Tag: cyber crime

  • ಸೈಬರ್‌ ಕ್ರೈಮ್‌ ಹಬ್‌ ಆಗ್ತಿದ್ಯಾ ಬೆಂಗಳೂರು? – ಮೆಟ್ರೋ ನಗರಗಳ ಪೈಕಿ 50% ಕೇಸ್‌ ಸಿಲಿಕಾನ್‌ ಸಿಟಿಯದ್ದೇ!

    ಸೈಬರ್‌ ಕ್ರೈಮ್‌ ಹಬ್‌ ಆಗ್ತಿದ್ಯಾ ಬೆಂಗಳೂರು? – ಮೆಟ್ರೋ ನಗರಗಳ ಪೈಕಿ 50% ಕೇಸ್‌ ಸಿಲಿಕಾನ್‌ ಸಿಟಿಯದ್ದೇ!

    ಹಿಂದೆಯೆಲ್ಲ ಹಣಕಾಸಿನ ವ್ಯವಹಾರ ಹೆಚ್ಚಾಗಿ ನಗದು ರೂಪದಲ್ಲೇ ನಡೆಯುತ್ತಿತ್ತು. ಆಗ ಕಳ್ಳರು ಮನೆಗಳಿಗೆ ನುಗ್ಗಿ ಅಥವಾ ದಾರಿಯಲ್ಲಿ ಹೋಗುವವರನ್ನು ಅಡ್ಡಗಟ್ಟಿ ಸುಲಿಗೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿತ್ತು (ಈಗಲೂ ಇದೆ. ಪ್ರಮಾಣ ಕಡಿಮೆ). ಆದರೆ ಈಗ ನಗದು ವಹಿವಾಟು ಕಡಿಮೆಯಾಗಿದೆ. ಡಿಜಿಟಲ್ ವ್ಯವಹಾರ ಹೆಚ್ಚಾಗಿದೆ. ಕಳ್ಳರು ಸಹ ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮ ಕುಕೃತ್ಯದ ಪರಿಯನ್ನು ಬದಲಾಯಿಸಿಕೊಂಡಿದ್ದಾರೆ. ಎಲ್ಲೆಡೆ ಸೈಬರ್ ವಂಚಕರ ಜಾಲ ಆವರಿಸಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಕಳ್ಳತನಕ್ಕೆ ಇಳಿದಿದ್ದಾರೆ. ಜನರ ‘ಡಿಜಿಟಲ್ ಪರ್ಸ್’ಗೆ ಕೈ ಹಾಕಿ ಹಣ ದೋಚುತ್ತಿದ್ದಾರೆ. ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಭಾರತದಲ್ಲಿ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದುಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿದೆ. ದೇಶದ ಪ್ರಮುಖ ನಗರಗಳಲ್ಲಿ ಕರ್ನಾಟಕದ ಬೆಂಗಳೂರು ಸೈಬರ್ ಕ್ರೈಮ್ ಹಬ್ ಆಗಿದೆ. ದೇಶದ ಇತರೆ ನಗರಗಳಿಗೆ ಹೋಲಿಸಿದರೆ, ಬೆಂಗಳೂರು (Bengaluru) ನಂ.1 ಸ್ಥಾನದಲ್ಲಿರುವುದು ಆತಂಕಕಾರಿ ಸುದ್ದಿ.

    ಭಾರತದಲ್ಲಿ ಪ್ರತಿ ದಿನ 7,000 ಸೈಬರ್ ಕೇಸ್
    ಭಾರತದಲ್ಲಿ ದಿನಕ್ಕೆ ಸರಾಸರಿ 7,000 ಸೈಬರ್ ಅಪರಾಧ (Cyber Crime) ದೂರುಗಳು ದಾಖಲಾಗುತ್ತಿವೆ. ಈ ಸಂಖ್ಯೆ 2021 ರಿಂದ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಪ್ರಕರಣಗಳಲ್ಲಿ ಸುಮಾರು 85% ಕೇಸ್‌ಗಳು ಆನ್‌ಲೈನ್ ಹಣಕಾಸು ವಂಚನೆಗೆ ಸಂಬಂಧಿಸಿವೆ. ಈ ದೂರುಗಳಲ್ಲಿ ಸರಿಸುಮಾರು 85% ಆನ್‌ಲೈನ್ ಹಣಕಾಸು ವಂಚನೆಗೆ ಸಂಬಂಧಿಸಿದೆ. ಹೂಡಿಕೆ ವಂಚನೆಗಳು, ಗೇಮಿಂಗ್ ಅಪ್ಲಿಕೇಶನ್‌ಗಳು, ಅಕ್ರಮ ಸಾಲ ನೀಡುವ ಅಪ್ಲಿಕೇಶನ್‌ಗಳು ಮತ್ತು OTP ವಂಚನೆಗಳು ಕೂಡ ಕೇಸ್‌ಗಳಲ್ಲಿ ಸೇರಿವೆ. 2024ರ ಮೊದಲ ನಾಲ್ಕು ತಿಂಗಳಲ್ಲಿ ಜನರಿಂದ ಸೈಬರ್ ವಂಚಕರು 1,750 ಕೋಟಿಗೂ ಹೆಚ್ಚು ಹಣವನ್ನು ಲಪಟಾಯಿಸಿದ್ದಾರೆ. ಇದನ್ನೂ ಓದಿ: ಪ್ರತಿದಿನ ಅಕೌಂಟ್‌ಗೆ 200 ರೂ. ಹಾಕಿ ಗಾಳ – ಉದ್ಯಮಿಗೆ 7.84 ಲಕ್ಷ ವಂಚನೆ!

    23,000 ಕೋಟಿ ಕಳೆದುಕೊಂಡ ಭಾರತೀಯರು
    2024 ರಲ್ಲಿ ಭಾರತವು ಸೈಬರ್ ಅಪರಾಧಿಗಳು ಮತ್ತು ವಂಚಕರಿಂದ 22,842 ಕೋಟಿ ರೂ.ಗಳನ್ನು ಕಳೆದುಕೊಂಡಿದೆ ಎಂದು ದೆಹಲಿ ಮೂಲದ ಮಾಧ್ಯಮ ಮತ್ತು ತಂತ್ರಜ್ಞಾನ ಕಂಪನಿಯಾದ ಡೇಟಾಲೀಡ್ಸ್ ತಿಳಿಸಿದೆ. ದೇಶದಲ್ಲಿ ವ್ಯಾಪಕವಾದ ಡಿಜಿಟಲ್ ವಂಚನೆಗಳ ಕುರಿತು ತನ್ನ ವರದಿಯಲ್ಲಿ ತಿಳಿಸಿದೆ. ಈ ವರ್ಷ ಭಾರತೀಯರು 1.2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಅನುಭವಿಸಬಹುದು ಎಂದು ರಾಜ್ಯ ಮತ್ತು ಕೇಂದ್ರ ಕಾನೂನು ಜಾರಿ ಸಂಸ್ಥೆಗಳ ನಡುವೆ ಸಂಪರ್ಕ ಸಾಧಿಸುವ ಫೆಡರಲ್ ಸಂಸ್ಥೆಯಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಮುನ್ಸೂಚನೆ ನೀಡಿದೆ.

    10 ಪಟ್ಟು ಹಣ ನಷ್ಟ
    2022 ರಲ್ಲಿ ಸೈಬರ್ ವಂಚಕರು 2,306 ಕೋಟಿ ರೂ. ಕೊಳ್ಳೆ ಹೊಡೆದಿದ್ದರು. 2023 ರಲ್ಲಿ ಇದು 7,465 ಕೋಟಿ ರೂ.ಗೆ ಏರಿಕೆ ಕಂಡಿತು. ಅಂದರೆ ಸುಮಾರು 3 ಪಟ್ಟು ಹೆಚ್ಚಳ. ಅದು 2024ಕ್ಕೆ 10 ಪಟ್ಟು ಹೆಚ್ಚಳ ಕಂಡಿದೆ. ಅಂದರೆ, ವರ್ಷದಿಂದ ವರ್ಷಕ್ಕೆ ಸೈಬರ್ ವಂಚನೆಯಲ್ಲಿ ಜನರು ಏರುಗತಿಯಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧ ದೂರುಗಳ ಸಂಖ್ಯೆಯೂ ಇದೇ ರೀತಿ ಹೆಚ್ಚಾಗಿದೆ. 2024 ರಲ್ಲಿ ಸುಮಾರು 20 ಲಕ್ಷ ಕೇಸ್‌ಗಳು ವರದಿಯಾಗಿವೆ. ಇದು ಹಿಂದಿನ ವರ್ಷ ಸುಮಾರು 15.6 ಲಕ್ಷ ಮತ್ತು 2019 ರಲ್ಲಿ ದಾಖಲಾಗಿದ್ದ ಕೇಸ್‌ಗಳಿಗಿಂತ ಹತ್ತು ಪಟ್ಟು ಹೆಚ್ಚಾಗಿವೆ. ಭಾರತದ ಡಿಜಿಟಲ್ ವಂಚಕರು ಬುದ್ಧಿವಂತರು ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತಿದ್ದಾರೆ. ಸುಮಾರು 290 ಲಕ್ಷ ನಿರುದ್ಯೋಗಿಗಳನ್ನು ಹೊಂದಿರುವ ದೇಶದಲ್ಲಿ, ಅವರ ಶ್ರೇಣಿ ಹೆಚ್ಚುತ್ತಿದೆ. ಇದನ್ನೂ ಓದಿ: ಸುಧಾಮೂರ್ತಿಗೆ ಕರೆ ಮಾಡಿ ವಂಚನೆಗೆ ಯತ್ನಿಸಿದ್ದ ಸೈಬರ್‌ ಕಳ್ಳರು!

    ಭಾರತದಲ್ಲೇ ಅತಿ ಹೆಚ್ಚು ಡಿಜಿಟಲ್ ವಹಿವಾಟು
    ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸೈಬರ್ ವಂಚನೆ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಜಿಗಿತ ಕಂಡಿವೆ. ಡಿಜಿಟಲ್ ಪಾವತಿ ವಿಧಾನಗಳೇ ಇದಕ್ಕೆ ಪ್ರಮುಖ ಕಾರಣವಾಗಿವೆ. ಪೇಟಿಎಂ ಮತ್ತು ಫೋನ್‌ಪೇಯಂತಹ ಪಾವತಿ ಸೇವೆಗಳು, ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಂತಹ ಮೆಸೇಜ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳುವುದು ಸೈಬರ್ ವಂಚಕರಿಗೆ ಅಪರಾಧಕ್ಕೆ ಸುಲಭ ದಾರಿ ಮಾಡಿಕೊಟ್ಟಿದೆ. ಫೆಡರಲ್ ಡೇಟಾ ಪ್ರಕಾರ 2025 ರ ಜೂನ್‌ನಲ್ಲಿ ಮಾತ್ರ 190 ಲಕ್ಷಕ್ಕೂ ಹೆಚ್ಚು ಯುಪಿಐ ಅಥವಾ ಏಕೀಕೃತ ಪಾವತಿ ಇಂಟರ್‌ಫೇಸ್ ವಹಿವಾಟುಗಳು ನಡೆದಿವೆ. ಇವುಗಳ ಒಟ್ಟು ಮೌಲ್ಯ 24.03 ಲಕ್ಷ ಕೋಟಿ ರೂ. ಆಗಿದೆ. ಡಿಜಿಟಲ್ ಪಾವತಿಗಳ ಮೌಲ್ಯವು 2013 ರಲ್ಲಿ ಸರಿಸುಮಾರು 162 ಕೋಟಿ ರೂ.ಗಳಿಂದ 2025 ರ ಜನವರಿಯಲ್ಲಿ 18,120.82 ಕೋಟಿ ರೂ.ಗೆ ಹೆಚ್ಚಳ ಕಂಡಿದೆ. ವಿಶ್ವಾದ್ಯಂತ ಅಂತಹ ಎಲ್ಲಾ ಪಾವತಿಗಳಲ್ಲಿ ಭಾರತವು ಸುಮಾರು ಅರ್ಧದಷ್ಟು ಪಾಲನ್ನು ಹೊಂದಿದೆ ಎಂಬುದು ಗಮನಾರ್ಹ.

