Tag: CSK

  • ಹೈದರಾಬಾದ್ ಆರ್ಭಟಕ್ಕೆ ಚೆನ್ನೈ ಸೈಲೆಂಟ್ – ಎಸ್‍ಆರ್‌ಎಚ್‌ಗೆ 8 ವಿಕೆಟ್‍ಗಳ ಜಯ

    ಹೈದರಾಬಾದ್ ಆರ್ಭಟಕ್ಕೆ ಚೆನ್ನೈ ಸೈಲೆಂಟ್ – ಎಸ್‍ಆರ್‌ಎಚ್‌ಗೆ 8 ವಿಕೆಟ್‍ಗಳ ಜಯ

    ಮುಂಬೈ: ಅಭಿಷೇಕ್ ವರ್ಮಾರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 8 ವಿಕೆಟ್‍ಗಳ ಜಯ ದಾಖಲಿಸಿದೆ.

    ಚೆನ್ನೈ ನೀಡಿದ 155 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಹೈದರಾಬಾದ್ ಪರ ಅಭಿಷೇಕ್ ವರ್ಮಾ 75 ರನ್ (50 ಎಸೆತ, 5 ಬೌಂಡರಿ, 3 ಸಿಕ್ಸ್) ಸಿಡಿಸಿ ಗೆಲುವಿನ ರೂವಾರಿಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ಕೇನ್ ವಿಲಿಯಮ್ಸನ್ 32 ರನ್ (40 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ರಾಹುಲ್ ತ್ರಿಪಾಠಿ ಅಜೇಯ 39 ರನ್ (15 ಎಸೆತ, 5 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಗೆಲುವಿಗೆ ನೆರವಾದರು. ಅಂತಿಮವಾಗಿ ಹೈದರಾಬಾದ್ 17.4 ಓವರ್‌ಗಳ ಅಂತ್ಯಕ್ಕೆ 155 ರನ್ ಸಿಡಿಸಿ ಚೆನ್ನೈಗೆ ಸತತ ನಾಲ್ಕನೇ ಸೋಲುಣಿಸಿತು. ಇದನ್ನೂ ಓದಿ: ಧೋನಿ ಬಳಿಕ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಮ್ಯಾಚ್ ಫಿನಿಶರ್ ಎನಿಸಿಕೊಂಡ ತೆವಾಟಿಯಾ

    ಟಾಸ್ ಗೆದ್ದ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಚೆನ್ನೈ ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಚೆನ್ನೈ ಪರ ಮೋಯಿನ್ ಅಲಿ 48 ರನ್ (35 ಎಸೆತ, 3 ಬೌಂಡರಿ, 2 ಸಿಕ್ಸ್), ಅಂಬಾಟಿ ರಾಯುಡು 27 ರನ್ (27 ಎಸೆತ, 4 ಬೌಂಡರಿ) ಮತ್ತು ರವೀಂದ್ರ ಜಡೇಜಾ 23 ರನ್ (15 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ದೊಡ್ಡ ಮೊತ್ತ ಕಲೆ ಹಾಕಲಿಲ್ಲ. ಇದನ್ನೂ ಓದಿ: ಪಂಜಾಬ್‍ಗೆ ಪಂಚ್ ನೀಡಿದ ರಾಹುಲ್ ತೆವಾಟಿಯಾ – ಗುಜರಾತ್‍ಗೆ ರೋಚಕ ಜಯ

    ಅಂತಿಮವಾಗಿ ಚೆನ್ನೈ ತಂಡ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತು. ಹೈದರಾಬಾದ್ ಪರ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಉಳಿದಂತೆ ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್ ಮತ್ತು ಮಾರ್ಕ್ರಾಮ್ ತಲಾ 1 ವಿಕೆಟ್ ಪಡೆದರು.

  • ಪಂಜಾಬ್ ರಾಜರ ಮುಂದೆ ನಡೆಯಲಿಲ್ಲ ಸೂಪರ್ ಕಿಂಗ್ಸ್ ಆಟ – ಚೆನ್ನೈಗೆ ಹ್ಯಾಟ್ರಿಕ್‌ ಸೋಲು

    ಪಂಜಾಬ್ ರಾಜರ ಮುಂದೆ ನಡೆಯಲಿಲ್ಲ ಸೂಪರ್ ಕಿಂಗ್ಸ್ ಆಟ – ಚೆನ್ನೈಗೆ ಹ್ಯಾಟ್ರಿಕ್‌ ಸೋಲು

    ಮುಂಬೈ: ಚೆನ್ನೈಗೆ ಬೃಹತ್ ಮೊತ್ತ ಟಾರ್ಗೆಟ್ ನೀಡಿ ಬೌಲಿಂಗ್ ಮೂಲಕ ಕಟ್ಟಿಹಾಕಿದ ಪಂಜಾಬ್ ಕಿಂಗ್ಸ್ 54 ರನ್‍ಗಳ ಭರ್ಜರಿ ಜಯ ದಾಖಲಿಸಿದೆ.

    ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿದ ಚೆನ್ನೈ ತಂಡ 18 ಓವರ್‌ಗಳಲ್ಲಿ 126 ರನ್‍ಗಳಿಗೆ ಆಲೌಟ್ ಆಯಿತು. ಅಲ್ಲದೇ ಟೂರ್ನಿಯಲ್ಲಿ ಸತತ ಮೂರನೇ ಸೋಲನುಭವಿಸಿತು.

    180 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಪಂಜಾಬ್ ಬೌಲರ್‌ಗಳು ಶಾಕ್ ಮೇಲೆ ಶಾಕ್ ನೀಡಿದರು. ಚೆನ್ನೈ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಾದ ರಾಬಿನ್ ಉತ್ತಪ್ಪ 13 ರನ್, ಗಾಯಕ್ವಾಡ್ 1, ಅಂಬಾಟಿ ರಾಯುಡು 13 ರನ್, ಮೊಯಿನ್ ಅಲಿ ಮತ್ತು ಜಡೇಜಾ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು.

    ಬಳಿಕ ಒಂದಾದ ಶಿವಂ ದುಬೆ ಮತ್ತು ಮಹೇಂದ್ರ ಸಿಂಗ್ ತಂಡಕ್ಕೆ ಚೇತರಿಕೆ ನೀಡದರು ಕೂಡ ಯಾವುದೇ ಪ್ರಯೋಜನ ಸಿಗಲಿಲ್ಲ. ದುಬೆ 57 ರನ್ (30 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಧೋನಿ 23 ರನ್ (28 ಎಸೆತ,1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಚೆನ್ನೈ 17.6 ಎಸೆತಗಳಲ್ಲಿ 126 ರನ್‍ಗಳಿಗೆ ಸರ್ವಪತನ ಕಂಡಿತು.

    ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡ ನಾಯಕ ಮಯಾಂಕ್ ಅಗರ್ವಾಲ್ ಕೇವಲ 4 ರನ್ (2 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿದರು. ಆದರೆ ಇತ್ತ ಶಿಖರ್ ಧವನ್ ಎಂದಿನಂತೆ ಬ್ಯಾಟಿಂಗ್ ಮುಂದುವರಿಸಿ 33 ರನ್ (24 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು.

    ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದ್ದರು. ಬೌಂಡರಿ, ಸಿಕ್ಸರ್‌ಗಳನ್ನು ಮನಬಂದಂತೆ ಚಚ್ಚಿದ ಲಿವಿಂಗ್ಸ್ಟೋನ್ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು. ಅಲ್ಲದೆ ಶಿಖರ್ ಧವನ್ ಜೊತೆ 3ನೇ ವಿಕೆಟ್‍ಗೆ 95 ರನ್ (52 ಎಸೆತ) ಜೊತೆಯಾಟವಾಡಿ ಮಿಂಚಿದರು. ಲಿವಿಂಗ್ಸ್ಟೋನ್ ಆಟ 60 ರನ್ (32 ಎಸೆತ, 5 ಬೌಂಡರಿ, 5 ಸಿಕ್ಸ್) ಬಾರಿಸಿ ಆಟ ಕೊನೆಗೊಳಿಸಿದರು. ನಂತರ ಜಿತೇಶ್ ಶರ್ಮಾ 26 ರನ್ (17 ಎಸೆತ, 3 ಸಿಕ್ಸ್) ಸಿಡಿಸಿ ಗಮನ ಸೆಳೆದರು. ಅಂತಿಮವಾಗಿ ಪಂಜಾಬ್ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 180 ರನ್ ಸಿಡಿಸಿತು.

     

  • ಧೋನಿ ಅರ್ಧಶತಕದಾಟ ವ್ಯರ್ಥ – ಚೆನ್ನೈ ವಿರುದ್ಧ ಕೋಲ್ಕತ್ತಾಗೆ ಜಯ

    ಧೋನಿ ಅರ್ಧಶತಕದಾಟ ವ್ಯರ್ಥ – ಚೆನ್ನೈ ವಿರುದ್ಧ ಕೋಲ್ಕತ್ತಾಗೆ ಜಯ

    ಮುಂಬೈ: 15ನೇ ಆವೃತ್ತಿ ಐಪಿಎಲ್‍ನ ಮೊದಲ ಪಂದ್ಯದಲ್ಲಿ ಚೆನ್ನೈ ನೀಡಿದ ಸಾಧಾರಣ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ತಂಡ ಇನ್ನೂ 9 ಎಸೆತ ಬಾಕಿ ಇರುವಂತೆಯೇ 133 ರನ್‌ ಸಿಡಿಸಿ ಗೆಲುವಿನ ನಗೆ ಬೀರಿತು.

    ಚೆನ್ನೈ ನೀಡಿದ 132 ರನ್‍ಗಳ ಟಾರ್ಗೆಟ್‍ನ್ನು ಕೋಲ್ಕತ್ತಾ ತಂಡ 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 133 ರನ್‌ ಸಿಡಿಸಿ  ಗೆದ್ದು, 14ನೇ ಸೀಸನ್ ಐಪಿಎಲ್‍ನ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿತು. ಇದನ್ನೂ ಓದಿ: ಚೆನ್ನೈ ತಂಡದ ಹೊಸ ಸೂಪರ್ ಕಿಂಗ್‍ಗೆ ಪೋಸ್ಟ್ ಮೂಲಕ ಶುಭಕೋರಿದ ಅಮುಲ್

    ಕೆಕೆಆರ್ ಪರ ಆರಂಭಿಕ ಜೋಡಿ ಅಜಿಂಕ್ಯಾ ರಹಾನೆ ಮತ್ತು ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ನೀಡಿತು. ವೆಂಕಟೇಶ್ ಅಯ್ಯರ್ 16 ರನ್ (16 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ಈ ಮೊದಲು ರಹಾನೆ ಜೊತೆ ಮೊದಲ ವಿಕೆಟ್‍ಗೆ 43 ರನ್ (38 ಎಸೆತ) ಜೊತೆಯಾಟವಾಡಿದರು. ಬಳಿಕ ನಿತೇಶ್ ರಾಣಾ 21 ರನ್ (17 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡಕ್ಕೆ ನೆರವಾದರು. ಇನ್ನೊಂದೆಡೆ ಅರ್ಧಶತಕದ ಹೊಸ್ತಿಲಲ್ಲಿದ್ದ ರಹಾನೆ 44 ರನ್ (34 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಇದನ್ನೂ ಓದಿ:  ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿಸಿದ ಟಾಪ್ ತಂಡಗಳು

    ಅಂತಿಮವಾಗಿ ಸ್ಯಾಮ್ ಬಿಲ್ಲಿಂಗ್ಸ್ 25 ರನ್‌ (21 ಎಸೆತ, 1 ಸಿಕ್ಸ್‌, 1 ಬೌಂಡರಿ) ಮತ್ತು ಶ್ರೇಯಸ್ ಅಯ್ಯರ್ ಅಜೇಯ 20 ರನ್‌ (20 ಎಸೆತ, 1 ಬೌಂಡರಿ) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜಾರ ಆಯ್ಕೆ ಆರಂಭದಲ್ಲೇ ತಲೆಕೆಳಗಾಯಿತು. ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್ ಶೂನ್ಯ ಸುತ್ತಿದರೆ, ಡೆವೂನ್ ಕಾನ್ವೇ 3 ರನ್‍ಗೆ ಸುಸ್ತಾದರು. ಬಳಿಕ ಬಂದ ರಾಬಿನ್ ಉತ್ತಪ್ಪ, ಬೌಂಡರಿ, ಸಿಕ್ಸ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದರು ಕೂಡ ಅವರ ಆಟ 28 ರನ್ (21 ಎಸೆತ, 2 ಬೌಂಡರಿ, 2 ಸಿಕ್ಸ್) ಅಂತ್ಯಗೊಂಡಿತು. ಇವರೊಂದಿಗೆ ಅಂಬಾಟಿ ರಾಯುಡು 15 ರನ್ (17 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಪೆವಿಲಿಯನ್ ಸೇರಿಕೊಂಡರು.

    ಧೋನಿ ಭರ್ಜರಿ ಬ್ಯಾಟಿಂಗ್
    61 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಚೆನ್ನೈ ತಂಡಕ್ಕೆ ರವೀಂದ್ರ ಜಡೇಜಾ ಮತ್ತು ಧೋನಿ ಆಸರೆಯಾದರು. ಈ ಜೋಡಿ ಕೆಕೆಆರ್ ಬೌಲರ್‌ಗಳ ಬೆವರಿಳಿಸಿತು. ಧೋನಿ ತಮ್ಮ ಹಳೆಯ ಖದರ್‌ನಲ್ಲಿ ಬ್ಯಾಟ್ ಬೀಸಿ ಅಜೇಯ 50 ರನ್ (38 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಜಡೇಜಾ ಅಜೇಯ 26 ರನ್ (28 ಎಸೆತ, 1 ಸಿಕ್ಸ್) ಬಾರಿಸಿ ಮಿಂಚಿದರು. ಈ ಜೋಡಿ ಆರನೇ ವಿಕೆಟ್‍ಗೆ ಅಜೇಯ 70 ರನ್ (56 ಎಸೆತ) ಜೊತೆಯಾಟವಾಡಿತು. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು.

    ಕೆಕೆಆರ್ ಪರ ಉಮೇಶ್ ಯಾದವ್ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ಆಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದರು.

  • ಧೋನಿಯ ನಂಬಿಕಸ್ಥ ಬೌಲರ್, 2014ರ ಪರ್ಪಲ್ ಕ್ಯಾಪ್ ವಿನ್ನರ್ – ಇದೀಗ ನೆಟ್ ಬೌಲರ್!

    ಧೋನಿಯ ನಂಬಿಕಸ್ಥ ಬೌಲರ್, 2014ರ ಪರ್ಪಲ್ ಕ್ಯಾಪ್ ವಿನ್ನರ್ – ಇದೀಗ ನೆಟ್ ಬೌಲರ್!

    ಮುಂಬೈ: 2014ರ ಐಪಿಎಲ್‍ನಲ್ಲಿ ಪರ್ಪಲ್ ಕ್ಯಾಪ್ ವಿಜೇತ ಬೌಲರ್, ಐಪಿಎಲ್‍ನಲ್ಲಿ ಮಿಂಚಿ ಸ್ಟಾರ್ ಆಟಗಾರ ಎನಿಸಿಕೊಂಡಿದ್ದ ಮೋಹಿತ್ ಶರ್ಮಾ ಇದೀಗ ಗುಜರಾತ್ ಟೈಟಾನ್ಸ್‌ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ.

    ಐಪಿಎಲ್ ಅದೇಷ್ಟೋ ಪ್ರತಿಭಾವಂತ ಆಟಗಾರರನ್ನು ಭಾರತ ತಂಡಕ್ಕೆ ಪರಿಚಯಿಸಿದ ಕೀರ್ತಿ ಹೊಂದಿದೆ. ಕೆಲ ಆಟಗಾರರು ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಂಡು ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡರೆ, ಕೆಲ ಆಟಗಾರರು ಮಿಂಚಿ ಮರೆಯಾಗಿದ್ದಾರೆ. ಅಂತವರ ಸಾಲಿನಲ್ಲಿ ಇದೀಗ ಹರಿಯಾಣ ಮೂಲದ ವೇಗಿ ಮೋಹಿತ್ ಶರ್ಮಾ ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಮೋಹಿತ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪೇಸ್ ಬೌಲಿಂಗ್ ದಾಳಿಯ ಮುಂಚೂಣಿಯಲ್ಲಿದ್ದರು. ಎಂಎಸ್ ಧೋನಿ ಗರಡಿಯಲ್ಲಿ ನಂಬಿಕಸ್ಥ ಬೌಲರ್ ಆಗಿದ್ದ ಮೋಹಿತ್ ಯಶಸ್ಸಿನ ತುತ್ತತುದಿಯಲ್ಲಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಪಿಚ್‍ಗೆ -1 ರೇಟಿಂಗ್ – ಐಸಿಸಿ ಅಸಮಾಧಾನ

    ಮೋಹಿತ್ ತನ್ನ ಸ್ಲೋವರ್ ಬೌಲಿಂಗ್‍ನಿಂದ ಬ್ಯಾಟ್ಸ್‌ಮ್ಯಾನ್‌ಗಳಿಗೆ ಕಂಟಕವಾಗಿದ್ದರು. ಐಪಿಎಲ್‍ನಲ್ಲಿ ಒಟ್ಟು 86 ಪಂದ್ಯಗಳಲ್ಲಿ 92 ವಿಕೆಟ್ ಪಡೆದಿದ್ದು, 2014ರ ಐಪಿಎಲ್‍ನಲ್ಲಿ ಸಿಎಸ್‍ಕೆ ಪರ ಒಟ್ಟು 16 ಪಂದ್ಯಗಳನ್ನು ಆಡಿದ ಮೋಹಿತ್ ಶರ್ಮಾ ಒಟ್ಟು 23 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಈ ಪ್ರದರ್ಶನದಿಂದಲೇ ಮೋಹಿತ್ ಶರ್ಮಾ 2014ರ ಟಿ20 ವಿಶ್ವಕಪ್ ಹಾಗೂ 2015ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಆಡಿದ್ದರು. ಇದನ್ನೂ ಓದಿ: 7 ನಂಬರ್ ಜೆರ್ಸಿ ಹಿಂದಿನ ಕಹಾನಿ ಬಿಚ್ಚಿಟ್ಟ ಧೋನಿ

    ಆದರೆ ದುರದೃಷ್ಟ ವೆಂಬಂತೆ ಸಿಎಸ್‍ಕೆ ತಂಡ ಐಪಿಎಲ್‍ನಿಂದ 2 ವರ್ಷ ನಿಷೇಧಕ್ಕೆ ಒಳಗಾದ ಬಳಿಕ ಮೋಹಿತ್ ಫಾರ್ಮ್ ಕೂಡ ಕೈಕೊಟ್ಟಿತು. ಆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಕಾಣಿಸಿಕೊಂಡರು ಕೂಡ ಈ ಹಿಂದಿನ ಚಾರ್ಮ್ ಅವರಲ್ಲಿ ಕಾಣಸಿಗಲಿಲ್ಲ.

    ಮೋಹಿತ್ ಶರ್ಮಾ ನಂತರ ಪಂಜಾಬ್‍ಕಿಂಗ್ಸ್ ಮತ್ತು ಡೆಲ್ಲಿ ತಂಡದ ಪರ ಆಡಿದರು ಕೂಡ ಈ ಹಿಂದಿನ ರೀತಿಯ ಪ್ರದರ್ಶನಗಳನ್ನು ನೀಡಲು ಸಾಧ್ಯವಾಗಲಿಲ್ಲ. 2022ರ ಐಪಿಎಲ್ ಹರಾಜಿನಲ್ಲಿ ಮೋಹಿತ್ ಕಾಣಿಸಿಕೊಂಡಿದ್ದರು. ಆದರೆ ಅವರನ್ನು ಖರೀದಿಸಲು ಯಾವ ತಂಡ ಕೂಡ ಮುಂದೆ ಬಂದಿರಲಿಲ್ಲ. ಇದೀಗ ಮೋಹಿತ್ ಐಪಿಎಲ್‍ನ ನೂತನ ತಂಡ ಗುಜರಾತ್ ಸೂಪರ್ ಜೈಂಟ್ಸ್ ಪರ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • 7 ನಂಬರ್ ಜೆರ್ಸಿ ಹಿಂದಿನ ಕಹಾನಿ ಬಿಚ್ಚಿಟ್ಟ ಧೋನಿ

    7 ನಂಬರ್ ಜೆರ್ಸಿ ಹಿಂದಿನ ಕಹಾನಿ ಬಿಚ್ಚಿಟ್ಟ ಧೋನಿ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಜೆರ್ಸಿ ನಂಬರ್ 7 ಹಿಂದಿನ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ.

    ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿ ನಂಬರ್ 7 ಆಗಿದೆ. ಧೋನಿ ಇದೇ ನಂಬರ್‌ನ ಜೆರ್ಸಿ ತೋಡಲು ಕಾರಣವಿದೆ. ಈ ಕಾರಣವನ್ನು ಧೋನಿ ಇದೀಗ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಈ ಬಾರಿಯ ಐಪಿಎಲ್‍ನಲ್ಲಿ ಕಾಣಸಿಗಲ್ಲ ಈ ಜೋಡಿ ಆಟಗಾರರ ಕಮಾಲ್

    ಚೆನ್ನೈ ತಂಡದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ, ಜೆರ್ಸಿ ನಂಬರ್ 7 ನನ್ನ ಲಕ್ಕಿ ನಂಬರ್ ಎಂಬ ಮಾತು ಕೇಳಿಬರುತ್ತಿತ್ತು. ಆದರೆ 7 ನಂಬರ್ ನನ್ನ ಹೃದಯಕ್ಕೆ ಹತ್ತಿರವಾದ ಸಂಖ್ಯೆ ಹಾಗಾಗಿ ಜೆರ್ಸಿ ನಂಬರ್ 7 ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಜುಲೈ 7 ರಂದು ಹುಟ್ಟಿದ್ದೇನೆ. ಅಲ್ಲದೇ 7ನೇ ತಿಂಗಳ 7 ದಿನದಂದು ಹುಟ್ಟಿರುವುದು ಕೂಡ ನಂಬರ್ 7 ಆಯ್ಕೆಯ ಹಿಂದಿನ ಗುಟ್ಟು ಎಂದಿದ್ದಾರೆ.  ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

    7ನೇ ನಂಬರ್ ಜೆರ್ಸಿ ದಾರಿಯಾಗಿ ಕಣಕ್ಕಿಳಿಯುವ ಧೋನಿ, ಚೆನ್ನೈ ತಂಡವನ್ನು 4 ಬಾರಿ ಚಾಂಪಿಯನ್ ಮಾಡಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‍ಕೆ ತಂಡ ಈ ಬಾರಿ ಮತ್ತೊಮ್ಮೆ ಕಪ್ ಎತ್ತಿ ಹಿಡಿಯುವ ಕನಸಿನೊಂದಿಗೆ ಕೂಟದಲ್ಲಿ ಭಾಗವಹಿಸುತ್ತಿದೆ. ಈ ಬಾರಿಯೂ ಧೋನಿ ನಾಯಕನಾಗಿ ತಂಡವನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ.

     

  • ಐಪಿಎಲ್ 10 ತಂಡಗಳ ಪೈಕಿ 2 ತಂಡಕ್ಕೆ ಕನ್ನಡಿಗರ ನಾಯಕತ್ವ – ಮೂವರು ನೂತನ ನಾಯಕರ ಎಂಟ್ರಿ

    ಐಪಿಎಲ್ 10 ತಂಡಗಳ ಪೈಕಿ 2 ತಂಡಕ್ಕೆ ಕನ್ನಡಿಗರ ನಾಯಕತ್ವ – ಮೂವರು ನೂತನ ನಾಯಕರ ಎಂಟ್ರಿ

    ಮುಂಬೈ: 15ನೇ ಆವೃತ್ತಿ ಐಪಿಎಲ್ ಹಲವು ವಿಶೇಷತೆಗಳೊಂದಿಗೆ ಮತ್ತೆ ಆರಂಭವಾಗುತ್ತಿದೆ. ಈ ಬಾರಿ ಒಟ್ಟು 10 ತಂಡಗಳನ್ನು ಹತ್ತು ಸಾರಥಿಗಳು ಮುನ್ನಡೆಸಲು ಸಿದ್ಧರಾಗಿದ್ದಾರೆ.

    8 ತಂಡಗಳಿದ್ದ ಐಪಿಎಲ್ ಕೂಟಕ್ಕೆ ಹೊಸದಾಗಿ 2 ತಂಡ ಸೇರುವುದರೊಂದಿಗೆ ತಂಡಗಳ ಒಟ್ಟು ಸಂಖ್ಯೆ 10ಕ್ಕೆ ಏರಿದೆ. ಹತ್ತು ತಂಡಗಳ ಪೈಕಿ ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್ ನಾಯಕರಾಗಿ ಕೆ.ಎಲ್ ರಾಹುಲ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಮಯಾಂಕ್ ಅರ್ಗವಾಲ್ ಕಾಣಿಸಿಕೊಳ್ಳುವ ಮೂಲಕ ಈ ಬಾರಿ ಇಬ್ಬರು ಕನ್ನಡಿಗರು ಐಪಿಎಲ್ ತಂಡಗಳ ನಾಯಕತ್ವ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮಯಾಂಕ್, ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮೊಟ್ಟಮೊದಲ ಬಾರಿಗೆ ನಾಯಕತ್ವದ ಹೊಣೆ ಹೊತ್ತಿದ್ದಾರೆ. ಇದನ್ನೂ ಓದಿ: ಗೆಳತಿ ಜೊತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್

    ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಎಸ್‍ಕೆ ತಂಡವನ್ನು ಮುನ್ನಡೆಸುತ್ತಿದ್ದಾರೆ. 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾದರೆ, 2 ಬಾರಿ ಕಪ್ ಗೆದ್ದಿರುವ ಕೋಲ್ಕತ್ತಾ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕತ್ವದ ಬಲ ಇದೆ. ಇದನ್ನೂ ಓದಿ: RCB ನಾಯಕನಾಗಿ ಫಾಫ್ ಡು ಪ್ಲೆಸಿಸ್ ನೇಮಕ

    ತಲಾ ಒಂದೊಂದು ಬಾರಿ ಚಾಂಪಿಯನ್ ಆಗಿ ಮೆರೆದಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೇನ್ ವಿಲಿಯಮ್ಸನ್ ನಾಯಕರಾಗಿ ಸಮರ್ಥವಾಗಿ ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಡೆಲ್ಲಿ ತಂಡಕ್ಕೆ ರಿಷಬ್ ಪಂತ್ ನಾಯಕತ್ವದ ಶಕ್ತಿ ಇದೆ.  ಇದನ್ನೂ ಓದಿ: ಭಾರತ Vs ಶ್ರೀಲಂಕಾ ಟೆಸ್ಟ್ – ಅಪ್ಪು ಫೋಟೋ ಜೊತೆ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಂಡ ಸುದೀಪ್

    14 ಆವೃತ್ತಿಗಳ ಪೈಕಿ ಈಗಿರುವ 5 ತಂಡಗಳು ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡರೆ ಈ ಹಿಂದಿನ ಆವೃತ್ತಿಗಳಿಂದಲೂ ಇರುವ ಆರ್​ಸಿಬಿ, ಪಂಜಾಬ್, ಡೆಲ್ಲಿ ತಂಡಗಳು ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೇರಿಲ್ಲ. ಈ ಬಾರಿ ಆಟಗಾರರ ಮೆಗಾ ಹರಾಜಿನ ಬಳಿಕ ತಂಡ ರಚನೆಯಾಗಿದ್ದು, ಎಲ್ಲಾ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಈ ಬಾರಿ 10 ತಂಡಗಳ ಮಧ್ಯೆ 15ನೇ ಅವೃತ್ತಿಯ ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಕಾದಾಟ ನಡೆಯಲಿದೆ.

  • RCB ನಾಯಕನಾಗಿ ಫಾಫ್ ಡು ಪ್ಲೆಸಿಸ್ ನೇಮಕ

    RCB ನಾಯಕನಾಗಿ ಫಾಫ್ ಡು ಪ್ಲೆಸಿಸ್ ನೇಮಕ

    ಬೆಂಗಳೂರು: 15ನೇ ಆವೃತ್ತಿ ಐಪಿಎಲ್‍ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕನ್ನಾಗಿ ಸೌತ್ ಆಫ್ರಿಕಾದ ಆಟಗಾರ ಫಾಫ್ ಡು ಪ್ಲೆಸಿಸ್‍ನ್ನು ಫ್ರಾಂಚೈಸ್ ನೇಮಕ ಮಾಡಿದೆ.

    14ನೇ ಆವೃತ್ತಿ ಐಪಿಎಲ್ ಬಳಿಕ ಆರ್​ಸಿಬಿ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದರು. ಆ ಬಳಿಕ ಇದೀಗ ಆರ್​ಸಿಬಿ ಫ್ರಾಂಚೈಸ್ ಡು ಫ್ಲೆಸಿಸ್‍ನ್ನು ನಾಯಕನ್ನಾಗಿ ನೇಮಿಸಿ ಇಂದು ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ: ಭಾರತ Vs ಶ್ರೀಲಂಕಾ ಟೆಸ್ಟ್ – ಅಪ್ಪು ಫೋಟೋ ಜೊತೆ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಂಡ ಸುದೀಪ್

    ಪ್ಲೆಸಿಸ್ ಈ ಹಿಂದಿನ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರರಾಗಿದ್ದರು. ಆದರೆ ಆಟಗಾರರ ಮೆಗಾ ಹರಾಜಿನಲ್ಲಿ ಚೆನ್ನೈ ತಂಡ ಪ್ಲೆಸಿಸ್‍ರನ್ನು ಹರಾಜಿಗೆ ಬಿಟ್ಟು ಕೊಟ್ಟಿತ್ತು. ಆರ್​ಸಿಬಿ ತಂಡ ಹರಾಜಿನಲ್ಲಿ 7 ಕೋಟಿ ರೂ. ನೀಡಿ ಪ್ಲೆಸಿಸ್‍ರನ್ನು ಖರೀದಿಸಿತ್ತು. ಆ ಬಳಿಕ ಇದೀಗ ನಾಯಕನ ಪಟ್ಟ  ಕಟ್ಟಿದೆ. ಇದನ್ನೂ ಓದಿ: ಡೇ – ನೈಟ್ ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಸಜ್ಜು – 2 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಕಾದಾಟ

    https://twitter.com/RCBTweets/status/1502603973848494087

    ಪ್ಲೆಸಿಸ್ ಸೌತ್ ಆಫ್ರಿಕಾ ತಂಡವನ್ನು ಒಟ್ಟು 115 ಪಂದ್ಯಗಳಲ್ಲಿ ಮುನ್ನಡೆಸಿ 81 ಬಾರಿ ಗೆಲ್ಲಿಸಿದ್ದಾರೆ. 40 ಟಿ20 ಪಂದ್ಯಗಳಲ್ಲಿ 25 ಪಂದ್ಯ ಗೆದ್ದಿರುವ ರೆಕಾರ್ಡ್ ಪ್ಲೆಸಿಸ್ ನಾಯಕತ್ವದಲ್ಲಿದೆ. ಇದೀಗ ಆರ್​ಸಿಬಿ ಕೊಹ್ಲಿ ಬಳಿಕ ಪ್ಲೆಸಿಸ್‍ರನ್ನು ನಾಯಕನ್ನಾಗಿ ಆಯ್ಕೆ ಮಾಡಿದೆ. ಈವರೆಗಿನ 14 ಆವೃತ್ತಿಗಳಲ್ಲಿ ಒಮ್ಮೆಯೂ ಕಪ್ ಗೆಲ್ಲಲು ಸಫಲವಾಗದ ಆರ್​ಸಿಬಿ ಈ ಬಾರಿ ಪ್ಲೆಸಿಸ್ ನಾಯಕತ್ವದಲ್ಲಿ ಕಪ್ ಗೆಲ್ಲಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

     

  • ಸೂರತ್‍ನಲ್ಲಿ ಅಭ್ಯಾಸ ಆರಂಭಿಸಿದ ಧೋನಿ – ಮುಗಿಬಿದ್ದ ಅಭಿಮಾನಿಗಳು

    ಸೂರತ್‍ನಲ್ಲಿ ಅಭ್ಯಾಸ ಆರಂಭಿಸಿದ ಧೋನಿ – ಮುಗಿಬಿದ್ದ ಅಭಿಮಾನಿಗಳು

    ಗಾಂಧೀನಗರ: 15ನೇ ಆವೃತ್ತಿ ಐಪಿಎಲ್‍ಗೆ ಇನ್ನೇನು ಕೆಲದಿನಗಳಷ್ಟೇ ಭಾಗಿ ಉಳಿದುಕೊಂಡಿದೆ. ಇದೀಗ ಐಪಿಎಲ್ ಸಿದ್ಧತೆಗಾಗಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೂರತ್‍ನಲ್ಲಿ ಅಭ್ಯಾಸ ಆರಂಭಿಸಿದೆ.

    ಸೂರತ್‍ನಲ್ಲಿ ಕ್ಯಾಂಪ್ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಯಕ ಧೋನಿ, ಅಂಬಾಟಿ ರಾಯುಡು ಸೇರಿದಂತೆ ಕೆಲ ಆಟಗಾರರು ಮೈದಾನಕ್ಕಿಳಿದಿದ್ದಾರೆ. ಜಡೇಜಾ, ಬ್ರಾವೋ ಸೇರಿದಂತೆ ಕೆಲ ಆಟಗಾರರು ಇನ್ನಷ್ಟೇ ತಂಡ ಸೇರಿಕೊಳ್ಳಬೇಕಾಗಿದೆ. ನಿನ್ನೆ ಸೂರತ್‍ನಲ್ಲಿ ಅಭ್ಯಾಸ ಆರಂಭಿಸಲು ಚೆನ್ನೈ ತಂಡ ಆಗಮಿಸುತ್ತಿದ್ದಂತೆ ಅಭಿಮಾನಿಗಳು ದಾರಿ ಉದ್ದಕ್ಕೂ ನಿಂತು ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ: ಒಟ್ಟು 65 ದಿನ ಐಪಿಎಲ್ ಕಲರವ – ಆರ್​ಸಿಬಿಗೆ ಪಂಜಾಬ್ ಮೊದಲ ಎದುರಾಳಿ

    ಧೋನಿ ಯುವ ಆಟಗಾರೊಂದಿಗೆ ಅಭ್ಯಾಸ ಆರಂಭಿಸಿದ್ದು, ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಅಲ್ಲದೇ ಫುಟ್‍ಬಾಲ್ ಕೂಡ ಆಡಿ ಆಟಗಾರು ಸಂಭ್ರಮಿಸಿದರು. ಈ ವೀಡಿಯೋವನ್ನು ಚೆನ್ನೈ ಸೂಪರ್‌ಕಿಂಗ್ಸ್‌ ಫ್ರಾಂಚೈಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಶೇನ್ ವಾರ್ನ್ ಸಾವಿನ ಗುಟ್ಟು ಬಿಚ್ಚಿಟ್ಟ ಪೊಲೀಸರು

    ಮಾರ್ಚ್ 26 ರಂದು ಐಪಿಎಲ್ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ತಂಡವನ್ನು ಎದುರಿಸಲಿದೆ. 14ನೇ ಆವೃತ್ತಿ ಐಪಿಎಲ್‍ನ ಫೈನಲ್ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿತ್ತು. ಫೈನಲ್‍ನಲ್ಲಿ ಚೆನ್ನೈ ತಂಡ 27 ರನ್‍ಗಳ ಅಂತರದಿಂದ ಗೆದ್ದು ಚಾಂಪಿಯನ್ ಆಗಿತ್ತು. ಇದನ್ನೂ ಓದಿ: ಶೇನ್ ವಾರ್ನ್ ಕೋಣೆ, ಟವೆಲ್‍ನಲ್ಲಿ ರಕ್ತದ ಕಣ ಇತ್ತು: ಥಾಯ್ಲೆಂಡ್ ಪೊಲೀಸ್

    15ನೇ ಆವೃತ್ತಿ ಐಪಿಎಲ್ ಮಾರ್ಚ್ 26 ರಂದು ಐಪಿಎಲ್ ಆರಂಭವಾಗುತ್ತಿದ್ದು, ಮುಂಬೈ ಮತ್ತು ಪುಣೆಯಲ್ಲಿ ಒಟ್ಟು 70 ಲೀಗ್ ಮತ್ತು 4 ಪ್ಲೇ ಆಫ್ ಪಂದ್ಯಗಳು ನಡೆಯಲಿದೆ. ಒಟ್ಟು 65 ದಿನಗಳ ಕಾಲ ಟೂರ್ನಿ ನಡೆಯಲಿದೆ.

  • ಧೋನಿ ನನ್ನ ಫೇವರಿಟ್ ಕ್ಯಾಪ್ಟನ್ – CSK ಪರ ಆಡಲು ಬಯಸುತ್ತೇನೆಂದ ಮಾಜಿ RCB ಆಟಗಾರ

    ಧೋನಿ ನನ್ನ ಫೇವರಿಟ್ ಕ್ಯಾಪ್ಟನ್ – CSK ಪರ ಆಡಲು ಬಯಸುತ್ತೇನೆಂದ ಮಾಜಿ RCB ಆಟಗಾರ

    ಮುಂಬೈ: ಐಪಿಎಲ್ ಮೆಗಾ ಹರಾಜಿಗೆ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಆರ್​ಸಿಬಿ ತಂಡದ ಮಾಜಿ ಆಟಗಾರ ಹರ್ಷಲ್ ಪಟೇಲ್, ಧೋನಿ ನನ್ನ ಫೇವರಿಟ್ ಕ್ಯಾಪ್ಟನ್ ನಾನು ಸಿಎಸ್‍ಕೆ ಪರ ಆಡಲು ಬಯಸುತ್ತೇನೆ ಎಂದಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ವಿಶ್ವಕಂಡ ಶ್ರೇಷ್ಠ ನಾಯಕರಲ್ಲಿ ಧೋನಿ ಮೊದಲಿಗರು. ಐಪಿಎಲ್‍ನಲ್ಲಿ ಅವರ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಬಯಕೆ ಇದೆ. ಅವರಿಂದ ಕಲಿಯುವಂತಹ ಹಲವು ವಿಷಯಗಳು ಇನ್ನೂ ಬಾಕಿ ಇದೆ. ಮುಂದೆ ಅವಕಾಶ ಸಿಕ್ಕರೆ ಬಳಸಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ರಾಹುಲ್‌ಗೆ ಕ್ಯಾಪ್ಟನ್‌ ಪಟ್ಟ ಕಟ್ಟಿದ ಲಕ್ನೋ

    ಹರ್ಷಲ್ ಪಟೇಲ್ 2022ರ ಐಪಿಎಲ್ ಹರಾಜು ಪಟ್ಟಿಯಲ್ಲಿ ಮೂಲಬೆಲೆ 2 ಕೋಟಿಗೆ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ಬಾರಿಯ ಐಪಿಎಲ್‍ನಲ್ಲಿ ಪಟೇಲ್ ಆರ್​ಸಿಬಿ ಪರ ಭರ್ಜರಿ ಪ್ರದರ್ಶನ ನೀಡಿದರಲ್ಲದೆ, 14ನೇ ಆವೃತ್ತಿ ಐಪಿಎಲ್‍ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಪಡೆದಿದ್ದರು. ಆದರೆ ಆರ್​ಸಿಬಿ ಮಾತ್ರ ಪಟೇಲ್‍ರನ್ನು ರಿಟೈನ್ ಮಾಡಿಕೊಳ್ಳದೇ ಹರಾಜಿಗೆ ಬಿಟ್ಟು ಕೊಟ್ಟಿದೆ.  ಇದನ್ನೂ ಓದಿ: ಅಜ್ಜಿ ಜೊತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆಹಾಕಿದ ಪಾಂಡ್ಯ

    ಪಟೇಲ್ ಈ ಬಾರಿಯ ಹರಾಜಿನಲ್ಲಿ ಮೂಲಬೆಲೆಗಿಂತ ಹೆಚ್ಚಿನ ಬೆಲೆಗೆ ಹರಾಜಾಗುವ ಸಾಧ್ಯತೆ ಇದೆ. ಈಗಾಗಲೇ ಹರ್ಷಲ್ ಪಟೇಲ್ ಟೀಂ ಇಂಡಿಯಾದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಸರಣಿ ಗೆದ್ದ ಬಳಿಕ ‘ಜೈ ಶ್ರೀರಾಮ್’ ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್

  • ಐಪಿಎಲ್‍ನಲ್ಲಿ ತವರು ತಂಡದ ಪರ ಆಡುವ ಇಂಗಿತ ವ್ಯಕ್ತಪಡಿಸಿದ ಅಶ್ವಿನ್

    ಐಪಿಎಲ್‍ನಲ್ಲಿ ತವರು ತಂಡದ ಪರ ಆಡುವ ಇಂಗಿತ ವ್ಯಕ್ತಪಡಿಸಿದ ಅಶ್ವಿನ್

    ಚೆನ್ನೈ: ಟೀಂ ಇಂಡಿಯಾದ ಯಶಸ್ವಿ ಸ್ಪಿನ್ನರ್ ಆರ್.ಅಶ್ವಿನ್ 15ನೇ ಆವೃತ್ತಿಯ ಐಪಿಎಲ್ ಹರಾಜಿಗೂ ಮುನ್ನ ನಾನು ಮತ್ತೆ ತವರು ತಂಡದ ಪರ ಆಡಲು ಇಚ್ಚಿಸುತ್ತೇನೆ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.

    ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮಿಂಚುಹರಿಸಿ ಬಳಿಕ ಟೀಂ ಇಂಡಿಯಾಗೆ ಪಾರ್ದಾಪಣೆ ಮಾಡಿದ ಅಶ್ವಿನ್ ಮೂಲತಃ ಚೆನ್ನೈನವರು. 2010 ರಿಂದ ಐಪಿಎಲ್‍ನ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ಅಶ್ವಿನ್ ಆ ಬಳಿಕ ಹರಾಜಿನಲ್ಲಿ ಚೆನ್ನೈ ತಂಡ ಬಿಟ್ಟು ಡೆಲ್ಲಿ ತಂಡ ಸೇರಿಕೊಂಡಿದ್ದರು. ಇದೀಗ 15ನೇ ಆವೃತ್ತಿ ಐಪಿಎಲ್‍ಗೂ ಮುನ್ನ ಡೆಲ್ಲಿ ತಂಡ ಅಶ್ವಿನ್‍ರನ್ನು ಹರಾಜಿಗೆ ಬಿಟ್ಟು ಕೊಟ್ಟಿದೆ. ಇದನ್ನೂ ಓದಿ: ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುವ ವೇಳೆ ಐಪಿಎಲ್‍ನಲ್ಲಿ ಯಾವ ತಂಡದ ಪರ ಆಡಲು ಬಯಸುತ್ತೀರಿ ಎಂದು ಅಶ್ವಿನ್‍ಗೆ ಪ್ರಶ್ನೆ ಕೇಳಲಾಗಿದೆ ಈ ವೇಳೆ ಅಶ್ವಿನ್, ನನಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವುದು ತುಂಬಾ ಇಷ್ಟ. ಅದು ನನಗೆ ಶಾಲೆ ಇದ್ದಂತೆ ಎಲ್‍ಕೆಜಿ, ಯುಕೆಜಿ, ಪ್ರಾಥಮಿಕ ಶಿಕ್ಷಣವನ್ನು ಸಿಎಸ್‍ಕೆ ಪರ ಪಡೆದುಕೊಂಡಿದ್ದೇನೆ. ಆ ಬಳಿಕ ಬೇರೆ ಶಾಲೆಗೆ ಹೋಗಿದ್ದೆ. ಇದೀಗ ಮತ್ತೆ ಮನೆಯಂಗಳದ ಶಾಲೆಯಂತಿರುವ ಸಿಎಸ್‍ಕೆ ಪರ ಆಡಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಉತ್ತಮ ಆಯ್ಕೆ: ಎಂಎಸ್‌ಕೆ ಪ್ರಸಾದ್

    ಸಿಎಸ್‍ಕೆ ಪರ ಆಡುವುದಲ್ಲದೆ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆಯು ಮಾತನಾಡಿದ್ದು, ನಾನು ಧೋನಿಯ ಮಾತನ್ನು ಇಷ್ಟಪಡುತ್ತೇನೆ, ಅವರು ಯಾವತ್ತು ಹೇಳುತ್ತಿರುತ್ತಾರೆ ನಾವು ಆಡುವ ಸನ್ನಿವೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು, ಯಾವುದೇ ಅಂಜಿಕೆ ಇರಬಾರದು. ಪ್ರತಿಕ್ರಿಯೆ ಸ್ಪಷ್ಟವಾಗಿರಬೇಕು ಎಂದಿದ್ದರು ಎಂದು ಧೋನಿಯೊಂದಿಗೆ ಮತ್ತೊಮ್ಮೆ ಕಾಣಿಸಿಕೊಳ್ಳುವ ಆಸೆ ಹೇಳಿಕೊಂಡಿದ್ದಾರೆ.

    2009 ರಿಂದ 2015ರ ವರಗೆ ಸಿಎಸ್‍ಕೆ ಪರ ಆಡಿದ ಅಶ್ವಿನ್ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಸಹಿತ ಒಟ್ಟು 120 ಪಂದ್ಯಗಳಿಂದ 120 ವಿಕೆಟ್ ಪಡೆದಿದ್ದಾರೆ. ಇದೀಗ ಅಶ್ವಿನ್ ಸಿಎಸ್‍ಕೆ ಪರ ಮತ್ತೊಮ್ಮೆ ಘರ್ಜಿಸಬೇಕೆಂದಿರುವುದನ್ನು ಕೇಳಿರುವ ಸಿಎಸ್‍ಕೆ ಫ್ರಾಂಚೈಸಿ ಹರಾಜಿನಲ್ಲಿ ಅಶ್ವಿನ್‍ಗೆ ಮಣೆಹಾಕುವುದೇ ಎಂಬ ಕುತೂಹಲ ಮನೆಮಾಡಿದೆ. ಇದನ್ನೂ ಓದಿ: ಐಪಿಎಲ್ 2022 – ಯಾರು ಯಾವ ತಂಡಕ್ಕೆ ನಾಯಕ? – ಇಲ್ಲಿದೆ ಪೂರ್ಣ ವಿವರ