Tag: CSK

  • RCB ತಂಡದ ಸೀಕ್ರೆಟ್‌ ಹೇಳುವಂತೆ ಅಪರಿಚಿತ ವ್ಯಕ್ತಿಯಿಂದ ಸಿರಾಜ್‌ಗೆ ಕರೆ

    RCB ತಂಡದ ಸೀಕ್ರೆಟ್‌ ಹೇಳುವಂತೆ ಅಪರಿಚಿತ ವ್ಯಕ್ತಿಯಿಂದ ಸಿರಾಜ್‌ಗೆ ಕರೆ

    ಮುಂಬೈ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಂತರಿಕ ವಿಷಯಗಳನ್ನ ಬಹಿರಂಗಪಡಿಸುವಂತೆ ಅಪರಿಚಿತ ವ್ಯಕ್ತಿಯೊಬ್ಬ ಆರ್‌ಸಿಬಿ ವೇಗಿ ಮೊಹಮ್ಮದ್‌ ಸಿರಾಜ್‌ಗೆ (Mohammed Siraj) ಕರೆ ಮಾಡಿದ್ದು, ಈ ಬಗ್ಗೆ ಸಿರಾಜ್‌ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ (BCCI Anti Corruption Unit) ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ವಿರುದ್ಧ ಆರ್‌ಸಿಬಿ ತಂಡ ಸೋಲಿನಿಂದಾಗಿ ಸಾಕಷ್ಟು ಹಣ ಕಳೆದುಕೊಂಡ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಮೊಹಮ್ಮದ್‌ ಸಿರಾಜ್‌ಗೆ ಕರೆ ಮಾಡಿ, ಬೆಂಗಳೂರು ತಂಡದ ಆಂತರಿಕ ವಿಷಯಗಳ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ. ಕರೆ ಬಂದ ತಕ್ಷಣವೇ ಆರ್‌ಸಿಬಿ ವೇಗಿ ನಡೆದ ವಿಷಯವನ್ನ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ವರದಿ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: RCBvsCSK ರಣರೋಚಕ ಪಂದ್ಯದಲ್ಲಿ ಎರಡೆರಡು ದಾಖಲೆ ಉಡೀಸ್‌

    ಈ ಬಗ್ಗೆ ತನಿಖೆ ನಡೆಸಿದಾಗ, ಮೊಹಮ್ಮದ್ ಸಿರಾಜ್ ಅವರನ್ನ ಸಂಪರ್ಕಿಸಿದ್ದ ವ್ಯಕ್ತಿ ಬುಕ್ಕಿಯಲ್ಲ. ಈತ ಹೈದರಾಬಾದ್‌ನಲ್ಲಿ ಚಾಲಕನಾಗಿದ್ದು, ಐಪಿಎಲ್ (IPL 2023) ಪಂದ್ಯಗಳಲ್ಲಿ ಬೆಟ್ಟಿಂಗ್ ವ್ಯಸನಿಯಾಗಿದ್ದ. ಇದರಿಂದ ಅವರು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈ ಕಾರಣದಿಂದ ಅವರು ಮೊಹಮ್ಮದ್‌ ಸಿರಾಜ್‌ ಅವರನ್ನ ಸಂಪರ್ಕಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನಟಿ ಅಮೂಲ್ಯ ಮಕ್ಕಳು – ಪುಟಾಣಿ ಫ್ಯಾನ್ಸ್‌ಗೆ ನೆಟ್ಟಿಗರು ಫಿದಾ

    BCCI ಭ್ರಷ್ಟಾಚಾರ ನಿಗ್ರಹ ಘಟಕ ಹೇಳಿದ್ದೇನು?
    ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಟಗಾರರು ಹಾಗೂ ಅಧಿಕಾರಿಗಳನ್ನ ಸಂಪರ್ಕಿಸಿದರೆ, ತಕ್ಷಣ ಅವರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಅಂತಹ ಆಟಗಾರರು ಅಮಾನತು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಕಾರ್ಯ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಭ್ರಷ್ಟಚಾರ ನಿಗ್ರಹ ಘಟಕ ತಿಳಿಸಿದೆ.

    ಟೀಂ ಇಂಡಿಯಾ ಮಾಜಿ ವೇಗಿ ಎಸ್‌ ಶ್ರೀಶಾಂತ್‌, ಅಂಕಿತ್‌ ಚವಾಣ್‌ ಹಾಗೂ ಅಜಿತ್‌ ಚಂಡೀಲಾ ಅವರು ಮ್ಯಾಚ್ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ಫ್ರಿನ್ಸಿಪಾಲ್‌ ಗುರುನಾಥ್‌ ಮೇಯಪ್ಪನ್‌ ಅವರು ಕೂಡ ಇವರ ಜೊತೆ ಶಿಕ್ಷೆಗೆ ಒಳಗಾಗಿದ್ದರು. ಬಾಂಗ್ಲಾದೇಶ ಮಾಜಿ ನಾಯಕ ಶಕಿಬ್‌ ಅಲ್‌ ಹಸನ್ ಅವರು 2021ರಲ್ಲಿ ಭ್ರಷ್ಟಚಾರದ ಕುರಿತು ವರದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರು ಕೆಲ ತಿಂಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು.

    ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳವನ್ನ ಬಲಿಷ್ಠಗೊಳಿಸಿದ್ದು, ಅಧಿಕಾರಿಗಳು ಹೋಟೆಲ್‌ ಹಾಗೂ ಮೈದಾನದಲ್ಲಿ ಎಲ್ಲಾ ತಂಡಗಳ ಆಟಗಾರರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಸದ್ಯ 2023ರ ಐಪಿಎಲ್‌ ಆವೃತ್ತಿಯಲ್ಲಿ ಈಗಾಗಲೇ ಆರ್‌ಸಿಬಿ ಪರ 5 ಪಂದ್ಯಗಳನ್ನಾಡಿರುವ ಮೊಹಮ್ಮದ್‌ ಸಿರಾಜ್‌ 8 ವಿಕೆಟ್‌ಗಳನ್ನ ಪಡೆದು ಮಿಂಚಿದ್ದಾರೆ.

