Tag: customs officer

  • ಕಸ್ಟಮ್ಸ್ ಅಧಿಕಾರಿ ಪತ್ನಿ ಬಾತ್ ರೂಂನಲ್ಲಿ ಬಿಸಾಡಿದ್ಲು 10 ಲಕ್ಷ- CISF ಪೊಲೀಸರ ಭರ್ಜರಿ ಬೇಟೆ

    ಕಸ್ಟಮ್ಸ್ ಅಧಿಕಾರಿ ಪತ್ನಿ ಬಾತ್ ರೂಂನಲ್ಲಿ ಬಿಸಾಡಿದ್ಲು 10 ಲಕ್ಷ- CISF ಪೊಲೀಸರ ಭರ್ಜರಿ ಬೇಟೆ

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಟ್ಟು 74.81 ಲಕ್ಷ ರೂ. ಜಪ್ತಿ

    ಬೆಂಗಳೂರು: ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿದ್ದು, ಸಿಐಎಸ್‍ಎಫ್ ಪೊಲೀಸರು ಭರ್ಜರಿ ಬೇಟೆ ನಡೆಸಿ, ಕಸ್ಟಮ್ಸ್ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ.

    ಸಿಐಎಸ್‍ಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಸ್ಟಮ್ಸ್ ಅಧಿಕಾರಿ ಇರ್ಫಾನ್ ಅಹಮದ್ ಮಹಮದ್ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಯಿಂದ ಸೂಟ್ ಕೇಸ್, ಬ್ಯಾಗ್ ನಲ್ಲಿದ್ದ ಒಟ್ಟು 74,81,500 ರೂ.ಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಬೆಲೆ ಬಾಳುವ ಮೊಬೈಲ್, ಆಪಲ್ ವಾಚ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಪರಿಶೀಲನೆ ವೇಳೆ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಸಿಐಎಸ್‍ಎಫ್ ಪೊಲೀಸರು ಬೆರಗಾಗಿದ್ದಾರೆ. ಹಣವನ್ನು ವಶಪಡಿಸಿಕೊಳ್ಳುವುದನ್ನು ನೋಡುತ್ತಿದ್ದಂತೆ ಸಿಐಎಸ್‍ಎಫ್ ಅಧಿಕಾರಿಗಳ ಪರಿಶೀಲನೆ ವೇಳೆ ಕಸ್ಟಮ್ಸ್ ಅಧಿಕಾರಿಯ ಪತ್ನಿ ಬಾತ್ ರೂಂ ನಲ್ಲಿ ಕಂತೆ ಕಂತೆ ನೋಟುಗಳನ್ನು ಬಿಸಾಡಿದ್ದಾರೆ. ಅಧಿಕಾರಿಯ ಪತ್ನಿ ಬಾತ್ ರೂಂ ನಲ್ಲಿ 10 ಲಕ್ಷ ರೂ. ಬಿಸಾಡಿರುವುದು ಪತ್ತೆಯಾಗಿದೆ.

    ಪ್ರಕರಣವನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು, ಕಸ್ಟಮ್ಸ್ ಅಧಿಕಾರಿ ಚೆನ್ನೈ ನಲ್ಲಿ ವಾಸ ಮಾಡುತ್ತಿದ್ದಾರೆ. ಚೆನ್ನೈನಿಂದ ಲಕ್ನೋಗೆ ತೆರಳಲು ಬೆಂಗಳೂರಿಗೆ ಬಂದಿದ್ದರು. ತಪಾಸಣೆ ವೇಳೆ ಅಧಿಕಾರಿ ಸಿಕ್ಕಿಬಿದ್ದಿದ್ದಾನೆ.

  • ಸಖತ್ ಪ್ಲ್ಯಾನ್ ಉಪಯೋಗಿಸಿ ದುಬೈನಿಂದ 233.18 ಗ್ರಾಂ ಚಿನ್ನ ತಂದು ಸಿಕ್ಕಿಬಿದ್ದ

    ಸಖತ್ ಪ್ಲ್ಯಾನ್ ಉಪಯೋಗಿಸಿ ದುಬೈನಿಂದ 233.18 ಗ್ರಾಂ ಚಿನ್ನ ತಂದು ಸಿಕ್ಕಿಬಿದ್ದ

    ಮಂಗಳೂರು: ಸಖತ್ ಪ್ಲ್ಯಾನ್ ಉಪಯೋಗಿಸಿ ದುಬೈನಿಂದ 233.18 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

    ಕಾಸರಗೋಡಿನ ನಿವಾಸಿ ಮಹಮ್ಮದ್ ಮಹಿರ್ ಪಟ್ಲ (24) ಬಂಧಿತ ಆರೋಪಿ. ಮಹಮ್ಮದ್‍ನಿಂದ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 98.14  ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ದುಬೈನಿಂದ ಮಂಗಳೂರಿಗೆ ಬಂದಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಮ್ಮದ್ ಮಹಿರ್ ಪಟ್ಲ ಬಂದಿದ್ದ. ಆತನ ಮೇಲೆ ಅನುಮಾನ ವ್ಯಕ್ತಪಡಿಸಿದ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಮಹಮ್ಮದ್ ಬಳಿ ಇದ್ದ ಎಮರ್ಜೆನ್ಸಿ ಲೈಟ್ ಹಾಗೂ ಸೋಲಾರ್ ವಾಲ್ ಲೈಟ್‍ನಲ್ಲಿ 233.18 ಗ್ರಾಂ ಚಿನ್ನ ಪತ್ತೆಯಾಗಿದೆ. ಮಹಮ್ಮದ್‍ನನ್ನು ವಶಕ್ಕೆ ಪಡೆದುಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು, ಬಳಿಕ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

  • ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೂವರೆ ಕೆಜಿ ಚಿನ್ನ ವಶ

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೂವರೆ ಕೆಜಿ ಚಿನ್ನ ವಶ

    – ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ

    ಮಂಗಳೂರು: ದುಬೈನಿಂದ ಮಂಗಳೂರಿಗೆ ಬರುವ ಕೆಲವರು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಪ್ರಕರಣ ಪದೇ ಪದೇ ಬೆಳಕಿಗೆ ಬರುತ್ತಿದ್ದು, ಮತ್ತೆ ಈ ಅಕ್ರಮ ಚಿನ್ನ ಸಾಗಾಟ ಮುಂದುವರೆದಿದೆ.

