Tag: CS Shivalli

  • ಸಾವಿನ ರಾಜಕಾರಣ: ಬಳ್ಳಾರಿ ಕಳೆದುಕೊಂಡಂತೆ ಕುಂದಗೋಳವನ್ನ ಕಳೆದುಕೊಳ್ಳುತ್ತಾ ಬಿಜೆಪಿ?

    ಸಾವಿನ ರಾಜಕಾರಣ: ಬಳ್ಳಾರಿ ಕಳೆದುಕೊಂಡಂತೆ ಕುಂದಗೋಳವನ್ನ ಕಳೆದುಕೊಳ್ಳುತ್ತಾ ಬಿಜೆಪಿ?

    ಬೆಂಗಳೂರು: ಬಳ್ಳಾರಿ ಲೋಕಸಭಾ ಉಪಚುನಾವಣೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮಗ ರಾಕೇಶ್ ಸಾವಿನ ಬಗ್ಗೆ ಜನಾರ್ದನ ರೆಡ್ಡಿ ಆಡಿದ್ದ ಮಾತು ಬಿಜೆಪಿಗೆ ಮುಳುವಾಗಿತ್ತು. ಜನಾರ್ದನ ರೆಡ್ಡಿ ಅವರ ಮಾತಿನಿಂದಲೇ ಬಳ್ಳಾರಿ ಉಪ ಕದನಲ್ಲಿ ಬಿಜೆಪಿ ಸೋತಿತು ಎಂಬ ಮಾತುಗಳು ಫಲಿತಾಂಶದ ಬಳಿಕ ಕೇಳಿ ಬಂದಿದ್ದವು. ಇದೀಗ ಕುಂದಗೋಳ ಉಪ ಅಖಾಡದಲ್ಲಿಯೂ ಬಿಜೆಪಿ ಸಿ.ಎಸ್.ಶಿವಳ್ಳಿ ಅವರ ಸಾವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಬಳ್ಳಾರಿಯಂತೆಯೇ ಕುಂದಗೋಳದ ಫಲಿತಾಂಶದ ಮೇಲೆ ಶ್ರೀರಾಮುಲು ಮತ್ತು ಜಗದೀಶ್ ಶೆಟ್ಟರ್ ಹೇಳಿಕೆ ಪರಿಣಾಮ ಬೀರುತ್ತಾ ಎಂಬ ಚರ್ಚೆಗಳು ಆರಂಭಗೊಂಡಿವೆ.

    ಶ್ರೀರಾಮುಲು ಹೇಳಿದ್ದೇನು?: ಕಾಂಗ್ರೆಸ್ ಸಚಿವರಾಗಿದ್ದ ಸಿಎಸ್ ಶಿವಳ್ಳಿ ಸಾವಿನಲ್ಲೂ ರಾಜಕೀಯ ಹುಡುಕಿರುವ ಬಿಜೆಪಿ ನಾಯಕರು, ಶಿವಳ್ಳಿ ಯಾವತ್ತೋ ಮಂತ್ರಿ ಆಗಬೇಕಿತ್ತು. ಆದರೆ ಅವರನ್ನು ಕಡೆಗಣಿಸಿ ಬೇರೆಯವರನ್ನು ಮಂತ್ರಿ ಮಾಡಿದ್ದರು. ಮಂತ್ರಿ ಆದ ಬಳಿಕವೂ ಸಿಎಂ ಕುಮಾರಸ್ವಾಮಿ ಸೇರಿದಂತೆ ಶಿವಳ್ಳಿ ಖಾತೆಯಲ್ಲಿ ಬೇರೆಯವರ ಹಸ್ತಕ್ಷೇಪ ಹೆಚ್ಚಾಗಿತ್ತು. ಇದರಿಂದ ಮಾನಸಿಕ ನೊಂದಿದ್ದ ಶಿವಳ್ಳಿ ಪ್ರಾಣಬಿಟ್ಟರು ಎಂದು ಶ್ರೀರಾಮುಲು ಹೇಳಿದ್ದರು.

    ಶ್ರೀರಾಮುಲು ಹೇಳಿಕೆ ಸಮರ್ಥಿಸಿಕೊಂಡ ಶೆಟ್ಟರ್: ಇತ್ತ ಶ್ರೀರಾಮುಲು ಅವರ ಬಳಿಕ ಮಾತನಾಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕೂಡ, ಶಿವಳ್ಳಿ ಅವರು ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಅಸಮಾಧಾನ ಹೊಂದಿದ್ದರು. ಶಿವಳ್ಳಿ ಅವರಿಗೆ ಮಂತ್ರಿ ಸ್ಥಾನ ಸಿಗದೇ ಇದ್ದಾಗ ಅವರಿಗೆ ಸಾಕಷ್ಟು ನೋವಾಗಿತ್ತು. ಆ ನೋವನ್ನು ನನ್ನ ಮುಂದೆಯೇ ಹೇಳಿಕೊಂಡಿದ್ದರು. ಆ ನೋವಿನಿಂದ ಅವರು ಸಾಕಷ್ಟು ಬಳಲಿದ್ದರು. ಈ ಸಂಬಂಧ ಕಾಂಗ್ರೆಸ್ ದೂರು ಕೊಡಲಿ ಅದಕ್ಕೆ ನಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ.

    ಕಣ್ಣೀರಿಟ್ಟ ಡಿಕೆಶಿ: ಇದೇ ಸಂದರ್ಭದಲ್ಲಿ ಕುಂದಗೋಳದಲ್ಲಿ ಶಿವಳ್ಳಿಯವ್ರನ್ನ ನೆನೆದು ಸಚಿವ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದಾರೆ. ಶಿವಳ್ಳಿ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ನಿರ್ಧರಿಸಿದ್ದೇವೆ. ರಾಮುಲು ಪೊಲೀಸರಿಗೆ ದೂರು ನೀಡಲಿ. ನಾವು ಕಿರುಕುಳ ನೀಡಿದ್ದೇವೆ ಎಂದಾದ್ರೆ ಪೊಲೀಸರಿಗೆ ಸಾಕ್ಷ್ಯ ಕೊಡಲಿ. ಶಿವಳ್ಳಿ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು ಇಂತಹ ಮಾತುಗಳಿಂದ ರಾಮುಲು ಗೌರವ ಕಳೆದುಕೊಂಡಿದ್ದಾರೆ. ಶಿವಳ್ಳಿ ಪತ್ನಿಯನ್ನು ಗೆಲ್ಲಿಸಿ ಮೈತ್ರಿ ಸರ್ಕಾರವನ್ನು ಬಲಪಡಿಸಿ ಎಂದು ಪಕ್ಷ ಕಾರ್ಯಕರ್ತರಿಗೆ ಕರೆ ನೀಡಿದರು.

  • ಬಿಜೆಪಿಯವರು ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದು ನಿಜ- ಶಾಸಕ ಶಿವಳ್ಳಿ

    ಬಿಜೆಪಿಯವರು ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದು ನಿಜ- ಶಾಸಕ ಶಿವಳ್ಳಿ

    ಹುಬ್ಬಳ್ಳಿ: ನನಗೆ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದು ನಿಜ. ಅವರು ನೀಡಲು ಮುಂದಾದ ಎಲ್ಲ ಭರವಸೆಗಳನ್ನು ನಾನು ತಳ್ಳಿ ಹಾಕಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಬಿಜೆಪಿಯವರು ಯಾವ ಭರವಸೆ ನೀಡಿದ್ದರು ಎನ್ನುವುದನ್ನು ನಾನು ಹೇಳುವುದಿಲ್ಲ. ನನಗೆ ರಾಜಕೀಯ ಜೀವನ ಕೊಟ್ಟಿದ್ದು ಕಾಂಗ್ರೆಸ್. ಹೀಗಾಗಿ ಪಕ್ಷವನ್ನು ಬಿಟ್ಟು ಹೋಗುವ ವಿಚಾರವನ್ನು ಎಂದಿಗೂ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಉತ್ತರ ಕರ್ನಾಟಕ ಭಾಗದಲ್ಲಿ ನಾನು ಹಿಂದುಳಿದ ವರ್ಗದ ಹಿರಿಯ ಕಾಂಗ್ರೆಸ್ ಶಾಸಕನಾಗಿದ್ದು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವೆ. ಈ ಕುರಿತು ಪಕ್ಷದ ನಾಯಕರಿಗೆ ಹಾಗೂ ಹೈಕಮಾಂಡ್‍ಗೆ ಒತ್ತಡ ಹೇರಿದ್ದು ನಿಜ. ಸಚಿವ ಸ್ಥಾನ ನೀಡಲಿಲ್ಲವೆಂದು ಪಕ್ಷ ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿಲ್ಲ. ವಯಸ್ಸಿದೆ, ಅವಕಾಶಗಳಿವೆ ಮುಂದಿನ ಅವಧಿಯಲ್ಲಿ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಇದೆ ಎಂದು ಶಾಸಕರು ಹೇಳಿದ್ದಾರೆ.

    ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಒಂದು ವೇಳೆ ಸರ್ಕಾರ ಬೀಳಿಸಬೇಕು ಅಂದರೆ 14 ಜನ ಶಾಸಕರು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿ, ಜಯಗಳಿಸಿ ಬರುವುದು ಅಸಾಧ್ಯ. ಹೀಗಾಗಿ ಯಾರೊಬ್ಬರೂ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv