Tag: Cybercrime Police

  • ಪಬ್ ಜಿ ಹುಚ್ಚು- ಅಜ್ಜನ 2.34 ಲಕ್ಷ ಪೆನ್ಶನ್ ಹಣ ಲಪಟಾಯಿಸಿದ ಮೊಮ್ಮಗ

    ಪಬ್ ಜಿ ಹುಚ್ಚು- ಅಜ್ಜನ 2.34 ಲಕ್ಷ ಪೆನ್ಶನ್ ಹಣ ಲಪಟಾಯಿಸಿದ ಮೊಮ್ಮಗ

    – 15 ವರ್ಷದ ಬಾಲಕನಿಂದ ಅಜ್ಜನಿಗೇ ಟೋಪಿ

    ನವದೆಹಲಿ: ಪಬ್ ಜಿ ಗೇಮ್‍ಗಾಗಿ ಅಪ್ರಾಪ್ತ ಬಾಲಕ ತನ್ನ ಅಜ್ಜನ 2.34 ಲಕ್ಷ ರೂ. ಪೆನ್ಶನ್ ಹಣವನ್ನೇ ಲಪಟಾಯಿಸಿರುವ ಆಘಾತಕಾರಿ ಘಟನೆ ನಡೆದಿದೆ.

    ದೆಹಲಿಯ ಸೈಬರ್ ಸೆಲ್ ಪೊಲೀಸರು ಪ್ರಕರಣ ಬೇಧಿಸಿದ್ದು, ಪಬ್ ಜಿ ಫಂಡ್‍ಗಾಗಿ 15 ವರ್ಷದ ಬಾಲಕ ತನ್ನ ಅಜ್ಜನ ಪೆನ್ಶನ್ ಖಾತೆಯಿಂದ 2.34 ಲಕ್ಷ ರೂ. ಹಣವನ್ನು ಪಬ್ ಜಿ ಫಂಡ್‍ಗಾಗಿ ವರ್ಗಾಯಿಸಿಕೊಂಡಿದ್ದಾನೆ. ಅಲ್ಲದೆ ಆ ಹಣದಲ್ಲಿ ತಿಂಗಳುಗಟ್ಟಲೆ ಪಬ್‍ಜಿ ಆಡಿದ್ದಾನೆ ಎಂದು ದೆಹಲಿಯ ಸೈಬರ್ ಸೆಲ್ ಪೊಲೀಸರು ಮಾಹಿತಿ ನೀಡಿದ್ದಾರೆ.

    ನಿಮ್ಮ ಖಾತೆಯಿಂದ 2,500 ರೂ. ಕಡಿತವಾಗಿದ್ದು, ನಿಮ್ಮ ಅ9ಕೌಂಟ್ ಬ್ಯಾಲೆನ್ಸ್ 275 ರೂ. ಎಂದು ಬ್ಯಾಂಕ್‍ನಿಂದ ಅಜ್ಜನಿಗೆ ಮೆಸೇಜ್ ಬಂದಿದ್ದು, ತಕ್ಷಣವೇ ಅವರಿಗೆ ಆಶ್ಚರ್ಯವಾಗಿದೆ. ಅಯ್ಯೋ ನನ್ನ ಪೆನ್ಶನ್ ಖಾತೆಯ 2.34 ಲಕ್ಷ ರೂ.ಏನಾಯಿತು ಎಂದು ಗಾಬರಿಯಾಗಿದ್ದಾರೆ. ನಂತರ ತಕ್ಷಣವೇ ಈ ಕುರಿತು ಬ್ಯಾಂಕ್‍ನಲ್ಲಿ ವಿಚಾರಿಸಿದ್ದು, 2.34 ಲಕ್ಷ ರೂ. ಹೇಗೆ ಟ್ರಾನ್ಸ್‍ಫರ್ ಆಯಿತು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ನಂತರ ಅಜ್ಜ ಹಣ ವರ್ಗಾವಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದು, ನಾನು ಯಾವುದೇ ರೀತಿಯ ನಗದು ವಹಿವಾಟು ನಡೆಸಿಲ್ಲ. ಅಲ್ಲದೆ ಯಾವುದೇ ಒಟಿಪಿ ಸಹ ನನಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಪೊಲೀಸರು ಉತ್ತರಿಸಿ, ಕಳೆದ ಎರಡು ತಿಂಗಳ ಅವಧಿಯಲ್ಲಿ 2,34,497 ರೂ.ಗಳನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಂಕಜ್ ಕುಮಾರ್ (23) ಹೆಸರಿನ ಪೇಟಿಎಂ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಕುರಿತು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಂತರ ಸೈಬರ್ ಸೆಲ್ ಪೊಲೀಸರು ಪಂಕಜ್ ಕುಮಾರ್‍ನನ್ನು ಬಂಧಿಸಿ ವಿಚಾರನೆ ನಡೆಸಿದ್ದು, ನನ್ನ ಸ್ನೇಹಿತನೊಬ್ಬ ಪೇಟಿಎಂ ಪಾಸ್‍ವರ್ಡ್ ಹಾಗೂ ಐಡಿ ನೀಡಿ ಹಣ ವರ್ಗಾವಯಿಸುವಂತೆ ತಿಳಿಸಿದ ಎಂದು ವಿಚಾರಣೆ ವೇಳೆ ಹೇಳಿದ್ದಾನೆ.

    ಈ ವೇಳೆ ಅಜ್ಜನ ಮೊಮ್ಮಗನೇ ಪಬ್‍ಜಿ ಆಡಲು ಪಂಕಜ್ ಕುಮಾರ್ ಖಾತೆ ಮೂಲಕ ಗೂಗಲ್ ಪೇ ನಲ್ಲಿ ಹಣ ಪಾವತಿಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಂತರ 15 ವರ್ಷದ ಬಾಲಕ ಪೊಲೀಸರಿಗೆ ಶರಣಾಗಿದ್ದಾನೆ. ಪಬ್ ಜಿ ಆಡಲು ಅಜ್ಜ ಪೆನ್ಶನ್ ಖಾತೆಯಿಂದ ಹಣ ವರ್ಗಾಯಿಸಿರುವುದಾಗಿ ಹೇಳಿದ್ದಾನೆ. ಅಲ್ಲದೆ ಅಜ್ಜನ ಮೊಬೈಲ್‍ಗೆ ಬಂದ ಒಟಿಪಿ ಮೆಸೇಜ್ ಗಳನ್ನು ತಾನೇ ಡಿಲೀಟ್ ಮಾಡುತ್ತಿದ್ದ ಎಂದು ಹೇಳಿದ್ದಾನೆ.

  • ಫೇಸ್‍ಬುಕ್ ಬಳಸುವ ಗಂಡಸರೇ ಎಚ್ಚರ- ಅಂದವಾದ ಹುಡುಗೀರ ಫೋಟೋಗಳೇ ಬಂಡವಾಳ

    ಫೇಸ್‍ಬುಕ್ ಬಳಸುವ ಗಂಡಸರೇ ಎಚ್ಚರ- ಅಂದವಾದ ಹುಡುಗೀರ ಫೋಟೋಗಳೇ ಬಂಡವಾಳ

    – ಆರೋಪಿಯಿಂದ 3.5 ಲಕ್ಷ ಹಣ ವಶ

    ಕಲಬುರಗಿ: ಹುಡಗಿಯರೇ ಫೇಸ್‍ಬುಕ್‍ನಲ್ಲಿ ಒಳ್ಳೊಳ್ಳೆಯ ಫೋಟೋಗಳನ್ನು ಹಾಕುವ ಮುನ್ನ ಒಂದು ಸಾರಿ ಯೋಚನೆ ಮಾಡಿ. ನಿಮಗೆ ಗೊತ್ತಿಲ್ಲದೆ ನಿಮ್ಮ ಫೋಟೋಗಳನ್ನ ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡೋ ಖತರ್ನಾಕ್ ಟೀಮ್ ಆ್ಯಕ್ಟಿವ್ ಆಗಿದ್ದು, ಸುಂದರವಾದ ಹುಡುಗಿಯರ ಫೋಟೋ ಕಂಡು ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋ ಗಂಡಸರೇ ಇವರ ಟಾರ್ಗೆಟ್ ಆಗಿದೆ.

    ಹೌದು. ಕಲಬುರಗಿ ನಿವಾಸಿ ರಘುವೀರ್ ಈ ರೀತಿಯ ಹುಡುಗಿಯರ ಫೋಟೋ ತೋರಿಸಿ ಹಣ ವಸೂಲಿ ಮಾಡುವ ಖತರ್ನಾಕ್ ಖದೀಮ. ಎಂಜನಿಯರಿಂಗ್, ಎಂಬಿಎ ಮುಗಿಸಿಕೊಂಡಿರೋ ರಘುವೀರ್, ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರೋದು ಬಿಟ್ಟು ಸುಲಭವಾಗಿ ದುಡ್ಡು ಮಾಡೋಕೆ ಹೋಗಿ ಈಗ ಜೈಲು ಪಾಲಾಗಿದ್ದಾನೆ.

    ಗೂಗಲ್ ಮುಖಾಂತರ ಚಂದ ಚಂದದ ಹುಡುಗಿಯರ ಫೋಟೋ ತೆಗೆದುಕೊಂಡು ನಕಲಿ ಫೇಸ್‍ಬುಕ್ ಅಕೌಂಟ್ ಕ್ರಿಯೇಟ್ ಮಾಡುವ ಈತ ಬೇರೆಯವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಬಳಿಕ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಬಳಿಕ ಆನ್‍ಲೈನ್ ಜಾಬ್ ಲಿಂಕ್ ಕಳುಹಿಸಿ ಅದರ ಬಗ್ಗೆ ಪುಸಲಾಯಿಸಿ ಹಣವನ್ನ ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಳ್ಳುತ್ತಿದ್ದ. ನಂತರ ಕೆಲಸ ಕೊಡಿಸದಿದ್ದಾಗ ಹಣ ವಾಪಸ್ ಕೊಡುವಂತೆ ಹಣ ನೀಡಿದವರು ಕೇಳಿದರೆ ಅವರನ್ನೇ ರಘುವೀರ್ ಹೆದರಿಸುತ್ತಿದ್ದ. ಅಷ್ಟೇ ಅಲ್ಲ ಮತ್ತೊಂದು ನಂಬರಿನಿಂದ ಅವರಿಗೆ ಕರೆ ಮಾಡಿ ತಾನು ಸೈಬರ್ ಪೊಲೀಸ್ ಇನ್‍ಸ್ಪೆಕ್ಟರ್ ವಿಜಯ್ ಎಂದು ಸುಳ್ಳು ಹೇಳಿ ಪರಿಚಯಿಸಿಕೊಂಡು ನಿಮ್ಮ ವಿರುದ್ಧ ದೂರು ಬಂದಿದೆ ಅಂತ ಹೇಳಿ ಮತ್ತೆ ಹಣ ವಸೂಲಿ ಮಾಡುತ್ತಿದ್ದನು.

    ಹೀಗೆ ಆನ್‍ಲೈನ್ ಜಾಬ್ ಕೊಡಿಸ್ತೀನಿ ಎಂದು ಪಂಗನಾಮ ಹಾಕಿ ರಘುವೀರ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವರಿಗೆ ಮೋಸ ಮಾಡಿದ್ದಾನೆ. ಕೆಲದಿನಗಳ ಹಿಂದೆ ಕಲಬುರಗಿಯ ಕೆಎಸ್‌ಆರ್‌ಪಿ ಸಬ್ ಇನ್‍ಸ್ಪೆಕ್ಟರ್ ಒಬ್ಬರಿಗೆ ಪ್ರಿಯಾ ಶೆಟ್ಟಿ ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡು ಹಣ ವಸೂಲಿ ಮಾಡಿದ್ದನು. ಈ ವಿಚಾರ ತಿಳಿದ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನ ಕಂಬಿ ಹಿಂದೆ ಕಳುಹಿಸಿದ್ದಾರೆ. ಬಂಧಿತನಿಂದ ಸುಮಾರು 3.5 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.

    ಸೋಷಿಯಲ್ ಮೀಡಿಯಾವನ್ನ ದುರ್ಬಳಕೆ ಮಾಡಿಕೊಂಡು ಹಣ ಮಾಡಬಹುದು ಅಂದುಕೊಂಡಿದ್ದ ರಘುವೀರ್ ಸದ್ಯ ಅಂದರ್ ಆಗಿದ್ದಾನೆ. ಆದರೆ ಗೊತ್ತಿಲ್ಲದ ಹುಡುಗಿಯ ಹೆಸರಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದರೆ ಅಕ್ಸೆಪ್ಟ್ ಮಾಡೋಕೂ ಮುಂಚೆ ಒಂದು ಸಾರಿ ಯೋಚನೆ ಮಾಡಿ ಬಳಿಕ ಅಪರಿಚಿತರ ಜೊತೆ ಸ್ನೇಹ ಬೆಳೆಸೋದು ಒಳ್ಳೆಯದು.