    ಮೂರು ಬೇರೆ ಬೇರೆ ಪ್ರಕರಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದೂವರೆ ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಚಿನ್ನದ ಒಟ್ಟು ಮೌಲ್ಯವು 63.73 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

    ದುಬೈನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಈ ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ವಿಮಾನದಲ್ಲಿದ್ದ ಪ್ರಯಾಣಿಕನಿಂದ 336.7 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 13.43 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇನ್ನೋರ್ವ ಪ್ರಯಾಣಿಕನಿಂದ 21.24 ಲಕ್ಷ ರೂ. ಮೌಲ್ಯದ 523 ಗ್ರಾಂ ಚಿನ್ನ ಹಾಗೂ ಮತ್ತೋರ್ವ ಪ್ರಯಾಣಿಕನಿಂದ 29.06 ಲಕ್ಷ ರೂ. ಮೌಲ್ಯದ 716 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

    ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಈ ಚಿನ್ನ ಸಾಗಾಟ ಬೆಳಕಿಗೆ ಬಂದಿದ್ದು, ಮೂವರನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಬಜಪೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಬಂಧಿತ ಮೂವರೂ ಕೇರಳ ಮೂಲದವರಾಗಿದ್ದು, ಈ ಹಿಂದಿನಿಂದಲೂ ಇದೇ ರೀತಿ ಅಕ್ರಮ ಚಿನ್ನ ಸಾಗಾಟದಲ್ಲಿ ಸಿಕ್ಕಿ ಬಿದ್ದವರು ಕೇರಳ ಮೂಲದವರೇ ಎನ್ನುವುದು ವಿಶೇಷವಾಗಿದೆ.

  • ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಚಪ್ಪಲಿ ಸೋಲ್ ನಲ್ಲಿ ಚಿನ್ನ ಸಾಗಾಟ: ಚಿನ್ನದ ಮೌಲ್ಯ ಎಷ್ಟು ಗೊತ್ತಾ?

    ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಚಪ್ಪಲಿ ಸೋಲ್ ನಲ್ಲಿ ಚಿನ್ನ ಸಾಗಾಟ: ಚಿನ್ನದ ಮೌಲ್ಯ ಎಷ್ಟು ಗೊತ್ತಾ?

    ಮಂಗಳೂರು: ದುಬೈಯಿಂದ ಅಕ್ರಮ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಬಂಧಿತನನ್ನು ಕೇರಳದ ಕಾಸರಗೋಡು ನಿವಾಸಿ ಅಹಮದ್ ತಾಹೀರ್(35) ಎಂದು ಗುರುತಿಸಲಾಗಿದೆ. ಈತ ತನ್ನ ಚಪ್ಪಲಿಯ ಸೋಲ್ ನಲ್ಲಿ ಚಿನ್ನವನ್ನು ಅಕ್ರಮವಾಗಿ ಅಡಗಿಸಿಟ್ಟಿದ್ದನು.

    ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಸಿಕ್ಕಿ ಬಿದ್ದಿದ್ದಾನೆ. ಬಳಿಕ ಅಧಿಕಾರಿಗಳು ತಾಹೀರ್ ಧರಿಸಿದ್ದ ಚಪ್ಪಲಿಯಲ್ಲಿ ಅಡಗಿಸಿಟ್ಟಿದ್ದ 804 ಗ್ರಾಂ ಚಿನ್ನ ವಶಪಡೆದುಕೊಂಡಿದ್ದು, ಇದರ ಒಟ್ಟು ಮೌಲ್ಯ 24 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.

    ಇದೇ ತಿಂಗಳ 4ನೇ ತಾರೀಖಿನಿಂದ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಚಿನ್ನ ಪತ್ತೆಯಾಗಿತ್ತು. ದುಬೈನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಟಾಯ್ಲೆಟ್‍ನಲ್ಲಿ ಚಿನ್ನದ ಬಿಸ್ಕಟ್ ಇರುವ ಪ್ಯಾಕೆಟ್ ಎಸೆದುಹೋಗಿದ್ದನು. ಟಾಯ್ಲೆಟ್ ಕ್ಲೀನಿಂಗ್ ವೇಳೆ ಸಂಶಯದಲ್ಲಿ ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿತ್ತು. ಬಳಿಕ ಕಸ್ಟಮ್ ಅಧಿಕಾರಿಗಳು 34 ಲಕ್ಷ ಮೌಲ್ಯದ 1 ಕೆಜಿ 100 ಗ್ರಾಮ್ ತೂಕದ 10 ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದಿದ್ದರು.

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ದೂರದ ಊರಿಂದ ಬರುವ ಪ್ರಯಾಣಿಕರು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುವ ವೇಳೆ ಸಿಕ್ಕಿಬಿದ್ದಿರುವ ಅನೇಕ ಘಟನೆಗಳು ಈ ಹಿಂದೆಯೂ ನಡೆದಿದೆ.