  • ಧೋನಿ ನೋಡಲು ಬೈಕ್‌ ಮಾರಿ IPL ಟಿಕೆಟ್‌ ಖರೀದಿಸಿದ ಅಭಿಮಾನಿ

    ಧೋನಿ ನೋಡಲು ಬೈಕ್‌ ಮಾರಿ IPL ಟಿಕೆಟ್‌ ಖರೀದಿಸಿದ ಅಭಿಮಾನಿ

    ಬೆಂಗಳೂರು: ಸೋಮವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡಗಳ ನಡುವಿನ ಪಂದ್ಯ ಕೊನೆಯವರೆಗೂ ರೋಚಕತೆಯಿಂದ ಕೂಡಿತ್ತು. ಕ್ರೀಡಾಂಗಣದಲ್ಲಿ ತುಂಬಾ ನೆರೆದಿದ್ದ ಇತ್ತಂಡದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಮಳೆಗರೆಯುತ್ತಾ ಆಟಗಾರರನ್ನ ಹುರಿದುಂಬಿಸಿದರು.

    ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಸಿಡಿಯುತ್ತಿದ್ದ ಒಂದೊಂದು ಸಿಕ್ಸರ್‌, ಬೌಂಡರಿಗೂ ಎದೆಬಡಿತ ಹೆಚ್ಚಿಸುತ್ತಿತ್ತು. ಈ ವೇಳೆ ಸಿಎಸ್‌ಕೆ ಅಭಿಮಾನಿಯೊಬ್ಬ ʻಗೋವಾದಿಂದ ತಲಾ ಧೋನಿಯನ್ನ ನೋಡಲು ನಾನು ನನ್ನ ಬೈಕ್ ಮಾರಿದ್ದೇನೆʼ ಎನ್ನುವ ಪೋಸ್ಟರ್‌ ಹಿಡಿದುಕೊಂಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಂದ್ಯದ ನಡುವೆ ಗೋವಾ ಮೂಲದ ಯುವಕ ಪೋಸ್ಟರ್‌ ಹಿಡಿದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ್ದಾನೆ. ಈತ ಗೋವಾ ಮೂಲದವನಾಗಿದ್ದು, ಐಪಿಎಲ್‌ (IPL 2023) ಅಂಗಳದಲ್ಲಿ ಧೋನಿ ಅಬ್ಬರಿಸೋದನ್ನ ನೋಡಲೇಬೇಕೆಂದು ತನ್ನ ಸ್ವಂತ ಬೈಕ್‌ ಮಾರಿ ಟಿಕೆಟ್‌ ಸಹ ಖರೀದಿಸಿದ್ದ ಎನ್ನಲಾಗಿದೆ. ಇದಕ್ಕೆ ಸಿಎಸ್‌ಕೆ ಅಭಿಮಾನಿಗಳು ನೀನು ಪಕ್ಕಾ ಫ್ಯಾನ್‌ ಬಿಡು ಗುರು ಅಂತಾ ಪ್ರಶಂಸೆ ವ್ಯಕ್ತಪಡಿಸಿದರೆ, ಆರ್‌ಸಿಬಿ ಅಭಿಮಾನಿಗಳು ಅದಕ್ಕೆ ವಿರೋಧವಾಗಿ ಕಾಮೆಂಟ್‌ ಮಾಡಿದ್ದಾರೆ.

    ಚೆನ್ನೈ ನೀಡಿದ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡ ಆರಂಭದಲ್ಲೇ ವಿರಾಟ್‌ ಕೊಹ್ಲಿ ಹಾಗೂ ಮಹಿಪಾಲ್‌ ಲೊಮ್ರೋರ್‌ ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿ ಎದುರಿಸಿತ್ತು. ನಂತರ 3ನೇ ವಿಕೆಟ್‌ಗೆ ಜೊತೆಯಾದ ನಾಯಕ ಫಾಫ್‌ ಡುಪ್ಲೆಸಿಸ್‌ ಹಾಗೂ ಮ್ಯಾಕ್ಸ್‌ವೆಲ್‌ 61 ಎಸೆತಗಳಲ್ಲಿ ಬರೋಬ್ಬರಿ 126 ರನ್‌ ಚಚ್ಚಿದರು. ಚೆನ್ನೈ ಬೌಲರ್‌ಗಳನ್ನು ಚೆಂಡಾಡಿದ ಇಬ್ಬರು 3ನೇ ವಿಕೆಟಿಗೆ 61 ಎಸೆತಗಳಲ್ಲಿ 126 ರನ್‌ ಜೊತೆಯಾಟವಾಡಿದರು. ಮ್ಯಾಕ್ಸ್‌ವೆಲ್‌ 76 ರನ್‌ (36 ಎಸೆತ, 3 ಬೌಂಡರಿ, 8 ಸಿಕ್ಸರ್‌) ಡುಪ್ಲೆಸಿಸ್‌ 62 ರನ್‌(33 ಎಸೆತ, 5 ಬೌಂಡರಿ, 4 ಸಿಕ್ಸರ್)‌ ಹೊಡೆದು ಔಟಾದರು. ಇವರಿಬ್ಬರ ಆಟದಿಂದ ಆರ್‌ಸಿಬಿ 15 ಓವರ್‌ಗಳಲ್ಲೇ 169 ರನ್‌ ಕಲೆಹಾಕಿತ್ತು. 18ನೇ ಓವರ್‌ಗೆ 196 ರನ್‌ ಗಳಿಸಿತ್ತು. ಕೊನೆಯ 12 ಎಸೆತಗಳಿಗೆ 30 ರನ್‌ಗಳ ಅವಶ್ಯಕತೆಯಿತ್ತು. ಇದರಿಂದ ಆರ್‌ಸಿಬಿಗೆ ಗೆಲುವು ಖಚಿತ ಎಂದು ಭಾವಿಸಲಾಗಿತ್ತು.

    ಕೊನೆಯಲ್ಲಿ ಮಹಿ ಮ್ಯಾಜಿಕ್‌ನಿಂದ ದಿನೇಶ್‌ ಕಾರ್ತಿಕ್‌ ಒಂದು ಕ್ಯಾಚ್‌ನಿಂದ ತಪ್ಪಿಸಿಕೊಂಡರೂ ಮತ್ತೊಂದು ಎಸೆತದಲ್ಲೇ ಸಿಕ್ಸರ್‌ ಸಿಡಿಸಲು ಮುಂದಾಗಿ ಕ್ಯಾಚ್‌ ನೀಡಿ ಔಟಾದರು. ಇದರಿಂದ ತಂಡಕ್ಕೆ ಭಾರೀ ನಿರಾಸೆಯಾಯಿತು. ಕೊನೆಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದ ಸುಯೇಶ್‌ ಪ್ರಭುದೇಸಾಯಿ ಒಂದು ಸಿಕ್ಸ್‌ ಸಿಡಿಸಿದರು. 4 ಮತ್ತು 5ನೇ ಎಸೆತದಲ್ಲಿ ಕೇವಲ ಒಂದೊಂದು ರನ್‌ ಕದಿಯುವಷ್ಟಕ್ಕೆ ಸೀಮಿತವಾಗಿ ಆರ್‌ಸಿಬಿ ತಂಡ ಸೋಲು ಎದುರಿಸಬೇಕಾಯಿತು.

  • ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನಟಿ ಅಮೂಲ್ಯ ಮಕ್ಕಳು – ಪುಟಾಣಿ ಫ್ಯಾನ್ಸ್‌ಗೆ ನೆಟ್ಟಿಗರು ಫಿದಾ

    ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನಟಿ ಅಮೂಲ್ಯ ಮಕ್ಕಳು – ಪುಟಾಣಿ ಫ್ಯಾನ್ಸ್‌ಗೆ ನೆಟ್ಟಿಗರು ಫಿದಾ

    ಬೆಂಗಳೂರು: ಐಪಿಎಲ್‌ ಟೂರ್ನಿ (IPL 2023) ಬಂತೆಂದರೆ ಸಾಕು ಪ್ರಮುಖವಾಗಿ ಕೇಳಿಬರುವ ಹೆಸರೇ RCB. ಆರ್‌ಸಿಬಿ ಹೆಸರಲ್ಲೇ ಒಂದು ಹವಾ ಇದೆ, ಎಷ್ಟು ಬಾರಿ ಪಂದ್ಯ ಸೋತರೂ ಉತ್ಸಾಹ ಕಳೆದುಕೊಳ್ಳದೆ ಪ್ರತಿ ಸಲ ʻಈ ಸಲ ಕಪ್‌ ನಮ್ದೆ’ ಎನ್ನುತ್ತಾ ಹೊಸ ಉರುಪಿನೊಂದಿಗೆ ಮತ್ತೆ ಮತ್ತೆ ಕ್ರಿಕೆಟ್‌ ಅಂಗಳದಲ್ಲಿ ರಂಗೇರಿಸುತ್ತಿದೆ.

    ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಡುವಿನ ರಣರೋಚಕ ಪಂದ್ಯದಲ್ಲಿ ಸಿಎಸ್‌ಕೆ 8 ರನ್‌ಗಳ ರೋಚಕ ಜಯ ಸಾಧಿಸಿತು. ಕೊನೆಯವರೆಗೂ ಛಲಬಿಡದೇ ಹೋರಾಡಿದ ಆರ್‌ಸಿಬಿ ವಿರೋಚಿತ ಸೋಲನುಭವಿಸಿತು. ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಸ್ಫೋಟಕ ಫಿಫ್ಟಿ – ಹೋರಾಡಿ ಕೊನೆಗೆ ಸೋತ ಆರ್‌ಸಿಬಿ

    ಈ ಬೆನ್ನಲ್ಲೇ ನಟಿ ಅಮೂಲ್ಯ (Actress Amulya) ತಮ್ಮ ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್ ಇಬ್ಬರಿಗೂ ಆರ್​ಸಿಬಿ ಜೆರ್ಸಿ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಈ ವಿಶೇಷ ಫೋಟೋಗಳನ್ನ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಆರ್‌ಸಿಬಿಯನ್ನ ಬೆಂಬಲಿಸಿದ್ದಾರೆ. ಅಲ್ಲದೇ ʻಈ ಸಲ ಕಪ್‌ ನಮ್ದೆʼ ಎಂದು ಮಕ್ಕಳೇ ಹೇಳಿರುವಂತೆ ಬರೆದುಕೊಂಡಿದ್ದಾರೆ. ಪುಟಾಣಿ ಫ್ಯಾನ್ಸ್‌ಗಳನ್ನ ನೋಡಿ ಆರ್‌ಸಿಬಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ. ನಟಿ ಅಮೂಲ್ಯ ಪೋಸ್ಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: IPL 2023: ಇಶಾನ್‌ ಕಿಶನ್‌ ಶೈನ್‌, ಅಯ್ಯರ್‌ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ

    ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 226 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಸಿಕ್ಸರ್‌, ಬೌಂಡರಿಗಳ ಹೊಡಿಬಡಿ ಆಟದ ಹೊರತಾಗಿಯೂ 218 ರನ್‌ಗಳಿಸಿ 8 ರನ್‌ಗಳಿಂದ ವಿರೋಚಿತ ಸೋಲನುಭವಿಸಿತು.

  • ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ನಡುವೆ ಕ್ರಿಕೆಟ್ ವೀಕ್ಷಿಸಿದ ಧನುಷ್, ಶಿವಣ್ಣ

    ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ನಡುವೆ ಕ್ರಿಕೆಟ್ ವೀಕ್ಷಿಸಿದ ಧನುಷ್, ಶಿವಣ್ಣ

    ದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ (Shivaraj Kumar) ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ರಜನಿಕಾಂತ್ ಜೊತೆ ಜೈಲರ್ ಸಿನಿಮಾದಲ್ಲಿ ನಟಿಸುತ್ತಿದ್ದರೆ, ಧನುಷ್ (Dhanush) ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತತವಾಗಿ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಧನುಷ್ ಮತ್ತು ಶಿವರಾಜ್ ಕುಮಾರ್ ಐಪಿಎಲ್ ಪಂದ್ಯ ವೀಕ್ಷಿಸಿದ್ದಾರೆ.

    ನಿನ್ನೆ ಬೆಂಗಳೂರಿನ (Bangalore) ಚಿನ್ನಸ್ವಾಮಿ ಕ್ರೀಡಾಂಗಣಯದಲ್ಲಿ ಆಯೋಜನೆಯಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 24ನೇ ಪಂದ್ಯದಲ್ಲಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ (RCB,)  ಹಾಗೂ ಚೆನ್ನೈನ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಿದ್ದವು. ರಾಯಲ್ ಚಾಲೆಂಜರ್ಸ್ ಪರವಾಗಿ ಶಿವರಾಜ್ ಕುಮಾರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಧನುಷ್ ಬೆಂಬಲಿಸಿದರು. ಜೊತೆಗೆ ಒಟ್ಟಿಗೆ ಕೂತು ಪಂದ್ಯ ವೀಕ್ಷಿಸಿದ್ದು ವಿಶೇಷವಾಗಿತ್ತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 8 ರನ್‍ ಗಳ ರೋಚಕ ಗೆಲುವನ್ನು ಕಂಡಿದೆ. ಶಿವರಾಜ್ ಕುಮಾರ್ ಹಾಗೂ ಧನುಷ್ ಒಟ್ಟಿಗೆ ಕೂತು ಪಂದ್ಯ ವೀಕ್ಷಿಸಿದ ಫೋಟೋಗಳು ವೈರಲ್ ಆಗಿವೆ. ಇದನ್ನೂ ಓದಿ:ಸೀರೆಯುಟ್ಟು ಮಿಂಚಿದ ನಿವೇದಿತಾಗೆ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು

    ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ವಿಶೇಷ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ,  ಪಾತ್ರ ಯಾವುದು, ಹಿನ್ನೆಲೆ ಏನು ಎನ್ನುವ ವಿಚಾರ ಈವರೆಗೂ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಸ್ವತಃ ಶಿವರಾಜ್ ಕುಮಾರ್ ಕೂಡ ಈತನಕ ಹೇಳಿಕೊಂಡಿಲ್ಲ. ಪಾತ್ರ ಮತ್ತು ಕಥೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಂಡು ಬರಲಾಗುತ್ತಿದೆ.

    ಆದರೆ, ಆಕಸ್ಮಿಕ ಎನ್ನುವಂತೆ ಧನುಷ್ ಜೊತೆ ಮಾಡುತ್ತಿದ್ದ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾದ ಕೆಲವು ವಿಷಯಗಳು ಸೋರಿಕೆಯಾಗಿವೆ. ಅಂದರೆ, ಶಿವರಾಜ್ ಕುಮಾರ್ ಅವರಿಗೆ ಕೇಶವಿನ್ಯಾಸ ಮಾಡುತ್ತಿರುವ ರಾಜು ಎನ್ನುವವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾತ್ರ ಮತ್ತು ಸಿನಿಮಾದ ಕಥೆಯನ್ನೂ ಅವರು ಬಿಟ್ಟುಕೊಟ್ಟಿದ್ದಾರೆ.

    ಕಾಡು ಜನರು ಮತ್ತು ಬ್ರಿಟಿಷ್ ರ ನಡುವಿನ ಹೋರಾಟದ ಕಥೆಯನ್ನು ಕ್ಯಾಪ್ಟನ್ ಮಿಲ್ಲರ್ ನಲ್ಲಿ ಹೇಳುತ್ತಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ಕಾಡು ಜನರ ಪಾತ್ರದಲ್ಲಿ ಶಿವಣ್ಣ ಮತ್ತು ಧನುಷ್ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಧನುಷ್ ಅಣ್ಣನ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರಂತೆ.

  • ಮ್ಯಾಕ್ಸಿ, ಡುಪ್ಲೆಸಿಸ್‌ ಸ್ಫೋಟಕ ಫಿಫ್ಟಿ – ಹೋರಾಡಿ ಕೊನೆಗೆ ಸೋತ ಆರ್‌ಸಿಬಿ

    ಮ್ಯಾಕ್ಸಿ, ಡುಪ್ಲೆಸಿಸ್‌ ಸ್ಫೋಟಕ ಫಿಫ್ಟಿ – ಹೋರಾಡಿ ಕೊನೆಗೆ ಸೋತ ಆರ್‌ಸಿಬಿ

    ಬೆಂಗಳೂರು: ಮ್ಯಾಕ್ಸ್‌ವೆಲ್‌, ನಾಯಕ ಡುಪ್ಲೆಸಿಸ್‌ ಸ್ಫೋಟಕ ಅರ್ಧಶತಕದ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವಿರುದ್ಧ ತವರಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ಸೋತಿದೆ. ಕ್ಯಾಚ್‌ ಕೈ ಚೆಲ್ಲಿದ್ದರೂ ಕೊನೆಯಲ್ಲಿ ಬೌಲರ್‌ಗಳ ಉತ್ತಮ ಆಟದಿಂದ ಬೆಂಗಳೂರು ವಿರುದ್ಧ ಚೆನ್ನೈ 8 ರನ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 227 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಮ್ಯಾಕ್ಸ್‌ವೆಲ್‌ (Maxwell) ಮತ್ತು ಡುಪ್ಲೆಸಿಸ್‌ (F du Plessis) ಆಟದಿಂದಾಗಿ ಜಯದತ್ತ ಬಂದಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಕಳೆದುಕೊಂಡಿದ್ದರಿಂದ ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 218 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಆರಂಭದಲ್ಲೇ ಕುಸಿತ:
    ಮೊದಲ ಓವರ್‌ನಲ್ಲಿ 6 ರನ್‌ ಗಳಿಸಿದ್ದ ಕೊಹ್ಲಿ (Kohli) ಔಟಾದರು. ಬ್ಯಾಟ್‌ಗೆ ಬಡಿದ ಚೆಂಡು ಕಾಲಿಗೆ ಸಿಕ್ಕಿ ವಿಕೆಟಿಗೆ ಬಡಿಯಿತು. ನಂತರ ಬಂದ ಮಹಿಪಾಲ್ ಲೋಮ್ರೋರ್ ಸೊನ್ನೆ ಸುತ್ತಿದರು.

    2 ಓವರ್‌ ಅಂತ್ಯಕ್ಕೆ 15 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್‌ಸಿಬಿಗೆ ನಾಯಕ ಡುಪ್ಲೆಸಿಸ್‌ ಮತ್ತು ಮ್ಯಾಕ್ಸ್‌ವೆಲ್‌ ಜೀವ ತುಂಬಿದರು. ಚೆನ್ನೈ ಬೌಲರ್‌ಗಳನ್ನು ಚೆಂಡಾಡಿದ ಇಬ್ಬರು ಮೂರನೇ ವಿಕೆಟಿಗೆ 61 ಎಸೆತಗಳಲ್ಲಿ 126 ರನ್‌ ಜೊತೆಯಾಟವಾಡಿದರು. ಮ್ಯಾಕ್ಸ್‌ವೆಲ್‌ 76 ರನ್‌ (36 ಎಸೆತ, 3 ಬೌಂಡರಿ, 8 ಸಿಕ್ಸರ್‌) ಡುಪ್ಲೆಸಿಸ್‌ 62 ರನ್‌(33 ಎಸೆತ, 5 ಬೌಂಡರಿ, 4 ಸಿಕ್ಸರ್)‌ ಹೊಡೆದು ಔಟಾದರು.

