ಕೆ ಮತ್ತಷ್ಟು ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅಮೃತ ಕಾ ಮಹೋತ್ಸವದ ಕಾರ್ಯಕ್ರಮದಡಿಯಲ್ಲಿ ಕನ್ಯಾಕುಮಾರಿಯಿಂದ ದೆಹಲಿಯ ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳವಾದ ರಾಜ್ ಘಟ್ ಗೆ ಸೈಕಲ್ ರ‍್ಯಾಲಿ ಮೂಲಕ ತೆರಳುತ್ತಿದ್ದು, ಮಾರ್ಗ ಮಧ್ಯೆ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡ್ತಿದ್ದೇವೆ ಎಂದು ಸಂತಸ ಹಂಚಿಕೊಂಡರು. ಇದನ್ನೂ ಓದಿ:ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ

    ಇನ್ನೂ ಭಾರತದ ಪ್ರಜೆಗಳೆಲ್ಲ ಒಂದೇ. ಎಲ್ಲರಲ್ಲೂ ಆತ್ಮಸ್ಥೈರ್ಯ ತುಂಬಿ ದೇಶದ ಬಲಿಷ್ಠತೆಗೊಸ್ಕರ ಜನರಲ್ಲಿ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ 20 ಮಂದಿ ಸೈನಿಕರು ಈ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಆಗಸ್ಟ್ 22 ರಂದು ಕನ್ಯಾಕುಮಾರಿಯಲ್ಲಿ ಸೈಕಲ್ ರ‍್ಯಾಲಿ ಆರಂಭವಾಗಿದ್ದು, ಅಕ್ಟೋಬರ್ 2 ರಂದು ದೆಹಲಿಯ ರಾಜ್ ಘಟ್ ತಲುಪಲಿದ್ದಾರೆ.

    ಸೈಕಲ್ ರ‍್ಯಾಲಿ ಮುಖಾಂತರ ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸಿದ ಯೋಧರನ್ನು ಜಿಲ್ಲಾಡಳಿತದಿಂದ ಆತ್ಮೀಯವಾಗಿ ಬರ ಮಾಡಿಕೊಂಡು ಸ್ವಾಗತ ಕೋರಿ ಸತ್ಕರಿಸಲಾಯಿತು. ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ದೇಶಾದ್ಯಂತ ಅಜಾದ್ ಕೀ ಅಮೃತ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗುತ್ತಿದ್ದು, ಸಿ.ಆರ್.ಫಿ.ಎಫ್ ಯೋಧರು ಸಹ ಸಂಭ್ರಮದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ:ಮದುವೆಗೆ ಹಿರಿಯ ಮಗಳು ಒಪ್ಪದ್ದಕ್ಕೆ ಕಿರಿಯ ಮಗಳನ್ನೇ ಕಿಡ್ನಾಪ್‍ಗೈದ್ರು

    ಸಾವಿರಾರು ಕಿಲೋಮೀಟರ್ ದೂರ ಸೈಕಲ್ ಮುಖಾಂತರ ಕ್ರಮಿಸುವ ಸಾಹಸಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸೈಕಲ್ ಜಾಥ ಕೈಗೊಂಡ ಯೋಧರ ರ‍್ಯಾಲಿ ಬಾಗೇಪಲ್ಲಿ ಪಟ್ಟಣಕ್ಕೆ ಬಂದ ವೇಳೆ ತಾಲೂಕು ಆಡಳಿತ ಪಟ್ಟಣದಲ್ಲಿ ಯೋಧರಿಗೆ ಭಾವಪೂರ್ಣ ಸ್ವಾಗತ ಕೋರಿ ಸೈನಿಕರಿಗೆ ಸಕಲ ವ್ಯವಸ್ಥೆ ಕಲ್ಪಿಸಿತು.

    ಸೈಕಲ್ ಜಾಥದಲ್ಲಿ ಬಂದ ಯೋಧರಿಗೆ ಆತ್ಮೀಯ ಸ್ವಾಗತ ಕೋರಿದ ಬಾಗೇಪಲ್ಲಿ ತಾಲೂಕು ಆಡಳಿತ ರಾತ್ರಿ ತಂಗಲಿಕ್ಕೆ ಸಕಲ ವ್ಯವಸ್ಥೆ ಮಾಡಿದೆ. ಬೆಳಿಗ್ಗೆ ಧ್ವಜಾರೋಹಣ, ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸೈನಿಕರ ಬೀಳ್ಕೊಡುಗೆ ಕಾರ್ಯವನ್ನು ನಡೆಸಿಕೊಟ್ಟಿತು. ಇದನ್ನೂ ಓದಿ:ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