    ಕೋವಿಡ್‌ನಿಂದ ಹೆಚ್ಚಾಯ್ತ ಸೈಬರ್ ವಂಚನೆ?
    ಸೈಬರ್ ವಂಚನೆಗಳ ಹೆಚ್ಚಳಕ್ಕೆ ಪ್ರಮುಖ ಕಾರಣ ಕೋವಿಡ್ ಸಾಂಕ್ರಾಮಿಕ ಮತ್ತು ಅದನ್ನು ನಿಯಂತ್ರಿಸಲು ಜಾರಿಗೊಳಿಸಿದ ಲಾಕ್‌ಡೌನ್ ಕ್ರಮ ಎಂದು ಹೇಳಬಹುದು. ಕೋವಿಡ್ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕರೆನ್ಸಿ ನೋಟುಗಳ ಬಳಕೆ ಕಡಿಮೆ ಮಾಡುವಂತೆ ಜನತೆಗೆ ಸರ್ಕಾರ ತಾಕೀತು ಮಾಡಿತು. ಡಿಜಿಟಲ್ ಪಾವತಿಗೆ ತೆರೆದುಕೊಳ್ಳಿ, ಪೇಟಿಎಂನಂತಹ ಯುಪಿಐ ಅಪ್ಲಿಕೇಶನ್‌ಗಳಿಗೆ ಬದಲಾಗಿ ಎಂದು ಒತ್ತಾಯಿಸಿತು. 2019 ರ ಹೊತ್ತಿಗೆ ಭಾರತದಲ್ಲಿ ಅದಾಗಲೇ 44 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರಿದ್ದರು. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿರುವ ಜನರು ಸಹ ತಮ್ಮ ಫೋನ್‌ಗಳಲ್ಲಿ ಹೆಚ್ಚಿನ ಹಣಕಾಸು ವಹಿವಾಟು ನಡೆಸಲು ಕಾರಣವಾಗಿತು. ಡಿಜಿಟಲ್ ಪಾವತಿ ವ್ಯವಸ್ಥೆಯು ಬೆಳೆದಂತೆ, ಸೈಬರ್ ಅಪರಾಧಿಗಳು ಮತ್ತು ವಂಚಕರ ವಿಸ್ತಾರವಾದ ಜಾಲವೂ ಸಹ ಅಭಿವೃದ್ಧಿ ಹೊಂದಿತು. ಇಂದು ಡಿಜಿಟಲ್ ವಂಚಕರು ಕೃತಕ ಬುದ್ಧಿಮತ್ತೆ ಅಥವಾ AI ನಂತಹ ತಾಂತ್ರಿಕ ಸಾಧನಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ.

    ಬ್ಯಾಂಕ್ ಸಂಬಂಧಿತ ವಂಚನೆಗಳೇ ಹೆಚ್ಚಾಗಿ ನಡೆಯುತ್ತಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, 2025/26 ಹಣಕಾಸು ವರ್ಷದ ಮೊದಲಾರ್ಧದಲ್ಲಿ ವಂಚನೆ ಕೇಸ್‌ಗಳು ಸುಮಾರು ಎಂಟು ಪಟ್ಟು ಹೆಚ್ಚಳ ಕಂಡಿವೆ. ಖಾಸಗಿ ವಲಯದ ಬ್ಯಾಂಕುಗಳು ಇಂತಹ ಎಲ್ಲಾ ಘಟನೆಗಳಲ್ಲಿ ಸುಮಾರು ಶೇ. 60 ರಷ್ಟು ಪಾಲನ್ನು ಹೊಂದಿವೆ. ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಗ್ರಾಹಕರು ಹೆಚ್ಚು ವಂಚನೆಗಳಿಗೆ ತುತ್ತಾಗಿದ್ದಾರೆ. ಅವರು ಒಟ್ಟಾರೆಯಾಗಿ 25,667 ಕೋಟಿ ರೂ. ಕಳೆದುಕೊಂಡಿದ್ದಾರೆ. ಜೀವ ವಿಮೆ, ಆರೋಗ್ಯ ವಿಮೆ, ವಾಹನ ಮತ್ತು ಸಾಮಾನ್ಯ ವಂಚನೆಗಳು ಸೈಬರ್ ಅಪರಾಧಿಗಳಿಗೆ ಹೆಚ್ಚು ಲಾಭದಾಯಕ ಆಯ್ಕೆಯಾಗುತ್ತಿವೆ. ಅಪ್ಲಿಕೇಶನ್ ಆಧಾರಿತ ಸೇವೆಗಳನ್ನೇ ಆಯ್ಕೆ ಮಾಡುವಂತೆ ಗ್ರಾಹಕರಿಗೆ ವಿಮಾ ಕಂಪನಿಗಳು ಒತ್ತಾಯಿಸುತ್ತಿರುವುದೇ ಇಂತಹ ವಂಚನೆಗಳಿಗೆ ಸುಲಭ ದಾರಿ ಮಾಡಿಕೊಟ್ಟಿದೆ.

