Tag: Cure

  • ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಗೆದ್ದ 1 ವರ್ಷದ ಹೆಣ್ಣು ಮಗು

    ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಗೆದ್ದ 1 ವರ್ಷದ ಹೆಣ್ಣು ಮಗು

    ಚಿಕ್ಕಬಳ್ಳಾಪುರ: ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಂದು ವರ್ಷದ ಹೆಣ್ಣು ಮಗು ಕೊರೊನಾದಿಂದ ಗುಣಮುಖವಾಗಿದೆ.

    ಮಹಾರಾಷ್ಟ್ರದಿಂದ ಒಂದು ವರ್ಷದ ಮಗು ಸಮೇತ ದಂಪತಿ ಚಿಕ್ಕಬಳ್ಳಾಪುರ ಜಿಲ್ಲೆಗ ಆಗಮಿಸಿದ್ದರು. ಮೇ 25ರಂದು ಒಂದು ವರ್ಷದ ಹೆಣ್ಣು ಮಗುವಿಗೆ ಕೊರೊನಾ ದೃಢವಾಗಿತ್ತು. ಅಂದೇ ಮಗುವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇದಲ್ಲದೇ ಈ ಮಗುವಿನ ತಂದೆ ತಾಯಿ ಸಹ ಕೊರೊನಾಗೆ ತುತ್ತಾಗಿದ್ದರು. ಅವರು ಸಹ ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಒಂದಡೆ ಕೊರೊನಾ ಪಾಸಿಟಿವ್ ಮತ್ತು ಅದರ ಜೊತೆಗೆ (ಎಸ್‍ಎಎಮ್) ತೀವ್ರ ತರವಾದ ಅಪೌಷ್ಟಿಕತೆಯಿಂದ ಸಹ ಮಗು ಬಳಲುತ್ತಿತ್ತು. ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ಮಗು ದಾಖಲಾಗುವ 7.4 ಕೆಜಿ ಇದ್ದ ಮಗು ಡಿಸ್ಚಾರ್ಜ್ ವೇಳೆ 8.7 ಕೆಜಿ ತೂಕವಿದ್ದು, ತೂಕದಲ್ಲಿ ಸಹ ಏರಿಕೆ ಆಗಿದೆ. ಅಪೌಷ್ಟಿಕತೆ ನಡುವೆಯೂ ಕೊರೊನಾ ಗೆದ್ದು ಮಗು ಗುಣಮುಖವಾಗಿದೆ. ತಂದೆ ತಾಯಿ ಜೊತೆ ಮಗು ಸಹ ಗುಣಮುಖವಾಗಿ ಸದ್ಯ ಕ್ಷೇಮವಾಗಿ ಮನೆ ಸೇರುವಂತಾಗಿದೆ.

  • ಕೊರೊನಾದಿಂದ ಗುಣಮುಖನಾದ ಪಾಷಾಗೆ ಅದ್ಧೂರಿ ಸ್ವಾಗತ – ಪಟಾಕಿ ಸಿಡಿಸಿ, ತೆರೆದ ಕಾರಿನಲ್ಲಿ ಸಂಭ್ರಮ

    ಕೊರೊನಾದಿಂದ ಗುಣಮುಖನಾದ ಪಾಷಾಗೆ ಅದ್ಧೂರಿ ಸ್ವಾಗತ – ಪಟಾಕಿ ಸಿಡಿಸಿ, ತೆರೆದ ಕಾರಿನಲ್ಲಿ ಸಂಭ್ರಮ

    – ಸಾಮಾಜಿಕ ಅಂತರವಿಲ್ಲ, ರೂಲ್ಸ್ ಬ್ರೇಕ್ ಮಾಡಿದ ಪಾಷಾ ಬೆಂಬಲಿಗರು

    ಬೆಂಗಳೂರು: ಕೊರೊನಾದಿಂದ ಗುಣಮುಖನಾಗಿ ಬಂದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಜೊತೆಗೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ನಿಯಮ ಉಲ್ಲಂಘನೆ ಮಾಡಿದ್ದಾರೆ.

    ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಇಮ್ರಾನ್ ಪಾಷಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಮ್ರಾನ್ ಪಾಷಾ ಅವರನ್ನು 7 ದಿನಕ್ಕೊಮ್ಮೆ ಕೋವಿಡ್-19 ಟೆಸ್ಟ್ ಮಾಡಲಾಗಿತ್ತು. ವರದಿಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ.

    ಇಂದು ಆಸ್ಪತ್ರೆಯಿಂದ ಬಿಡುಗಡೆಯಾದ ಇಮ್ರಾನ್ ಪಾಷಾರನ್ನು ಸ್ವಾಗತ ಮಾಡಲು ಅವರ ಬೆಂಬಲಿಗರು ಆಸ್ಪತ್ರೆಯಿಂದ ಪಾದಾರಾಯನಪುರವರೆಗೂ ಸೇರಿದ್ದಾರೆ. ಮಾಸ್ಕ್ ಧರಿಸದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ನಿಯಮಗಳನ್ನು ಬ್ರೇಕ್ ಮಾಡಿದ್ದಾರೆ. ಜೊತೆಗೆ ಇಮ್ರಾನ್ ಅವರನ್ನು ತೆರೆದ ಕಾರಿನಲ್ಲಿ ಮೆರವಣಿಗೆ ಮಾಡುತ್ತಿದ್ದು, ರಸ್ತೆಯುದ್ದಕ್ಕೂ ಹೂ ಹಾಕಿ ಸ್ವಾಗತ ಮಾಡಲಾಗುತ್ತಿದೆ. ಈ ಕಾರದಿಂದ ಮೈಸೂರ್ ರೋಡ್ ಫುಲ್ ಜಾಮ್ ಆಗಿದ್ದು, ಜನ ಸಮಾನ್ಯರಿಗೆ ತೊಂದರೆಯಾಗಿದೆ.

    ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಹೊರಗೆ ಬಂದ ತಕ್ಷಣ ಅವರಿಗೆ ಶಾಲು ಹಾಕಿ ಹೂಮಾಲೆಯಾಕಿ ಅವರ ಅಭಿಮಾನಿಗಳು ಬರಮಾಡಿಕೊಂಡಿದ್ದಾರೆ. ಜೊತೆಗೆ ಡಿಸ್ಚಾರ್ಜ್ ಮಾಡಿದ ತಕ್ಷಣ ಮನಸೋ ಇಚ್ಛೆ ಓಡಾಡುವಂತಿಲ್ಲ. 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿರಬೇಕು ಎಂದು ವೈದ್ಯರು ಸೂಚಿದ್ದರು, ಅವರ ಮಾತಿಗೆ ಬೆಲೆ ಕೊಡದ ಪಾಷಾ ಕೊರೋನಾ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದಂತೆ ಆಸ್ಪತ್ರೆಯಿಂದ ಬಂದ ತಕ್ಷಣ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ.

    ಇಷ್ಟೇಲ್ಲ ನಿಯಮಗಳನ್ನು ಪಾಲಿಸದೇ ರಸ್ತೆಯಲ್ಲಿ ಮೆರೆವಣಿಗೆ ಮಾಡುತ್ತಿದ್ದರೂ ಅದನ್ನು ಕೇಳಲು ಸ್ಥಳದಲ್ಲಿ ಒಬ್ಬ ಪೊಲೀಸ್ ಕೂಡ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಕೊಂಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಬೈಕ್ ರ‌್ಯಾಲಿಯನ್ನು ತಡೆದಿದ್ದಾರೆ. ಜೊತೆಗೆ ಪಾಷಾ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿರಬಹುದು ಎಂದು ಜನರು ಹೇಳುತ್ತಿದ್ದಾರೆ.

  • ಹಾಸನದಲ್ಲಿ ಓರ್ವ ಪಿಎಸ್‍ಐ ಸೇರಿ ನಾಲ್ವರು ಪೊಲೀಸರು ಕೊರೊನಾದಿಂದ ಗುಣಮುಖ

    ಹಾಸನದಲ್ಲಿ ಓರ್ವ ಪಿಎಸ್‍ಐ ಸೇರಿ ನಾಲ್ವರು ಪೊಲೀಸರು ಕೊರೊನಾದಿಂದ ಗುಣಮುಖ

    ಹಾಸನ: ಹಾಸನದಲ್ಲಿ ಓರ್ವ ಎಸ್‍ಐ ಸೇರಿದಂತೆ ನಾಲ್ವರು ಪೊಲೀಸರು ಇಂದು ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದು, ಭವ್ಯ ಸ್ವಾಗತ ನೀಡಲಾಗಿದೆ.

    ಹಾಸನದ ಹಿಮ್ಸ್ ಆಸ್ಪತ್ರೆಯ ಮುಂಭಾಗ ಕೊರೊನಾ ಗೆದ್ದು ಬಂದ ಪೊಲೀಸರಿಗೆ ಹಾರ ಹಾಕಿ, ಹೂ ಬೊಕ್ಕೆ ಕೊಟ್ಟು, ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಲಾಯ್ತು. ಪೊಲೀಸ್ ಬ್ಯಾಂಡ್ ಮೂಲಕ ಕೊರೊನಾ ಗೆದ್ದು ಬಂದ ಪೊಲೀಸರಿಗೆ ಗೌರವ ಸಲ್ಲಿಸಲಾಯ್ತು. ನಮ್ಮ ಪೊಲೀಸರು ಗುಣಮುಖರಾಗಿರುವುದು ಹೆಚ್ಚಾಗಿ ಕರ್ತವ್ಯ ನಿರ್ವಹಿಸಲು ಶಕ್ತಿ ಹೆಚ್ಚಿಸಿದೆ ಎಂದು ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.

    ದಕ್ಷಿಣ ವಲಯ ಐಜಿ ವಿಪುಲ್ ಕುಮಾರ್ ಮಾತನಾಡಿ ಪೊಲೀಸರು ಗುಣಮುಖರಾಗಿರುವುದು ಸಂತಸ ತಂದಿದೆ. ಪೊಲೀಸರ ಕೆಲಸ ಮತ್ತು ಶ್ರಮದ ಬಗ್ಗೆ ಹೆಮ್ಮೆಯಿದೆ. ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಋಣಿಯಾಗಿದ್ದೇವೆ ಎಂದರು. ಇದೇ ವೇಳೆ ಮಾತನಾಡಿದ ಕೊರೊನಾ ಗೆದ್ದು ಬಂದ ಎಸ್‍ಐ ಕುಮಾರ್ ಮೊದಲು ಕೊರೊನಾ ಪಾಸಿಟಿವ್ ಬಂದಾಗ ಭಯ ಆಯ್ತು. ಒಂದೆರೆಡು ದಿನದಲ್ಲಿ ಹಂತ ಹಂತವಾಗಿ ಭಯ ಹೋಯ್ತು. ತಾವು ಗುಣಮುಖರಾಗಲು ಸಹಾಯ ಮಾಡಿ, ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

  • ತಾಯಿ, 4 ತಿಂಗಳ ಮಗು ಸೇರಿ ಕಲಬುರಗಿಯಲ್ಲಿ ಮೂವರು ಗುಣಮುಖ

    ತಾಯಿ, 4 ತಿಂಗಳ ಮಗು ಸೇರಿ ಕಲಬುರಗಿಯಲ್ಲಿ ಮೂವರು ಗುಣಮುಖ

    ಕಲಬುರಗಿ: ಕಲಬುರಗಿ ನಗರದಲ್ಲಿ ತಾಯಿ-ಮಗು ಸೇರಿದಂತೆ ಮತ್ತೆ ಮೂವರು ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ನಗರದ ಮೋಮಿನಪುರ ಪ್ರದೇಶದ 26 ವರ್ಷದ ಮಹಿಳೆ (ರೋಗಿ ಸಂಖ್ಯೆ-425) ಹಾಗೂ ಇವರ ನಾಲ್ಕು ತಿಂಗಳ ಗಂಡು ಮಗು (ರೋಗಿ ಸಂಖ್ಯೆ-424) ಹಾಗೂ ಮಾಣಿಕೇಶ್ವರಿ ನಗರದ 46 ವರ್ಷದ ಮಹಿಳೆ (ರೋಗಿ ಸಂಖ್ಯೆ-421) ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.

