ಐತಿಹಾಸಿಕ ಮಡಿಕೇರಿ ದಸರಾಕ್ಕೆ ಮೈನವಿರೇಳಿಸೋ ದಶಮಂಟಪಗಳ ಶೋಭಾಯಾತ್ರೆಯೇ ಆಕರ್ಷಣೆ. ದಶಮಂಟಪಗಳ ಯಾತ್ರೆ ಜನರ ಮನಸೂರೆಗೊಳ್ಳುತ್ತದೆ. ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆಯುವ ಚಿತ್ರ ಪ್ರದರ್ಶನ ಜನರನ್ನ ದೈವಲೋಕಕ್ಕೇ ಕರೆದೊಯ್ಯುವಂತೆ ಭಾಸವಾಗುತ್ತದೆ. ದುಷ್ಟ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆಯುವ ದಶಮಂಟಪ ಪ್ರದರ್ಶನ ದೇವಾನು ದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆಳುತ್ತಾರೆ.
ಆ ದಿನ ರಾತ್ರಿ ಮಡಿಕೇರಿ ನಗರದ ಯಾವುದೇ ರಸ್ತೆಗಳಲ್ಲಿ ನೋಡಿದ್ರೂ ಜನಸಾಗರವೇ ಇರುತ್ತದೆ. ಕಣ್ಣು ಕೋರೈಸೋ ವಿದ್ಯುತ್ ದೀಪಾಲಂಕಾರ, ಹುಚ್ಚೆದ್ದು ಕುಣಿಯುವ ಜನರು, ಅಬ್ಬರದಿಂದ ಪ್ರದರ್ಶನಗೊಳ್ಳುವ ಸ್ಥಬ್ಧ ಚಿತ್ರಗಳು, ಇದು ಮಡಿಕೇರಿ ದಸರಾದ ಕೊನೆಯದಿನದ ಶೋಭಾಯಾತ್ರೆಯ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ.
ಇನ್ನೇನು ದಸರಾ ಮುಗಿಯುವ ಹಂತಕ್ಕೆ ಬಂದಿದ್ದು, ದಶಮಂಟಪಗಳ ದರ್ಶನ ಮೈನವಿರೇಳಿಸುವಂತಿರುತ್ತದೆ. ದೇವಾನು ದೇವತೆಗಳ ಲೀಲೆಗಳನ್ನ ಬಿಂಬಿಸೋ ಕಥಾ ಪ್ರಸಂಗಗಳ ಸಂಯೋಜನೆ ಎಲ್ಲರ ಗಮನಸೆಳೆಯುತ್ತಿದೆ. ಎದೆ ನಡುಗಿಸೋ ಶಬ್ದ, ಅದಕ್ಕೆ ತಕ್ಕಂತೆ ಬೆಳಕು, ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸೋ ದೇವರ ಮೂರ್ತಿಗಳು ನೆರೆದಿದ್ದ ಜನರನ್ನ ಒಮ್ಮೆ ದೇವಲೋಕವೇ ಧರೆಗಿಳಿದಂತಿದೆ.

ಸಹಸ್ರಾರು ಸಂಖ್ಯೆಯ ಭಕ್ತರು ಹಲವೆಡೆ ಮಂಟಪ ದರ್ಶನ ಮಾಡಿ ಭಾವಪರವಶರಾಗುತ್ತಿದ್ದಾರೆ. ಒಂದೊಂದು ಮಂಟಪಗಳೂ ಒಂದು ಪುರಾಣಕಥೆಗಳನ್ನ ಸಾರುತ್ತಿವೆ.
‘ಹಗಲು ಮೈಸೂರು ದಸರಾದ ವೈಭವ ನೋಡು, ರಾತ್ರಿ ಮಂಜಿನ ನಗರಿ ಮಡಿಕೇರಿ ದಸರಾದ ಸೊಬಗು ನೋಡು’ ಎಂಬ ಮಾತಿನಂತೆ ಮಡಿಕೇರಿ ದಸರಾ, ರಾತ್ರಿ 12 ಗಂಟೆಗೆ ಶುರುವಾದ್ರೆ ದಶಮಂಟಪಗಳ ಉತ್ಸವ ಬೆಳಿಗ್ಗೆ 5 ಗಂಟೆವರೆಗೂ ನಡೆಯುತ್ತದೆ. ರಾಜ್ಯದ ವಿವಿಧೆಡೆಗಳಿಗೆ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬೀಳುತ್ತಾರೆ. ರಾತ್ರಿಯಿಡೀ ಮಂಜಿನ ನಗರಿಯ ರಸ್ತೆಗಳಲ್ಲಿ ಜನಪ್ರವಾಹವೇ ಹರಿಯುತ್ತದೆ. ದೇವಾನು ದೇವತೆಗಳ ಶಕ್ತಿ ಲೀಲೆಗಳನ್ನು ಕಣ್ತುಂಬಿ ಕೊಂಡ ಜನತೆ ಖುಷಿಯ ಅಲೆಯಲ್ಲಿ ತೇಲುತ್ತಾರೆ.

ಪುರಾಣ ಹಾಗು ಪೌರಾಣಿಕ ಕಥಾವಸ್ತುಗಳನ್ನು ನಿರೂಪಿಸಿ ನೀಡಿದ ಪ್ರದರ್ಶನ ಕಣ್ಣಿಗೆಕಟ್ಟುವಂತೆ ದೇವಾನು ದೇವತೆಗಳ ಶಕ್ತಿ, ಚಮತ್ಕಾರ, ಪವಾಡಗಳನ್ನು ವಿವರಿಸುತ್ತದೆ. ಒಂದೆಡೆ ದಶಮಂಟಪಗಳ ಮೆರವಣಿಗೆ ನಿಧಾನಗತಿಯಲ್ಲಿ ಸಾಗುತ್ತಿದ್ದರೆ, ಜನರು ಅಲ್ಲಲ್ಲಿ ನಿಂತು ಕುಣಿದು ಕುಪ್ಪಳಿಸುತ್ತಾ ಎಂಜಾಯ್ ಮಾಡುತ್ತಾರೆ. ವರ್ಷಕ್ಕೊಮ್ಮೆ ಆಗಮಿಸೋ ನವರಾತ್ರಿ ಉತ್ಸವವನ್ನು ರಾತ್ರಿಯಿಡೀ ಕಣ್ತುಂಬಿಕೊಂಡು ಸಂತಸದ ಅಲೆಯಲ್ಲಿ ತೇಲುತ್ತಾರೆ.
ಒಟ್ನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ತೆರೆಬೀಳುತ್ತಿದ್ದಂತೆ ಶುರುವಾಗೋ ಮಂಜಿನ ನಗರಿ ದಸರಾ ಅಬ್ಬರ ಸಹಸ್ರಾರು ಜನರ ಸಂಭಮ ಉಲ್ಲಾಸಕ್ಕೆ ಕಾರಣವಾಗುತ್ತೆ, ವಿವಿಧ ಜಿಲ್ಲೆಗಳಿಂದ ಬರೋ ಸಹಸ್ರಾರು ಪ್ರವಾಸಿಗರು, ಸಾಗರೋಪಾದಿಯಲ್ಲಿ ನೆರೆದು ವೈಭವದ ದಶಮಂಟಪಗಳನ್ನು ವೀಕ್ಷಿಸುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚುಮಾಡಿ, ಎರಡೆರಡು ಟ್ರ್ಯಾಕ್ಟರ್ ಗಳನ್ನು ಬಳಸಿ ಸಿದ್ಧಪಡಿಸಿದ ಟ್ಯಾಬ್ಲೋಗಳ ಪ್ರದರ್ಶನ ಮಾತ್ರ ಇಲ್ಲಿಗೆ ಆಗಮಿಸೋ ಪ್ರವಾಸಿಗರನ್ನ ಒಮ್ಮೆ ದೇವಲೋಕ ಸಂಚಾರಮಾಡಿಸೋದ್ರಲ್ಲಿ ಅಚ್ಚರಿಯಿಲ್ಲ.
ಬನ್ನಿ ಮಡಿಕೇರಿ ದಸರಾ ಕಣ್ತುಂಬಿಕೊಳ್ಳಿ….













