Tag: currency

  • ಗಣೇಶ ಹಬ್ಬಕ್ಕೆ ಕೈಲಾಸ ದೇಶದ ಕರೆನ್ಸಿ ಬಿಡುಗಡೆ ಮಾಡಿದ ನಿತ್ಯಾನಂದ

    ಗಣೇಶ ಹಬ್ಬಕ್ಕೆ ಕೈಲಾಸ ದೇಶದ ಕರೆನ್ಸಿ ಬಿಡುಗಡೆ ಮಾಡಿದ ನಿತ್ಯಾನಂದ

    – ಸನ್ಯಾಸಿಗಳ ತಂಡ ಸಂಶೋಧಿಸಿ ಕರೆನ್ಸಿ ತಯಾರಿಸಿದೆ ಎಂದ ನಿತ್ಯಾ

    ನವದೆಹಲಿ: ಕೊರೊನಾ ಅಟ್ಟಹಾಸದಿಂದಾಗಿ ಭಾರತದಲ್ಲಿ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸುವ ನಿರ್ಧಾರ ಕೈಗೊಂಡಿದ್ದರೆ, ಅತ್ತ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಇದೇ ದಿನದಂದು ತನ್ನ ಕೈಲಾಸ ದೇಶದ ರಿಸರ್ವ್ ಬ್ಯಾಂಕ್ ಘೋಷಿಸಿದ್ದಾನೆ.

    ಕೊರೊನಾ ಹಿನ್ನೆಲೆ ಸಾರ್ವಜನಿಕ ಗಣೇಶೋತ್ಸವಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಎಲ್ಲರೂ ಮನೆಯಲ್ಲೇ ಸರಳವಾಗಿ ಹಬ್ಬ ಆಚರಿಸುತ್ತಿದ್ದಾರೆ. ಆದರೆ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಇಕ್ವಿಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪದಲ್ಲಿ ಅತ್ಯಾಚಾರ ಆರೋಪಿ ನಿತ್ಯಾನಂದ ತನ್ನದೇ ಕೈಲಾಸ ದೇಶದ ರಿಸರ್ವ್ ಬ್ಯಾಂಕ್‍ನ್ನು ತನ್ನ ಸಹಚರರೊಂದಿಗೆ ಲಾಂಚ್ ಮಾಡಿದ್ದಾನೆ.

    ನಾನು ಹಿಂದೂ ಧರ್ಮದ ಸುಧಾರಕನಲ್ಲ, ನಾನು ಪುನರುಜ್ಜೀವನಗೊಳಿಸುವವನು ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ಕರೆನ್ಸಿ ಬಿಡುಗಡೆ ಮಾಡಿದ ಕುರಿತ ಫೋಟೋಗಳನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿರುವ ನಿತ್ಯಾನಂದ, ಗಣೇಶ ಚತುರ್ಥಿಯ ಅಂಗವಾಗಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಕರೆನ್ಸಿಯನ್ನು ಗಣೇಶನ ಹಾಗೂ ಪರಮಶಿವ ಮತ್ತು ಗುರು ಹಿಂದೂ ಧರ್ಮದ ಪ್ರಮುಖ, ಜಗದ್ಗುರು ಮಹಾಸನ್ನಿಧಾನಂ, ದೇವರ ಪ್ರತೀಕವಾಗಿರುವ ಭಗವಾನ್ ನಿತ್ಯಾನಂದ ಪರಮ ಶಿವಂ ಪಾದಗಳಿಗೆ ಅರ್ಪಿಸಲಾಗುತ್ತಿದೆ ಎಂದು ಪೋಸ್ಟ್ ಮಾಡಿದ್ದಾನೆ.

    ಕೈಲಾಸ ಹಾಗೂ ಅದರ ಸನ್ಯಾಸಿಗಳ ತಂಡ 100ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಹಾಗೂ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನ ನಡೆಸಿ, ಕರೆನ್ಸಿ ತಯಾರಿಸಲಾಗಿದೆ ಎಂದು ಪೋಸ್ಟ್‍ನಲ್ಲಿ ಬರೆಯಲಾಗಿದೆ. ಅಲ್ಲದೆ ನಿತ್ಯಾನಂದ ದೈವಿಕ ಪಾವಿತ್ರ್ಯತೆ ಹಾಗೂ ನೇರ ಭಾಷಣಗಳ ಮೂಲಕ ಕರೆನ್ಸಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾನೆ.

    On the auspicious occasion of Ganesha Chaturti in KAILASA, the Reserve Bank of KAILASA offers at the feet of Ganapati,…

    Posted by KAILASA’s HDH Nithyananda Paramashivam on Friday, August 21, 2020

    ಈ ಕುರಿತು ಭಾಷಣ ಮಾಡಿರುವ ನಿತ್ಯಾನಂದ, ಈ ಆರ್ಥಿಕ ನೀತಿಯು ಆಂತರಿಕ ಕರೆನ್ಸಿ ವಿನಿಮಯ ಹಾಗೂ ಬಾಹ್ಯ ವಿಶ್ವ ಕರೆನ್ಸಿ ವಿನಿಮಯವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಅಲ್ಲದೆ ಕೈಲಾಸ ದೇಶವು ಮತ್ತೊಂದು ರಾಷ್ಟ್ರದೊಂದಿಗೆ ಎಂಒಯುಗೆ ಸಹಿ ಹಾಕಿದ್ದು, ನಮ್ಮ ರಿಸರ್ವ್ ಬ್ಯಾಂಕ್‍ಗೆ ಆತಿಥ್ಯವಹಿಸಲಿದೆ ಎಂದು ತಿಳಿಸಿದ್ದಾನೆ. ಆದರೆ ಯಾವ ದೇಶ ಎಂಬುದನ್ನು ನಿತ್ಯಾನಂದ ಹೇಳಿಲ್ಲ.

    ನಿತ್ಯಾನಂದ ತನ್ನ ದೇಶಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದು, ಇದಕ್ಕೆ ತನ್ನನ್ನೇ ಪ್ರಧಾನಿಯಾಗಿ ಘೋಷಿಸಿಕೊಂಡಿದ್ದಾನೆ. ಕಳೆದ ವರ್ಷ ನವೆಂಬರ್‍ನಲ್ಲಿ ಇಂತಹದ್ದೊಂದು ದೇಶ ಕಟ್ಟುತ್ತಿರುವ ಕುರಿತು ನಿತ್ಯಾನಂದ ಮಾಹಿತಿ ನೀಡಿದ್ದ. ನಿತ್ಯಾನಂದನ ವಿರುದ್ಧ 50 ಕ್ಕೂ ಹೆಚ್ಚು ನ್ಯಾಯಾಲಯಗಳಲ್ಲಿ ಪ್ರಕರಣಗಳಿದ್ದು, ವಿಚಾರಣೆಗೆ ಹಾಜರಾಗದೆ ಇಕ್ವಿಡಾರ್ ಗೆ ಪರಾರಿಯಾಗಿದ್ದಾನೆ.

    ಕೈಲಾಸ ಎಲ್ಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದು, ಇಕ್ವಿಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪವನ್ನು ನಿತ್ಯಾನಂದ ಖರೀದಿಸಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಇಕ್ವಿಡಾರ್ ಇದನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ವ್ಯಕ್ತಿಗೆ ದ್ವೀಪವನ್ನು ನೀಡಿಲ್ಲ ಎಂದು ಹೇಳಿದೆ.

  • ವಿದೇಶಿ ಕರೆನ್ಸಿ ತೋರಿಸಿ 18 ಸಾವಿರ ಜೇಬಿಗೆ ಇಳಿಸಿ ವಿದೇಶಿಗರು ಪರಾರಿ

    ವಿದೇಶಿ ಕರೆನ್ಸಿ ತೋರಿಸಿ 18 ಸಾವಿರ ಜೇಬಿಗೆ ಇಳಿಸಿ ವಿದೇಶಿಗರು ಪರಾರಿ

    ಗದಗ: ಬಂಗಾರದ ಮೂಗುತಿ ಖರೀದಿಗಾಗಿ ವಿದೇಶಿಗರ ಸೋಗಿನಲ್ಲಿ ಬಂದು ಬರೋಬ್ಬರಿ 18 ಸಾವಿರ ರೂಪಾಯಿ ಎಗರಿಸಿ ಪರಾರಿಯಾದ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಶ್ರೀ ಲಕ್ಷ್ಮೀ ವೇಂಕಟೇಶ್ವರ ಜುವೆಲರ್ಸ್ ಶಾಪ್‍ಗೆ ಬಂದ ಯುವಕ-ಯುವತಿಯರಿಬ್ಬರು ವಿದೇಶಿಗರ ಸ್ಟೈಲ್‍ನಲ್ಲಿ ಇಂಗ್ಲಿಷ್ ಮಾತನಾಡಿದ್ದಾರೆ. ಚಿನ್ನದ ಮೂಗುತಿ ಬೇಕೆಂದು ಹೇಳಿ ಮೂಗುತಿ ಖರೀದಿಸಿ ವಿದೇಶಿ ಕರೆನ್ಸಿ ನೀಡಿದ್ದಾರೆ. ಈ ನೋಟು ನಮ್ಮಲ್ಲಿ ನಡೆಯುವುದಿಲ್ಲ, ಭಾರತೀಯ ನೋಟು ಕೊಡಿ ಎಂದು ಅಂಗಡಿ ಮಾಲೀಕ ಕೇಳಿದ್ದಾರೆ. ನಮ್ಮಲ್ಲಿ ಭಾರತೀಯ ನೋಟು ಇಲ್ಲ, ಅದು ಹೇಗಿರುತ್ತೆ ತೋರಿಸಿ ಎಂದು ಪುಸಲಾಯಿಸಿದ್ದಾರೆ.

    ಆಗ ಅಂಗಡಿ ಮಾಲೀಕ, ಮೊದಲು ತನ್ನ ಬಳಿಯಿರುವ 2 ಸಾವಿರದ ನೋಟು ತೋರಿಸಿದ್ದಾರೆ. ನಂತರ ಬೇರೆ ಯಾವ ಯಾವ ನೋಟು ಇದೆ ತೋರಿಸಿ ಎಂದಿದ್ದಾರೆ. ಆಗ 10 ರೂಪಾಯಿನಿಂದ ಹಿಡಿದು 2 ಸಾವಿರ ರೂಪಾಯಿವರೆಗೆ ಇರುವ ಕಂತೆ ಕಂತೆ ನೋಟುಗಳನ್ನು ತೋರಿಸಿದ್ದಾರೆ. ಆಗ ಈ ಕಳ್ಳರು ಆ ನೋಟಿನ ಕಂತೆಯನ್ನು ಹಿಡಿದು, ನಂಬರ್, ಭಾಷೆ, ಚಿತ್ರ ಎಲ್ಲವನ್ನು ನೋಡುವ ರೀತಿ ನಟಿಸಿದ್ದಾರೆ. ಆಗ ಅಲ್ಲಿದ್ದ ಯುವತಿ ಮಾಲೀಕನ ಗಮನ ಬೇರೆ ಕಡೆ ಸೇಳೆದಾಗ ಯುವಕ 18 ಸಾವಿರ ರೂಪಾಯಿ ಹಣವನ್ನು ಜೇಬಿಗೆ ಇಳಿಸಿಕೊಂಡಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಂತರ ಬ್ಯಾಂಕ್‍ಗೆ ಹೋಗಿ ಕರೆನ್ಸಿ ಬದಲಿಸಿಕೊಂಡು ಬರುವುದಾಗಿ ಹೇಳಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅರ್ಧಗಂಟೆ ನಂತರ ಬೇರೆಯವರಿಗೆ ಹಣ ನೀಡಬೇಕಾದ ವೇಳೆ ಹಣವನ್ನು ಎಣಿಸಿಕೊಂಡಾಗ ಬರೋಬ್ಬರಿ 18 ಸಾವಿರ ರೂಪಾಯಿ ಇಲ್ಲವಾಗಿದೆ. ಸಿಸಿ ಕ್ಯಾಮೆರಾ ಚೆಕ್ ಮಾಡಿದಾಗ ವಿದೇಶಿಗರ ಅಸಲಿಯತ್ತು ಗೊತ್ತಾಗಿದೆ. ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದೇಶಿ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಹಣದ ಹರಿವು ಹೆಚ್ಚಳ, 2021-22ರಲ್ಲಿ ಶೇ.7.4 ಜಿಡಿಪಿ ಗುರಿ – ಆರ್ಥಿಕ ಚೇತರಿಕೆಗೆ ಆರ್‌ಬಿಐ ಮದ್ದು

    ಹಣದ ಹರಿವು ಹೆಚ್ಚಳ, 2021-22ರಲ್ಲಿ ಶೇ.7.4 ಜಿಡಿಪಿ ಗುರಿ – ಆರ್ಥಿಕ ಚೇತರಿಕೆಗೆ ಆರ್‌ಬಿಐ ಮದ್ದು

    – ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿಕೆ
    – ಜಿ20 ರಾಷ್ಟ್ರಗಳ ಪೈಕಿ ಭಾರತದ ಬೆಳವಣಿಗೆ ದರ ಹೆಚ್ಚು