    ಈ ಮೂವರಿಗೂ ಏ.22ರಂದು ಕೊರೊನಾ ಸೋಂಕು ದೃಢವಾಗಿದ್ದರಿಂದ ಚಿಕಿತ್ಸೆಗೆ ದಾಖಲಾಗಿದ್ದರು. ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಪತ್ತೆಯಾದ 64 ಕೊರೊನಾ ಸೋಂಕಿತರಲ್ಲಿ ಒಟ್ಟು 27 ರೋಗಿಗಳು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 6 ಜನ ನಿಧನ ಹೊಂದಿದ್ದು, 31 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ಮಾಹಿತಿ ನೀಡಿದ್ದಾರೆ.

  • ಭಾರತದಲ್ಲಿ ಫಸ್ಟ್ – ಪ್ಲಾಸ್ಮಾ ಥೆರಪಿಯಿಂದ ಕೊರೊನಾ ಸೋಂಕಿತ ಗುಣಮುಖ

    ಭಾರತದಲ್ಲಿ ಫಸ್ಟ್ – ಪ್ಲಾಸ್ಮಾ ಥೆರಪಿಯಿಂದ ಕೊರೊನಾ ಸೋಂಕಿತ ಗುಣಮುಖ

    – ವೆಂಟಿಲೇಟರ್‌ನಲ್ಲಿದ್ದ ರೋಗಿಗೆ ಪ್ಲಾಸ್ಮಾ ಥೆರಪಿ
    – ಮೂರು ವಾರದ ಹಿಂದೆ ಗುಣಮುಖರಾದ ಮಹಿಳೆಯಿಂದ ಪ್ಲಾಸ್ಮಾ ದಾನ

    ನವದೆಹಲಿ: ಕೊರೊನಾ ವೈರಸ್ ಭೀತಿ ನಡುವೆ ಒಂದು ಶುಭ ಸುದ್ದಿಯೊಂದು ಲಭ್ಯವಾಗಿದ್ದು, ಪ್ಲಾಸ್ಮಾ ಥೆರಪಿ ಸಹಾಯದಿಂದ ದೆಹಲಿಯ ಕೊರೊನಾ ಸೋಂಕಿತ ರೋಗಿಯೊಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ಭಾರತದಲ್ಲಿಯೇ ಮೊದಲ ಪ್ರಕರಣವಾಗಿದೆ.

    ದೆಹಲಿಯ 49 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇದೆ ಎಂದು ಏಪ್ರಿಲ್ 4ರಂದು ದೃಢಪಟ್ಟಿತ್ತು. ರೋಗಿ ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಅವರಿಗೆ ಉಸಿರಾಡಲು ಸಹಾಯವಾಗಲಿ ಎಂದು ವೆಂಟಿಲೇಟರ್ ಅಳವಡಿಸಿ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಏಪ್ರಿಲ್ 8ರಂದು ರೋಗಿಯ ಆರೋಗ್ಯ ತೀರ ಹದಗೆಟ್ಟಾಗ ಕುಟುಂಬಸ್ಥರು ರೋಗಿಗೆ ಪ್ಲಾಸ್ಮಾ ಥೆರಪಿ ನೀಡಿ ಜೀವ ಉಳಿಸಿ ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡರು. ಅಲ್ಲದೇ ಕುಟುಂಬಸ್ಥರೇ ಪ್ಲಾಸ್ಮಾ ಡೋನರ್ ಅನ್ನು ಕೂಡ ಹುಡಿಕಿದ್ದರು. ಮೂರು ವಾರದ ಹಿಂದೆಯಷ್ಟೇ ಕೊರೊನಾದಿಂದ ಗುಣಮುಖರಾದ ಮಹಿಳೆಯೊಬ್ಬರನ್ನು ಪತ್ತೆ ಮಾಡಿ, ಪ್ಲಾಸ್ಮಾ ಡೊನೇಟ್ ಮಾಡುವಂತೆ ಮನವಿ ಮಾಡಿಕೊಂಡರು. ಅವರ ಮನವಿಗೆ ದಾನಿ ಕೂಡ ಒಪ್ಪಿ ರೋಗಿಗೆ ಪ್ಲಾಸ್ಮಾ ದಾನ ಮಾಡಿದ್ದರು. ಏಪ್ರಿಲ್ 14ರ ರಾತ್ರಿ ಎಲ್ಲಾ ಸರ್ಕಾರಿ ಹಾಗೂ ವೈದ್ಯಕಿಯ ನಿಯಮದ ಪ್ರಕಾರ ರೋಗಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು.

    ಥೆರಪಿ ನೀಡಿದ ನಾಲ್ಕೇ ದಿನಕ್ಕೆ ಎಂದರೆ ಏಪ್ರಿಲ್ 18ರಂದು ರೋಗಿ ವೆಂಟಿಲೇಟರ್ ಸಹಾಯವಿಲ್ಲದೇ ಉಸಿರಾಡಲು ಆರಂಭಿಸಿ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾ ಬಂದಿದ್ದರು. ಆ ಬಳಿಕ ಅವರನ್ನು ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡಲಾಯ್ತು. ನಂತರ ಸೋಮವಾರ 24 ಗಂಟೆಗಳಲ್ಲಿ ಎರಡು ಭಾರಿ ರೋಗಿಯ ಕೋವಿಡ್-19 ಪರೀಕ್ಷೆ ಮಾಡಲಾಯ್ತು. ಎರಡು ಬಾರಿಯೂ ವರದಿ ನೆಗೆಟಿವ್ ಮಂದಿತ್ತು. ಕೆಲ ದಿನಗಳು ಚಿಕಿತ್ಸೆ ನೀಡಿ, ನಿಗಾ ವಹಿಸಿದ ಬಳಿಕ ಇಂದು ಕೂಡ ರೋಗಿಯ ವರದಿ ಕೊರೊನಾ ನೆಗೆಟಿವ್ ಬಂದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

    ಆದರೆ ಸರ್ಕಾರಿ ನಿಯಮದ ಪ್ರಕಾರ ಡಿಸ್ಚಾರ್ಜ್ ಆದ ವ್ಯಕ್ತಿ ಎರಡು ವಾರಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕು. ಹೀಗಾಗಿ ಗುಣಮುಖರಾದ ವ್ಯಕ್ತಿಗೆ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿದೆ. ಡಾ. ಓಂಮೆಂದರ್ ಸಿಂಗ್ ನೇತೃತ್ವದ ವೈದ್ಯರ ತಂಡ ರೋಗಿಗೆ ಚಿಕಿತ್ಸೆ ನೀಡಿ, ರೋಗಿಯನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ಲಾಸ್ಮಾ ಥೆರಪಿ ಎಂದರೇನು?
    ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

    ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

  • ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    – ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ರೂ ಗುಣಮುಖ

    ಕೇರಳ: ಮಹಾಮಾರಿ ಕೊರೊನಾ ಎಂದರೆ ಸಾಕು ಜನರು ಭಯಭೀತರಾಗುತ್ತಾರೆ. ಅದರಲ್ಲೂ ಈ ವೈರಸ್ 60 ವರ್ಷ ಮೇಲ್ಪಟ್ಟವರಿಗೆ ಬಂದರೆ ಗುಣಮುಖರಾಗುವುದು ಕಷ್ಟ ಎಂಬ ಆತಂಕವಿದೆ. ಇದೇ ವೇಳೆ ಕೇರಳದಿಂದ ಶುಭ ಸುದ್ದಿ ಸಿಕ್ಕಿದ್ದು, ವೃದ್ಧ ದಂಪತಿ ಮಹಾಮಾರಿ ಕೋವಿಡ್-19 ವೈರಸ್‍ನಿಂದ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಥಾಮಸ್ (93) ಮತ್ತು ಅವರ ಪತ್ನಿ ಮರಿಯಮ್ಮ (88) ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ದಂಪತಿ ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದೀಗ ಈ ದಂಪತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೇರಳದ ಕೊಟ್ಟಾಯಂನಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ.

    ಥಾಮಸ್ ಕೋವಿಡ್-19 ವೈರಸ್‍ನಿಂದ ಪಾರಾದ ಭಾರತದ ಅತ್ಯಂತ ವೃದ್ಧರಾಗಿದ್ದಾರೆ. ಇತ್ತೀಚಿಗೆ ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಥಾಮಸ್ ಅವರನ್ನು ಪತ್ನಿಯೊಂದಿಗೆ ಡಿಸ್ಚಾರ್ಜ್ ಮಾಡಲಾಗಿದೆ.

    ಸೋಂಕು ಬಂದಿದ್ದು ಹೇಗೆ?
    ವೃದ್ಧ ದಂಪತಿಯನ್ನು ಮಾರ್ಚ್ 9 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಥಾಮಸ್ ಮತ್ತು ಮರಿಯಮ್ಮ ವೃದ್ಧ ದಂಪತಿ ಪತ್ತನಂತಿಟ್ಟ ಜಿಲ್ಲೆಯ ರಾಣಿ ಗ್ರಾಮದ ನಿವಾಸಿಯಾಗಿದ್ದು, ಮಾರ್ಚ್‍ನಲ್ಲಿ ಇಟಲಿಯಿಂದ ವೃದ್ಧ ದಂಪತಿಯ ಮಗ, ಸೊಸೆ ಮತ್ತು ಮೊಮ್ಮಗ ಹಿಂದಿರುಗಿದ್ದರು. ಇವರ ಜೊತೆ ಸಂಪರ್ಕ ಹೊಂದಿದ್ದ ವೃದ್ಧ ದಂಪತಿಗೆ ಕೊರೊನಾ ಬಂದಿತ್ತು. ಅವರ ಮಗ, ಸೊಸೆ ಮತ್ತು ಮೊಮ್ಮಗನಿಗೂ ಕೊರೊನಾ ಪಾಸಿಟಿವ್ ಬಂದಿತ್ತು.

    ದಂಪತಿ ಎರಡು ವಾರಗಳವರೆಗೆ ಕಟ್ಟುನಿಟ್ಟಿನಿಂದ ಹೋಂ ಕ್ಯಾರೆಂಟೈನ್‍ನಲ್ಲಿ ಉಳಿದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಬ್ಬರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ದಂಪತಿ ಈಗಾಗಲೇ ಮಧುಮೇಹ, ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ವಯಸ್ಸಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಹೀಗಾಗಿ ಮೊದಲ ಹಂತದ ಚಿಕಿತ್ಸೆಯಲ್ಲಿ ದಂಪತಿಯ ಸ್ಥಿತಿ ಗಂಭೀರವಾಗಿತ್ತು.

    ಅಷ್ಟೇ ಅಲ್ಲದೇ ಚಿಕಿತ್ಸೆಯ ಸಮಯದಲ್ಲಿ ಥಾಮಸ್‍ಗೆ ಹೃದಯಾಘಾತವಾಗಿತ್ತು. ಅಲ್ಲದೇ ರಕ್ತದೊತ್ತಡದಿಂದ ವೈದ್ಯರು ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ಥಾಮಸ್ ಮತ್ತು ಮರಿಯಮ್ಮ ಇಬ್ಬರಿಗೂ ಮೂತ್ರದ ಸೋಂಕು ಕೂಡ ಕಂಡುಬಂದಿತ್ತು. ಆದರೂ ಇಷ್ಟೆಲ್ಲಾ ಕಷ್ಟದಿಂದಲೂ ವೃದ್ಧ ದಂಪತಿ ಧೈರ್ಯದಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.

    ಸ್ಥಳಿಯವಾಗಿ ವೃದ್ಧದಂಪತಿ ಎಲ್ಲ ಆಹಾರವನ್ನು ಇಷ್ಟ ಪಡುತ್ತಾರೆ. ಥಾಮಸ್ ಅವರಿಗೆ ಫಿಶ್ ಫ್ರೈ ಅಂದರೆ ತುಂಬಾ ಇಷ್ಟ. ಹೀಗಾಗಿ ನಾವು ತಿನ್ನಲು ಫಿಶ್  ಫ್ರೈ ಕೊಡುತ್ತಿದ್ದೆವು. ಅಲ್ಲದೇ ಅಕ್ಕಿ ಗಂಜಿ, ಮರಗೆಣಸು ಮತ್ತು ಹಲಸಿನ ಹಣ್ಣನ್ನು ಆಹಾರವಾಗಿ ತಿನ್ನಲು ಕೊಡುತ್ತಿದ್ದೆವು ಎಂದು ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರು ಹೇಳಿದ್ದಾರೆ.

    ಇದೀಗ ವೃದ್ಧ ದಂಪತಿಯನ್ನು ಉಳಿಸಲು ಶ್ರಮಿಸಿದ ವೈದ್ಯರು, ನರ್ಸ್ ಗಳು ಮತ್ತು ಇತರ ಸಿಬ್ಬಂದಿಗೆ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಾಜಾ ಧನ್ಯವಾದ ತಿಳಿಸಿದ್ದಾರೆ. ಸರ್ಕಾರದ ಪ್ರಕಾರ, ಏಳು ವೈದ್ಯರ ತಂಡವು ಚಿಕಿತ್ಸೆ ನೀಡಿದ್ದು, ಇವರಿಗೆ 25 ಮಂದಿ ನರ್ಸ್ ಸೇರಿದಂತೆ 40 ವೈದ್ಯಕೀಯ ಸಿಬ್ಬಂದಿ ಸಹಕಾರ ನೀಡಿದ್ದರು ಎಂದು ತಿಳಿದುಬಂದಿದೆ.

  • ದೆಹಲಿಯ ಮೊದಲ ಕೊರೊನಾ ಪೀಡಿತ ವ್ಯಕ್ತಿ ಸಂಪೂರ್ಣ ಗುಣಮುಖ

    ದೆಹಲಿಯ ಮೊದಲ ಕೊರೊನಾ ಪೀಡಿತ ವ್ಯಕ್ತಿ ಸಂಪೂರ್ಣ ಗುಣಮುಖ

    – ಆಸ್ಪತ್ರೆಯಿಂದ ಡಿಸ್ಚಾರ್ಜ್

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೊದಲು ಕೊರೊನಾ ವೈರಸ್‍ಗೆ ತುತ್ತಾಗಿದ್ದ ವ್ಯಕ್ತಿ ಸಂಪೂರ್ಣವಾಗಿ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಪೂರ್ವ ದೆಹಲಿಯ ಮಯೂರ್ ವಿಹಾರ್ ನಿವಾಸಿಯಾಗಿದ್ದ 45 ವರ್ಷದ ವ್ಯಕ್ತಿ ಇಟಲಿ ದೇಶಕ್ಕೆ ಹೋಗಿ ಬಂದ ನಂತರ ಕೊರೊನಾ ವೈರಸ್ ಸೋಂಕು ಅವರಲ್ಲಿ ಕಾಣಿಸಿಕೊಂಡಿತ್ತು. ಈ ಮೂಲಕ ದೆಹಲಿಯಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕೇಸ್ ದಾಖಲಾಗಿತ್ತು. ಈಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

    ಇಟಲಿಗೆ ಹೋಗಿ ಬಂದ ನಂತರ ಐಸೋಲೇಷನ್ ವಾರ್ಡಿಗೆ ಅಡ್ಮಿಟ್ ಆಗುವ ಮೊದಲು ಈ ವ್ಯಕ್ತಿ ಹಲವರು ಜನರೊಂದಿಗೆ ಸಂಪರ್ಕ ಹೊಂದಿದ್ದರು. ಜೊತೆಗೆ ಫೈವ್ ಸ್ಟಾರ್ ಹೋಟಲಿನಲ್ಲಿ ಅದ್ಧೂರಿಯಾಗಿ ಮಗನ ಹುಟ್ಟುಹಬ್ಬ ಕೂಡ ಮಾಡಿದ್ದರು. ಹಾಗಾಗಿ ದೆಹಲಿಯಲ್ಲಿ ಕೊರೊನಾ ಭೀತಿ ಜಾಸ್ತಿಯಾಗಿತ್ತು. ಸೋಂಕು ಕಂಡುಬಂದ ನಂತರ ಹಲವು ದಿನಗಳಿಂದ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡಾಗುತ್ತಿತ್ತು.

    ಈ ಬಗ್ಗೆ ಮಾಹಿತಿ ನೀಡಿರುವ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು, ದೆಹಲಿಯಲ್ಲಿ ಮೊದಲು ಕೊರೊನಾ ವೈರಸ್‍ಗೆ ತುತ್ತಾಗಿದ್ದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರಲ್ಲಿ ಈಗ ಯಾವುದೇ ರೀತಿಯ ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಂಡಿಲ್ಲ. ಅವರನ್ನು ಇಂದು ಡಿಸ್ಚಾರ್ಜ್ ಮಾಡುತ್ತಿದ್ದೇವೆ. ಜೊತೆಗೆ ಮನೆಯಲ್ಲಿ ಅವರ ಆರೋಗ್ಯದ ಬಗ್ಗೆ ನಮಗೆ ಆಗಾಗ ಮಾಹಿತಿ ನೀಡಲು ಕುಟುಂಬಸ್ಥರಿಗೆ ತಿಳಿಸಿದ್ದೇವೆ. ನಮ್ಮ ಸಿಬ್ಬಂದಿ ಕೂಡ ಕುಟುಂಬದರ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

    ಈ ವ್ಯಕ್ತಿ ಇಟಲಿಯಿಂದ ಬಂದು, ಮಗನ ಹುಟ್ಟು ಹಬ್ಬ ಆಚರಿಸಿದ್ದರು. ಈ ವ್ಯಕ್ತಿ ಮಾರ್ಚ್ 1ರಂದು ಐಸೋಲೇಷನ್ ವಾರ್ಡಿಗೆ ದಾಖಲಾಗುವ ಮುಂಚೆ ಸುಮಾರು 100 ಜನರ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿತ್ತು. ಈತನ ಜೊತೆ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಗುರುತಿಸಿ ಪರೀಕ್ಷೆ ಮಾಡಲಾಗಿತ್ತು. ಇತ್ತಿಚೆಗೆ ದೆಹಲಿಯಲ್ಲಿ ಕೊರೊನಾ ವೈರಸ್‍ನಿಂದ ಓರ್ವ ವೃದ್ಧೆ ಸಾವನ್ನಪ್ಪಿದ್ದರು.

    ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಇದುವರೆಗೆ ಭಾರತದಲ್ಲಿ 91 ಕೊರೊನಾ ಪಾಸಿಟಿವ್ ಕೇಸ್‍ಗಳು ಬೆಳಕಿಗೆ ಬಂದಿವೆ. ಮಹಾರಾಷ್ಟ್ರವೊಂದರಲ್ಲೇ 31 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಈ ಮೂಲಕ ದೇಶದಲ್ಲೇ ಅತೀ ಹೆಚ್ಚು ಕೊರೊನಾ ವೈರಸ್ ಪ್ರಕರಣ ಮುಂಬೈಯಲ್ಲಿ ದಾಖಲಾಗಿವೆ ಎಂದು ತಿಳಿದುಬಂದಿದೆ.