Tag: ctravi

  • 6 ವರ್ಷ ಕಾಂಗ್ರೆಸ್ ಲೂಟಿ ಮಾಡಿ ಎಲ್ಲ ರೀತಿಯಲ್ಲೂ ರಾಜ್ಯ ದಿವಾಳಿಯಾಗಿತ್ತು – ಸಿದ್ದುಗೆ ರವಿ ತಿರುಗೇಟು

    6 ವರ್ಷ ಕಾಂಗ್ರೆಸ್ ಲೂಟಿ ಮಾಡಿ ಎಲ್ಲ ರೀತಿಯಲ್ಲೂ ರಾಜ್ಯ ದಿವಾಳಿಯಾಗಿತ್ತು – ಸಿದ್ದುಗೆ ರವಿ ತಿರುಗೇಟು

    ಬೆಂಗಳೂರು: ನೆರೆ ಪರಿಹಾರ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಾಯಕರು ಕಿಡಿಕಾರುತ್ತಿದ್ದಾರೆ. ಅಲ್ಲದೇ ಒಬ್ಬರಿಗೊಬ್ಬರು ಟ್ವೀಟ್ ಮಾಡಿಕೊಂಡು ಸಮರ ಸಾರುತ್ತಿದ್ದಾರೆ. ಹೀಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಟ್ವೀಟ್‍ಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

    ರವಿ ಟ್ವೀಟ್ ನಲ್ಲೇನಿದೆ?
    ಸಿದ್ದರಾಮಯ್ಯ ಅವರೇ, ಕಳೆದ 6 ವರ್ಷ ನೀವು, ಕಾಂಗ್ರೆಸ್ ಲೂಟಿ ಮಾಡಿ ಎಲ್ಲ ರೀತಿಯಲ್ಲೂ ರಾಜ್ಯ ದಿವಾಳಿಯಾಗಿತ್ತು. ಇದೀಗ ನೀವು ಯಾವ ಮುಖ ಇಟ್ಟುಕೊಂಡು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಟೀಕೆ ಮಾಡುತ್ತಿದ್ದೀರಿ ಅಲ್ಲದೆ ಅವರನ್ನು ರಾಜೀನಾಮೆ ಕೊಡಿ ಎಂದು ಕೇಳುತ್ತಿದ್ದೀರಿ. ನಿಮಗೆ ನಾಚಿಕೆ ಇಲ್ಲವಾ, ನೈತಿಕತೆ ಎಂದ ಪದವನ್ನು ನಿಮ್ಮ ಶಬ್ಧಕೋಶದಿಂದ ತೆಗೆದುಹಾಕಿದ್ದೀರಾ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುವ ಮೂಲಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

    ಸಿದ್ದು ಟ್ವೀಟ್ ಮಾಡಿದ್ದೇನು..?
    ಸನ್ಮಾನ್ಯ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ, ನಿಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಒಪ್ಪಿಕೊಂಡ ನಂತರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ನಿಮಗಿಲ್ಲ. ಹೀಗಾಗಿ ದಯವಿಟ್ಟು ರಾಜೀನಾಮೆ ಕೊಟ್ಟು ಹೊರಟುಬಿಡಿ. ನಿಮ್ಮ ಅಸಾಮಥ್ರ್ಯಕ್ಕಾಗಿ ರಾಜ್ಯದ ಜನರನ್ನು ಶಿಕ್ಷಿಸಬೇಡಿ ಎಂದು ಬರೆದುಕೊಂಡು ಪಬ್ಲಿಕ್ ಟಿವಿಯಲ್ಲಿ ರಾಜ್ಯದ ಬೊಕ್ಕಸ ಖಾಲಿ ಎಂದು ಪ್ರಸಾರವಾದ ಸುದ್ದಿಯ ಕೆಲ ಸ್ಕ್ರೀನ್ ಶಾಟ್‍ಗಳನ್ನು ಪೋಸ್ಟ್ ಮಾಡಿ ಕರ್ನಾಟಕ ಸಿಎಂ, ಬಿಎಸ್‍ವೈ ಹಾಗೂ ಕರ್ನಾಟಕ ಕಾಂಗ್ರೆಸ್‍ಗೆ ಟ್ಯಾಗ್ ಮಾಡಿದ್ದಾರೆ.

    ಅಲ್ಲದೆ ಸನ್ಮಾನ್ಮ ಬಿಎಸ್‍ವೈ ಬಿಜೆಪಿ ಅವರೇ, ನಿಮ್ಮ ಜಗಳದಲ್ಲಿ ಕರ್ನಾಟಕವನ್ನು ಯಾಕೆ ಬಲಿಕೊಡುತ್ತೀರಿ?. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಯೋಗ್ಯತೆ ನರೇಂದ್ರ ಮೋದಿ ಸರ್ಕಾರಕ್ಕಿಲ್ಲ. ನ್ಯಾಯಬದ್ಧ ಪರಿಹಾರ ಕೇಳಿ ವರದಿ ಸಲ್ಲಿಸುವ ಯೋಗ್ಯತೆ ನಿಮಗೂ ಇಲ್ಲ. ಆರ್ಥಿಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿಯೂ ನಿಮ್ಮ ಸರ್ಕಾರ ದಿವಾಳಿಯಾಗಿದೆ ಎಂದು ಬರೆದು ಬಿಎಸ್‍ವೈ ಹಾಗೂ ನರೇಂದ್ರ ಮೋದಿಗೆ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ.

    ರಾಜ್ಯದ ಬೊಕ್ಕಸ ಖಾಲಿ?
    ರಾಜ್ಯದಲ್ಲಿ ನೆರೆಯಿಂದ ಉಂಟಾಗಿರುವ ಬೆಳೆಹಾನಿ ಪರಿಹಾರಕ್ಕೆ ಹಣ ನೀಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪನವರು ಗುರುವಾರ ಬೆಳಗಾವಿಯಲ್ಲಿ ಪರೋಕ್ಷವಾಗಿ ಹೇಳಿದ್ದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಿಎಂ ಬಿಎಸ್‍ವೈ ಅವರ ನೇತೃತ್ವದಲ್ಲಿ ಪ್ರವಾಹ ಪರಿಹಾರ ಕಾರ್ಯಗಳ ಪರಿಶೀಲನಾ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ ಅವರು ಬೆಳೆಹಾನಿಯಾಗಿರುವ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿದ್ದರು. ಈ ಪ್ರಶ್ನೆಗೆ ಅಸಹಾಯಕ ಉತ್ತರ ನೀಡಿದ ಸಿಎಂ, ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ. ಕೇಂದ್ರದ ನಿಯಮಗಳ ಅನ್ವಯ ಬೆಳೆಹಾನಿ ಪರಿಹಾರ ನೀಡುತ್ತೇವೆ ಎಂದು ಉತ್ತರಿಸಿದ್ದರು.