    ಸೈಬರ್ ವಂಚನೆ ಹೇಗಾಗುತ್ತೆ?
    ಆಮಿಷದ ಮೆಸೇಜ್‌ಗಳು: SMS ಅಥವಾ WhatsApp ನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಪ್ರಸಿದ್ಧ ಇ-ಕಾಮರ್ಸ್ ಸೈಟ್‌ಗಳಿಂದ ಬಹುಮಾನ ಅಥವಾ ಮರುಪಾವತಿಯ ಆಮಿಷವೊಡ್ಡುತ್ತವೆ. ಇವು ಜನರನ್ನು UPI ಐಡಿಗಳು ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಗಳಂತಹ ಸೂಕ್ಷ್ಮ ಮಾಹಿತಿಯನ್ನು ಪಡೆಯುವ ವಂಚಕರ ಜಾಲಕ್ಕೆ ಸೆಳೆಯುತ್ತವೆ.
    ನಕಲಿ ಉತ್ಪನ್ನದ ಮಾಹಿತಿ: ಬೇಡಿಕೆಯ ವಸ್ತುಗಳನ್ನು ಆನ್‌ಲೈನ್ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟದ ಸುಳ್ಳು ಮಾಹಿತಿ ಬಿತ್ತರಿಸಲಾಗುತ್ತದೆ. ಖರೀದಿದಾರರು ವಸ್ತುವಿನ ಆಸೆಗಾಗಿ ಮುಂಚಿತವಾಗಿ ಹಣ ಪಾವತಿಸುತ್ತಾರೆ. ಮಾರಾಟಗಾರ ನಂತರ ಕಣ್ಮರೆಯಾಗುತ್ತಾನೆ.
    ಪಾವತಿ ದೃಢೀಕರಣ: ವಂಚಕರು ಪಾವತಿ ಮತ್ತು ಪರಿಶೀಲನೆ ಹೆಸರಿನಲ್ಲಿ ನಕಲಿ ಸಂದೇಶಗಳು ಅಥವಾ ಇಮೇಲ್‌ಗಳನ್ನು ಕಳುಹಿಸುತ್ತಾರೆ. ಈ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ಪಾವತಿಗೆ ಸಂಬಂಧಿಸಿದ ನಿಮ್ಮೆಲ್ಲ ಗೌಪ್ಯ ಮಾಹಿತಿಗಳು ವಂಚಕರಿಗೆ ಸಿಗುತ್ತವೆ. ಇದನ್ನೂ ಓದಿ: ನಾವು ಮಾಡುವ ಈ ಸಣ್ಣ ತಪ್ಪುಗಳೇ ಸೈಬರ್‌ ಅಪರಾಧಕ್ಕೆ ದಾರಿ – 7 ತಿಂಗಳಲ್ಲಿ ಬರೋಬ್ಬರಿ 861 ಕೋಟಿ ಲೂಟಿ

    ಸೈಬರ್ ಕ್ರೈಮ್‌ ಹಬ್ ಆಗ್ತಿದ್ಯಾ ಬೆಂಗಳೂರು?
    ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ, ಭಾರತದ ಪ್ರಮುಖ 19 ನಗರಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯು ಶೇ.39 ರಷ್ಟು ಏರಿಕೆ ಕಂಡಿದೆ. ಈ 19 ನಗರಗಳ ಒಟ್ಟು ಪ್ರಕರಣಗಳಲ್ಲಿ ಅರ್ಧದಷ್ಟು ಸೈಬರ್ ಅಪರಾಧಗಳು ಬೆಂಗಳೂರಿನಲ್ಲೇ ಆಗುತ್ತಿರುವುದು ಕಳವಳಕಾರಿ ಅಂಶವಾಗಿದೆ. ಆ ಮೂಲಕ ದೇಶದ ಡಿಜಿಟಲ್ ಕ್ರೈಮ್ ರಾಜಧಾನಿ ಎಂಬ ಕುಖ್ಯಾತಿಯನ್ನು ಬೆಂಗಳೂರು ಹೊಂದಿದೆ. ಪ್ರಮುಖ ಮೆಟ್ರೋ ನಗರಗಳ 2021-23ರ ಅಂಕಿಅಂಶಗಳು ಈ ಕೆಳಕಂಡಂತಿವೆ.

    ಬೆಂಗಳೂರು
    2021: 6,423 ಕೇಸ್
    2022: 9,940
    2023: 17,631

    ಹೈದರಾಬಾದ್
    2021: 3,303
    2022: 4,436
    2023: 4,855

    ಮುಂಬೈ
    2021: 2,883
    2022: 4,724
    2023: 4,131

    ಲಕ್ನೋ
    2021: 1,067
    2022: 1,134
    2023: 1,453

    ಚೆನ್ನೈ
    2021: 76
    2022: 271
    2023: 1,352

    ದೆಹಲಿ
    2021: 345
    2022: 685
    2023: 407

  • ಪ್ರತಿದಿನ ಅಕೌಂಟ್‌ಗೆ 200 ರೂ. ಹಾಕಿ ಗಾಳ – ಉದ್ಯಮಿಗೆ 7.84 ಲಕ್ಷ ವಂಚನೆ!

    ಪ್ರತಿದಿನ ಅಕೌಂಟ್‌ಗೆ 200 ರೂ. ಹಾಕಿ ಗಾಳ – ಉದ್ಯಮಿಗೆ 7.84 ಲಕ್ಷ ವಂಚನೆ!

    ಶಿವಮೊಗ್ಗ: ನಗರದ ಉದ್ಯಮಿಯೊಬ್ಬರ ಅಕೌಂಟ್‌ಗೆ ಸೈಬರ್‌ ವಂಚಕರು ಪ್ರತಿ ದಿನ 200 ರೂ. ಹಣ ಹಾಕಿ ಬಳಿಕ 7.84 ಲಕ್ಷ ರೂ. ವಂಚಿಸಿದ್ದಾರೆ.

    ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಇನ್ಸ್‌ಸ್ಟಾಗ್ರಾಂನಲ್ಲಿ ಜಾಹಿರಾತು ನಂಬಿ ಶಿವಮೊಗ್ಗದ ಉದ್ಯಮಿ 20,000 ರೂ. ಹೂಡಿಕೆ ಮಾಡಿದ್ದರು. ಹಣ ಹೂಡಿಕೆ ಮಾಡಿದ ಬಳಿಕ ಸೈಬರ್‌ ವಂಚಕರು 60 ದಿನಗಳ ಕಾಲ ಲಾಭಾಂಶ ಎಂದು ಪ್ರತಿದಿನ 200 ರೂ. ಹಣ ಹಾಕಿದ್ದಾರೆ. ಬಳಿಕ ಉದ್ಯಮಿಗೆ ಮತ್ತಷ್ಟು ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನೂ ಓದಿ: ಸುಧಾಮೂರ್ತಿಗೆ ಕರೆ ಮಾಡಿ ವಂಚನೆಗೆ ಯತ್ನಿಸಿದ್ದ ಸೈಬರ್‌ ಕಳ್ಳರು!

    ಹಾಗಾಗಿ ಉದ್ಯಮಿ ತನ್ನ ಕುಟುಂಬದವರ ಹೆಸರಿನಲ್ಲಿ 7.84 ಲಕ್ಷ ರೂ. ಹೂಡಿಕೆ ಮಾಡಿದ್ದರು. ಆ ಬಳಿಕ ಯಾವುದೇ ಲಾಭ ಬಾರದ ಹಿನ್ನೆಲೆ ಪರಿಶೀಲಿಸಿದಾಗ ವಂಚನೆಯಾಗಿರುವುದು ಅವರಿಗೆ ಅರಿವಾಗಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿವೃತ್ತ ಬ್ಯಾಂಕ್‌ ಅಧಿಕಾರಿಗೆ ಬರೋಬ್ಬರಿ 1 ತಿಂಗಳು ಡಿಜಿಟಲ್‌ ಅರೆಸ್ಟ್‌ – 23 ಕೋಟಿ ವಂಚನೆ

  • ಸುಧಾಮೂರ್ತಿಗೆ ಕರೆ ಮಾಡಿ ವಂಚನೆಗೆ ಯತ್ನಿಸಿದ್ದ ಸೈಬರ್‌ ಕಳ್ಳರು!

    ಸುಧಾಮೂರ್ತಿಗೆ ಕರೆ ಮಾಡಿ ವಂಚನೆಗೆ ಯತ್ನಿಸಿದ್ದ ಸೈಬರ್‌ ಕಳ್ಳರು!

    ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆ, ರಾಜ್ಯಸಭಾ ಸದಸ್ಯೆ ಡಾ. ಸುಧಾಮೂರ್ತಿ (Sudha Murthy) ಅವರಿಗೆ ಸೈಬರ್‌ ಕಳ್ಳರು ವಂಚನೆಗೆ ಯತ್ನಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.

    ಸ್ವತ: ಸುಧಾಮೂರ್ತಿ ಅವರೇ ಈ ವಿಚಾರವನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದು ಸೈಬರ್‌ ಕಳ್ಳರ (Cyber Crime) ವಿರುದ್ಧ ದೂರು ನೀಡುವಂತೆ ಮನವಿ ಮಾಡಿದ್ದಾರೆ.

    ಸುಧಾಮೂರ್ತಿ ಹೇಳಿದ್ದೇನು?
    ಕಳೆದ ಸೆ.5ರಂದು ಓಣಂ ಹಬ್ಬದ ದಿನ ನನಗೆ ಪೋನ್ ಕರೆಬಂತು. ನಾನು ದೂರಸಂಪರ್ಕ ಸಚಿವಾಲಯದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಈ ಹಿಂದೆ ಇಲಾಖೆಯವರು ಅನ್ಯ ಕಾರಣಕ್ಕಾಗಿ ನನ್ನನ್ನು ಸಂಪರ್ಕಿಸಿದ್ದರು. ಹೀಗಾಗಿ ಮತ್ತೆ ಅವರೇ ಕರೆ ಮಾಡಿರಬಹುದು ಎಂದು ನಾನು ಭಾವಿಸಿದ್ದೆ.

    ನಿಮ್ಮ ನಂಬರ್ ಇದೇನಾ ಮೇಡಂ ಎಂದು ಹುಡುಗ ಕೇಳಿದ. ನಂತರ ಈ ಸಂಖ್ಯೆಯಿಂದ ಆಶ್ಲೀಲ ವಿಡಿಯೋಗಳು ಬರುತ್ತಿವೆ. 2 ಗಂಟೆಗಳಲ್ಲಿ ಮೊಬೈಲ್ ನಂಬರ್ ನಿಷ್ಕ್ರಿಯ ಮಾಡುತ್ತೇನೆ ಎಂದಿದ್ದ. ನನಗೆ ಆಶ್ವರ್ಯವಾಗಿ ಮೊದಲಿಗೆ ನನ್ನ ಬಳಿ ಆಶ್ಲೀಲ ವಿಡಿಯೋಗಳಿಲ್ಲ. ಹೀಗಿದ್ದರೂ ನನ್ನ ನಂಬರ್ ಯಾಕೆ ಬ್ಲಾಕ್ ಮಾಡುತ್ತಾರೆ ಎಂದುಕೊಂಡೆ.

    ಈ ವೇಳೆ ಜನವರಿಯಲ್ಲಿ ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ಯಾ ಅಂತ ಪ್ರಶ್ನಿಸಿದ? ಅಷ್ಟೊತ್ತಿಗಾಗಲೇ ನನ್ನ ಸಹಾಯಕಿ ಬಂದು ಕರೆ ಕಟ್ ಮಾಡಿ ಎಂದರು. ಈ ವೇಳೆ ಕರೆ ಮಾಡಿದ ವ್ಯಕ್ತಿಯು ದೂರಸಂಪರ್ಕ ಇಲಾಖೆಯು ಪಿಎರ್‌ಒ ಎಂದು ಹೇಳಿದ. ಪರಿಶೀಲಿಸಿದಾಗ ಇದು ಸೈಬರ್ ವಂಚಕರ ವಂಚನೆ ಜಾಲ ಎನ್ನುವುದು ನನಗೆ ತಿಳಿಯಿತು.

    ಸೈಬರ್ ವಂಚಕರು ಅಧಿಕಾರಿ ಸೋಗಿನಲ್ಲಿ ವಂಚಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಅಪರಿಚಿತ ಕರೆ ಮಾಡಿದರೆ ಆತನ ಮಾತಿನ ದಾಟಿ ತಿಳಿದುಕೊಳ್ಳಿ. ಬ್ಯಾಂಕ್‌ ಖಾತೆ, ಆಧಾರ್ ಕಾರ್ಡ್, ಅರೆಸ್ಟ್ ವಾರೆಂಟ್ ಅಂತಾರೆ. ಅನುಮಾನಸ್ಪಾದ ಕರೆ ಬಂದರೆ ಕೂಡಲೇ 1930ಗೆ ಕರೆ ಮಾಡಿ, ಪೊಲೀಸರನ್ನು ಸಂಪರ್ಕಿಸಿ ನಿಮ್ಮ ಹಣವನ್ನ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

  • ರಿಸರ್ವ್‌ ಬ್ಯಾಂಕ್‌ ಲೋಗೋ ನೋಡಿ ಖೆಡ್ಡಾಕ್ಕೆ ಬಿದ್ದ ಮಹಿಳೆ – 30 ಲಕ್ಷದ ಆಸೆ ತೋರಿಸಿ 3.71 ಲಕ್ಷ ದೋಚಿದ ವಂಚಕ

    ರಿಸರ್ವ್‌ ಬ್ಯಾಂಕ್‌ ಲೋಗೋ ನೋಡಿ ಖೆಡ್ಡಾಕ್ಕೆ ಬಿದ್ದ ಮಹಿಳೆ – 30 ಲಕ್ಷದ ಆಸೆ ತೋರಿಸಿ 3.71 ಲಕ್ಷ ದೋಚಿದ ವಂಚಕ

    ಶಿವಮೊಗ್ಗ: ನಗರದ (Shivamogga) ಮಹಿಳೆಯೊಬ್ಬರು 30 ಲಕ್ಷ ರೂ. ಬಹುಮಾನದ ಆಸೆಗೆ 3,71,400 ರೂ. ಕಳೆದುಕೊಂಡಿದ್ದಾರೆ. ಟ್ಯಾಂಕ್ ಮೊಹಲ್ಲಾದ ನಿವಾಸಿಯಾದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಡಿಪಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಲೋಗೋ ಹಾಕಿಕೊಂಡು, ಈ ವಂಚನೆ ಮಾಡಿದ್ದಾನೆ.

    ಅಪರಿಚಿತ ವ್ಯಕ್ತಿ, ವಾಟ್ಸ್ಯಾಪ್‌ನಲ್ಲಿ ತಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಸಂದೇಶ ಕಳುಹಿಸಿ, ನೀವು 30 ಲಕ್ಷ ರೂ. ಬಹುಮಾನ ಗೆದ್ದಿದ್ದೀರಿ ಎಂದು ನಂಬಿಸಿದ್ದಾನೆ. ಈ ಸಂದೇಶದಿಂದ ಸಂತೋಷಗೊಂಡ ಮಹಿಳೆ ಆತನ ಮಾತನ್ನು ನಂಬಿದ್ದಾರೆ. ನಂತರ, “ನಿಮ್ಮ ಖಾತೆಗೆ ಬಹುಮಾನದ ಹಣವನ್ನು (Money) ವರ್ಗಾಯಿಸಲು ಖಾತೆ ಸಂಖ್ಯೆಯನ್ನು ನೀಡಿ” ಎಂದು ವಂಚಕ ಹೇಳಿ ಮಹಿಳೆಯಿಂದ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಪಡೆದಿದ್ದಾನೆ. ಇದನ್ನೂ ಓದಿ: ನಿನ್ನ ಬೆತ್ತಲೆ ಫೋಟೋ ಲೀಕ್ ಮಾಡ್ತೀನಿ – ಬೆದರಿಕೆ ಹಾಕಿ ಟಿಕ್ಕಿಯಿಂದ 65 ಲಕ್ಷ ರೂ. ಪೀಕಿದ ಸ್ನೇಹಿತ

