Tag: Cutting Shop

  • ಕಟಿಂಗ್ ಶಾಪ್‍ಗೆ ಹೋಗಿದ್ದ ಓರ್ವನಿಂದ 6 ಮಂದಿಗೆ ತಗುಲಿದ ಕೊರೊನಾ

    ಕಟಿಂಗ್ ಶಾಪ್‍ಗೆ ಹೋಗಿದ್ದ ಓರ್ವನಿಂದ 6 ಮಂದಿಗೆ ತಗುಲಿದ ಕೊರೊನಾ

    ಭೋಪಾಲ್: ಕಟಿಂಗ್ ಮಾಡಿಸಿಕೊಂಡು ಬಂದಿದ್ದ ಓರ್ವ ಸೋಂಕಿತನಿಂದ ಈಗ ಆ ಕಟಿಂಗ್ ಶಾಪ್‍ಗೆ ಹೋಗಿದ್ದ 6 ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿದೆ. ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಬಾರ್ಗಾಂವ್ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

    ಇಂಧೋರ್ ಹಾಸ್ಟೆಲ್‍ನಲ್ಲಿ ಇದ್ದ ಸೋಂಕಿತ ವ್ಯಕ್ತಿ ಕೆಲ ದಿನಗಳ ಹಿಂದೆ ಗ್ರಾಮಕ್ಕೆ ವಾಪಸ್ ಬಂದಿದ್ದನು. ಬಾರ್ಗಾಂವ್ ಗ್ರಾಮದಲ್ಲಿ ಕಟಿಂಗ್ ಶಾಪ್‍ಗೆ ಏಪ್ರಿಲ್ 5ರಂದು ಸೋಂಕಿತ ಭೇಟಿಕೊಟ್ಟಿದ್ದನು. ಇಲ್ಲಿ ಕ್ಷೌರಿಕನ ಬಳಿ ಕಟಿಂಗ್ ಹಾಗೂ ಶೇವಿಂಗ್ ಮಾಡಿಸಿಕೊಂಡು ಹೋಗಿದ್ದನು. ಆದರೆ ಆತನಿಗೆ ಸೋಂಕು ಇದ್ದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆ ಬಳಿಕ ಸುಮಾರು 10ರಿಂದ 12 ಮಂದಿ ಇದೇ ಕಟಿಂಗ್ ಶಾಪ್‍ನಲ್ಲಿ ಕಟಿಂಗ್ ಹಾಗೂ ಶೇವಿಂಗ್ ಮಾಡಿಸಿಕೊಂಡಿದ್ದರು.

    ಈಗ ಕಟಿಂಗ್ ಶಾಪ್‍ಗೆ ಭೇಟಿಕೊಟ್ಟಿದ್ದ 12 ಮಂದಿ ಗ್ರಾಹಕರಲ್ಲಿ 6 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಹುಶಃ ಕ್ಷೌರಿಕ ಕಟಿಂಗ್ ಮಾಡುವಾಗ ಸೊಂಕಿತನಿಗೆ ಬಳಸಿದ್ದ ಕತ್ತರಿ ಹಾಗೂ ಟವಲ್‍ನನ್ನೇ ಇತರೇ ಗ್ರಾಹಕರಿಗೂ ಬಳಸಿದ್ದರಿಂದ ಸೋಂಕು ಹರಡಿದೆ ಎಂದು ಶಂಕಿಸಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ, ಈಗಾಗಲೇ ಕಟಿಂಗ್ ಶಾಪ್‍ಗೆ ಭೇಟಿಕೊಟ್ಟಿದ್ದ ಗ್ರಾಹಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 6 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಡೀ ಗ್ರಾಮವನ್ನೇ ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ ಸೋಂಕಿತರ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕೂಡ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಅವರನ್ನೂ ಕೂಡ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸೋಂಕಿಗೆ ತುತ್ತಾದವರಲ್ಲಿ 28 ವರ್ಷದಿಂದ 73 ವರ್ಷದ ವಯಸ್ಸಿನವರು ಇದ್ದಾರೆ. ಖರ್ಗೋನ್ ಜಿಲ್ಲೆಯಲ್ಲಿ ಈವರೆಗೆ 60 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ 19 ಪ್ರಕರಣ ಕಳೆದ 2 ದಿನಗಳಲ್ಲಿ ಪತ್ತೆಯಾಗಿರುವುದು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಸೋಂಕಿತನನ್ನು ಹಿಡಿಯಲು ಹೋಗಿದ್ದ ಸಿಎಸ್‍ಪಿಗೂ ಕೊರೊನಾ:

    ಏಪ್ರಿಲ್ 19ರಂದು ಭೋಪಾಲ್ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೊನಾ ವೈರಸ್ ಸೋಂಕಿತ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‍ಎಸ್‍ಎ) ಬಂಧಿತ ಜಾವೇದ್ ಖಾನ್‍ನನ್ನು ಜಬಲ್ಪುರಕ್ಕೆ ಮರಳಿ ಕರೆತರಲು ಸಿಎಸ್‍ಪಿ ಹೋಗಿದ್ದರು. ಏಪ್ರಿಲ್ 20ರಂದು ನರಸಿಂಗ್‍ಪುರ ಜಿಲ್ಲೆಗೆ ಜಾವೇದ್ ಖಾನ್‍ನನ್ನು ಕರೆತರಲು ಸಿಎಸ್‍ಪಿ ಇತರೆ ಪೊಲೀಸ್ ಸಿಬ್ಬಂದಿ ಜೊತೆ ಹೋಗಿದ್ದರು.

    ಆದರೆ ಈಗ ಸಿಎಸ್‍ಪಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಅವರ ಜೊತೆ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಈಗಾಗಲೇ ಅಧಿಕಾರಿ ಸಂಪರ್ಕದಲ್ಲಿದ್ದ ಅನೇಕ ಸಿಬ್ಬಂದಿ ಸೆಲ್ಫ್ ಕ್ವಾರಂಟೈನ್ ಆಗಿದ್ದು, ಅಧಿಕಾರಿಯ ಕುಟುಂಬವನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ.