Tag: cub

  • 4 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದಿದ್ದ ಚೀತಾ

    4 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದಿದ್ದ ಚೀತಾ

    ಲಕ್ನೋ: ಕಳೆದ ವರ್ಷ ನಮೀಬಿಯಾದಿಂದ (Namibia) ತರಲಾಗಿದ್ದ ಚೀತಾಗಳಲ್ಲೊಂದು 4 ಮರಿಗಳಿಗೆ (Cubs) ಜನ್ಮ ನೀಡಿದೆ.

    ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು (Cheetah) ವಿಶೇಷ ವಿಮಾನಗಳಲ್ಲಿ ಭಾರತಕ್ಕೆ ತರಲಾಗಿತ್ತು. ಇದೀಗ ಒಂದು ಚೀತಾ 4 ಮರಿಗಳಿಗೆ ಜನ್ಮ ನೀಡಿರುವ ಮಾಹಿತಿಯನ್ನು ಕೇಂದ್ರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ. ಮರಿಗಳ ಮುದ್ದಾದ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಜನ್ಮದಿನವಾದ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಅವುಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ಬಿಡಲಾಗಿತ್ತು. ಬಳಿಕ ಚೀತಾಗಳು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಸ್ವತಃ ಬೇಟೆಯಾಡಲು ಆರಂಭಿಸಿದ್ದವು. ಇದನ್ನೂ ಓದಿ: ಕಿಡ್ನಿ ಸೋಂಕು – ನಮೀಬಿಯಾದಿಂದ ತಂದಿದ್ದ 8ರಲ್ಲಿ ಒಂದು ಚಿರತೆ ಸಾವು

    ಕಳೆದ 2 ದಿನಗಳ ಹಿಂದೆ ಭಾರತಕ್ಕೆ ತರಲಾಗಿದ್ದ 8 ಚೀತಾಗಳ ಪೈಕಿ ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಸಾಶಾ ಹೆಸರಿನ 3 ವರ್ಷದ ಚೀತಾ ಮೃತಪಟ್ಟಿದೆ. ಸಾಶಾ ಭಾರತಕ್ಕೆ ಕರೆತರುವ ಮುನ್ನವೇ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ಹೇಳಲಾಗಿದೆ.

    ಚೀತಾ ವಿಶೇಷತೆಯೇನು?
    ಮಚ್ಚೆ ಗುರುತಿನ ಚೀತಾಗಳ ಸಂತತಿಯನ್ನು 1952ರಲ್ಲಿ ಭಾರತದಲ್ಲಿ ಅಳಿದುಹೋದ ಸಂತತಿ ಎಂದು ಘೋಷಣೆ ಮಾಡಲಾಗಿತ್ತು. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 2009ರಲ್ಲಿ ಆಫ್ರಿಕನ್ ಚೀತಾ ಯೋಜನೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಅದಾದ 75 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಚೀತಾಗಳಿಗೆ ಕುನೋ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ. ಇದನ್ನೂ ಓದಿ: ಹಿರಿಯ ಅಧಿಕಾರಿಯಿಂದ ಬೆದರಿಕೆ, 2 ವಾರದೊಳಗೆ ನನ್ನ ಕೊಲ್ಬೋದು – ಅತೀಕ್ ಸಹೋದರ ಅಶ್ರಫ್

  • ಸಮುದ್ರ ಕುದುರೆ ಮರಿ ಹಾಕುವ ವಿಡಿಯೋ ನೋಡಿ

    ಸಮುದ್ರ ಕುದುರೆ ಮರಿ ಹಾಕುವ ವಿಡಿಯೋ ನೋಡಿ

    ನವದೆಹಲಿ: ಎಂದಾದರೂ ಸಮುದ್ರ ಕುದುರೆ ಮರಿ ಹಾಕುವುದನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಗಂಡು ಸಮುದ್ರ ಕುದುರೆ ಮರಿ ಹಾಕುವ ದೃಶ್ಯ. ಈ ವಿಡಿಯೋ ನೋಡಿದರೆ ನಿಜಕ್ಕೂ ನೀವು ಒಂದು ಕ್ಷಣ ಬೆರಗಾಗುತ್ತೀರಿ.

    ಮುಖ-ಕುದುರೆಯಂತೆ, ದೇಹ-ಕಂಬಳಿ ಹುಳುವಿನಂತೆ, ಬಾಲ-ಹಲ್ಲಿಯಂತೆ ಇರುವ ಸಮುದ್ರ ಕುದುರೆ, ಮೀನುಗಳು ಕಶೇರುಕಗಳ (Chordata) ಗುಂಪಿಗೆ ಸೇರಿದೆ. ಕಾಂಗರೂಗಳ ರೀತಿಯಲ್ಲೇ ಗಂಡು ಸಮುದ್ರ ಉದುರೆ ಸಹ ತನ್ನ ಮರಿಗಳನ್ನು ಹೊಟ್ಟೆ ಭಾಗದ ಚೀಲದಲ್ಲಿ ಇಟ್ಟುಕೊಂಡಿರುತ್ತದೆ. ಇನ್ನೂ ವಿಶೇಷವೆಂದರೆ ಸಮುದ್ರ ಕುದುರೆ ಒಂದೇ ಬಾರಿಗೆ ಸಾವಿರಾರು ಮರಿಗಳನ್ನು ಹಾಕುತ್ತದೆ. ಸಮುದ್ರ ಕುದುರೆ ಮರಿ ಹಾಕುವ ಅಪರೂಪದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ನೇಚರ್ ಇಸ್ ಲಿಟ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, 19 ಸೆಕೆಂಡ್‍ನ ವಿಡಿಯೋ ಟ್ವೀಟ್ ಮಾಡಿ ಒನ್ ವರ್ಡ್ ದಿಸ್ ವಿಡಿಯೋ ಎಂಬ ಸಾಲುಗಳನ್ನು ಬರೆಯಲಾಗಿದೆ. ಈ ಮೂಲಕ ಫಾಲೋವರ್ಸ್ ಗೆ ಕಮೆಂಟ್ ಮಾಡುವಂತೆ ಕರೆ ನೀಡಲಾಗಿದೆ. ಅಕ್ವೇರಿಯಂನಲ್ಲಿನ ಸಮುದ್ರ ಕುದುರೆ ಹಲವು ಮರಿಗಳಿಗೆ ಜನ್ಮ ನೀಡುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ವಿಡಿಯೋ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. 41.4 ಬಾರಿ ವೀಕ್ಷಣೆಯಾಗಿದೆ. 265ಜನ ರೀಟ್ವೀಟ್ ಮಾಡಿದ್ದಾರೆ.

    ಸಮುದ್ರ ಕುದುರೆ ಮರಿಗಳನ್ನು ಹಾಕುತ್ತದೆ ಆದರೆ ಅವುಗಳನ್ನು ಬೆಳೆಸುವುದಿಲ್ಲ. ಒಂದು ಬಾರಿ ಚೀಲದಿಂದ ಹೊರ ಬಂದ ಬಳಿಕ ಮರಿಗಳು ಸ್ವಂತ ಶಕ್ತಿಯಿಂದ ಬೆಳೆಯುತ್ತವೆ. ಇದರ ಸಂತತಿಗೆ ಯಾವುದೇ ರಕ್ಷಣೆ ಸಿಗುವುದಿಲ್ಲ. ಹೀಗಾಗಿ ಹೆಚ್ಚು ಮರಿಗಳು ಸಾವಿಗೆ ತುತ್ತಾಗುತ್ತವೆ. ಕೆಲವೇ ಸಮುದ್ರ ಕುದುರೆಗಳು ಬದುಕುಳಿಯಲು ಇದೇ ಕಾರಣವಾಗಿದೆ.

  • ಬನ್ನೇರುಘಟ್ಟದಲ್ಲಿದೆ ಆರು ತಿಂಗಳ ‘ಹಿಮಾದಾಸ್’ ಹುಲಿಮರಿ

    ಬನ್ನೇರುಘಟ್ಟದಲ್ಲಿದೆ ಆರು ತಿಂಗಳ ‘ಹಿಮಾದಾಸ್’ ಹುಲಿಮರಿ

    ಬೆಂಗಳೂರು: ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅವರ ಹೆಸರನ್ನು ಹುಲಿಮರಿಗೆ ಇಡುವ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನ ಗೌರವ ಸಲ್ಲಿಸಿದೆ.

    ಹಿಮಾ ದಾಸ್ ಒಂದು ತಿಂಗಳ ಕಡಿಮೆ ಅವಧಿಯಲ್ಲಿ ಬ್ಯಾಕ್ ಟು ಬ್ಯಾಕ್ ಚಿನ್ನದ ಪದಕ ಗೆದ್ದಿದ್ದಾರೆ. ಹಾಗಾಗಿ ಅವರಿಗೆ ಗೌರವ ನೀಸಲು ವಿಶ್ವ ಹುಲಿ ದಿನಾಚರಣೆಯ ದಿನದಂದು ಬನ್ನೇರುಘಟ್ಟ ಪಾರ್ಕಿನಲ್ಲಿ 6 ತಿಂಗಳ ರಾಯಲ್ ಬೆಂಗಾಲ್ ಹುಲಿಮರಿಗೆ ಹಿಮಾ ದಾಸ್ ಎಂದು ಹೆಸರಿಟ್ಟಿದ್ದಾರೆ.

    ವಿಶ್ವ ಹುಲಿ ದಿನಾಚರಣೆ ಆಚರಿಸುವ ವೇಳೆ ಮೃಗಾಲಯದ ಯೋಜನೆಗಳನ್ನು ಮತ್ತು ಉಪಕ್ರಮವನ್ನು ಹೇಳುವಾಗ ಸರ್ಕಾರಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ನವಶ್ರೀ ವಿಪಿನ್ ಸಿಂಗ್ ಇದನ್ನು ಘೋಷಿಸಿದ್ದಾರೆ. ಅಲ್ಲದೆ ವಿಶ್ವ ಹುಲಿ ದಿನಾಚರಣೆಯಂದು ಸಾರ್ವಜನಿಕರು ವೀಕ್ಷಿಸಲು ಎಂದು 8 ಹುಲಿಗಳನ್ನು ಸಫಾರಿಗೆ ಬಿಟ್ಟಿದ್ದೇವು. ಒಟ್ಟು 8 ಹುಲಿಯಲ್ಲಿ ತಾಯಿ ಸೇರಿ 7 ಮಕ್ಕಳಿದ್ದು, ಒಂದಕ್ಕೆ ಹಿಮಾ ದಾಸ್ ಅವರ ಹೆಸರನ್ನು ಇಡಲಾಗಿದೆ. ಕಳೆದ 20 ದಿನದಲ್ಲಿ ಹಿಮಾ ದಾಸ್ 5 ಚಿನ್ನದ ಪದಕ ಗೆದ್ದಿದ್ದು, ಹಾಗಾಗಿ ನಾವು ಈ ರೀತಿ ಅವರಿಗೆ ಗೌರವ ಸೂಚಿಸುತ್ತಿದ್ದೇವೆ ಎಂದು ನವಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.

    ಹಿಮಾ ಅವರ ಐದು ಚಿನ್ನದ ಪದಕದ ಪಟ್ಟಿ:
    1. ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನದ ಪದಕ ಗೆದ್ದಿದ್ದರು.

    2. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಪಡೆದರು.

    3. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.

    4. ಜುಲೈ 18ರಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

    5. ಈಗ ಜುಲೈ 20ರಂದು 400 ಮೀಟರ್ ಓಟವನ್ನು 52.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ತಮ್ಮ ಐದನೇ ಚಿನ್ನದ ಪದಕವನ್ನು ಗಳಿಸಿದ್ದಾರೆ.

  • ಜಿಂಕೆಮರಿಯನ್ನ ಬೇಟೆಯಾಡದೆ ಅದರ ಆರೈಕೆಯಲ್ಲಿ ತೊಡಗಿತು ಸಿಂಹಿಣಿ- ಇಲ್ಲಿದೆ ಕಾರಣ

    ಜಿಂಕೆಮರಿಯನ್ನ ಬೇಟೆಯಾಡದೆ ಅದರ ಆರೈಕೆಯಲ್ಲಿ ತೊಡಗಿತು ಸಿಂಹಿಣಿ- ಇಲ್ಲಿದೆ ಕಾರಣ

    ವಿಂಡ್‍ಹೋಕ್: ಸಾಮಾನ್ಯವಾಗಿ ಈ ಫೋಟೋಗಳನ್ನ ನೋಡಿದಾಗ ಸಿಂಹಿಣಿ ಜಿಂಕೆಯನ್ನ ಬೇಟೆಯಾಡಲು ಹಿಡಿದುಕೊಂಡಿದೆ ಎಂದು ಅನ್ನಿಸಬಹುದು. ಆದ್ರೆ ಇದರ ಹಿಂದೆ ಒಂದು ಮನಮುಟ್ಟುವ ಕಥೆಯಿದೆ.

    ಸಿಂಹಿಣಿ ಜಿಂಕೆಮರಿಯ ತಲೆಯನ್ನ ನೆಕ್ಕುತ್ತಾ, ಅದನ್ನ ಆರೈಕೆ ಮಾಡುತ್ತಾ ಮರಿಯ ರಕ್ಷಣೆಗೆ ನಿಂತಿರೋದನ್ನ ಫೋಟೋಗಳಲ್ಲಿ ಕಾಣಬಹುದು. ನೈಋತ್ಯ ಆಫ್ರಿಕಾದ ನಮೀಬಿಯಾದ ಇಟೋಶಾ ಪ್ಯಾನ್ ಗೇಮ್ ರಿಸರ್ವ್ ನಲ್ಲಿ ಈ ದೃಶ್ಯವನ್ನು ಕಂಡು ಅಮೆರಿಕದ ಫೋಟೋಗ್ರಾಫರ್ ಗೋರ್ಡನ್ ಡೊನೋವ್ಯಾನ್ ಆಶ್ಚರ್ಯಚಕಿತರಾಗಿದ್ರು. ಡೊನೋವ್ಯಾನ್ ಸಿಂಹಿಣಿ ಹಾಗೂ ಜಿಂಕೆಮರಿ ನಡುವಿನ ಈ ಅಪೂರೂಪದ ಬಾಂಧವ್ಯವನ್ನ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

    ವಿರೋಧಿ ತಂಡದ ಸಿಂಹವೊಂದು ಸಿಂಹಗಳ ಗುಂಪನ್ನ ಆಕ್ರಮಿಸಿಕೊಂಡ ಬಳಿಕ ಸಿಂಹಿಣಿಯ ಎರಡು ಗಂಡು ಮರಿಗಳನ್ನ ಕೊಂದುಹಾಕಿತ್ತು. ಇದರಿಂದ ದುಃಖದಲ್ಲಿದ್ದ ಸಿಂಹಿಣಿ, ಜಿಂಕೆ ಮರಿಯನ್ನ ತನ್ನ ಮರಿಯಂತೆಯೇ ಆರೈಕೆ ಮಾಡ್ತಿದೆ ಅಂತ ಗೋರ್ಡನ್ ಅವರಿಗೆ ಇಲ್ಲಿನ ಗೈಡ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಜಿಂಕೆಗಳು ಸಿಂಹಗಳಿಗೆ ಆಹಾರ. ಆದ್ರೆ ದುಃಖದಲ್ಲಿರುವ ಸಿಂಹಿಣಿ ಜಿಂಕೆಮರಿಯನ್ನ ಕೊಲ್ಲೋ ಬದಲು ಅದನ್ನ ದತ್ತು ಪಡೆದು ಆರೈಕೆ ಮಾಡ್ತಿದೆ.

    ಇದೊಂದು ವಿಚಿತ್ರ ಆದರೂ ಆಶ್ಚರ್ಯಕರ ದೃಶ್ಯವಾಗಿತ್ತು. ಸಿಂಹಿಣಿ ಜಿಂಕೆಮರಿಯನ್ನ ಕೊಂದುಬಿಡುತ್ತದೆ ಎಂದು ನಾನು ಕಾಯುತ್ತಿದ್ದೆ, ಆದ್ರೆ ಅದು ಆಗಲೇ ಇಲ್ಲ. ಸಿಂಹಿಣಿ ಬಂದು ಜಿಂಕೆಮರಿಯ ತಲೆಯನ್ನ ಸವರಲು ಶುರು ಮಾಡಿತು. ಪ್ರಕೃತಿಯ ನಿಗೂಢವೇ ಇಂಥದ್ದು. ಮುಂದೆ ಏನಾಗುತ್ತದೆ ಎಂದು ತಿಳಿಯಲು ಸಾಧ್ಯವಾಗಲ್ಲ ಎಂದು ಗೋರ್ಡನ್ ಹೇಳಿದ್ದಾರೆ.

    ಗೋರ್ಡನ್ ಈ ದೃಶ್ಯವನ್ನ ಸುಮಾರು 2 ಗಂಟೆಗಳ ಕಾಲ ವೀಕ್ಷಿಸಿದ್ದಾಗಿ ಹೇಳಿದ್ದಾರೆ.