    ನವದೆಹಲಿ : ಕೊರೊನಾ ವೈರಸ್ ಸಂಕಷ್ಟ ಹಿನ್ನಲೆಯಲ್ಲಿ ದೇಶದ ಆರ್ಥಿಕ ಪ್ರಗತಿ ಕುಸಿದಿದ್ದು, ಈ ಹಣಕಾಸು ವರ್ಷದಲ್ಲಿ ಶೇ.1.9 ಆರ್ಥಿಕ ಬೆಳವಣಿಗೆ ದರ(ಜಿಡಿಪಿ) ದಾಖಲಿಸುವ ವಿಶ್ವಾಸವಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

    ಕೊರೊನಾ ವೈರಸ್ ನಿಂದಾಗಿ ದೇಶದ ಆರ್ಥಿಕತೆ ಕಷ್ಟ ಎದುರಾಗಿದೆ. ಹಾಗಿದ್ದರೂ ಜಿ-20 ರಾಷ್ಟ್ರಗಳ ಪೈಕಿ ಭಾರತ ಅತಿ ಹೆಚ್ಚು ಶೇ.1.9 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ಆದರೆ 2021-22ರ ಅವಧಿಯಲ್ಲಿ ಶೇ.7.4 ಜಿಡಿಪಿ ದಾಖಲಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಮುಖ್ಯಾಂಶಗಳು
    – ಭಾರತದ ಆರ್ಥಿಕತೆಯನ್ನು ಆರ್‌ಬಿಐ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಕೊರೊನಾ ವೈರಸ್ ನಿಂದ ಹೊಡ್ಡ ಆರ್ಥಿಕ ಹಿನ್ನಡೆಯಾಗಿದೆ. 2020ರಲ್ಲಿ ಅತ್ಯಂತ ಕೆಟ್ಟ ಹಿಂಜರಿತವಾಗಲಿದೆ ಎಂದು ಐಎಂಎಫ್ ಹೇಳಿದೆ. ಮಾರ್ಚ್ 27ರ ನಂತರ ವಿಶ್ವದ ಆರ್ಥಿಕತೆ ಕುಸಿದಿದ್ದು ಈ ವೇಳೆ ಕೆಲವೇ ಕೆಲವು ದೇಶಗಳು ಉತ್ತಮ ಪ್ರಗತಿ ದರವನ್ನು ಕಾಯ್ದುಕೊಂಡಿದ್ದು, ಅದರಲ್ಲಿ ಭಾರತವೂ ಒಂದಾಗಿದೆ.

    – ಚೆಸ್ಟ್ ಮೂಲಕ ಮಾರ್ಚ್ ಒಂದರಿಂದ 1.20 ಲಕ್ಷ ಕೋಟಿ ರೂ. ಹೊಸ ಕರೆನ್ಸಿ ಕರೆನ್ಸಿ ಚಲಾವಣೆಗೆ ಬಂದಿದೆ. ಕೋವಿಡ್-19 ನಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಪೊರೇಟ್ ಕಂಪನಿಗಳ ವ್ಯವಹಾರಕ್ಕೆ ಸಮಸ್ಯೆಯಾಗಿದೆ. ಈ ಕಂಪನಿಗಳಿಗೆ ದೀರ್ಘಾವಧಿ ಸಾಲ ಒದಗಿಸುವ ಬಗ್ಗೆ ಆರ್‌ಬಿಐ ಗಮನ ವಹಿಸಲಿದೆ.

    – ಉತ್ಪಾದನಾ ವಲಯಗಳಲ್ಲಿ ಹೆಚ್ಚು ನಷ್ಟವಾಗಿದ್ದು ಶೇ.25-30 ಬೇಡಿಕೆ ಕುಸಿದಿದೆ ರಫ್ತು ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಕೇವಲ ಭಾರತ ಮಾತ್ರವಲ್ಲದೇ ಜಾಗತಿಕ ಆರ್ಥಿಕತೆ 9 ಟ್ರಿಲಿಯನ್ ಡಾಲರ್ ಕುಸಿತ ಕಂಡಿದ್ದು ಉದ್ಯೋಗ ವಲಯಕ್ಕೆ ಭಾರೀ ಪೆಟ್ಟು ಬಿದ್ದಿದೆ.