    ಅಕೌಂಟ್‌ ನಂಬರ್‌ ಪಡೆದು, ಖಾತೆಗೆ ಲಾಟರಿ ಹಣ ವರ್ಗಾವಣೆ ಮಾಡಬೇಕಾದರೆ, ಅದಕ್ಕೆ ಸರ್ವಿಸ್ ಶುಲ್ಕ, ತೆರಿಗೆ ಮತ್ತು ಇತರೆ ಕಾರಣಗಳನ್ನು ನೀಡಬೇಕು ಎಂದು ಒಟ್ಟು 3,71,400 ರೂ. ಹಣವನ್ನು ಹಂತ ಹಂತವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ವಂಚನೆಗೆ ಒಳಗಾಗಿರುವುದು ಅರಿವಾದ ಮೇಲೆ ಮಹಿಳೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಹೆಸರಿನಲ್ಲಿ ನಟಿಯ ತಾಯಿ ಬಳಿ ಹಣ ಪೀಕಿದ ವ್ಯಕ್ತಿ

  • ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಗೆ ಸೈಬರ್ ವಂಚನೆಗೆ ಯತ್ನ – ದೂರು ದಾಖಲು

    ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಗೆ ಸೈಬರ್ ವಂಚನೆಗೆ ಯತ್ನ – ದೂರು ದಾಖಲು

    ಬೆಂಗಳೂರು: ಇನ್ಫೋಸಿಸ್ (Infosys) ಮುಖ್ಯಸ್ಥೆ ಹಾಗೂ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ (Sudha Murthy) ಅವರಿಗೆ ಸೈಬರ್ ವಂಚನೆಗೆ ಯತ್ನಿಸಿದ್ದು, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ (Cyber Crime Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸೆ.5 ರಂದು ಸುಧಾಮೂರ್ತಿ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಎಂದು ಹೇಳಿಕೊಂಡಿದ್ದ. ಬಳಿಕ ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್‌ಗೆ ಲಿಂಕ್ ಮಾಡದೆ ನೋಂದಾಯಿಸಲಾಗಿದೆ ಎಂದಿದ್ದ. ಇದನ್ನೂ ಓದಿ: ಸಂಸದ ಸುಧಾಕರ್‌ ಪತ್ನಿ ಹೌಸ್‌ ಅರೆಸ್ಟ್‌ – 14 ಲಕ್ಷ ದೋಚಿದ ಸೈಬರ್‌ ಕಳ್ಳರು

    ಹಾಗಾಗಿ ವ್ಯೆಯಕ್ತಿಕ ಮಾಹಿತಿ ನೀಡಿ ಅಂತಾ ಮಾಹಿತಿ ಕೇಳಿದ್ದ. ಅಲ್ಲದೇ ನಿಮ್ಮ ನಂಬರ್‌ನಿಂದ ಅಶ್ಲೀಲ ವೀಡಿಯೋ ಕಳಿಸಲಾಗ್ತಿದೆ. ಅದನ್ನ ನಾನು ನಿಲ್ಲಿಸಿದ್ದೇನೆ ಎಂದೆಲ್ಲ ಹೇಳಿದ್ದ.

    ಈ ವೇಳೆ ಅನುಮಾನಗೊಂಡ ಸುಧಾಮೂರ್ತಿ ಅವರು, ಕರೆದ ಬಂದಿದ್ದ ನಂಬರ್‌ ಅನ್ನು ಟ್ರೂಕಾಲರ್ ಮೂಲಕ ಪರಿಶೀಲಿಸಿದ್ದರು. ಈ ವೇಳೆ ಟ್ರೂಕಾಲರ್‌ನಲ್ಲಿ ಟೆಲಿಕಾಂ ಡೆಪಾರ್ಟ್ಮೆಂಟ್ ಎಂದು ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ಅವರು ಸೈಬರ್ ವಂಚಕರ ಟ್ರ‍್ಯಾಪ್‌ಗೆ ಒಳಗಾಗದೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ವಂಚಕನ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

  • ಡಿಜಿಟಲ್ ಅರೆಸ್ಟ್ – 30 ಲಕ್ಷ ರೂ. ಕಳೆದುಕೊಂಡ ಮಾಜಿ ಶಾಸಕ

    ಡಿಜಿಟಲ್ ಅರೆಸ್ಟ್ – 30 ಲಕ್ಷ ರೂ. ಕಳೆದುಕೊಂಡ ಮಾಜಿ ಶಾಸಕ

    ಬೆಂಗಳೂರು: ಡಿಜಿಟಲ್ ಅರೆಸ್ಟ್‌ಗೆ (Digital Arrest) ಒಳಗಾಗಿ ಔರದ್ (Aurad) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ (Gundappa Vakil) 30 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

    ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ್ದು, ಮಾಜಿ ಶಾಸಕರಿಂದ ಹಂತ ಹಂತವಾಗಿ 30 ಲಕ್ಷ ರೂ. ಹಣವನ್ನು ಖದೀಮರು ವರ್ಗಾಯಿಸಿಕೊಂಡಿದ್ದಾರೆ. ಘಟನೆ ಸಂಬಂಧ ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಈದ್‌ಮಿಲಾದ್ ವೇಳೆ 15 ನಿಮಿಷ ಪೊಲೀಸರನ್ನ ಸುಮ್ಮನಿರಿಸಿ ಹಾಡು ಪ್ರಸಾರ – ಮೂವರ ವಿರುದ್ಧ ಕೇಸ್ ದಾಖಲು

    ಮೊದಲು ಆಗಸ್ಟ್ 12ರಂದು ಸಿಬಿಐ ಆಫೀಸರ್ ಎಂದು ಕರೆ ಮಾಡಿದ್ದ ಖದೀಮರು, ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್‌ನಲ್ಲಿ ಭಾಗಿಯಾಗಿದ್ದೀರಿ. ನರೇಶ್ ಗೋಯಲ್ ಜೊತೆ ಅಕ್ರಮ ವ್ಯವಹಾರ ಮಾಡಿದ್ದೀರಿ ಎಂದು ಹೆದರಿಸಿದ್ದರು. ಆ.13ರಂದು ಸಿಬಿಐ ಡಿಸಿಪಿ ಎಂದು ಮತ್ತೋರ್ವ ಕರೆ ಮಾಡಿ, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಾ, ಕಾಲ್ ಕಟ್ ಮಾಡಬೇಡಿ ಎಂದು ಹೆದರಿಸಿದ್ದ. ಬಳಿಕ ಆನ್‌ಲೈನ್‌ನಲ್ಲಿ ಫೇಕ್ ಜಡ್ಜ್ ಮುಂದೆ ಹಾಜರು ಪಡಿಸಿದ್ದ ಖದೀಮರು ಕೋರ್ಟ್ ಹಾಲ್ ರೀತಿ ಸೆಟಪ್ ಮಾಡಿ ನಂಬಿಕೆ ಹುಟ್ಟಿಸಿದ್ದರು. ನಮ್ಮದು ತಪ್ಪಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಿ ಎಂದು 10 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದರು. ಬಳಿಕ ಪ್ರಾಪರ್ಟಿ ತನಿಖೆ ಮಾಡಬೇಕೆಂದು 20 ಲಕ್ಷ ರೂ. ಡೆಪಾಸಿಟ್ ಮಾಡಿಸಿಕೊಂಡಿದ್ದರು. ಹೀಗೆ ಖದೀಮರ ಮಾತು ನಂಬಿ ಹಂತ-ಹಂತವಾಗಿ 30.99 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ಹಾಕಿಸಿಕೊಂಡು ತನಿಖೆ ಮುಗಿದ ನಂತರ ಮರಳಿ ಕೊಡುವುದಾಗಿ ನಂಬಿಸಿದ್ದರು. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು ತೂರಲು ಪ್ರಚೋದನೆ ಏನು? – ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಹಣ ಮರಳಿ ಬಾರದಿದ್ದಾಗ ಮಾಜಿ ಶಾಸಕ ಗುಂಡಪ್ಪ ವಕೀಲ್ ಸಿಸಿಬಿ ಸೈಬರ್ ಕ್ರೈಂ (CCB) ಪೊಲೀಸರಿಗೆ ದೂರು ನೀಡಿದ್ದಾರೆ. ಗುಂಡಪ್ಪ ವಕೀಲ್ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಮದ್ದೂರು ಗಲಭೆ – ರಾಜ್ಯದಲ್ಲಿ ಹಿಂದೂಗಳೇ ಟಾರ್ಗೆಟ್; ಎನ್‌ಐಎ ತನಿಖೆಗೆ ಆಗ್ರಹಿಸುವಂತೆ ಮನವಿ

  • ದಾವಣಗೆರೆ | ಶಿಕ್ಷಕನ ಬ್ಯಾಂಕ್ ಖಾತೆಯಿಂದ 22 ಲಕ್ಷ ಎಗರಿಸಿದ್ದ ಆರೋಪಿ ಅರೆಸ್ಟ್

    ದಾವಣಗೆರೆ | ಶಿಕ್ಷಕನ ಬ್ಯಾಂಕ್ ಖಾತೆಯಿಂದ 22 ಲಕ್ಷ ಎಗರಿಸಿದ್ದ ಆರೋಪಿ ಅರೆಸ್ಟ್

    ದಾವಣಗೆರೆ: ಡಿಜಿಟಲ್ ಅರೆಸ್ಟ್ ಹೆಸರಲ್ಲಿ (Digital Arrest) ನಗರದ (Davanagere) ಶಿಕ್ಷಕರೊಬ್ಬರ ಬ್ಯಾಂಕ್ ಖಾತೆಯಿಂದ 22.40 ಲಕ್ಷ ರೂ. ಹಣ ಎಗರಿಸಿದ್ದ ಆರೋಪಿಯನ್ನು ಸೈಬರ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಹಾಸನದ (Hassan) ಬೇಲೂರು ಮೂಲದ ಅರುಣ್ ಕುಮಾರ್ (35) ಎಂದು ಗುರುತಿಸಲಾಗಿದೆ. ಆರೋಪಿ ದಾವಣಗೆರೆ ಮೂಲದ ಶಿಕ್ಷಕರೊಬ್ಬರಿಗೆ ಕೋರಿಯರ್ ಇದೆ ಎಂದು ಮಾ.12 ರಂದು ಫೋನ್ ಮಾಡಿದ್ದ. ಬಳಿಕ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ಪಡೆದು, 22.40 ಲಕ್ಷ ರೂ. ಹಣ ಎಗರಿಸಿದ್ದ. ಇದನ್ನೂ ಓದಿ: ಬೆಂಗಳೂರು | 2 ವರ್ಷದ ಹಿಂದೆ ಮದುವೆಯಾಗಿದ್ದ ಟೆಕ್ಕಿ ಆತ್ಮಹತ್ಯೆ – ಪತಿ ಅರೆಸ್ಟ್

    ಆರೋಪಿಯ ಬ್ಯಾಂಕ್ ಖಾತೆಯಲ್ಲಿ 19 ಲಕ್ಷ ರೂ. ಹಣವಿದ್ದು, ಖಾತೆಯನ್ನು ಸ್ಥಗಿತಗೊಳಿಸುವಂತೆ ಸೈಬರ್ ಕ್ರೈಂ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಕಾರು ಸಮೇತ ಲಕ್ಷ ಲಕ್ಷ ಹಣ ಕದ್ದು ಪರಾರಿ – ಸಿನಿಮೀಯ ಶೈಲಿಯಲ್ಲಿ ಆರೋಪಿ ಅರೆಸ್ಟ್