    ದಿನೇಶ್‌ ಕಾರ್ತಿಕ್‌ 28 ರನ್‌(14ಎಸೆತ, 3 ಬೌಂಡರಿ, 2 ಸಿಕ್ಸರ್‌), ಕೊನೆಯಲ್ಲಿ ಪ್ರಭುದೇಸಾಯಿ 19 ರನ್‌(11 ಎಸೆತ, 2 ಸಿಕ್ಸರ್‌) ಹೊಡೆದು ಔಟಾದರು. 16.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 191 ರನ್‌ಗಳಿಸಿದ್ದ ಬೆಂಗಳೂರು 27 ರನ್‌ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಳ್ಳುವ ಮೂಲಕ ಸೋಲನ್ನು ಒಪ್ಪಿಕೊಂಡಿತು.

    ಚೆನ್ನೈ ಸವಾಲಿನ ಮೊತ್ತ:
    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ 16 ರನ್‌ ಗಳಿಸುವಷ್ಟರಲ್ಲೇ ಋತುರಾಜ್‌ ಗಾಯಕ್‌ವಾಡ್‌ ವಿಕೆಟ್‌ ಕಳೆದುಕೊಂಡಿತ್ತು. ಎರಡನೇ ವಿಕೆಟಿಗೆ ಡೆವೊನ್‌ ಕಾನ್ವೇ ಮತ್ತು ಅಜಿಂಕ್ಯ ರಹಾನೆ 43 ಎಸೆತಗಳಲ್ಲಿ 74 ರನ್‌ ಜೊತೆಯಾಟವಾಡಿದರು. ರಹಾನೆ 37 ರನ್‌(20 ಎಸೆತ, 3 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು.

    3ನೇ ವಿಕೆಟಿಗೆ ಕಾನ್ವೇ ಮತ್ತು ಶಿವಂ ದುಬೆ 37 ಎಸೆತಗಳಲ್ಲಿ 80 ರನ್‌ ಚಚ್ಚಿದರು. ಶಿವಂ ದುಬೆ 52 ರನ್‌ (27 ಎಸೆತ, 2 ಬೌಂಡರಿ, 5 ಸಿಕ್ಸರ್)‌, ಕಾನ್ವೇ 83 ರನ್‌(45 ಎಸೆತ, 6 ಬೌಂಡರಿ, 6 ಸಿಕ್ಸರ್‌) ಹೊಡೆದು ಔಟಾದರು. ಅಂಬಾಟಿ ರಾಯಡು 14 ರನ್‌, ಮೊಯಿನ್‌ ಅಲಿ ಔಟಾಗದೇ 19 ರನ್‌( 9 ಎಸೆತ, 2 ಸಿಕ್ಸರ್)‌ ಹೊಡೆದ ಪರಿಣಾಮ ಚೆನ್ನೈ 6 ವಿಕೆಟ್‌ ನಷ್ಟಕ್ಕೆ 226 ರನ್‌ ಹೊಡೆಯಿತು.

    ರನ್‌ ಏರಿದ್ದು ಹೇಗೆ?
    50 ರನ್‌ – 36 ಎಸೆತ
    100 ರನ್‌ – 64 ಎಸೆತ
    150 ರನ್‌ – 87 ಎಸೆತ
    200 ರನ್‌ – 108 ಎಸೆತ
    226 ರನ್‌ – 120 ಎಸೆತ

  • ಬೆಂಗಳೂರಲ್ಲಿ ಆರ್‌ಸಿಬಿ, ಚೆನ್ನೈ ಮ್ಯಾಚ್ – ಟಿಕೆಟ್‍ಗಾಗಿ ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿ ಚಾರ್ಜ್

    ಬೆಂಗಳೂರಲ್ಲಿ ಆರ್‌ಸಿಬಿ, ಚೆನ್ನೈ ಮ್ಯಾಚ್ – ಟಿಕೆಟ್‍ಗಾಗಿ ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿ ಚಾರ್ಜ್

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಹೊರಗಡೆ ಐಪಿಎಲ್ (IPL) ಟಿಕೆಟ್‍ಗೆ ಮುಗಿಬಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

    ಸೋಮವಾರ ನಡೆಯಲಿರುವ ಆರ್‌ಸಿಬಿ (RCB) ಹಾಗೂ ಚೆನ್ನೈ ಹೈವೋಲ್ಟೇಜ್ (CSK) ಐಪಿಎಲ್ ಮ್ಯಾಚ್ ವೀಕ್ಷಿಸಲು ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: IPLಗೆ ಸೆಡ್ಡು ಹೊಡೆಯಲು ಸೌದಿ ಮಾಸ್ಟರ್ ಪ್ಲ್ಯಾನ್ – BCCI ಹೇಳಿದ್ದೇನು?

    ಟಿಕೆಟ್ ಕೆಲವೇ ಕ್ಷಣದಲ್ಲಿ ಖಾಲಿಯಾಗಿದ್ದಕ್ಕೆ ಕ್ರೀಡಾಂಗಣದ ಟಿಕೆಟ್ ಕೌಂಟರ್‍ಗೆ ಸೋಲ್ಡ್ ಔಟ್ ಬೋರ್ಡ್ ಹಾಕಲಾಗಿತ್ತು. ಈ ಬೋರ್ಡ್ ನೋಡಿದ ಅಭಿಮಾನಿಗಳು ಸೋಲ್ಡ್ ಔಟ್ ಬೋರ್ಡ್‍ನ್ನು ಕಿತ್ತು ಹಾಕಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ತೀವ್ರ ಕಸರತ್ತು ನಡೆಸಿದ್ದು ನಿಯಂತ್ರಣಕ್ಕಾಗಿ ಲಾಠಿ ಬೀಸಿದ್ದಾರೆ.

    ಐಪಿಎಲ್‍ನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ತಂಡಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕೆ ಟಿಕೆಟ್ ಬೇಗನೇ ಮಾರಾಟವಾಗಿದೆ.

    ಶನಿವಾರ ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ( Delhi Capitals) ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡ 23 ರನ್‍ಗಳ ಗೆಲುವು ಸಾಧಿಸಿತ್ತು. ಈ ಮೂಲಕ ಡೆಲ್ಲಿಯನ್ನು ಸತತ ಐದನೇ ಸೋಲಿನತ್ತ ನೂಕಿತು. ಈ ಟೂರ್ನಿಯಲ್ಲಿ ವಿರಾಟ್ ಕೋಹ್ಲಿ ಮೂರನೇ ಅರ್ಧ ಶತಕ ಸಿಡಿಸಿದ್ದರು.

    ಬೆಂಗಳೂರು (Bengaluru) ಮತ್ತು ಚೆನ್ನೈ ತಲಾ 4 ಪಂದ್ಯವನ್ನು ಆಡಿದ್ದು ಎರಡೂ ತಂಡಗಳು ಎರಡು ಜಯ ದಾಖಲಿಸಿದೆ. ಚೆನ್ನೈ ತಂಡದ ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ ಬೆಂಗಳೂರು 7ನೇ ಸ್ಥಾನದಲ್ಲಿದೆ. ಇದನ್ನೂ ಓದಿ: IPL 2023: ಕೊನೆಯಲ್ಲಿ ಸಿಕ್ಸರ್‌, ಬೌಂಡರಿ ಆಟ – ಲಕ್ನೋ ತವರಿನಲ್ಲಿ ಗೆದ್ದು ಬೀಗಿದ ಪಂಜಾಬ್‌

  • ಖೂಷ್ಬೂ ಸುಂದರ್ ಅತ್ತೆಯನ್ನು ಭೇಟಿಯಾದ ಧೋನಿ

    ಖೂಷ್ಬೂ ಸುಂದರ್ ಅತ್ತೆಯನ್ನು ಭೇಟಿಯಾದ ಧೋನಿ

    ಮುಂಬೈ: ಎಂಎಸ್ ಧೋನಿ (Dhoni) ಇತ್ತೀಚೆಗೆ ಬಿಜೆಪಿ (BJP) ನಾಯಕಿ ಖುಷ್ಬೂ ಸುಂದರ್ (Khushbu Sundar) ಅವರ ಅತ್ತೆಯವರನ್ನು ಭೇಟಿಯಾಗಿದ್ದಾರೆ.

    ದೇಶದಲ್ಲಿ, ಒಂಬತ್ತರಿಂದ ತೊಂಬತ್ತು ವರ್ಷ ವಯಸ್ಸಿನವರೆಗಿನ ಎಲ್ಲರೂ ಧೋನಿಯನ್ನು ಮೆಚ್ಚುತ್ತಾರೆ. ಯಾಕೆಂದರೆ ಧೋನಿ ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯಸ್ಪರ್ಶಿಯಾಗಿದ್ದಾರೆ. ಆದರಲ್ಲೂ ಚೆನ್ನೈನಲ್ಲಿ (Chennai) ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ ಇನ್ನೂ ಹೆಚ್ಚಿನ ವಿಶೇಷ ಸ್ಥಾನಮಾನ ನೀಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ (CSK) ನಾಯಕತ್ವ ವಹಿಸಿದ್ದಾಗಿನಿಂದ ಧೋನಿ ಚೆನ್ನೈನೊಂದಿಗಿನ ಪ್ರೀತಿಯ ಸಂಬಂಧವು ಗಾಢವಾಗಿ ಬೆಳೆದಿದೆ.

    ಖುಷ್ಬೂ ಸುಂದರ್ ಅವರ ಅತ್ತೆಯನ್ನು ಭೇಟಿಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕಿ ಹಂಚಿಕೊಂಡಿದ್ದಾರೆ. ಅಲ್ಲದೆ ಹೀರೋಗಳನ್ನು ಸೃಷ್ಟಿಸಲಾಗುವುದಿಲ್ಲ, ಅವರು ಹುಟ್ಟುತ್ತಲೇ ಹೀರೋಗಳಾಗಿರುತ್ತಾರೆ. ಧೋನಿ ಅದನ್ನು ಸಾಬೀತು ಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. 88ರ ನನ್ನ ಅತ್ತೆಯನ್ನು ಭೇಟಿಯಾಗಿ ನೀವು ಅವರ ಜೀವನಕ್ಕೆ ಅನೇಕ ವರ್ಷಗಳ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಸೇರಿಸಿದ್ದೀರಿ. ಇದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾವ ತಂಡದ ಕೋಚ್ ಆಗ್ತೀರಿ – ಅಭಿಮಾನಿಯ ಪ್ರಶ್ನೆಗೆ ಜಾಣ್ಮೆಯ ಉತ್ತರ ಕೊಟ್ಟ ರವಿ ಶಾಸ್ತ್ರಿ

    ಈ ನಡುವೆ ಧೋನಿಯ ಕೊನೆಯ ಐಪಿಎಲ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಧೋನಿ ನಂತರ ಋತುರಾಜ್ ಗಾಯಕ್ವಾಡ್ ಸಿಎಸ್‍ಕೆ ನಾಯಕರಾಗಬಹುದು. ರವೀಂದ್ರ ಜಡೇಜಾ (Ravindra Jadeja) ಜೊತೆಗೆ ಬೆನ್ ಸ್ಟೋಕ್ಸ್ ಹೆಸರು ಪಟ್ಟಿಯಲ್ಲಿದೆ. ಇದನ್ನೂ ಓದಿ: ಕೊನೆಯವರೆಗೂ ಹೋರಾಡಿದ ರಿಂಕು – ಹೈದರಾಬಾದ್‌ಗೆ 23 ರನ್‌ಗಳ ಜಯ

  • ಯಾವ ತಂಡದ ಕೋಚ್ ಆಗ್ತೀರಿ – ಅಭಿಮಾನಿಯ ಪ್ರಶ್ನೆಗೆ ಜಾಣ್ಮೆಯ ಉತ್ತರ ಕೊಟ್ಟ ರವಿ ಶಾಸ್ತ್ರಿ

    ಯಾವ ತಂಡದ ಕೋಚ್ ಆಗ್ತೀರಿ – ಅಭಿಮಾನಿಯ ಪ್ರಶ್ನೆಗೆ ಜಾಣ್ಮೆಯ ಉತ್ತರ ಕೊಟ್ಟ ರವಿ ಶಾಸ್ತ್ರಿ

    ನವದೆಹಲಿ: ಕೋಚ್ (Coach) ಆಗಿ ಆಯ್ದುಕೊಳ್ಳುವುದಾದರೆ ಮುಂಬೈ ಇಂಡಿಯಾ (MI) ಅಥವಾ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ (CSK) ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿಯವರು (Ravi Shastri) ಜಾಣ್ಮೆಯ ಉತ್ತರ ನೀಡಿದ್ದಾರೆ.

    ಕೇಳಿದ ಪ್ರಶ್ನೆಗೆ ಉತ್ತರ ಬಹಳ ಸರಳವಾಗಿದೆ. ಎರಡೂ ತಂಡಗಳೂ ನೀಡುವ ಹಣದಲ್ಲಿ ಒಂದು ಕಡೆಯ ಹಣದ ತೂಕ ಹೆಚ್ಚಾಗಿರಬೇಕು ಎಂದು ಶಾಸ್ತ್ರಿ ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಅಭಿಮಾನಿಯೊಬ್ಬರು ಇತ್ತೀಚೆಗೆ ಚಾಟ್ ಸೆಷನ್‍ನಲ್ಲಿ ಈ ಪ್ರಶ್ನೆ ಕೇಳಿದ್ದರು. ಇದನ್ನೂ ಓದಿ: ಧೋನಿಯ 9 ವರ್ಷದ ಹಿಂದಿನ ಟ್ವೀಟ್ ವೈರಲ್

    ಟೀಂ ಇಂಡಿಯಾ (Team India) ಕೋಚ್ ಆಗಿ ರವಿ ಶಾಸ್ತ್ರಿ ಅವರ ಅಧಿಕಾರಾವಧಿಯಲ್ಲಿ ತಂಡವು ಟೆಸ್ಟ್, ಏಕದಿನ, ಟಿ20ಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಆಟಗಾರರ ಫಿಟ್‍ನೆಸ್‍ಗೆ ಹೆಚ್ಚಿನ ಗಮನವನ್ನು ಶಾಸ್ತ್ರಿ ನೀಡುತ್ತಿದ್ದರು.

    ಶಾಸ್ತ್ರಿ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಬ್ಯಾಟರ್ ತಿಲಕ್ ವರ್ಮಾ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬಹಳ ಪ್ರಬುದ್ಧ ಆಟಗಾರ ಎಂದು ಹೊಗಳಿದ್ದಾರೆ. ಮಂಗಳವಾರ ತಿಲಕ್ 29 ಎಸೆತಗಳಲ್ಲಿ 41 ರನ್ ಹೊಡೆದಿದ್ದರು. ಮುಂಬೈ ಇಂಡಿಯನ್ಸ್ ದೆಹಲಿ ಕ್ಯಾಪಿಟಲ್ಸ್‍ನ್ನು ಸೋಲಿಸಿದ ನಂತರ ಈ ಆವೃತ್ತಿಯಲ್ಲಿ ಮೊದಲ ಜಯವನ್ನು ದಾಖಲಿಸಿತ್ತು.

    ಭಾರತ ತಂಡದ ಮುಖ್ಯ ಕೋಚ್ ಹುದ್ದೆ ತೊರೆದ ನಂತರ ಶಾಸ್ತ್ರಿ ಮತ್ತೊಮ್ಮೆ ಕಾಮೆಂಟೇಟರ್ ಟೋಪಿ ಧರಿಸಿದ್ದಾರೆ. ಇದನ್ನೂ ಓದಿ: IPl 2023: ಗುಜರಾತ್‌ ಗುನ್ನಕ್ಕೆ ಪಂಜಾಬ್‌ ಪಂಚರ್‌ – ರೋಚಕ ಪಂದ್ಯದಲ್ಲಿ ಟೈಟಾನ್ಸ್‌ಗೆ 6 ವಿಕೆಟ್‌ಗಳ ಜಯ

  • ಧೋನಿ ಸಿಕ್ಸ್‌ – ಜಿಯೋ ಸಿನಿಮಾದಲ್ಲಿ ದಾಖಲೆ ಫಿಕ್ಸ್‌

    ಧೋನಿ ಸಿಕ್ಸ್‌ – ಜಿಯೋ ಸಿನಿಮಾದಲ್ಲಿ ದಾಖಲೆ ಫಿಕ್ಸ್‌

    ಚೆನ್ನೈ: ರಾಜಸ್ಥಾನ ರಾಯಲ್ಸ್‌ (Rajasthan Royals) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಮಧ್ಯೆ ನಡೆದ ಐಪಿಎಲ್‌ (IPL) ಪಂದ್ಯ ಜಿಯೋ ಸಿನಿಮಾ (Jio Cinema) ಆಪ್‌ನಲ್ಲಿ ದಾಖಲೆ ಬರೆದಿದೆ.

    ನಾಯಕ ಧೋನಿ (MS Dhoni) ಮತ್ತು ರವೀಂದ್ರ ಜಡೇಜಾ (Ravindra Jadeja) ಅವರು 20ನೇ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದರು. ಈ ವೇಳೆ ಜಿಯೋ ಸಿನಿಮಾದಲ್ಲಿ 2.2 ಕೋಟಿ ಮಂದಿ ವೀಕ್ಷಣೆ ಮಾಡುತ್ತಿದ್ದರು. ಇದು ಈವರೆಗೆ ಜಿಯೋ ಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಐಪಿಎಲ್‌ ಪಂದ್ಯವಾಗಿದೆ.

    ಈ ಹಿಂದೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್‌ ಮಾಡುತ್ತಿದ್ದಾಗ 1.7 ಕೋಟಿ ಮಂದಿ ಜಿಯೋ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದರು. ಇದು ಮೂರನೇ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯವಾಗಿದೆ. ಈ ಪಂದ್ಯದಲ್ಲಿ 20ನೇ ಓವರ್‌ನಲ್ಲಿ ಕ್ರೀಸ್‌ಗೆ ಆಗಮಿಸಿದ ಧೋನಿ 3 ಎಸೆತದಲ್ಲಿ 2 ಸಿಕ್ಸರ್‌ ಸಿಡಿಸಿ ಔಟಾಗಿದ್ದರು.

    ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯಗಳು
    1. ಚೆನ್ನೈ ಸೂಪರ್‌ ಕಿಂಗ್ಸ್‌ Vs ರಾಜಸ್ಥಾನ ರಾಯಲ್ಸ್‌ – 2.2 ಕೋಟಿ
    2. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು Vs ಲಕ್ನೋ ಸೂಪರ್‌ ಜೈಂಟ್ಸ್‌ – 1.8 ಕೋಟಿ
    3. ಮುಂಬೈ ಇಂಡಿಯನ್ಸ್‌ Vs ಡೆಲ್ಲಿ ಕ್ಯಾಪಿಟಲ್ಸ್‌ – 1.7 ಕೋಟಿ
    4. ಚೆನ್ನೈ ಸೂಪರ್‌ ಕಿಂಗ್ಸ್‌ Vs ಲಕ್ನೋ ಸೂಪರ್‌ ಜೈಂಟ್ಸ್‌ – 1.7 ಕೋಟಿ
    5. ಚೆನ್ನೈ ಸೂಪರ್‌ ಕಿಂಗ್ಸ್‌ Vs ಗುಜರಾತ್‌ ಟೈಟಾನ್ಸ್‌ – 1.6 ಕೋಟಿ  ಇದನ್ನೂ ಓದಿ: ಮ್ಯಾಜಿಕ್‌ ಮಹಿಗೆ 200ರ ಸಂಭ್ರಮ – ಕೊನೆಯ IPLನಲ್ಲಿ ವಿಶೇಷ ಸಾಧನೆ ಮಾಡಿದ ಧೋನಿ!

    ಇಷ್ಟೊಂದು ವೀಕ್ಷಣೆ ಯಾಕಾಯ್ತು?
    ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 8 ವಿಕೆಟ್‌ ನಷ್ಟಕ್ಕೆ 175 ರನ್‌ ಹೊಡೆದಿತ್ತು. ನಂತರ ಬ್ಯಾಟ್‌ ಮಾಡಿದ ಚೆನ್ನೈಗೆ ಕೊನೆಯ 18 ಎಸೆತಗಳಲ್ಲಿ 54 ರನ್‌ ಬೇಕಿತ್ತು. ಧೋನಿ ಮತ್ತು ಜಡೇಜಾ ಕ್ರೀಸ್‌ನಲ್ಲಿದ್ದರು. 18ನೇ ಓವರ್‌ನಲ್ಲಿ 14 ರನ್‌ ಬಂದಿದ್ದರೆ 19ನೇ ಓವರ್‌ನಲ್ಲಿ 19 ರನ್‌ ಬಂದಿತ್ತು. ಈ ಓವರ್‌ನಲ್ಲಿ ಜಡೇಜಾ 2 ಸಿಕ್ಸ್‌ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್‌ ನೀಡಿದರು.

    ಕೊನೆಯ ಓವರ್‌ನಲ್ಲಿ 21 ರನ್‌ ಬೇಕಿತ್ತು. ಸಂದೀಪ್‌ ಶರ್ಮಾ ಎಸೆದ ಮೊದಲ ಎರಡು ಎಸೆತ ವೈಡ್‌ ಆಗಿತ್ತು. ಎರಡು ಮತ್ತು ಮೂರನೇ ಎಸೆತವನ್ನು ಧೋನಿ ಸಿಕ್ಸರ್‌ಗೆ ಅಟ್ಟಿದ ಹಿನ್ನೆಲೆಯಲ್ಲಿ ಕೊನೆಯ ಮೂರು ಎಸೆತಗಳಲ್ಲಿ 7 ರನ್‌ ಬೇಕಿತ್ತು. ನಂತರದ ಮೂರು ಎಸೆತಗಳಲ್ಲಿ ಸಿಂಗಲ್‌ ರನ್‌ ಬಂದ ಹಿನ್ನೆಲೆಯಲ್ಲಿ ಚೆನ್ನೈ ತಂಡ ಅಂತಿಮವಾಗಿ 6 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತು.

    ಈ ಹಿಂದೆ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಐಪಿಎಲ್‌ ಲಭ್ಯವಿರಲಿಲ್ಲ. ಆದರೆ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಐಪಿಎಲ್‌ ವೀಕ್ಷಣೆ ಮಾಡಲು ಅವಕಾಶವಿರುವುದರಿಂದ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ.

    ಏಪ್ರಿಲ್‌ 17 ರಂದು ಬೆಂಗಳೂರು ಮತ್ತು ಚೆನ್ನೈ ನಡುವಿನ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಎಷ್ಟು ವೀಕ್ಷಣೆಯಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.

  • CSK ಬ್ಯಾನ್ ಮಾಡಿ: ತಮಿಳುನಾಡು ಶಾಸಕ

    CSK ಬ್ಯಾನ್ ಮಾಡಿ: ತಮಿಳುನಾಡು ಶಾಸಕ

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ (Chennai Super Kings) ಯಾವುದೇ ಸ್ಥಳೀಯ ಆಟಗಾರರಿಲ್ಲ, ಈ ಹಿನ್ನೆಲೆಯಲ್ಲಿ ಆ ತಂಡವನ್ನು ನಿಷೇಧಿಸುವಂತೆ ತಮಿಳುನಾಡು (Tamil Nadu) ಸರ್ಕಾರಕ್ಕೆ ಧರ್ಮಪುರಿ ಪಟ್ಟಾಲಿ ಮಕ್ಕಳ್ ಕಚ್ಚಿ (PMK) ಶಾಸಕ ಎಸ್.ಪಿ ವೆಂಕಟೇಶ್ವರನ್ (SP Venkateshwaran) ಮನವಿ ಮಾಡಿದರು.

    ವಿಧಾನಸಭೆಯಲ್ಲಿ ಮಾತನಾಡಿದ ಅವರು, ಐಪಿಎಲ್ ಅನ್ನು ಹಲವು ಯುವಕರು ಸಾಕಷ್ಟು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ. ಚೆನ್ನೈ ತಮಿಳುನಾಡಿನ ರಾಜಧಾನಿಯಾಗಿದೆ. ಐಪಿಎಲ್‍ನಲ್ಲಿ ಚೆನ್ನೈ ಅನ್ನು ತನ್ನ ತಂಡದ ಹೆಸರಿನ ಭಾಗವಾಗಿ ಇಟ್ಟುಕೊಂಡಿದ್ದರೂ, ಅದು ನಮ್ಮ ಪ್ರತಿಭಾವಂತ ಸ್ಥಳೀಯ ಆಟಗಾರರಿಗೆ ಅವಕಾಶಗಳನ್ನು ಒದಗಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಆ ತಂಡವನ್ನು ನಿಷೇಧಿಸಬೇಕು ಎಂದು ಹೇಳಿದರು.

    IPL CSK 01

    ಡಾ. ರಾಮದಾಸ್ ಅವರು ತಮಿಳು ಭಾಷೆಯ ರಕ್ಷಣೆಯ ಮಹತ್ವದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ತಮಿಳಿನ ಹುಡುಕಾಟದಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಬಹಳಷ್ಟು ಜನರು ನನ್ನನ್ನು ಸಂಪರ್ಕಿಸಿ ಸ್ಥಳೀಯರಿಗೆ ಅವಕಾಶ ನೀಡದಿರುವುದರ ಬಗ್ಗೆ ತಿಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ – ನಾಲ್ವರು ಸಾವು

    ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ತಮಿಳುನಾಡನ್ನು ಪ್ರತಿನಿಧಿಸುತ್ತಾರೆ. ಆದರೆ ತಮಿಳುನಾಡಿನ ಆಟಗಾರರು ತಂಡದಲ್ಲಿ ಇಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ. ನಮ್ಮ ರಾಜ್ಯದ ಹೆಚ್ಚಿನ ಜನರು ತಂಡದ ಭಾಗವಾಗಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ರಾಜಕಾರಣ ನನಗೆ ಹೊಸದಲ್ಲ, ಹೊಂದಾಣಿಕೆ ಮಾತೇ ಇಲ್ಲ: ಡಿಕೆಶಿ