    – ರೆಪೋ ದರಲ್ಲಿ 25 ಬೇಸಿಸ್ ಅಂಕ ಇಳಿಸಿದೆ. ಈ ಮೂಲಕ ಶೇ.4. ಇದ್ದ ರೆಪೋ ದರ ಶೇ.3.75ಕ್ಕೆ ಇಳಿಕೆಯಾಗಿದೆ. (ವಾಣಿಜ್ಯ ಬ್ಯಾಂಕುಗಳು ಆರ್‍ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು)

    – 90 ದಿನಗಳಲ್ಲಿ ಸಾಲ ಮರುಪಾವತಿ ಮಾಡದವರಿಗೆ ಆರ್‌ಬಿಐ ವಿನಾಯ್ತಿಯಡಿ ರಿಯಾಯಿತಿ. ಈ ಸಾಲವನ್ನು ಎನ್‍ಪಿಎ(ವಸೂಲಾಗದ ಸಾಲ) ಎಂದು ಪರಿಗಣಿಸುವುದಿಲ್ಲ ಮತ್ತು ಕ್ರೆಡಿಟ್ ಸ್ಕೋರ್ ಇಳಿಕೆಯಾಗುವುದಿಲ್ಲ.

    – ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ಗೆ (ನಬಾರ್ಡ್) 25 ಸಾವಿರ ಕೋಟಿ ರೂ., ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‍ಗೆ (ಎಸ್‍ಐಡಿಬಿ) 15 ಸಾವಿರ ಕೋಟಿ ರೂ., ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‍ಗೆ (ಎನ್‍ಎಚ್‍ಬಿ) 10 ಸಾವಿರ ಕೋಟಿ ರೂ. ನೀಡಲು ಒಪ್ಪಿಗೆ. ವಿಶೇಷ ಮರು ಬಂಡವಾಳ ಪೂರೈಕೆಗಾಗಿ ಒಟ್ಟು 50 ಸಾವಿರ ಕೋಟಿ ರೂಪಾಯಿ ಅನುದಾನ.

    – ವಿದೇಶಿ ವ್ಯಾಪಾರದ ಅಲ್ಪಾವಧಿಯ ಕೊರತೆಯನ್ನು ನೀಗಿಸಲು ಸಂಗ್ರಹಿಸುವ ವಿದೇಶಿ ವಿನಿಮಯ ನಮ್ಮಲ್ಲಿ 476.5 ಶತಕೋಟಿ ಡಾಲರ್ ನಷ್ಟಿದೆ. ಇದು 11.8 ತಿಂಗಳ ಆಮದು ನಿರ್ವಹಣೆಗೆ ಸಾಕಾಗುತ್ತದೆ.

    – ದೇಶದಲ್ಲಿ ಮೊಬೈಲ್ ಬ್ಯಾಂಕಿಂಗ್ ಬಳಕೆ ಹೆಚ್ಚಾಗಿದ್ದು, ಶೇ. 91ರಷ್ಟು ಎಟಿಎಂಗಳು ಕಾರ್ಯ ನಿರ್ವಹಿಸುತ್ತಿದೆ. ಬ್ಯಾಕಿಂಗ್ ಕ್ಷೇತ್ರದಲ್ಲಿ ಸಮರ್ಪಕವಾಗಿ ಹಣದ ಹರಿವು ಕಾಪಾಡಿಕೊಂಡಿದ್ದು ಬ್ಯಾಂಕುಗಳಿಗೆ ಹಣ ಕೊರತೆ ಉಂಟಾಗಿಲ್ಲ. ಈ ಸಂಬಂಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಭಾರತ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ.

    – ಭಾರತದಲ್ಲಿ ಅಗತ್ಯ ಪ್ರಮಾಣ ದಿನಸಿ ದಾಸ್ತಾನು ಹೊಂದಿದ್ದು, ಈ ಬಾರಿ ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದ್ದು, ಕೃಷಿ ವಲಯ ಚೇತರಿಕೆ ಕಾಣಲಿದೆ.

  • ಉತ್ತರ ಕನ್ನಡದ ಬ್ಯಾಂಕ್‍ಗಳಲ್ಲಿ ಕೊಳೆಯುತ್ತಿವೆ ನಾಲ್ಕೂವರೆ ಕೋಟಿ ರೂ.ಗಳ ಹತ್ತು ರೂ. ನಾಣ್ಯ

    ಉತ್ತರ ಕನ್ನಡದ ಬ್ಯಾಂಕ್‍ಗಳಲ್ಲಿ ಕೊಳೆಯುತ್ತಿವೆ ನಾಲ್ಕೂವರೆ ಕೋಟಿ ರೂ.ಗಳ ಹತ್ತು ರೂ. ನಾಣ್ಯ

    ಕಾರವಾರ: ಹತ್ತು ರೂ. ನಾಣ್ಯದ ಕುರಿತ ಅಪ ಪ್ರಚಾರದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಬ್ಯಾಂಕ್‍ಗಳಲ್ಲಿ ನಾಲ್ಕೂವರೆ ಕೋಟಿ ರೂ. ಮೊತ್ತದ ಹತ್ತು ರೂಪಾಯಿ ಮುಖಬೆಲೆಯ ನಾಣ್ಯಗಳು ಚಲಾವಣೆಯಾಗದೇ ಉಳಿದಿವೆ.

    ಹತ್ತು ರೂ. ನಾಣ್ಯವನ್ನು ಆರ್ ಬಿಐ ರದ್ದುಪಡಿಸಿದೆ ಎಂಬ ಸುಳ್ಳು ವದಂತಿಯಿಂದಾಗಿ ಗ್ರಾಹಕರು ಇವುಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಸುಳ್ಳು ಸುದ್ದಿಯಿಂದಾಗಿ ಜಿಲ್ಲೆಯ ವಿವಿಧ ಬ್ಯಾಂಕ್ ಗಳಲ್ಲಿ ಕೂಡಲ್ಪಟ್ಟ 10 ರೂ. ನಾಣ್ಯ ಜಿಲ್ಲೆಯ ವಿವಿಧ ಕರೆನ್ಸಿ ಚೆಸ್ಟ್ ಗಳಲ್ಲಿ (ಹಣ ಪೂರೈಸುವ ಬ್ಯಾಂಕ್ ಗಳು)ನಾಲ್ಕೂವರೆ ಕೋಟಿ ರೂ. ಮೊತ್ತದ 10 ರೂ. ನಾಣ್ಯಗಳು ಸಂಗ್ರಹಗೊಂಡು ಕೊಳೆಯುತ್ತಿದೆ.

    ರಿಸವ್ ಬ್ಯಾಂಕ್ ಗೂ ಬೇಡವಾದ ಹತ್ತುರೂ ನಾಣ್ಯ!
    ಜಿಲ್ಲೆಯ ವಿವಿಧ ಬ್ಯಾಂಕ್‍ಗಳಲ್ಲಿ ಸಂಗ್ರಹವಾದ ನಾಲ್ಕೂವರೆ ಕೋಟಿ ರೂ. ಮೊತ್ತದ ಹಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಪಡೆಯಲು ಸಿದ್ಧವಿಲ್ಲ. ಇತ್ತ ಮಾರುಕಟ್ಟೆಗೆ ಬಿಡಲು ಜನರು ಈ ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಕಳೆದ ವರ್ಷ ನೋಟ್ ಬ್ಯಾನ್ ಸಂದರ್ಭದಲ್ಲಿ ಹತ್ತು ರೂ. ನಾಣ್ಯ ಸಹ ಬ್ಯಾನ್ ಆಗಿದೆ ಎಂಬ ಸುಳ್ಳು ವದಂತಿಯಿಂದಾಗಿ ಜಿಲ್ಲೆಯ ಗ್ರಾಹಕರು ಅನುಮಾನದಿಂದ ನೋಡುವಂತಾಗಿದೆ. ಸರ್ಕಾರ ನಾಣ್ಯವನ್ನು ರದ್ದುಪಡಿಸಿಲ್ಲ ಎಂದು ಅಧಿಕೃತ ಪ್ರಕಟಣೆ ನೀಡಿದರೂ, ಜನ ಮಾತ್ರ ನಂಬುತ್ತಿಲ್ಲ. ತಮ್ಮ ಬಳಿ ಇದ್ದ ನಾಣ್ಯವನ್ನು ಸಹ ಬ್ಯಾಂಕ್‍ಗೆ ಜಮಾವಣೆ ಮಾಡಿದ್ದಾರೆ.

    ಇದೆಲ್ಲದರ ಮಧ್ಯೆ ನಕಲಿ ನಾಣ್ಯಗಳು ಚಲಾವಣೆಯಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡಿ, ಹತ್ತು ರೂ. ನಾಣ್ಯ ಸಂಪೂರ್ಣವಾಗಿ ಅಘೋಷಿತ ರದ್ದಾಗಿದೆ. ಜಿಲ್ಲೆಯ ವಿವಿಧ ಕರೆನ್ಸಿ ಚೆಸ್ಟ್ ಗಳಲ್ಲಿ 4.5ಕೋಟಿ ರೂ. ಜಮಾವಣೆಯಾಗಿದೆ ಎನ್ನುತ್ತದೆ ಲೀಡ್ ಬ್ಯಾಂಕ್. ಆರ್ ಬಿಐ ಸಹ ಬ್ಯಾಂಕ್ ನಿಂದ ಈ ಕಾಯಿನ್‍ಗಳನ್ನು ತೆಗೆದಯಕೊಳ್ಳದೆ ಮರು ಚಲಾವಣೆ ಮಾಡಿ ಎಂದು ಹೇಳುತ್ತದೆ. ಆದರೆ ಗ್ರಾಹಕರು ಬ್ಯಾಂಕ್‍ನಿಂದ ಈ ನ್ಯಾಣ್ಯಗಳನ್ನು ಪಡೆಯುತ್ತಿಲ್ಲ. ಹೀಗಾಗಿ ಖಜಾನೆಯಲ್ಲಿಯೇ ಉಳಿಯುವಂತಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಎಸ್.ಪಿಂಜಾರಾ ಬೇಸರ ವ್ಯಕ್ತಪಡಿಸಿದ್ದಾರೆ.

    10-20 ರೂ. ನೋಟಿಗೂ ಬಂತು ಬರ
    ಹತ್ತು ಮತ್ತು ಇಪ್ಪತ್ತು ರೂ. ನೋಟುಗಳಿಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಿದೆ. ಹೋಟೆಲ್, ಅಂಗಡಿ ಮುಂಗಟ್ಟಿನಲ್ಲಿ ಗ್ರಾಹಕರಿಗೆ ಚಿಲ್ಲರೆ ನೀಡಲು ದೊಡ್ಡ ಕೊರತೆ ಎದುರಾಗಿದ್ದು, ವ್ಯಾಪಾರಸ್ಥರು ಪರದಾಡುವಂತಾಗಿದೆ.

    ಜಿಲ್ಲೆಯ ಬ್ಯಾಂಕ್‍ಗಳಿಗೂ ಈ ನೋಟುಗಳ ಸರಬರಾಜು ಇಳಿಮುಖವಾಗಿದ್ದು, ನಾಲ್ಕು ತಿಂಗಳಿಗೊಮ್ಮೆ ಆರ್ ಬಿಐನಿಂದ ಬ್ಯಾಂಕ್‍ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ವೇಳೆ ದೊಡ್ಡ ಮೊತ್ತದ ನೋಟುಗಳು ಅಧಿಕ ಸರಬರಾಜಾಗುತ್ತಿವೆ. ನಂತರ ಚಿಕ್ಕ ಮೊತ್ತದ ನೋಟುಗಳು ಸರಬರಾಜಾಗುತ್ತಿವೆ. ಕಳೆದ ದೀಪಾಳಿಯಲ್ಲಿ ಜಿಲ್ಲೆಗೆ 40 ಲಕ್ಷ ರೂ.ನಷ್ಟು ಮೊತ್ತದ ಸಣ್ಣ ಮುಖಬೆಲೆಯ ನೋಟುಗಳು ಪೂರೈಕೆಗೊಂಡಿದ್ದವು. ನಂತರ ಈ ನೋಟುಗಳ ಪೂರೈಕೆಯಾಗಿಲ್ಲ ಎಂಬುದು ಬ್ಯಾಂಕ್ ಮೂಲದ ಮಾಹಿತಿ.

  • ಕರೆನ್ಸಿ ಹಾಕಿಸಲು ಬಂದವ್ರು ಪೊಲೀಸರ ವಶವಾದ್ರು

    ಕರೆನ್ಸಿ ಹಾಕಿಸಲು ಬಂದವ್ರು ಪೊಲೀಸರ ವಶವಾದ್ರು

    ಮಡಿಕೇರಿ: ಖೋಟಾ ನೋಟಿನ ಜಾಲವೊಂದನ್ನು ಬೇಧಿಸುವಲ್ಲಿ ಮಡಿಕೇರಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಇಬ್ಬರು ಆರೋಪಿಗಳನ್ನು ಬಂಧಿಸಿ 2 ಸಾವಿರ ಮುಖ ಬೆಲೆಯ 5 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಮಡಿಕೇರಿ ತಾಲೂಕಿನ ಕುಲಂಜಿ ನಿವಾಸಿ ಅಮೀರ್ ಸೋಹೈಲ್ (20) ಹಾಗೂ ವಿರಾಜಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ನಿವಾಸಿ ಯು.ವೈ ಯೂನೀಸ್ (20) ಮತ್ತೊಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ಖೋಟಾ ನೋಟು ತಯಾರಿಸುವ ಜಾಲದಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.

    ಸೆಪ್ಟೆಂಬರ್ 10 ರ ಸಂಜೆ 4 ಗಂಟೆ ಸುಮಾರಿಗೆ ಮಡಿಕೇರಿ ಕಾಲೇಜು ರಸ್ತೆಯಲ್ಲಿರುವ ಅರುಣ್ ಮಾರ್ಕೆಟಿಂಗ್ ಕರೆನ್ಸಿ ಸೆಂಟರ್ ಗೆ ಆರೋಪಿ ಅಮೀರ್ ಸೋಹೈಲ್ ನಕಲಿ ನೋಟು ಕೊಟ್ಟು ಕರೆನ್ಸಿ ಹಾಕುವಂತೆ ಅಂಗಡಿ ಮಾಲೀಕ ಮುಕುಂದ ಅವರಿಗೆ ಕೊಟ್ಟಿದ್ದಾನೆ. ನೋಟನ್ನು ಗಮನಿಸಿ ಸಂಶಯಗೊಂಡ ಅಂಗಡಿ ಮಾಲೀಕ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ನೇತೃತ್ವದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಬಿ.ಪಿ.ದಿನೇಶ್ ಕುಮಾರ್, ಮಡಿಕೇರಿ ನಗರ ಠಾಣೆಯ ಇನ್‍ಸ್ಪೆಕ್ಟರ್ ಅನೂಪ್ ಮಾದಪ್ಪ ಹಾಗೂ ಸಬ್‍ಇನ್‍ಸ್ಪೆಕ್ಟರ್ ಸದಾಶಿವ ನೇತೃತ್ವದ ಸಿಬ್ಬಂದಿ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ.

  • ನೆಲಮಂಗಲದಲ್ಲಿ 6.84 ಲಕ್ಷ ರೂ. ಮೌಲ್ಯದ ಖೋಟಾನೋಟು ಜಪ್ತಿ: ಮೂವರ ಬಂಧನ

    ನೆಲಮಂಗಲದಲ್ಲಿ 6.84 ಲಕ್ಷ ರೂ. ಮೌಲ್ಯದ ಖೋಟಾನೋಟು ಜಪ್ತಿ: ಮೂವರ ಬಂಧನ

    ಸಾಂದರ್ಭಿಕ ಚಿತ್ರ

    ಬೆಂಗಳೂರು: ನಗರದಲ್ಲಿ ದಿನೇ ದಿನೇ ಖೋಟಾನೋಟು ಹಾವಳಿ ಹೆಚ್ಚಾಗುತ್ತಿದ್ದು, ಇಂದು ಸಹ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಹಾಗೂ ನಾಯಕನಹಳ್ಳಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ನೆಲಮಂಗಲದ ಬಳಿ ಸುಮಾರು 6.84 ಲಕ್ಷ ರೂಪಾಯಿ ಮೌಲ್ಯದ ಖೋಟಾನೋಟನ್ನು ವಶಪಡಿಸಿಕೊಂಡಿದ್ದಾರೆ.

    ನಗರದ ಹೊರವಲಯವಾದ ನೆಲಮಂಗಲದ ಸುತ್ತ-ಮುತ್ತ ಅಸಲಿ ನೋಟಿನಂತೆ ಕಾಣುವ 2 ಸಾವಿರ ಮುಖಬೆಲೆಯ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಖಚಿತ ಮಾಹಿತಿ ಮೇರೆಗೆ ಎನ್‍ಐಎ ಹಾಗೂ ಮಾದನಾಯಕನಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಖೋಟಾನೋಟು ಚಲಾವಣೆಯಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತರಿಂದ 2 ಸಾವಿರ ಮುಖಬೆಲೆಯ ಸುಮಾರು 6 ಲಕ್ಷದ 84 ಸಾವಿರ ರೂಪಾಯಿ ಮೌಲ್ಯದ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತಿದ್ದು, ಇವರು ಖೋಟಾನೋಟು ದಂಧೆಯಲ್ಲಿ ಸಕ್ರಿಯವಾಗಿ ನಿರತರಾಗಿದ್ದಾರೆ. ಅಲ್ಲದೇ ಸಾಕಷ್ಟು ಬಾರಿ ಖೋಟಾನೋಟು ಪ್ರಕರಣದಲ್ಲಿ ಜೈಲಿಗೆ ಸಹ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಘಟನೆ ಸಂಬಂಧ ನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews