– ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿಗೆ ಸೋಲು
ಚೆನ್ನೈ: ಸಂಘಟಿತ ಬ್ಯಾಟಿಂಗ್ ಹಾಗೂ ಮುಸ್ತಫಿಜುರ್ ರೆಹಮಾನ್ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಸಿಎಸ್‌ಕೆ ಋತುರಾಜ್ ಗಾಯಕ್ವಾಡ್ (Ruturaj Gaikwad) ಅವರ ನಾಯಕತ್ವದಲ್ಲಿ ಗೆಲುವಿನ ಶುಭಾರಂಭ ಕಂಡಿದೆ.
ಇಲ್ಲಿನ ಚೆನ್ನೈನ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ (RCB) 173 ರನ್ ಗಳಿತ್ತು. 174 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 18.4 ಓವರ್‌ಗಳಲ್ಲಿ 176 ರನ್ ಬಾರಿ 17ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

ಚೇಸಿಂಗ್ ಆರಂಭಿಸಿದ ಚೆನ್ನೈ ತಂಡ ಸ್ಫೋಟಕ ಪ್ರದರ್ಶನದ ಹೊರತಾಗಿಯೂ ವಿಕೆಟ್‌ಗಳನ್ನ ಕಳೆದುಕೊಳ್ಳುತ್ತಾ ಸಾಗಿತ್ತು. ಆರಂಭಿಕ ಆಟಗಾರ ರಚಿನ್ ರವೀಂದ್ರ 15 ಎಸೆತಗಳಲ್ಲಿ 37 ರನ್ ಚಚ್ಚಿದರೆ, ಅಜಿಂಕ್ಯಾ ರಹಾನೆ (Ajinkya Rahane) 27 ರನ್, ಡೇರಿಲ್ ಮಿಚೆಲ್ 22 ರನ್, ನಾಯಕ ಋತುರಾಜ್ ಗಾಯಕ್ವಾಡ್ 15 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಮಧ್ಯಮ ಕ್ರಮಾಂಕದಲ್ಲಿ ಬೌಲಿಂಗ್ ಹಿಡಿತ ಸಾಧಿಸಿದ್ದಾಗ ಆರ್‌ಸಿಬಿ ಮೇಲೆ ಗೆಲುವಿನ ನಿರೀಕ್ಷೆ ಇತ್ತು.
ದುಬೆ-ಜಡೇಜಾ ಸಂಘಟಿತ ಬ್ಯಾಟಿಂಗ್:
ಮಧ್ಯಮ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ 37 ಎಸೆತಗಳಲ್ಲಿ 67 ರನ್‌ಗಳ ಜೊತೆಯಾಟ ನೀಡಿದರು. ದುಬೆ 28 ಎಸೆತಗಳಲ್ಲಿ 34 ರನ್ ಗಳಿಸಿದರೆ, ಜಡೇಜಾ 17 ಎಸೆತಗಳಲ್ಲಿ 25 ರನ್ ಬಾರಿಸಿ ಗೆಲುವಿಗೆ ನೆರವಾದರು.

ಕಳಪೆ ಬೌಲಿಂಗ್:
ಮಧ್ಯಮ ಕ್ರಮಾಂಕದಲ್ಲಿ ಸುಧಾರಿತ ಪ್ರದರ್ಶನ ನೀಡಿದ್ದ ಆರ್‌ಸಿಬಿ ಬಳಿಕ ಮತ್ತಷ್ಟು ಕಳಪೆ ಬೌಲಿಂಗ್ ಪ್ರದರ್ಶನ ತೋರಿತು. ವೈಡ್, ಲೆಗ್‌ಬೈಸ್‌ನಿಂದಲೇ 16 ರನ್ ಬಿಟ್ಟುಕೊಟ್ಟಿತು. ಇದು ಚೆನ್ನೈ ತಂಡಕ್ಕೆ ಮತ್ತಷ್ಟು ಸಹಕಾರವಾಯಿತು. ಆರ್‌ಸಿಬಿ ಪರ ಕ್ಯಾಮರೂನ್ ಗ್ರೀನ್ (Cameron Green) 2 ವಿಕೆಟ್ ಕಿತ್ತರೆ, ಯಶ್ ದಯಾಳ್, ಕರ್ಣ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 173 ರನ್ ಬಾರಿಸಿತ್ತು. ಆರ್‌ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್ ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್ ಕಟ್ಟಲು ಮುಂದಾದರು. ಮೊದಲ ವಿಕೆಟ್‌ಗೆ ಕೊಹ್ಲಿ ಹಾಗೂ ಡುಪ್ಲೆಸಿಸ್ ಜೋಡಿ 27 ಎಸೆತಗಳಲ್ಲಿ 41 ರನ್‌ಗಳ ಜೊತೆಯಾಟ ನೀಡಿತ್ತು. ಆದ್ರೆ ಡುಪ್ಲೆಸಿಸ್ 23 ಎಸೆತಗಳಲ್ಲಿ 35 ರನ್ (8 ಬೌಂಡರಿ) ಬಾರಿಸಿ ಔಟಾಗುತ್ತಿದ್ದಂತೆ, ಒಂದೊಂದೇ ವಿಕೆಟ್ ಬೀಳಲಾರಂಭಿಸಿದವು. ಮುಂದಿನ 37 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಐದು ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಇನ್ನೀಂಗ್ಸ್ ಕಟ್ಟಿದ ದಿನೇಶ್ ಕಾರ್ತಿಕ್ ಮತ್ತು ಅನೂಜ್ ರಾವತ್ ಜೋಡಿ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. 50 ಎಸೆತಗಳಲ್ಲಿ ಈ ಜೋಡಿ 95 ರನ್ ಬಾರಿಸುವ ಮೂಲಕ ತಂಡದ ಮೊತ್ತ 170 ರನ್ ಗಳ ಗಡಿ ದಾಟುವಂತೆ ಮಾಡಿತು. ಆರ್‌ಸಿಬಿ ಪರ ಅನೂಜ್ ರಾವತ್ 48 ರನ್ (25 ಎಸೆತ, 4 ಬೌಂಡರಿ, 3 ಸಿಕ್ಸರ್), ದಿನೇಶ್ ಕಾರ್ತಿಕ್ 38 ರನ್ (26 ಎಸೆತ, 3 ಬೌಂಡರಿ, 2 ಸಿಕ್ಸರ್) ಗಳಿಸಿದ್ರೆ, ಡುಪ್ಲೆಸಿಸ್ 35 ರನ್, ಕೊಹ್ಲಿ 21 ರನ್, ಕ್ಯಾಮರೂನ್ ಗ್ರೀನ್ 18 ರನ್ ಗಳಿಸಿದರು. ಹೆಚ್ಚುವರಿ 13 ರನ್ ತಂಡಕ್ಕೆ ಸೇರ್ಪಡೆಯಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ಪರ ಮುಸ್ತಫಿಜುರ್ ರೆಹಮಾನ್ 4 ಓವರ್‌ಗಳಲ್ಲಿ 9 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಿತ್ತರೆ, ದೀಪಕ್ ಚಹಾರ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.








































