Tag: crusher

  • ಕೋಲಾರ | ಕ್ರಶರ್‌ನಲ್ಲಿ ಸ್ಫೋಟ – ಕಲ್ಲು ಸಿಡಿದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

    ಕೋಲಾರ | ಕ್ರಶರ್‌ನಲ್ಲಿ ಸ್ಫೋಟ – ಕಲ್ಲು ಸಿಡಿದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

    ಕೋಲಾರ: ಕ್ರಶರ್‌ನಲ್ಲಿ (Crusher) ಬಂಡೆ ಒಡೆಯಲು ಸ್ಫೋಟಿಸುವ ವೇಳೆ ಕಲ್ಲು ಬಿದ್ದು ಕಾರ್ಮಿಕನೊಬ್ಬ ಸಾವಿಗೀಡಾದ ಘಟನೆ ಮಾಲೂರು (Maluru) ತಾಲೂಕಿನ ಮಾಕಾರಹಳ್ಳಿ ಬಳಿ ನಡೆದಿದೆ.

    ಮೃತ ಕಾರ್ಮಿಕನನ್ನು ಆಂಧ್ರಪ್ರದೇಶ ಮೂಲದ ವೆಂಕಟೇಶ್ (60) ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಹರೀಶ್ ಮತ್ತು ಈಶ್ವರ್ ಎಂಬುವರಿಗೆ ಗಾಯಗಳಾಗಿವೆ. ಬಂಡೆಯನ್ನು ಸ್ಫೋಟಿಸಲು ತಯಾರಿ ಮಾಡಿಕೊಳ್ಳುತ್ತಿದ್ದ ವೇಳೆ ಕಲ್ಲು ಬಂಡೆ ಬಿದ್ದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

    ಗಾಯಾಳುಗಳನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

    ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಚಾಮರಾಜನಗರ| ಕ್ರಷರ್ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

    ಚಾಮರಾಜನಗರ| ಕ್ರಷರ್ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

    – ಕೈಗಾರಿಕಾ ಉದ್ದೇಶಕ್ಕೆ ಅನುಮತಿ ಪಡೆದು ಕ್ರಷರ್ ಆರಂಭಿಸಲು ಹೊರಟಿದ್ದಾರೆಂಬ ಆರೋಪ

    ಚಾಮರಾಜನಗರ: ಗ್ರಾಮದ ಹತ್ತಿರ ಕ್ರಷರ್ ನಿರ್ಮಾಣ ಮಾಡುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕ್ರಷರ್ ನಿರ್ಮಾಣ ಮಾಡುವುದಕ್ಕೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

    ಗ್ರಾಮದ 300 ಮೀಟರ್ ದೂರದಲ್ಲೇ ಕ್ರಷರ್ ಆರಂಭಕ್ಕೆ ಎ.ಮಧುಸೂದನ್ ಎಂಬವರು ಮುಂದಾಗಿದ್ದಾರೆ. ತನ್ನ 2.18 ಎಕರೆ ಜಮೀನಿನಲ್ಲಿ ಕೈಗಾರಿಕಾ ಉದ್ದೇಶಕ್ಕೆಂದು ಅನುಮತಿ ಪಡೆದು, ಕ್ರಷರ್ ನಿರ್ಮಾಣಕ್ಕೆ ತಯಾರಿ ನಡೆಸಿದ್ದಾರೆ.

    ಜಮೀನಿಗೆ ಬಂದ ಲಾರಿಯನ್ನು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕ್ರಷರ್ ಮಾಲೀಕರ ಸಹಚರರು ಹಾಗೂ ಗ್ರಾಮಸ್ಥರ ನಡುವೆ ಹೈಡ್ರಾಮಾ ನಡೆದಿದೆ. ಡಾ ಬಿ.ಆರ್.ಅಂಬೇಡ್ಕರ್ ಫೋಟೊ ಹಿಡಿದು ಲಾರಿ ಮುಂದೆ ಪ್ರತಿಭಟನಾಕಾರರು ಮಲಗಿದ್ದಾರೆ. ಈ ವೇಳೆ ಗ್ರಾಮಸ್ಥರ ಮೇಲೆ ಕ್ರಷರ್ ಮಾಲೀಕನ ಸಹಚರರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.

    ಅಂಬೇಡ್ಕರ್ ಫೋಟೊ ಕಿತ್ತೆಸೆದು ಹಲ್ಲೆ ಮಾಡಿರುವ ಆರೋಪ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಬೇಗೂರು ಆಸ್ಪತ್ರೆಗೆ ರವಾನಿಸಲಾಗಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬಂಡೆ ಬ್ಲಾಸ್ಟ್ ಮಾಡುವ ವೇಳೆ ಅವಘಡ – ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು

    ಬಂಡೆ ಬ್ಲಾಸ್ಟ್ ಮಾಡುವ ವೇಳೆ ಅವಘಡ – ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು

    ತುಮಕೂರು: ಬಂಡೆ ಬ್ಲಾಸ್ಟ್ (Rock Blast) ಮಾಡುವ ವೇಳೆ ಅವಘಡವೊಂದು ಸಂಭವಿಸಿದ ಪರಿಣಾಮ ಇಬ್ಬರು ಕಾರ್ಮಿಕರು (Workers) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ಮೃತರನ್ನು ಬಿಹಾರ ಮೂಲದ ಮೊಹಮ್ಮದ್ ಅಬೂಲ್ (29) ಹಾಗೂ ಛತ್ತೀಸ್‌ಗಢ ಮೂಲದ ಮೋನು (24) ಎಂದು ಗುರುತಿಸಲಾಗಿದೆ. ತುಮಕೂರು ತಾಲೂಕಿನ ಕೌತಮಾರನಹಳ್ಳಿ ಬಳಿಯಿರುವ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಘಟನೆ ನಡೆದಿದೆ. ಈ ಕ್ರಷರ್ (Crusher) ತುಮಕೂರು ಮೂಲದ ಕೆ.ಎ.ಎಂ ಹನೀಫ್ ಎಂಬವರಿಗೆ ಸೇರಿದ್ದು, ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕ್ರಷರ್‌ನಲ್ಲಿ ಬಂಡೆಗೆ ಡ್ರಿಲ್ ಮಾಡಲು ಬೆಟ್ಟ ಹತ್ತಿದ ಇಬ್ಬರು ಕಾರ್ಮಿಕರು ಆಯತಪ್ಪಿ ಸುಮಾರು 100 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದು ಜೀವತೆತ್ತಿದ್ದಾರೆ. ಇದನ್ನೂ ಓದಿ: ಅತ್ತಿಗೆ ಮೇಲೆ ಗ್ಯಾಂಗ್‌ರೇಪ್ ಮಾಡಿ ಕೊಲೆಗೈದ ಐವರು ಮೈದುನರು – ದುಬೈನಲ್ಲಿರೋ ಮಹಿಳೆಯ ಪತಿಯೇ ಮಾಸ್ಟರ್‌ಮೈಂಡ್

    ಕ್ರಷರ್ ಮಾಲೀಕನ ಬೇಜವಾಬ್ದಾರಿತನಕ್ಕೆ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರಿಗೆ ಯಾವುದೇ ಸುರಕ್ಷಿತ ಕ್ರಮಗಳನ್ನ ಕೊಡದೇ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನು ಘಟನೆಯಿಂದ ಗಂಭೀರ ಗಾಯಗೊಂಡ ಮತ್ತೋರ್ವನನ್ನು ಬೆಂಗಳೂರಿನ (Bengaluru) ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ವೇದಿಕೆಯಲ್ಲೇ ಕುಸಿದು ಬಿದ್ದು ಹನುಮ ವೇಷಧಾರಿ ನಿಧನ

  • ಕಲ್ಲು ಕ್ರಷರ್‌ನಲ್ಲಿ ಬ್ಲಾಸ್ಟ್- ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

    ಕಲ್ಲು ಕ್ರಷರ್‌ನಲ್ಲಿ ಬ್ಲಾಸ್ಟ್- ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

    ವಿಜಯಪುರ: ಜಲ್ಲಿ ಕಲ್ಲು ಹಾಗೂ ಕ್ರಷರ್ ಘಟಕದಲ್ಲಿ ಬ್ಲಾಸ್ಟ್ ಆಗಿದ್ದು, ಓರ್ವ ಸಾವನ್ನಪ್ಪಿ, ಇಬ್ಬರಿಗೆ ತೀವ್ರ ಗಾಯಗಾಳಿವೆ.

