Tag: Custom Officers

  • ಎಲೆಕ್ಟ್ರಿಕ್ ಮಸಾಜರ್ ಒಳಗಡೆ ಡ್ರಗ್ಸ್ – ಕೋಟಿ ಮೌಲ್ಯದ ಎಂಡಿಎಂಎ ಮಾತ್ರೆ ವಶ

    ಎಲೆಕ್ಟ್ರಿಕ್ ಮಸಾಜರ್ ಒಳಗಡೆ ಡ್ರಗ್ಸ್ – ಕೋಟಿ ಮೌಲ್ಯದ ಎಂಡಿಎಂಎ ಮಾತ್ರೆ ವಶ

    – ಬೆಲ್ಜಿಯಂನಿಂದ ಭಾರತಕ್ಕೆ ಬಂತು ಪಾರ್ಸೆಲ್

    ಬೆಂಗಳೂರು: ಎಲೆಕ್ಟ್ರಿಕ್ ಮಸಾಜರ್ ಒಳಗೆ ಡ್ರಗ್ಸ್ ಪಾರ್ಸೆಲ್ ಬಂದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಡೀ ಭಾರತದಲ್ಲೇ ಡ್ರಗ್ ಮಾಫಿಯಾ ಪ್ರಕರಣ ಹೆಚ್ಚಾಗುತ್ತಿದೆ. ಎನ್‍ಸಿಬಿ ಅಧಿಕಾರಿಗಳು ದಿನಕ್ಕೊಬ್ಬರಂತೆ ಮಾಫಿಯಾದಲ್ಲಿ ತೊಡಗಿರುವವರನ್ನು ಅರೆಸ್ಟ್ ಮಾಡುತ್ತಿದ್ದಾರೆ. ಇದರಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇಂದು ಅದೇ ಅಧಿಕಾರಿಗಳು 1 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಂದು ಬೆಲ್ಜಿಯಂನಿಂದ ಬಂದ ವಿಮಾನದಲ್ಲಿ ಎಲೆಕ್ಟ್ರಿಕ್ ಮಸಾಜರ್ ಒಂದು ಪಾರ್ಸೆಲ್ ಬಂದಿತ್ತು. ಇದರ ಒಳಗೆ 1,980 ಗ್ರಾಂ ಪ್ರಮಾಣದ ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಇರುವುದು ಪತ್ತೆಯಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ಕೋರಿಯರ್ ಕೇಂದ್ರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಈ ಡ್ರಗ್ ಅನ್ನು ಪತ್ತೆ ಮಾಡಿದ್ದಾರೆ. ಸುಮಾರು 1 ಕೋಟಿಗೂ ಅಧಿಕ ಮೌಲ್ಯದ ಎಂಡಿಎಂಎ ಮಾತ್ರೆ ಇದರಲ್ಲಿ ಸಿಕ್ಕಿದೆ.

    ಹೊರದೇಶದಿಂದ ಯಾವುದೇ ವಸ್ತು ಪಾರ್ಸೆಲ್ ಬಂದರೆ, ಅದು ಕಸ್ಟಮ್ ಅಧಿಕಾರಿಗಳಿಗೆ ಗೊತ್ತಾಗುತ್ತದೆ. ಹೀಗಿರುವಾಗ ಅಷ್ಟೊಂದು ಪ್ರಮಾಣದ ಮಾದಕ ವಸ್ತು ವಿದೇಶದಿಂದ ಹೇಗೆ ಬರುತ್ತಿದೆ. ಇದರಲ್ಲಿ ಕಸ್ಟಮ್ ಅಧಿಕಾರಿಗಳು ಭಾಗಯಾಗಿದ್ದರಾ ಎಂಬ ಅನುಮಾನಗಳು ಮೂಡಿತ್ತು. ಡ್ರಗ್ ಮಾಫಿಯಾ ಒಂದು ದೊಡ್ಡ ನೆಟ್‍ವರ್ಕ್ ಆಗಿದ್ದು, ಇದರಲ್ಲಿ ಸ್ಯಾಂಡಲ್‍ವುಡ್‍ನ ಹಲವಾರು ಮಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಸದ್ಯ ನಟಿಯರಾದ ರಾಗಿಣಿ ಮತ್ತು ಸಂಜನಾ ಅರೆಸ್ಟ್ ಆಗಿದ್ದಾರೆ.

  • ವಿಚಿತ್ರ ವಿಗ್ ಮೂಲಕವೇ ಸಿಕ್ಕಿಬಿದ್ದ ಕಳ್ಳ

    ವಿಚಿತ್ರ ವಿಗ್ ಮೂಲಕವೇ ಸಿಕ್ಕಿಬಿದ್ದ ಕಳ್ಳ

    ತಿರುವನಂತಪುರಂ: ಕಳ್ಳಸಾಗಾಣಿಕೆದಾರರು ವಿವಿಧ ರೀತಿಯಲ್ಲಿ ಚಿನ್ನ, ವಜ್ರ, ಡ್ರಗ್ ಸೇರಿದಂತೆ ಮುಂತಾದವುಗಳನ್ನು ಕಳವು ಮಾಡುತ್ತಾರೆ. ಆದರೆ ಕೇರಳದ ಮೂಲದ ವ್ಯಕ್ತಿಯೊಬ್ಬ ವಿಚಿತ್ರವಾಗಿ ತಲೆ ಕೂದನ್ನು ಕತ್ತರಿಸಿದಾಗೆ ಕಾಣುವಂತೆ ನೆತ್ತಿಯ ಮೇಲೆ ವಿಗ್ ಧರಿಸಿಕೊಂಡು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

    ಆರೋಪಿಯನ್ನು ಮಲಪ್ಪುರಂನ ನೌಶಾದ್ ಎಂದು ಗುರುತಿಸಲಾಗಿದೆ. ಆರೋಪಿ ನೌಶಾದ್ ಯುಎಇಯ ಶಾರ್ಜಾದಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದನು. ಈತ ನೆತ್ತಿಯ ಮಧ್ಯದ ಸುತ್ತ ಕೂದಲನ್ನು ಬೋಳಿಸಿಕೊಂಡ ರೀತಿ, ತಲೆಯ ಮಧ್ಯ ಭಾಗದಲ್ಲಿ ವಿಗ್ ಅಡಿಯಲ್ಲಿ 1.13 ಕೆಜಿ ಚಿನ್ನವನ್ನು ಸಾಗಾಟ ಮಾಡಲು ಯತ್ನಿಸಿದ್ದನು.

    ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಸಿಐಎಎಲ್)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆತನ ವಿಗ್ ನೋಡಿ ಅನುಮಾನಗೊಂಡು ಪರಿಶೀಲಿಸಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದಾರೆ. ಆಗ ಆತನ ತಲೆ ಮೇಲಿದ್ದ ವಿಗ್ ಕೆಳಗೆ 1.13 ಕೆಜಿ ಚಿನ್ನ ಪತ್ತೆಯಾಗಿದೆ. ಚಿನ್ನವು ಪೇಸ್ಟ್ ರೀತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಈ ಹಿಂದೆ ಕಳ್ಳಸಾಗಾಣಿಕೆದಾರರು ತಮ್ಮ ದೇಹದ ವಿವಿಧ ಭಾಗಗಳಲ್ಲಿ ಕಳ್ಳಸಾಗಾಣೆ ಮಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಈ ರೀತಿ ವಿಗ್‍ನಲ್ಲಿ ಚಿನ್ನವನ್ನು ಇಟ್ಟುಕೊಂಡು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಏರ್‌ಪೋರ್ಟ್‌ನಲ್ಲಿ ಬರೋಬ್ಬರಿ 39.57 ಲಕ್ಷ ಮೌಲ್ಯದ ಚಿನ್ನ ಸೀಜ್!

    ಏರ್‌ಪೋರ್ಟ್‌ನಲ್ಲಿ ಬರೋಬ್ಬರಿ 39.57 ಲಕ್ಷ ಮೌಲ್ಯದ ಚಿನ್ನ ಸೀಜ್!

    ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 39.57 ಲಕ್ಷ ರೂ. ಬೆಲೆ ಬಾಳುವ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಶ್ರೀಲಂಕಾ ಮೂಲದ ಮೂವರು ಹಾಗೂ ಭಾರತದ ಓರ್ವ ಅಕ್ರಮವಾಗಿ ಚಿನ್ನವನ್ನು ವಿಮಾನದಲ್ಲಿ ಸಾಗಿಸಲು ಮುಂದಾಗಿದ್ದರು. ಆದರೆ ಆರೋಪಿಗಳು ಎಷ್ಟೇ ಚಾಣಾಕ್ಷ್ಯತನ ಮಾಡಿದರು ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಇಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ಕು ಮಂದಿ ಬೇರೆ ಬೇರೆಯಾಗಿ ಸುಮಾರು 1.2 ಕೆ.ಜಿ ಚಿನ್ನವನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ 39.57 ಲಕ್ಷ ಮೌಲ್ಯದ 1.2 ಕೆಜಿ ಚಿನ್ನವನ್ನ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಹಾಗೆಯೇ ಅಕ್ರಮವಾಗಿ ಚಿನ್ನ ಸಾಗಿಸ್ತಿದ್ದ ನಾಲ್ವರನ್ನೂ ಕೂಡ ಬಂಧಿಸಲಾಗಿದೆ.