Tag: CS Sivalli

  • ಕುಂದಗೋಳ ಉಪ ಕದನ: ಕೈ, ಕಮಲ ಅಭ್ಯರ್ಥಿಗಳ ಪ್ಲಸ್, ಮೈನಸ್ ಏನು? 2018 ಫಲಿತಾಂಶ ಏನಿತ್ತು?

    ಕುಂದಗೋಳ ಉಪ ಕದನ: ಕೈ, ಕಮಲ ಅಭ್ಯರ್ಥಿಗಳ ಪ್ಲಸ್, ಮೈನಸ್ ಏನು? 2018 ಫಲಿತಾಂಶ ಏನಿತ್ತು?

    ಬೆಂಗಳೂರು: ಲೋಕಸಭಾ ಚುನಾವಣೆಯ ಗುಂಗಿನಿಂದ ಹೊರ ಬಂದಿರುವ ರಾಜ್ಯ ನಾಯಕರು ಉಪ ಕದನದತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊಂದಿದ್ರೆ, ಬಿಜೆಪಿ ಈ ಕ್ಷೇತ್ರವನ್ನು ಗೆಲ್ಲುವ ಮೂಲಕ ಜನರು ಮೈತ್ರಿ ಸರ್ಕಾರದ ವಿರುದ್ಧ ನಿಂತಿದ್ದಾರೆ ಎಂಬುದನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಬಹುತೇಕ ರಾಜಕೀಯ ಮುಖಂಡರು ಉಪ ಕದನಗಳ ಕ್ಷೇತ್ರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಸ್ಥಳೀಯ ನಾಯಕರ ಬಂಡಾಯದ ನಡುವೆಯೂ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದೆ. ಮೇಲ್ನೋಟಕ್ಕೆ ಕಾಂಗ್ರೆಸ್‍ನಿಂದ ಬಂಡಾಯ ಬಾವುಟ ಹಿಡಿದು ಶಿವಾನಂದ್ ಬೆಂತೂರು ಸೇರಿದಂತೆ ಆರು ಕೈ ನಾಯಕರು ನಾಮಪತ್ರ ಸಲ್ಲಿಸಿದ್ದರು. ಸಚಿವ ಜಮೀರ್ ಅಹ್ಮದ್ ಸಂಧಾನ ನಡೆಸಿ ಭಿನ್ನಮತರು ನಾಮಪತ್ರ ಹಿಂಪಡೆಯುವಂತೆ ಮಾಡಿದ್ದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಸ್.ಶಿವಳ್ಳಿ ವಿರುದ್ಧ ನಿಂತು ಗೆಲುವಿನ ಸನಿಹಕ್ಕೆ ಬಂದು ಸೋಲು ಕಂಡಿದ್ದ ಎಸ್.ಐ.ಚಿಕ್ಕನಗೌಡರ ಮತ್ತೊಮ್ಮೆ ಕಮಲದ ಬಾವುಟ ಹಿಡಿದಿದ್ದಾರೆ. 2018ರ ಚುನಾವಣೆಯ ಚಿಕ್ಕನಗೌಡರ ಸೋಲನ್ನಪ್ಪಿದ ಹಿನ್ನೆಲೆಯಲ್ಲಿ ಬೇರೆ ನಾಯಕರಿಗೆ ಟಿಕೆಟ್ ನೀಡಬೇಕೆಂಬ ಸಣ್ಣ ಕೂಗು ಕೇಳಿ ಬಂದಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಬಂಧಿಯೂ ಆಗಿರುವ ಚಿಕ್ಕನಗೌಡರು ಬಿಜೆಪಿ ಟಿಕೆಟ್ ಪಡೆದು ಉಪ ಕದನ ಅಖಾಡದಲ್ಲಿದ್ದಾರೆ.

    ಇದೇ ಮೇ 19ಕ್ಕೆ ಕುಂದಗೋಳದಲ್ಲಿ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳಿಗಿಂತ ರಾಜ್ಯ ನಾಯಕರೇ ಕುಂದಗೋಳ ಅಖಾಡವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಕಸುಮಾ ಶಿವಳ್ಳಿ ಗೆಲುವಿನ ಜವಾಬ್ದಾರಿಯನ್ನು ಕೈ ಕಮಾಂಡ್ ಡಿ.ಕೆ.ಶಿವಕುಮಾರ್ ಹೆಗಲಿಗೆ ವರ್ಗಾಯಿಸಿದೆ. ಇತ್ತ ಚಿಕ್ಕನಗೌಡರ ಪರವಾಗಿ ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

    ಮತದಾರರು (2018ರ ಪ್ರಕಾರ)
    ಒಟ್ಟು ಮತದಾರರು: 1,84,730
    ಪುರುಷ ಮತದಾರರು: 95,628
    ಮಹಿಳಾ ಮತದಾರರು: 89,102
    ಮತದಾನ ಮಾಡಿದವರು: 1,46,492 (79.9%)

    ಜಾತಿ ಲೆಕ್ಕಾಚಾರ
    ಪಂಚಮಸಾಲಿ- 50,000
    ಮುಸ್ಲಿಂ -35,000
    ಕುರುಬ – 25,000
    ಮಾದಿಗ, ಚಲಚಾದಿ ಹರಣಶೀಖಾರಿ – 25,000
    ವಾಲ್ಮೀಕಿ ಮತ್ತು ಇತರೇ ಪರಿಶಿಷ್ಠ ಪಂಗಡ -10,000
    ಸಾದರು – 12,000
    ಗಾಣಿಗೇರ -10,500
    ಮರಾಠಾ – 5.000
    ಜಂಗಮರು – 5,000
    ಬ್ರಾಹ್ಮಣರು- 2,500
    ಇತರೇ – 6,281

    2018ರ ಫಲಿತಾಂಶ:
    2018ರಲ್ಲಿ ನಡೆದ ಕುಂದಗೋಳ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಒಟ್ಟು 10 ಜನರು ಸ್ಪರ್ಧೆ ಮಾಡಿದ್ದರು. ಕುಂದಗೋಳ ಕ್ಷೇತ್ರದಲ್ಲಿ ಶೇ.79.9ರಷ್ಟು ಮತದಾನ ನಡೆದಿತ್ತು. ಸಿ.ಎಸ್.ಶಿವಳ್ಳಿ ಅಲ್ಪ ಮತಗಳ ಮುನ್ನಡೆ ಪಡೆದು ಗೆಲುವು ದಾಖಲಿಸಿ, ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದರು. ಸಿ.ಎಸ್.ಶಿವಳ್ಳಿ 64,871 (44.3%) ಮತಗಳನ್ನು ಪಡೆದಿದ್ದರು. ಬಿಜೆಪಿಯ ಎಸ್.ಐ.ಚಿಕ್ಕನಗೌಡರ 64,237 (43.9%) ಮತಗಳನ್ನು ಪಡೆದು 634 ವೋಟ್ ಗಳ ಅಂತರದಲ್ಲಿ ಸೋಲು ಕಂಡಿದ್ದರು. ಇನ್ನು ಜೆಡಿ(ಯು)ನಿಂದ ಸ್ಪರ್ಧೆ ಮಾಡಿದ್ದ ಹಜರತ್ ಅಲಿ 7,318 ಮತ ಪಡೆದುಕೊಂಡಿದ್ದರು. 1,032 ಮತದಾರರು ನೋಟಾ ಒತ್ತಿದ್ದರು.

    2008ರಲ್ಲಿ ಬಿಜೆಪಿ ಮೊದಲ ಗೆಲುವು:
    2008ರಲ್ಲಿ ಎಸ್.ಐ.ಚಿಕ್ಕನಗೌಡರ ಗೆಲುವು ಸಾಧಿಸುವ ಮೂಲಕ ಕುಂದಗೋಳ ಕಣದಲ್ಲಿ ಬಿಜೆಪಿಯ ಬಾವುಟ ಹಾರಿಸಿದ್ದರು. ತದನಂತರ 2013 ಮತ್ತು 2018ಲ್ಲಿ ಕಾಂಗ್ರೆಸ್‍ನ ಸಿ.ಎಸ್.ಶಿವಳ್ಳಿ ಗೆಲುವು ಕಂಡಿದ್ದರು. 1999ರಲ್ಲಿ ಮೊದಲು ಗೆಲುವು ಕಂಡಿದ್ದ ಶಿವಳ್ಳಿ, 2004 ಮತ್ತು 2008ರಲ್ಲಿ ಸೋಲಿನ ರುಚಿಯನ್ನು ನೋಡಿದ್ದರು.

    ಕುಂದಗೋಳ ಉಪ ಕದನದಲ್ಲಿ 9 ಸ್ಪರ್ಧಿಗಳಿದ್ದಾರೆ. ಕುಸುಮಾ ಶಿವಳ್ಳಿ ವರ್ಸಸ್ ಎಸ್.ಐ.ಚಿಕ್ಕನಗೌಡರ ನಡುವಿನ ಜಿದ್ದಾಜಿದ್ದಿಗೆ ಕುಂದಗೋಳ ಸಾಕ್ಷಿಯಾಗಿದೆ. ಇಬ್ಬರು ಅಭ್ಯರ್ಥಿಗಳ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಗಳು ಈ ಕೆಳಗಿನಂತಿವೆ.

    ಕುಸಮಾ ಶಿವಳ್ಳಿ:
    ಪ್ಲಸ್ ಪಾಯಿಂಟ್
    * ಸಿ.ಎಸ್.ಶಿವಳ್ಳಿ ಪತ್ನಿಯಾಗಿರುವ ಕುಸಮಾ ಶಿವಳ್ಳಿ ಅನುಕಂಪದ ಅಲೆ
    * ಕುಂದಗೋಳ ಜವಾಬ್ದಾರಿ ಡಿ.ಕೆ.ಶಿವಕುಮಾರ್ ಹೆಗಲಿಗೆ
    * ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆ
    * ಕಾಂಗ್ರೆಸ್ ನಾಯಕರು ಪ್ರಚಾರದ ಅಖಾಡಕ್ಕೆ ಧುಮುಕಿರೋದು

    ಮೈನಸ್ ಪಾಯಿಂಟ್
    * ಕುಟುಂಬ ರಾಜಕಾರಣ ಆರೋಪ-ಪತಿ ಬಳಿಕ ಪತ್ನಿಗೆ ಟಿಕೆಟ್
    * ಕಾಂಗ್ರೆಸ್ ನಾಯಕರ ಆಂತರಿಕ ಕಲಹ (ಡಿ.ಕೆ.ಶಿವಕುಮಾರ್ ವರ್ಸಸ್ ಜಾರಕಿಹೊಳಿ ಬ್ರದರ್ಸ್)
    * ಸ್ಥಳೀಯ ನಾಯಕರ ಬಂಡಾಯ
    * ಅಲ್ಪ ಮತಗಳಿಂದ ಸೋತಿದ್ದ ಚಿಕ್ಕನಗೌಡರ ಪರ ಅನುಕಂಪದ ಅಲೆ
    * ಮೈತ್ರಿ ಸರ್ಕಾರದ ಶೀತಲ ಸಮರ

    ಎಸ್.ಐ.ಚಿಕ್ಕನಗೌಡರ
    ಪ್ಲಸ್ ಪಾಯಿಂಟ್
    * ಪ್ರಚಾರಕ್ಕೆ ಬಿಜೆಪಿ ನಾಯಕರ ಸಾರಥ್ಯ
    * ಲೋಕಸಭಾ ಚುನಾವಣೆ ಇರೋದ್ರಿಂದ ಮೋದಿ ಅಲೆ ವರ್ಕೌಟ್ ಅಗಬಹುದು
    * ಅಲ್ಪಮತಗಳ ಸೋಲಿನ ಅನುಕಂಪ
    * ಸ್ಥಳೀಯ ಕಾಂಗ್ರೆಸ್ ನಾಯಕರ ಆಂತರಿಕ ಕಲಹ, ಭಿನ್ನಮತ

    ಮೈನಸ್ ಪಾಯಿಂಟ್
    * ಕುಸಮಾ ಶಿವಳ್ಳಿ ಪರ ಅನುಕಂಪದ ಅಲೆ
    * ಕಾಂಗ್ರೆಸ್ ಅಭ್ಯರ್ಥಿಗೆ ಸ್ಥಳೀಯ ಜೆಡಿಎಸ್ ನಾಯಕರು ಸಾಥ್
    * ಡಿ.ಕೆ.ಶಿವಕುಮಾರ್, ಜಮೀರ್ ಅಹ್ಮದ್ ಘಟಾನುಘಟಿ ನಾಯಕರಿಂದ ಪ್ರಚಾರ

  • ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

    ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

    ಬೆಂಗಳೂರು: ಕರ್ನಾಟಕದ ಲೋಕಸಭಾ ಚುನಾವಣೆ ಮುಗಿದು, ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಅಡಗಿಕೊಂಡಿದೆ. ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಕುಂದಗೋಳ ಮತ್ತು ಚಿಂಚೋಳಿಯ ಉಪ ಚುನವಣೆಯ ಕಾವು ಏರತೊಡಗಿದೆ. ಕುಂದಗೋಳ ಕಾಂಗ್ರೆಸ್ ಅಂಗಳದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಶಿವಾನಂದ್ ಬೆಂತೂರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕುಂದಗೋಳ ಚುನಾವಣೆಯ ಜವಾಬ್ದಾರಿಯನ್ನು ಕೈ ಕಮಾಂಡ್ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದೆ. ಉತ್ತರ ಕರ್ನಾಟಕದ ದಂಡಯಾತ್ರೆ ಕೈಗೊಂಡಿರುವ ಡಿ.ಕೆ.ಶಿವಕುಮಾರ್ ತಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯರೇ ಮುಂದಾದ್ರೆ ಎಂಬ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿವೆ.

    ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದೆ. ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಿದಕ್ಕೆ ಸ್ಥಳೀಯ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಬಂಡಾಯವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಜಾರಕಿಹೊಳಿ ಸಹೋದರು ಕುಸುಮಾ ಶಿವಳ್ಳಿ ಅವರನ್ನು ಸೋಲಿಸಲು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಡಿಕೆಶಿ ಟಾರ್ಗೆಟ್ ಯಾಕೆ?
    ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಹೆಗಲಿಗೆ ಕುಂದಗೋಳದ ಜವಾಬ್ದಾರಿ ನೀಡಲಾಗಿದೆ. ಒಂದು ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ ಗೆಲುವು ಸಾಧಿಸಿದ್ರೆ ಜಯದ ಕ್ರೆಡಿಟ್ ಶಿವಕುಮಾರ್ ಅವರಿಗೆ ಸಿಗಲಿದೆ. ಈ ಒಂದು ಗೆಲುವಿನ ಮೂಲಕ ಉತ್ತರ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಹಿಡಿತ ಹೆಚ್ಚಾಗುತ್ತೆ ಅನ್ನೋ ಭಯ ಜಾರಕಿಹೊಳಿ ಸೋದರರು ಮತ್ತು ಸ್ಥಳೀಯ ನಾಯಕರಲ್ಲಿ ಮೂಡಿದೆ ಎನ್ನಲಾಗುತ್ತಿದೆ. ಹೀಗಾಗಿ ತಮ್ಮದೇ ಅಭ್ಯರ್ಥಿಯನ್ನು ಸೋಲಿಸಲು ಸ್ಥಳೀಯ ನಾಯಕರು ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕುಸುಮಾ ಶಿವಳ್ಳು ಸೋಲು ಕಂಡರೆ ಸಿದ್ದರಾಮಯ್ಯರಿಗೂ ಮುಖಭಂಗ, ಡಿಕೆಶಿಗೂ ಭಾರೀ ಹಿನ್ನಡೆ ನಿಶ್ಚಿತ. ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಸಮಯದಲ್ಲಿಯೂ ಡಿ.ಕೆ.ಶಿವಕುಮಾರ್ ಮಧ್ಯಸ್ಥಿಕೆ ವಹಿಸಿದ್ದರು. ಅಂದು ಸಹ ಜಾರಕಿಹೊಳಿ ಸೋದರರು ಬಹಿರಂಗವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.