    ವಿಜಯಪುರದ ಅಲಿಯಾಬಾದ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು, ಗಾಯಾಳುಗಳು ಸದ್ಯ ಖಾಸಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸಂಜೆ 4 ಗಂಟೆ ಸುಮಾರಿಗೆ ಅಶೋಕ್ ಸಾವಳಗಿ ಅವರಿಗೆ ಸೇರಿದ ಜಲ್ಲಿ ಕಲ್ಲು ಕ್ರಷರ್ ನಲ್ಲಿ ಬ್ಲಾಸ್ಟ್ ಮಾಡಲಾಗಿದೆ. ಈ ವೇಳೆ ಬೈಕ್ ಮೇಲೆ ಜಮೀನಿನಿಂದ ಅಲಿಯಾಬಾದ್ ಕಡೆಗೆ ತೆರಳುತ್ತಿದ್ದಾಗ ವಾಹನ ಸವಾರರಾದ ಮೋಹನ್, ಗಿರೀಶ್, ಸಚಿನ್ ಅವರಿಗೆ ಬ್ಲಾಸ್ಟ್‍ನ ಕಲ್ಲುಗಳು ಸಿಡಿದಿವೆ. ಇದನ್ನೂ ಓದಿ: ಅಪಘಾತವಾಗಿ ನರಳಾಡುತ್ತಿದ್ದ ಗಾಯಾಳು- ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಡಿಕೆಶಿ

    ಬ್ಲಾಸ್ಟ್ ನಿಂದ ಸಿಡಿದ ಕಲ್ಲು ಮೋಹನ್ ತಲೆ, ಕಾಲಿಗೆ ಸಿಡಿದಿದೆ. ಇದರಿಂದ ಮೋಹನ್ ತೀವ್ರ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೋಹನ್ ಮೃತಪಟ್ಟಿದ್ದಾರೆ. ಸಚಿನ್ ಹಾಗೂ ಗಿರೀಶ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್‍ಪಿ ಅನುಪಮ್ ಅಗರ್‍ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕ್ರಷರ್ ನ ಮಾಲೀಕ ಅಶೋಕ್ ಸಾವಳಗಿ ಸೇರಿದಂತೆ ಸಿಬ್ಬಂದಿ ಪರಾರಿ ಆಗಿದ್ದಾರೆ. ಇವರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಆದಷ್ಟು ಬೇಗ ಅವರನ್ನು ಸೆರೆ ಹಿಡಯಲಾಗುವುದು. ಅಲ್ಲದೆ ಕ್ರಷರ್ ಅಧಿಕೃತವೋ, ಅನಧಿಕೃತವೋ ಎಂಬುದರ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‍ಪಿ ಅನುಪಮ್ ಅಗರವಾಲ್ ಸ್ಪಷ್ಟಪಡಿಸಿದ್ದಾರೆ.

    ಬ್ಲಾಸ್ಟ್ ನಲ್ಲಿ ಮೋಹನ್ ನಾಯಕ್ ರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ಶಿಕ್ಷೆಗೆ ಒಳಪಡಿಬೇಕೆಂದು ಆಗ್ರಹಿಸಿದ್ದಾರೆ.

  • ಅನಧಿಕೃತ ಕಲ್ಲುಕ್ವಾರಿಯಲ್ಲಿ ಸ್ಫೋಟ – 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು

    ಅನಧಿಕೃತ ಕಲ್ಲುಕ್ವಾರಿಯಲ್ಲಿ ಸ್ಫೋಟ – 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು

    ಕಾರವಾರ: ಜೋಯಿಡಾ ತಾಲೂಕಿನ ರಾಮನಗರದಲ್ಲಿರುವ ಕಲ್ಲುಕ್ವಾರಿಯಲ್ಲಿ ಈ ಹಿಂದೆ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದಿದ್ದ ಡಿ.ಬಿ.ಎಲ್ ಕಂಪನಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಕಲ್ಲು ಗಣಿಯಲ್ಲಿ ಸ್ಫೋಟ ನಡೆಸಲು ನಿಷೇಧವಿದ್ದರೂ ಕಲ್ಲು ಗಣಿಗಾರಿಕೆ ಮಾಡುತ್ತಿದೆ. ಇದರಿಂದ 50ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿದೆ.

    ಸ್ಫೋಟದಿಂದಾಗಿ ರಾಮನಗರದ 50ಕ್ಕೂ ಹೆಚ್ಚು ಮನೆಗಳಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಈ ಕುರಿತು ರಾಮನಗದ ನಿವಾಸಿಗಳು ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅನಧಿಕೃತವಾಗಿ ಬ್ಲಾಸ್ಟಿಂಗ್ ನಡೆಸುತ್ತಿರುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ರಾಮನಗರದ ಹಲವು ಗಣಿ ಭೂಮಿಯಲ್ಲಿ ಬ್ಲಾಸ್ಟಿಂಗ್ ನಡೆಸುತ್ತಿದೆ ಎಂಬ ಆರೋಪವಿದೆ. ಇದನ್ನೂ ಓದಿ: ಗಾಳಿಪಟದ ದಾರದಿಂದ ವ್ಯಕ್ತಿಗೆ ಗಾಯ, ನೆಲಕ್ಕೆ ಚಿಮ್ಮಿದ ನೆತ್ತರು

    ಕಳೆದ ಮೂರು ವರ್ಷದ ಹಿಂದ ರಾಮನಗರದಲ್ಲಿ ನಿಗದಿ ಪಡಿಸಿದ ಜಾಗದ ಜೊತೆ ಸರ್ಕಾರಿ ಭೂಮಿಯಲ್ಲೂ ಸಹ ಕಲ್ಲು ಗಣಿಗಾರಿಕೆ ಯನ್ನು ಅಕ್ರಮವಾಗಿ ನಡೆಸಲಾಗುತಿತ್ತು. ಇದರಿಂದಾಗಿ ರಾಮನಗರದ ಸುತ್ತಮುತ್ತಲ ಕೃಷಿ ಭೂಮಿ ಧೂಳಿನಿಂದ ತುಂಬಿ ಕೃಷಿ ಚಟುವಟಿಕೆಗೆ ತೊಂದರೆಯಾಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಸುದ್ದಿ ಪ್ರಸಾರವಾಗುತಿದ್ದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪರಿಸರ ಇಲಾಖೆ ಗಣಿ ಮಾಲೀಕರಿಗೆ ನೋಟಿಸ್ ನೀಡುವ ಜೊತೆ ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಂಡಿತ್ತು.

    ಈಗ ರಾಮನಗರದಲ್ಲಿ ಗಣಿಗಾರಿಕೆ ಪುನಃ ಪ್ರಾರಂಭವಾಗಿದ್ದು, ಸರ್ಕಾರದ ನಿಯಮದ ಪ್ರಕಾರ ಗಣಿಗಾರಿಕೆ ನಡೆಸಬೇಕಿದ್ದ ಗುತ್ತಿಗೆ ಪಡೆದ ಕಂಪನಿಗಳು ಹೆಚ್ಚು ಲಾಭಕ್ಕಾಗಿ ಇದೀಗ ಮಳೆಗಾಲದಲ್ಲೂ ಹೆಚ್ಚಿನ ಮಟ್ಟದ ಬ್ಲಾಸ್ಟಿಂಗ್ ನಡೆಸುತ್ತಿದೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿರುವ ಮನೆಗಳು ಬಿರುಕು ಬಿಟ್ಟಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಭಯದಲ್ಲೇ ದಿನ ದೂಡುವಂತೆ ಮಾಡಿದೆ.

    ಇನ್ನು ಅಕ್ರಮ ಬ್ಲಾಸ್ಟಿಂಗ್ ಮಾಡುತ್ತಿರುವ ಕುರಿತು ದೂರು ದಾಖಲಾದ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕಂದಾಯ ಇಲಾಖೆಯಾಗಲಿ, ಪರಿಸರ ಇಲಾಖೆಯಾಗಲಿ ದೂರು ನೀಡಿದರೂ ಇತ್ತ ಬಾರದೇ ಜಾಣ ಮೌನ ವಹಿಸಿದೆ. ಈ ಭಾಗದಲ್ಲಿ ಬ್ಲಾಸ್ಟಿಂಗ್ ಹೆಚ್ಚಾದಲ್ಲಿ ಸ್ಥಳೀಯ ಗ್ರಾಮದ ಹಲವು ಮನೆಗಳು ಬೀಳುವ ಆತಂಕ ಸಹ ಇದೆ.

  • ಶಿವಮೊಗ್ಗದ ಹುಣಸೋಡು ಬಳಿ ಸ್ಫೋಟ ಪ್ರಕರಣ: ಕ್ರಷರ್ ಮಾಲೀಕ ಸುಧಾಕರ್ ಅರೆಸ್ಟ್

    ಶಿವಮೊಗ್ಗದ ಹುಣಸೋಡು ಬಳಿ ಸ್ಫೋಟ ಪ್ರಕರಣ: ಕ್ರಷರ್ ಮಾಲೀಕ ಸುಧಾಕರ್ ಅರೆಸ್ಟ್

    ಶಿವಮೊಗ್ಗ: ಜಿಲ್ಲೆಯ ಹಣಸೋಡು ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕ್ರಷರ್ ಮಾಲೀಕ ಸುಧಾಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಶಿವಮೊಗ್ಗ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಸುಧಾಕರ್ ನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಗಣಿಗಾರಿಕೆಗೆ ಭೂಮಿ ಕೊಟ್ಟಿರುವ ಅನಿಲ್ ಕುಲಕರ್ಣಿ ಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಶಿವಮೊಗ್ಗದ ರವೀಂದ್ರ ನಗರದ ನಿವಾಸಿ ಸುಧಾಕರ್ ಒಡೆತನದ ಕಲ್ಲನಾಗೂರಿನಲ್ಲಿರುವ ಬಿವಿಎಸ್ ಸ್ಟೋನ್ ಕ್ರಷರ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೂರು ವರ್ಷದ ಮಟ್ಟಿಗೆ ಜಿಲ್ಲಾಡಳಿತ ಪರವಾನಗಿ ನೀಡಿತ್ತು. ಈ ವೇಳೆ ಸುರಕ್ಷಿತ ವಲಯದ ಸುತ್ತ 100 ಮೀಟರ್ ಅಂತರದಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳಲ್ಲ ಎಂಬ ಷರತ್ತಿಗೆ ಒಪ್ಪಿಗೆ ಸೂಚಿಸಿ ಸುಧಾಕರ್ ಸಹಿ ಕೂಡ ಹಾಕಿದ್ದ.

    ಆ ಬಳಿಕ ಸ್ಫೋಟಕಗಳ ಬಗ್ಗೆ ಸ್ಥಳೀಯರು ಹತ್ತಾರು ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಇದೀಗ ಸ್ಥಳೀಯ ನಿವಾಸಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ನಿನ್ನೆ ರಾತ್ರಿ 10.30ರ ವೇಳೆ ಭಾರೀ ಶಬ್ದ ಕೇಳಿದ ಜನ ಭಯಭೀತರಾಗಿದ್ದರು. ಬಳಿಕ ಅದು ಜಲ್ಲಿ ಕ್ರಷರ್‍ನಲ್ಲಿ ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡಿರುವುದಾಗಿ ಬಯಲಾಗಿದೆ. ಈ ದುರ್ಘಟನೆಯಲ್ಲಿ ಕಾರ್ಮಿಕರು ಮೃತಪಟ್ಟಿದ್ದು, ಸದ್ಯ 7 ಮೃತದೇಹಗಳು ಪತ್ತೆಯಾಗಿವೆ. ಜಿಲೆಟಿನ್ ತುಂಬಿದ ಲಾರಿ ಸ್ಫೋಟದ ತೀವ್ರತೆಗೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿ ಪೀಸ್ ಪೀಸ್ ಆಗಿದೆ. ಕಿಲೋಮೀಟರ್ ದೂರದವರೆಗೂ ಲಾರಿಯ ಬಿಡಿಭಾಗಗಳು ಹಾರಿವೆ.

    ಕಾರ್ಮಿಕರ ಮೃತದೇಹ ಛಿದ್ರ ಛಿದ್ರವಾಗಿದ್ದು, ಒಂದೊಂದು ಅಂಗಾಂಗ ಒಂದೊಂದು ಕಡೆ ಸಿಕ್ಕಿದೆ. ಕ್ರಷರ್ ಸುತ್ತಮುತ್ತ ಇದ್ದ ಬಹುತೇಕ ಮರಗಳು ನಾಶವಾಗಿವೆ. 40 ಕಿಲೋಮೀಟರ್ ದೂರದವರೆಗೂ ಶಬ್ದ ಕೇಳಿದೆ. ಸ್ಫೋಟದ ಸ್ಥಳದಲ್ಲಿ ಕೆಟ್ಟ ವಾಸನೆ ಬರುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಘಟನೆಯಿಂದ ಭಾರೀ ಹಾನಿ ಸಂಭವಿಸಿದೆ.

  • ಕ್ರಷರ್ ಮಾಲೀಕನ ಬಳಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ!

    ಕ್ರಷರ್ ಮಾಲೀಕನ ಬಳಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ!

    ಮಂಡ್ಯ: ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕ್ರಷರ್ ಮಾಲೀಕನ ಮೇಲೆ ಪಾಂಡವಪುರದಲ್ಲಿ ಪ್ರಕರಣ ದಾಖಲಾಗಿದೆ.

    ಪಾಂಡವಪುರದ ಕ್ರಷರ್ ಮಾಲೀಕ ತೌಫಿಕ್ ಬಳಿ ಪಿಸ್ತೂಲ್ ಗಳಿವೆ ಎಂದು ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕ್ರಷರ್ ಮಾಲೀಕನ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ತೌಫಿಕ್ ನ ಇನ್ನೋವಾ ಕಾರಿನಲ್ಲಿ ಒಂದು ಪಿಸ್ತೂಲ್ ಹಾಗೂ ಎರಡು ಸಜೀವ ಗುಂಡುಗಳು ಪತ್ತೆಯಾಗಿದೆ.

    ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಷರ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕ್ರಷರ್ ನಿಂದಾಗಿ ರೈತರ ಬೆಳೆ ಹಾಳಾಗುತ್ತದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು. ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಕ್ರಷರ್ ಮಾಲೀಕ ತೌಫಿಕ್ ಹಾಗೂ ಬೆಂಬಲಿಗರು ರೈತರ ಮೇಲೆಯೇ ಹಲ್ಲೆ ನಡೆಸಿದ್ದರು.

  • ಸಚಿವರ ಆಪ್ತನ ದರ್ಬಾರ್: ಎಗ್ಗಿಲ್ಲದೆ ಸಾಗುತ್ತಿದೆ ಅಕ್ರಮ ಜಲ್ಲಿಕಲ್ಲು ಕ್ರಶರ್ ಘಟಕ!

    ಸಚಿವರ ಆಪ್ತನ ದರ್ಬಾರ್: ಎಗ್ಗಿಲ್ಲದೆ ಸಾಗುತ್ತಿದೆ ಅಕ್ರಮ ಜಲ್ಲಿಕಲ್ಲು ಕ್ರಶರ್ ಘಟಕ!

    ಚಾಮರಾಜನಗರ: ಅಕ್ರಮವಾಗಿ ಜಲ್ಲಿಕಲ್ಲು ಕ್ರಶರ್ ನಿಂದ ಸುತ್ತಮುತ್ತಲಿನ ವಾತಾವರಣ ಹಾಗೂ ರೈತರ ಜಮೀನಿಗೆ ಹಾನಿಯಾಗಿರುವ ಘಟನೆ ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ.

    ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತನಾದ ಉಮೇಶ್ ಅಕ್ರಮವಾಗಿ ಕ್ರಶರ್ ಘಟಕ ನಡೆಸುತ್ತಿದ್ದು, ಇದರಿಂದಾಗಿ ಸುತ್ತಮುತ್ತಲ ಪರಿಸರ ಹಾಳಾಗಿದ್ದಲ್ಲದೆ, ರೈತರ ಜಮೀನಿಗೆ ತೊಂದರೆಯಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

    ಸಚಿವರ ಆಪ್ತರಾದ ಉಮೇಶ್ ಎಂಬವರು, ವಿಜಯ್ ಕುಮಾರ್ ಹಾಗೂ ವಿನಯ್ ಕುಮಾರ್ ಜೊತೆ ಸೇರಿ ತಾಲೂಕಿನ ಹರವೆ ಗ್ರಾಮದಲ್ಲಿ ಅಕ್ರಮವಾಗಿ ಜಲ್ಲಿಕಲ್ಲು ಕ್ರಶರ್ ಘಟಕ ನಡೆಸುತ್ತಿದ್ದಾರೆ. ಕ್ರಶರ್ ಘಟಕ ನಡೆಸಲು ಯಾವುದೇ ಅನುಮತಿ ಹಾಗೂ ಭೂ-ಪರಿವರ್ತನೆಯನ್ನು ಸಹ ಮಾಡಿಸಿಲ್ಲ. ಸಚಿವರ ಆಪ್ತನಾದ ನಮ್ಮನ್ನು ಯಾರು ಪ್ರಶ್ನೆ ಮಾಡುತ್ತಾರೆ? ಅಕ್ರಮವಾಗಿ ಕ್ರಶರ್ ಆರಂಭಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಕ್ರಶರ್ ಘಟಕದಿಂದಾಗಿ ಹರವೆ ಗ್ರಾಮದ ರೈತ ಮಾದಪ್ಪ ಎಂಬವರ ಜಮೀನಿಗೆ ಹಾನಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕಲ್ಲು ತುಂಬಿದ ಲಾರಿ ಹಾಗೂ ಟಿಪ್ಪರ್ ಗಳು ಇವರ ಜಮೀನಿನ ಮೂಲಕ ಹಾದುಹೋಗುತ್ತಿರುವುದರಿಂದ ಕಲ್ಲುಗಳ ಬಿದ್ದು, ಜಮೀನಿನಲ್ಲಿ ಬೆಳೆ ಬೆಳೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ.

    ಇದರಿಂದ ಕಂಗೆಟ್ಟ ರೈತ ಮಾದಪ್ಪ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಸರ್ವೇ ನಂ 200ರಲ್ಲಿ ಟಿಪ್ಪರ್ ಓಡಾಟದಿಂದ ತೊಂದರೆಯಾಗುತ್ತದೆ ಎಂದು ಇದೇ ತಿಂಗಳ 7ರಂದು ತಡೆಯಾಜ್ಞೆ ತಂದಿದ್ದರು. ಆದರೆ ನ್ಯಾಯಾಲಯದ ತಡೆಯಾಜ್ಞೆಯನ್ನೇ ಉಲ್ಲಂಘಿಸಿ ಅಕ್ರಮವಾಗಿ ಕ್ರಶರ್ ಘಟಕ ಮುಂದುವರೆಸಿದ್ದಾರೆ.

    ಕ್ರಶರ್ ಘಟಕದಿಂದಾಗಿ ಸುತ್ತಮುತ್ತಲಿನ ವಾತಾವರಣವು ಧೂಳು ಮಯವಾಗಿದೆ. ಇದರಿಂದಾಗಿ ರೈತರು ಬೆಳೆ ಬೆಳೆಯದಂತಾಗಿದ್ದು, ಲಾರಿಗಳ ಓಡಾಟದಿಂದ ರೈತರು ಬೇಸತ್ತು ಹೋಗಿದ್ದಾರೆ.