Tag: cuba

  • ಕ್ಯೂಬಾದಲ್ಲಿ ಒಂದೇ ಗಂಟೆಯಲ್ಲಿ 2 ಪ್ರಬಲ ಭೂಕಂಪ

    ಕ್ಯೂಬಾದಲ್ಲಿ ಒಂದೇ ಗಂಟೆಯಲ್ಲಿ 2 ಪ್ರಬಲ ಭೂಕಂಪ

    ಹವಾನಾ: ಪೂರ್ವ ಕ್ಯೂಬಾದಲ್ಲಿ (Cuba) 6.8 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು ದೇಶದ 2ನೇ ಅತಿದೊಡ್ಡ ನಗರವಾದ ಸ್ಯಾಂಟಿಯಾಗೊ ಡಿ ಕ್ಯೂಬಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ತೀವ್ರ ಹಾನಿಯಾಗಿದೆ. ಇದಕ್ಕೂ ಮೊದಲು 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ

    ಕ್ಯೂಬಾದ ಮಾಜಿ ಅಧ್ಯಕ್ಯ ದಿ.ಫಿಡೆಲ್ ಕ್ಯಾಸ್ಟ್ರೋ ಅವರು ಕ್ಯೂಬನ್ ಕ್ರಾಂತಿಯ ಸಮಯದಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದ್ದ ಬಾರ್ಟೋಲೋಮ್ ಮಾಸೊ ಬಳಿಯ ಗ್ರ್ಯಾನ್ಮಾ ಪ್ರಾಂತ್ಯದ ಕರಾವಳಿಯಲ್ಲಿ ಭೂಕಂಪವಾಗಿದೆ. ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ.

    ಭೂಕಂಪದ ಕೇಂದ್ರ 14 ಕಿಮೀ (8.7 ಮೈಲುಗಳು) ಆಳದಲ್ಲಿದೆ. ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ತಿಳಿಸಿದೆ.

    ಭೂಕಂಪದ ಪರಿಣಾಮದಿಂದ ಹಲವೆಡೆ ಭೂಕುಸಿತ ಸಂಭವಿಸಿದೆ. ಹಲವಾರು ಮನೆಗಳು ಹಾನಿಗೊಳಗಾಗಿವೆ. ಅಲ್ಲದೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಸಮಯದಲ್ಲಿ ನಮ್ಮ ಮೊದಲ ಆದ್ಯತೆ ಜನರ ಜೀವಗಳನ್ನು ಉಳಿಸುವುದು ಎಂದು ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

    ಭೂಕಂಪ ಸಂಭವಿಸಿದ ಪ್ರದೇಶದ ಹಳೆಯದಾದ ಕಟ್ಟಡಗಳು ತೀವ್ರ ಹಾನಿಗೆ ಒಳಗಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ. ಇನ್ನೂ ಇತ್ತೀಚೆಗೆ ಸಂಭವಿಸಿದ್ದ ಚಂಡಮಾರುತದಿಂದ ಚೇತರಿಸಿಕೊಳ್ಳಲು ಕ್ಯೂಬಾ ಹೆಣಗಾಡುತ್ತಿದೆ. ಇದರ ನಡುವೆಯೇ ಭೂಕಂಪ ಸಂಭವಿಸಿದ್ದು ಜನ ಪರದಾಡುತ್ತಿದ್ದಾರೆ. ಇನ್ನೂ ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಭೂಕಂಪನದಿಂದ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

  • ರಷ್ಯಾ ಆಯ್ತು ಈಗ ಕ್ಯೂಬಾ ಜೊತೆ ರುಪಿಯಲ್ಲಿ ವ್ಯವಹಾರಕ್ಕೆ ಮುಂದಾದ ಭಾರತ

    ರಷ್ಯಾ ಆಯ್ತು ಈಗ ಕ್ಯೂಬಾ ಜೊತೆ ರುಪಿಯಲ್ಲಿ ವ್ಯವಹಾರಕ್ಕೆ ಮುಂದಾದ ಭಾರತ

    ನವದೆಹಲಿ: ರಷ್ಯಾದ ಬಳಿಕ ಭಾರತ ಕ್ಯೂಬಾದ ಜೊತೆ ರೂಪಾಯಿ ಅಥವಾ ಯುರೋದಲ್ಲಿ ವ್ಯವಹಾರ ನಡೆಸುವ ಸಾಧ್ಯತೆಯಿದೆ.

    ಈ ವಿಚಾರದ ಸಂಬಂಧ ಕ್ಯೂಬಾದ ಕೇಂದ್ರೀಯ ಬ್ಯಾಂಕ್‌ ಅಧಿಕಾರಿಗಳು ಆರ್‌ಬಿಐ ಜೊತೆ ಸಭೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌ ಜೊತೆಗೂ ಮಾತುಕತೆ ನಡೆಸಿದ್ದಾರೆ.

    ಕಳೆದ ವಾರ ಕ್ಯೂಬಾದ ಬ್ಯಾಂಕ್‌ ಅಧಿಕಾರಿಗಳು ಮೂರು ದಿನಗಳ ಪ್ರವಾಸದ ವೇಳೆ ಮುಂಬೈಯಲ್ಲಿ ಭಾರತದ ಬ್ಯಾಂಕುಗಳ ಜೊತೆ ಸಭೆ ನಡೆಸಿದ್ದಾರೆ. ಎರಡು ದೇಶಗಳ ಮಧ್ಯೆ ರುಪಿ ಪಾವತಿ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಈ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಅಗ್ಗದ ದರದಲ್ಲಿ ಎಲ್‌ಎನ್‌ಜಿ ಖರೀದಿಸಿದ ಭಾರತ

    ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ಆರ್ಥಿಕ ನಿರ್ಬಂಧ ಹೇರಿದ ಬಳಿಕ ಆರ್‌ಬಿಐ ಜುಲೈ 11 ರಿಂದ ರುಪಿ ಪಾವತಿಗೆ ಅನುಮತಿ ನೀಡಿದೆ.

    ಕ್ಯೂಬಾ ಮತ್ತು ಭಾರತದ ಮಧ್ಯೆ ಉತ್ತಮ ವ್ಯಾಪಾರ ಸಂಬಂಧವಿದೆ. 2022ರ ಹಣಕಾಸು ವರ್ಷದಲ್ಲಿ ಭಾರತ 26.56 ದಶಲಕ್ಷ ಡಾಲರ್‌ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದರೆ ಕ್ಯೂಬಾದಿಂದ ಭಾರತ 1 ದಶಲಕ್ಷ ಡಾಲರ್‌ ಮೌಲ್ಯದ ವಸ್ತುಗಳನ್ನು ಆಮದು ಮಾಡಿದೆ.

    ಜೂನ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಭಾರತ 4 ದಶಲಕ್ಷ ಡಾಲರ್‌ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದರೆ ಕ್ಯೂಬಾದಿಂದ 0.6 ದಶಲಕ್ಷ ಡಾಲರ್‌ ಮೌಲ್ಯದ ವಸ್ತುಗಳನ್ನು ಆಮದು ಮಾಡಿದೆ.

    ತನ್ನ ದೇಶದ ಕರೆನ್ಸಿ ಪೆಸೋಗೆ ಜಾಗತಿಕ ಮನ್ನಣೆ ಇಲ್ಲದಿರುವ ಕಾರಣ ಯುರೋದಲ್ಲಿ ವ್ಯವಹಾರ ನಡೆಸಲು ಒಪ್ಪಿಗೆ ಇದೆ ಎಂದು ಕ್ಯೂಬಾ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕ್ಯೂಬಾದ ಹೆಸರಾಂತ ಹೋಟೆಲ್‌ನಲ್ಲಿ ಭೀಕರ ಸ್ಫೋಟ – 22 ಮಂದಿ ಸಾವು

    ಹವಾನಾ: ಕ್ಯೂಬಾದ ರಾಜಧಾನಿ ಹವಾನಾದ ಡೌನ್‌ಟೌನ್‌ನಲ್ಲಿರುವ ಪ್ರಸಿದ್ಧ ಹೋಟೆಲ್‌ನಲ್ಲಿ ಶುಕ್ರವಾರ ಭಾರೀ ಸ್ಫೋಟ ಸಂಭವಿಸಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ನಗರದ ಹೆಸರಾಂತ ಸರಟೋಗಾ ಹೋಟೆಲ್‌ನಲ್ಲಿ ಭಾರೀ ಸ್ಫೋಟಕ್ಕೆ ಅನಿಲ ಸೋರಿಕೆ ಕಾರಣ ಎಂದು ತಿಳಿದುಬಂದಿದೆ. ಸ್ಫೋಟದಿಂದಾಗಿ ಕಟ್ಟಡ ಭಾಗಶಃ ಧ್ವಂಸಗೊಂಡಿದೆ. ಸ್ಫೋಟದ ಬಳಿಕ ಕ್ಯೂಬಾ ಅಧ್ಯಕ್ಷ ಮಾಧ್ಯಮಗಳ ಮುಂದೆ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

    ಸ್ಫೋಟ ಸಂಭವಿಸಿದ ಹೋಟೆಲ್ ಬಳಿಯಲ್ಲಿ ಶಾಲೆಯೂ ಇದ್ದು, 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಫೋಟದ ವೇಳೆ ಹಾಜರಾಗಿದ್ದರು. ಘಟನೆಯಿಂದಾಗಿ 15 ಮಕ್ಕಳು ಗಾಯಗೊಂಡಿದ್ದು, ಒಂದು ಮಗು ಸಾವನ್ನಪ್ಪಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಸಾವಿರ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾಗೊಳಿಸಲು ಮಸ್ಕ್ ಯೋಜನೆ

    ಸರಟೋಗಾ ಹೋಟೇಲ್ ಕಟ್ಟಡ ಶತಮಾನಕ್ಕೂ ಹಳೆಯದ್ದಾಗಿದ್ದು, ಸ್ಫೋಟದ ಸಮಯದಲ್ಲಿ ಮುಚ್ಚಲಾಗಿತ್ತು. ಕಾರ್ಮಿಕರು ಮಾತ್ರವೇ ಹೋಟೆಲ್ ಒಳಗಿದ್ದರು ಎಂದು ವರದಿಯಾಗಿದೆ.

  • ನದಿಯಲ್ಲಿ ಲ್ಯಾಂಡ್ ಆಯ್ತು 143 ಪ್ರಯಾಣಿಕರಿದ್ದ ವಿಮಾನ!

    ನದಿಯಲ್ಲಿ ಲ್ಯಾಂಡ್ ಆಯ್ತು 143 ಪ್ರಯಾಣಿಕರಿದ್ದ ವಿಮಾನ!

    ವಾಷಿಂಗ್ಟನ್: 143 ಪ್ರಯಾಣಿಕರಿದ್ದ ವಿಮಾನವೊಂದು ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಬದಲು ಆಯ ತಪ್ಪಿ ನದಿಗೆ ಬಿದ್ದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.

    ಬೋಯಿಂಗ್ 737 ವಿಮಾನವು ಕ್ಯೂಬಾದ ಗ್ವಾಟನಾಮೋದಿಂದ 136 ಪ್ರಯಾಣಿಕರು ಮತ್ತು 7 ಮಂದಿ ಸಿಬ್ಬಂದಿಯನ್ನು ಹೊತ್ತು ಜಾಕ್ಸನ್ವಿಲ್‍ನ ನಾವಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಲ್ಯಾಂಡ್ ಆಗುವ ಸಮಯದಲ್ಲಿ ಆಯ ತಪ್ಪಿ ಅದು ಪ್ಲೋರಿಡಾದ ಸೇಂಟ್ ಜಾನ್ಸ್ ನ್ ನದಿಗೆ ಬಿದ್ದಿದೆ ಎಂದು ಅಲ್ಲಿನ ಏರ್ ಬೇಸ್ ವಕ್ತಾರರು ಹೇಳಿದ್ದಾರೆ.

    ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಎಲ್ಲರೂ ಕ್ಷೇಮವಾಗಿ ಇದ್ದಾರೆ. ಯಾವುದೇ ರೀತಿಯ ಸಾವು ಸಂಭವಿಸಿಲ್ಲ. ವಿಮಾನದಿಂದ ಜನರನ್ನು ಕೆಳಗೆ ಇಳಿಸುವ ಸಂದರ್ಭದಲ್ಲಿ 21 ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅವರೆಲ್ಲರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಕ್ಷೇಮವಾಗಿದ್ದಾರೆ. ಎಲ್ಲಾ ಪ್ರಯಾಣಿಕರು ಲೆಕ್ಕಕ್ಕೆ ಸಿಕ್ಕಿದ್ದಾರೆ. ಯಾವ ಅಪಾಯವೂ ಇಲ್ಲ. ಹೀಗಾಗಿ ಯಾರು ಆತಂಕ ಪಡಬೇಡಿ ಎಂದು ಪ್ಲೋರಿಡಾದ ಜಾಕ್ಸನ್ವಿಲ್ ಶರೀಪ್ ಏಜೆನ್ಸಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದೆ.

    ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಕೀಲ ಚೆರಿಲ್ ಬೋರ್ಮನ್, ವಿಮಾನವು ಕ್ಯೂಬಾದಿಂದ 4 ಗಂಟೆ ತಡವಾಗಿ ಹೊರಟಿತ್ತು. ನಂತರ ಮಿಂಚು ಗಾಳಿಗಳ ಮಧ್ಯೆ ಜ್ಯಾಕ್ಸನ್ವಿಲೆಗೆ ಕ್ಷೇಮವಾಗಿ ಬಂತು. ಆದರೆ ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನವು ಪೈಲಟ್ ನಿಯಂತ್ರಣಕ್ಕೆ ಸಿಗಲಿಲ್ಲ. ಹೀಗಾಗಿ ತಕ್ಷಣ ನೆಲಕ್ಕೆ ಅಪ್ಪಳಿಸಿ ಬಳಿಕ ವಿಮಾನ ನದಿಯಲ್ಲಿ ಬಂದು ನಿಂತಿತು. ಇದರಿಂದ ನಾವು ಸಾಗರದೊಳಗೆ ಇದ್ದೇವಾ ನದಿಯಲ್ಲಿ ಇದ್ದೇವಾ ಎಂಬುದು ನಮಗೆ ಗೊತ್ತೆ ಆಗಿರಲಿಲ್ಲಿ. ಅಲ್ಲಿಂದ ಸೇನೆಯ ಸಹಾಯದಿಂದ ಹೊರಗಡೆ ಬಂದೆವು ಎಂದು ವಿಮಾನದೊಳಗಾದ ರೋಚಕ ಅನುಭವವನ್ನು ಹಂಚಿಕೊಂಡರು.

    ಈ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಜ್ಯಾಕ್ಸನ್ವಿಲೆಯ ಮೇಯರ್ ಲೆನ್ನಿ ಕರ್ರಿ, ಅಮೇರಿಕಾದ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಾಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.

  • ಹೊತ್ತಿ ಉರಿದ ವಿಮಾನಕ್ಕೆ 101 ಮಂದಿ ಬಲಿ

    ಹೊತ್ತಿ ಉರಿದ ವಿಮಾನಕ್ಕೆ 101 ಮಂದಿ ಬಲಿ

    ಹವಾನಾ: ಕ್ಯೂಬಾದ ರಾಜಧಾನಿ ಹವಾನಾದಲ್ಲಿ ವಿಮಾನ ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

    ಹವಾನಾದ ಜೋಸ್ ಮರ್ತಿ ಅಂತಾರಾಷ್ಷ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಅದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. 104 ಜನ ಪ್ರಯಾಣಿಕರಲ್ಲಿ ಬದುಕುಳಿದಿರುವುದು 3 ಜನ ಮಾತ್ರ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.

    ಸುಮಾರು 39 ವರ್ಷ ಹಳೆಯ ಬೋಯಿಂಗ್ 737 ವಿಮಾನ ಇದಾಗಿತ್ತು. ಮೆಕ್ಸಿಕನ್ ಏರ್ ಲೈನ್ಸ್ ಗೆ ಸೇರಿದ ವಿಮಾನವಾಗಿದ್ದು ಕ್ಯೂಬಾನಾ ಏವಿಯೇಶನ್ ಗೆ ಲೀಸ್ ಕೊಡಲಾಗಿತ್ತು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

    ಚಾರ್ಟ್‍ರ್ ವಿಮಾನವಾಗಿದ್ದು ವಿಮಾನ ನಿಲ್ದಾಣದಿಂದ 6 ಮೈಲಿಗಳ ದೂರದಲ್ಲಿ ಪತನಗೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ ಆದರೆ ಆ ವೇಳೆಗೆ ವಿಮಾನ ಸಂಪೂರ್ಣ ಸುಟ್ಟು ಹೋಗಿದೆ.

    ಹಲವು ಮಂದಿ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬೆಂಕಿಯನ್ನು ನಂದಿಸಲಾಗಿದ್ದು ಪರಿಹಾರ ಕಾರ್ಯ ಬಿರುಸಿನಿಂದ ಸಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಕ್ಯೂಬಾ ಅಧ್ಯಕ್ಷ ಮಿಗ್ಯುಯೆಲ್ ಡಯಾಸ್ ಕ್ಯಾನೆಲ್ ಹೇಳಿದ್ದಾರೆ.

  • ಸ್ಟಾರ್ ಕ್ಯಾಪ್ ತೊಟ್ಟು, ಗಡ್ಡ ಬಿಟ್ಟು, ಟಿ-ಶರ್ಟ್ ಮೇಲೆ ರಾರಾಜಿಸೋ ತರುಣನ ಕಥೆ ಓದಿ 

    ಸ್ಟಾರ್ ಕ್ಯಾಪ್ ತೊಟ್ಟು, ಗಡ್ಡ ಬಿಟ್ಟು, ಟಿ-ಶರ್ಟ್ ಮೇಲೆ ರಾರಾಜಿಸೋ ತರುಣನ ಕಥೆ ಓದಿ 

    ವನೊಬ್ಬ ಹುಟ್ಟು ಅಸ್ತಮಾ ರೋಗಿ. ಆದ್ರೆ, ರೋಗ ದೇಹಕ್ಕಷ್ಟೇ ಹೊರತು ಮನಸ್ಸಿಗಲ್ಲ ಅನ್ನೋದನ್ನು ಸಾಬೀತು ಮಾಡಿದಾತ. ವೈದ್ಯಕೀಯ ಶಿಕ್ಷಣ ಪಡೆದಿದ್ದವನಿಗೆ ಕ್ರಾಂತಿಯ ಹುಚ್ಚು ತಲೆಪೂರ್ತಿ ಆವರಿಸಿ ಬಿಟ್ಟಿತ್ತು. ವ್ಯವಸ್ಥೆಯ ವಿರುದ್ಧ ಸೆಟೆದು ನಿಂತವನಿಗೆ ಜಗತ್ತಿನ ಡೊಂಕ ತಿದ್ದುವ ಅದಮ್ಯ ಬಯಕೆನೂ ಇತ್ತು. ಮಣ್ಣಿಗೆ ಮಣ್ಣಿಗೆ ಕ್ರಾಂತಿಯ ಘಮ ಸಿಂಪಡಿಸಿದವನು ಜಗತ್ತೇ ಹೆಮ್ಮೆಯಿಂದ ತಿರುಗಿ ನೋಡೋ ಹಾಗೆ ಮಾಡ್ಬಿಟ್ಟ. ಹೆಸ್ರು ಕೇಳಿದ್ರೆ ನರನಾಡಿಗಳಲ್ಲೆಲ್ಲಾ ಮಿಂಚಿನ ಸಂಚಲನ ಉಂಟು ಮಾಡೋ ಕ್ರಾಂತಿಯ ಕಂದನೇ ಅರ್ನೆಸ್ಟೋ ಚೆಗುವೆರಾ.

    ನಾನೆಂದಿಗೂ ಸೋತು ಮನೆಗೆ ವಾಪಾಸಾಗೋದಿಲ್ಲ. ಸೋಲೋದಕ್ಕಿಂತ ಸಾವನ್ನೇ ಹೆಚ್ಚು ಇಷ್ಟಪಡ್ತೀನಿ ಅಂದಿದ್ದ ಛಲಗಾರ ಚೆಗುವೆರಾ. ಅವನದ್ದು ಹೋರಾಟದ ಬದುಕು ಅನ್ನೋದಕ್ಕಿಂತ ಹೋರಾಟವೇ ಬದುಕಾಗಿತ್ತು. ಅವನೊಬ್ಬ ಮಹಾನ್ ಮಾನವತಾವಾದಿ. ಗೆರಿಲ್ಲಾ ಯುದ್ಧದಲ್ಲಿ ಬಲಶಾಲಿಗಳ ಹೆಡೆಮುರಿಕಟ್ಟುತ್ತಿದ್ದ ಛಲದಂಕಮಲ್ಲ. ಕುಂತಲ್ಲೇ ಜಗತ್ತಿನ ಆಗುಹೋಗುಗಳ ಬಗ್ಗೆ ಬರೆಯುತ್ತಿದ್ದ. ಮಾತಿಗೆ ನಿಂತ್ರೆ ಎದುರಿದ್ದವರನ್ನು ಮಂತ್ರಮುಗ್ಧಗೊಳಿಸ್ತಿದ್ದ ಮೋಡಿಗಾರ. ಸತ್ತು ನಾಲ್ಕು ದಶಕಗಳೇ ಕಳೆದ್ರೂ ಅಂದಿನ ಖದರ್ ಇನ್ನೂ ಉಳಿಸ್ಕೊಂಡಿರುವವನು ಅವನೊಬ್ಬನೇ, ಅರ್ನೆಸ್ಟೊ ಚೆಗುವೆರಾ.

    ಅದು 1928ನೇ ಇಸವಿಯ ಜೂನ್ 14ನೇ ತಾರೀಕು. ಲಿಂಚ್ ಹಾಗೂ ಸೀಲಿಯಾ ಡ ಲಾ ಸೆರ್ನ್ ಎಂಬ ಸ್ಪ್ಯಾನಿಷ್-ಐರಿಷ್ ದಂಪತಿಗಳಿಗೆ ಮೊದಲ ಮಗ ಹುಟ್ಟಿದ್ದ. ಅಸ್ತಮಾದಿಂದ ತೀವ್ರ ನರಳ್ತಾ ಇದ್ದ ಮಗು ಬೇರೆ. ಚೆ ಮೌನಿ. ಅಂತರ್ಮುಖಿಯಾಗಿದ್ದ. ಯೌವ್ವನಾವಸ್ಥೆಗೆ ಬರ್ತಿದ್ದಂತೆ ಚಿಗುರು ಮೀಸೆಯ ತರುಣನಿಗೆ ಹೋರಾಟದ ಅಮಲು ಏರಿಬಿಟ್ಟಿತ್ತು. ಅದು 1948ನೇ ಇಸವಿ. ಚೆಗುವೆರಾ ವೈದ್ಯಕೀಯ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಬ್ಯೂನಸ್ ಐರಿಸ್ ಯೂನಿವರ್ಸಿಟಿಗೆ ಸೇರ್ಕೊಂಡ. ಆದ್ರೆ, ಬೆಂಚ್ ಮೇಲೆ ಕೂತು ಸವಿಯುವ ಪುಸ್ತಕದ ಶಿಕ್ಷಣ ಆತನಿಗೆ ರುಚಿಸಲಿಲ್ಲ. 1951ರಲ್ಲಿ ಯೂನಿವರ್ಸಿಟಿಯಿಂದ ಒಂದು ವರ್ಷ ರಜೆಯ ಅನುಮತಿ ಪಡ್ಕೊಂಡ ಚೆಗುವೇರಾ ಪ್ರಪಂಚ ಸುತ್ತೋ ಕನಸು ಕಂಡಿದ್ದ. ಗೆಳೆಯ ಅಲ್ಬರ್ಟೋ ಗ್ರೆನಡೋ ಜೊತೆ ಸೇರಿ ಮೋಟಾರ್ ಸೈಕಲ್ ಗೆ ಕಿಕ್ ಹೊಡೆದೋನೆ ದಕ್ಷಿಣ ಅಮೆರಿಕಾದ ಕಡೆ ಹೊರಟುಬಿಡ್ತಾನೆ. ಆಗ ಆತನ ಸವಾರಿ ಶರವೇಗದಂತಿತ್ತು.

    ಮೋಟಾರ್ ಬೈಕಿನ ಚಕ್ರಗಳಿಗೆ ಚೆಗುವೆರಾ ವಿಶ್ರಾಂತಿಯೇ ಕೊಡಲಿಲ್ಲ. ಆತನ ಕ್ರಾಂತಿಯ ದಾಹ ತಣಿಸೋಕೆ ಬೈಕ್ ಟ್ಯಾಂಕಲ್ಲಿದ್ದ ನೂರಾರು ಲೀಟರ್ ಪೆಟ್ರೋಲ್ ದಹನವಾಗಿತ್ತು. ಅಂದ ಹಾಗೆ ಚೆಗುವೆರಾ ಹೋರಾಟದ ಹಾದಿಗೆ ಒಂದು ರೂಪ ಕೊಟ್ಟಿದ್ದು ಇದೇ ಪ್ರವಾಸಗಳು. ಬಹುಶಃ ಅಂದು ಪ್ರವಾಸ ಹೋಗಿರದೇ ಇದ್ದಿದ್ರೆ ಚೆಗುವೆರಾ ಅನ್ನೋ ವ್ಯಕ್ತಿಯ ಬಗ್ಗೆ ಜಗತ್ತು ಬಿಡಿ, ಪಕ್ಕದ ಬೀದಿಗೇ ಗೊತ್ತಾಗ್ತಿರ್ಲಿಲ್ವೇನೋ. ಅಂದಹಾಗೆ ಚೆಗುವೆರಾ ಯುವಕನಾಗಿದ್ದಾಗ್ಲೇ ಪ್ರಖರ ಮಾತುಗಾರನಾಗಿದ್ದ. ಆತನ ನಾಲಿಗೆಯಿಂದ ಹೊರಬೀಳುತ್ತಿದ್ದ ಒಂದೊಂದು ಶಬ್ದವೂ ಹರಿತವಾದ ಕತ್ತಿಯ ಅಲಗಿನ ಹಾಗಿತ್ತು. ಆದ್ರೆ, ಬರೀ ಮಾತಿನ ಮಂಟಪ ಕಟ್ಟಿದ್ರೆ ಆದೀತೇ. ಖಂಡಿತಾ ಇಲ್ಲ. ಅಲ್ಲಿ ಬೇಕಾಗಿದ್ದಿದ್ದು ಶಾಸ್ತ್ರವಲ್ಲ. ಬದಲಾಗಿ ಶಸ್ತ್ರಗಳ ತಪಸ್ಸು.

    ಲ್ಯಾಟಿನ್ ಅಮೆರಿಕದಲ್ಲಿ ಸಾಮ್ರಾಜ್ಯಶಾಹಿಯ ಕ್ರೂರಮುಖ, ಗ್ವಾಟೆಮಾಲಾ, ಕ್ಯೂಬಾ ಹಾಗೂ ಮೆಕ್ಸಿಕೋಗಳಲ್ಲಿ ನಡೀತಿದ್ದ ದೌರ್ಜನ್ಯಗಳನ್ನ ಚೆ ಬಹಳ ಹತ್ತಿರದಿಂದ ಗಮನಿಸಿದ್ದ. ದಾಸ್ಯ ವಿಮುಕ್ತಿಗಾಗಿ ಸಾಲುಸಾಲಾಗಿ ಚಳುವಳಿಗಳೇನೋ ನಡೀತಿತ್ತು. ಆದ್ರೆ, ಅದನ್ನು ಮುನ್ನಡೆಸುವ ನಾಯಕನ ಕೊರತೆ ಇತ್ತು. ಬಾಪ್ಟಿಸ್ಟನ ದುರಾಡಳಿತದಿಂದ ಬೇಸತ್ತಿದ್ದ ಜನ ಚೆಗುವೆರಾನನ್ನೇ ನೆಚ್ಚಿಕೊಂಡ್ರು.

    ಸತತ ಹೋರಾಟದ ಫಲವಾಗಿ ಅಂತಿಮವಾಗಿ 1959 ಜನವರಿ 1 ರಂದು ಕ್ಯೂಬಾ ವಿಮೋಚನೆಗೊಂಡು ಸಮಾಜವಾದಕ್ಕೆ ತನ್ನನ್ನು ಅರ್ಪಿಸಿಕೊಂಡಿತು. ಮುಂದೆ ಚೆಗುವೆರಾನ ಕ್ರಾಂತಿಕಾರಿ ಮನಸ್ಸು ತೀವ್ರ ಶೋಷಣೆಗೊಳಗಾಗಿದ್ದ ಆಫ್ರಿಕಾದ ಕಾಂಗೋ ಹಾಗೂ ಲ್ಯಾಟಿನ್ ಅಮೆರಿಕಾದ ಬೊಲಿವಿಯಾದತ್ತ ಹೊರಳಿತ್ತು. ಸಿಐಎ ಕೈಗೊಂಬೆಯಾಗಿದ್ದ ಬೊಲಿವಿಯಾ ಸರ್ವಾಧಿಕಾರಿ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸ್ಕೊಂಡ. ಆ ಸಂದರ್ಭ ನಿಜಕ್ಕೂ ಅತ್ಯಂತ ಕಠೋರವಾಗಿತ್ತು. ಇಲ್ಲಿ ಚೇ ಅನುಸರಿಸಿದ್ದ ಗೆರಿಲ್ಲಾ ಯುದ್ಧದ ಬಗ್ಗೆ ಹೇಳದಿದ್ರೆ ಆತನ ತಂತ್ರಗಾರಿಕೆ, ಯೋಜನೆಯ ಬಗ್ಗೆ ಅರಿವಾಗ್ಲಿಕ್ಕಿಲ್ಲ. ಗೆರಿಲ್ಲಾ ಸಂಘಟಿತ ಯುದ್ಧವೇನಲ್ಲ. ಆದ್ರೆ, ಇಲ್ಲಿ ನಾಗರಿಕರ ಕೈಗೆ ಶಸ್ತ್ರ ಬರ್ತಿತ್ತು. ಇದು ಸಣ್ಣ ಸಣ್ಣ ಗುಂಪುಗಳ ಹೋರಾಟವಾಗಿರ್ತಿತ್ತು. ದೊಡ್ಡ ಮಟ್ಟದ ಸೈನ್ಯದ ಮುಂದೆ ತೋಳ್ಬಲಕ್ಕಿಂತ ಬುದ್ಧಿಬಲವನ್ನು ಉಪಯೋಗಿಸಿ ಮಾಡೋ ಸಶಸ್ತ್ರ ಹೋರಾಟ ಈ ಗೆರಿಲ್ಲಾ. ಕೊನೆಗೆ ಚೆಗುವೆರಾ ತನ್ನ ಜೀವವನ್ನೇ ಪಣಕ್ಕಿಟ್ಟು ಬೊಲೀವಿಯನ್ನರಿಗೆ ನೆಮ್ಮದಿಯ ಬದುಕನ್ನ ಕಟ್ಟಿಕೊಟ್ಟಿದ್ದ.

    ಅಂದ ಹಾಗೆ, ಚೇ ಬಹಳಾ ಇಷ್ಟವಾಗೋದು ಎರಡು ಕಾರಣಕ್ಕೆ. ಒಂದು ಆತನಲ್ಲಿದ್ದ ಅದಮ್ಯ ಇಚ್ಛಾಶಕ್ತಿಗೆ. ಇನ್ನೊಂದು ಅದನ್ನು ಚೇಸ್ ಮಾಡೋ ರೀತಿಗೆ. ಈ ನಡುವೆ ಚೆಗುವೆರಾನ ಕಂಡು ಅಮೆರಿಕ ಕತ್ತಿ ಮಸೀತಿತ್ತಲ್ಲಾ. ಹೀಗಾಗಿ ಚೆ ಯನ್ನು ಸಾಯಿಸಿಯಾದರೂ ಸರಿ ಅಥವಾ ಜೀವಂತವಾದರೂ ಸರಿ, ಸೆರೆಹಿಡಿಯಲೇಬೇಕೆಂದು ಸಿಐಎಯನ್ನು ಛೂ ಬಿಟ್ಟಿತ್ತು. ಬೊಲಿವಿಯನ್ ಸರ್ಕಾರದ ಮೇಲೆ ಒತ್ತಡ ಹೇರಿದ್ದ ಅಮೆರಿಕ ಚೆಗವೇರಾನ ಸಾವಿಗೆ ಮುಹೂರ್ತ ಫಿಕ್ಸ್ ಮಾಡಿತ್ತು. 1967 ರ ಅಕ್ಟೋಬರ್ 8 ರಂದು ಚೆಯನ್ನು ಸಿಐಎ ಬೆಂಬಲಿತ ಬೋಲಿವಿಯಾದ 1800 ಜನರಿದ್ದ ಪಡೆ ಸುತ್ತುವರೆದಿತ್ತು.

    ಮೈಮೇಲೆ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಗಾಯದ ನೋವಿನಿಂದ ಬಳಲಿದ್ದ ಚೆಗುವೇರಾಗೆ ಅಕ್ಟೋಬರ್ 9ರಂದು ಮರಣದಂಡನೆ ಶಿಕ್ಷೆ ವಿಧಿಸಲಾಯ್ತು. ಚೇ ಸತ್ತ ನಂತ್ರ ಅವನ ಮುಖವನ್ನು ಪಡಿಯಚ್ಚು ತೆಗೆದು ಅವನ ದೇಹವನ್ನು ಹತ್ತಿರದಿಂದ ಫೋಟೋ ತೆಗೆಯಲಾಯಿತು. ಅವನ ಕೈಗಳನ್ನು ಮುಂಗೈ ಬಳಿ ಕತ್ತರಿಸಿ ಅವುಗಳನ್ನು ಆಲ್ಕೊಹಾಲಿನಲ್ಲಿ ರಕ್ಷಿಸಿಟ್ಟರು. ಕಾರಣ ನಾವು ಕೊಂದ ವ್ಯಕ್ತಿ ಚೆಗೆವಾರ ಎಂಬುದರ ಋಜುವಾತುವಿಗಾಗಿ ಅವರ ಹಾಗೆ ಮಾಡಿದರು. ಚೆ. ಸತ್ತ ಸುದ್ದಿ ತಿಳಿದು ಜಗತ್ತಿನಾದ್ಯಂತ ಅವನ ಸಂಗಾತಿಗಳು ಶೋಕತಪ್ತರಾದರು. ಎಂಥಾ ವಿಕೃತ ಮನಸ್ಥಿತಿ. ಅಮೆರಿಕಾಗೆ ಎಂಥಾ ತಳಮಳ ಕಾಡಿದ್ದಿರಬಹುದು ಅಲ್ವಾ..?

    ಆರ್ನೆಸ್ಟೋ ಚೆಗೆವಾರ ಜಗತ್ತಿನಿಂದ ದೂರವಾಗಿ ಸುಮಾರು ನಾಲ್ಕುವರೆ ದಶಕಗಳೇ ಕಳೆದಿವೆ. ಆದ್ರೆ, ಇದುವರೆಗೂ ಯಾವ್ದೇ ಸಾಮ್ರಾಜ್ಯಶಾಹಿ ದೇಶಗಳಿಗೂ ಚೆ ನ ಪ್ರಭಾವದಿಂದ ಅಲ್ಲಿನ ಯುವಜನರನ್ನು ದೂರ ಮಾಡಲು ಸಾಧ್ಯನೇ ಆಗಿಲ್ಲ. ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಹೋರಾಟಗಳಿಗೆಲ್ಲಾ ಚೆ ಈಗಲೂ ಸ್ಪೂರ್ತಿಯೇ. ಸಮಾನತೆಯ ಸಮಾಜವನ್ನು ಕಟ್ಟುವ ಕನಸು ಕಾಣುತ್ತಿರುವವರಿಗೆ, ಅನ್ಯಾಯವನ್ನು ಪ್ರತಿಭಟಿಸುತ್ತಿರುವವರಿಗೆ ಹಾಗೂ ಜಗದಗಲ ನಡೆಯುವ ಶೋಷಣೆಯನ್ನು ಕೊನೆಗಾಣಿಸಬೇಕೆಂದು ಹಂಬಲಿಸುತ್ತಿರುವ ಎಲ್ಲರ ಪಾಲಿಗೆ ಕ್ರಾಂತಿಯ ಕಂದ ಆತ. ಛೇ.. ಚೆದು ಸಾಯೋ ವಯಸ್ಸಂತೂ ಖಂಡಿತಾ ಅಲ್ಲ ಕಣ್ರೀ.

    ಕ್ಷಮಾ ಭಾರದ್ವಾಜ್, ಉಜಿರೆ

    https://www.youtube.com/watch?v=G9DyXX7YKuk